ಮಂಗಳೂರು ಗ್ಯಾಂಗ್‌ರೇಪ್‌ | ಮೌನಕ್ಕೆ ಜಾರಿದ ಬಿಜೆಪಿ, ಸಂಘಪರಿವಾರ; ಕಾರಣ ಏನು ಗೊತ್ತೇ?

Date:

Advertisements

ವೈಯಕ್ತಿಕ ಕಾರಣಕ್ಕೆ ಕೊಲೆ, ಆತ್ಮಹತ್ಯೆ, ಹಲ್ಲೆ ಏನೇ ನಡೆದರೂ ಬಿಜೆಪಿಯ ಶಾಸಕರು, ಸಂಸದರು ತಮ್ಮ ಸ್ಥಾನದ ಘನತೆ, ಕರ್ತವ್ಯ ಮರೆತು ಅಲ್ಲಿಗೆ ಹೋಗಿ ದ್ವೇಷ ಕಾರಿ ಬರುತ್ತಾರೆ. ಹಿಂದೂ ಧರ್ಮದ ರಕ್ಷಣೆ, ಹಿಂದೂ ಹೆಣ್ಣುಮಕ್ಕಳ ರಕ್ಷಣೆ ಎಂದು ಹೇಳುವ ಈ ಗೋಸುಂಬೆಗಳು ಜಿಲ್ಲೆಯ ಪ್ರತಿಷ್ಟಿತ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳು ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಧರ್ಮಸ್ಥಳದ ಸೌಜನ್ಯ ರೇಪ್‌ ಅಂಡ್‌ ಮರ್ಡರ್‌ ಆದಾಗ ಇದ್ದದ್ದು ಬಿಜೆಪಿ ಸರ್ಕಾರ. ಆ ಕುಟುಂಬದ ನೋವು ಆಲಿಸುವ ಕನಿಷ್ಠ ಸೌಜನ್ಯ ತೋರಿಲ್ಲ…

ಕರಾವಳಿ ಜಿಲ್ಲೆಗಳಲ್ಲಿ ಕೋಮುಗಲಭೆ ನಡೆಯಲು ಬೇರೆ ಯಾರೋ ಕುಮ್ಮಕ್ಕು ನೀಡಬೇಕಿಲ್ಲ. ಅಥವಾ ಗಂಭೀರ ಕಾರಣವೂ ಬೇಕಿಲ್ಲ. ಅಲ್ಲಿರುವ ಅರ್ಧ ಡಜನ್‌ ಶಾಸಕರು, ಬಜರಂಗದಳ, ವಿಎಚ್‌ಪಿಯ ಮುಖಂಡರೇ ಸಾಕು. ವಾಸ್ತವದಲ್ಲಿ ಅಲ್ಲಿನ ಜನರು ಹಾಗಿಲ್ಲ. ʼಈದ್‌ ಹಬ್ಬದ ಮೆರವಣಿಗೆಯ ಹಾದಿಯಲ್ಲಿ ಶರಬತ್ತು ನೀಡಿ ದಾಹ ತಣಿಸಿದ ಹಿಂದೂಗಳು, ರಾಮನವಮಿ ಮೆರವಣಿಗೆಯ ಹೊರಟವರಿಗೆ ಜ್ಯೂಸ್‌ ನೀರಿನ ಬಾಟಲಿ ನೀಡಿದ ಮುಸ್ಲಿಮರುʼ, ಈ ತರಹದ ತಲೆಬರಹ ಪ್ರತಿ ವರ್ಷವೂ ಪತ್ರಿಕೆಗಳಲ್ಲಿ ರಾರಾಜಿಸುತ್ತಿವೆ. ಮೂಲದಲ್ಲಿ ಎಲ್ಲರೂ ಪರಸ್ಪರ ಸಹಕಾರದಿಂದ ಸ್ನೇಹದಿಂದಲೇ ಇದ್ದಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಸಂಘಪರಿವಾರ ಬಡ ನಿರುದ್ಯೋಗಿ ಯುವಕರ ಪಡೆಯನ್ನು ಕಟ್ಟಿಕೊಂಡು ಹೋರಾಟ, ಬೆಂಕಿ ಹಚ್ಚುವ ಕೆಲಸ ಮಾಡುತ್ತದೆ. ಕೋಮುವಾದಿ ಭಾಷಣ, ಸುಳ್ಳು ಮತ್ತು ತಿರುಚಿದ ಸುದ್ದಿಗಳನ್ನು ವಾಟ್ಸಪ್‌ಗಳಲ್ಲಿ ಹಾಕಿ ಮನೆ ಮನೆಗೂ ಕೋಮು ವಿಷ ಹರಡುತ್ತಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಬಿಜೆಪಿಗರೇ ಕೋಮುಗಲಭೆ ಸೃಷ್ಟಿಸಿ ಕರಾವಳಿಯನ್ನು ಉದ್ವಿಗ್ನಗೊಳಿಸುತ್ತಿದ್ದರು. ಆಡಳಿತ ನಡೆಸುತ್ತಿದ್ದ ಸರ್ಕಾರದ ಬಹುತೇಕ ಸಚಿವರು, ಶಾಸಕರು ಕೋಮು ಪ್ರಚೋದನೆ ನೀಡಿ, ಗಲಭೆಯ ನಡುವೆ ಹೋಗಿ ಭಾಷಣ ಬಿಗಿದು ಬರುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕೇಸರಿ ಕಲಿಗಳೇ ಶಾಸಕರಾಗಿದ್ದರು. ಅವರಿಗೆ ಆರ್‌ ಅಶೋಕ್‌, ಸಿ ಟಿ ರವಿ, ಈಶ್ವರಪ್ಪ, ಯತ್ನಾಳ್‌ ತರಹದವರು ಸಾಥ್‌ ಕೊಡುತ್ತಿದ್ದರು. ದೆಹಲಿಯಿಂದಲೇ ಶೋಭಾ ಕರಂದ್ಲಾಜೆಯವರು ಹೇಳಿಕೆ ಕೊಟ್ಟು ಬಿಡುತ್ತಿದ್ದರು. ಲವ್‌ ಜಿಹಾದ್‌ ಹೆಸರಿನಲ್ಲಿ ದಾಂಧಲೆ, ಹಿಜಾಬ್‌ ನಿಷೇಧ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಇಂತಹ ಕೋಮು ಸಾಮರಸ್ಯ ಕದಡುವ ಪ್ರಯತ್ನವನ್ನು ಕರಾವಳಿಯ ಬಿಜೆಪಿ ಮಾಡುತ್ತಲೇ ಬಂದಿದೆ.

