ಒಂದು ವಸ್ತುವನ್ನು ದಹನ ಮಾಡುವುದೆಂದರೆ ಅದು ಪ್ರತಿಪಾದಿಸುವ ಚಿಂತನೆಗಳ ವಿರುದ್ಧ ಪ್ರತಿಭಟಿಸುವುದೇ ಆಗಿದ್ದು, ಹೀಗೆ ಮಾಡುವ ಮೂಲಕ ಅಂತಹ ಚಿಂತನೆಗಳನ್ನು ಅನುಸರಿಸುವವರು ನಾಚಿಕೆಯಿಂದ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳುವಂತಾಗಬೇಕು ಎಂದು ಪ್ರತಿಪಾದಿಸಿದ್ದರು ಅಂಬೇಡ್ಕರ್
ಡಿಸೆಂಬರ್ 25, 1927 ಅಂಬೇಡ್ಕರ್ ಅವರ ನೇತೃತ್ವದಲ್ಲಿ ಮನುಸ್ಮೃತಿಯ ಅಮಾನವೀಯ ಭಾಗಗಳನ್ನು ದಹಿಸಿದ ದಿನ. ಇಂದಿಗೆ 97 ವರ್ಷಗಳು ತುಂಬಿದೆ. ತಾನು ಬದುಕಿದ್ದ ಕಾಲದ ಎಲ್ಲಾ ವಿರೋಧಾಭಾಸ ಪ್ರತಿಕೂಲ ಸನ್ನಿವೇಶ, ಸಂದಿಗ್ದತೆ, ಹಿಂಸೆಯನ್ನು ಮೀರಿ ಎಲ್ಲಾ ವರ್ಗಗಳ ಬದುಕನ್ನು ಹಸನು ಮಾಡಿದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಹಾನ್ ಮಾನವತಾವಾದಿ. ಇಂತಹ ಸರ್ವಹಿತ ಭಾವಕೋಶದ ಮಾನವತಾವಾದಿಯನ್ನು ಅರಿಯಲಾರದ ಮನುವಾದಿ ಮನಸ್ಸುಗಳು ಅವರನ್ನು ಕುರಿತಂತೆ ಅಸೂಕ್ಷ್ಮ ಹೇಳಿಕೆಗಳನ್ನು ನೀಡುತ್ತಿರುವ ದುರಿತ ಕಾಲದಲ್ಲಿ ಅಂಬೇಡ್ಕರ್ ಚಿಂತನೆಗಳನ್ನು ವಿಮರ್ಶಾತ್ಮಕವಾಗಿ ಅರಿಯುವ, ಅವರ ಅಭಿಪ್ರಾಯಗಳನ್ನು ವಿಶ್ಲೇಷಿಸುವ, ಅರ್ಥ ಮಾಡಿಕೊಳ್ಳುವ ನಡೆಗಳಷ್ಟೇ ಅಂಬೇಡ್ಕರರನ್ನು ಜೀವಂತವಾಗಿ ಉಳಿಸಿಕ್ಕೊಳ್ಳುವ ಹಾದಿಯಾಗಿದೆ.
ಜಾತಿ ಜಾತಿಗಳ ಮಧ್ಯೆ ಹೆಣ್ಣು ಗಂಡುಗಳ ಮಧ್ಯೆ ಇದ್ದ ವೈವಿಧ್ಯಕ್ಕೆ ತಾರತಮ್ಯದ ರೂಪ ಕೊಟ್ಟ ಮನು ಧರ್ಮಶಾಸ್ತ್ರವನ್ನು ದಹಿಸಿದ ಈ ದಿನವನ್ನು ತಾನು ಬದುಕಿರುವವರೆಗೆ ಅಂಬೇಡ್ಕರ್ ಅವರೇ ಸಾಂಕೇತಿಕವಾಗಿ ಆಚರಿಸುತ್ತಿದ್ದು, ಈ ಪರಂಪರೆಯನ್ನು ಭಾರತದಾದ್ಯಂತ ಹಲವಾರು ಕಡೆ ಮನುಸ್ಮ್ರತಿ ಗ್ರಂಥವನ್ನು ದಹಿಸುವ ಮೂಲಕ ಈ ಹೊತ್ತಿಗೂ ಅನುಸರಿಸಿಕೊಂಡು ಬರಲಾಗುತ್ತಿದೆ. ಈ ದಿನವನ್ನು ಇಂಡಿಯನ್ ವಿಮೆನ್ ಲಿಬರೇಷನ್ ಡೇ ಆಗಿ ಕೂಡ ಆಚರಿಸಲಾಗುತ್ತಿದೆ.
