ಇತರ ರಾಜ್ಯಗಳಿಗೆ ಬಂದ ಹೂಡಿಕೆಗಳನ್ನು ಗುಜರಾತಿನಲ್ಲಿ ತಂದು ಸುರಿಯುತ್ತಿದೆ ಮೋದಿ ಸರ್ಕಾರ!

Date:

Advertisements

ಮೋದಿಯವರು ಪ್ರಧಾನಿಯಾದಾಗಿನಿಂದ ಅವರ ತವರು ರಾಜ್ಯವಾದ ಗುಜರಾತ್‌ ಕಡೆಗೆ ಹೆಚ್ಚೆಚ್ಚು ಒಲವು ತೋರಿಸಿರುವುದನ್ನು ಅನೇಕರು ಗ್ರಹಿಸಿದ್ದಾರೆ. ಭಾರತದ ಪ್ರಮುಖ ಮಿಲಿಟರಿ ಪ್ರದರ್ಶನ DefExpo ನಂತಹ ಹೈ-ಪ್ರೊಫೈಲ್ ಕಾರ್ಯಕ್ರಮಗಳ ಕಾರ್ಯತಂತ್ರಗಳನ್ನು ಸ್ಥಳಾಂತರ ಮಾಡಿದ್ದನ್ನು ನೋಡಿದರೆ, ಉಳಿದ ರಾಜ್ಯಗಳನ್ನು ಕತ್ತಲಲ್ಲಿಟ್ಟು ಗುಜರಾತನ್ನು ಬೆಳಕಿನಲ್ಲಿ ಜಗಮಗಿಸುವಂತೆ ಮಾಡಿದ್ದು ಎಲ್ಲರಿಗೂ ಕಾಣುವಂತಿದೆ. (ದಿ ನ್ಯೂಸ್‌ ಮಿನಿಟ್‌ನ ವಿಶೇಷ ವರದಿ)

ಬೇರೆ ಯಾವ ರಾಜ್ಯಗಳಿಗೂ ಇನ್ನೂ ಸಿಗದ ಕೇಂದ್ರ ಸರ್ಕಾರದ ಲಾಭದಾಯಕ ಪ್ರೋತ್ಸಾಹಧನ ಗುಜರಾತಿಗೆ ಹರಿದು ಹೋಗುತ್ತಿದೆ. ಆರ್ಥಿಕವಾಗಿ ಮಲತಾಯಿ ಧೋರಣೆಯನ್ನು ತೋರುತ್ತಿರುವ ಕೇಂದ್ರ ಸರ್ಕಾರದ ಈ ನಡೆ ದೇಶದ ಒಕ್ಕೂಟ ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ.

ಅಮೆರಿಕದ ಒಂದು ಸೆಮಿಕಂಡಕ್ಟರ್ ಕಂಪನಿಯು 2022ರಲ್ಲಿ ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ದೊಡ್ಡ ಪ್ರಮಾಣದ ಬಂಡವಾಳವನ್ನು ಹೂಡಲು ಆಸಕ್ತಿಯನ್ನು ತೋರಿತ್ತು. ಕಂಪನಿಯ ಅಧಿಕಾರಿಗಳು ತಮ್ಮ ಕಾರ್ಯೋದ್ದೇಶಗಳನ್ನು ಚರ್ಚಿಸಲು ವಾಣಿಜ್ಯ ಸಚಿವರನ್ನು ಭೇಟಿ ಮಾಡಲು ನವದೆಹಲಿಗೆ ಬಂದಿದ್ದರು. ಬೇಟಿಯನ್ನು ಮುಗಿಸಿ ಹೊರಬಂದಾಗ ಅವರಿಗೆ ಒಂದು ಆಶ್ಚರ್ಯ ಕಾದಿತ್ತು. ಚೆನ್ನೈನಲ್ಲಿ ತಮ್ಮ ಹೂಡಿಕೆಯನ್ನು ಅಂತಿಮಗೊಳಿಸುವ ಮೊದಲೇ ಅವರನ್ನು ಗುಜರಾತ್‌ಗೆ ಕರೆದುಕೊಂಡು ಹೋಗಲು ಹೆಲಿಕಾಪ್ಟರ್ ಸಿದ್ಧವಾಗಿತ್ತು. “ಆ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ಗೆ ನೀಡುವಂತೆ ಅವರ (ಕಂಪನಿಯವರ) ಮನವೊಲಿಸಲು ಅವರು ಹೆಚ್ಚು ಸಮಯ ತೆಗೆದುಕೊಳ್ಳಲೇ ಇಲ್ಲ,” ಎಂದು ತಮಿಳುನಾಡು ಸಚಿವರೊಬ್ಬರ ಆಪ್ತ ಮೂಲವು ದಿ ನ್ಯೂಸ್‌ ಮಿನಿಟ್‌ಗೆ ತಿಳಿಸಿದೆ.

Advertisements
Semiconductor 1

ಮಸಾಲಾ ಸಿನಿಮಾದಂತೆ ನಡೆದ ಈ ಹೆಲಿಕಾಪ್ಟರ್ ರಾಜತಾಂತ್ರಿಕತೆ ಬೇರೆ ರಾಜ್ಯಗಳಿಗೆ ಬಂದ ಹೂಡಿಕೆಗಳನ್ನು ಗುಜರಾತಿನ ಕಡೆಗೆ ತಿರುಗಿಸುವ ಮೋದಿ ಸರ್ಕಾರದ ಹೀನಾಯ ನಡೆಗೆ ಒಂದು ಉದಾಹರಣೆ. ರಾಜಕೀಯ ನಾಯಕರು, ಅದರಲ್ಲೂ ವಿಶೇಷವಾಗಿ ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳು ಈ ಬಗ್ಗೆ ಪದೇ ಪದೇ ಕಳವಳ ವ್ಯಕ್ತಪಡಿಸಿವೆ. 2024ರ ಲೋಕಸಭೆ ಚುನಾವಣೆಗೆ ಮುನ್ನ, ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ತಮ್ಮ ರಾಜ್ಯಕ್ಕೆ ಬಂದಿದ್ದ 6,000 ಕೋಟಿ ರೂಪಾಯಿ ಹೂಡಿಕೆಯನ್ನು ಗುಜರಾತ್‌ಗೆ ವರ್ಗಾಯಿಸುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದರು. ಅದೇ ರೀತಿ, ತೆಲಂಗಾಣದ ಮಾಜಿ ಐಟಿ ಸಚಿವ ಕೆಟಿಆರ್ ಕೂಡ ಕೇಂದ್ರ ಸರ್ಕಾರವು ಬಹುರಾಷ್ಟ್ರೀಯ ಕಂಪನಿಗಳನ್ನು ಗುಜರಾತ್‌ಗೆ ಸ್ಥಳಾಂತರಿಸಲು “ಕೈ ಹಿಸುಕಿದೆ” ಎಂದು ಆರೋಪಿಸಿದ್ದರು. ಕರ್ನಾಟಕದ ಐಟಿ ಸಚಿವ ಪ್ರಿಯಾಂಕ್ ಖರ್ಗೆಯವರೂ ಹೂಡಿಕೆಗಳನ್ನು ಬೇರೆಡೆಗೆ ತಿರುಗಿಸಲು ಕಂಪನಿಗಳ ಮೇಲೆ ಪ್ರಧಾನಿ ಕಚೇರಿ ಒತ್ತಡ ಹೇರುತ್ತಿವೆ ಎಂದು ಆರೋಪ ಮಾಡಿದ್ದರು.

ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಗೆ ಮೊದಲು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಹಾ ವಿಕಾಸ್ ಅಘಾಡಿ (ಎಂವಿಎ) ನಾಯಕರು ಗಂಭೀರವಾದ ಆರೋಪಗಳನ್ನು ಮಾಡಿದ್ದರು. ವಡೋದರಾದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಟಾಟಾ-ಏರ್‌ಬಸ್ ಸೌಲಭ್ಯದಂತಹ ಪ್ರಮುಖ ಯೋಜನೆಗಳನ್ನು ಉದ್ದೇಶಪೂರ್ವಕವಾಗಿ ಮಹಾರಾಷ್ಟ್ರದಿಂದ ಗುಜರಾತಿಗೆ ಕಸಿದು ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಆರೋಪಗಳೆಲ್ಲ ಸತ್ಯವೇ? ಸತ್ಯವಾಗಿದ್ದರೆ, ಇದರ ಮೋಡಸ್‌-ಒಪರಾಂಡಿ ಏನು? ಮಾಡಿದ್ದಾದರೂ ಹೇಗೆ? ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕ – ಈ ನಾಲ್ಕು ರಾಜ್ಯಗಳಾದ್ಯಂತ ಸಚಿವರು, ಅಧಿಕಾರಿಗಳು ಮತ್ತು ಕಂಪನಿಯ ಅಧಿಕಾರಿಗಳೊಂದಿಗೆ ದಿ ನ್ಯೂಸ್‌ ಮಿನಿಟ್‌ ಸಂವಹನ ನಡೆಸಿದೆ. ಹೆಚ್ಚಿನ ಮಾಹಿತಿ ಪಡೆಯಲು ಕೇಂದ್ರ ಸರ್ಕಾರ ಮತ್ತು ಗುಜರಾತ್‌ನ ಅಧಿಕಾರಿಗಳನ್ನೂ ಸಂಪರ್ಕಿಸಿದೆ.

