HMT ಭೂಮಿ ಮಾರಾಟಕ್ಕೆ ಮೋದಿ-ಎಚ್‌ಡಿಕೆ ಸಂಚು: ಸುರ್ಜೇವಾಲಾ ಗಂಭೀರ ಆರೋಪ

Date:

Advertisements
HMT ಅರಣ್ಯ ಭೂಮಿಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಮೋದಿ ಸರ್ಕಾರ ಮತ್ತು ಕುಮಾರಸ್ವಾಮಿ ವಿರೋಧ ಮಾಡುತ್ತಿರುವುದು ಯಾಕಾಗಿ? 

ಕೈಗಾರಿಕಾ ಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಮತ್ತು ಮೋದಿಯ ಕೇಂದ್ರ ಸರ್ಕಾರವು ಬೆಂಗಳೂರು ನಗರದ ಪ್ರಮುಖ ಭಾಗದಲ್ಲಿರುವ ಎಚ್‌ಎಂಟಿಗೆ ಸೇರಿದ 280 ಎಕರೆ ಭೂಮಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.

ಎಚ್‌ಎಂಟಿ ಅಡಿಯಲ್ಲಿರುವ 280 ಎಕರೆ ಭೂಮಿಯು ಅರಣ್ಯ ಭೂಮಿಯಾಗಿದ್ದು, ಆ ಭೂಮಿಯಲ್ಲಿ ಜೈವಿಕ ಉದ್ಯಾನವನ ನಿರ್ಮಾಣ ಮಾಡುವ ಉದ್ದೇಶದಿಂದ ಅರಣ್ಯ ಇಲಾಖೆಗೆ ಮರಳಿ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿತ್ತು. ಗಮನಾರ್ಹ ಸಂಗತಿ ಎಂದರೆ, ಕಳೆದ 15 ವರ್ಷಗಳಿಂದ ಎಚ್‌ಎಂಟಿ ಕಾರ್ಖಾನೆ ಸ್ಥಗಿತಗೊಂಡಿದೆ. ಆದರೂ, ಆ ಭೂಮಿಯನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ತೆಗೆದುಕೊಳ್ಳುವುದನ್ನು ತಡೆಯಲು ಕುಮಾರಸ್ವಾಮಿ ಅವರು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಇದೀಗ, ಆ ಭೂಮಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ. ಬಿಜೆಪಿ-ಜೆಡಿಎಸ್‌ ಮೈತ್ರಿಯನ್ನು ಮತ್ತು ಎಚ್‌.ಡಿ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಕಾರ್ಖಾನೆಯು ಬೆಂಗಳೂರಿನ ಹೃದಯಭಾಗ ಪೀಣ್ಯದಲ್ಲಿದೆ. ಈ ಭಾಗದ ಸುಮಾರು 10,000 ಕೋಟಿ ರೂ. ಮೌಲ್ಯದ 599 ಎಕರೆ ಅರಣ್ಯ ಭೂಮಿ ಎಚ್‌ಎಂಟಿ ವಶದಲ್ಲಿದೆ. ಆ ಪೈಕಿ, ಈಗಾಗಲೇ ನೂರಾರು ಎಕರೆ ಭೂಮಿಯನ್ನು ಖಾಸಗಿಯವರಿಗೆ ಕಾರ್ಖಾನೆ ಮಾರಾಟ ಮಾಡಿದೆ. ಆ ಅರಣ್ಯ ಭೂಮಿಯಲ್ಲಿ ಈಗ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿವೆ. ಮಾತ್ರವಲ್ಲದೆ, ಉಳಿದ ಭೂಮಿಯನ್ನೂ ಡಿನೋಟಿಫಿಕೇಷನ್ ಮಾಡಲು ಸಚಿವರು ಮತ್ತು ಸಚಿವ ಸಂಪುಟದ ಅನುಮೋದನಯನ್ನೇ ಪಡೆಯದೆ ಅರಣ್ಯ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಇದೆಲ್ಲವೂ, ಅರಣ್ಯ ಭೂಮಿಯನ್ನು ಖಾಸಗಿ ಮತ್ತು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡುವ ಮತ್ತು ಮಾರಾಟ ಮಾಡುವ ಹುನ್ನಾರದ ಭಾಗವಾಗಿದೆ.