ಒಂದು ವಸ್ತುವನ್ನು ದಹನ ಮಾಡುವುದೆಂದರೆ ಅದು ಪ್ರತಿಪಾದಿಸುವ ಚಿಂತನೆಗಳ ವಿರುದ್ಧ ಪ್ರತಿಭಟಿಸುವುದೇ ಆಗಿದ್ದು. ಹೀಗೆ ಮಾಡುವ ಮೂಲಕ ಅಂತಹ ಚಿಂತನೆಗಳನ್ನು ಅನುಸರಿಸುವವರು ನಾಚಿಕೆಯಿಂದ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳುವಂತಾಗಬೇಕು ಎಂದು ಪ್ರತಿಪಾದಿಸಿದ್ದರು ಅಂಬೇಡ್ಕರ್. ಅವರ ಈ ಆಶಯ ಸಾಕಾರಗ್ಗೊಳ್ಳಬೇಕಿರುವುದು ಮಹಿಳೆಯರ ಕುರಿತಾಗಿ ಮನುವಾದಿ ಚಿಂತನೆಗಳು ಮುನ್ನಲೆಗೆ ಬರುತ್ತಿರುವ, ಸಂವಿಧಾನಕ್ಕೆ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಅದರ ಅರ್ಥಪೂರ್ಣ ಅನುಸರಣೆಯ ತುರ್ತನ್ನು ಹೆಚ್ಚಿಸಿದೆ.

ಮಹಿಳಾ ಲೋಕವನ್ನು ಗ್ರಹಿಸುವ ಪೂರ್ವಗ್ರಹ ಚಿಂತನೆಗಳು ಒಂದೆಡೆ ಬದಲಾಗುತ್ತಾ, ಮಹಿಳಾ ಹಕ್ಕಿನ ಪರವಾದ ಸಾಮಾಜಿಕ ವಾತಾವರಣ ಮೂಡುತ್ತಿದ್ದರೆ, ಮತ್ತೊಂದೆಡೆ ಆಧುನಿಕ ಮಹಿಳೆಯ ಸಮಸ್ಯೆಗಳು ಬೇರೆಯ ರೂಪ ಹೊದ್ದು ನಿಲ್ಲುತ್ತಿವೆ. ಶ್ರೇಣೀಕೃತ ಸಮಾಜ ವ್ಯವಸ್ಥೆಯಲ್ಲಿ ಮಹಿಳೆಯರು ಶೋಷಣೆ ಮತ್ತು ಅವಮಾನಗಳನ್ನು ಧಿಕ್ಕರಿಸಿದಷ್ಟು ಅವು ರೂಪಾಂತರ ಹೊಂದಿ ಹೊಸ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಿವೆ.
ಧರ್ಮ, ಸಂಸ್ಕೃತಿ ಹೆಸರಿನಲ್ಲಿ ಅವಳ ಪ್ರಜ್ಞೆ ವಿಸ್ಮೃತಿಗೆ ತಳ್ಳಲ್ಪಡುತ್ತಿರುವ, ಹೋರಾಟ ಚಳವಳಿಯ ಕಾರಣಕ್ಕಾಗಿ ದೊರೆತಿದ್ದ ಕೆಲವಾದರೂ ಹಕ್ಕುಗಳನ್ನು ಹಿಂದಕ್ಕೆ ಸರಿಸುತ್ತಿರುವ ರಾಜಕೀಯದ ಕಾರಣಕ್ಕಾಗಿ ಕಟ್ಟಲ್ಪಡುತ್ತಿರುವ ಸಂಕಥನಗಳು ಮಹಿಳೆಯರ ಹಿಮ್ಮುಖ ಚಲನೆಗೆ ಕಾರಣವಾಗಿರುವ ದುರಿತ ಕಾಲದಲ್ಲಿ ಅಂಬೇಡ್ಕರ್ರ ಮಹಿಳಾಪರ ಚಿಂತನೆಗಳು ವರ್ತಮಾನದ ಭಾರತಕ್ಕೆ ಹೆಚ್ಚು ಪ್ರಸ್ತುತವೆನಿಸುತ್ತವೆ. ಸಾಂಸ್ಕ್ರತಿಕ ರಾಜಕಾರಣದ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಹೆಚ್ಚುತ್ತಿರುವ ಇಂತಹ ಮಹಿಳಾ ವಿರೋಧಿ ಆಲೋಚನಾ ಕ್ರಮಗಳ ಕಾರಣ ಹೆಣ್ಣು ಏಕಕಾಲಕ್ಕೆ ಸಂಸ್ಕೃತಿಯ ಆಕರವು ಪರಿಕರವು ಮತ್ತು ಅದರ ಬಲಿಪಶುವು ಆಗುತ್ತಿದ್ದಾಳೆ.
