ಸ್ಮರಣೆ | ಅರಸು ಅವರ ʼಸಾಂಸ್ಕೃತಿಕ ಒಗ್ಗೂಡುವಿಕೆʼ ಕಲ್ಪನೆಯ ಕೊಡುಗೆ ಅನನ್ಯ

Date:

Advertisements
ದೇವರಾಜ ಅರಸರ ಅಭಿವೃದ್ಧಿ ರಾಜಕಾರಣದ ಪರಿಣಾಮ ತಳಸ್ತರದ ಜನರನ್ನು ಆರ್ಥಿಕವಾಗಿ ಬಲಪಡಿಸುವುದಕ್ಕೆ ಸೀಮಿತವಾಗಿರಲಿಲ್ಲ. ಬಲಾಢ್ಯ ಸಮುದಾಯಗಳಿಗೆ ಸೀಮಿತವಾಗಿದ್ದ ಕರ್ನಾಟಕದ ರಾಜಕೀಯ ಇನ್ನೂ ಆಳಕ್ಕೆ ಇಳಿಯುವಂತಾಯಿತು. ಸಣ್ಣಪುಟ್ಟ ಸಮುದಾಯಗಳು ಕೂಡ ರಾಜಕೀಯವಾಗಿ ಸಕ್ರಿಯವಾಗುವುದು ಸಾಧ್ಯವಾಯಿತು. ಇವೆಲ್ಲ ಅರಸರ ಸಾಂಸ್ಕೃತಿಕ ಒಗ್ಗೂಡುವಿಕೆ ಕಲ್ಪನೆಯ ಕೊಡುಗೆಗಳು

ಎಲ್ಲರಿಗೂ ಒಂದೇ ಬಣ್ಣದ ಉಡುಗೆ ತೊಡುಗೆ. ಎಲ್ಲರೂ ಕಲೆತು ಉಣ್ಣುವುದು, ತಿನ್ನುವುದು. ಎಲ್ಲರೂ ಒಂದೇ ವಿಚಾರವನ್ನು ಹಂಚಿಕೊಳ್ಳುವುದು. ಎಲ್ಲರೂ ಒಂದೇ ರೀತಿ ಆಲೋಚಿಸುವುದು. ಇವೆಲ್ಲ ಹಿಂದೂ ರಾಷ್ಟ್ರ ಕಟ್ಟುವವರು ತಮ್ಮ ವಿವಿಧ ಸಂಘಟನೆಗಳಲ್ಲಿ ಜಾತಿ, ಪ್ರದೇಶ, ಭಾಷೆ, ವರ್ಗ ತಾರತಮ್ಯಗಳನ್ನು ಮೀರುವ ಕ್ರಮಗಳು. ಆದರೆ ಇಲ್ಲಿ ಎಲ್ಲರೂ ಗುಣಮಟ್ಟದ ಶಿಕ್ಷಣ, ಆರೋಗ್ಯ ಪಡೆಯುವುದು, ಎಲ್ಲರೂ ಅಲ್ಪಸ್ವಲ್ಪ ಭೂಮಿ ಹೊಂದುವುದು, ಎಲ್ಲರೂ ಅಲ್ಪಸ್ವಲ್ಪ ಬಂಡವಾಳ ಹೊಂದುವುದು, ಎಲ್ಲರೂ ಉತ್ತಮ ಉದ್ಯೋಗ ಪಡೆಯುವುದು, ಎಲ್ಲರೂ ವಸತಿ ಹೊಂದುವುದು ಇತ್ಯಾದಿಗಳೆಲ್ಲ ಆದ್ಯತೆಗಳಲ್ಲ. ಇದರಿಂದಾಗಿ ಶಾಖೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಹುಟ್ಟಿದ ಒಂದೇ ಎನ್ನುವ ಭಾವನೆ ಮನೆಗೆ ಹೋದಾಗ ಜೀವಂತ ಇರುತ್ತದೆನ್ನಲಾಗುವುದಿಲ್ಲ. ಏಕೆಂದರೆ ಕಾರ್ಯಕ್ರಮಗಳಲ್ಲಿ ಒಂದಾದವರು ದಿನನಿತ್ಯದ ಬದುಕಲ್ಲಿ ಒಂದಾಗಿಲ್ಲ. ಅವರಲ್ಲಿ ಮೂರು ತಲೆಮಾರು ಕೂತು ತಿಂದರೂ ಕರಗದಷ್ಟು ಆಸ್ತಿ ಹೊಂದಿದವರು ಇದ್ದಂತೆ ಮೂರು ಹೊತ್ತಿನ ಊಟಕ್ಕೆ ಪರದಾಡುವವರೂ ಇದ್ದಾರೆ. ಹಿಂದೂಗಳು ನಾವೆಲ್ಲ ಒಂದೇ ಎನ್ನುವವರಲ್ಲಿ ಜಾತಿ ಮೀರಿ ಮದುವೆಯಾದರೆ ಜೀವ ತೆಗೆಯಲು ಹೇಸದವರೂ ಇದ್ದಾರೆ. ಇವೇ ಕಾರಣಗಳಿಂದ ನಾವೆಲ್ಲ ಒಂದೇ ಎನ್ನುವ ಭಾವನೆಯನ್ನು ಸತತ ಜೀವಂತ ಇರಿಸಲು ದೇಶಪ್ರೇಮ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಕಾಮನ್ ಶತ್ರುಗಳು ಬೇಕಾಗುತ್ತದೆ.

