ಸಮಾಜದ ಶಾಂತಿಗೆ ಭಂಗ ತರುವ ಘಟನೆಗಳು, ದೌರ್ಜನ್ಯಗಳು ನಡೆದ ಸಂದರ್ಭದಲ್ಲಿ ಕೊಂಚವೂ ಹಿಂದೆ ಮುಂದೆ ನೋಡದೆ ಧೈರ್ಯದಿಂದ ಮುನ್ನುಗ್ಗಿ ಪ್ರತಿಭಟಿಸುವ ಮತ್ತು ಸಾಮಾಜಿಕ ಪ್ರತಿರೋಧದ ಭಾಗವಾಗಿ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುವ ಮೇಷ್ಟ್ರು ಕೆ.ಎಂ.ಎಸ್. ಇಂತಹ ಮೇಷ್ಟ್ರ ಅಭಿಮಾನಿ ಬಳಗದಿಂದ ಇಂದು ಸಂಜೆ 5 ಕ್ಕೆ ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ‘ಎದೆಯ ದನಿ’ ಕೃತಿ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭ
ಬಾಬ್ರಿ ಮಸೀದಿ ಉರುಳಿಬಿದ್ದು ದೇಶ ಅಲ್ಲೋಲಕಲ್ಲೋಲವಾದ ಹೊತ್ತು. ಕೋಮು ದ್ವೇಷದ ಕಿಚ್ಚು ಎಲ್ಲೆಲ್ಲೂ ಪಸರಿಸಿ ಜನಸಾಮಾನ್ಯರನ್ನು ನಡುಗಿಸಿಬಿಟ್ಟಿತ್ತು… ಗೋಧ್ರಾ ಪ್ರಕರಣ ನಡೆದು ಗುಜರಾತಿನಲ್ಲಿ ನಡೆದ ಭೀಕರ ಹತ್ಯಾಕಾಂಡ ದೇಶದ ಅಂತಃಸತ್ವವನ್ನೇ ಉಡುಗಿಸಿತ್ತು… ದಾಭೋಲ್ಕರ್ ಹತ್ಯೆ, ಗೋವಿಂದ ಪಾನ್ಸರೆ, ಎಂ.ಎಂ. ಕಲಬುರ್ಗಿ, ಗೌರಿಯ ಕೊಲೆ ಎಲ್ಲ ಪ್ರಜ್ಞಾವಂತರ ಚಿಂತನಾಶಕ್ತಿಯನ್ನು ಕಂಗೆಡಿಸಿತ್ತು. ಅಂತಹ ಸಂದರ್ಭಗಳಲ್ಲೆಲ್ಲಾ ನಡೆದ ಪ್ರತಿಭಟನೆಗಳಲ್ಲಿ ಕೆ.ಎಂ.ಎಸ್. ಮುಂಚೂಣಿಯಲ್ಲಿರುತ್ತಿದ್ದರು. ಅದೇಕೋ ಕನ್ನಡ ಸಾಹಿತ್ಯ ಬೋಧಿಸುವ ಮೇಷ್ಟ್ರು ನನಗೆ ಹೆಚ್ಚು ಆಪ್ತವಾಗುತ್ತಿದ್ದದ್ದು ಈ ತಾಣಗಳಲ್ಲಿ.
