ಲೋಕಸಭಾ ಚುನಾವಣೆಯಲ್ಲಿ ಗೃಹ ಸಚಿವ ಅಮಿತ್ ಶಾ ಮೂಲಕ ವಿಜಯಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ, ಹಣ ಪಡೆದು ವಂಚಿಸಿದ್ದಾರೆಂದು ಮಾಜಿ ಸಚಿವ ಪ್ರಹ್ಲಾದ್ ಜೋಶಿ ಅವರ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ. ಹಣವನ್ನು ಅಮಿತ್ ಶಾ ಅವರ ಆಪ್ತ ಸಹಾಯಕನಿ(ಪಿಎ)ಗೆ ಕೊಟ್ಟು ಟಿಕೆಟ್ ಕೊಡಿಸುತ್ತೇನೆಂದು ಜೋಶಿ ಅವರ ಸಹೋದರ ಗೋಪಾಲ್ ಜೋಶಿ ಹಣ ಪಡೆದು, ವಂಚಿಸಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ದೇವಾನಂದ್ ಫೂಲ್ ಸಿಂಗ್ ಚವ್ಹಾಣ್ ಅವರ ಪತ್ನಿ ಬಿಜೆಪಿ ಮುಖಂಡೆ ಸುನೀತಾ ಚವ್ಹಾಣ್ ಆರೋಪಿಸಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.
ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಗೋಪಾಲ್ ಜೋಶಿ, ಅವರ ಸಹೋದರಿ ವಿಜಯಲಕ್ಷ್ಮಿ ಜೋಶಿ ಹಾಗೂ ಗೋಪಾಲ್ ಜೋಶಿ ಅವರ ಪುತ್ರ ಅಜಯ್ ಜೋಶಿ– ಮೂವರನ್ನೂ ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿದೆ. ಈ ಮೂವರು ಸುನೀತಾ ಚವ್ಹಾಣ್ ಅವರಿಗೆ ಜಾತಿ ನಿಂದನೆಯನ್ನೂ ಮಾಡಿದ್ದಾರೆಂದು ಆರೋಪಿಸಲಾಗಿದೆ. ವಂಚನೆ, ಜಾತಿ ನಿಂದನೆ ಆರೋಪದ ಮೇಲೆ ಈ ಮೂವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 126(2), 118(1), 316(2), 318(4), 61-3(5) ಹಾಗೂ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕೈವಾಡವೂ ಇರುವುದೇ ಎಂಬ ಚರ್ಚೆಗಳು ನಡೆಯುತ್ತಿವೆ.
ಅಂದಹಾಗೆ, 2018 ಮತ್ತು 2023ರ ನಡುವೆ ದೇವಾನಂದ್ ಸಿಂಗ್ ಚವ್ಹಾಣ್ ವಿಜಯಪುರ ಜಿಲ್ಲೆಯ ನಾಗಠಾಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಉಭಯ ಪಕ್ಷಗಳ ನಡುವೆ ಟಿಕೆಟ್ ಹಂಚಿಕೆಯ ಚರ್ಚೆ ಜೋರಾಗಿತ್ತು. ಈ ಸಂದರ್ಭವನ್ನೇ ಬಳಸಿಕೊಂಡ ಪ್ರಲ್ಹಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ಮತ್ತು ಕುಟುಂಬದವರು ಸುನೀತಾ ಚವ್ಹಾಣ್ ಅವರಿಗೆ ಟಿಕೆಟ್ ಆಮಿಷವೊಡ್ಡಿ, ಹಣ ಪಡೆದು ವಂಚಿಸಿದ್ದಾರೆ.
