ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದರ್ಪ ಮತ್ತು ಅವಿವೇಕದ ನಿರ್ಧಾರಗಳು ಮಧ್ಯಪ್ರಾಚ್ಯವನ್ನು ಭೀಕರ ಯುದ್ಧದ ಕುಂಡಕ್ಕೆ ತಳ್ಳುತ್ತಿವೆ. ‘ನಾನೇ ಎಲ್ಲವನ್ನೂ ಸರಿಪಡಿಸುತ್ತೇನೆ’ ಎಂಬ ಅವರ ಅಹಂಕಾರಿ ಮಾತುಗಳು, ಇಂದು ಲಕ್ಷಾಂತರ ಜನರ ಬದುಕನ್ನು ಅತಂತ್ರಗೊಳಿಸಿವೆ. ಕೇವಲ ಮೂರು ವಾರಗಳ ಹಿಂದೆ ಮಾಡಿಕೊಂಡಿದ್ದ ಕದನ ವಿರಾಮ ಒಪ್ಪಂದವನ್ನು ಕ್ಷಣಮಾತ್ರದಲ್ಲಿ ಚಿಂದಿ ಮಾಡಬಲ್ಲ ಟ್ರಂಪ್ ತಿಕ್ಕಲುತನಕ್ಕೆ ಏನನ್ನಬೇಕೋ!
ಕಳೆದ ಜೂನ್ 17ರಂದು ಮಾಡಿಕೊಳ್ಳಲಾಗಿದ್ದ ತಾತ್ಕಾಲಿಕ ಕದನ ವಿರಾಮ/ಶಾಂತಿ ಒಪ್ಪಂದ ಕೇವಲ ಮೂರೇ ವಾರಗಳಲ್ಲಿ ಭಗ್ನಗೊಂಡಿದ್ದು, ಅಮೆರಿಕ ಮತ್ತು ಇರಾನ್ ನೇರ ಯುದ್ಧದ ಅಖಾಡಕ್ಕೆ ಇಳಿದಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಲುವುಗಳು ಮತ್ತು ಇರಾನ್ನ ಸವಾಲುಗಳು ಸೇರಿ ಮಧ್ಯಪ್ರಾಚ್ಯದ ಶಾಂತಿ ಪ್ರಕ್ರಿಯೆಯನ್ನು ಅಗ್ನಿಪರೀಕ್ಷೆಗೊಡ್ಡಿದ್ದು, ಇಡೀ ಮಧ್ಯಪ್ರಾಚ್ಯವನ್ನು ಉಸಿರುಗಟ್ಟುವಂತೆ ಮಾಡಿದೆ.
ಟ್ರಂಪ್ ಅವರ ರಾಜಕೀಯ ಶೈಲಿಯೇ ಅನಿರೀಕ್ಷಿತ ಮತ್ತು ಆಕ್ರಮಣಕಾರಿ. ನ್ಯಾಟೋ ಶೃಂಗಸಭೆಯಿಂದ ಮರಳಿದ ಬೆನ್ನಲ್ಲೇ ಅವರು ತೆಗೆದುಕೊಂಡ ನಿರ್ಧಾರಗಳು ಯುದ್ಧದ ಕಾವು ಹೆಚ್ಚಿಸಿವೆ. “ಯಾವುದೇ ಕ್ರಮ ಕೈಗೊಳ್ಳಬೇಕಾದರೂ ಅದು ವೇಗವಾಗಿ ನಡೆಯಬೇಕು, ಕೆಲಸವನ್ನು ನಾವು ಪೂರ್ಣಗೊಳಿಸುತ್ತೇವೆ” ಎಂಬ ಟ್ರಂಪ್ ಅವರ ಹೇಳಿಕೆ, ಅಮೆರಿಕದ ಸೇನೆಯ ಮೇಲಿನ ಅವರ ವಿಶ್ವಾಸವನ್ನು ಮತ್ತು ಇರಾನ್ ವಿರುದ್ಧದ ಯುದ್ಧದ ತೀವ್ರತೆಯನ್ನು ತೋರಿಸುತ್ತದೆ. ಹಾರ್ಮುಜ್ ಜಲಸಂಧಿಯಲ್ಲಿ ವ್ಯಾಪಾರ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದೆ ಆರೋಪಿಸಿ, ಅದನ್ನು