ಕೇಂದ್ರ ಸರ್ಕಾರ ಇವೆಲ್ಲವನ್ನೂ ಸಾಧಿಸಲು ರೂಪಿಸಿರುವ ನಾಲ್ಕು ತಂತ್ರಗಳನ್ನು ನಾವು ಗುರುತಿಸಿದ್ದೇವೆ: ಕೇಂದ್ರ ಸರ್ಕಾರದಿಂದ ಗಣನೀಯ ಬಂಡವಾಳ ಸಹಾಯಧನಗಳನ್ನು ನೀಡಿದ್ದು; ಆಮದು ಸುಂಕವನ್ನು ಕಡಿಮೆ ಮಾಡಿದ್ದು; ಉತ್ಪಾದನೆಗೆ ಬೇಕಾದ ಸರ್ಕಾರಿ ಆದೇಶಗಳನ್ನು ನೀಡುವ ಭರವಸೆ ನೀಡಿದ್ದು; ಮತ್ತು ಧೋಲೆರಾ ಮತ್ತು ಗಿಫ್ಟ್ ಸಿಟಿಯನ್ನು (GIFT City) ಹೂಡಿಕೆಯ ಕೇಂದ್ರಗಳಾಗಿ ಮಾಡಲು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಆಕ್ರಮಣಕಾರಿ ರೀತಿಯಲ್ಲಿ ಪ್ರಚಾರ ಮಾಡಿದ್ದು.‌ ಈ ರೀತಿ ಇತರ ರಾಜ್ಯಗಳ ಪ್ರಸ್ತಾವನೆಗಳನ್ನು ಮೂಲೆಗೆಸೆದು, ಗುಜರಾತ್‌ಗೆ ಬಿಗ್-ಟಿಕೆಟ್ ಸರ್ಕಾರಿ ಯೋಜನೆಗಳನ್ನು ನೀಡಲು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ನಿರ್ಧರಿಸಿದ ಅನೇಕ ನಿದರ್ಶನಗಳಿವೆ.

ನರೇಂದ್ರ ಮೋದಿಯವರು ಪ್ರಧಾನಿಯಾದಾಗಿನಿಂದ ಅವರ ತವರು ರಾಜ್ಯವಾದ ಗುಜರಾತ್‌ ಕಡೆಗೆ ಹೆಚ್ಚೆಚ್ಚು ಒಲವು ತೋರಿಸಿರುವುದನ್ನು ಅನೇಕರು ಗ್ರಹಿಸಿದ್ದಾರೆ. ಭಾರತದ ಪ್ರಮುಖ ಮಿಲಿಟರಿ ಪ್ರದರ್ಶನ DefExpo ನಂತಹ ಹೈ-ಪ್ರೊಫೈಲ್ ಕಾರ್ಯಕ್ರಮಗಳ ಕಾರ್ಯತಂತ್ರಗಳನ್ನು ಸ್ಥಳಾಂತರ ಮಾಡಿದ್ದನ್ನು ನೋಡಿದರೆ, ಉಳಿದ ರಾಜ್ಯಗಳನ್ನು ಕತ್ತಲಲ್ಲಿಟ್ಟು ಗುಜರಾತನ್ನು ಬೆಳಕಿನಲ್ಲಿ ಜಗಮಗಿಸುವಂತೆ ಮಾಡಿದ್ದು ಎಲ್ಲರಿಗೂ ಕಾಣುವಂತಿದೆ.

ಮೈಕ್ರಾನ್‌ನ ಕಥೆ

ಜೂನ್ 2023ರಲ್ಲಿ, ಯುಎಸ್ ಮೂಲದ ಮೈಕ್ರೋನ್ ಟೆಕ್ನಾಲಜಿಯು 825 ಮಿಲಿಯನ್ ಯುಎಸ್‌ಡಿಯನ್ನು (ಸುಮಾರು 6,770 ಕೋಟಿ ರುಪಾಯಿಯನ್ನು) ಸನಂದ್-ಜಿಐಡಿಸಿ (ಗುಜರಾತ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್) ನಲ್ಲಿ ಅಹಮದಾಬಾದ್ ಬಳಿಯ ಇರುವ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಪರೀಕ್ಷಾ ಸೌಲಭ್ಯದಲ್ಲಿ ಹೂಡಿಕೆ ಮಾಡುವ ಯೋಜನೆಯೊಂದನ್ನು ಪ್ರಕಟಿಸಿತ್ತು. ಇದು ಪ್ರಧಾನಿ ಮೋದಿಯವರ ಅಮೆರಿಕ ಭೇಟಿಯ ಸಮಯದಲ್ಲಿ, ಅಲ್ಲಿ ಹೋಗಿ ಗುಜರಾತನ್ನು ಒಂದು ದೊಡ್ಡ ಹೂಡಿಕೆ ಕೇಂದ್ರವಾಗಿ ಅವರು ತೋರಿಸಿದ ಫಲ. ಮೂಲಗಳ ಪ್ರಕಾರ, ಮೈಕ್ರಾನ್ ತನ್ನ ಸೆಮಿಕಂಡಕ್ಟರ್ ಅಸೆಂಬ್ಲಿ ಘಟಕವನ್ನು ಸ್ಥಾಪಿಸಲು ದೇಶದಲ್ಲಿ ಸ್ಥಳಗಳನ್ನು ಹುಡುಕುತಿತ್ತು ಮತ್ತು ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಅದನ್ನು ಸ್ಥಾಪಿಸಲು ಆಸಕ್ತಿ ಹೊಂದಿತ್ತು. ಆದರೆ ಕೊನೆಯಲ್ಲಿ ಅವರು ಈ ಕೆಲಸ ಮಾಡಿದ್ದು ಗುಜರಾತ್‌ನಲ್ಲಿ!

Semiconductor
ಗುಜರಾತಿನಲ್ಲಿ ಸೆಮಿಕಂಡಕ್ಟರ್‌ ಘಟಕಕ್ಕೆ ಶಂಖುಸ್ಥಾಪನೆ

ಕಂಪನಿಯ ಪ್ರಕಾರ 2.75 ಶತಕೋಟಿ ಯುಎಸ್‌ ಡಾಲರ್‌ ಒಟ್ಟು ಯೋಜನಾ ವೆಚ್ಚದ 70% (2 ಶತಕೋಟಿ ಯುಎಸ್‌ ಡಾಲರ್‌) ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರದಿಂದ ಬರುತ್ತಿದೆ.

ಇದರಿಂದ ವಿರೋಧ ಪಕ್ಷದ ನಾಯಕರಿಗಷ್ಟೇ ಅಲ್ಲ – ಎನ್‌ಡಿಎ ಮಿತ್ರಪಕ್ಷಗಳೂ ಕೂಡ ಅಸಮಾಧಾನಗೊಂಡಿವೆ. ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬೆಂಗಳೂರಿಗೆ ಬಂದ ಎಚ್‌ಡಿ ಕುಮಾರಸ್ವಾಮಿ ಅವರು ಖಾಸಗಿ ಕಂಪನಿಯಲ್ಲಿ ಕೇಂದ್ರ ಸರ್ಕಾರದ ಬೃಹತ್ ಬಂಡವಾಳ ಹೂಡಿಕೆಯ ಹಿಂದಿನ ತಂತ್ರವನ್ನು ಪ್ರಶ್ನೆ ಮಾಡಿದ್ದರು. ಆನಂತರ ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರೂ, ಅವರು ತೋರಿದ್ದ ಕಳವಳ ಮೈಕ್ರಾನ್‌ ತಮ್ಮ ಕೈಯಿಂದ ಜಾರಿಹೋಗಿ ನಿರಾಶೆಗೊಂಡಿದ್ದ ತೆಲಂಗಾಣ ಮತ್ತು ತಮಿಳುನಾಡಿನ ಹತಾಶೆಯನ್ನೇ ಪ್ರತಿಬಿಂಬಿಸುತ್ತದೆ.

ಮೈಕ್ರಾನ್‌ನ 2019 ರಲ್ಲಿ ಹೈದರಾಬಾದ್‌ನಲ್ಲಿ ತನ್ನ ಸಂಶೋಧನಾ ಮತ್ತು ಅಭಿವೃದ್ಧಿ ಸೌಲಭ್ಯವನ್ನು ( ಆರ್ & ಡಿ ಸೌಲಭ್ಯ) ಆರಂಭಿಸುವುದರೊಂದಿಗೆ ಭಾರತದ ಒಳಗೆ ಹೆಜ್ಜೆಯಿಟ್ಟಿತು. ಆ ನಗರದ ಟೆಕ್ ಕಾರಿಡಾರ್‌ನಲ್ಲಿ ಕಾರ್ಯತಂತ್ರದ ಬೀಜವನ್ನು ಬಿತ್ತಿತು. ಈ ಟೆಕ್‌ ಹಬ್ ನಲ್ಲಿ ಹೈದರಾಬಾದ್‌ನ ಎಂಜಿನಿಯರಿಂಗ್ ಪ್ರತಿಭೆಯನ್ನು ಹೆಚ್ಚಿಸುವ ಮೂಲಕ ಮೆಮೊರಿ ಮತ್ತು ಶೇಖರಣಾ ತಂತ್ರಜ್ಞಾನದ ಪ್ರಗತಿ ಕೇಂದ್ರವಾಗಿ ರೂಪಿಸಲಾಗಿದೆ. ಕೆಲವೇ ವರ್ಷಗಳಲ್ಲಿ ಸೌಲಭ್ಯಕ್ಕೆ 5,000ಕ್ಕೂ ಹೆಚ್ಚು ಜನರು ನೇಮಕಗೊಂಡರು, ಇದು ಇಡೀ ಭಾರತದಲ್ಲಿಯೇ ಮೈಕ್ರಾನ್‌ ನಿರ್ಮಿಸಿದ ಅತಿದೊಡ್ಡ ಆರ್‌&ಡಿ ಮೈಲುಗಲ್ಲಾಗಿದೆ. 2023ರ ಹೊತ್ತಿಗಾಗಲೇ ಮೈಕ್ರಾನ್‌ ತನ್ನ ಮುಂದಿನ ಅಧಿಕ ಪ್ರಮಾಣದ ಉತ್ಪಾದನೆಯನ್ನು ನಡೆಸಲು ಹೈದರಾಬಾದನ್ನು ತಾರ್ಕಿಕವಾಗಿಯೇ ಆಯ್ಕೆ ಮಾಡಿಕೊಂಡಿತು. ತೆಲಂಗಾಣ ಸರ್ಕಾರವೂ ದಾವೋಸ್‌ನಲ್ಲಿ ಪ್ರಮುಖ ಘೋಷಣೆಯೊಂದನ್ನು ಮಾಡಲು ತಯಾರಿ ನಡೆಸುತ್ತಿದ್ದಂತೆ, ಕೇಂದ್ರ ಸರ್ಕಾರದ ಒತ್ತಡದ ಮೇರೆಗೆ ಈ ಯೋಜನೆಯು ಇದ್ದಕ್ಕಿದ್ದಂತೆ ಗುಜರಾತ್‌ಗೆ ಸ್ಥಳಾಂತರಗೊಂಡಿತು.