Advertisements
ANI 20240207153 0 1707367665803 1708490639055

ಈ ವಿಷಯ ಈಗ ಯಾಕೆ ಅಂದ್ರೆ, ಮಂಗಳೂರಿನಲ್ಲಿ ಒಂದು ಗ್ಯಾಂಗ್‌ ರೇಪ್‌ ಆಗಿದೆ. ಏಪ್ರಿಲ್‌ 16ರಂದು ಕೆಲಸ ಹುಡುಕಿ ಬಂದ ಪಶ್ಚಿಮಬಂಗಾಳದ ಯುವತಿಯನ್ನು ಮೂವರು ಸ್ಥಳೀಯ ಹಿಂದೂ ಯುವಕರು ಉಳ್ಳಾಲದ ನೇತ್ರಾವತಿ ನದಿಯ ಬಳಿ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರಗೈದಿದ್ದಾರೆ. ಆದರೆ ಕರಾವಳಿಯಲ್ಲಿ ಯಾವುದೇ ಪ್ರತಿಭಟನೆ ಇಲ್ಲ. ಆರೋಪಿಗಳು ಮುಸ್ಲಿಮರಾಗಿದ್ದರೆ ತಕ್ಷಣ ರಾಜ್ಯದ ಎಲ್ಲಾ ಬಿಜೆಪಿ ನಾಯಕರು ಜಮಾಯಿಸುತ್ತಿದ್ದರು. ಅಷ್ಟೇ ಅಲ್ಲ ಸರ್ಕಾರದ ವಿರುದ್ಧ ಭಯಂಕರ ಭಾಷಣ ಮಾಡುತ್ತಿದ್ದರು. ಆದರೆ, ಒಬ್ಬ ಬೇರೆ ರಾಜ್ಯದ ಹೆಣ್ಣುಮಗಳು ತಮ್ಮೂರಿನಲ್ಲಿ ಸ್ಥಳೀಯ ಯುವಕರಿಂದಲೇ ಅತ್ಯಾಚಾರಗೊಂಡಿರುವುದು ಬಿಜೆಪಿ ಶಾಸಕರಿಗೆ, ಹಿಂದುತ್ವದ ಕಾರ್ಯಕರ್ತರಿಗೆ, ಬಿಜೆಪಿಯ ಮಹಿಳಾ ಕಾರ್ಯಕರ್ತರಿಗೆ ಅಮಾನವೀಯ, ಕಳಂಕ ಎಂದು ಅನ್ನಿಸಿಲ್ಲ. ಇದು ಬಿಜೆಪಿಯ ರಾಜಕಾರಣದ ಒಂದು ಮಾದರಿ. ಇಂತಹ ಒಂದು ಕ್ರೂರ ಘಟನೆ ತಮ್ಮ ಕ್ಷೇತ್ರದಲ್ಲಿ ನಡೆದಿದೆ. ಇದರ ವಿರುದ್ಧ ಮಾತಾಡಬೇಕು ಎಂದು ಶಾಸಕರಿಗೆ ಅನ್ನಿಸಿಲ್ಲ. ಯಾಕೆಂದರೆ ಈ ಪ್ರಕರಣದಲ್ಲಿ ಮುಸ್ಲಿಂ ಆರೋಪಿಗಳಿಲ್ಲ!

ಕೋಮುರಾಜಕಾರಣ, ಮುಸ್ಲಿಂ ದ್ವೇಷ, ಹುಸಿ ಹಿಂದುತ್ವ ಬಿಜೆಪಿಯವರಿಗೆ ಮತ ತಂದುಕೊಡುತ್ತಿರುವ ಸಾಧನವಾಗಿರುವುದು ಮಾತ್ರ ಪ್ರಜಾ ಪ್ರಭುತ್ವದ ಅಣಕ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮತ್ತು ಈಗ ಕಾಂಗ್ರೆಸ್‌ ಸರ್ಕಾರ ಇರುವಾಗಲೂ ಅವರ ಧೋರಣೆ ನಡವಳಿಕೆಗಳು ಒಂದೇ ಮಾದರಿಯಲ್ಲಿರುತ್ತವೆ.

ವಿದ್ಯಾರ್ಥಿ ನಾಪತ್ತೆಯಾದರೂ ಕೋಮುದ್ವೇಷದ ಭಾಷಣ

ಕಳೆದ ಫೆಬ್ರವರಿನಲ್ಲಿ ಮಂಗಳೂರಿನ ಪರಂಗಿಪೇಟೆಯ ಪಿಯು ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ಇದಕ್ಕೊಂದು ತಾಜಾ ಉದಾಹರಣೆ. ಮಾರ್ಚ್‌ ಮೂರರಂದು ಶುರುವಾಗಬೇಕಿದ್ದ ಪಿಯುಸಿ ಪರೀಕ್ಷೆಗೆ ಹೆದರಿ ದಿಗಂತ್‌ ಫೆ. 25ರಂದು ಮನೆ ಬಿಟ್ಟು ಹೋಗಿದ್ದ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರ ದಿಕ್ಕು ತಪ್ಪಿಸಲು ರೈಲು ಹಳಿಗಳ ಬಳಿ ರಕ್ತ ಮೆತ್ತಿದ ಚಪ್ಪಲಿ ಮತ್ತು ಮೊಬೈಲ್‌ ಬಿಟ್ಟು ಹೋಗಿದ್ದ. ಕಾಲಿನ ಗಾಯದಿಂದ ರಕ್ತ ಸೋರಿದ್ದು ಚಪ್ಪಲಿಗೆ ಮೆತ್ತಿಕೊಂಡಿತ್ತು ಎಂಬುದು ನಂತರ ಗೊತ್ತಾದ ವಿಷಯ. ಈ ಎರಡು ಸಾಕ್ಷ್ಯ ಇಟ್ಟುಕೊಂಡು ಪೊಲೀಸರು ಪತ್ತೆ ಕಾರ್ಯ ಶುರು ಮಾಡಿದ್ದರು. ಆದರೆ ಬಿಜೆಪಿ ಶಾಸಕರು ಮತ್ತು ಸಂಘಪರಿವಾರ, ವಿಎಚ್‌ಪಿ ಸೇರಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪರಂಗಿಪೇಟೆಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ ಕೋಮು ದ್ವೇಷದ ಭಾಷಣ ಮಾಡಿದ್ದರು. ಗಾಂಜಾಗ್ಯಾಂಗ್‌ನ ಕೈವಾಡ ಇದೆ, ಪೊಲೀಸರು ನಿಷ್ಕ್ರಿಯಗೊಂಡಿದ್ದಾರೆ ಎಂದು ಹೇಳುತ್ತಾ ಮುಸ್ಲಿಮರ ತಲೆ ಕಟ್ಟಲು ಯತ್ನಿಸಿದ್ದರು. ಈ ವಿಚಾರದಲ್ಲಿ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಶಾಸಕರಾದ ಡಾ ಭರತ್ ಶೆಟ್ಟಿ ಮತ್ತು ಹರೀಶ್‌ ಪೂಂಜ ಪರಂಗಿಪೇಟೆ ಮತ್ತು ಅಮ್ಮೆಮಾರ್ ಪ್ರದೇಶದಲ್ಲಿರುವ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು. ನಂತರ ವಿಧಾನಸಭೆಯ ಅಧಿವೇಶನದಲ್ಲೂ ಸರ್ಕಾರದ ಗಮನ ಸೆಳೆದಿದ್ದರು. ಬಾಲಕನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಾವ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಗೃಹ ಸಚಿವ ಸದನಕ್ಕೆ ಮಾಹಿತಿ ನೀಡಿದ್ದರು.

g 5
ಮಂಗಳೂರು ಸಂಸದ ಬ್ರಿಜೇಶ್‌ ಚೌಟ, ಶಾಸಕರಾದ ಹರೀಶ್‌ ಪೂಂಜ, ವೇದವ್ಯಾಸ ಕಾಮತ್‌, ಡಾ ಭರತ್‌ ಶೆಟ್ಟಿ

ಅದಾಗಿ ಕೆಲ ದಿನಗಳಲ್ಲಿ ಬಾಲಕ ಪತ್ತೆಯಾಗಿದ್ದ. ಆತ ಮನೆಯಿಂದ ಐನೂರು ರೂಪಾಯಿ ಕದ್ದು ರೈಲು ಹಳಿಗಳ ಬಳಿ ಚಪ್ಪಲಿ ಬಿಟ್ಟು ಮಂಗಳೂರು ಬಸ್‌ ಹತ್ತಿ ನಂತರ ಶಿವಮೊಗ್ಗಕ್ಕೆ ಹೋಗಿ ಅಲ್ಲಿಂದ ರೈಲು ಹತ್ತು ಬೆಂಗಳೂರಿಗೆ ಹೋಗಿದ್ದ. ನಂದಿಬೆಟ್ಟದ ರೆಸಾರ್ಟ್‌ನಲ್ಲಿ ಎರಡು ದಿನ ಕೆಲಸ ಮಾಡಿ ವಾಪಸ್‌ ಉಡುಪಿಗೆ ಹೋಗಿ ಮಾಲ್‌ನಲ್ಲಿ ಬಟ್ಟೆ ಖರೀದಿಸಿ ಹಣ ಪಾವತಿಸದೇ ತಪ್ಪಿಸಿಕೊಳ್ಳಲು ಯತ್ನಿಸಿ ಸಿಕ್ಕಿಬಿದ್ದಿದ್ದ. ದಿಗಂತ್‌ ಪರೀಕ್ಷಾ ಭಯದಿಂದ ಮನೆಬಿಟ್ಟಿರಬಹುದು ಎಂಬ ಪೊಲೀಸರ ಊಹೆ ನಿಜವಾಗಿತ್ತು. ಕೋಮುದ್ವೇಷದ ಭಾಷಣ ಮಾಡಿದ ಶಾಸಕರು, ಹಿಂದುತ್ವದ ಸಂಘಟನೆಗಳು ದಿಗಂತ್‌ ಪತ್ತೆಯಾದ ನಂತರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಂತ ತಾವೇ ಊಹಿಸಿಕೊಂಡು ಮಾಡುವ ದ್ವೇಷ ರಾಜಕಾರಣ ಬಿಡುತ್ತಾರೆ, ಬುದ್ದಿ ಕಲಿಯುತ್ತಾರೆ ಎಂದು ತಿಳಿಯಬೇಕಿಲ್ಲ. ಇಂತಹ ಹಲವು ಎಡವಟ್ಟುಗಳನ್ನು ಮಾಡಿದ ಅವರು ಮುಂದೆಯೂ ಅದನ್ನೇ ಮುಂದುವರಿಸಲಿದ್ದಾರೆ. ಅದಕ್ಕೆ ಅವರಿಗೆ ಯಾವುದೇ ನಾಚಿಕೆ, ಅವಮಾನ ಅಂಜಿಕೆ ಎಂಬುದು ಇಲ್ಲವೇ ಇಲ್ಲ.

