ಮೋದಿ ಪಡೆಯನ್ನು ತಡೆಯಬಲ್ಲ ಐಕ್ಯ ಪ್ರತಿಪಕ್ಷವು ನಮ್ಮ ದೇಶಕ್ಕೆ ತುರ್ತಾಗಿ ಬೇಕಾಗಿದೆ. ಎಡರಂಗದಲ್ಲೂ ಕೂಡಾ ಐಕ್ಯತೆಯ ಸವಾಲಿದೆ. ಎಡಪಂಥೀಯ ನಿಲುವುಳ್ಳ ಎಲ್ಲ ಪಕ್ಷಗಳನ್ನೂ ರಾಷ್ಟ್ರೀಯ ಮಟ್ಟದಲ್ಲಿ ಒಗ್ಗೂಡಿಸುವುದು ಮತ್ತು ಅದರ ಮೂಲಕ ಎಡರಂಗ ಬಲಪಡಿಸುವುದು ಬೇಬಿ ಎಂಬ ರಾಜಕೀಯ ತಂತ್ರಜ್ಞನಿಗೆ ಸಾಧ್ಯವಾಗುತ್ತದೆ ಎನ್ನುವುದು ಅವರ ಮಿತ್ರರ ಅಭಿಪ್ರಾಯ.
ಭಾರತದ ಇಂದಿನ ರಾಜಕೀಯ ಪರಿಸರದಲ್ಲಿ ಎಡರಂಗದ ಸಂಸತ್ ಪ್ರತಿನಿಧಿಗಳ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡರೂ, ಅದರ ರಾಜಕೀಯ ನಿಲುವುಗಳು ನಮ್ಮ ದೇಶದ ರಾಜಕೀಯ ಕ್ಷೇತ್ರದಲ್ಲಿ ಬಹಳ ಪ್ರಭಾವವನ್ನು ಬೀರುತ್ತವೆ ಎನ್ನುವುದು ವಾಸ್ತವ. ಸಿಪಿಐಎಂ (CPIM) ಎಡರಂಗದಲ್ಲಿ ಪ್ರಮುಖ ಪಕ್ಷವಾಗಿದೆ. ಕಳೆದ ವಾರದಲ್ಲಿ ತಮಿಳುನಾಡಿನ ಮದುರೈನಲ್ಲಿ ನಡೆದ ಪಕ್ಷದ 22ನೇ ಕಾಂಗ್ರೆಸಿನಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ 71ರ ಹರೆಯದ ಎಂ.ಎ.ಬೇಬಿ ಅವರು ಆಯ್ಕೆಯಾಗಿರುವುದು ಈ ಕಾರಣದಿಂದಲೇ ಕುತೂಹಲವನ್ನು ಕೆರಳಿಸಿದೆ.
ಕೇರಳದ ಕೊಲ್ಲಂ ಜಿಲ್ಲೆಯ ಪ್ರಾಕುಳಂನಲ್ಲಿ ಜನಿಸಿ, ಭಾರತೀಯ ವಿದ್ಯಾರ್ಥಿ ಫೆಡರೇಶನ್ (SFI) ಮೂಲಕ ವಿದ್ಯಾರ್ಥಿ ನಾಯಕನಾಗಿ ಗುರುತಿಸಲ್ಪಟ್ಟ ಮರಿಯನ್ ಅಲೆಕ್ಸಾಂಡರ್ ಬೇಬಿ ಅಥವಾ ಎಂ.ಎ.ಬೇಬಿ (M A Baby) ನಂತರ ಯುವ ಸಂಘಟನೆಯಾದ ಡಿವೈಎಫ್‍ಐನ ರಾಷ್ಟ್ರೀಯ ಅಧ್ಯಕ್ಷರಾಗಿಯೂ ಆಯ್ಕೆಯಾದರು. 1986ರಿಂದ 1998ರ ವರೆಗೆ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದರು. ಮೊದಲನೇ ಬಾರಿ ರಾಜ್ಯ ಸಭೆಗೆ ಆಯ್ಕೆಯಾದಾಗ ಅವರ ಹರೆಯ 32. ತನ್ನದೇ ಊರಿನಲ್ಲಿ ಎರಡು ಬಾರಿ ಶಾಸಕರಾದರು. ನಂತರ ಕೇರಳ ವಿಧಾನಸಭೆಯಲ್ಲಿ ಶಿಕ್ಷಣ ಸಚಿವರೂ ಆದರು. ಎರಡನೇ ಬಾರಿ ಶಾಸಕರಾಗಿದ್ದಾಗಲೇ ಕೊಲ್ಲಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಅವರು ವಿಜಯವನ್ನು ಕಾಣಲಿಲ್ಲ. ನಂತರ, ಪಾರ್ಲಿಮೆಂಟರಿ ರಾಜಕೀಯದಿಂದ ದೂರ ಉಳಿದರು. ಸಂಘಟನಾ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಂಡರು.