ಇಂತಹ ಸಾಂಸ್ಕೃತಿಕ ಒಗ್ಗೂಡುವಿಕೆಯಲ್ಲಿ ರಾಜಕೀಯ ಹಾಗೂ ಆರ್ಥಿಕ ಸಂಪನ್ಮೂಲಗಳು ಕೆಲವರಲ್ಲೇ ಕ್ರೋಡೀಕರಣಗೊಳ್ಳುವ ಸಂದರ್ಭದಲ್ಲಿ ನಾವೆಲ್ಲ ಒಂದೇ ಎನ್ನುವ ಹುಸಿ ಭಾವನೆಯನ್ನು ಜೀವಂತ ಇರಿಸಲು ಸಾಂಸ್ಕೃತಿಕ ಸಂಪನ್ಮೂಲಗಳು ಬಳಕೆಯಾಗುತ್ತವೆ. ಹಿಂದೂ ರಾಷ್ಟ್ರೀಯವಾದಿಗಳು ನಾವೆಲ್ಲ ಒಂದೇ ಎಂದು ಪ್ರತಿಪಾದಿಸಲು ಧರ್ಮವನ್ನು ಬಳಸಿದರೆ ಕರ್ನಾಟಕದ ರಾಷ್ಟ್ರೀಯತೆಯನ್ನು ಕನ್ನಡ ಭಾಷೆ ಮೂಲಕ ಪ್ರತಿಪಾದಿಸಲಾಗುತ್ತಿದೆ. ಈ ಬಗೆಯ ರಾಷ್ಟ್ರೀಯತೆಯ ಚರ್ಚೆಯಲ್ಲಿ ಒಂದೇ ಭಾಷೆ ಮಾತಾಡುವ ಅಥವಾ ಒಂದೇ ಧರ್ಮಕ್ಕೆ ಸೇರಿದ ಜನರ ನಡುವಿನ ಭೂಒಡೆತನ, ಸಂಪನ್ಮೂಲ, ಉದ್ಯೋಗ, ಶಿಕ್ಷಣ, ವಸತಿ, ಆರೋಗ್ಯಗಳಲ್ಲಿನ ಅಸಮಾನತೆಗಳ ಚರ್ಚೆ ಮುಂಚೂಣಿಗೆ ಬರುವುದೇ ಇಲ್ಲ. ಇದು ಸಾಂಸ್ಕತಿಕವಾಗಿ ಒಂದಾಗುವ ಪ್ರಕ್ರಿಯೆಯಲ್ಲ; ಬಲಾಢ್ಯರ ಸಂಸ್ಕೃತಿಯನ್ನು ತಳಸ್ತರದ ಜನರ ಮೇಲೆ ಹೇರುವ ಪ್ರಕ್ರಿಯೆ. ಇದಕ್ಕಾಗಿ ತಳಸ್ತರದ ಜನರ ಉಡುಗೆತೊಡುಗೆ, ದೇವರು, ಊಟ, ಮದುವೆ, ಪ್ರೀತಿ, ಪ್ರೇಮಗಳನ್ನು ನಿಕೃಷ್ಟಗೊಳಿಸುವ ಸಾಂಸ್ಕೃತಿಕ ರಾಜಕೀಯವನ್ನು ಬಳಸಲಾಗುವುದು. ಇದು ತಳಸ್ತರದ ಜನರು ಬ್ರಾಹ್ಮಣ್ಯದ ಕಣ್ಣಲ್ಲಿ ಲೋಕ ನೋಡಲು ತರಬೇತು ನೀಡುತ್ತದೆ. ಬ್ರಾಹ್ಮಣ್ಯದ ಕಣ್ಣಲ್ಲಿ ಲೋಕ ನೋಡುವುದು ಸಹಜವಾದವರಿಗೆ ಲಿಂಗ, ಜಾತಿ, ತಾರತಮ್ಯಗಳು ಕೂಡ ಸಹಜವಾಗುತ್ತವೆ. ಆ ಮೂಲಕ ತಳಸ್ತರದ ಜನರನ್ನು ಸತತ ಸಾಂಸ್ಕೃತಿಕ ದಾಸ್ಯದಲ್ಲಿರಿಸುವ ಪ್ರಕ್ರಿಯೆ ಇದು.