ವೈಯಕ್ತಿಕ ಕಾರಣಕ್ಕೆ ಆದ ಕೊಲೆ, ಆತ್ಮಹತ್ಯೆ, ನಾಪತ್ತೆ, ಸಣ್ಣ ಜಗಳ, ಕಾಂಗ್ರೆಸ್‌ ನಾಯಕರ ಹೇಳಿಕೆ, ಧರ್ಮದ ಬಗೆಗಿನ ಹೇಳಿಕೆ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಾರೆ. ಏನೇ ನಡೆದರೂ ಶಾಸಕರು, ಸಂಸದರು ತಮ್ಮ ಸ್ಥಾನದ ಘನತೆ, ಕರ್ತವ್ಯ ಮರೆತು ಅಲ್ಲಿಗೆ ಹೋಗಿ ದ್ವೇಷ ಕಾರಿ ಬರುತ್ತಾರೆ. ಹಿಂದೂ ಧರ್ಮದ ರಕ್ಷಣೆ, ಹಿಂದೂ ಹೆಣ್ಣುಮಕ್ಕಳ ರಕ್ಷಣೆಗಾಗಿ ಸಾಯಲೂ ಸಿದ್ಧ ಎಂದು ಹೇಳುವ ಈ ಗೋಸುಂಬೆಗಳು ಜಿಲ್ಲೆಯ ಪ್ರತಿಷ್ಟಿತ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳು ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಧರ್ಮಸ್ಥಳದ ಸೌಜನ್ಯ ರೇಪ್‌ ಅಂಡ್‌ ಮರ್ಡರ್‌ ಆದಾಗ ಇದ್ದದ್ದು ಬಿಜೆಪಿ ಸರ್ಕಾರ. ಅಲ್ಲಿನ ಸಂಸದರು ಸದಾನಂದ ಗೌಡರು ನಂತರ ಮುಖ್ಯಮಂತ್ರಿಯಾದರು, ಪಕ್ಕದ ಊರಿನ ಶೋಭಾ ಕರಂದ್ಲಾಜೆ ಆಗ ರಾಜ್ಯದಲ್ಲಿ ಸಚಿವೆಯಾಗಿದ್ರು. ನಂತರ ಸಂಸದೆಯಾಗಿ ಕೇಂದ್ರ ಸರ್ಕಾರದಲ್ಲಿ ಸಚಿವೆಯೂ ಆದರು. ಅವರಾರೂ ಸೌಜನ್ಯ ಅತ್ಯಾಚಾರಿಗಳ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿಲ್ಲ. 2022ರಲ್ಲಿ ಸಂತೋಷ್‌ ರಾವ್‌ ನಿರಪರಾಧಿ ಎಂಬ ಸಿಬಿಐ ತೀರ್ಪು ಬಂದ ನಂತರ ಒಂದು ವರ್ಷದವರೆಗೆ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ನೂರಾರು ಪ್ರತಿಭಟನೆಗಳಾದವು. ಬಿಜೆಪಿಯ ಏಳು ಶಾಸಕರು ಇಬ್ಬರು ಸಂಸದರು ಒಂದೇ ಒಂದು ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿಲ್ಲ. ಕಣ್ಣೊರೆಸುವ ತಂತ್ರವಾಗಿ ಬಿಜೆಪಿಯಿಂದ ಒಂದು ಪ್ರತಿಭಟನಾ ಸಭೆ ನಡೆಸಿ ಭಾಷಣ ಬಿಗಿದು ಮನೆಗೆ ಹೋದ್ರಷ್ಟೇ. ಮರು ತನಿಖೆ ನಡೆಸಬೇಕು ಎಂದು ಸಿ ಎಂ ಸಿದ್ದರಾಮಯ್ಯ ಅವರಿಗೆ ಒಂದು ಪತ್ರ ಕೊಟ್ಟು ಸುಮ್ಮನಾದವರು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ. ಆದರೆ, ರಾಜಕೀಯ ಲಾಭಕ್ಕೆ ಒಂದು ಆತ್ಮಹತ್ಯೆ, ಕೊಲೆಯನ್ನೂ ಬಳಸಿಕೊಳ್ಳುವ ಗೋಮುಖ ವ್ಯಾಘ್ರಗಳಿಗೆ ತಮ್ಮದೇ ಕ್ಷೇತ್ರದಲ್ಲಿ ಹಿಂದೂ ಹೆಣ್ಣುಮಕ್ಕಳ ಮೇಲೆ ಹಿಂದೂಗಳಿಂದಲೇ ಅತ್ಯಾಚಾರ ನಡೆದರೆ ಪ್ರತಿಭಟಿಸುವ ಮನಸ್ಸಿಲ್ಲ. ಆರೋಪಿ ಮುಸ್ಲಿಂ ಆಗಿದ್ದರೆ ಮಾತ್ರ ಓಡೋಡಿ ಬಂದು ಉಗ್ರ ಭಾಷಣ ಮಾಡುತ್ತಾರೆ. ಇದು ಇವರ ಚಾಳಿ.