ಒಪ್ಪಂದದ ಉಲ್ಲಂಘನೆ ಎಂದು ಘೋಷಿಸಿ, ತಕ್ಷಣವೇ ವೈಮಾನಿಕ ದಾಳಿಗೆ ಟ್ರಂಪ್ ಆದೇಶಿಸಿದ್ದಾರೆ. ಆದರೆ ಈ ದಾಳಿಗಳು ಕೇವಲ ಸೇನಾ ನೆಲೆಗಳಿಗಷ್ಟೇ ಸೀಮಿತವಾಗಿಲ್ಲ; ಇರಾನ್ನ ವಿದ್ಯುತ್ ಸ್ಥಾವರಗಳು, ನೀರು ಶುದ್ಧೀಕರಣ ಘಟಕಗಳು ಮತ್ತು ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪವನ್ನೂ ಗುರಿಯಾಗಿಸಿದ್ದಾರೆ.

ಕದನ ವಿರಾಮ ಮುರಿದು ಬಿದ್ದಿದೆ ಎಂದು ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ನ 90 ಸ್ಥಳಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ ಮಾಡಿದೆ. ಇರಾನ್ನ ಬಂದರು ನಗರಗಳಾದ ಬುಶೆಹರ್, ಬಂದರ್ ಅಬ್ಬಾಸ್, ಸಿರಿಕ್ನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ಬಗ್ಗೆ ಅಮೆರಿಕದ CENTCOM ಮಾಹಿತಿ ಬಿಡುಗಡೆ ಮಾಡಿದೆ. ಅದರಂತೆ ಅಮೆರಿಕ (America) ಪಡೆಗಳು ಇರಾನ್ನ ಸುಮಾರು 90 ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿವೆ. ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ಕಣ್ಗಾವಲು ವ್ಯವಸ್ಥೆಗಳು, ಕ್ಷಿಪಣಿ ಹಾಗೂ ಡ್ರೋನ್ ಸಂಗ್ರಹಣಾ ತಾಣಗಳು, ನೌಕಾಪಡೆಯ ಸಾಮರ್ಥ್ಯಗಳಿಗೆ ಸಂಬಂಧಿಸಿದ ಸೌಲಭ್ಯಗಳು ಮತ್ತು ಇರಾನ್ನ ಕರಾವಳಿಯುದ್ದಕ್ಕೂ ಇರುವ ಮಿಲಿಟರಿ ಲಾಜಿಸ್ಟಿಕ್ಸ್ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಅಮೆರಿಕ ಸೇನೆ ಎರಡು ದಿನಗಳಿಂದ ನಡೆಸುತ್ತಿರುವ ಭಾರೀ ವೈಮಾನಿಕ ದಾಳಿಯಲ್ಲಿ 14 ಮಂದಿ ಮೃತಪಟ್ಟಿದ್ದು, 78ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್ನ ಆರೋಗ್ಯ ಸಚಿವಾಲಯದ ವಕ್ತಾರ ಮಾಹಿತಿ ಹಂಚಿಕೊಂಡಿದ್ದಾರೆ.