ಅರಸು ೨

ವಿವಿಧತೆಯಲ್ಲಿ ಏಕತೆ
ಇಂತಹ ಸಾಂಸ್ಕೃತಿಕ ಒಗ್ಗೂಡುವಿಕೆಗೆ ಭಿನ್ನವಾದ ಸಾಂಸ್ಕೃತಿಕ ಒಗ್ಗೂಡುವಿಕೆಯ ಕಲ್ಪನೆ ಇದೆ. ಇಲ್ಲಿ ಸಾಂಸ್ಕೃತಿಕ ಒಗ್ಗೂಡುವಿಕೆಗಾಗಿ ತಳಸ್ತರದ ಜನರು ತಮ್ಮ ಸಂಸ್ಕೃತಿಯನ್ನು ಬಲಿಕೊಡಬೇಕಾಗಿಲ್ಲ. ತಳಸಮುದಾಯಗಳು ತಮ್ಮ ಸಾಂಸ್ಕೃತಿಕ ಬದುಕನ್ನು ಜೀವಂತ ಇರಿಸಿಕೊಂಡು ಮುಖ್ಯವಾಹಿನಿಯಲ್ಲಿ ಬೆರೆಯುವುದಕ್ಕೆ ಈ ಕಲ್ಪನೆ ಹೆಚ್ಚು ಮಹತ್ವ ನೀಡುತ್ತದೆ. ಇಂತಹ ಸಾಂಸ್ಕೃತಿಕ ಒಗ್ಗೂಡುವಿಕೆ ಸಾಧ್ಯವಾಗಬೇಕಾದರೆ ಭಿನ್ನವಾಗಿದ್ದುಕೊಂಡು ಒಟ್ಟಾಗಿ ಬದುಕಲು ಅನುಕೂಲವಾಗುವ ಸಾಮಾಜಿಕ, ರಾಜಕೀಯ ಹಾಗು ಆರ್ಥಿಕ ಪರಿಸರವನ್ನು ಸೃಷ್ಟಿಸುವುದು ಅನಿವಾರ್ಯ.

