ಹರಿಯಾಣದಲ್ಲಿ ಗೆದ್ದು ಬೀಗುತ್ತೇವೆಂದು ಅಬ್ಬರಿಸಿ ಬೊಬ್ಬಿರಿಸುತ್ತಿದ್ದ ಕಾಂಗ್ರೆಸ್, ಸೋತು ಮತ್ತೆ ಮೂಲೆಗೆ ಸರಿದಿದೆ. ನಿರಂತರವಾಗಿ ಸೋಲುತ್ತಿದ್ದರೂ, ಒಂದೆರಡು ಗೆಲುವಿಗೇ ತೃಪ್ತಿಪಟ್ಟುಕೊಳ್ಳುವ ಕಾಂಗ್ರೆಸ್, ಇಂದಿಗೂ ಬುದ್ದಿ ಕಲಿತಿಲ್ಲ. ಕಾಂಗ್ರೆಸ್ ತನ್ನ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ‘ಇಂಡಿಯಾ’ ಮೈತ್ರಿಕೂಟದ ಮಿತ್ರ ಪಕ್ಷಗಳು ಸಲಹೆ ನೀಡುತ್ತಿವೆ. ಆದರೂ, ಎಮ್ಮೆ ಚರ್ಮದ ಕಾಂಗ್ರೆಸ್‌ಗೆ ಅದರ ಅರಿವಾಗುತ್ತಿಲ್ಲ.
ಕಾಂಗ್ರೆಸ್ ಹೈಕಮಾಂಡ್ ಹರಿಯಾಣ ಸೋಲಿನಿಂದ ಜರ್ಜರಿತವಾಗಿದ್ದರೆ, ಇತ್ತ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅದೇ ಒಳಜಗಳ, ಗುಂಪುಗಾರಿಕೆ, ಗುಸು-ಗುಸು, ಪಿಸು-ಪಿಸುಗಳೇ ನಡೆಯುತ್ತಿವೆ. ‘ಹೈಕಮಾಂಡ್ ಸೂಚನೆಯಂತೆ ಕೆಲಸ ಮಾಡುತ್ತೇವೆ, ಬದ್ದರಾಗಿರುತ್ತೇವೆ’ ಎನ್ನುವ ಸಚಿವರು, ತಮ್ಮದೇ ಗುಂಪುಗಾರಿಕೆಯ ಚಾಳಿ ಮುಂದುವರೆಸಿದ್ದಾರೆ. ಇದೀಗ, ಮತ್ತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಎಚ್ಚರಿಕೆ ನೀಡಿದೆ.
ಕಾಂಗ್ರೆಸ್ ನಾಯಕರು, ಸಚಿವರು ಪ್ರತ್ಯೇಕ ಸಭೆಗಳನ್ನು ನಡೆಸುವುದು, ಮುಖ್ಯಮಂತ್ರಿ ಬದಲಾವಣೆ ಹಾಗೂ ಉಪ ಮುಖ್ಯಮಂತ್ರಿ ಹುದ್ದೆ ಕುರಿತು ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಖಡಕ್ ವಾರ್ನಿಂಗ್ ನೀಡಿದೆ. ಹೀಗಾಗಿಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ‘ಇಬ್ಬರೂ ಜೊತೆಗಿದ್ದೇವೆ. ಜೊತೆಯಾಗಿ ಸರ್ಕಾರ ಮುನ್ನಡೆಸುತ್ತೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಎಂದು ಹೇಳಿಕೊಂಡಿದ್ದಾರೆ.
ಆದರೂ, ಸಚಿವರು ಮಾತ್ರ ತಮ್ಮದೇ ಗುಂಪು ಕಟ್ಟಿಕೊಂಡು ಅಡ್ಡಾಡುತ್ತಿದ್ದಾರೆ. ಪ್ರತ್ಯೇಕ ಸಭೆಗಳನ್ನು ನಡೆಸುತ್ತಿದ್ದಾರೆ. ಗೃಹ ಸಚಿವ ಪರಮೇಶ್ವರ್ ಅವರು ಎಂ.ಬಿ ಪಾಟೀಲರನ್ನು ಭೇಟಿ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ, ಎಚ್.ಸಿ. ಮಹದೇವಪ್ಪ, ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಕೂಡ ಗೌಪ್ಯ ಸಭೆ ನಡೆಸಿದ್ದಾರೆ.