ಸುನೀತಾ ಅವರು ತಮ್ಮ ದೂರಿನಲ್ಲಿ ವಿವರಿಸಿರುವಂತೆ, ವಿಜಯಪುರದ ಅಥಣಿಯಲ್ಲಿ ಇಂಜಿನಿಯರ್ ಆಗಿರುವ ಶೇಖರ್ ನಾಯಕ್ ಎಂಬುವವರು ಮಾರ್ಚ್ ತಿಂಗಳಿನಲ್ಲಿ ಸುನೀತಾ ಅವರನ್ನು ಸಂಪರ್ಕಿಸಿದ್ದಾರೆ. ಟಿಕೆಟ್ ಕೊಡಿಸುವುದಾಗಿ ಗೋಪಾಲ್ ಜೋಶಿ ಬಳಿಗೆ ಕರೆದೊಯ್ದಿದ್ದಾರೆ. ಗೋಪಾಲ್ ಜೋಶಿ ಅವರು ತಮ್ಮ ಸಹೋದರ ಪ್ರಹ್ಲಾದ್ ಜೋಶಿ ಅವರಿಗೆ ಮೋದಿ-ಅಮಿತ್ ಶಾ ಆಪ್ತರಾಗಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುರಿಂದ ಜೋಶಿ ಅವರ ಪ್ರಭಾವ ಬಳಸಿಕೊಂಡು ಟಿಕೆಟ್ ಕೊಡಿಸುತ್ತೇವೆಂದು ಭರವಸೆ ನೀಡಿದ್ದಾರೆ. ಮಾತ್ರವಲ್ಲದೆ, ಅದಕ್ಕಾಗಿ 5 ಕೋಟಿ ರೂ. ಹಣ ಕೊಡಬೇಕು. ಆ ಹಣವನ್ನು ನಾವು ಅಮಿತ್ ಶಾ ಅವರ ಪಿಎಗೆ ಕೊಟ್ಟು ಡೀಲ್ ಕುದುರಿಸುತ್ತೇವೆಂದು ಹೇಳಿದ್ದಾರೆ.
ಅವರ ಮಾತಿಗೆ ಸುನೀತಾ ಮತ್ತು ಅವರ ಪತಿ ಒಪ್ಪದೆ, ನಮ್ಮ ಬಳಿ ಹಣವಿಲ್ಲ. ನಮಗೆ ಟಿಕೆಟ್ ಕೂಡ ಬೇಡವೆಂದು ಹೇಳಿ ಬಂದಿದ್ದಾರೆ. ಆದರೂ, ಅವರ ಬೆನ್ನತ್ತಿದ್ದ ಗೋಪಾಲ್ ಜೋಶಿ ಈಗ 25 ಲಕ್ಷ ರೂ. ಕೊಡಿ ಸಾಕು, ಉಳಿದ ಹಣಕ್ಕೆ 5 ಕೋಟಿ ರೂ. ಶೂರಿಟಿ ಚೆಕ್ ಕೊಡಿ ಎಂದು ಮನವೊಲಿಸಿದ್ದಾರೆ. ನಗದು ಹಣವನ್ನು ತಮ್ಮ ಸಹೋದರಿ ವಿಜಯಲಕ್ಷ್ಮಿ ಅವರಿಗೆ ತಲುಪಿಸಿ ಎಂದು ಹೇಳಿ ಕಳಿಸಿದ್ದಾರೆ.
ಸುನೀತಾ, ಜೋಶಿ ಸಹೋದರಿ ವಿಜಯಲಕ್ಷ್ಮಿ ಜೋಶಿ ಅವರ ಬೆಂಗಳೂರಿನ ಬಸವೇಶ್ವರನಗರದಲ್ಲಿದ್ದ ನಿವಾಸಕ್ಕೆ ಹೋಗಿ, ಹಣ ಕೊಟ್ಟು ಬಂದಿದ್ದಾರೆ. ಬಳಿಕ, ಸುನೀತಾ ಅವರನ್ನು ಭೇಟಿ ಮಾಡಿದ್ದ ಗೋಪಾಲ್ ಜೋಶಿ, ‘ಈ ಹಣವನ್ನು ನಾವು ಇಟ್ಟುಕೊಳ್ಳುವುದಿಲ್ಲ. ಅಮಿತ್ ಶಾ ಅವರ ಪಿಎಗೆ ಕಳಿಸುತ್ತೇವೆ’ ಎಂದು ಹೇಳಿ, ಯಾರಿಗೋ ಕರೆ ಮಾಡಿ ಮಾತನಾಡಿದ್ದಾರೆ. ನಂತರ, ‘ಟಿಕೆಟ್ ಖಾತ್ರಿಯಾಗಿದೆ. ಚಿಂತಿಸುವ ಅಗತ್ಯವಿಲ್ಲ’ವೆಂದು ಭರವಸೆ ನೀಡಿ ಕಳಿಸಿದ್ದಾರೆ.
ಅವರ ಮಾತನ್ನು ನಂಬಿದ ಸುನೀತಾ ಮತ್ತು ಅವರ ಪತಿ ಚವ್ಹಾಣ್ ಅವರು ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದಾಗ, ಆ ಪಟ್ಟಿಯಲ್ಲಿ ಸುನೀತಾ ಅವರ ಹೆಸರು ಇರಲಿಲ್ಲ. ತಮಗೆ ಟಿಕೆಟ್ ಕೊಟ್ಟಿಲ್ಲ ಎಂಬ ವಾಸ್ತವಾಂಶ ಅವರಿಗೆ ಅರಿವಾಗಿದೆ.