ತೆಲಂಗಾಣ ಸರ್ಕಾರದೊಂದಿಗೆ ಕೆಲಸ ಮಾಡಿರುವ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂಸ್‌ ಮಿನಿಟ್‌ಗೆ, “ನೀವು ಈ ಯೋಜನೆಯನ್ನು ಗುಜರಾತ್‌ಗೆ ಏಕೆ ಕೊಟ್ಟಿರಿ ಎಂದು ಕೇಳಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ” ಎಂದು ಹೇಳಿದ್ದಾರೆ. ಇದಕ್ಕೆ ಉತ್ತರವಾಗಿ ಭಾರತ ಸರ್ಕಾರದ ಅಧಿಕಾರಿಗಳು 2021ರಲ್ಲಿ ಜಾರಿಗೆ ತಂದ ಭಾರತದ ಸೆಮಿಕಂಡಕ್ಟರ್ ನೀತಿಯನ್ನು ಉಲ್ಲೇಖಿಸಿದರು. ಈ ನೀತಿ ಇತರ ರಾಜ್ಯಗಳಿಗೆ ಯೋಜನೆಗಳನ್ನು ವಿಸ್ತರಣೆ ಮಾಡಲು ಪರಿಗಣಿಸುವ ಮೊದಲು ತೈವಾನ್‌ನಲ್ಲಿರುವಂತೆ ಕ್ಲಸ್ಟರ್‌ಗಳನ್ನು ನಿರ್ಮಿಸುವ ಅಗತ್ಯತೆಯ ಬಗ್ಗೆ ಹೇಳುತ್ತದೆ. “ಈ ಮುಖ್ಯ ಕ್ಲಸ್ಟರ್ ಸಂಪೂರ್ಣವಾಗಿ ತನ್ನ ಕೆಲಸವನ್ನು ಆರಂಭಿಸಿದ ನಂತರವೇ ಮತ್ತು ಸ್ಯಾಚುರೇಟೆಡ್ ಆದ ನಂತರವೇ ಇತರ ರಾಜ್ಯಗಳಲ್ಲಿ ಹೆಚ್ಚುವರಿ ಸೌಲಭ್ಯಗಳನ್ನು ಆರಂಭಿಸಲು ಪರಿಗಣಿಸಲಾಗುವುದು ಎಂದು ಅವರು ನಮಗೆ ತಿಳಿಸಿದರು” ಎಂದು ಆ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 2023ರಲ್ಲಿ ತೆಲಂಗಾಣದಿಂದ ಕೇನ್ಸ್ ಟೆಕ್ನಾಲಜಿ ಯೋಜನೆ ಕೈಜಾರಿ ಗುಜರಾತ್‌ಗೆ ಹೋದಾಗಲೂ ಇದೇ ರೀತಿಯ ನೆಪವನ್ನು ನೀಡಲಾಗಿತ್ತು.

ಅರೆವಾಹಕಗಳ ಉತ್ಪಾದನೆಗೆ ಉತ್ಕೃಷ್ಟ ಗುಣಮಟ್ಟದ ಪರಿಸರ ವ್ಯವಸ್ಥೆಗಳನ್ನು ನಿರ್ಮಿಸಿರುವ ತೆಲಂಗಾಣ, ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಿಗಿಂತ ಗುಜರಾತನ್ನೇ ಕ್ಲಸ್ಟರ್‌ ನಿರ್ಮಿಸಲು ಏಕೆ ಆಯ್ಕೆ ಮಾಡಲಾಗಿದೆ ಎಂಬುದಕ್ಕೆಯಾವುದೇ ಉತ್ತರ ನೀಡಿಲ್ಲ ಎಂದಿರುವ ಆ ಅಧಿಕಾರಿ, “ಉದಾಹರಣೆಗೆ ತೆಲಂಗಾಣ, ಎಲೆಕ್ಟ್ರಾನಿಕ್ಸ್‌ನಲ್ಲಿ 1,000 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು(MSME) ಹೊಂದಿದೆ. ಇದು ಸೆಮಿಕಂಡಕ್ಟರ್ ಉತ್ಪಾದನೆಗೆ ಬೇಕಾದ ಪರಿಸರ ವ್ಯವಸ್ಥೆಯನ್ನು ರೂಪಿಸಲು ಸಹಕಾರಿಯಾಗಿದೆ” ಎಂದು ಹೇಳಿದ್ದಾರೆ.

ವರ್ಷಗಳು ಕಳೆದಂತೆ ಟಾಟಾ, ಮೈಕ್ರಾನ್, ಮುರುಗಪ್ಪ (ಟಿಎಸ್ಎಂಸಿ ಪಾಲುದಾರಿಕೆ), ಮತ್ತು ಕೇನ್ಸ್ – ಎಂಬ ನಾಲ್ಕು ಪ್ರಮುಖ ಕಂಪನಿಗಳು ಗುಜರಾತಿನಲ್ಲಿ ಬೀಡುಬಿಟ್ಟಿವೆ. ಈಗ ಭಾರತ ಸರ್ಕಾರ ಇತರ ರಾಜ್ಯಗಳಲ್ಲಿಯೂ ಸೆಮಿಕಂಡಕ್ಟರ್ ಘಟಕಗಳನ್ನು ಆರಂಭಿಸಲು ಮುಂದಾಗಿದೆ, ಆದರೆ ಈ ಉತ್ಪಾದನೆಗೆ ಪೂರಕವಾದ ಪರಿಸರ ವ್ಯವಸ್ಥೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಅಲ್ಲ, ಬದಲಾಗಿ ಉತ್ತರ ಪ್ರದೇಶ ಮತ್ತು ಅಸ್ಸಾಂನಂತಹ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ!

ಮೊದಲು ಗುಜರಾತಿಗೆ, ಆಮೇಲೆ ಯುಪಿಗೆ – ‘ಶತ್ರು ರಾಜ್ಯಗಳಿಗೆ’ ಏನೂ ಇಲ್ಲ!

ಜೂನ್ 2023 ರಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಸ್ಥಳೀಯ ಅರೆವಾಹಕ ಪೂರೈಕೆಯ ಜಾಲವನ್ನು ಹೆಚ್ಚಿಸುವ ಭರವಸೆಯೊಂದಿಗೆ ಚೆನ್ನೈನ ಟೈಡೆಲ್ ಪಾರ್ಕ್‌ನಲ್ಲಿರುವ ಸೌಲಭ್ಯದಲ್ಲಿಯೇ ಸುಮಾರು 2.75 ಶತಕೋಟಿ ಡಾಲರ್ ಹೂಡಿಕೆ ಮಾಡುವ ಯೋಜನೆಯನ್ನು ಕಂಪನಿಯೊಂದು ಘೋಷಿಸಿತ್ತು. ಈ ಪ್ರಕಟಣೆ ಬಂದು ಹೆಚ್ಚು ಸಮಯವಾಗಿಲ್ಲ, ಆ ಕಂಪನಿಯು ತನ್ನ ಗಮನವನ್ನು ಗುಜರಾತ್‌ಗೆ ತಿರುಗಿಸಿತು. ತನ್ನ ಯೋಜನೆಯನ್ನು ಗುಜರಾತಿಗೆ ಸ್ಥಳಾಂತರಿಸಲು ಅದರ ಮೇಲೆ ಒತ್ತಡ ಹೇರಲಾಗಿತ್ತು ಎಂಬುದು ವರದಿಯಾಗಿತ್ತು.