ಇದೆಲ್ಲವೂ, ಹರಿಯಾಣ ಸೋಲು, ಮುಡಾ ಪ್ರಕರಣ, ಇ.ಡಿ-ಲೋಕಾಯುಕ್ತ ಪ್ರಕರಣಗಳಿಂದ ಚಿಂತಿತವಾಗಿರುವ ಕಾಂಗ್ರೆಸ್‌ಗೆ ಮತ್ತಷ್ಟು ತಲೆನೋವು ತಂದೊಡ್ಡಿದೆ. ಸಚಿವರ ನಡೆಗಳನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಸಚಿವ, ಶಾಸಕ ಬಹಿರಂಗ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತರುವಂತಿದೆ. ಇದನ್ನೇ ಬಿಜೆಪಿ-ಜೆಡಿಎಸ್ ತನ್ನ ಅಸ್ತ್ರವಾಗಿ ಬಳಸಿಕೊಳ್ಳಬಹುದು ಎಂಬ ಆತಂಕವೂ ಪಕ್ಷದ ನಾಯಕರಲ್ಲಿದೆ. ಹೀಗಾಗಿ, ಶಿಸ್ತು ಪಾಲಿಸುವಂತೆ ಸೂಚನೆ ನೀಡಿದೆ.
ಗೆಲ್ಲಬಹುದಾದ ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಪಕ್ಷದೊಳಗಿನ ಒಳಜಗಳವೇ ಪ್ರಮುಖ ಕಾರಣವೆಂದು ವಿಮರ್ಶಕರು ಹೇಳುತ್ತಿದ್ದಾರೆ. ಹರಿಯಾಣದಲ್ಲಿ ಭೂಪಿಂದರ್ ಹೂಡಾ ಮತ್ತು ಕುಮಾರಿ ಸೆಲ್ಜಾ ನಡುವೆ ಬಹಳ ದಿನಗಳಿಂದಲೇ ಭಿನ್ನಾಭಿಪ್ರಾಯಗಳಿದ್ದವು. ಸೆಲ್ವಾ ಅವರು ಬಿಜೆಪಿ ಸೇರುತ್ತಾರೆಂಬ ಚರ್ಚೆಯೂ ಇತ್ತು. ಆದಾಗ್ಯೂ, ರಾಹುಲ್ ಗಾಂಧಿ ಅವರ ಮಧ್ಯಪ್ರವೇಶಿಕೆಯಿಂದ ಸೆಲ್ವಾ ಕಾಂಗ್ರೆಸ್‌ನಲ್ಲಿಯೇ ಉಳಿದರು.
ಆದರೆ, ಹೂಡಾ ಮತ್ತು ಸೆಲ್ವಾ ನಡುವಿನ ಒಳಜಗಳ ಕೊನೆಗಾಣಲಿಲ್ಲ. ಒಟ್ಟಿಗೆ ಚುನಾವಣಾ ಪ್ರಚಾರ ಸಭೆ ನಡೆಸಲಿಲ್ಲ. ಒಗ್ಗಟ್ಟು ಪ್ರದರ್ಶಿಸಲಿಲ್ಲ. ಜೊತೆಗೆ, ಕಾಂಗ್ರೆಸ್‌ನಿಂದ ಬಂಡಾಯವೆದ್ದು ಹಲವರು ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಆ ಬಂಡಾಯವನ್ನೂ ಕಾಂಗ್ರೆಸ್ ತಡೆಯಲಾಗಲಿಲ್ಲ. ಬಂಡಾಯ ಎದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಲಿಲ್ಲ. ಇದರಿಂದಾಗಿಯೇ ಕಾಂಗ್ರೆಸ್ ಅಲ್ಲಿ ಮಣ್ಣು ಮುಕ್ಕಿತು.