Advertisements

ಅದರಲ್ಲೂ, ಎಚ್‌.ಡಿ ಕುಮಾರಸ್ವಾಮಿ ಅವರು ಕೇಂದ್ರ ಕೈಗಾರಿಕಾ ಸಚಿವರಾದ ಬಳಿಕ ಅಧಿಕಾರಿಗಳು ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯ ಡಿನೋಟಿಫೈಗೆ ಅರ್ಜಿ ಸಲ್ಲಿಸಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ. ಸರ್ಕಾರಿ ಅರಣ್ಯ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿಸಿ, ಖಾಸಗಿಯವರಿಗೆ ಅಥವಾ ಖಾಸಗಿ ಉದ್ದೇಶಕ್ಕೆ ಬಳಸಲು ಕುಮಾರಸ್ವಾಮಿ ಅವರೇ ಮುಂದಾಗಿದ್ದಾರೆ ಎಂಬ ಗಂಭೀರ ಆರೋಪಗಳಿಗೆ ಕಾರಣವಾಗಿದೆ.

ಇದನ್ನು ಓದಿದ್ದೀರಾ?: ಮುಸ್ಲಿಮರೇ ಇಲ್ಲದ ಊರಲ್ಲಿ ಅದ್ದೂರಿ ಮೊಹರಂ; ಭಾವೈಕ್ಯತೆಗೆ ಸಾಕ್ಷಿಯಾದ ಆಚರಣೆ

ಬೆಂಗಳೂರು ಸುತ್ತಮುತ್ತ ಹಸಿರು ಹೊದಿಕೆ ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರು ಹೊರವಲಯದಲ್ಲಿ ನೆಡುತೋಪು ಬೆಳೆಸುವುದಕ್ಕಾಗಿ ಭೂಮಿಯನ್ನು 1990ರ ದಶಕದಲ್ಲಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಅದರಲ್ಲಿ, ಎಚ್‌ಎಂಟಿ ಅಧೀನದಲ್ಲಿದ್ದ ಭೂಮಿಯೂ ಸೇರಿತ್ತು. ಆದರೆ, ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ದೇಶಿತ ನೆಡುತೋಪುಗಳು ಮೇಲೇಳಲಿಲ್ಲ. ಮಾತ್ರವಲ್ಲದೆ, ಆ ಭೂಮಿಯನ್ನು ಇಲಾಖೆ ತನ್ನ ವಶಕ್ಕೂ ಪಡೆಯಲಿಲ್ಲ. ಪರಿಣಾಮ, ಭೂಮಿ ಎಚ್‌ಎಂಟಿ ಸ್ವಾಧೀನದಲ್ಲೇ ಉಳಿದುಕೊಂಡಿತು.

ಆ ಪೈಕಿ, ಈಗಾಗಲೇ ಎಚ್ಎಂಟಿ 165 ಎಕರೆ ಜಮೀನನ್ನು, 313.65 ಕೋಟಿ (313,65,52,681 ರೂ.)ಗೆ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಿದೆ. ಮಾರಾಟವಾದ ಈ ಭೂಮಿಯ ಪೈಕಿ, 27 ಎಕರೆ ಭೂಮಿಯನ್ನು ಪ್ರೆಸ್ಟೀಜ್ ಕಂಪನಿ ಖರೀದಿಸಿದ್ದು, ಅಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡುತ್ತಿದೆ. ಈಗಾಗಲೇ ಮಾರಾಟವಾಗಿರುವ ಇತರ ಭೂಮಿಯಲ್ಲಿಯು ಖಾಸಗಿ ಕಟ್ಟಡಗಳು, ಉದ್ದಿಮೆಗಳು ತಲೆ ಎತ್ತುತ್ತಿವೆ.