ಮೇ 2023 ರಲ್ಲಿ, ಚೆನ್ನೈ ಮೂಲದ ಸೆಮಿಕಂಡಕ್ಟರ್ ಕಂಪನಿಯು ಕರ್ನಾಟಕದಲ್ಲಿ ಗಮನಾರ್ಹ ಪ್ರಮಾಣದ ಹೂಡಿಕೆ ಮಾಡಲು ಸಿದ್ಧವಾಗಿತ್ತು. ಬೆಂಗಳೂರಿನಲ್ಲಿ ಈಗಾಗಲೇ ಇರುವ ಸೆಮಿಕಂಡಕ್ಟರ್ ಉತ್ಪಾದನೆಗೆ ಬೇಕಾದ ಪೂರಕ ಪರಿಸರ ವ್ಯವಸ್ಥೆಯ ಲಾಭ ಪಡೆಯಲು ಅದು ಮುಂದಾಗಿತ್ತು. ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳು ಹಬ್ ಒಂದನ್ನು ನಿರ್ಮಿಸಲು ಎಲ್ಲಾ ರೀತಿಯಲ್ಲೂ ಸರಿಯಾದ ಆಯ್ಕೆಗಳು ಎಂದು ಆ ಕಂಪನಿ ಭಾವಿಸಿತ್ತು. ಇಷ್ಟೆಲ್ಲಾ ಆದ ಮೇಲೆ, ಕೇವಲ ಒಂದೇ ಒಂದು ವಾರದ ನಂತರ, ಈ ಕಂಪನಿಯು ಇನ್ನು ಮುಂದೆ ಕರ್ನಾಟಕದಲ್ಲಿ ಹೂಡಿಕೆ ಮಾಡದಿರುವ ತನ್ನ ನಿರ್ಧಾರವನ್ನು ತಿಳಿಸಿತು. ಇದಕ್ಕೆ ಕಾರಣವನ್ನು ನೀಡುವಾಗ ದೆಹಲಿಯಿಂದ ಬಂದಿರುವ ‘ಅನಿರೀಕ್ಷಿತ ನಿರ್ದೇಶನ’ವನ್ನು ಉಲ್ಲೇಖಿಸಿತು. “ಆದ್ಯತೆಯ ಮೇರೆಗೆ ಮೊದಲು ಗುಜರಾತ್ ಮೇಲೆ ಕೇಂದ್ರೀಕರಿಸುವುದು, ನಂತರ ಉತ್ತರ ಪ್ರದೇಶದ ಕಡೆಗೆ ಗಮನ ನೀಡುವಂತೆ ಅವರಿಗೆ (ಕಂಪನಿಗೆ) ತಿಳಿಸಲಾಯಿತು. ಕರ್ನಾಟಕದಂತಹ ವಿರೋಧ ಪಕ್ಷಗಳ-ಆಡಳಿತ ಇರುವ ರಾಜ್ಯಗಳನ್ನು’ಶತ್ರು ರಾಜ್ಯ’ ಎಂದು ಕರೆದು, ಅಂತಹ ರಾಜ್ಯಗಳಲ್ಲಿ ಹೂಡಿಕೆ ಮಾಡದಂತೆ ಅವರಿಗೆ ಸ್ಪಷ್ಟವಾಗಿ ಎಚ್ಚರಿಕೆ ನೀಡಲಾಯಿತು,” ಎಂದು ಕರ್ನಾಟಕ ಸರ್ಕಾರದ ಮೂಲಗಳು ತಿಳಿಸಿವೆ.

ಭಾರತದ ರಾಜ್ಯಗಳಲ್ಲಿ ಎಲೆಕ್ಟ್ರಾನಿಕ್ಸ್ ರಫ್ತು ಮಾಡುವ ಅತಿದೊಡ್ಡ ರಾಜ್ಯ ತಮಿಳುನಾಡಿನಲ್ಲೂ ಇದೇ ಕಥೆ. “ನಾವು ಪ್ರತಿಭೆಗಳ ಒಂದು ಸಮುದ್ರವನ್ನೇ ಹೊಂದಿದ್ದೇವೆ. ಆರ್&ಡಿ ವ್ಯವಸ್ಥೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸ್ಥಳೀಯ ಮಾರುಕಟ್ಟೆಯನ್ನು ಹೊಂದಿದ್ದೇವೆ. ಅನೇಕ ವರ್ಷಗಳಿಂದ ನಮ್ಮ ರಾಜ್ಯವು ಸೆಮಿಕಂಡಕ್ಟರ್ ತಯಾರಿಕೆಯಲ್ಲಿ ಹೂಡಿಕೆ ಮಾಡಲು ಎಂಎನ್‌ಸಿಗಳನ್ನು ಬೆಳೆಸುತ್ತಿದೆ” ಎಂದು ತಮಿಳುನಾಡು ಸರ್ಕಾರದ ಅಧಿಕಾರಿಯೊಬ್ಬರು ದಿ ನ್ಯೂಸ್‌ ಮಿನಿಟ್‌ಗೆ ತಿಳಿಸಿದರು. “ಆದರೆ ದೊಡ್ಡ ಹೂಡಿಕೆಗಳ ವಿಚಾರಕ್ಕೆ ಬಂದಾಗ ಇವು ಯಾವುವೂ ಮುಖ್ಯವಲ್ಲ. ಭಾರತದಲ್ಲಿ ಉದ್ಯಮವನ್ನು ಸ್ಥಾಪಿಸಲು ಬಯಸಿದ ಒಂದು ದೊಡ್ಡ ಕಂಪನಿಗೆ ಮೋದಿ ಸರ್ಕಾರವು ಸುಮಾರು 80% ಸರ್ಕಾರಿ ಹೂಡಿಕೆಗಳನ್ನು ನೀಡುವ ಭರವಸೆ ನೀಡಿತು – ಕೇಂದ್ರದಿಂದ 50% ಮತ್ತು ರಾಜ್ಯ ಸರ್ಕಾರದಿಂದ 30%. ಆ ಕಂಪನಿಯು ತಮಿಳುನಾಡಿನೊಂದಿಗೆ ಕೈಜೋಡಿಸಲು ನಿರ್ಧರಿಸಿದರೆ, ಅವರಿಗೆ ಕೇಂದ್ರ ಸರ್ಕಾರದಿಂದ ಏನೂ ಸಿಗುವುದಿಲ್ಲ,” ಎಂದು ಆ ಅಧಿಕಾರಿ ಹೇಳುತ್ತಾರೆ.

ಕೇಂದ್ರದ ಈ ತಂತ್ರವು ಹುಬ್ಬೇರಿಸುವಂತಿದ್ದರೂ, “ನಿಜವಾದ ಪ್ರಶ್ನೆಯೆಂದರೆ, ಖಾಸಗಿ ಯೋಜನೆಗಳಲ್ಲಿ ಸರ್ಕಾರಗಳು ಹೂಡಿಕೆ ಮಾಡಲು ಹೇಗೆ ಸಾಧ್ಯ? ಇದು ಸಾರ್ವಜನಿಕ ಅನುದಾನಿತ ಕಂಪನಿಯೂ ಅಲ್ಲ,” ಎಂದು ಕರ್ನಾಟಕದ ಸಚಿವರೊಬ್ಬರು ಪ್ರಶ್ನಿಸಿದ್ದಾರೆ. “ಗುಜರಾತ್ ಸರ್ಕಾರವು ಈ ಕಂಪನಿಗಳಿಗೆ ಏನು ಕೊಡುತ್ತದೆ ಎಂಬುದನ್ನು ಮ್ಯಾಚ್‌ ಮಾಡುವುದು ನಮಗೇನು ದೊಡ್ಡ ಸವಾಲಿನ ಕೆಲಸವಲ್ಲ, ಆದರೆ ಕೇಂದ್ರ ಸರ್ಕಾರ ಚೆಕ್ ನೀಡುವಾಗ ಅದರಲ್ಲಿ ಷರತ್ತುಗಳನ್ನೂ ಲಗತ್ತಿಸುತ್ತಿದೆ. ಷರತ್ತು ಒಂದೇ, ಎಲ್ಲವೂ ಗುಜರಾತಿಗೆ ಹೋಗಬೇಕು ಎಂಬುದು” ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರಕ್ಕಾದ ದೊಡ್ಡ ನಷ್ಟ

ಜೂನ್ 2022ರಲ್ಲಿ ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಸರ್ಕಾರ ಪತನವಾದಾಗ, ಅದರ ಜೊತೆ ಜೊತೆಗೆ ರಾಜ್ಯದಲ್ಲಿದ್ದ ಹಲವಾರು ದೊಡ್ಡ ದೊಡ್ಡ ಯೋಜನೆಗಳೂ ಬಿದ್ದವು. ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿಯಾಗಿ ಹೆಜ್ಜೆ ಹಾಕುವುದರೊಂದಿಗೆ, ಹಲವಾರು ಹೈ-ಸ್ಟ್ಯಾಕ್ಸ್ ಯೋಜನೆಗಳು ಗುಜರಾತ್‌ಗೆ ಗುಳೆ ಹೋಗಲು ಆರಂಭಿಸಿದವು. ಇವುಗಳಲ್ಲಿ ವೇದಾಂತ-ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಸ್ಥಾವರ ಅತ್ಯಂತ ಪ್ರಮುಖ ಯೋಜನೆ.

ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆಗೆ ನಡೆಸಿದ ಮಾತುಕತೆಗಳಿಂದ ಕಂಡುಬಂದಂತೆ ಈ ಬದಲಾವಣೆಗೆಗೆ ಕಾರಣವಾದ ಪ್ರಾಥಮಿಕ ಅಂಶವೆಂದರೆ ಕೇಂದ್ರ ಸರ್ಕಾರವು ನೀಡಿದ ಗಣನೀಯ ಪ್ರಮಾಣದ ಪ್ರೋತ್ಸಾಹಧನದ ಭರವಸೆ ಎಂಬುದು ತಿಳಿದುಬಂದಿದೆ. ಇವುಗಳಲ್ಲಿ 30% ಬಂಡವಾಳ ಹೂಡಿಕೆ ಸಬ್ಸಿಡಿ, ಗಮನಾರ್ಹ ಭೂ ರಿಯಾಯಿತಿಗಳು, ಹೆಚ್ಚುವರಿ ಜಿಎಸ್‌ಟಿ ಕಡಿತ ಮತ್ತು ಕಡಿಮೆ ಆಮದು ಸುಂಕಗಳೂ ಸೇರಿವೆ. ನಿರ್ದಿಷ್ಟವಾಗಿ ಗುಜರಾತಿನ ವಿಶೇಷ ಆರ್ಥಿಕ ವಲಯಕ್ಕೆ (ಎಸ್‌ಇಝೆಡ್) ವಿಶೇಷವಾಗಿ ಈ ಪ್ರಯೋಜನಗಳನ್ನು ಮಾಡಿಕೊಡಲಾಗಿದೆಯೇ ಹೊರತು ಬೇರೆ ಯಾವುದೇ ರಾಜ್ಯಕ್ಕೆ ನೀಡಲಾಗಿಲ್ಲ.