ಅಂಥದ್ದೇ ಪರಿಸ್ಥಿತಿ ಕರ್ನಾಟಕದಲ್ಲಿಯೂ ಚುನಾವಣೆಗೂ ಮುನ್ನವೇ ಇತ್ತು. ಆದರೆ, ಇಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ತಿಕ್ಕಾಟವನ್ನು ಬದಿಗಿಟ್ಟು, ಗೆಲುವಿಗಾಗಿ ಒಗ್ಗಟ್ಟಿನಿಂದ ದುಡಿದರು. ಎಲ್ಲರ ವಿಶ್ವಾಸ ಗಳಿಸಿ, ಗೆಲುವು ಕಂಡರು. ಆದರೆ, ಈಗ ಆ ಒಗ್ಗಟ್ಟು ಕಾಣೆಯಾಗುತ್ತಿದೆ. ಸಚಿವರು ತಮ್ಮದೇ ಬಣಗಳನ್ನು ಕಟ್ಟಿಕೊಂಡು ಸೆಣಸಾಡುತ್ತಿದ್ದಾರೆ.
ತಮ್ಮ ಸೆಣಸಾಟದ ಬಗ್ಗೆ ರಾಷ್ಟ್ರೀಯ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿ ಹೆಚ್ಚು ತಲೆದೂರಿದಂತೆ ತಡೆಯಲು ರಾಷ್ಟ್ರಮಟ್ಟದ ಕೆಲವು ನಾಯಕರನ್ನೂ ಈ ಸಚಿವರು ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಈ ಆಟಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮತ್ತು ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ತಮ್ಮ ಮತ್ತು ಹೈಕಮಾಂಡ್ ನಡುವೆ ತಡೆಗೋಡೆಯಂತೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಇದೆ.

ರಾಜ್ಯದ ಸಚಿವರಿಗೆ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಗಾಡ್ ಫಾದರ್‌ಗಳಾಗಿದ್ದಾರೆ. ಕೆಲವು ಸಚಿವರು ತಮ್ಮ ಕೆಲಸಕ್ಕಾಗಿ ವೇಣುಗೋಪಾಲ್ ಬಳಿಗೆ ದೌಡಾಯಿಸಿದರೆ, ಕೆಲವರು ಸುರ್ಜೇವಾಲಾ ಬಳಿಗೆ ಓಡುತ್ತಾರೆ. ಅವರ ಮೂಲಕವೇ ಹೈಕಮಾಂಡ್ ಬಳಿ ತಮ್ಮ ಬೇಡಿಕೆ, ಪ್ರಸ್ತಾಪ, ಅಗತ್ಯಗಳು ಹಾಗೂ ಕೆಲಸಗಳನ್ನು ಸರಾಗವಾಗಿ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ, ಈ ಇಬ್ಬರಿಗೂ ಕಪ್ಪವೂ ಸಂದಾಯವಾಗುತ್ತದೆ ಎಂಬ ದೂರುಗಳಿವೆ. ಹೀಗಾಗಿ, ಹೈಕಮಾಂಡ್ ಮಾತಿಗೂ ಬಗ್ಗದೆ ಇಲ್ಲಿನ ಸಚಿವರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ವದಂತಿ ಹಬ್ಬಿಸುತ್ತಿದ್ದಾರೆ. ವಿವಾದವನ್ನೂ ಸೃಷ್ಟಿಸುತ್ತಿದ್ದಾರೆ.
ಒಂದು ವೇಳೆ, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ, ಆ ಸ್ಥಾನಕ್ಕೆ ‘ನಾ ಮುಂದು, ತಾ ಮುಂದು’ ಎಂಬಂತೆ ಓಟದಲ್ಲಿದ್ದಾರೆ. ಗೌಪ್ಯ ಸಭೆಗಳನ್ನೂ ನಡೆಸುತ್ತಿದ್ದಾರೆ. ಆದರೆ, ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಆಸ್ಪದವೇ ಇಲ್ಲ ಎಂದು ಹೈಕಮಾಂಡ್ ಹೇಳಿದೆ. ರಾಜೀನಾಮೆ ಕೊಡುವ ಮಾತೇ ಇಲ್ಲವೆಂದು ಸಿದ್ದರಾಮಯ್ಯ ಕೂಡ ಹೇಳಿದ್ದಾರೆ. ಆದರೂ, ಈ ಗೌಪ್ಯಸಭೆಗಳು ಯಾಕೆ ಎಂಬ ಪ್ರಶ್ನೆಗಳು ಮುನ್ನೆಲೆಯಲ್ಲಿವೆ.