ಟಿಕೆಟ್ ದೊರೆಯದ ಕಾರಣ, ತಾವು ಕೊಟ್ಟಿದ್ದ ಹಣವನ್ನು ವಾಪಸ್ ಕೇಳಲು ಸುನೀತಾ, ಗೋಪಾಲ್ ಅವರನ್ನು ಸಂಪರ್ಕಿಸಿದ್ದಾರೆ. ಸುನೀತಾರನ್ನು ವಿಜಯಲಕ್ಷ್ಮಿ ಅವರ ಮನೆಗೆ ಕರೆಸಿಕೊಂಡಿದ್ದ ಗೋಪಾಲ್, 5 ಕೋಟಿ ರೂ.ಗಳ ಚೆಕ್ಅನ್ನು ಮಾತ್ರವೇ ವಾಪಸ್ ಕೊಟ್ಟು, 25 ಲಕ್ಷ ರೂ.ಗಳನ್ನು ವಾಪಸ್ ಕೊಡಲು ಸಾಧ್ಯವಿಲ್ಲ. ಶೀಘ್ರದಲ್ಲೇ 200 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್ನ ಬಿಲ್ ಬರಲಿದೆ. 20 ದಿನಗಳಲ್ಲಿ ಹಣ ಸಂದಾಯವಾಗುತ್ತದೆ. ಅದ್ಯಕ್ಕೆ, 1.75 ಕೋಟಿ ರೂ. ಅಗತ್ಯವಿದ್ದು, ಅಷ್ಟು ಹಣ ಕೊಟ್ಟರೆ, 20 ದಿನಗಳ ಬಳಿಕ ಎಲ್ಲ ಹಣವನ್ನೂ ವಾಪಸ್ ಕೊಡುತ್ತೇವೆ. ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಸುನೀತಾ ಅವರು ಚುನಾವಣೆಗೆ ಸ್ಪರ್ಧಿಸಿದರೆ, ಚುನಾವಣಾ ಖರ್ಚನ್ನೂ ನೋಡಿಕೊಳ್ಳುವುದಾಗಿ ಆಮಿಷವೊಡ್ಡಿದ್ದಾರೆ.
ಅವರ ಆಮಿಷಕ್ಕೆ ಮತ್ತೊಮ್ಮೆ ಮೋಸಹೋದ ಸುನೀತಾ, 1.75 ಕೋಟಿ ರೂ. ಹಣವನ್ನು ಹೊಂದಿಸಿ ಕೊಟ್ಟಿದ್ದಾರೆ. ಬಳಿಕ, ಆಗಸ್ಟ್ 1ರಂದು ಹಣ ವಾಪಸ್ ಕೇಳಲು ಸುನೀತಾ ಅವರು ತಮ್ಮ ಮಗನೊಂದಿಗೆ ವಿಜಯಲಕ್ಷ್ಮಿ ಅವರ ಮನೆಗೆ ಹೋಗಿದ್ದಾರೆ. ಅವರನ್ನು ಬಾಗಿಲಿನಿಂದ ಹೊರ ದೂಡಿದ ವಿಜಯಲಕ್ಷ್ಮಿ ಮತ್ತು ಅಜಯ್ ಜೋಶಿ, ಜಾತಿ ನಿಂದನೆ ಮಾಡಿದ್ದು, ಜೀವ ಬೆದರಿಕೆ ಹಾಕಿದ್ದಾರೆ. ಮಾತ್ರವಲ್ಲದೆ, ಕೆಲ ಗೂಂಡಾಗಳನ್ನು ಕರೆಸಿ, ಹೆದರಿಸಿದ್ದಾರೆ.