2022ರ ಆರಂಭದಲ್ಲಿ, ಫಾಕ್ಸ್‌ಕಾನ್ ಭಾರತದಲ್ಲಿ ಸೆಮಿಕಂಡಕ್ಟರ್‌ಗಳನ್ನು ತಯಾರಿಸಲು ವೇದಾಂತದೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿತು. ಅದೇ ವರ್ಷ ಜುಲೈ ತಿಂಗಳಲ್ಲಿ, 22 ಶತಕೋಟಿ ಡಾಲರ್‌ನ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಫ್ಯಾಬ್ರಿಕೇಶನ್ ಸೌಲಭ್ಯದ ತಾಣವಾಗಿ ಮಹಾರಾಷ್ಟ್ರದ ತಾಲೆಗಾಂವ್ ಹೊರಹೊಮ್ಮಿತು. ಈ ಯೋಜನೆಯಲ್ಲಿ 2 ಲಕ್ಷ ಉದ್ಯೋಗಗಳನ್ನು ನೀಡುವ ಭರವಸೆಯನ್ನೂ ಕಂಪನಿ ನೀಡಿತ್ತು. ಕಂಪನಿಯು ಹಿಂದಿನ ಮಹಾ ವಿಕಾಸ್ ಅಘಾಡಿ ಸರ್ಕಾರದೊಂದಿಗೆ ಮತ್ತು ಆ ನಂತರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಅನೇಕ ಸುತ್ತಿನ ಚರ್ಚೆಗಳನ್ನು ನಡೆಸಿತ್ತು. ಮಹಾರಾಷ್ಟ್ರ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಎಂಐಡಿಸಿ) ತಾಲೇಗಾಂವ್‌ನ ನುರಿತ ಕಾರ್ಯಪಡೆ, ದೃಢವಾದ ಪೂರೈಕೆ ಜಾಲ ಮತ್ತು ವೇದಾಂತ-ಫಾಕ್ಸ್‌ಕಾನ್‌ನ ಅಗತ್ಯಗಳಿಗೆ ಪೂರಕವಾಗಿರುವ ಕೈಗಾರಿಕಾ ಮೂಲಸೌಕರ್ಯವನ್ನು ಪ್ರಚಾರಪಡಿಸುವ ನಿಟ್ಟಿನಿಂದ ಅತ್ಯಂತ ಉತ್ಸಾಹದಲ್ಲಿ ಪತ್ರಿಕಾ ಪ್ರಕಟಣೆಯನ್ನು ಸಹ ಬಿಡುಗಡೆ ಮಾಡಿತು.

ಆದರೆ ಕೆಲ ಸಮಯದ ನಂತರ, ಯಾವುದೇ ಅಧಿಕೃತ ವಿವರಣೆಯಿಲ್ಲದೆ ಈ ಯೋಜನೆಯು ಗುಜರಾತ್‌ಗೆ ಸ್ಥಳಾಂತರಗೊಂಡಿತು.

ಮೂಲಗಳ ಪ್ರಕಾರ, ವೇದಾಂತ-ಫಾಕ್ಸ್‌ಕಾನ್ ಮೌಲ್ಯಮಾಪನ ವರದಿಯು ತಾಲೇಗಾಂವನ್ನು ಹೆಚ್ಚು ಸೂಕ್ತವಾದ ಸ್ಥಳವೆಂದು ಪರಿಗಣಿಸಿತ್ತು, ಏಕೆಂದರೆ ಇದು ಪುಣೆಗೆ ಹತ್ತಿರವಿದೆ. ಅಲ್ಲದೇ ಇದು ಎಂಜಿನಿಯರಿಂಗ್ ಕಾಲೇಜುಗಳು ಮತ್ತು ದೃಢವಾದ ಪೂರೈಕೆ ಜಾಲವನ್ನು ಹೊಂದಿರುವ ನಗರ. ಇಲ್ಲಿ ಕಂಪನಿಗಳಿಗೆ ಬೇಕಾದ ನುರಿತ ಕಾರ್ಮಿಕರು ಸಿಗುತ್ತಾರೆ ಮತ್ತು ಸುವ್ಯವಸ್ಥಿತ ಲಾಜಿಸ್ಟಿಕ್ಸ್‌ ಕೂಡ ಸುಲಭವಾಗಿ ಸಿಗುತ್ತವೆ. ಈ ಅಧ್ಯಯನಗಳ ಹೊರತಾಗಿಯೂ, ಈ ಯೋಜನೆಯನ್ನು ಕೊನೆಯಲ್ಲಿ ಗುಜರಾತಿಗೆ ತಂದು ಸುರಿಯಲಾಯಿತು ಎಂದು ವರದಿಯಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಒತ್ತಡ ಹೇರಿ ತಾಲೇಗಾಂವ್‌ನಿಂದ ಧೋಲೆರಾಗೆ ಸ್ಥಳಾಂತರಿಸಿತು.

“ಧೋಲೆರಾವನ್ನು ಭವಿಷ್ಯದ ಕೈಗಾರಿಕಾ ಕೇಂದ್ರವೆಂದು ಗುರುತಿಸಿದ್ದರೂ – ಭೌಗೋಳಿಕ ಮತ್ತು ವ್ಯವಸ್ಥಾಪನಾ ದೃಷ್ಟಿಯಿಂದ ಇಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ವರದಿಯು ಸೂಚಿಸಿದೆ,” ಎಂದು ಕಂಪನಿಗೆ ಹತ್ತಿರವಿರುವ ವ್ಯಕ್ತಿಯೊಬ್ಬರು ಹೇಳಿದ್ದಾರೆ, “ಇದು ಅಹಮದಾಬಾದಿನಿಂದ ತುಂಬಾ ದೂರದಲ್ಲಿದೆ ಮತ್ತು ಒಂದು ದಶಕದ ಭರವಸೆಗಳ ಹೊರತಾಗಿಯೂ ಕೂಡ ಇಲ್ಲಿ ವಿಮಾನ ನಿಲ್ದಾಣ ಕೂಡ ಇಲ್ಲ. ಅದಕ್ಕೂ ಹೆಚ್ಚಾಗಿ, ನುರಿತ ಕಾರ್ಮಿಕರೂ ಇಲ್ಲಿಲ್ಲ, ಸಾಕಷ್ಟು ತರಬೇತಿ ಸೌಲಭ್ಯಗಳೂ ಇಲ್ಲ ಮತ್ತು ದುರ್ಬಲ ಪೂರೈಕೆ ಜಾಲವುಗಳು ದೊಡ್ಡ-ಪ್ರಮಾಣದ ಟೆಕ್ ಕೈಗಾರಿಕೆಗಳಿಗೆ ಕಾರ್ಯಾಚರಣೆಯನ್ನು ಸುಲಭವಾಗಿ ನಡೆಸಲು ಕಷ್ಟವನ್ನುಂಟು ಮಾಡಲಿವೆ” ಎಂದು ಅವರು ಹೇಳುತ್ತಾರೆ.

ವೇದಾಂತ-ಫಾಕ್ಸ್‌ಕಾನ್ ಯೋಜನೆಯ ಜೊತೆಗೆ, ಶಿಂಧೆ ಆಡಳಿತದ ಮೊದಲ ಎರಡು ತಿಂಗಳಲ್ಲಿ ಮಹಾರಾಷ್ಟ್ರದ ಟಾಟಾ-ಏರ್‌ಬಸ್ ಉತ್ಪಾದನಾ ಘಟಕ ಕೂಡ ಗುಜರಾತ್‌ಗೆ ಹೋಗಿದೆ. ಟಾಟಾ-ಏರ್‌ಬಸ್ C-295 ವಿಮಾನ ತಯಾರಿಕಾ ಯೋಜನೆಯನ್ನು ಮೂಲತಃ ನಾಗ್ಪುರದ ಮಿಹಾನ್ (MIHAN‌ – ಮಲ್ಟಿ-ಮಾಡೆಲ್‌ ಇಂಟರ್‌ನ್ಯಾಷನಲ್‌ ಕಾರ್ಗೋ ಹಬ್‌ ಆಂಡ್‌ ಏರ್‌ಪೋರ್ಟ್‌ ಆಟ್‌ ನಾಗ್ಪುರ್) ಪ್ರದೇಶದಲ್ಲಿ ಆರಂಭಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಈಗ ಇದರ ಬದಲಿಗೆ ಗುಜರಾತ್‌ನ ವಡೋದರಾದಲ್ಲಿ ಸ್ಥಾಪನೆಯಾಗಿದೆ.