1999ರಲ್ಲಿ ಅವರು ಪಕ್ಷದ ಕೇಂದ್ರ ಸಮಿತಿಯಲ್ಲಿ ಸದಸ್ಯರಾದರು. ಕೇರಳದ ಹಾಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸಮಿತಿಯ ಸದಸ್ಯನಾಗಿದ್ದು ಇನ್ನೂ 10 ವರ್ಷಗಳ ನಂತರ! ಪಕ್ಷದ ಪೊಲಿಟ್ ಬ್ಯೂರೋ (ಪಿಬಿ)ದಲ್ಲಿ ಸದಸ್ಯನಾದದ್ದು 2011ರಲ್ಲಿ. ನಾಸ್ತಿಕನಾದ ಬೇಬಿ ಅವರು ಕೇರಳದ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ರೀತಿಯ ಬದಲಾವಣೆಗಳನ್ನು ತಂದರು. ಅವರ ಹೆಜ್ಜೆಗಳು ಕೆಲವು ಧಾರ್ಮಿಕ ಮುಖಂಡರುಗಳ ತಲೆನೋವಿಗೆ ಕಾರಣವಾಗಿದ್ದು, ವಿವಾದಗಳೂ ಎದ್ದವು.
ರಾಜಕೀಯದಾಚೆಯೂ ಬೇಬಿ ಅವರ ಆಸಕ್ತಿ ವಿಷಯಗಳು ಅನೇಕ. ಸಂಗೀತ, ಸಾಹಿತ್ಯ, ಕಲೆ, ಚಲನಚಿತ್ರ, ಕ್ರೀಡೆ ಇತ್ಯಾದಿ ಕ್ಷೇತ್ರಗಳಲ್ಲಿ ಬೇಬಿ ಅವರಿಗೆ ವಿಶೇಷ ಆಸಕ್ತಿ. ‘ಸ್ವರಲಯ’ ಎಂಬ ಸಂಗೀತ ವೇದಿಕೆಯ ರೂವಾರಿ. ಶಿಕ್ಷಣ ಸಚಿವರಾಗಿದ್ದಾಗ ಅವರು ಪ್ರಾರಂಭಿಸಿದ ಅಂತಾರಾಷ್ಟ್ರೀಯ ಕಲಾಕೃತಿಗಳ ಪ್ರದರ್ಶನ ‘ಕೊಚ್ಚಿ ಬಿನಾಲೆ’ ಪ್ರತಿ ವರ್ಷವೂ ನಡೆಯುತ್ತಿದೆ. ವೀಣಾ ವಾದಕ ಪಂಡಿತ್ ಹರಿಪ್ರಸಾದ್ ಚೌರಾಸಿಯ, ತಬಲಾ ವಾದಕ ಜಾಕಿರ್ ಹುಸೈನ್, ಗಜಲ್ ಗಾಯಕ ಗುಲಾಂಅಲಿ, ಸಿತಾರ್ ವಾದಕ ಪಂಡಿತ್ ರಾಜೀವ್ ತಾರಾನಾಥ್, ಚಿತ್ರ ಕಲಾವಿದ ಎಂ.ಎಫ್. ಹುಸೇನ್ ಮುಂದಾದವರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದರು. ಚಲನಚಿತ್ರ ಕ್ಷೇತ್ರದ ಅನೇಕ ಪ್ರತಿಭೆಗಳ ಜೊತೆಗೂ ಅವರಿಗೆ ಮೈತ್ರಿ ಇದೆ. ತನ್ನ ಮಗ ಅಶೋಕ್ ನೆಲ್ಸನ್ ಕೂಡಾ ಹೆಸರಾಂತ ಗಿಟಾರಿಸ್ಟ್ ಆಗಲು ಎಂ.ಎ.ಬೇಬಿ ಎಂಬ ಸಂಗೀತ ಪ್ರೇಮಿಯೇ ಕಾರಣ. ಸಂಗೀತ, ಸಾಹಿತ್ಯ, ಕ್ರೀಡೆ ಇತ್ಯಾದಿ ರಾಜಕೀಯೇತರ ಕ್ಷೇತ್ರಗಳಲ್ಲಿನ ಆಸಕ್ತಿ ಬೇಬಿ ಅವರನ್ನು ಸೌಮ್ಯ ನಡವಳಿಕೆಯ, ಸೌಜನ್ಯ ಸ್ವಭಾವದ ವ್ಯಕ್ತಿಯನ್ನಾಗಿಸಿದೆ.