ಸ್ವತಂತ್ರ ಚಿಂತನೆ, ನಡವಳಿಕೆ, ಧೋರಣೆಗಳಿರುವ ಹೆಣ್ಣುಮಕ್ಕಳನ್ನು ಅವಮಾನಿಸಿ ಅವಗಣನೆಗೆ ಒಳಪಡಿಸಿ ಆಕೆಯನ್ನು ವ್ಯಕ್ತಿತ್ವ ರಹಿತಳನ್ನಾಗಿಸುವ ನೆಲೆಯಲ್ಲಿ ಗಂಡಾಳ್ವಿಕೆ ಹೂಂಕರಿಸುತ್ತಿದೆ. ಇದಕ್ಕೊಂದು ತಾಜಾ ಉದಾಹರಣೆ ಕರ್ನಾಟಕದ ಮಹಿಳಾ ಮಂತ್ರಿಯೊಬ್ಬರನ್ನು ವಿಧಾನಪರಿಷತ್ತಿನ ಸದಸ್ಯರೊಬ್ಬರು ಅಸಂವಿಧಾನಿಕ ಪದ ಬಳಸಿ ನಿಂದಿಸಿರುವ ವಿಚಾರ ನಿಜಕ್ಕೂ ಆಘಾತಕಾರಿಯಾದುದು. ಸಂವಿಧಾನಬದ್ಧವಾಗಿ ಹೆಣ್ಣಿಗೆ ನೀಡಲಾಗಿರುವ ಸ್ವಾತಂತ್ರ್ಯ ಹಾಗೂ ಘನತೆಯ ಬದುಕಿನ ಹಕ್ಕು ಸಾರ್ವಜನಿಕವಾಗಿ ಉಲ್ಲಂಘನೆಯಾಗುತ್ತಲೆಯಿದ್ದು ಸಂವಿಧಾನದತ್ತ ಹಕ್ಕುಗಳನ್ನು ರಕ್ಷಿಸಬೇಕಾದ ಸ್ಥಾನದಲ್ಲಿರುವವರ ನಡೆ ನಿಜಕ್ಕೂ ಅಕ್ಷಮ್ಯ.
ಸ್ಥಾಪಿತ ಮನುವಾದಿ ಚಿಂತನೆಗಳ ಜೊತೆಗೆ ಬಂಡವಾಳಶಾಹಿಯ ನವ ಮನುವಾದವು ಸೇರಿಕೊಂಡಿದ್ದರ ಪರಿಣಾಮ, ಹೆಣ್ಣು ಭೋಗದ ಸರಕಾಗಿ ಬಿಂಬಿತವಾಗುತ್ತ ಅತ್ಯಾಚಾರಗಳ ಬಲಿಪಶುವಾಗುತ್ತಿದ್ದಾಳೆ. ಭೋಗದ ಬದುಕಿನ ಕಾರಣ ವರದಕ್ಷಿಣೆ ಕ್ರೌರ್ಯಗಳು ಹೆಚ್ಚುತ್ತಾ, ಮೂಲಭೂತವಾದದ ಪರಿಣಾಮ ಮರ್ಯಾದೆ ಹತ್ಯೆಗಳು ಹೆಚ್ಚುತ್ತಿವೆ. ಅವಕಾಶ, ಅಧಿಕಾರ, ಲಾಭಕೋರತನಗಳ ಹಿನ್ನೆಲೆಯಲ್ಲಿ ಸೃಷ್ಟಿಸಲ್ಪಡುತ್ತಿರುವ ಸಂಕಥನಗಳು ಮೂಲಭೂತವಾದವನ್ನು, ಕೋಮುವಾದವನ್ನು, ಲೈಂಗಿಕ ಭಯೋತ್ಪಾದನೆಯನ್ನು ಹೆಚ್ಚಿಸುತ್ತಾ, ಹೆಣ್ಣನ್ನು ಕುರಿತ ಸಂವೇದನಾ ರಹಿತ ಮಾತುಗಳ ಮೂಲಕ, ಭೋಗದ ನೆಲೆಯಲ್ಲಿ ಸರಕಿನ ನೆಲೆಯಲ್ಲಿ ಅವಳನ್ನು ಭದ್ರಪಡಿಸುತ್ತಿವೆ.