Advertisements

ವಿವಿಧತೆಯಲ್ಲಿ ಏಕತೆ ಎನ್ನುವ ಮೂಲಕ ನಮ್ಮ ಸಂವಿಧಾನ ಕೂಡ ಈ ಬಗೆಯ ಸಾಂಸ್ಕೃತಿಕ ಒಂದಾಗುವಿಕೆಯನ್ನೇ ಮುಂದೂಡುತ್ತಿರುವುದು. ಅರಸರು ಈ ಬಗೆಯ ಸಾಂಸ್ಕೃತಿಕ ಒಗ್ಗೂಡುವಿಕೆಯನ್ನು ಜಾರಿಗೆ ತರಲು ಪ್ರಯತ್ನಿಸಿದ್ದಾರೆ. ಕರ್ನಾಟಕದ ಎಲ್ಲರಲ್ಲೂ ಅವರವರ ಸ್ವಂತಿಕೆಯನ್ನು ಜೀವಂತ ಇರಿಸಿಕೊಂಡು ಒಟ್ಟಾಗಿ ಬದುಕಲು ಪೂರಕವಾಗುವ ಪರಿಸರವನ್ನು ಸೃಷ್ಟಿಸುವ ಅಂಶಗಳತ್ತ ಅರಸರ ಅಭಿವೃದ್ಧಿ ಕಾರ್ಯಕ್ರಮಗಳು ಬೊಟ್ಟು ಮಾಡುತ್ತಿವೆ. ಭೂಮಿ ಅಥವಾ ಬಂಡವಾಳ ಅಥವಾ ಆಧುನಿಕ ಸ್ಕಿಲ್ ಈ ಮೂರರಲ್ಲಿ ಯಾವುದಾದರೂ ಒಂದನ್ನು ಎಲ್ಲರೂ ಹೊಂದುವುದು ಈ ಬಗೆಯ ಸಾಂಸ್ಕೃತಿಕ ಒಂದಾಗುವಿಕೆಗೆ ಅನಿವಾರ್ಯ. ಕೆಲವರಲ್ಲೇ ಕ್ರೋಡೀಕರಣಗೊಂಡಿದ್ದ ಮೇಲಿನ ಸಂಪನ್ಮೂಲಗಳನ್ನು ತಳಸ್ತರದ ಜನರಿಗೆ ಹಂಚಿ ಅವರನ್ನು ಆರ್ಥಿಕ ಹಾಗೂ ರಾಜಕೀಯವಾಗಿ ಬಲಪಡಿಸುವ ಕೆಲಸವನ್ನು ಅರಸರ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳು ಮಾಡಿವೆ. ಆ ಮೂಲಕ ಕರ್ನಾಟಕದ ಸಾಂಸ್ಕೃತಿಕ ಬದುಕಲ್ಲಿ ಪಾಲುಗೊಳ್ಳಲು ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸುವ ಉದ್ದೇಶವನ್ನು ಈ ಎಲ್ಲ ಕಾರ್ಯಕ್ರಮಗಳು ಹೊಂದಿದ್ದವು. ಅರಸರು ಜಾರಿಗೆ ತಂದ ಭೂಸುಧಾರಣೆಯನ್ನು ಸಾಂಸ್ಕೃತಿಕ ಒಂದಾಗುವಿಕೆಯ ದೃಷ್ಟಿಯಿಂದ ನೋಡುವ ಅನಿವಾರ್ಯತೆ ಇದೆ.

