ನಮ್ಮ ಬದುಕಿನ ಬಡತನದ ಹೊತ್ತಿನಲ್ಲಿ ನನ್ನ ಅವ್ವ ಪ್ರವಚನ, ವಚನ ಸಾಹಿತ್ಯ, ಶರಣ ಸಾಹಿತ್ಯ, ಭಗವದ್ಗೀತೆ ಇವೆಲ್ಲದರ ಕೂಡೆ ನನಗೆ ನಂಟು ಬೆಳೆಸಿದ್ಲು. ಬದುಕು ಅಂದರೇನು ಅಂತ ಆ ಮೂಲಕ ನನಗೆ ಅರಿವು ಮೂಡಿಸ್ತಾ ಹೋದ್ಲು. ಆ ಕಾರಣಕ್ಕಾಗೇ ನಾನಿವತ್ತು ಹೋರಾಟದ ಬದುಕಿಗೆ ಬಂದಿದ್ದೀನೆನ್ನಿಸ್ತದ, ಓದಿದ್ದರ ಹಿನ್ನೆಲೆಯಲ್ಲಿ ಬಂದದ್ದಲ್ಲ! ನಿಜವಾಗೂ ನಾನು ಈ ಹೋರಾಟಕ್ಕೆ ಬರಲು ಮುಖ್ಯ ಪ್ರೇರಣೆ ನನ್ನ ಅವ್ವಂದಿರು! ಅನ್ಯಾಯದ ವಿರುದ್ಧ ಹೋರಾಡೋ ಅವರ ದಿಟ್ಟತನ.
ಇನ್ನ ದೊಡ್ಡವ್ವನ್ನ ಬಿಟ್ಟು, ತಾಯಿ ಕಡೆಯ ಸಂಬಂಧಿಕರ ಜೊತಿಗೆ ಹೆಚ್ಚು ಒಡನಾಟ ನನಗೆ ಇರ್ಲಿಲ್ಲ. ಅಪ್ಪ ಬೇಗ ತೀರ್ಕೊಂಡಿದ್ರಿಂದ ಅವರ ಕಡೆ ಸಂಬಂಧನೇ ತೊರೆದೋಯ್ತು. ಅವ್ವ ಜೋಳ ಬೀಸೂ ಮುಂದ ಒಂದು ಜಾನಪದ ಹಾಡು ಹಾಡ್ತಿದ್ಲು ಯಾವಾಗೂ, ‘ಮನಸ ಮುರದ ಮ್ಯಾಲೆ ಮಾತೇನೂ…’ ಅಂತ. ಅದು ಬಹಳೇ ಖರೇ. ನನ್ನ ಅವ್ವ ಪ್ರತಿ ಗುರುವಾರ ಗೋಲ್ಗುಂಬಜ್‌ಗೆ, ಪ್ರತಿ ಶುಕ್ರವಾರ ದರ್ಗಾಗಳಿಗೆ ಕರ್ಕೊಂಡ್ ಹೋಗ್ತಾ ಇದ್ಲು. ಅವ್ವನ ಕೂಡೆ ನಾನೂ ಕೈಮುಗಿದು ಪ್ರಾರ್ಥನಾ ಮಾಡ್ತಿದ್ದೆ. ಸಾಲಿನಾಗೆ ಹುಡುಗ್ರೆಲ್ಲಾ ಕೇಳೋರು. ಅದು ಮುಸ್ಲೀಮರ್ದು ನೀವ್ಯಾಕೆ ಹೋಗ್ತಿರಿ ಅಲ್ಲೀಗೆ ಅಂತ. ವಾಪಸ್ ಬಂದು ಅವ್ವನ್ನ ನಾ ಕೇಳ್ತಿದ್ದೆ. ಆಗ ಅವ್ವ ‘ಎಲ್ಲಾ ಒಂದೇ. ದೇವರೇನು ಬ್ಯಾರೇ ಇಲ್ಲ. ನಾವು ಒಳ್ಳೆಯವ್ರಾಗಿ ಬಾಳೂದಷ್ಟೇ ದೇವರು’ ಅಂತಿದ್ಲು. ಮೊಹರಂದಾಗ ಮೆರವಣಿಗೆ ಹೋಗುವಾಗ ಗ್ಯಾಸ್ಲೈಟ್ ಹಿಡ್ಕೊಂಡು ಹೋಗುದು, ಮಂದಿಗೆ ನೀರು ಕೊಡೂದೂ ಎಲ್ಲಾ ನಾವೂ ಮಾಡ್ತಿದ್ದೆವು.