ಸಂಘರ್ಷದ ಬಗ್ಗೆ ಮಾತನಾಡಿರುವ ಟ್ರಂಪ್, ಪ್ರತಿ ಬಾರಿ ದಾಳಿ ಮಾಡಿದಾಗಲೂ ನಾವು 20 ಬಾರಿ ಬಲವಾಗಿ ಹೊಡೆಯುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡುತ್ತಿದ್ದಾಗ ಇರಾನ್ ಅನ್ನು ʼಇಸ್ಲಾಮಿಕ್ ಸ್ಟೇಟ್ ಆಫ್ ಜಪಾನ್ʼ ಎಂದು ಮುಜುಗರಕ್ಕೀಡಾಗಿದ್ದಾರೆ. ಇರಾನ್ ಒಪ್ಪಂದ ಮಾಡಿಕೊಳ್ಳಲು ಹವಣಿಸುತ್ತಿದೆ. ಸ್ವಲ್ಪ ಸಮಯದ ಹಿಂದಷ್ಟೇ ಕರೆ ಮಾಡಿದ್ದರು. ಅವರು ಒಪ್ಪಂದ ಮಾಡಿಕೊಳ್ಳಲು ಅರ್ಹರೋ ಅಲ್ಲವೋ ಗೊತ್ತಿಲ್ಲ. ಭವಿಷ್ಯದ ಒಪ್ಪಂದ ಗೌರವಿಸುತ್ತಾರೋ ಇಲ್ಲವೋ ಅದೂ ಗೊತ್ತಿಲ್ಲ. ಹೇಳಬೇಕು ಎಂದರೆ ಅವರು ಹುಚ್ಚರು ಎಂದು ಟೀಕಿಸಿದ್ದಾರೆ.
ಟ್ರಂಪ್ ಹೇಳಿಕೆಗೆ ಸಿಡಿಮಿಡಿಗೊಂಡ ಇರಾನ್, ಕದನ ವಿರಾಮಕ್ಕೆ ಇರಾನ್ ದೂರವಾಣಿ ಕರೆ ಮಾಡಿತ್ತು ಎಂಬ ಹೇಳಿಕೆಯನ್ನು ತಳ್ಳಿ ಹಾಕಿರುವ ಇರಾನ್, ಅಮೆರಿಕದ ಮೇಲೆ ನಾವು ಎಂದಿಗೂ ನಂಬಿಕೆ ಇರಿಸಿಲ್ಲ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ, ಅಮೆರಿಕದ ಮೇಲೆ ನಾವು ಎಂದಿಗೂ ನಂಬಿಕೆ ಇರಿಸಿಲ್ಲ ಭರವಸೆಗೆ ಭರವಸೆ ಎನ್ನುವ ತತ್ವದಲ್ಲಿ ಒಪ್ಪಂದವಾಗಿತ್ತು. ಏಕಪಕ್ಷೀಯವಾಗಿ ದಾಳಿ ಮಾಡುವ ಮೂಲಕ ಅಮೆರಿಕವೇ ಒಪ್ಪಂದ ಉಲ್ಲಂಘಿಸಿದೆ. ಅಲ್ಹಾನು ದ್ರೋಹ ಮಾಡುವವರನ್ನು ಇಷ್ಟಪಡುವುದಿಲ್ಲ ಇರಾನ್ ತನ್ನ ಸಾರ್ವಭೌಮತ್ವವನ್ನು ಉಳಿಸಿಕೊಳ್ಳಲು ಶಕ್ತವಾಗಿದೆ ತಿರುಗೇಟು ನೀಡಿದ್ದಾರೆ.