ತಳಸ್ತರದ ಜನರನ್ನು ಬಲಗೊಳಿಸುವ ಸಾಂಸ್ಕೃತಿಕ ಒಗ್ಗೂಡುವಿಕೆ ಆಚರಣೆಗೆ ಬರಬೇಕಾದರೆ ಅಭಿವೃದ್ಧಿಯೂ ತಳಸ್ತರದ ಜನರನ್ನು ಒಳಗೊಳ್ಳುವಂತಿರಬೇಕು. ಇಂದಿನ ಅಭಿವೃದ್ಧಿ ಧೋರಣೆಯೊಂದಿಗೆ ಅರಸರ ಅಭಿವೃದ್ಧಿ ಧೋರಣೆಯನ್ನು ಹೋಲಿಸಿ ನೋಡುವುದರಿಂದ ಅವರ ಅಭಿವೃದ್ಧಿಯ ಒಳಗೊಳ್ಳುವಿಕೆಯ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದು ಸುಲಭ. ಇಂದಿನ ಅಭಿವೃದ್ಧಿ ನೀತಿಗಳು ಬಡತನದ ಸೃಷ್ಟಿಯನ್ನು ವ್ಯಕ್ತಿವಾದದ ದೃಷ್ಟಿಯಿಂದ ನೋಡುತ್ತಿವೆ. ಬಡವರು ಬಡವರಾಗಿರುವುದು ಮತ್ತು ಬಡವರಾಗಿ ಮುಂದುವರಿಯುವಲ್ಲಿ ಕುಡಿತ, ಹೆಚ್ಚು ಮಕ್ಕಳಿರುವುದು, ಕಷ್ಟಪಟ್ಟು ದುಡಿಯದಿರುವುದು, ಗಳಿಸಿದ್ದನ್ನು ಉಳಿತಾಯ ಮಾಡದಿರುವುದು, ದುಶ್ಚಟಗಳು ಮುಂತಾದವುಗಳ ಪಾತ್ರ ಹೆಚ್ಚಿದೆಯೆಂದು ವ್ಯಕ್ತಿವಾದ ಹೇಳುತ್ತದೆ. ಆದುದರಿಂದ ಇಂದಿನ ಬಡತನ ನಿವಾರಣ ಕಾರ್ಯಕ್ರಮಗಳಲ್ಲಿ ಪರಿಸರವನ್ನು ಸುಧಾರಿಸುವ ಕಾರ್ಯಕ್ರಮಗಳಿಲ್ಲ. ಇವುಗಳ ಜಾಗದಲ್ಲಿ ಇಂದು ಕಡಿಮೆ ಬೆಲೆಗೆ ಅಕ್ಕಿ ನೀಡುವುದು, ಅಕ್ಕಿ ಬೇಯಿಸಲು ಗ್ಯಾಸ್ ನೀಡುವುದು, ಕನಿಷ್ಠ ಕೆಲವು ದಿನಗಳ ಉದ್ಯೋಗ ನೀಡುವುದು, ಶಿಕ್ಷಣ ಸಂಸ್ಥೆಗಳಲ್ಲಿ ಕೆಲವು ಸೀಟುಗಳನ್ನು ಬಡ ಮಕ್ಕಳಿಗೆ ಮೀಸಲಿಡುವುದು ಮುಂತಾದ ಕಾರ್ಯಕ್ರಮಗಳು ಬಡತನ ನಿವಾರಣ ಕಾರ್ಯಕ್ರಮಗಳ ಪಟ್ಟಿಯಲ್ಲಿ ನೋಡಬಹುದು.

ಪರಿಸರದ ಸುಧಾರಣೆ
ತಳಸ್ತರದ ಜನರ ಅಭಿವೃದ್ಧಿಗೆ ಮೇಲಿನ ಕ್ರಮಗಳ ಮೂಲಕ ಪ್ರಯತ್ನಿಸುತ್ತಿರುವಾಗ ಒಟ್ಟು ಪರಿಸರ (ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗು ಸಾಂಸ್ಕೃತಿಕ) ಬಡತವನ್ನು ಸೃಷ್ಟಿಸುತ್ತಲೇ ಇದೆ. ಕಡಿಮೆ ಬಡ್ಡಿಗೆ ಸಿಗುವ ಬ್ಯಾಂಕ್ ಸಾಲದ ಕನಿಷ್ಠ ಪಾಲು ಕೂಡ ತಳಸ್ತರದ ಜನರಿಗೆ ತಲುಪುದಂತೆ ನೋಡಿಕೊಳ್ಳುವ ಸಾಲ ನೀತಿಯನ್ನು ಸರಕಾರ ಜಾರಿಗೆ ತರುತ್ತಿದೆ. ಭೂಸ್ವಾಧೀನ ಮಸೂದೆ ತಂದು ಸಣ್ಣಪುಟ್ಟ ಕೃಷಿಕರ ಅಲ್ಪಸ್ವಲ್ಪ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಸಡಿಲ ಕಾರ್ಮಿಕ ನೀತಿಗಳನ್ನು ಜಾರಿಗೆ ತಂದು ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳಿಗೆ ಹೋರಾಡಲು ಸಾಧ್ಯವಿಲ್ಲದ ಸ್ಥಿತಿಯನ್ನು ಸರಕಾರ ನಿರ್ಮಿಸುತ್ತಿದೆ. ಬಡವರಿಂದಲೂ ದೊಡ್ಡ ಮೊತ್ತದ ಸಂಪನ್ಮೂಲವನ್ನು ಸಂಗ್ರಹಿಸುವ ತೆರಿಗೆ ನೀತಿಯನ್ನು ಸರಕಾರವೇ ಜಾರಿಗೆ ತರುತ್ತಿದೆ. ಶಿಕ್ಷಣ, ಆರೋಗ್ಯಗಳ ಮೇಲೆ ಸರಕಾರ ಅತೀ ಕಡಿಮೆ ವಿನಿಯೋಜಿಸುವುದರಿಂದ ಮೂರು ಹೊತ್ತಿನ ಊಟಕ್ಕೆ ಪರದಾಡುವವರು ಕೂಡ ತಮ್ಮ ಸ್ವಂತ ದುಡಿಮೆಯಿಂದ ಬರುವ ಅಲ್ಪ ಆದಾಯದ ಬಹುಭಾಗವನ್ನು ಶಿಕ್ಷಣ ಆರೋಗ್ಯಗಳ ಮೇಲೆ ಖರ್ಚು ಮಾಡುವ ಸ್ಥಿತಿ ಇದೆ. ಜನರ ಅನಾಭಿವೃದ್ಧಿಯಲ್ಲಿ ನಮ್ಮ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಪರಿಸರದ ಪಾತ್ರ ಇದೆ ಎನ್ನುವುದನ್ನು ಅರಸರು ಬಲವಾಗಿ ನಂಬಿದ್ದರು. ಆದುದರಿಂದಲೇ ಅವರ ಅಭಿವೃದ್ಧಿ ಕಾರ್ಯಕ್ರಮಗಳು ಪರಿಸರವನ್ನು ಸುಧಾರಿಸುವ ನಿಟ್ಟಿನಲ್ಲಿದ್ದವು.

