ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿರುವ ಕಲಬುರಗಿಯ ವಿಶೇಷ ಪೋಕ್ಸೊ ನ್ಯಾಯಾಲಯ, ಬಾಲ್ಯ ವಿವಾಹ ನಡೆಸಲು ಕಾರಣರಾದ ಬಾಲಕಿಯ ತಂದೆ-ತಾಯಿ ಹಾಗೂ ಮತ್ತೊಬ್ಬ ಆರೋಪಿಗೂ ತಲಾ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಯಾದಗಿರಿ ಜಿಲ್ಲೆಯ ನಿವಾಸಿ ನಾಗಪ್ಪ ಚಡಬಾನೂರ (24) ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಆತ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ತನ್ನೊಂದಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿಷಯ ತಿಳಿದು ಬಾಲಕಿಯ ಕುಟುಂಬಸ್ಥರು ಪ್ರಶ್ನಿಸಿದಾಗ ಅವರಿಗೆ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಬಳಿಕ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಅಪ್ರಾಪ್ತೆಯೊಂದಿಗೆ ಬಾಲ್ಯ ವಿವಾಹ ನಡೆಸಲಾಗಿದ್ದು, ತನಿಖೆ ವೇಳೆ ಈ ಅಂಶವೂ ದೃಢಪಟ್ಟಿದೆ ಎಂದು ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ವಾಡಿ ಪೊಲೀಸ್ ಠಾಣೆ ಅಧಿಕಾರಿಗಳು ಪ್ರಕರಣದ ಸಮಗ್ರ ತನಿಖೆ ನಡೆಸಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), ಪೋಕ್ಸೊ ಕಾಯ್ದೆ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ವಿವಿಧ ವಿಧಿಗಳಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕಲಬುರಗಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್. ಚವ್ಹಾಣ ಅವರು, ಪೋಕ್ಸೊ ಕಾಯ್ದೆಯ ಕಲಂ 6ರಡಿ ನಾಗಪ್ಪನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿದರು. ಜೊತೆಗೆ ಇತರೆ ಅಪರಾಧಗಳಿಗೂ ಪ್ರತ್ಯೇಕ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.
ಇದೇ ಪ್ರಕರಣದಲ್ಲಿ ಬಾಲ್ಯ ವಿವಾಹಕ್ಕೆ ಸಹಕರಿಸಿದ ಸಿದ್ದಪ್ಪ ಹರಕಂಚಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಒಂದು ವರ್ಷದ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಲಾಗಿದೆ. ಅಪ್ರಾಪ್ತೆಯ ಬಾಲ್ಯ ವಿವಾಹಕ್ಕೆ ಕಾರಣರಾದ ಆಕೆಯ ತಂದೆ ಹಾಗೂ ತಾಯಿಗೂ ತಲಾ ಒಂದು ವರ್ಷದ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ಭೀಮಾ ನದಿಯಲ್ಲಿ ದುರಂತ; ಬಲೆಗೆ ಸಿಲುಕಿ ಮೀನುಗಾರ ಮೃತ
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದು, ಆರೋಪಗಳೆಲ್ಲವೂ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.