ಹಣ ಪಡೆದು, ಟಿಕೆಟ್ ಅನ್ನೂ ಕೊಡಿಸದೆ, ಕೊಟ್ಟ ಹಣವನ್ನೂ ವಾಪಸ್ ಕೊಡದೆ ಗೋಪಾಲ್ ಜೋಶಿ ಮತ್ತು ವಿಜಯಲಕ್ಷ್ಮಿ ಜೋಶಿ ವಂಚಿಸಿದ್ದಾರೆ. ಜಾತಿ ನಿಂದನೆ ಮಾಡಿ, ದರ್ಪ ಮೆರೆದಿದ್ದಾರೆ. ಗೋಪಾಲ್ ಜೋಶಿ ಅವರನ್ನು ನಂಬಿ 2 ಕೋಟಿ ರೂ. ಹಣ ಕಳೆದುಕೊಂಡು ಕಂಗಾಲಾಗಿರುವ ಸುನೀತಾ ಅವರು ಹಣ ವಾಪಸ್ ಪಡೆಯಲು ನಾನಾ ರೀತಿಯಲ್ಲಿ ಯತ್ನಿಸಿದ್ದಾರೆ. ಆದರೂ, ಹಣ ಮರಳಿ ಬಾರದ ಕಾರಣ, ಅಂತಿಮವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಗಮನಾರ್ಹ ಸಂಗತಿ ಎಂದರೆ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ, ಸಹೋದರಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರು ಕೂಡ ತಳಕು ಹಾಕಿಕೊಂಡಿದೆ. ಗೋಪಾಲ್ ಜೋಶಿ ಎಸಗಿರುವ ವಂಚನೆಯಲ್ಲಿ ಪ್ರಲ್ಹಾದ್ ಜೋಶಿ ಅವರ ಪಾತ್ರವೂ ಇರಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಪ್ರಕರಣದ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಪ್ರಲ್ಹಾದ್ ಜೋಶಿ, ‘ಈ ಪ್ರಕರಣದಲ್ಲಿ ನನಗೂ, ನನ್ನ ಸಹೋದರನಿಗೂ ಸಂಬಂಧವಿಲ್ಲ’ ಎಂದು ಹೇಳಿ, ನುಣುಚಿಕೊಂಡಿದ್ದಾರೆ.
ಸದ್ಯ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ‘ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಗೋಪಾಲ್ ಜೋಶಿ ತಲೆ ಮರೆಸಿಕೊಂಡಿದ್ದಾರೆ. ಅವರನ್ನು ಶೀಘ್ರದಲ್ಲೇ ಹುಡುಕುತ್ತೇವೆ’ ಎಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಆದರೆ, ಈ ಪ್ರಕರಣದ ಬಗ್ಗೆ ರಾಜ್ಯದ ಬಹುಸಂಖ್ಯಾತ ಮುಖ್ಯವಾಹಿನಿಯ ಮಾಧ್ಯಮಗಳು ವರದಿ ಮಾಡಿಲ್ಲ. ಗೊತ್ತಿದ್ದೂ ಗೊತ್ತಿಲ್ಲದಂತೆ ಮೌನವಾಗಿವೆ.
ಹೇಳಿಕೇಳಿ, ಈ ಪ್ರಕರಣದಲ್ಲಿ ದೂರುದಾರೆ ಬಿಜೆಪಿ ಮುಖಂಡೆ, ಆರೋಪಿಗಳು ಬಿಜೆಪಿ ಸಚಿವರ ಕುಟುಂಬಸ್ಥರು, ಪ್ರಕರಣದಲ್ಲಿ ತಳಕು ಹಾಕಿಕೊಂಡಿರುವ ಹೆಸರು ಬಿಜೆಪಿ ಹೈಕಮಾಂಡ್ ಮತ್ತು ಕೇಂದ್ರ ಸಚಿವರದ್ದು. ಹೀಗಾಗಿಯೇ, ಎಲ್ಲ ಮಾಧ್ಯಮಗಳು ಮೌನವಾಗಿವೆ. ಬೆಂಗಳೂರನ್ನೇ ಆವರಿಸಿಕೊಂಡಿರುವ, ಗಲ್ಲಿ ಗಲ್ಲಿಗಳಲ್ಲೂ ಸುದ್ದಿ ಹೆಕ್ಕಿ ತೆಗೆಯಬಲ್ಲ ಈ ಮಾಧ್ಯಮಗಳು, ಜೋಶಿ ಸಹೋದರನ ಈ ಪ್ರಕರಣದಲ್ಲಿ ದೂರು ದಾಖಲಾಗಿದ್ದರೂ, ಅಪರಾಧ ಸುದ್ದಿಯಾಗಿಯೂ ಪ್ರಕಟಿಸದೆ ಮೌನ ತಾಳಿವೆ.