devaraj urs1

ಎಲ್ಲ ಕಾಲದಲ್ಲೂ ಅಭಿವೃದ್ಧಿಯನ್ನು ಜೀರ್ಣಿಸಿಕೊಳ್ಳಲು ಭೂಮಿ ಅಥವಾ ಬಂಡವಾಳ ಅಥವಾ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಸ್ಕಿಲ್ ಈ ಮೂರರಲ್ಲಿ ಯಾವುದಾದರೂ ಒಂದನ್ನು ಹೊಂದುವುದು ಅನಿವಾರ್ಯವಾಗಿತ್ತು. ಈ ಅನಿವಾರ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲೂ ತಳಸ್ತರದ ಜನರ ಅಭಿವೃದ್ಧಿಗೆ ಅಡ್ಡಿಯಾಗುವ ಪರಿಸರವನ್ನು ಸುಧಾರಿಸುವ ಹಲವು ಕಾರ್ಯಕ್ರಮಗಳನ್ನು ದೇವರಾಜ ಅರಸರು ಜಾರಿಗೆ ತಂದರು. ಅರಸರು ಜಾರಿಗೆ ತಂದ 1974ರ ಭೂಸುಧಾರಣ ಮಸೂದೆ ಮತ್ತು ಹಿಂದುಳಿದ ವರ್ಗದ ಜನರಿಗೆ ಶಿಕ್ಷಣ, ಉದ್ಯೋಗಗಳಲ್ಲಿ ನೀಡಿದ ಮೀಸಲಾತಿ ಎಲ್ಲರ ಪ್ರಜ್ಞೆಯ ಭಾಗವಾಗಿದೆ. ಭೂಸುಧಾರಣೆಯಿಂದ ಗೇಣಿಗೆ ದುಡಿಯುತ್ತಿದ್ದ ಕೃಷಿಕರಿಗೆ ಎಕರೆಗಟ್ಟಲೆ ಭೂಮಿ ಸಿಗದಿರಬಹುದು. ಆದರೆ ತಾವು ಉಳುವ ಭೂಮಿಗೆ ತಾವೇ ಒಡೆಯರೆನ್ನುವ ಭಾವನೆ ಅವರಿಗೆ ದೊಡ್ಡ ಬಲ ನೀಡಿದೆ. ತಮ್ಮ ಕೃಷಿಯ ಫಸಲಿನ ಬಹುಭಾಗವನ್ನು ಮತ್ತೊಬ್ಬರಿಗೆ ಕೊಡುವ ಅನಿವಾರ್ಯತೆ ಇಲ್ಲ ಎನ್ನುವ ಕಲ್ಪನೆ ಅವರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡಿದೆ. ಈ ಸ್ವಾತಂತ್ರ್ಯವನ್ನು ಅವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ, ವಸತಿ ನೀಡಲು ಬಳಸಿಕೊಂಡಿದ್ದಾರೆ. ಭೂಸುಧಾರಣೆ ಪರಿಣಾಮಕಾರಿಯಾಗಿ ಜಾರಿಗೊಂಡ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಎಲ್ಲ ಅಭಿವೃದ್ಧಿ ಸೂಚ್ಯಂಕಗಳಲ್ಲೂ ಇತರ ಜಿಲ್ಲೆಗಳಿಂದ ತುಂಬಾ ಮುಂದಿವೆ.

ಪ್ರಜಾಪ್ರಭುತ್ವದ ವಿಸ್ತರಣೆ
ಭೂಮಿ, ಬಂಡವಾಳ ಇಲ್ಲದವರು ಮಾರುಕಟ್ಟೆಯಲ್ಲಿ ಬೇಡಿಕೆಯುಳ್ಳ ಸ್ಕಿಲ್ ಹೊಂದುವುದು ತಳಸ್ತರದ ಜನರ ಅಭಿವೃದ್ಧಿಗೆ ಅವಶ್ಯ. ಸ್ವಾತಂತ್ರ್ಯ ನಂತರವೂ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಗಗನ ಕುಸುಮವಾಗಿತ್ತು. ಹಿಂದುಳಿದ ವರ್ಗಗಳಿಗೆ ಶಿಕ್ಷಣ, ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ಪ್ರಯತ್ನಗಳು ನಡೆದಿದ್ದವು. ಭೂಸುಧಾರಣೆ ರೀತಿಯಲ್ಲೇ ಅರಸರಿಗಿಂತ ಮುನ್ನ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಮೈಸೂರು ಅರಸರ ಕಾಲದಲ್ಲೇ ಮಿಲ್ಲರ್ ಕಮಿಶನ್ ನೇಮಕ ಮಾಡಿ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಲಾಗಿತ್ತು. ಅದು ಕರ್ನಾಟಕದ ಬಲಾಢ್ಯ ಸಮುದಾಯಗಳಿಗೆ ಅನುಕೂಲವಾದಷ್ಟು ಉಳಿದವರಿಗೆ ಅನುಕೂಲವಾಗಲಿಲ್ಲ. ಏಕೀಕರಣ ನಂತರ ಅರುವತ್ತರ ದಶಕದಲ್ಲಿ ನಾಗನಗೌಡ ಅವರ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಸಮಿತಿಯನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ನೀಡಲು ಪ್ರಯತ್ನಗಳು ನಡೆದಿದ್ದವು. ಆದರೆ ಈ ಪ್ರಯತ್ನ ನಿರೀಕ್ಷಿತ ಫಲ ನೀಡಿಲ್ಲ. ಇವನ್ನೆಲ್ಲ ಮನಗಂಡ ದೇವರಾಜ ಅರಸರು ಎಪ್ಪತ್ತರ ದಶಕದಲ್ಲಿ ಎಲ್.ಜಿ.ಹಾವನೂರು ನೇತೃತ್ವದಲ್ಲಿ ಹಿಂದುಳಿದ ಆಯೋಗವನ್ನು ರಚಿಸಿದರು. ಈ ಆಯೋಗ ವೈಜ್ಞಾನಿಕ ಮಾನದಂಡಗಳನ್ನು ಹಾಗೂ ಸಾಕಷ್ಟು ಸಾಕ್ಷಿ, ಪುರಾವೆಗಳನ್ನು ಬಳಸಿಕೊಂಡು ಹಿಂದುಳಿದ ಸಮುದಾಯಗಳನ್ನು ಗುರುತಿಸಿದೆ.