ರಾಷ್ಟ್ರೀಯ ಅಪರಾಧ ದಾಖಲೆ ಬ್ಯುರೋ ಪ್ರತಿ ವರ್ಷ ಪ್ರಕಟ ಮಾಡುವ ಭಾರತದಲ್ಲಿ ಅಪರಾಧ ವರದಿಯನ್ನು ಗಮನಿಸಿದರೆ 2014ರಲ್ಲಿ ಮಹಿಳೆಯರ ವಿರುದ್ದದ ಒಟ್ಟು ಅಪರಾಧಗಳ ಸಂಖ್ಯೆಯು 3,37,922. 2022ರ ವೇಳೆಗೆ ಈ ಅಂಕಿ ಅಂಶವು 4,45,256ಕ್ಕೆ ಏರಿದೆ. ಕೋವಿಡ್ ಪೀಡಿತ (2019,2020) ಎರಡು ವರ್ಷಗಳ ಹೊರತಾಗಿ, ಪ್ರತಿ ವರ್ಷ ಮಹಿಳೆಯರ ವಿರುದ್ದದ ಅಪರಾಧಗಳ ಸಂಖ್ಯೆಯು ಸ್ಥಿರವಾಗಿ ಹೆಚ್ಚುತ್ತಿದೆ. ಪ್ರಸ್ತುತ ಅಂಕಿ ಅಂಶಗಳು ಹೇಳುತ್ತಿರುವುದು ಇಷ್ಟನ್ನೇ. ಅದೆಷ್ಟೇ ಮಹಿಳಾ ಪರವಾದ ಕಾನೂನುಗಳು, ಯೋಜನೆಗಳು, ಜಾರಿಯಾದರೂ ನ್ಯಾಯಾಂಗವನ್ನು ಸಮುದಾಯವನ್ನು ಮುನ್ನಡೆಸುವ ಮಂದಿಯನ್ನು ಒಳಗೊಂಡಂತೆ ನಮ್ಮೆಲ್ಲರಲ್ಲಿಯೂ ಇರುವ ಮನುವಾದಿ ಧೋರಣೆಗಳು ಬದಲಾಗದೇ ಮಹಿಳೆಯರ ಬದುಕಿನಲ್ಲಿ ಬದಲಾವಣೆ ಖಂಡಿತ ಸಾಧ್ಯವಿಲ್ಲವೆಂದು.