ತಿಮರೋಡಿ 1024x660 1
ಸೌಜನ್ಯ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ ನಡೆದ ಪ್ರತಿಭಟನೆ

ತಮ್ಮದೇ ಸರ್ಕಾರ ಇದ್ದಾಗಲೂ ಕರಾವಳಿಯನ್ನು ಕೋಮು ದಳ್ಳುರಿಗೆ ನೂಕಿದರು

2022ರ ಜುಲೈನಲ್ಲಿ ಸುಳ್ಯದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆಯಾದಾಗ ಇದ್ದದ್ದು ಅವರದೇ ಸರ್ಕಾರ. ಆದರೆ, ಕಾರ್ಯಕರ್ತರ ಜೊತೆ ಬಿಜೆಪಿ ನಾಯಕರೂ ಸೇರಿ ಪ್ರತಿಭಟನಾ ಸಭೆಗಳನ್ನು ಮಾಡಿದ್ದರು. ಪ್ರವೀಣ್‌ ಕೊಲೆಗೆ ಸಂಬಂಧವೇ ಇಲ್ಲದ ಸುರತ್ಕಲ್‌ನ ಫಾಜಿಲ್‌ನನ್ನು ಕೊಚ್ಚಿ ತಮ್ಮ ಆಕ್ರೋಶ ತಣಿಸಿಕೊಂಡಿದ್ರು ಹಿಂದುತ್ವದ ಹುಡುಗರು. ಪ್ರವೀಣ್‌ ನೆಟ್ಟಾರು ಮನೆಗೆ ಬಿಜೆಪಿ ಮುಖಂಡರ ದಂಡೇ ಪರೇಡ್‌ ನಡೆಸಿತ್ತು. ಪಕ್ಷದಿಂದ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ರು. ವೈಯಕ್ತಿಕವಾಗಿ ಸಚಿವರು, ಶಾಸಕರು, ಸ್ವಾಮೀಜಿಗಳು, ಸಂಸದರು ಪರಿಹಾರದ ಚೆಕ್‌ಗಳನ್ನು ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುದ್ದು ಪ್ರವೀಣ್‌ ನೆಟ್ಟಾರು ಮನೆಗೆ ಹೋಗಿ ಮುಖ್ಯಮಂತ್ರಿ ನಿಧಿಯಿಂದ 25ಲಕ್ಷ ರೂಪಾಯಿ ಪರಿಹಾರ ನೀಡಿ ಮಂಗಳೂರಿಗೆ ಹೋಗುವಾಗ ಸುರತ್ಕಲ್‌ನಲ್ಲಿ ಕೊಲೆಯಾದ ಫಾಜಿಲ್‌ ಮನೆಗೆ ಹೋಗಿ ಕನಿಷ್ಠ ಸಾಂತ್ವನ ಹೇಳದೇ ಅಮಾನವೀಯವಾಗಿ ನಡೆದುಕೊಂಡಿದ್ದರು. ಅಷ್ಟೇ ಏಕೆ ಪ್ರವೀಣ್‌ ಕೊಲೆಗೆ ಕಾರಣ ಎಂದು ಹೇಳಲಾಗುವ ಬೆಳ್ಳಾರೆಯ ಮಸೂದ್‌ನ ಕೊಲೆ, ಅದು ಬಿಜೆಪಿ ಪುಂಡರಿಂದ ಕ್ಷುಲ್ಲಕ ಕಾರಣಕ್ಕೆ ನಡೆದಿತ್ತು. ಬಡ ಕೂಲಿ ಕಾರ್ಮಿಕ ಮಸೂದ್‌ ಅಂಗಡಿಯಲ್ಲಿ ಜ್ಯೂಸ್‌ ಕುಡಿಯುವಾಗ ಪಕ್ಕದಲ್ಲಿ ನಿಂತಿದ್ದ ಹಿಂದೂ ಯುವಕನ ಮೈಗೆ ಕೈ ತಾಗಿತು ಎಂಬ ಕಾರಣಕ್ಕೆ ಜಗಳ ನಡೆದಿತ್ತು. ಮತ್ತೆ ರಾತ್ರಿ ಆತನನ್ನು ಸ್ನೇಹಿತನ ಮೂಲಕ ಮಾತುಕತೆಗೆ ಎಂದು ಕರೆದು ತಲೆಗೆ ಬಾಟಲಿಯಲ್ಲಿ ಹೊಡೆದಿದ್ದರು. ನಂತರ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಅದಾಗಿ ಒಂದು ವಾರದೊಳಗೆ ಪ್ರವೀಣ್‌ನ ಕೊಲೆಯಾಗಿದೆ. ಹೀಗೆ ಮೂರು ಕೊಲೆಗಳು ದಕ್ಷಿಣ ಕನ್ನಡದಲ್ಲಿ ಒಂದು ವಾರದೊಳಗೆ ನಡೆದು ಹೋಗಿದ್ದವು. ಆಗ ಕಾನೂನು ಸುವ್ಯವಸ್ಥೆ ಹೇಗಿತ್ತು ಎಂಬುದಕ್ಕೆ ಹಿಡಿದ ಕನ್ನಡಿ ಈ ಘಟನೆ.