ಹೀಗಿರುವಾಗ, ಉಳಿದ ಭೂಮಿಯನ್ನು ಡಿನೋಟಿಫೈ ಮಾಡಿಸಿ, ಭೂಮಿಯನ್ನು ರಾಜ್ಯ ಅರಣ್ಯ ಇಲಾಖೆಯಿಂದ ಎಚ್‌ಎಂಟಿ ಪಡೆದುಕೊಂಡರೆ, ಆ ಭೂಮಿಗೆ ಚಿನ್ನದ ಬೆಲೆ ದೊರೆಯುತ್ತದೆ. ಅದು, ಎಚ್‌ಎಂಟಿ ಪಾಲಾಗುತ್ತದೆ. ಅರ್ಥಾತ್ ಕೇಂದ್ರ ಸರ್ಕಾರದ ಪಾಲಾಗುತ್ತದೆ. ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ ಕುಮಾರಸ್ವಾಮಿ ಅವರ ಅಧೀನಕ್ಕೆ ಒಳಪಡುತ್ತದೆ. ಅದನ್ನು ಕುಮಾರಸ್ವಾಮಿ ಅವರು ಕೈಗಾರಿಕೆ, ಕೈಗಾರಿಕೋದ್ಯಮದ ಹೆಸರಿನಲ್ಲಿ ತಮಗಿಷ್ಟ ಬಂದಂತೆ ಬಳಸಬಹುದಾದ ಅವಕಾಶವೂ ಸಿಗುತ್ತದೆ.

ಇದನ್ನು ಓದಿದ್ದೀರಾ?: ಮತ್ತೆ ಬಂದ ನಾರಾಯಣ ಮೂರ್ತಿ; 70 ಗಂಟೆ ಆಯ್ತು, ಈಗ 100 ಗಂಟೆ ಕೆಲಸದ ಸರದಿ

ಸದ್ಯಕ್ಕೆ, ಅರಣ್ಯ ಇಲಾಖೆಯ ಅಧಿಕಾರಿಗಳು ಡಿನೋಟಿಫೈಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯು ಇದೇ ಜುಲೈ 27ರಂದು ವಿಚಾರಣೆಗೆ ಬರಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವು ಉದ್ದೇಶಿತ ಭೂಮಿಯಲ್ಲಿ ಕಬ್ಬನ್‌ ಪಾರ್ಕ್‌ ರೀತಿಯ ಜೈವಿಕ ವೈವಿಧ್ಯತೆಯ ಉದ್ಯಾನವನ ನಿರ್ಮಿಸಲು ಮುಂದಾಗಿದೆ. ಇದನ್ನೇ ನ್ಯಾಯಾಲಯದಲ್ಲಿ ಮಂಡಿಸಲಿದೆ. ಆದರೆ, ಈ ಭೂಮಿಯನ್ನು ಬಿಜೆಪಿ-ಜೆಡಿಎಸ್‌ ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಧಾರೆ ಎರೆಯಲು ಸಿದ್ಧವಾಗಿವೆ. ಈಗ, ಸುರ್ಜೇವಾಲ ಅವರ ಆರೋಪವು ಬಿಜೆಪಿ-ಜೆಡಿಎಸ್‌ನ ಹುನ್ನಾರವನ್ನು ಬಯಲಿಗೆಳೆದಿದೆ.

ಸದ್ಯ, ಬೆಂಗಳೂರಿನ ಗಾಳಿಯ ಮಟ್ಟ ಕುಸಿಯುತ್ತಿರುವಾಗ, ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವಾಗ ನಗರಕ್ಕೆ ಹಸಿರು ಹೊದಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ನೋಟಿಫಿಕೇಷನ್ ಮಾಡಲಾದ ಎಚ್‌ಎಂಟಿ ವ್ಯಾಪ್ತಿಯಲ್ಲಿರುವ ಅರಣ್ಯ ಭೂಮಿಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ಮೋದಿ ಸರ್ಕಾರ ಮತ್ತು ಕುಮಾರಸ್ವಾಮಿ ವಿರೋಧ ಮಾಡುತ್ತಿರುವುದು ಯಾಕಾಗಿ? ಬಿಜೆಪಿ-ಜೆಡಿಎಸ್‌ಗೆ ಬೆಂಗಳೂರಿನ ಜನರಿಗೆ ಹಸಿರು ಹೊದಿಕೆ ಮತ್ತು ಪರಿಶುದ್ಧ ಗಾಳಿ ನೀಡುವುದಕ್ಕಿಂತ ರಿಯಲ್ ಎಸ್ಟೇಟ್ ಮೂಲಕ ಹಣ ಗಳಿಸುವುದು ಮುಖ್ಯವೇ ಎಂಬ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X