ರಕ್ಷಣಾ ಯೋಜನೆಗಳ ಪ್ರಮುಖ ಖರೀದಿದಾರರಾಗಿ, ಭಾರತ ಸರ್ಕಾರವು ಎಲ್ಲಾ ಉತ್ಪಾದನೆಗಳನ್ನು ಗುಜರಾತ್‌ನಲ್ಲಿ ಮಾಡಲು ಮಾತ್ರ ಬೆಂಬಲ ನೀಡಲಿದೆ ಎಂದು ಎಂದು ಅಧಿಕಾರಿಗಳು ಟಾಟಾಗೆ ತಿಳಿಸಿದ್ದರು. ಇದಕ್ಕೂ ಹಿಂದೆ ಮಹಾರಾಷ್ಟ್ರದ ಕೈಯಿಂದ ಎರಡು ಮಹತ್ವದ ಯೋಜನೆಗಳನ್ನು ಕಸಿದುಕೊಳ್ಳುವಾಗಲೂ ಇದೇ ರೀತಿಯ ತಂತ್ರವನ್ನು ಬಳಸಲಾಗಿತ್ತು. ಈ ಎರಡು ಯೋಜನೆಗಳೆಂದರೆ; 3,000 ಕೋಟಿ ರೂಪಾಯಿ ಮೊತ್ತದ ಬಲ್ಕ್ ಡ್ರಗ್ ಪಾರ್ಕ್ ಮತ್ತು ಔರಂಗಾಬಾದ್‌ಗೆ ನೀಡಲಾಗಿದ್ದ ವೈದ್ಯಕೀಯ ಸಾಧನಗಳ ಪಾರ್ಕ್. ಈ ಎರಡನ್ನೂ ಕೊನೆಯಲ್ಲಿ ಗುಜರಾತ್‌ಗೆ ನೀಡಲಾಯಿತು.

ಹೀಗೆ ಮಹಾರಾಷ್ಟ್ರದಿಂದ ಸ್ಥಳಾಂತರಗೊಂಡ ಪ್ರಮುಖ ಜವಳಿ ಕಂಪನಿಯ ಅಧಿಕಾರಿಗಳ ಪ್ರಕಾರ, ಗುಜರಾತ್ ‘ಚೆನ್ನಾಗಿ ಹೊಂದಿಕೊಂಡು ಹೋಗುವ ಕಾರ್ಮಿಕ ಕಾನೂನುಗಳನ್ನು’ ಹೊಂದಿದೆ. ಉದ್ಯೋಗಿಗಳೊಂದಿಗೆ ಯಾವುದೇ ಸಮಸ್ಯೆ ಬಂದರೂ ಅದನ್ನು ರಾಜ್ಯ ಸರ್ಕಾರದ ಸಹಾಯದಿಂದ ಪರಿಹರಿಸಬಹುದು ಎಂದು ಅವರು ಹೇಳುತ್ತಾರೆ.

ಗಿಫ್ಟ್ ಸಿಟಿ (GIFT City) ಮತ್ತು ಧೋಲೆರಾ

ಗುಜರಾತ್‌ನ ಗಿಫ್ಟ್ ಸಿಟಿ (ಗುಜರಾತ್ ಇಂಟರ್‌ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ) ಭಾರತದ ಮೊದಲ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ (IFSC). ಇದು ದೇಶದ ಬೇರೆ ಯಾವ ರಾಜ್ಯಕ್ಕೂ ಸಿಗದ ಕೇಂದ್ರ ಸರ್ಕಾರದ ಹಲವಾರು ಪ್ರೋತ್ಸಾಹಧನ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಯೋಜನಗಳನ್ನು ಕೊಡುತ್ತದೆ.

Gift city
ಗುಜರಾತಿನ Gift City

ಭಾರತದ ಮೊದಲ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದ (ಐಎಫ್‌ಎಸ್‌ಸಿ) ಪರಿಕಲ್ಪನೆಯು ಆರಂಭದಲ್ಲಿ ಮುಂಬೈಯನ್ನು ಕೇಂದ್ರೀಕರಿಸಿತ್ತು. 2007ರ ಪರ್ಸಿ ಮಿಸ್ತ್ರಿ ಸಮಿತಿಯ ವರದಿಯು ಭಾರತದ ಹಣಕಾಸು ಬಂಡವಾಳವು ಜಾಗತಿಕ ಹಣಕಾಸು ಕೇಂದ್ರವಾಗಿ ಕಾರ್ಯನಿರ್ವಹಿಸಬೇಕು ಎಂದು ಶಿಫಾರಸು ಮಾಡಿತು, ಆದರೆ ಆಗಿನ ಯುಪಿಎ ಸರ್ಕಾರಕ್ಕೆ ಈ ಯೋಜನೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ.

2008ರಲ್ಲಿ, ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ತಮ್ಮ ರಾಜ್ಯದ ಸ್ವಂತ ಅಂತಾರಾಷ್ಟ್ರೀಯ ಹಣಕಾಸು ಕೇಂದ್ರವಾದ ಗುಜರಾತ್ ಇಂಟರ್‌ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (ಗಿಫ್ಟ್ ಸಿಟಿ) ಅನ್ನು ಗಾಂಧಿನಗರದ ಬಳಿ ನಿರ್ಮಿಸುವ ಯೋಜನೆಗಳನ್ನು ಆರಂಭಿಸಿದರು. ಆರಂಭದಲ್ಲಿ ಇದು “ನ್ಯಾನೋ ನಗರ” ಎಂಬ ಪರಿಕಲ್ಪನೆಯಾಗಿತ್ತು. ಗಿಫ್ಟ್ ಸಿಟಿಯು ಅಹಮದಾಬಾದ್ ಮತ್ತು ಗಾಂಧಿನಗರದ ನಡುವೆ 886 ಎಕರೆಗಳಷ್ಟು ವ್ಯಾಪಿಸಿರುವ ವಾಣಿಜ್ಯ, ವಸತಿ ಮತ್ತು ಮನರಂಜನಾ ಸೌಲಭ್ಯಗಳನ್ನು ಹೊಂದಿರುವ ಕೇಂದ್ರ ವ್ಯಾಪಾರ ಜಿಲ್ಲೆ (CBD- ಸೆಂಟ್ರಲ್‌ ಬ್ಯುಸಿನೆಸ್‌ ಡಿಸ್ಟ್ರಕ್ಟ್) ಆಗಿ ಬೆಳೆಯುವ ಗುರಿಯನ್ನು ಹೊಂದಿತು. ಕನ್ಸಲ್ಟಿಂಗ್ ಸಂಸ್ಥೆ ಮೆಕಿನ್ಸೆ & ಕಂ ಒಂದು ಕಾರ್ಯಸಾಧ್ಯತೆಯ ಅಧ್ಯಯನವನ್ನು ಕೈಗೊಳ್ಳಲು ನೆರವು ನೀಡಿತು. ಈ ಯೋಜನೆಯು 78,000 ಕೋಟಿ ರೂಪಾಯಿಗಳ ಮಹತ್ವಾಕಾಂಕ್ಷೆಯ ಬಜೆಟ್‌ನೊಂದಿಗೆ ಗುಜರಾತ್ ಅರ್ಬನ್ ಡೆವಲಪ್‌ಮೆಂಟ್ ಕಂ. ಮತ್ತು ಐಎಲ್ & ಎಫ್‌ಎಸ್ ನಡುವಿನ ಜಂಟಿ ಉದ್ಯಮವಾಗಿ ಆರಂಭವಾಯಿತು. 2008ರ ಅಮೆರಿಕದ ಆರ್ಥಿಕ ಹಿಂಜರಿತದಿಂದಾಗಿ ಇದರ ಪ್ರಗತಿ ಕುಂಠಿತವಾದರೂ, ಯೋಜನೆಯನ್ನು ಜಂಪ್‌ಸ್ಟಾರ್ಟ್ ಮಾಡಲು ರಾಜ್ಯವು 673 ಎಕರೆಗಳನ್ನು ನೀಡಿತು ಮತ್ತು 2011 ರಿಂದ ಇದರ ಅಭಿವೃದ್ಧಿಯು ಸ್ಥಿರವಾಗಿ ಮುಂದುವರೆದಿದೆ.

2014ರಲ್ಲಿ ಪ್ರಧಾನಿ ಮೋದಿಯವರ ಗಮನವು ಗಿಫ್ಟ್ ಸಿಟಿಯನ್ನು ರಿಯಲ್ ಎಸ್ಟೇಟ್ ನಿಂದ ಭಾರತದ ಮೊದಲ ಸ್ಮಾರ್ಟ್ ಸಿಟಿ ಮತ್ತು ಜಾಗತಿಕ ಹಣಕಾಸು ಕೇಂದ್ರವಾಗಿ ಮಾಡುವ ಕಡೆಗೆ ಹರಿಯಿತು. ಇದಕ್ಕೆ 2015-16ರ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಒತ್ತನ್ನು ನೀಡಲಾಯಿತು. ಬಜೆಟ್‌ನಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮುಂಬೈನಿಂದ ಗಿಫ್ಟ್ ಕಡೆಗೆ ಹಣಕಾಸಿನ ಮಹತ್ವಾಕಾಂಕ್ಷೆಗಳು ಹರಿಯಲು ಮರುನಿರ್ದೇಶಿಸಿದರು. ಇದನ್ನು ಸಿಂಗಾಪುರ ಅಥವಾ ದುಬೈನಂತಹ ಕೇಂದ್ರವಾಗಿ ರೂಪಿಸುವುದು ಇವರ ಕನಸಾಗಿತ್ತು.

2016 ರಲ್ಲಿ ವ್ಯಾಪಾರಿ ಸಮುದಾಯ ಮತ್ತು ಮಹಾರಾಷ್ಟ್ರದ ನಾಯಕರ ಬೇಡಿಕೆಗಳ ನಂತರ, ಎನ್‌ಡಿಎ ಸರ್ಕಾರವು ಐಎಫ್‌ಎಸ್‌ಸಿಎ ಪರಿಕಲ್ಪನೆಯನ್ನು ಮರುಪರಿಶೀಲಿಸಿತು. ಮುಂಬೈ ಕೇಂದ್ರಿತ ಹಣಕಾಸು ಹನ್‌ ಅನ್ನು ಅನ್ವೇಷಿಸುವ ಸಮಿತಿಯನ್ನು ರಚಿಸಿ ಅದನ್ನು ಮುನ್ನಡೆಸಲು ಜಯಂತ್ ಸಿನ್ಹಾ ಅವರನ್ನು ನೇಮಿಸಿತು. ಹಾಗಿದ್ದೂ, ಮೋದಿ ಸರ್ಕಾರವು ಗುಜರಾತ್‌ನಲ್ಲಿ ಗಿಫ್ಟ್ ಸಿಟಿಯನ್ನು ಬೆಂಬಲಿಸುವುದರೊಂದಿಗೆ ಈ ಯೋಜನೆಯು ಗಮನವನ್ನು ಬದಲಾಯಿಸಿತು ಮತ್ತು ಇದನ್ನು 2015ರಲ್ಲಿ ಕಾರ್ಯರೂಪಕ್ಕೆ ತಂದಿತು. 2020 ರಲ್ಲಿ ಗಿಫ್ಟ್ ಸಿಟಿಯಲ್ಲಿ ಹೊಸದಾಗಿ ಸ್ಥಾಪಿಸಲಾದ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರ (ಐಎಫ್‌ಎಸ್‌ಸಿಎ) ಅಡಿಯಲ್ಲಿ ನಿಯಂತ್ರಕ ಮೇಲ್ವಿಚಾರಣೆಯನ್ನು ಒಟ್ಟುಗೂಡಿಸಿ, ಇದನ್ನು ಭಾರತದ ಅಧಿಕೃತ ಐಎಫ್‌ಎಸ್‌ಸಿಎ ಎಂದು ಕರೆಯಿತು.

ಈ ನಿರ್ಧಾರ ದೊಡ್ಡ ವಿವಾದಕ್ಕೆ ಕಾರಣವಾಗಿ, ಮೋದಿ ಪ್ರಭಾವದಿಂದಾಗಿ ಮುಂಬೈಯನ್ನು ನಿರ್ಲಕ್ಷ್ಯಕ್ಕೆ ಒಳಗಾಗಿ ಗುಜರಾತಿಗೆ ಆದ್ಯತೆ ನೀಡಲಾಗಿದೆ ಎಂದು ಮಹಾರಾಷ್ಟ್ರ ನಾಯಕರು ಪ್ರತಿಪಾದಿಸಿದ್ದಾರೆ.

ಗಿಫ್ಟ್ ಸಿಟಿಯ ಒಂದು ಗಮನಾರ್ಹ ಪ್ರಯೋಜನವೆಂದರೆ ಅದರ ತೆರಿಗೆ ಕ್ರಮದ ಚೌಕಟ್ಟು. ಇಲ್ಲಿ ಅಂಗಡಿಯನ್ನು ಸ್ಥಾಪಿಸುವ ಕಂಪನಿಗಳಿಗೆ ಮೊದಲ 10 ವರ್ಷಗಳವರೆಗೆ 100% ಆದಾಯ ತೆರಿಗೆ ವಿನಾಯಿತಿ ಇದೆ . ಅದಾದ ಮೇಲೆ ಅವರು ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್‌ಟಿಟಿ) ಮತ್ತು ಸರಕು ವಹಿವಾಟು ತೆರಿಗೆ (ಸಿಟಿಟಿ) ನಂತಹ ಭಾರಿ ಹಣಕಾಸಿನ ವಹಿವಾಟು ತೆರಿಗೆಗಳಿಂದಲೂ ರಕ್ಷಿಸಲ್ಪಡುತ್ತಾರೆ. ಇದರರ್ಥ ಉದ್ಯಮಗಳಿಗೆ ತಮ್ಮ ಕಾರ್ಯಾಚರಣೆಯ ವೆಚ್ಚವನ್ನು ಕಡಿತಗೊಳಿಸುವ ಅವಕಾಶ ಸಿಗುತ್ತದೆ. ದುಬೈ ಮತ್ತು ಸಿಂಗಾಪುರದಂತಹ ಉನ್ನತ ಜಾಗತಿಕ ಕೇಂದ್ರಗಳಿಗೆ ಪ್ರತಿಸ್ಪರ್ಧಿಯಾಗುವ ಅವಕಾಶವನ್ನು ನೀಡುತ್ತದೆ.

ಕನಿಷ್ಠ ಪರ್ಯಾಯ ತೆರಿಗೆ (ಮಿನಿಮಮ್‌ ಆಲ್ಟರ್ನೇಟ್‌ ಟ್ಯಾಕ್ಸ್- MAT) ಇತರ ರಾಜ್ಯಗಳಲ್ಲಿ ಇರುವಂತೆ 15%ಗೆ ಬದಲಾಗಿ ಇಲ್ಲಿ ಕೇವಲ 9%ನಷ್ಟು ಕಡಿಮೆ. ಐಎಫ್‌ಎಸ್‌ಸಿಎ ಸಹ ಸಂಸ್ಥೆಗಳಿಗೆ ವಿದೇಶಿ ಕರೆನ್ಸಿಗಳಲ್ಲಿ ಭಾರತದ ಇತರ ಭಾಗಗಳಲ್ಲಿ ಇರುವಂತ ರೆಡ್ ಟೇಪ್ ಇಲ್ಲದೆ ವಹಿವಾಟು ನಡೆಸಲು ಸಾಧ್ಯವಿದೆ.

ಗಿಫ್ಟ್‌ಗೆ ಪೂರಕವಾಗಿರುವ ಧೋಲೆರಾ ವಿಶೇಷ ಹೂಡಿಕೆ ಪ್ರದೇಶ (ಸ್ಪೆಷಲ್‌ ಇನ್ವೆಸ್ಟ್‌ಮೆಂಟ್‌ ರೀಜನ್‌ – SIR) ಒಂದು ಮೆಗಾ ಕೈಗಾರಿಕಾ ಕೇಂದ್ರವಾಗಿದೆ. ಇದು ಕೂಡ ಗಮನಾರ್ಹ ಮೂಲಸೌಕರ್ಯ ಹೂಡಿಕೆಗಳು ಮತ್ತು ಸರ್ಕಾರದ ಪ್ರಯೋಜನಗಳಿಂದ ಲಾಭ ಪಡೆಯುತ್ತದೆ. ಈ ಪ್ರದೇಶವು ಸುಧಾರಿತ ಲಾಜಿಸ್ಟಿಕ್ಸ್ ಸೌಲಭ್ಯಗಳು, ಮೀಸಲು ವಿದ್ಯುತ್ ಸರಬರಾಜು ಮತ್ತು ಸಮರ್ಪಕ ಸಾರಿಗೆ ಜಾಲಗಳನ್ನು ಹೊಂದಿದೆ. ಹೈಟೆಕ್ ಕೈಗಾರಿಕೆಗಳು ಮತ್ತು ಉತ್ಪಾದನೆಯನ್ನು ಆಕರ್ಷಿಸಲು ಧೋಲೆರಾವನ್ನು, ಕೇಂದ್ರ ಸರ್ಕಾರವು ರಸ್ತೆಗಳು, ನೀರು ಸರಬರಾಜು ಮತ್ತು ಇಂಧನ ವ್ಯವಸ್ಥೆಗಳನ್ನು ಕಲ್ಪಿಸಿ ಅಭಿವೃದ್ಧಿಪಡಿಸಲು ಗಣನೀಯ ಹಣವನ್ನು ಮೀಸಲಿಟ್ಟಿದೆ. ಈ ಪ್ರದೇಶವು ಸುಧಾರಿತ ಲಾಜಿಸ್ಟಿಕ್ಸ್ ಸೌಲಭ್ಯಗಳನ್ನು ಹೊಂದುವಂತೆ ಮಾಡಲಾಗಿದೆ. ಉದಾಹರಣೆಗೆ ಕಂಟೈನರ್ ಸರಕು ಸಾಗಣೆ ನಿಲ್ದಾಣಗಳು ಮತ್ತು ಡ್ರೈ ಪೋರ್ಟ್‌ಗಳು, ಇವು ಸರಕುಗಳ ಸಮರ್ಪಕ ಸಾಗಾಟಕ್ಕೆ ಅವಶ್ಯಕವಾಗಿದೆ. ಸರಿಯಾದ ವಿದ್ಯುತ್ ಸರಬರಾಜನ್ನು ಕಲ್ಪಿಸಲು ಸರ್ಕಾರವು ಸೌರ ಮತ್ತು ಪವನ ಶಕ್ತಿಯಂತಹ ನವೀಕರಿಸಬಹುದಾದ ಇಂಧನ ಮೂಲಗಳ ಯೋಜನೆಗಳ ಮೂಲಕ ಮೀಸಲು ಇಂಧನ ವ್ಯವಸ್ಥೆಗಳನ್ನು ರೂಪಿಸಲು ಹೂಡಿಕೆ ಮಾಡುತ್ತಿದೆ. ಇವೆಲ್ಲದರ ಒಟ್ಟು ಉದ್ದೇಶ ಧೋಲೆರಾವನ್ನು ಸಮರ್ಥನೀಯ ಕೈಗಾರಿಕಾ ವಲಯವಾಗಿ (sustainable industrial zone) ಕಟ್ಟುವುದು.