ಅವರ ಬಳಿ ಹೋಗಲು ಯಾರಿಗೂ ಯಾವುದೇ ಅಡೆತಡೆಗಳಿಲ್ಲ. ಎಲ್ಲರನ್ನೂ ಅಕ್ಕರೆಯಿಂದ ಮಾತನಾಡಿಸುವ, ವಿಚಾರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಜನಾನುರಾಗಿಯಾದ ಕಾರ್ಯಕರ್ತ ಎಂದೇ ಅವರು ಹೆಸರುವಾಸಿ. ಸಿಪಿಎಂ ಪಕ್ಷದ ಹಿಂದಿನ ಪ್ರಧಾನ ಕಾರ್ಯದರ್ಶಿಗಳಾದ ಇಎಂಎಸ್ ನಂಬೂದಿರಿಪಾಡ್, ಪಿ. ಸುಂದರಯ್ಯ, ಹರಕಿಷನ್ ಸಿಂಗ್ ಸುರ್ಜಿತ್, ಪ್ರಕಾಶ್ ಕಾರಾಟ್, ಸೀತಾರಾಂ ಯೆಚೂರಿ ಸಾಲಿನಲ್ಲಿ ಈಗ 55 ವರ್ಷದ ರಾಜಕೀಯ ಅನುಭವದೊಂದಿಗೆ ಎಂ.ಎ.ಬೇಬಿ ಅವರು ಸಿಪಿಎಂ ಪಕ್ಷವನ್ನು ಮುನ್ನಡೆಸುವ ಗಂಭೀರ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಅವರ ಮುಂದೆ ಬೆಟ್ಟದಷ್ಟು ಗಂಭೀರ ಸವಾಲುಗಳಿವೆ.
ಪ್ರಸ್ತುತ ಕೇವಲ 4 ಸಂಸದರು ಮತ್ತು 84 ಶಾಸಕರು ಮಾತ್ರ ಹೊಂದಿರುವ ಪಕ್ಷವಾಗಿದೆ ಸಿಪಿಎಂ. 2004ರಲ್ಲಿ 62 ಸಂಸದರಿದ್ದರು. ಪಶ್ಚಿಮ ಬಂಗಾಳ ರಾಜ್ಯವು 34 ವರ್ಷಗಳ ಕಾಲ ಸಿಪಿಎಂ ಪಕ್ಷದ ಆಡಳಿತದಲ್ಲಿತ್ತು. ಆದರೆ, ಇಂದು ಪಕ್ಷಕ್ಕೆ ಅಲ್ಲಿ ಒಬ್ಬ ಶಾಸಕ ಕೂಡಾ ಇಲ್ಲ. ತ್ರಿಪುರಾ ರಾಜ್ಯವು ಕೂಡಾ ಪಕ್ಷದ ಆಡಳಿತದಲ್ಲಿತ್ತು. ಆ ರಾಜ್ಯದಲ್ಲಿ ಕೂಡಾ ಈಗ ಸಿಪಿಎಂನ ಒಬ್ಬ ಜನಪ್ರತಿನಿಧಿ ಇಲ್ಲ. ಕೇರಳದಲ್ಲಿ ಮಾತ್ರ ಪಕ್ಷವು ಈಗ ಎರಡನೇ ಬಾರಿ ಅಧಿಕಾರಕ್ಕೇರಿದೆ. ಪಕ್ಷವು ದುರ್ಬಲವಾದ ಕಾಲಯಾನದಲ್ಲಿ ಬೇಬಿ ಅವರು ಪಕ್ಷದ ಅತ್ಯುನ್ನತ ಹುದ್ದೆಗೇರಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಕಟ್ಟುವುದು ಅವರ ಮುಂದಿರುವ ಒಂದು ಸವಾಲಾಗಿದೆ.