ಕದನ ವಿರಾಮ ಉಲ್ಲಂಘಿಸಿದ್ದು ಇರಾನ್ ಎಂದು ಅಮೆರಿಕ ಆರೋಪಿಸುತ್ತಿದೆ. ಆದರೆ ಬ್ರಿಟಿಷ್ ಕಡಲ ಭದ್ರತಾ ಸಂಸ್ಥೆಗಳ ಪ್ರಕಾರ, ಹಾರ್ಮುಜ್ ಜಲಸಂಧಿಯನ್ನು ಸಾಗಿಸುತ್ತಿದ್ದ ಮೂರು ವ್ಯಾಪಾರಿ ಹಡಗುಗಳ ಮೇಲೆ ದಾಳಿ ಮಾಡಲಾಗಿದೆ. ಒಂದು ಟ್ಯಾಂಕರ್ ಮೇಲೆ ಸ್ಪೋಟಕ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿತು. ಈ ಘಟನೆಗೆ ಅಮೆರಿಕ ನೇರವಾಗಿ ಇರಾನ್ ಅನ್ನು ದೂಷಿಸಿದೆ, ಇದನ್ನು ಕದನ ವಿರಾಮ ಉಲ್ಲಂಘನೆ ಎಂದು ಕರೆದಿದೆ. ಆದಾಗ್ಯೂ, ಇರಾನ್ ಈ ಆರೋಪಗಳನ್ನು ನಿರಾಕರಿಸಿದೆ. ಒಪ್ಪಂದವನ್ನು ಉಲ್ಲಂಘಿಸಿದ ಮೊದಲ ವ್ಯಕ್ತಿ ಅಮೆರಿಕ ಎಂದು ಹೇಳಿಕೊಂಡಿದೆ. ಒಪ್ಪಂದದ ಕೆಲವೇ ವಾರಗಳ ನಂತರ ಈ ಘಟನೆ ಸಂಭವಿಸಿದೆ, ಇದು ಎರಡು ದೇಶಗಳ ನಡುವೆ 60 ದಿನಗಳ ಮಾತುಕತೆಗೆ ಒಂದು ಚೌಕಟ್ಟನ್ನು ಸ್ಥಾಪಿಸಿದೆ. ಟ್ರಂಪ್ ಯುದ್ಧ ದಾಹಿ ಎನ್ನುವ ಆರೋಪಕ್ಕೆ ಈ ಸನ್ನಿವೇಶ ಉತ್ತಮ ಉದಾಹರಣೆ ಎನ್ನುತ್ತಿದ್ದಾರೆ ಜಾಗತಿಕ ವಿಶ್ಲೇಷಕರು.
ಈ ಸರಣಿ ದಾಳಿಗಳು ಅಮೆರಿಕ ಮತ್ತು ಇರಾನ್ ನಡುವಿನ ವಿಶ್ವಾಸವೃದ್ಧಿಗೆ ಮಾರಕವಾಗಿ ಪರಿಣಮಿಸಿವೆ. ಪರಮಾಣು ಕಾರ್ಯಕ್ರಮ, ಆರ್ಥಿಕ ನಿರ್ಬಂಧಗಳು ಮತ್ತು ಪ್ರಾದೇಶಿಕ ಭದ್ರತೆಯಂತಹ ಜಟಿಲ ವಿಷಯಗಳ ಕುರಿತು ನಡೆಯುತ್ತಿದ್ದ ಸೂಕ್ಷ್ಮ ಮಾತುಕತೆಗಳು, ಇದೀಗ ಪರಸ್ಪರ ಆರೋಪ-ಪ್ರತ್ಯಾರೋಪಗಳ ನಡುವೆ ಹಳಿತಪ್ಪಿವೆ. ವ್ಯಾಪಾರಿ ಹಡಗುಗಳ ಮೇಲಿನ ದಾಳಿಯನ್ನು ಅಮೆರಿಕವು ‘ಕೆಂಪು ರೇಖೆ’ಯನ್ನು ದಾಟಿದ ಕೃತ್ಯ ಎಂದು ಬಣ್ಣಿಸಿದರೆ, ಅಮೆರಿಕದ ವೈಮಾನಿಕ ದಾಳಿ ಮತ್ತು ತೈಲ ರಫ್ತಿನ ಮೇಲಿನ ನಿರ್ಬಂಧಗಳನ್ನು ಒಪ್ಪಂದದ ಉಲ್ಲಂಘನೆ ಎಂದು ಇರಾನ್ ಪ್ರತಿಪಾದಿಸುತ್ತಿದೆ.