ಆದರೂ ಅವ್ವ ತುಂಬಾ ಮುಕ್ತವಾಗಿದ್ಲು ಅಂತೇನೂ ಅಲ್ಲ. ಏನೂ ಮಾತಾಡ್ತಿರಲಿಲ್ಲ ಅಷ್ಟೇ. ಜಾತಿ, ಸಂಪ್ರದಾಯಕ್ಕ ಹೆಚ್ಚು ಗಮನ ಕೊಡ್ತಿದ್ದಿದ್ದಿಲ್ಲ ಅನ್ನೂದೂ ಮಾತ್ರ ನಿಜ. ಇನ್ನು ಒಬ್ಬವ ಊರಾಚೆಯ ಕೇರಿಯಾಗೆ ನನ್ನ ಗೆಳೆಯ ಇದ್ದ. ಅವರ ಮನೀಗೆ ಹೋಗೂ ಮುಂದ ಹೇಳ್ತಿದ್ದೆ ‘ಅಲ್ಲಿಗೆ ಹೋಗ್ತೀನಿ’ ಅಂತ. ‘ಹೋಗು ಆದ್ರೆ ತುಂಬಾ ಸಲಿಗೆ ಬೇಡ’ ಅಂದಿದ್ಲು. ಆದರೆ ನಮ್ಮ ಸ್ನೇಹ ಬೆಳದಂಗೆ ನಮ್ಮ ಮನೀಗೂ ಅವನನ್ನ ಕರ್ಕೊಂಡು ಬಂದಿದ್ದೆ. ಅವ್ವಂದೇನೂ ತಕರಾರಿರಲಿಲ್ಲ. ಆದ್ರೆ ‘ಮಂದಿಗೆ ಇವನು ಆ ಕೇರಿಯವನು ಅಂತ ಹೇಳ್ಬೇಡಾ’ ಅಂದಿದ್ಲು. ಅಂದ್ರ ಅವಳಿಗೆ ಜನ ಏನಂತಾರೋ ಅಂತ ಭಯ ಇತ್ತಷ್ಟೇ! ಅವಳಿಗ್ಯಾವ ಜಾತಿ ಭೇದ ಇರ್ಲಿಲ್ಲ. ಹಿಂಗ ತಾಯಿ ನಂಗ ಎಲ್ಲರ ಜೊತೀಗೆ ಬೆರೆಯಲಿಕ್ಕ ಸ್ವಾತಂತ್ರ್ಯ ಕೊಟ್ಟಿದ್ಳು. ಆದರೆ ನಮ್ದೇ ವೀರಶೈವ ಜಾತಿ ನೆಂಟರ ಮನೀಗೆ ಹೋಗೊ ಮುಂದ, ಕೆಲವರ ವಿಷಯಕ್ಕೆ- ‘ಹುಷಾರಾಗಿರು ಹೆಚ್ಚು ಹೋಗಿ ಬಂದು ಮಾಡಬ್ಯಾಡ’ ಅಂತಿದ್ಲು. ನನಗೆ ವಿಚಿತ್ರ ನಮ್ಮವ್ವ ಅನಿಸ್ತಿತ್ತು, ಅವರು ಏನಾದರೂ ನನ್ನ ಜೀವಕ್ಕ ಅಪಾಯ ಮಾಡಿದ್ರೆ ಎನ್ನೋ ಭಯವಿತ್ತೇನೋ ಆಕಿಗೆ.