ಪಕ್ಷದೊಳಗಿನ ಅತೃಪ್ತಿಯನ್ನು ಸರಿದೂಗಿಸುವುದಕ್ಕೂ ಅವರು ಒತ್ತು ಕೊಡಬೇಕಾಗಿದೆ. ಸರ್ವಾಧಿಕಾರಿ ಧೋರಣೆಯ ರಾಜಕೀಯ ಚಿಂತನೆಗಳನ್ನು ಮುಂದಿಟ್ಟು ಆಡಳಿತ ನಡೆಸುವ ಬಿಜೆಪಿಯ ವಿರುದ್ಧ ವಿಶಾಲವಾದ ಪ್ರತಿಪಕ್ಷ ರಾಜಕೀಯ ಒಕ್ಕೂಟವನ್ನು ಬಲಪಡಿಸುವುದು ಅವರ ಮುಂದಿರುವ ಮುಖ್ಯ ಸವಾಲು. ಹರಕಿಶನ್ ಸಿಂಗ್ ಸುರ್ಜಿತ್ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ 2004ರಲ್ಲಿ (UPA) ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೇರಿತ್ತು. ಮನಮೋಹನ್ ಸಿಂಗ್ (Manamohan sing) ಪ್ರಧಾನಿಯಾದರು. ಅಂದು ಯುಪಿಎ ಸರ್ಕಾರದ ರಚನೆಯಲ್ಲಿ ಎಡರಂಗವನ್ನು ಮುನ್ನಡೆಸುತ್ತಾ ಸಿಪಿಎಂ ಪಕ್ಷವು ಬಹಳ ದೊಡ್ಡ ಪಾತ್ರ ವಹಿಸಿತ್ತು. ಎರಡನೇ ಯುಪಿಎ ಸರ್ಕಾರದಲ್ಲಿ ಕೂಡಾ ಪಕ್ಷವು ಗಂಭೀರ ಪಾತ್ರ ವಹಿಸಿತ್ತು. ನರೇಂದ್ರ ಮೋದಿ ಸರ್ಕಾರದ ವಿರುದ್ಧ ನಡೆದ ರೈತರ ಹೋರಾಟದಲ್ಲಿ ಸಿಪಿಎಂನ ಪಾತ್ರ ಮುಖ್ಯವಾಗಿತ್ತು. ಬಿಜೆಪಿ ವಿರುದ್ದದ ಹೋರಾಟಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಕೂಡಾ ಪ್ರಭಾವಿಸಲು ಸಿಪಿಎಂಗೆ ಸಾಧ್ಯವಾಯಿತು. ಇದೇ ಕಾರಣದಿಂದ ಪ್ರಸ್ತುತ ಸಿಪಿಎಂ ಪಕ್ಷವು ಬೇಬಿ ಅವರ ನೇತೃತ್ವದಲ್ಲಿ ಯಾವ ರೀತಿಯ ಪಾತ್ರವನ್ನು ವಹಿಸುತ್ತದೆ ಎನ್ನುವುದು ಎಲ್ಲ ಪ್ರಜಾಪ್ರಭುತ್ವವಾದಿಗಳಿಗೆ ಕುತೂಹಲಕಾರಿ ವಿಚಾರ ಹೌದು.