ಸಮುದ್ರ ಮಾರ್ಗಗಳಲ್ಲಿ ಹಿಂಸಾಚಾರ ಹೆಚ್ಚಿದಷ್ಟು, ಮಾತುಕತೆಯ ಮೇಜಿನ ಬಳಿ ರಿಯಾಯಿತಿ ನೀಡುವುದು ಎರಡೂ ದೇಶಗಳಿಗೆ ರಾಜಕೀಯವಾಗಿ ಅಸಾಧ್ಯವಾಗುತ್ತದೆ. ತಂತಮ್ಮ ದೇಶಗಳಲ್ಲಿ ನಾಯಕರು ದುರ್ಬಲರಾಗಿ ಕಾಣಿಸಿಕೊಳ್ಳಲು ಬಯಸದ ಕಾರಣ, ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧರಿರುವುದಿಲ್ಲ. ಇಂತಹ ಹಠಮಾರಿ ಧೋರಣೆಗಳು ಸಂಧಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದರ ಜೊತೆಗೆ ಸೌಹಾರ್ದಯುತ ಪರಿಹಾರದ ದಾರಿಯನ್ನೂ ಸಂಪೂರ್ಣವಾಗಿ ಮುಚ್ಚಿ, ಸಂಘರ್ಷವನ್ನು ಮತ್ತಷ್ಟು ಭೀಕರಗೊಳಿಸಿವೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯ.
ಇದನ್ನೂ ಓದಿ: ಟ್ರಂಪ್ ಹತ್ಯೆಗೆ ಇರಾನ್ ಸಂಚು: ಅಮೆರಿಕದೊಂದಿಗೆ ಗುಪ್ತಚರ ಮಾಹಿತಿ ಹಂಚಿಕೊಂಡ ಇಸ್ರೇಲ್

ಟ್ರಂಪ್ ಹುಚ್ಚಾಟದ ಹೇಳಿಕೆ ನೀಡುವುದು ಹೊಸತೇನಲ್ಲ. ಜಗತ್ತಿನ ಇತರೆ ದೇಶಗಳ ನಾಯಕರು ತನ್ನ ಆಣತಿಯಂತೆಯೇ ನಡೆಯಬೇಕು ಎಂಬ ಮೊಂಡುತನ ಟ್ರಂಪ್ ಅವರದ್ದು. ಟ್ರಂಪ್ ಅಬ್ರಹಾಂ ಒಪ್ಪಂದದ ರೂವಾರಿ ತಾನೇ ಎಂದು ಬೀಗುವವರು. ಅಮೆರಿಕದ 2020ರ ಚುನಾವಣೆಯಲ್ಲಿ ತಾವೇ ಗೆದ್ದಿದ್ದಾಗಿ ಸುಳ್ಳು ವಾದ ಮಂಡಿಸುತ್ತಿದ್ದವರು. ಈ ವೇಳೆಯಲ್ಲೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಜೋ ಬೈಡನ್ ಅವರ ಗೆಲುವನ್ನು ಅಭಿನಂದಿಸಿದ್ದಕ್ಕೆ ಟ್ರಂಪ್ ತೀವ್ರವಾಗಿ ಕೆರಳಿದ್ದರು. ನೆತನ್ಯಾಹು ವಿರುದ್ಧ ಬಹಿರಂಗವಾಗಿ ಅಶ್ಲೀಲ, ವೈಯಕ್ತಿಕ ನಿಂದನೆ ಮಾಡಿದ್ದರು. ಬೈಡನ್ನನ್ನು ಅಭಿನಂದಿಸಿದ ನೆತನ್ಯಾಹುಗೆ “ನಿಷ್ಠೆ ಎಂಬುದೇ ಇಲ್ಲ” ಎಂದು ಕಿಡಿಕಾರಿದ್ದರು. ಅಂದರೆ ಟ್ರಂಪ್ಗೆ ಮಧ್ಯಪ್ರಾಚ್ಯದ ದೀರ್ಘಾವಧಿ ಶಾಂತಿಗಿಂತಲೂ, ಜಾಗತಿಕ ನಾಯಕರು ತಮಗೆ ನಿಷ್ಠರಾಗಿರುವುದು ಮುಖ್ಯ!
ಹೀಗೆ ತಾನು ಹೇಳಿದ್ದೇ ಅಂತಿಮ. ‘ಅಮೆರಿಕ ಫಸ್ಟ್, ಉಳಿದದ್ದು ನೆಕ್ಸ್ಟ್ʼ ಎನ್ನುವ ಟ್ರಂಪ್ ಅವರ ವಿದೇಶಾಂಗ ನೀತಿಯು ಬಹುಪಕ್ಷೀಯ ಒಪ್ಪಂದಗಳಿಗಿಂತ ತನ್ನದೇ ಆದ ಷರತ್ತುಗಳನ್ನು ಮುಂದಿಡುವಂತದ್ದು. ಕದನ ವಿರಾಮ ಒಪ್ಪಂದದ ನಡುವೆ ಈ ಮಿತ್ರರಾಷ್ಟ್ರಗಳ ನಿಲುವನ್ನೂ ಕಡೆಗಣಿಸಿ ತಮ್ಮದೇ ನಿಲುವನ್ನು ತಳೆಯುವುದು ಟ್ರಂಪ್ ಸಂಘರ್ಷಕ್ಕೆ ನೀಡುವ ಪ್ರಚೋದನೆ. ಅಷ್ಟು ಮಾತ್ರವಲ್ಲದೆ ಮಾತುಕತೆಯ ನಡುವೆಯೇ ಟ್ರುತ್ ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಮಾಡುವ ವಿತಂಡ ವಾದದ ಪೋಸ್ಟ್ಗಳು ಅವರ ಹಠಮಾರಿತನಕ್ಕೆ, ಅಸಂಬದ್ದತೆಗೆ ಸಾಕ್ಷಿ.
ಟ್ರಂಪ್ ಅವರ ಆಕ್ರಮಣಕಾರಿ ವಿದೇಶಾಂಗ ನೀತಿ ಮಧ್ಯಪ್ರಾಚ್ಯದಲ್ಲಿ ಮಾನವೀಯ ಬಿಕ್ಕಟ್ಟನ್ನ ಸೃಷ್ಟಿಸಿದೆ. ಅದರ ಪರಿಣಾಮ ಭಾರತವನ್ನೂ ಸೇರಿದಂತೆ ಜಗತ್ತಿನ ರಾಷ್ಟ್ರಗಳ ಮೇಲಾಗುತ್ತಿದೆ. ರಾಜಕೀಯ ಅಹಂಕಾರವನ್ನು ದೇಶದ ಹಿತಾಸಕ್ತಿಯ ಮುಂದೆ ಇರಿಸುವ ಟ್ರಂಪ್ ಶೈಲಿ, ಸಂಧಾನದ ಎಲ್ಲಾ ದಾರಿಗಳನ್ನು ಮುಚ್ಚಿ ಜಗತ್ತನ್ನು ಮತ್ತೊಂದು ಮಹಾಯುದ್ಧದ ಅಂಚಿಗೆ ತಳ್ಳಿದೆ. ಇಂತಹ ಪರಿಸ್ಥಿತಿಯಲ್ಲಿ, ಶಾಂತಿ ಸಂಧಾನದ ಎಲ್ಲಾ ಸಾಧ್ಯತೆಯ ಬಾಗಿಲುಗಳು ಸಂಪೂರ್ಣವಾಗಿ ಮುಚ್ಚಿಹೋದರೆ, ಅದರ ಪರಿಣಾಮಗಳನ್ನು ಇಡೀ ಜಗತ್ತು ಭರಿಸಬೇಕಾಗುತ್ತದೆ. ಈ ಸಂಘರ್ಷದ ಹಾದಿಯಲ್ಲಿ ಗೆಲುವು ಯಾರದ್ದೇ ಆಗಿರಲಿ, ಅಂತಿಮವಾಗಿ ಸೋಲುವುದು ಮಾತ್ರ ಮಾನವೀಯತೆ ಮತ್ತು ಶಾಂತಿ.