ಇದನ್ನು ಓದಿ

ದೇವರಾಜ ಅರಸರು ನೇಮಿಸಿದ ಕರ್ನಾಟಕದ ಪ್ರಥಮ ಹಿಂದುಳಿದ ವರ್ಗದ ಆಯೋಗದ ಶಿಫಾರಸ್ಸುಗಳು 1977ರಲ್ಲಿ ಜಾರಿಗೊಂಡಿವೆ. ತದನಂತರ ಹಿಂದುಳಿದ ವರ್ಗಗಳ ಬಹುತೇಕರು ಶಾಲೆ ಮುಖ ನೋಡುವುದು ಸಾಧ್ಯವಾಯಿತು. ಈ ಆಯೋಗ ಮತ್ತು ಅದರ ಶಿಫಾರಸ್ಸುಗಳ ಅನುಷ್ಠಾನದಿಂದ ಹಿಂದುಳಿದ ಸಮುದಾಯಗಳ ಯುವಜನತೆ ಆಧುನಿಕ ಶಿಕ್ಷಣ ಹಾಗೂ ಉದ್ಯೋಗಗಳ ಕನಸು ಕಾಣಲು ಸಾಧ್ಯವಾಯಿತು. ತಾವು ಕೂಡ ಇತರರಿಗಿಂತ ಕಡಿಮೆಯಲ್ಲ ಎನ್ನುವ ಭಾವನೆ ಇವರಲ್ಲೂ ಜಾಗೃತವಾಯಿತು. ಇವರೂ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ತಮ್ಮ ಹಕ್ಕಿಗೆ ಹೋರಾಡುವುದು ಆರಂಭವಾಯಿತು. ಈ ಸಮುದಾಯಗಳಿಂದಲೂ ರಾಜ್ಯ ರಾಷ್ಟ್ರಮಟ್ಟದ ರಾಜಕೀಯ ನಾಯಕರುಗಳು ಬಂದರು. ಹಿಂದುಳಿದ ವರ್ಗದ ಜನರು ಸಾರ್ವಜನಿಕ ಬದುಕಲ್ಲಿ ಕೀಳರಿಮೆ ಇಲ್ಲದೆ ಪಾಲುಗೊಳ್ಳುವುದು ಸಾಧ್ಯವಾಯಿತು. ಎಪ್ಪತ್ತರ ದಶಕದಲ್ಲಿ ಜಾರಿಗೊಂಡ ಮೀಸಲಾತಿಯ ಪ್ರಭಾವ ತೊಂಬತ್ತರ ಕೊನೆಯವರೆಗೆ ಮುಂದುವರಿದಿತ್ತು. ಕೆಲವು ನೂರು ಫೀಸು ಕಟ್ಟಿ ಪದವಿ, ಸ್ನಾತಕೋತ್ತರ ಪದವಿ, ಶಿಕ್ಷಣ ಮುಂದುವರಿಸುವ ಆಸಕ್ತಿ ಇದ್ದರೆ ಪಿಎಚ್‍ಡಿ ಪದವಿ ಪಡೆಯುವ ಸಾಧ್ಯತೆಗಳನ್ನು ಶಿಕ್ಷಣದ ಮೀಸಲಾತಿ ಸೃಷ್ಟಿಸಿದೆ. ಹೀಗೆ ಅರಸರ ಅಭಿವೃದ್ಧಿ ರಾಜಕಾರಣದ ಪರಿಣಾಮ ತಳಸ್ತರದ ಜನರನ್ನು ಆರ್ಥಿಕವಾಗಿ ಬಲಪಡಿಸುವುದಕ್ಕೆ ಸೀಮಿತವಾಗಿರಲಿಲ್ಲ. ಬಲಾಢ್ಯ ಸಮುದಾಯಗಳಿಗೆ ಸೀಮಿತವಾಗಿದ್ದ ಕರ್ನಾಟಕದ ರಾಜಕೀಯ ಇನ್ನೂ ಆಳಕ್ಕೆ ಇಳಿಯುವಂತಾಯಿತು. ಸಣ್ಣಪುಟ್ಟ ಸಮುದಾಯಗಳು ಕೂಡ ರಾಜಕೀಯವಾಗಿ ಸಕ್ರಿಯವಾಗುವುದು ಸಾಧ್ಯವಾಯಿತು. ಇವೆಲ್ಲ ಅರಸರ ಸಾಂಸ್ಕೃತಿಕ ಒಗ್ಗೂಡುವಿಕೆ ಕಲ್ಪನೆಯ ಕೊಡುಗೆಗಳು.

Prof. Chandra Pujari ೧
ಪ್ರೊ ಚಂದ್ರ ಪೂಜಾರಿ
+ posts

ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಚಂದ್ರ ಪೂಜಾರಿ
ಪ್ರೊ ಚಂದ್ರ ಪೂಜಾರಿ
ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X