ಕಾಂಗ್ರೆಸಿನ ಕಾಲದಲ್ಲಿದ್ದ ಭ್ರಷ್ಟಾಚಾರಕ್ಕಿಂತ ಹತ್ತು ಪಟ್ಟು ಹೆಚ್ಚಾಗಿದೆ ಮೋದಿ (MODI) ಕಾಲದ ಭ್ರಷ್ಟಾಚಾರ. ಆರ್ಥಿಕ ಭ್ರಷ್ಟತೆ ಮಾತ್ರವಲ್ಲ, ದೇಶದ ಜನಸಾಮಾನ್ಯರಲ್ಲಿ ಭಾವನಾತ್ಮಕ ಭ್ರಷ್ಟತೆಯನ್ನು ಬಿಜೆಪಿ ಪಕ್ಷವು ಮತ್ತು ಅದರ ಮಿತ್ರ ಸಂಘಟನೆಗಳು ಸೃಷ್ಟಿಸಿದೆ. ಇದರಿಂದ, ಮೂಲಭೂತ ಸಮಸ್ಯೆಗಳಿಗಿಂತ ಕೋಮು ವಿದ್ವೇಷವೇ ಮುನ್ನೆಲೆಗೆ ಬಂದಿದೆ. ನಗರಗಳು ಮತ್ತು ಗ್ರಾಮಗಳಲ್ಲಿನ ಬಹುಸಂಖ್ಯಾತ ಜನರು ಅಮಾಯಕರು. ಅವರು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಅಂತಹವರಿಗಾಗಿ ಸಿಪಿಎಂ ಪಕ್ಷ ನೆಲೆನಿಂತಿದೆ. ಆದರೆ, ಅವರತ್ತ ತಲುಪಲು ಪಕ್ಷಕ್ಕೆ ಆಗುತ್ತಿಲ್ಲ. ಇದು ನಮ್ಮ ಮುಂದಿರುವ ಸವಾಲು ಎಂದು ಬೇಬಿ ಅವರು ಹೇಳುತ್ತಾರೆ.

ಮೋದಿ ಪಡೆಯನ್ನು ತಡೆಯಬಲ್ಲ ಐಕ್ಯ ಪ್ರತಿಪಕ್ಷವು ನಮ್ಮ ದೇಶಕ್ಕೆ ತುರ್ತಾಗಿ ಬೇಕಾಗಿದೆ. ಅದರಲ್ಲಿ ಹಿಂದಿನಂತೆ ಎಡರಂಗ ನಿರ್ವಹಿಸಿದ ಪಾತ್ರವನ್ನು ಬೇಬಿ ಮುಂದುವರೆಸಲಿದ್ದಾರೆಂದು ಅವರ ಸಂದರ್ಶನಗಳಿಂದ ಸ್ಪಷ್ಟವಾಗುತ್ತದೆ. ಎಡರಂಗದಲ್ಲೂ ಕೂಡಾ ಐಕ್ಯತೆಯ ಸವಾಲಿದೆ. ಎಡಪಂಥೀಯ ನಿಲುವುಳ್ಳ ಎಲ್ಲ ಪಕ್ಷಗಳನ್ನೂ ರಾಷ್ಟ್ರೀಯ ಮಟ್ಟದಲ್ಲಿ ಒಗ್ಗೂಡಿಸುವುದು ಮತ್ತು ಅದರ ಮೂಲಕ ಎಡರಂಗ ಬಲಪಡಿಸುವುದು ಬೇಬಿ ಎಂಬ ರಾಜಕೀಯ ತಂತ್ರಜ್ಞನಿಗೆ ಸಾಧ್ಯವಾಗುತ್ತದೆ ಎನ್ನುವುದು ಅವರನ್ನು ಚೆನ್ನಾಗಿ ಬಲ್ಲ ರಾಜಕೀಯ ಮಿತ್ರರ ಅಭಿಪ್ರಾಯ. ಪ್ರಜಾಪ್ರಭುತ್ವದ ಸೊಬಗಿಗೆ ಎಡರಂಗ ಇರಲೇ ಬೇಕು. ಏನೇ ಭಿನ್ನತೆಗಳಿದ್ದರೂ ಕೇಂದ್ರದಲ್ಲಿರುವ ಫ್ಯಾಸಿಸ್ಟ್ ಸರ್ಕಾರದ ವಿರುದ್ಧ ಒಗ್ಗೂಡುವುದು ಅನಿವಾರ್ಯ. ಅದನ್ನು ಮುನ್ನಡೆಸಲು ವಿಶೇಷ ದನಿಯಾಗಿ ಇನ್ನು ಮುಂದೆ ಎಂ.ಎ. ಬೇಬಿ ಅವರನ್ನು ನಾವು ಎದುರು ನೋಡುತ್ತಿದ್ದೇವೆ.

ಬಾಬುರಾಜ್ ಪಲ್ಲದನ್
ಮೈಸೂರಿನಲ್ಲಿ ವಕೀಲರು ಮತ್ತು ಪೀಪಲ್ಸ್ ಲೀಗಲ್ ಫೋರಂನ ನಿರ್ದೇಶಕ