2022ರ ಫೆಬ್ರವರಿ 20ರಂದು ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತ ಹರ್ಷನ ಕೊಲೆಯಾಗಿತ್ತು. ವೈಯಕ್ತಿಕ ಕಾರಣಕ್ಕಾಗಿ ಆದ ಕೊಲೆಯಿದು. ಆದರೆ, ಕೊಂದವರು ಮುಸ್ಲಿಂ ಯುವಕರು ಎಂಬುದು ಬಿಜೆಪಿಗೆ ಸಾಕಿತ್ತು. ತಮ್ಮದೇ ಸರ್ಕಾರ ಇದ್ದರೂ ಸ್ವತಃ ಸಚಿವ ಕೆ ಎಸ್‌ ಈಶ್ವರಪ್ಪ ಪೊಲೀಸರ 144ಸೆಕ್ಷನ್‌ಗೆ ಮೂರು ಕಾಸಿನ ಬೆಲೆ ಕೊಡದೇ ಶವಯಾತ್ರೆ ಮಾಡಿ ಮುಸ್ಲಿಂ ಅಂಗಡಿ, ಮನೆಗಳಿಗೆ ಕಲ್ಲು ತೂರಲು ಪ್ರೇರಣೆ ನೀಡಿದ್ದರು. ಬಿಜೆಪಿ ಆಡಳಿತವಿದ್ದ ಆ ನಾಲ್ಕು ವರ್ಷಗಳು ಪೂರ್ತಿ ಕೋಮುದ್ವೇಷ ಕಾರುವುದರಲ್ಲೇ ಬಿಜೆಪಿ ಕಳೆದಿತ್ತು. ಉಡುಪಿ ಕಾಲೇಜಿನಲ್ಲಿ ಉಂಟಾದ ಹಿಜಾಬ್‌ ಗಲಾಟೆ ಇಡೀ ರಾಜ್ಯಕ್ಕೆ ಹಬ್ಬಿ ತಿಂಗಳ ಕಾಲ ಶಾಲೆ, ಕಾಲೇಜುಗಳು ಬಂದ್‌ ಆಗಿದ್ದವು. ಈ ಅನಗತ್ಯ ವಿವಾದ ದೇಶದಾಚೆಗೂ ಗಮನ ಸೆಳೆದಿತ್ತು. ಉಡುಪಿಯ ಹಿಜಾಬ್‌ ವಿವಾದದಲ್ಲಿ ಒಬ್ಬ ಶಾಸಕನ ಯುಗಾಂತ್ಯವಾದರೆ ಮತ್ತೊಬ್ಬ ಶಾಸಕ ಉದಯಿಸಿದ. ಆತನೇ ಯಶ್ಪಾಲ್‌ ಸುವರ್ಣ. ಕಾಲೇಜಿನ ಒಳಗೆ ಹೋಗಿ ಹಿಜಾಬ್‌ ವಿಚಾರದಲ್ಲಿ ಗಲಭೆ ಸೃಷ್ಟಿಸಿದ್ದ ಈತ ಚುನಾವಣೆಯಲ್ಲಿ ಟಿಕೆಟ್‌ ಗಿಟ್ಟಿಸಿಕೊಂಡಿದ್ದ. ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋತರೂ ಉಡುಪಿಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಹೀಗೆ ಗೆದ್ದ ಯಶ್ಪಾಲ್‌ ಅದೇ ಪುಂಡಾಟವನ್ನು ಮುಂದುವರಿಸಲು ಯತ್ನಿಸಿದ್ದ.

ಉಡುಪಿಯ ಕಾಲೇಜೊಂದರ ಹಾಸ್ಟೆಲ್‌ನ ಶೌಚಾಲಯದ ಬಳಿ ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳತಿಯ ವಿಡಿಯೋ ಮಾಡಿದ ಪ್ರಕರಣ ವಿಡಿಯೋ ಡಿಲಿಟ್‌ ಮಾಡುವುದರೊಂದಿಗೆ ಪ್ರಾಂಶುಪಾಲರ ಕಚೇರಿಯಲ್ಲಿಯೇ ಮುಕ್ತಾಯವಾಗಿತ್ತು. ಆದರೆ ಈ ವಿಷಯ ಗೊತ್ತಾದ ಕೂಡಲೇ ಸಂಘಪರಿವಾರ, ಹಿಂದುತ್ವ ಕಾರ್ಯಕರ್ತರು ವಿಡಿಯೋ ಮಾಡಿದ ಯುವತಿ ಮುಸ್ಲಿಂ ಎಂಬ ಕಾರಣಕ್ಕೆ ವಿವಾದ ಮಾಡಿಬಿಟ್ಟರು. ಆಕೆ ಹಿಂದೂ ಯುವತಿಯರ ವಿಡಿಯೋ ರೆಕಾರ್ಡ್‌ ಮಾಡಿ ಮುಸ್ಲಿಂ ವಾಟ್ಸಪ್‌ ಗ್ರೂಪ್‌ಗಳಿಗೆ ಶೇರ್‌ ಮಾಡಿದ್ದಾಳೆ ಎಂದು ಸುಳ್ಳು ಹಬ್ಬಿಸಿದ್ದರು. ಕಿಡಿಗೇಡಿಗಳು ಯಾವುದೋ ವಿಡಿಯೋ ತಿರುಚಿ ವೈರಲ್‌ ಮಾಡಿದ್ದರು. ಮುಸ್ಲಿಂ ವಿದ್ಯಾರ್ಥಿನಿಯ ಮೇಲೆ ಎಫ್‌ಐಆರ್‌ ಮಾಡಬೇಕು ಬಂಧಿಸಬೇಕು ಎಂದು ದಕ್ಷಿಣ ಕನ್ನಡ ಮತ್ತು ಉಡುಪಿಯ ಹಲವು ಕಡೆ ವಾರದವರೆಗೆ ಪ್ರತಿಭಟನೆಗಳನ್ನು ನಡೆಸಿದ್ದರು. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್‌ ಕಾಲೇಜಿಗೆ ಬಂದು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಜೊತೆಗೆ ಸಮಾಲೋಚನೆ ನಡೆಸಿ ವಿಡಿಯೋ ವೈರಲ್‌ ಆಗಿಲ್ಲ, ಹಂಚಿಕೆಯೂ ಆಗಿಲ್ಲ. ವಿಡಿಯೋ ರೆಕಾರ್ಡ್‌ ಮಾಡಿದ ತಕ್ಷಣ ಡಿಲಿಟ್‌ ಮಾಡಲಾಗಿದೆ ಎಂದು ಆ ವಿದ್ಯಾರ್ಥಿನಿಯೇ ಹೇಳಿಕೆ ಕೊಟ್ಟಿರುವುದಾಗಿ ಬಹಿರಂಗ ಹೇಳಿಕೆ ಕೊಟ್ಟು. ಇದು ವಿವಾದ ಮಾಡುವಂತಹ ಪ್ರಕರಣವಲ್ಲ ಎಂದು ಹೇಳಿದ್ದರು. ಆದರೂ ಸಮಾಧಾನವಾಗದ ಸಂಘಿಗಳು ಆಕೆಯ ವಿರುದ್ಧವೇ ಆರೋಪಗಳನ್ನು ಮಾಡಿದ್ದರು.