ನಾನು ಹೈಸ್ಕೂಲಿನಲ್ಲಿ ಓದುವಾಗ ನಮ್ಮ ತಂದೆಯವರದ್ದು ಆಸ್ತಿ ಹಂಚಿಕೆ ಬಗ್ಗೆ ತುಂಬಾ ವರ್ಷ ಗದಗಿನ ನ್ಯಾಯಾಲಯದಾಗ ಕೇಸ್ ನಡೀತು. ‘ನಮ್ಮ ಆಸ್ತಿ ಬಂದಿಲ್ಲ’ ಅಂತ ಅವ್ವ ಕೇಸ್ ಹಾಕಿದ್ಲು. ನಮ್ಮ ತಂದೆ ಬದುಕಿದ್ದಾಗಲೇ ತನ್ನ ದೊಡ್ಡಣ್ಣ, ಮತ್ತವರ ಹೆಂಡ್ತಿ ವಿರುದ್ಧ ಕೇಸ್ ಹಾಕಿದ್ದರು. ಆ ಕೇಸು ಇನ್ನೂ ಮುಗಿದಿರಲಿಲ್ಲ. ದೊಡ್ಡಪ್ಪನ ಹೆಂಡ್ತಿ ಪಾರ್ವತೆಮ್ಮ ಅವರ ತವರು ಮನೆ ಬಾಗಲಕೋಟೆ. ಈ ದೊಡ್ಡಮ್ಮನ ಸಹೋದರ ಗುರುಬಸಪ್ಪ. ದೊಡ್ಡಪ್ಪ ತೀರಿಕೊಂಡ ಮ್ಯಾಗೆ ತಮ್ಮ ಮಗ ಚಂದ್ರಶೇಖರನೊಂದಿಗೆ ಸಹೋದರ ಗುರುಬಸಪ್ಪರ ಮನೆಯಾಗೇ ಇರ್ತಿದ್ದರು. ಅವರಿಗೆ ನಾವು ಪ್ರೀತಿಯಿಂದ ಮಾವ ಅಂತ ಕರೀತಿದ್ದೆವು. ಅವ್ರು ಕೋರ್ಟ್ನಾಗ ಗುಮಾಸ್ತರಾಗಿದ್ರು. ಅವರು ಅವ್ವನ ಈ ಹೋರಾಟಕ್ಕೆ ಗಟ್ಟಿ ಸಾಥ್ ನೀಡಿದ್ರು. ನನ್ನ ಕಂಡರೂ ಅವರಿಗೆ ವಿಶೇಷ ಪ್ರೀತಿ ಇತ್ತು. ಆದ್ರೆ ಈ ಕೋರ್ಟ್ ಕೇಸ್ ವರ್ಷಗಟ್ಟಲೇ ನಡೀತಾ ಹೋಯ್ತು. ತುಂಬಾ ಯಾತನಾದಾಯಕವಾದ ಅನುಭವ ಅದು. ಯಾಕಂದ್ರೆ ಕೋರ್ಟ್ಗೆ ಹೋಗಲಿಕ್ಕೆ ರೈಲ್ವೆ ಟಿಕೇಟ್ ತೆಗೆಸ್ಲಿಕ್ಕೆ ಸಹಿತ ನಮ್ಮ ಬಳಿನಾಗ ಹಣ ಇರ್ತಿರಲಿಲ್ಲ! ಪ್ರತಿ ವಿಚಾರಣೆಗೆ ನಾನು ಅವ್ವನ ಕೂಡೆ ಹೋಗ್ತಾ ಇದ್ದೆ. ವಕೀಲರು ಒಳ್ಳೆಯವರಿದ್ರು. ಗದಗ ಕೋರ್ಟ್ನಾಗ ನಮ್ಮ ಕೇಸ್ ಇತ್ತು. ಅಲ್ಲಿಗೆ ಮಾವನ್ನ ಕರ್ಕೊಂಡ್ ಹೋಗ್ತಾ ಇದ್ವಿ. ಕೊನೇಗೆ ನಾನು 9ನೇ ತರಗತಿಲಿರ್ವಾಗ ಕೇಸ್ ನಮ್ಮಂಗೆ ಆಯ್ತು. ಸ್ವಲ್ಪ ಆಸ್ತಿ ಕೈಗೆ ಬಂತು. ಆದರೆ ಕೋರ್ಟಿನ ಅನುಭವ ಎಷ್ಟು ಕಷ್ಟ ಇರ್ತದೆ ಅಂತ ಅವಾಗಿಂದಾನೇ ಗೊತ್ತಾಯ್ತು. ಗಂಟೆ ಗಟ್ಲೆ ಕಾಯೋದು, ಓಡಾಡೋದು, ದಾಖಲೆ ಒದಗಿಸೋದು… ಎಲ್ಲಾ.