1977ರಿಂದ 1979ರವರೆಗೆ ನಾನು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಾಹಿತ್ಯದ ವಿದ್ಯಾರ್ಥಿನಿ. ಸೆಂಟ್ರಲ್ ಕಾಲೇಜಿನಲ್ಲಿ ನಡೆಯುತ್ತಿದ್ದ ಸಂಜೆ ಕಾಲೇಜಿನಲ್ಲಿ ಓದುತ್ತಿದ್ದವಳು. ಅಂದಿನ ದಿನಗಳಲ್ಲಿ ವಿದ್ವತ್ತು, ಬೋಧನಾ ಕೌಶಲ್ಯದ ಹಿರಿಮೆಗೆ ಹೆಸರಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕ ವರ್ಗ ಇಡೀ ನಾಡಿನ ಗಮನ ಸೆಳೆದಿತ್ತು. ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದ್ದ ಹಲವಾರು ಸಾಹಿತಿಗಳು ಅಂದು ಅಧ್ಯಾಪಕವೃಂದದಲ್ಲಿದ್ದರು. ಆದರೆ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯದ ಆಯ್ಕೆಗೆ ಸೀಮಿತ ಅವಕಾಶಗಳು ಇದ್ದ ಸಂಜೆ ಕಾಲೇಜಿನಲ್ಲಿ ಓದಿದ್ದರಿಂದ, ನಾನು ಹಲವಾರು ಉತ್ತಮ ಅಧ್ಯಾಪಕರ ಪಾಠ ಕೇಳುವ ಅವಕಾಶದಿಂದ ವಂಚಿತಳಾದೆ. ಹಾಗೆ ಪಾಠ ಕೇಳದೇ ಹೋದ ಅಧ್ಯಾಪಕರಲ್ಲಿ ಕೆ.ಎಂ.ಎಸ್. ಕೂಡ ಒಬ್ಬರು. ನಂತರದ ದಿನಗಳಲ್ಲಿ ಆ ಕೊರತೆಯನ್ನು ನಾನು ಬೇರೆ ರೀತಿಯಲ್ಲಿ ತುಂಬಿಕೊಂಡದ್ದು ಬೇರೆ ಮಾತು.
ಕೆ.ಎಂ.ಎಸ್. ಅವರು ಪ್ರಸಾರಾಂಗದ ನಿರ್ದೇಶಕರಾಗಿ ಹಲವಾರು ಗಣನೀಯ ಕೆಲಸಗಳನ್ನು ಮಾಡಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮಗಳು ಹಲವಾರು. ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ದೇಶದ ವಿವಿಧ ಭಾಗಗಳಿಂದ ಬಂದ ಹಲವಾರು ವಿದ್ವಾಂಸರು ನೀಡಿದ ಉಪನ್ಯಾಸಗಳು ವಿಶ್ವವಿದ್ಯಾನಿಲಯದ ಬೌದ್ಧಿಕ ಪರಿಸರವನ್ನು ವಿಸ್ತರಿಸಿದವು. ದೇವಿಪ್ರಸಾದ್ ಚಟ್ಟೋಪಾಧ್ಯಾಯ, ಭೀಷಮ್ ಸಹಾನಿ, ನಿಖಿಲ್ ಚಕ್ರವರ್ತಿ, ಜಸ್ಟೀಸ್ ಚಿನ್ನಪ್ಪ ರೆಡ್ಡಿ ಮುಂತಾದವರನ್ನು ಅವರು ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಿದ್ದರು. ನಮ್ಮ ದೇಶದ ಪ್ರಖ್ಯಾತ ತತ್ವಶಾಸ್ತ್ರಜ್ಞರಾದ ಕೋಲ್ಕತ್ತಾದ ದೇವಿಪ್ರಸಾದ್ ಚಟ್ಟೋಪಾಧ್ಯಾಯರನ್ನು ವಿಶ್ವವಿದ್ಯಾನಿಲಯಕ್ಕೆ ಆಹ್ವಾನಿಸಿ ಉಪನ್ಯಾಸವನ್ನು ಏರ್ಪಡಿಸಿದ್ದ ಸಂದರ್ಭದಲ್ಲಿ ಅವರ ಸಂಘಟನಾ ಸಾಮರ್ಥ್ಯವನ್ನು ತೀರ ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತು. ಎಂಎ ಮಾಡುವಾಗ ನೇರವಾಗಿ ಅವರ ವಿದ್ಯಾರ್ಥಿನಿಯಾಗುವ ಅವಕಾಶ ಸಿಕ್ಕದಿದ್ದರೂ, ನಂತರದ ದಿನಗಳಲ್ಲಿ ಸಮಾಜಮುಖಿಯಾಗಿ ಅವರು ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗವಹಿಸುವಾಗ ಅವರೊಡನೆ ಧರಣಿ, ಪ್ರತಿಭಟನಾ ಪ್ರದರ್ಶನ ಮತ್ತು ಮೆರವಣಿಗೆಗಳಲ್ಲಿ ಸಹ ಪಯಣಿಗಳಾಗಿ ಅವರೊಡನೆ ಭಾಗವಹಿಸಿದ್ದೇನೆ.