100289517

ನಂಜನಗೂಡಿನಲ್ಲಿ ಹನುಮ ಜಯಂತಿ ಮೆರವಣಿಗೆಯಲ್ಲಿ ಯುವಕನೊಬ್ಬನ ಕೊಲೆ ನಡೆದಿತ್ತು, ಇದು ವೈಯಕ್ತಿಕ ಜಗಳದಿಂದ ನಡೆದಿತ್ತು. ಆರೋಪಿ ಆತನ ಸ್ನೇಹಿತನೇ ಎಂದು ಮೃತನ ಪತ್ನಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ನಂತರವೂ ಹಿಂದೂ ಕಾರ್ಯಕರ್ತನ ಕೊಲೆಗೆ ಕಾಂಗ್ರೆಸ್‌ ಸರ್ಕಾರ ಕಾರಣ ಎಂದು ಸೂಲಿಬೆಲೆ ತರಹದ ಕೋಮುವಾದಿಗಳು ಗಲಭೆಗೆ ಯತ್ನಿಸಿದ್ದರು. ಅದು ಫಲ ನೀಡಿರಲಿಲ್ಲ. ಮಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ರಾಮಮಂದಿರವನ್ನು ಕ್ರಿಶ್ಚಿಯನ್‌ ಶಿಕ್ಷಕಿಯೊಬ್ಬರು ಟೀಕಿಸಿದ್ರು ಎಂದು ಶಾಲಾ ಆವರಣ ಪ್ರವೇಶಿಸಿ ಗೂಂಡಾಗಿರಿ ಮಾಡಿದವರು ಶಾಸಕರಾದ ವೇದವ್ಯಾಸ ಕಾಮತ್‌ ಮತ್ತು ಡಾ ಭರತ್‌ ಶೆಟ್ಟಿ. ಹೀಗೆ ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ವಿಷ ಕಾರಲು ಏನಾದರೊಂದು ಚಿಕ್ಕ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ.

ಮತದಾರರಿಂದಲೇ ಟ್ರೋಲ್‌ ಆದ ಬಿಜೆಪಿ ಶಾಸಕರು

ದಕ್ಷಿಣ ಕನ್ನಡ ಜಿಲ್ಲೆಯ ವಿಚಾರಕ್ಕೆ ಬರುವುದಿದ್ದರೆ, ಅಲ್ಲಿನ ಸ್ಥಳೀಯ ಶಾಸಕರಾದ ಡಾ ಭರತ್‌ ಶೆಟ್ಟಿ, ಹರೀಶ್‌ ಪೂಂಜ, ವೇದವ್ಯಾಸ ಕಾಮತ್‌ ಅವರೇ ಜಿಲ್ಲೆಗೆ ಕಂಟಕ. ಸದಾ ಕಾಂಗ್ರೆಸ್‌ ಸರ್ಕಾರ, ಸಿದ್ದರಾಮಯ್ಯರನ್ನು ನಿಂದಿಸುತ್ತಾ ಹಿಂದೂ -ಮುಸ್ಲಿಂ ಎಂದು ಜನರನ್ನು ಎತ್ತಿಕಟ್ಟಿ ಸುದ್ದಿಯಲ್ಲಿರುವ ಶಾಸಕರಿವರು. ಇಂತಹ ಶಾಸಕರನ್ನು ಅಲ್ಲಿನ ಜನ ಸತತವಾಗಿ ಗೆಲ್ಲಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಉಡುಪಿಯ ಶಾಸಕರು ಬಜೆಟ್‌ ವಿಚಾರದಲ್ಲಿ ಟ್ರೋಲ್‌ಗೆ ಒಳಗಾಗಿದ್ದರು. ವಿಧಾನಸಭೆಯ ಅಧಿವೇಶನದಲ್ಲಿ ಜಿಲ್ಲೆಯಲ್ಲಿ ಕೋಳಿ ಅಂಕಕ್ಕೆ ಅವಕಾಶ ನೀಡಬೇಕು ಎಂಬ ಬೇಡಿಕೆಯಲ್ಲಿ ಕಾರ್ಕಳದ ಶಾಸಕ ಸುನಿಲ್‌ ಇಟ್ಟಿದ್ದರು. ಅಲ್ಲದೇ ಕಟ್ಟದ ಕೋಳಿ ಮಾಂಸ ರುಚಿಯಾಗಿರುತ್ತದೆ ಎಂದು ಹಾಸ್ಯ ಮಾಡಿದ್ದರು. 2025-26ರ ಬಜೆಟ್‌ ಮಂಡಿಸಿದ ಸಿದ್ದರಾಮಯ್ಯ ಅವರು ದಕ್ಷಿಣ ಕನ್ನಡದ ದಶಕಗಳ ಬೇಡಿಕೆಯಾಗಿದ್ದ ಮೆಡಿಕಲ್‌ ಕಾಲೇಜನ್ನು ಪುತ್ತೂರಿಗೆ ಘೋಷಣೆ ಮಾಡಿದ್ದಾರೆ. “ಪುತ್ತೂರಿನ ಶಾಸಕ ಮೊದಲ ಬಾರಿಗೆ ಆಯ್ಕೆಯಾದ ಅಶೋಕ್‌ ರೈ ತಮ್ಮ ಊರಿಗೆ ಮೆಡಿಕಲ್‌ ಕಾಲೇಜು ತಂದ್ರು, ಉಡುಪಿಯ ಶಾಸಕರು ಕೋಳಿ ಅಂಕಕ್ಕೆ ಪರ್ಮಿಷನ್‌ ಪಡೆದುಕೊಂಡ್ರು” ಎಂದು ಸ್ವತಃ ಬಿಜೆಪಿ ಕಾರ್ಯಕರ್ತರೇ ಗೇಲಿ ಮಾಡಿದ್ದರು. ನಾಲ್ಕು ವರ್ಷ ತಮ್ಮದೇ ಸರ್ಕಾರ ಇರುವಾಗ ಏಳು ಶಾಸಕರ ಇದ್ದರೂ ದಕ್ಷಿಣ ಕನ್ನಡಕ್ಕೊಂದು ಮೆಡಿಕಲ್‌ ಕಾಲೇಜು ತರುವುದು ಸಾಧ್ಯವಾಗಿರಲಿಲ್ಲ. ಇಂತಹ ಶಾಸಕರು ಶವದ ಮೇಲೆ ರಾಜಕಾರಣ ಮಾಡುವುದರಲ್ಲಿ ನಿಸ್ಸೀಮರು.