ಮಾಧ್ಯಮಗಳ ಈ ಮೌನದ ಹಿಂದೆ ಪ್ರಕರಣವು ರಾಜ್ಯದಲ್ಲಿ ಚರ್ಚೆಗೆ ಬಾರದಂತೆ ತಡೆಯುವ ಹುನ್ನಾರವಿದೆ. ಅದೇ, ಈ ದೂರು ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಾಗಿದ್ದರೆ, ಆ ವಂಚನೆಯಲ್ಲಿ ಮುಸ್ಲಿಮರ ಹೆಸರು ತಳಕುಹಾಕಿಕೊಂಡಿದ್ದರೆ, ಇಷ್ಟೊತ್ತಿಗಾಗಲೇ ಪ್ಯಾನಲ್ ಡಿಸ್ಕಷನ್ಗಳು, ವಾದ-ವಿವಾದಗಳು, ಅಭಿಪ್ರಾಯ ಸಂಗ್ರಹಗಳ ಮೂಲಕ ಊಹಾಪೋಹದ ಮಹಾಪೂರವೇ ಹರಿದುಬರುತ್ತಿತ್ತು. ದಿನದ ಇಪ್ಪತ್ನಾಲ್ಕು ಗಂಟೆಯೂ ಅದೇ ಸುದ್ದಿ ಪುನರಾವರ್ತನೆಯಾಗುತ್ತಿತ್ತು. ನಡೆಯಬಾರದ ವಂಚನೆ ನಡೆದುಹೋಗಿದೆ ಎಂದು ಬಾಯಿ ಬಡಿದುಕೊಳ್ಳುತ್ತಿದ್ದವು. ಆದರೆ, ಈಗ ಬಾಯಿ ಮುಚ್ಚಿಕೊಂಡು ಕುಳಿತಿವೆ.
ಈ ವರದಿ ಓದಿದ್ದೀರಾ?: ಹುಬ್ಬಳ್ಳಿ ಪ್ರಕರಣ ವಾಪಸ್ಗೆ ಕೂಗೆಬ್ಬಿಸಿರುವ ಬಿಜೆಪಿ ಹಿಂಪಡೆದ ಗಲಭೆ ಕೇಸ್ಗಳ ಪ್ರಕರಣಗಳೆಷ್ಟು ಗೊತ್ತಾ?
ಈ ಹಿಂದೆ, ಬಿಜೆಪಿ ಟಿಕೆಟ್ ಕೊಡಿಸುತ್ತೇವೆಂದು ಹಿಂದುತ್ವ ಕೋಮು ಕಾರ್ಯಕರ್ತೆ ಚೈತ್ರಾ ಕುಂದಾಪುರ ಮತ್ತು ಆಕೆಯ ಗ್ಯಾಂಗ್ ಕರಾವಳಿ ಭಾಗದಲ್ಲಿ ಹಲವರಿಗೆ ವಂಚಿಸಿತ್ತು. ಆ ಪ್ರಕರಣದಲ್ಲಿ ಚೈತ್ರಾಳನ್ನು ಪೊಲೀಸರು ಬಂಧಿಸಿದ್ದರು. ಆ ಪ್ರಕರಣವನ್ನು ತೇಪೆ ಹಚ್ಚುವಂತೆ ಮಾಧ್ಯಮಗಳು ಒಂದಷ್ಟು ಸುದ್ದಿ ಮಾಡಿದ್ದವು.
ಅಲ್ಲದೆ, ಇತ್ತೀಚೆಗೆ ಮತ್ತೆ ಮುನ್ನೆಲೆಗೆ ಬಂದಿದ್ದ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹಾಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಎ1, ಎ2 ಆರೋಪಿಗಳಾಗಿರುವ ಡಿನೋಟಿಫಿಕೇಷನ್ ಹಗರಣದ ಬಗ್ಗೆಯೂ ಈ ಮಾಧ್ಯಮಗಳು ಸುದ್ದಿ ಮಾಡಿರಲಿಲ್ಲ. ರಾಜ್ಯ ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಹಾಗೂ ಸಂತೋಷ್ ಲಾಡ್ ಅವರು ಆ ಹಗರಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಬಳಿಕವಷ್ಟೇ ಸುದ್ದಿ ಮಾಡಿದವು. ಅದರಲ್ಲೂ, ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಹೆಚ್ಚು ಒತ್ತು ಕೊಟ್ಟು, ಕುಮಾರಸ್ವಾಮಿ ಅವರನ್ನು ಹಸುವಿನಂತೆ ಚಿತ್ರಿಸಲು ಹೆಣಗಾಡಿದ್ದವು.
ಈಗ, ಗೋಪಾಲ್ ಜೋಶಿ ವಿರುದ್ಧದ ಪ್ರಕರಣದಲ್ಲಿಯೂ ಮಾಧ್ಯಮಗಳು ಮೌನತಾಳಿವೆ. ಪ್ರಕರಣ ಹೆಚ್ಚು ಚರ್ಚೆಗೆ ಬಾರದಂತೆ ಮಾಧ್ಯಮಗಳು ತಡೆಯುವತ್ತ ಗಮನ ಹರಿಸುತ್ತಿವೆ. ಇದು, ಈ ರಾಜ್ಯಕ್ಕೂ, ದೇಶಕ್ಕೂ, ಪ್ರಜಾಪ್ರಭುತ್ವಕ್ಕೂ ಮಾಧ್ಯಮಗಳು ಎಸಗುತ್ತಿರುವ ದ್ರೋಹ.