1985ರಲ್ಲಿ ನಾವು ಕೆಲವು ಗೆಳತಿಯರು ಸೇರಿ ಜಾಗೃತಿ ಮಹಿಳಾ ಅಧ್ಯಯನ ಕೇಂದ್ರವನ್ನು ಆರಂಭಿಸಿದ್ದೆವು. ಅದರ ಮೂಲಕ ನಾವು ‘ಅಚಲ’ ಎಂಬ ಮಹಿಳಾ ಪತ್ರಿಕೆಯನ್ನು ಆರಂಭಿಸಿದೆವು. ಆ ಪತ್ರಿಕೆಯ ಬಿಡುಗಡೆಯ ಸಂದರ್ಭದಲ್ಲಿ ‘ಕನ್ನಡ ಮಾಧ್ಯಮದಲ್ಲಿ ಮಹಿಳೆ’ ಎಂಬ ವಿಷಯದ ಬಗ್ಗೆ ಎರಡು ದಿನಗಳ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದೆವು. ಈ ವಿಚಾರ ಸಂಕಿರಣವನ್ನು ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದೊಡನೆ ಸಂಯುಕ್ತವಾಗಿ ಯೋಜಿಸಿದ್ದೆವು. ಈ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿ ಅದರ ಬೆನ್ನೆಲುಬಾಗಿ ನಿಂತಿದ್ದವರು ಕೆ.ಎಂ.ಎಸ್.ರವರು. ಆಗ ಅವರು ಪ್ರಸಾರಾಂಗದ ನಿರ್ದೇಶಕರಾಗಿದ್ದರು. ಆಗ ಅವರು ತೋರಿದ ಸಂಘಟನಾ ಚತುರತೆ ಮತ್ತು ಕಾರ್ಯದಕ್ಷತೆ ಮರೆಯಲಾಗದ್ದು.
ಹೀಗೆ ಸಾರ್ವಜನಿಕ ಚಟುವಟಿಕೆಗಳ ಮೂಲಕ ಪರಿಚಯವಾಗಿದ್ದ ಮೇಷ್ಟ್ರು ಕೆ.ಎಂ.ಎಸ್.ರವರನ್ನು ನನಗೆ ಪಿಎಚ್.ಡಿಗೆ ಮಾರ್ಗದರ್ಶಕರಾಗಿ ಎಂದು ಕೇಳಿಕೊಂಡೆ. ಅದು 1990ರ ಆರಂಭದ ಕಾಲ. ಎಂಎಯಲ್ಲಿ ನಾನು ನೇರವಾಗಿ ಅವರಿಗೆ ವಿದ್ಯಾರ್ಥಿನಿಯಾಗಿಲ್ಲದ್ದರಿಂದ ಮೇಷ್ಟರಿಗೆ ನನ್ನ ಕಲಿಕಾ ಸಾಮರ್ಥ್ಯದ ಬಗ್ಗೆ ಏನೂ ಗೊತ್ತಿರಲಿಲ್ಲ. ಜೊತೆಗೆ, ಯಾವಾಗಲೂ ಚಳುವಳಿ, ಹೋರಾಟ, ಸಭೆ, ಸಮಾರಂಭ– ಎಂದು ಓಡಾಡಿಕೊಂಡಿದ್ದವಳನ್ನು ಶಿಷ್ಯೆಯಾಗಿ ತೆಗೆದುಕೊಳ್ಳಲು ಅನುಮಾನಿಸಿದರೇನೋ(ಇದು ನನ್ನ ಊಹೆ! ಅವರು ಹಾಗೆ ಎಂದೂ ವ್ಯಕ್ತಪಡಿಸಿಲ್ಲ). ಆಗ ವಯಸ್ಕ ಶಿಕ್ಷಣದ ಅಂಗವಾಗಿ ನವಸಾಕ್ಷರರಿಗೆ ಪುಸ್ತಕ ತರುವ ಯೋಜನೆಯೊಂದಕ್ಕೆ ಅವರು ಮುಖ್ಯಸ್ಥರಾಗಿದ್ದರು. ಆ ಯೋಜನೆಯ ಅಂಗವಾಗಿ ನನಗೆ ‘ಮೇರಿ ಕ್ಯೂರಿ’ಯನ್ನು ಕುರಿತು ಕಿರು ಪುಸ್ತಕ ಬರೆಯಲು ಹೇಳಿದರು. ನಾನು ಈ ಪರೀಕ್ಷೆಯಲ್ಲಿ ಪಾಸಾದೆ. ‘ಮೇರಿ ಕ್ಯೂರಿ’ಯನ್ನು ಕುರಿತ ಆ ಕಿರುಪುಸ್ತಕವನ್ನು ಅವರು ಮೆಚ್ಚಿದರು. ಹಾಗೆಯೇ, ನನ್ನನ್ನು ಪಿಎಚ್.ಡಿಗೆ ಶಿಷ್ಯೆಯಾಗಿ ಒಪ್ಪಿಕೊಂಡರು (ಈ ಎರಡೂ ಘಟನೆಗಳಿಗೆ ಸಂಬಂಧವಿಲ್ಲದಿರಬಹುದು. ನನ್ನ ಊಹೆ ಅಷ್ಟೇ).
ನಾನು ಸಂಶೋಧನೆ ಮಾಡುವಾಗ ರಿಸರ್ವ್ ಬ್ಯಾಂಕಿನಲ್ಲಿ ಉದ್ಯೋಗಿ. ನಮ್ಮಂಥ ಅರೆಕಾಲಿಕ ವಿದ್ಯಾಥಿಗಳನ್ನು ಸಂಭಾಳಿಸುವುದು ಅಧ್ಯಾಪಕರುಗಳಿಗೆ ನಿಜವಾಗಿಯೂ ಕಷ್ಟದ ಕೆಲಸವೇ ಸರಿ. ನಾನೂ ಇದಕ್ಕೆ ಹೊರತಾಗಿರಲಿಲ್ಲ. ಬ್ಯಾಂಕಿನ ಕೆಲಸ, ಜೊತೆಗೆ ಹೋರಾಟ, ಚಳುವಳಿಯ ಕೆಲಸ (ಸಾಲದ್ದಕ್ಕೆ ಈ ಅವಧಿಯಲ್ಲಿ ನಾನು ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯೂ ಆಗಿದ್ದೆ!) ಮತ್ತು ನನ್ನ ಚಾರಣದ ಹುಚ್ಚು – ಈ ಎಲ್ಲ ಜಂಜಡಗಳ ಜೊತೆಗೆ ಅದೇನು ಓದಿದೆನೋ, ಗೊತ್ತಿಲ್ಲ. ಕೆಲವೊಮ್ಮೆ ನನ್ನ ಅಶಿಸ್ತಿನಿಂದ ಅವರಿಗೆ ಬೇಸರ ಬರಿಸಿರಲೂ ಸಾಕು. ಸಮಯಕ್ಕೆ ಸರಿಯಾಗಿ ಅಧ್ಯಯನದ ವರದಿ ಕೊಡದೆ ತಡ ಮಾಡಿದ್ದೂ ಇದೆ. ಆಗೆಲ್ಲಾ ಅವರಿಗೆ ಸಿಟ್ಟು ಬಂದಿರಬಹುದು. ರಂಗಭೂಮಿಯ ಕ್ಷೇತ್ರದಲ್ಲಿದ್ದ ನನ್ನ ತಂಗಿ ಸಿಕ್ಕಾಗ ‘ಎಲ್ರೀ ನಿಮ್ಮ ಅಕ್ಕ? ಅಡ್ರೆಸ್ಸೇ ಇಲ್ಲ!’ ಎಂದು ಕೇಳಿದ್ದರಂತೆ. ಯಥಾಪ್ರಕಾರ ಅವಳು ನಾನು ಎಲ್ಲೋ ಹಿಮಾಲಯದತ್ತ ಚಾರಣ ಹೋಗಿದ್ದನ್ನು ಹೇಳಿದರೆ, ‘ಅದು ಎಷ್ಟು ಸಲ ಹಿಮಾಲಯಕ್ಕೆ ಹೋಗೋದು?’ ಎಂದು ಕೇಳಿದ್ದರಂತೆ. ಹಿಮಾಲಯದ ಹುಚ್ಚು ಹಚ್ಚಿಸಿಕೊಂಡರೆ ಹೇಗಿರುತ್ತದೆಂದು ಅವರಿಗೇನು ಗೊತ್ತು? ಅಂತೂ ಇಂತೂ ನನ್ನ ಪಿಎಚ್.ಡಿ ಮುಗಿಸಿ ಅವರಿಗೆ ನಿರಾಳ ಮಾಡಿದ್ದೆ. ನಾನು ನನ್ನ ಸಂಶೋಧನೆಯ ಆರು ವರ್ಷಗಳ ಕಾಲ ವಿಶ್ವವಿದ್ಯಾಲಯದ ಕ್ಯಾಂಪಸ್‍ಗೆ ಹೋಗಲು ಸಾಧ್ಯವಾಗದ್ದರಿಂದ, ಅವರ ಮನೆಗೆ ಹೋಗುತ್ತಿದ್ದೆ. ಇಲ್ಲವೆ, ನಾಟಕ ಅಕಾಡೆಮಿಯ ಕಚೇರಿಯಲ್ಲಿ ಭೇಟಿ ಮಾಡಿ ಮಾರ್ಗದರ್ಶನ ಪಡೆಯುತ್ತಿದ್ದೆ. ನನ್ನ ಎಲ್ಲಾ ಕಾಟವನ್ನು ಸಹಿಸಿಕೊಂಡಿದ್ದಲ್ಲದೆ, ಅವರು ಎಂದೂ ಸಿಟ್ಟಿನಿಂದ ನನ್ನನ್ನು ನಿಂದಿಸಿಲ್ಲ. ಇದು ಅವರ ಸಹನೆಯ ಒಂದು ಮುಖ. ಆಗೆಲ್ಲ ಅವರ ಮನೆಯಲ್ಲಿ ಅವರ ಮಡದಿ ಜಯಂತಿಯವರ ಆದರದ ಆತಿಥ್ಯದ ಸವಿಯುಂಡಿದ್ದೇನೆ.
ಇದನ್ನು ಓದಿದ್ದೀರಾ?: ʼಈ ದಿನʼ ವಿಶೇಷ | ಇಲ್ಲ, ಇಲ್ಲ, ನೆಹರೂ ನಿವೃತ್ತರಾಗುವುದಿಲ್ಲ…
ನನ್ನ ಗುರುಗಳಾದ ಡಾ. ಜಿ. ರಾಮಕೃಷ್ಣ ಅವರಿಗೆ ನಾವು ವಿದ್ಯಾರ್ಥಿಗಳು ಮತ್ತು ಕೆಲವು ಶಿಕ್ಷಕ ಮಿತ್ರರು ಸೇರಿ ಒಂದು ಅಭಿನಂದನಾ ಗ್ರಂಥವನ್ನು ತರುವ ಯೋಜನೆ ಹಾಕಿಕೊಂಡಾಗ, ಆ ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕರಾಗಿದ್ದವರು ಡಾ. ಕೆ.ಎಂ.ಎಸ್. ಅವರು. ನಾನೂ ಅವರೊಂದಿಗೆ ಈ ಕಾರ್ಯದಲ್ಲಿ ಜೊತೆಯಾಗಿ ಕೆಲಸ ಮಾಡುವ ಅವಕಾಶ ಒದಗಿ ಬಂದಿತ್ತು. ಆಗ ಅವರಲ್ಲಿದ್ದ ಸಮಯಪ್ರಜ್ಞೆ, ಶಿಸ್ತುಬದ್ಧ ಕಾರ್ಯತತ್ಪರತೆ ಮತ್ತು ಸರಳತೆಯನ್ನು ಕಂಡು ನನಗೆ ತುಂಬ ಸಂತೋಷವಾಗಿತ್ತು. ಅದು ನಿಜವಾಗಿಯೂ ಎಲ್ಲರಿಗೂ ಬೇಕಾದ ಅನುಕರಣೀಯ ಗುಣಗಳು. ಕೆ.