ಆದರೆ ಇದೇ ಅವರನ್ನು ಆಗಾಗ ಪೇಚಿಗೆ ಸಿಲುಕಿಸುತ್ತಿದೆ. ಹಿಂದೂ ಯುವಕನ ಕೊಲೆ ಮುಸ್ಲಿಂ ಮಾಡಿದರೆ ಮಾತ್ರ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತ ಪ್ರತಿಭಟನೆ ಮಾಡಿ ಪ್ರಚೋದಿಸುವ ಇವರು ಹಿಂದೂ ಯುವಕರನ್ನು ಹಿಂದೂಗಳೇ ಹತ್ಯೆ ಮಾಡಿದರೆ, ಹಿಂದೂ ಯುವತಿಯ ಮೇಲೆ ಹಿಂದೂ ಯುವಕರೇ ಅತ್ಯಾಚಾರ ಮಾಡಿದರೆ ಯಾವುದೇ ಪ್ರತಿಭಟನೆ ಮಾಡಲ್ಲ. ಆಗ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಅನ್ನಿಸಲ್ಲ. ಮುಸ್ಲಿಂ ಆರೋಪಿಗಳಿದ್ದರೆ ಕಾಂಗ್ರೆಸ್‌ ನ ಬೆಂಬಲದಿಂದ, ಸರ್ಕಾರದ ತುಷ್ಟೀಕರಣದಿಂದ ಅವರಿಗೆ ಧೈರ್ಯ ಬಂದಿದೆ ಎಂಬ ಆರೋಪ ಮಾಡುವ ಬಿಜೆಪಿ ಶಾಸಕರು ಸಂಘಪರಿವಾರದವರು ಈಗ ಮಂಗಳೂರಿನಲ್ಲಿ ಪರ ರಾಜ್ಯದ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಹಿಂದೂ ಆರೋಪಿಗಳ ವಿರುದ್ಧ ಚಕಾರ ಎತ್ತುತ್ತಿಲ್ಲ.

ಸೂಲಿಬೆಲೆ 6

ಕರಾವಳಿಯ ಜನ ಚಕ್ರವರ್ತಿ ಸೂಲಿಬೆಲೆ, ಪುನೀತ್‌ ಕೆರೆಹಳ್ಳಿ ಮುಂತಾದ ಮಾತಿಗೆ ಲಂಗುಲಗಾಮು ಇಲ್ಲದ ಕೋಮುವಾದಿಗಳನ್ನು ಕರೆಸಿ ಚಿಕ್ಕ ಮಕ್ಕಳ ಮುಂದೆ ಭಾಷಣ ಮಾಡಿಸುತ್ತಿರುವುದು ಮಾತ್ರ ದುರಂತವೇ ಸರಿ. ಇತ್ತೀಚೆಗೆ ಮಂಗಳೂರಿನಲ್ಲಿ “ಕೊರಗಜ್ಜನ ಕಡೆ ನಮ್ಮ ನಡೆ” ಎಂಬ ವಿಎಚ್‌ಪಿ ಕಾರ್ಯಕ್ರಮದಲ್ಲಿ ಕೋಮುದ್ವೇಷದ ಭಾಷಣ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ “ಹಿಂದೂಗಳು ಹೆಣ್ಣು ಸಿಗಲಿಲ್ಲ ಎಂದು ಚಿಂತೆ ಮಾಡಬೇಡಿ, ಅನ್ಯ ಸಮಾಜದ ಯುವತಿಯರ ಕಡೆ ನೋಡಿ” ಎಂದು ಹೇಳಿ ಟೀಕೆಗೆ ಒಳಗಾಗಿದ್ದ. “ಇನ್ನು ಮುಂದೆ ಕೊರಗಜ್ಜನ ಸನ್ನಿಧಿಯಲ್ಲಿ ದ್ವೇಷಭಾಷಣಕ್ಕೆ ಅವಕಾಶ ಇಲ್ಲ” ಎಂಬ ಆದೇಶವನ್ನು ಕೊರಗಜ್ಜ ಪಾತ್ರಿ ನೀಡಿರುವುದಾಗಿ ವರದಿಯಾಗಿದೆ. ಕರಾವಳಿಯ ದೈವಗಳೇ ಇಂತಹ ಕೂಗುಮಾರಿಗಳಿಗೆ ಬುದ್ದಿ ಕಲಿಸಿ, ಸೌಹಾರ್ದದ ನೆಲವನ್ನು ರಕ್ತಮಯ ಮಾಡುವುದರಿಂದ ತಡೆಯಬೇಕಿದೆ.

ಇದನ್ನೂ ಓದಿ ಕಲಬುರಗಿ | ಬಿಜೆಪಿ ನಾಯಕರ ವಿರುದ್ಧ ಸಾರ್ವಜನಿಕರಿಂದ ಜನಾಕ್ರೋಶ ವ್ಯಕ್ತ, ವಾಪಸ್ಸಾದ ವಿಜಯೇಂದ್ರ

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X