ಗಿಫ್ಟ್ ಸಿಟಿ ಮತ್ತು ಧೋಲೆರಾ ಎರಡೂ ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ (‌ಪ್ರೊಡಕ್ಷನ್-ಲಿಂಕ್‌ಡ್‌ ಇನ್ಸೆನ್ಟಿವ್‌ – PLI) ಯೋಜನೆಯ ಭಾಗವಾಗಿದೆ. ಈ ಯೋಜನೆಯ ಮೂಲಕ ಎಲೆಕ್ಟ್ರಾನಿಕ್ಸ್, ಔಷಧೀಯ ಮತ್ತು ವಾಹನಗಳಂತಹ ನಿರ್ದಿಷ್ಟ ವಲಯಗಳಲ್ಲಿ ಉತ್ಪಾದನಾ ಕಾರ್ಯಾಚರಣೆಗಳನ್ನು ಸ್ಥಾಪಿಸಲು ಕಂಪನಿಗಳಿಗೆ ಉತ್ತೇಜನ ನೀಡಲಾಗುತ್ತದೆ.

ಸುವ್ಯವಸ್ಥಿತ ಅನುಮೋದನೆಗಳು, ಸರಳ ಕಾರ್ಮಿಕ ಕಾನೂನುಗಳು ಮತ್ತು ಹೆಚ್ಚಿನ ತೆರಿಗೆ ಪ್ರಯೋಜನಗಳನ್ನು ನೋಡುವಾಗ ಕಂಪನಿಗಳು ಆಮಿಷಕ್ಕೆ ಒಳಗಾಗಿ ಗುಜರಾತ್‌ನ ಪರ ನಿಲ್ಲುತ್ತಿವೆ ಎಂದು ಹೇಳುವುದೂ ಕಷ್ಟವೇ.

ಏಕಪಕ್ಷೀಯ ಆಯ್ಕೆಗಳು ಕಾರಣಕ್ಕೆ ಇತರ ರಾಜ್ಯಗಳ ಕಡೆಗಣನೆ

ಕೇಂದ್ರ ಸರ್ಕಾರವು ಗುಜರಾತ್‌ಗೆ ಎರಡು ಪ್ರಮುಖ ಯೋಜನೆಗಳನ್ನು ಕೊಟ್ಟಿದೆ. ಆದರೆ ಇತರ ರಾಜ್ಯಗಳು ತಮ್ಮ ಸಂಕಷ್ಟವನ್ನು ಹೇಳಿಕೊಳ್ಳಲು ಒಂದು ಅವಕಾಶವನ್ನೂ ನೀಡಲಾಗಿಲ್ಲ. ಇದರಲ್ಲಿ ಒಂದು, ಗುಜರಾತಿನ ನವಸಾರಿಯಲ್ಲಿ 3 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಭವಿಷ್ಯ ನುಡಿದಿರುವ ಪಿಎಂ ಮಿತ್ರ (ಪ್ರೈಮ್‌ ಮಿನಿಸ್ಟರ್- ಮೆಗಾ ಇಂಟಿಗ್ರೇಟೆಡ್ ಟೆಕ್ಸ್‌ಟೈಲ್ ರೀಜನ್ ಆಂಡ್ ಅಪ್ಯಾರಲ್ – PM MITRA) ಯೋಜನೆ. ಇನ್ನೊಂದು, ವಿಶೇಷ ಔಷಧೀಯ ಉತ್ಪಾದನಾ ಕೇಂದ್ರ ನಿರ್ಮಾಣದ ಕನಸನ್ನು ನೀಡಿರುವ ಮೆಗಾ ಫಾರ್ಮಾಸ್ಯುಟಿಕಲ್ ಇನ್ಫ್ರಾಸ್ಟ್ರಕ್ಚರ್ ಫಾರ್ ಟೆಕ್ನಾಲಜಿಕಲ್ ಅಡ್ವಾನ್ಸ್‌ಮೆಂಟ್ (Megha) ಯೋಜನೆ. ಮೇಘಾ ಯೋಜನೆಯ ಗುರಿಯೆಂದರೆ ಔಷಧ ಉತ್ಪಾದನೆಯನ್ನು ಉತ್ತೇಜಿಸುವುದು ಮತ್ತು ಮೇಕ್ ಇನ್ ಇಂಡಿಯಾವನ್ನು ಬೆಂಬಲಿಸುವುದು.

“ನಮ್ಮ ರಾಜ್ಯಗಳನ್ನು ಯಾವ ಮಾನದಂಡದ ಮೇಲೆ ತಿರಸ್ಕರಿಸಲಾಗಿದೆ ಎಂಬ ಸ್ಪಷ್ಟತೆಯನ್ನು ನೀಡದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಯೋಜನೆಗಳಿಗೆ ಪೂರಕವಾದ ಉತ್ತಮ ಮೂಲಸೌಕರ್ಯಗಳನ್ನು ನಾವು ಹೊಂದಿದ್ದೇವೆ ಮತ್ತು ಆದರೆ ಅವುಗಳನ್ನು ಗುಜರಾತ್‌ಗೆ ಕೊಡಲಾಗಿದೆ,” ಎಂದು ಮಹಾರಾಷ್ಟ್ರದ ಅಧಿಕಾರಿಯೊಬ್ಬರು ದಿ ನ್ಯೂಸ್‌ ಮಿನಿಟ್‌ಗೆ ತಿಳಿಸಿದ್ದಾರೆ.

ಎಲ್ಲರೂ ಗುಜರಾತಿನ ಹಿಂದೆ ಹೋದರೆ ಏನು ಸಮಸ್ಯೆ?

ಮೋದಿಯವರ ಸರ್ಕಾರವು ಗುಜರಾತಿನ ಕಡೆಗೆ ಹೆಚ್ಚು ಒಲವನ್ನು ತೋರಿಸುತ್ತಿದೆ ಎಂದರೆ ತಮ್ಮ ಕೈಗಾರಿಕೆಗಳನ್ನು ನಿರ್ಮಿಸಲು ದೀರ್ಘಕಾಲ ಹೂಡಿಕೆ ಮಾಡಿದ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣದಂತಹ ರಾಜ್ಯಗಳು ಸ್ಪರ್ಧಿಸಲು ಹೆಣಗಾಡುತ್ತಿವೆ ಎಂದರ್ಥ. ಒಂದು ರಾಜ್ಯವು ತನ್ನಲ್ಲಿರುವ ಅತ್ಯಂತ ಪ್ರಮುಖವಾದ ಹೂಡಿಕೆಯೊಂದನ್ನು ಕಳೆದುಕೊಂಡಾಗ, ಅದರ ಪರಿಣಾಮವು ಅದರ ಬ್ಯಾಲೆನ್ಸ್ ಶೀಟ್‌ಗಳನ್ನೂ ಮೀರಿರುತ್ತದೆ ಎಂದು ಅವರು ವಾದಿಸುತ್ತಾರೆ.

ಇದನ್ನೂ ಓದಿ ‘ತಪ್ಪಾಗಿದ್ದರೆ ಕ್ಷಮೆ ಇರಲಿ’; ಸಿಜೆಐ ಆಗಿ ಅಂತಿಮ ಭಾಷಣದಲ್ಲಿ ಕ್ಷಮೆ ಕೋರಿದ ಚಂದ್ರಚೂಡ್

ಪ್ರಮುಖ ಹೂಡಿಕೆಯೊಂದನ್ನು ಕಳೆದುಕೊಳ್ಳುವುದೆಂದರೆ ಕೇವಲ ಬಂಡವಾಳವನ್ನು ಕಳೆದುಕೊಂಡಂತೆ ಮಾತ್ರ ಅಲ್ಲ; ಇದು ಆರ್ಥಿಕ ಬೆಳವಣಿಗೆ, ಉದ್ಯೋಗಗಳು ಮತ್ತು ಸಮುದಾಯದ ಅಭಿವೃದ್ಧಿಯ ಹಾದಿಯನ್ನು ಕಳೆದುಕೊಂಡಂತೆ. ದೊಡ್ಡ ಮಟ್ಟದ ಹೂಡಿಕೆಗಳು ಹೆಚ್ಚು ಸಂಬಳದ ಉದ್ಯೋಗಗಳು ಮತ್ತು ಸ್ಥಳೀಯ ವ್ಯವಹಾರಗಳಿಗೆ ಸ್ಥಿರ ಆದಾಯವನ್ನು ತರುತ್ತವೆ. ಅದು ಅಭಿವೃದ್ಧಿ ಮತ್ತು ನವನವೀನ ಅನ್ವೇಷಣೆಗಳನ್ನು ಸೃಷ್ಟಿಸುವ ಆರ್ಥಿಕ ವ್ಯವಸ್ಥೆಯನ್ನು ರೂಪಿಸುತ್ತದೆ. ಆ ಹೂಡಿಕೆ ಬೇರೆಡೆಗೆ ಹೋದಾಗ, ಸ್ಥಳೀಯ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ, ಸಣ್ಣಪುಟ್ಟ ವ್ಯಾಪಾರಗಳು ಮತ್ತು ನಗರದ ಮೂಲಸೌಕರ್ಯ ಯೋಜನೆಗಳು ಕೂಡ ಅದರ ದುಷ್ಪರಿಣಾಮಗಳನ್ನು ಅನುಭವಿಸುತ್ತವೆ. ಮಹತ್ವದ ಯೋಜನೆಯನ್ನು ಕಳೆದುಕೊಳ್ಳುವುದು ಎಂದರೆ ಭವಿಷ್ಯದಲ್ಲಿ ಇತರ ಸಂಭಾವ್ಯ ಹೂಡಿಕೆದಾರರೊಂದಿಗೆ ಸಂಬಂಧ ಬೆಳೆಸುವ ರಾಜ್ಯವೊಂದರ ಹೆಸರನ್ನು ಕಡೆಗಣಿಸಿದಂತೆ.

ಕೃಪೆ : The News Minute

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X