ತನ್ನ ಬದುಕನ್ನ, ಕಷ್ಟದ ಜೊತೆ ಜೊತೆಗೇ ಸುಂದರವಾಗಿ ನಡೆಸಿದ ನನ್ನವ್ವ, ಒಂದು ಸಂಗತಿ ಮೂಲಕ ನನ್ನನ್ನ ಸದಾ ಜಾಗೃತಗೊಳಿಸ್ತಾಳೆ. ಬಿಜಾಪುರದಲ್ಲಿ ನಾವು ವಾಸಿಸೋ ಓಣಿಯಲ್ಲಿ ಒಬ್ಬ ವಿಧವೆ ಇದ್ದರು. ಅವರ ಬಗ್ಗೆ ಮಂದಿ ಬಹಳ ಹಗುರವಾಗಿ ಮಾತಾಡ್ತಿದ್ದರು. ಅವ್ವ ಅದನ್ನ ಆ ಮಂದಿ ಮುಂದೇನೇ ಅಗ್ದಿ ಕಟುವಾಗಿ ವಿರೋಧಿಸ್ತಿದ್ದಳು. ‘ಯಾರ ನಡ್ತೆ ಬಗ್ಗೂ ಹಗುರವಾಗಿ ಮಾತಾಡ್ಬಾರದು, ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಬೇಕು’ ಅಂತ ಎಲ್ಲರ ಮುಂದೆಯೂ ಹೇಳಿ ಮನವರಿಕಿ ಮಾಡಿಕೊಡ್ತಿದ್ದಳು. ಆ ಮಹಿಳೆಯ ಬಗ್ಗೆ ಮಾತನಾಡೋವ್ರ ವಿರುದ್ದ ನಿಂತು, ಆ ವಿಧವೆ ಬದುಕಿಗೆ ಆತ್ಮಸ್ಥೈರ್ಯ ತಂದುಕೊಟ್ಟಿದ್ದು ನನ್ನ ಅವ್ವ. ಇದು ನನ್ನ ಕಣ್ಣಿಗೆ ಕಟ್ದಂಗೆ ಇದೆ. ಇದನ್ನ ಸದಾ ನೆನಪಿಸಿಕೊಳ್ಳೋ ನಾನು, ಇಂದಿಗೂ ಯಾವ್ದೇ ವ್ಯಕ್ತಿ ವಿರುದ್ಧ ಮಾತಾಡೋ ಮುಂದ ಸಾಕ್ಷ್ಯಾಧಾರಗಳಿಲ್ಲದೇ ಟೀಕೆ ಮಾಡೂದಿಲ್ಲ. ‘ಹೊಗಳಿಕೆ ತೆಗಳಿಕೆಗಳಿಗೆ ಎಂದೂ ತಲೆ ಕೆಡಿಸಿಕೊಳ್ಳಬಾರದು. ಆದರೆ ನಾವು ಯಾವತ್ತೂ ಯಾರ ಎದಿರೂ ತಲೆ ತಗ್ಗಿಸಿ ನಿಲ್ಲುವಂತಾ ಕೆಲಸ ಮಾಡಬಾರದು. ನಮ್ಮ ಎದುರಿಗೆ ಇರುವವರು ಸಹಿತ ತಲೆ ತಗ್ಗಿಸಬೇಕು ಎಂದೂ ಬಯಸಬಾರದು’ ಅಂತ ಅವ್ವ ಯಾವಾಗೂ ಹೇಳ್ತಿದ್ದಳು. ಇದು ನನಗೆ ಅವ್ವ ಕಲಿಸಿದ ಪಾಠ. ನಮ್ಮ ಬದುಕಿನ ಬಡತನದ ಹೊತ್ತಿನಲ್ಲಿ ನನ್ನ ಅವ್ವ ಪ್ರವಚನ, ವಚನ ಸಾಹಿತ್ಯ, ಶರಣ ಸಾಹಿತ್ಯ, ಭಗವದ್ಗೀತೆ ಇವೆಲ್ಲದರ ಕೂಡೆ ನನಗೆ ನಂಟು ಬೆಳೆಸಿದ್ಲು. ಬದುಕು ಅಂದರೇನು ಅಂತ ಆ ಮೂಲಕ ನನಗೆ ಅರಿವು ಮೂಡಿಸ್ತಾ ಹೋದ್ಲು. ಆ ಕಾರಣಕ್ಕಾಗೇ ನಾನಿವತ್ತು ಹೋರಾಟದ ಬದುಕಿಗೆ ಬಂದಿದ್ದೀನೆನ್ನಿಸ್ತದ, ಓದಿದ್ದರ ಹಿನ್ನೆಲೆಯಲ್ಲಿ ಬಂದದ್ದಲ್ಲ! ನಿಜವಾಗೂ ನಾನು ಈ ಹೋರಾಟಕ್ಕೆ ಬರಲು ಮುಖ್ಯ ಪ್ರೇರಣೆ ನನ್ನ ಅವ್ವಂದಿರು! ಅನ್ಯಾಯದ ವಿರುದ್ಧ ಹೋರಾಡೋ ಅವರ ದಿಟ್ಟತನ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಜಾತಿಶ್ರೇಷ್ಠತೆಯ ವ್ಯಸನ- ‘ಸನಾತನ’ ಮನಸ್ಥಿತಿಯ ವ್ಯಾಧಿ
ಅವ್ವ ಹತ್ತಿ ಬಟ್ಟೆ ಮಾಡ್ಲಿಕ್ಕೆ ನೂಲು ತೆಗೆಯೋ ಉಪಜೀವನ ಆರಂಭಿಸಿ ನಮ್ಮನ್ನ ಬೆಳೆಸಿದ್ಲು. ನನಗ ಸ್ಪಷ್ಟವಾಗಿ ನೆನಪಿರೋದೂ ಅಂದ್ರ ಚಿಕ್ಕಂದಿನಾಗಿಂದ ಹೈಸ್ಕೂಲ್ವರ್ಗೂ ನಾವು ಮನಿಯಾಗ ಚರಕದಿಂದ ಖಾದಿ ನೂಲ್ತಾ ಇದ್ದೆವು. ಕುಕ್ಕಡಿ ಏನದಲ್ಲಾ, ಮನೆನಲ್ಲೆ ಎಲ್ಲರೂ ಮಾಡ್ತಾ ಇದ್ದೆವು. ಅವಾಗಿನ ಕಾಲಕ್ಕೆ ಎರಡು ಪ್ರಕಾರದ ರಾಟೆ ಇರ್ತಿತ್ತು. ಒಂದು ಗಾಂಧೀಜಿ ಚರಕದ ತರದ್ದು, ಒಂದು ಗಾಲಿ ದೊಡ್ಡದು. ಇನ್ನೊಂದು ಚಿಕ್ಕದು. ಎರಡೂ ಚಿಕ್ಕ ಗಾಲಿಗಳಿರೋ ರಾಟೆಯನ್ನ ‘ಅಂಬರ ಚಕ್ರ’ ಅಂತಿದ್ರು. ಖಾದಿ ಕೇಂದ್ರದವರು ಬೇಕಾದವರ ಮನಿಗೆ ಖಾದಿ ಲಡಿ ನೀಡ್ತಾ ಇದ್ದರು. ಅದನ್ನ ನೂತು ತ್ರಿಕೋನಗತಿಲೇ ಸುತ್ತಿ ತುಕಡಿ ಮಾಡಿ ಅದನ್ನ ಪ್ರತಿ ವಾರ ಖಾದಿ ಕೇಂದ್ರಕ್ಕೆ ಕೊಂಡೊಯ್ದು ಕೊಡ್ತಾ ಇದ್ದೆವು. ಅದಕ್ಕವರು ಒಂದಿಷ್ಟು ಹಣ ಕೊಡ್ತಾ ಇದ್ದರು. ಮನ್ಯಾಗ ಎರಡು ರಾಟೆ ಕೂಡ ಇತ್ತು. ಬಿಡುವಿದ್ದವರು ಬದಲಾಯ್ಸಿ ಬದಲಾಯ್ಸಿ ನೂಲ್ತಾ ಇದ್ದೆವು. ಇನ್ನೊಂದು ಕೆಲ್ಸ ಏನು ಮಾಡ್ತಾ ಇದ್ವಿ ಅಂದ್ರೆ, ಮನೆಯಿಂದ ಒಂದು ಒಂದುವರೀ ಕಿಲೋಮೀಟರ್ ದೂರದಾಗೆ ಒಬ್ರು ದೊಡ್ಡ ಗುತ್ತಿಗೆದಾರರಿದ್ರು. ಅವರ ಮನಿಯಾಗೆ ಒಂದು ದೊಡ್ಡ ಆವರಣ ಇತ್ತು. ಒಂದು 30-40 ಮಂದಿ ಎಲ್ಲ ಕೆಲ್ಸಕ್ಕೆ ಸೇರ್ತಿದ್ದರು. ಶೇಂಗಾ ಬೆಳೆದು ಬಿಡಿಸಿ ಹರವರ್ತಿದ್ರು. ಅದರೊಳಗಿನ ಕಲ್ಲು, ಕಸ, ಹರಳು ಎಲ್ಲ ತೆಗೆದು ಅದನ್ನ ಶುಚಿ ಮಾಡಿ ಆಯ್ದು ಕೊಡೋದು ಮಾಡ್ತಿದ್ವಿ. ಅದಕ್ಕವ್ರು ಒಂದಿಷ್ಟು ಪುಡಿಕಾಸು ಕೊಡ್ತಿದ್ದರು.
(10.9.2023ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಬೆಳಗ್ಗೆ 10.30ಕ್ಕೆ ಬಿಡುಗಡೆಯಾಗುತ್ತಿರುವ ರೂಪ ಹಾಸನ ಅವರು ರಚಿಸಿರುವ ‘ಮಹಾಸಂಗ್ರಾಮಿ’ ಎಸ್.ಆರ್.ಹಿರೇಮಠ ಅವರ ರಚನಾತ್ಮಕ ಪ್ರಯೋಗಗಳ ಬಾಳ್ಕಥನ ಕೃತಿಯಿಂದ ‘ಬೆಳವಣಿಕೆಯಲ್ಲಿ ಹುಟ್ಟಿ…’ ಅಧ್ಯಾಯದಿಂದ ಆಯ್ದ ಒಂದು ಭಾಗ. ಅಭಿರುಚಿ ಪ್ರಕಾಶನ ಹೊರತಂದಿರುವ ಇದರ ಮುಖಬೆಲೆ 600 ರೂಗಳು. ಪುಸ್ತಕಕ್ಕಾಗಿ 9980560013 ಸಂಪರ್ಕಿಸಿ.)