ಮನದೊಳಗೆ ಮನುಧರ್ಮ ಶಾಸ್ತ್ರ ಗಟ್ಟಿಯಾಗಿ ಕೂತಿರುವಾಗ ಸಮಾನತೆ, ಸಂವಿಧಾನ, ಸಮಾನ ಸ್ಥಾನಮಾನ ಇವೆಲ್ಲಾ ತಲೆಯೊಳಗೆ ಹೋಗಲಾರವು. ಈ ಸತ್ಯವನ್ನು ಅರಿತಿದ್ದ ಬಾಬಾ ಸಾಹೇಬರು ಈ ದೇಶಕ್ಕೆ ಸರ್ವ ಸಮಾನತೆಯ ಸಂವಿಧಾನವನ್ನು ನೀಡುವ ಮೊದಲೇ ಮನುಸ್ಮೃತಿಯನ್ನು ಸಾಂಕೇತಿಕವಾಗಿ ಸುಟ್ಟು ಅಂತಹ ಚಿಂತನೆಯುಳ್ಳವರನ್ನು ಆಂತರ್ಯದಿಂದಲೇ ಬದಲಿಸುವಂತಹ ಶಪಥ ತೊಟ್ಟಿದ್ದರು. ಅಂಬೇಡ್ಕರರ ಇಂತಹ ಚಿಂತನೆಗಳು ವರ್ತಮಾನದ ಭಾರತಕ್ಕೆ ಹೆಚ್ಚು ಪ್ರಸ್ತುತವಾಗಿದ್ದು ಈ ನಡೆಗಳಷ್ಟೇ ವಾಸ್ತವ ನೆಲೆಯಲ್ಲಿ ಮಹಿಳಾ ಬದುಕನ್ನು ಬದಲಿಸಲು ಸಾಧ್ಯ.
ಇದನ್ನೂ ಓದಿ ಸಿ.ಟಿ. ರವಿ ಮಹಿಳಾ ನಿಂದಕ ಪ್ರಕರಣ ಮುಂದೇನಾಗಲಿದೆ?
ಹೆಣ್ಣಿನ ಮೇಲೆ ನಡೆಯುವ ಕ್ರೌರ್ಯ, ದೌರ್ಜನ್ಯಗಳು ಚರ್ವಿತ ಚರ್ವಣವಾಗಿ ಕೇಳುವವರಿಗೆ ನೋಡುವವರಿಗೆ ಸಾಕೆನಿಸುವಂತೆ ಆಗಿದೆ ಹೀಗಾಗಿ ಆಧುನಿಕೋತ್ತರ ಸಮಾಜಗಳಲ್ಲಿ ಬದುಕುತ್ತಿರುವವರಿಗೆ ಸ್ತ್ರೀ ಸಂವೇದನೆಯ ಶೂನ್ಯವಾಗಿದೆ ಇಂತದ್ದೊಂದು ಅಪಾಯಕಾರಿ ಸನ್ನಿವೇಶದ ಸಂದರ್ಭದಲ್ಲಿ ಲಿಂಗ ಸಮಾನತೆಯನ್ನು, ಲಿಂಗಸಂವೇದನಾಶೀಲತೆಯನ್ನು ಒಡಮೂಡಿಸುವುದು ಬಹು ಸವಾಲಿನ ಕೆಲಸವೇ ಹೌದು. ಈ ನೆಲೆಯಲ್ಲಿ ಕರ್ನಾಟಕದ ‘ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ‘ದ ನಡೆ ಗಮನಾರ್ಹವಾದುದು. ವಿದ್ಯಾರ್ಥಿಗಳೊಂದಿಗೆ, ಸಮುದಾಯಗಳೊಂದಿಗೆ, ಲಿಂಗಸಮಾನತೆಯ ವ್ಯಾಪಕ ಚರ್ಚೆ ನಡೆಸುವ ಇಂಥ ಪ್ರಯತ್ನಗಳು ಮನುವಾದಿ ಮನಸ್ಸುಗಳನ್ನು ಬದಲಿಸುವ ನಿಟ್ಟಿನಲ್ಲಿ ಬಹಳ ಮಹತ್ವದ್ದಾಗಿದ್ದು, ಇಂತಹ ಪ್ರಯತ್ನಗಳು ಎಲ್ಲೆಡೆ ಹರಡಿಕೊಳ್ಳಬೇಕು, ನಾವೆಲ್ಲರೂ ಅದರ ಪಾಲುದಾರರಾಗಬೇಕು.

ಡಾ ಆಶಾರಾಣಿ ಕೆ. ಬಗ್ಗನಡು
ತುಮಕೂರಿನವರು. ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜಿನ ಕನ್ನಡ ವಿಭಾಗದಲ್ಲಿ ಅಧ್ಯಾಪಕಿ.
ಬರಹ ಬಹಳ ಸೂಕ್ಷ್ಮ ಮತ್ತು ಅರ್ಥ ಪೂರ್ಣವಾಗಿದೆ ಮೇಡಂ