ಎಂ.ಎಸ್. ಅವರ ನೇತೃತ್ವದಲ್ಲಿ ‘ಸಂಗಾತಿ’ ಅಭಿನಂದನಾ ಗ್ರಂಥ ಅರ್ಥಪೂರ್ಣವಾಗಿ ಮತ್ತು ವಿದ್ವತ್ಪೂರ್ಣವಾಗಿ ಸಿದ್ಧವಾಗಿ ಅಭಿನಂದನಾ ಸಮಾರಂಭದ ಕಳೆಯನ್ನು ಹೆಚ್ಚಿಸಿತು.
ಅವರು ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹಲವಾರು ಅನುವಾದದ ಮೌಲಿಕ ಕೃತಿಗಳನ್ನು ಪ್ರಕಟಿಸಿ ಕನ್ನಡ ಅಕ್ಷರ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ. ಆ ಸಂದರ್ಭದಲ್ಲಿ ದೇವಿಪ್ರಸಾದ್ ಚಟ್ಟೋಪಾಧ್ಯಾಯರನ್ನು ಕುರಿತ ವಾಚಿಕೆಯನ್ನು ಸಿದ್ಧಗೊಳಿಸುವ ಜವಾಬ್ದಾರಿಯನ್ನು, ನನಗೆ ವಹಿಸಿದ್ದರು. ನಾನು ತುಂಬ ಇಷ್ಟಪಡುವ ಮತ್ತು ಗೌರವಿಸುವ ದೇವಿಪ್ರಸಾದರನ್ನು ಕುರಿತ ವಾಚಿಕೆಯನ್ನು ರೂಪಿಸುವದಕ್ಕೆ ಅವಕಾಶ ಕಲ್ಪಿಸಿ ದೇವಿಪ್ರಸಾದರಿಗೆ ಗೌರವ ಸಲ್ಲಿಸುವುದಕ್ಕೆ ಕಾರಣಕರ್ತರಾದ ಕೆ.ಎಂ.ಎಸ್.ರವರಿಗೆ ನಾನು ಆಭಾರಿ.
ನಮ್ಮ ಸಮಾಜದ ಶಾಂತಿಗೆ ಭಂಗ ತರುವ ಘಟನೆಗಳು ನಡೆದಾಗ, ದೌರ್ಜನ್ಯಗಳು ನಡೆದ ಸಂದರ್ಭದಲ್ಲಿ ಕೊಂಚವೂ ಹಿಂದೆ ಮುಂದೆ ನೋಡದೆ ಧೈರ್ಯದಿಂದ ಮುನ್ನುಗ್ಗಿ ಪ್ರತಿಭಟಿಸುವ ಮತ್ತು ಸಾಮಾಜಿಕ ಪ್ರತಿರೋಧದ ಭಾಗವಾಗಿ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುವ ಮೇಷ್ಟ್ರು ಕೆ.ಎಂ.ಎಸ್. ಎಂದಿಗೂ ನನಗೆ ಅನುಕರಣೀಯರು.
(‘ಎದೆಯ ದನಿ’ ಅಭಿನಂದನಾ ಗ್ರಂಥದಿಂದ ಆಯ್ದ ಬರೆಹ. ಎನ್. ಗಾಯತ್ರಿ, 9449612792, Mygaven3@gmail.com)