ಹೈಕಮಾಂಡ್ ಮಾತಿಗೆ ಮನ್ನಣೆ ಕೊಡುತ್ತೇವೆ. ಹೈಕಮಾಂಡ್ ಸೂಚನೆಯಂತೆ ನಡೆಯುತ್ತೇವೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಇದೆಲ್ಲವೂ ಮಾತಿಗಷ್ಟೇ ಸೀಮಿತವಾಗಿದೆ. ಕೆ.ಎನ್ ರಾಜಣ್ಣ, ಪರಮೇಶ್ವರ್, ಮಹದೇವಪ್ಪ ಸೇರಿದಂತೆ ಹಲವು ಸಚಿವರು ಪದೇ-ಪದೇ ಪರೋಕ್ಷವಾಗಿ ತಮ್ಮವರ ವಿರುದ್ಧವೇ ಮಾತನಾಡುತ್ತಿದ್ದಾರೆ. ಹೈಕಮಾಂಡ್ ಮಾತಿಗೂ ಬೆಲೆ ಇಲ್ಲದಂತಾಗಿದೆ.
ಈ ತಿಕ್ಕಾಟ ಹೀಗೆಯೇ ಮುಂದುವರೆದರೆ, ಇದು ಮುಂದಿನ ಚುನಾವಣೆಯ ವೇಳೆಗೆ ಬಿಜೆಪಿ ಮತ್ತೆ ಪುಟಿದೇಳಲು ನೆರವಾಗುತ್ತದೆ. ಈಗಾಗಲೇ, ಮುಡಾ ಪ್ರಕರಣ, ಗೃಹಲಕ್ಷ್ಮಿ ಯೋಜನೆಯಲ್ಲಿ ಎದುರಾಗುತ್ತಿರುವ ವಿಳಂಬವೂ ಸೇರಿದಂತೆ ಗ್ಯಾರಂಟಿ ಯೋಜನೆಗಳಲ್ಲಿನ ಗೊಂದಲ, ರಾಜ್ಯದಲ್ಲಿ ಆಗ್ಗಾಗ್ಗೆ ನಡೆಯುತ್ತಿರುವ ಗಲಾಟೆಗಳು, ಬಿಜೆಪಿಗರು ನೀಡುವ ವಿವಾದಾತ್ಮಕ ಹೇಳಿಕೆಗಳು ಹಾಗೂ ಅದನ್ನು ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯವು ಕಾಂಗ್ರೆಸ್ ವಿರುದ್ಧ ಜನಸಾಮಾನ್ಯರಲ್ಲಿ ಒಂದು ರೀತಿಯ ಅಸಹನೆ ಹುಟ್ಟುಹಾಕಿದೆ.
ಇಂತಹ ಸಂದರ್ಭದಲ್ಲಿ ಸರ್ಕಾರವನ್ನು ಒಗ್ಗಟ್ಟಿನಿಂದ ನಡೆಸಬೇಕಾದ ಕರ್ತವ್ಯ ಪ್ರತಿಯೊಬ್ಬ ಸಚಿವರ ಹೆಗಲ ಮೇಲಿದೆ. ದೂಷಣೆಗಳಿಗೆ ಅವಕಾಶ ಕೊಡದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯೂ ಇದೆ. ವಿರೋಧಿಗಳಿಗೆ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಆಸ್ಪದ ಕೊಡದಂತೆ ಗಮನಹರಿಸಬೇಕಾದ ಜವಾಬ್ದಾರಿಯೂ ಇದೆ.
ಆದರೆ, ಇದ್ಯಾವುದನ್ನೂ ಲೆಕ್ಕಿಸದೆ, ಯಾವುದಕ್ಕೂ ತಲೆ ಕೆಡಿಸಕೊಳ್ಳದ ಸಚಿವರು ಸ್ವಾರ್ಥ ರಾಜಕಾರಣದಲ್ಲಿಯೇ ಮೀಯುತ್ತಿದ್ದಾರೆ. ತಮ್ಮ ಸ್ವಾರ್ಥದಿಂದಲೇ ಬಿಜೆಪಿ-ಜೆಡಿಎಸ್‌ಗೆ ಮತ್ತೆ-ಮತ್ತೆ ಅವಕಾಶ ಕೊಡುತ್ತಿದ್ದಾರೆ. ಸಚಿವರ ಬಾಯಿಗೆ ಬೀಗ ಹಾಕದಿದ್ದರೆ, ರಾಜ್ಯದಲ್ಲಿಯೂ ಕಾಂಗ್ರೆಸ್ ಮತ್ತೆ ಹಿಂದೆ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ.