ನಾ. ಡಿಸೋಜ ಅವರ ಕಾಲಘಟ್ಟದ ಬಹುತೇಕ ಸಾಹಿತಿಗಳು ಒಬ್ಬ ಕಥಾನಾಯಕ ಹಾಗೂ ಕಥಾನಾಯಕಿಯುಳ್ಳ ರೊಮ್ಯಾಂಟಿಕ್ ಫ್ಯಾಂಟಸಿಯ ಕಾದಂಬರಿಗಳನ್ನು ರಚಿಸುವಾಗ ಇವರು ತಮ್ಮ ಕಾದಂಬರಿಗಳಲ್ಲಿ, ಕತೆಗಳಲ್ಲಿ ಜನಸಾಮಾನ್ಯರ ಶೋಷಿತರ ಕಷ್ಟಗಳಿಗೆ ದನಿಯಾಗಿದ್ದರು.
ಖ್ಯಾತ ಸಾಹಿತಿ ಡಾ ನಾ ಡಿಸೋಜರವರ ಅಗಲಿಕೆ ಇಡೀ ಸಾಹಿತ್ಯ ಕ್ಷೇತ್ರಕ್ಕೆ ಆಘಾತವನ್ನು ತಂದಿದ್ದು ಒಂದು ಯುಗದ ಅಂತ್ಯವಾದಂತೆ ಭಾಸವಾಗುತ್ತಿದೆ. ಹಿರಿ ತಲೆಮಾರು ಎಂದು ಉಳಿದುಕೊಂಡಿದ್ದ ಕೆಲವೇ ಸಾಹಿತಿಗಳಲ್ಲಿ ನಾ ಡಿಸೋಜ ಅವರೂ ಒಬ್ಬರಾಗಿದ್ದರು. ಆದರೆ ಇಂದು ಆ ಕೊಂಡಿಯೂ ಕಳಚಿ ಹೋಗಿದೆ. ಕನ್ನಡ ಸಾಹಿತ್ಯದಲ್ಲಿ ಹೆಮ್ಮರದಂತಿದ್ದ ನಾಡಿಯವರು ನನ್ನಂತಹ ಎಷ್ಟೋ ಕಿರಿಯ ಪ್ರತಿಭೆಗಳಿಗೆ ಮಾರ್ಗದರ್ಶಕರಾಗಿದ್ದರು. ಲೆಕ್ಕವಿಲ್ಲದಷ್ಟು ಸಾಹಿತ್ಯ ಪ್ರೇಮಿಗಳಿಗೆ ಹಾಗೂ ಉದಯೋನ್ಮುಖ ಬರಹಗಾರರಿಗೆ ಪ್ರೇರಣೆಯಾಗಿದ್ದರು. ಅವರು ಕಂಡ ಪ್ರಪಂಚ, ಅನುಭವಿಸಿದ ಬದುಕು, ಒಡನಾಡಿದ ಜನರು, ಹೋರಾಡಿದ ಹಾದಿ ಇವೆಲ್ಲವೂ ಅವರ ಸಾಹಿತ್ಯದಲ್ಲಿ ಪ್ರತಿಬಿಂಬಿತವಾದದ್ದನ್ನಷ್ಟೇ ನಾವು ಓದುತ್ತಾ ಬಂದಿದ್ದೇವೆ. ಆದರೆ ಆ ಪುಸ್ತಕಗಳಲ್ಲಿ ಉಲ್ಲೇಕಿಸಿದ್ದಕ್ಕಿಂತಲೂ ಮಿಗಿಲಾದ ದೈತ್ಯ ಜ್ಞಾನ ಭಂಡಾರ ಅವರಲ್ಲಿತ್ತು. ಅವರ ಕಣ್ಣುಗಳು ಹಲವಾರು ಪೀಳಿಗೆಗಳಿಂದ ನಡೆದುಕೊಂಡು ಬಂದ ಆಚಾರ ವಿಚಾರಗಳು, ಬದಲಾವಣೆಗಳು, ಅಭಿವೃದ್ಧಿ-ಪತನಗಳು ಇವೆಲ್ಲವನ್ನೂ ಕಂಡಿತ್ತು. ಅವರ ಜೊತೆಗೂಡಿ ಮಾತನಾಡಿದ ಪ್ರತಿಯೊಬ್ಬರಿಗೂ ಅದು ಗಮನಕ್ಕೆ ಬಾರದೇ ಇರಲಾರದು. ಆದರೆ ಆ ಒಂದು ದೊಡ್ಡ ಜ್ಞಾನ ಭಂಡಾರವನ್ನು ನಾವಿಂದು ಕಳೆದುಕೊಂಡಿದ್ದೇವೆ.
ನಿನ್ನೆಯಿಂದ ನಾ. ಡಿಸೋಜರವರ ನಿಧನದ ಸುದ್ದಿಯ ನಂತರ ಹಲವಾರು ಬರಹಗಾರರು ಅವರಿಗೆ ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿರುವುದನ್ನು ನಾನು ನೋಡಿದೆ. ಅದರಲ್ಲಿ ಬಹಳಷ್ಟು ಜನರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕ್ರೈಸ್ತರಾಗಿದ್ದುಕೊಂಡು ಸಕ್ರಿಯರಾಗಿ ಬರೆಯುತ್ತಿದ್ದವರಲ್ಲಿ ನಾ ಡಿಸೋಜ ಅವರು ಏಕೈಕ ವ್ಯಕ್ತಿಯಾಗಿದ್ದವರೆಂದು ಉಲ್ಲೇಖಿಸಿದ್ದರು. ಅದು ನಿಜವೂ ಕೂಡಾ. ಆದರೆ ಕೇವಲ ಅದೊಂದೇ ವಿಚಾರದಲ್ಲಿ ಅವರು ಏಕೈಕರಾಗಿರಲಿಲ್ಲ. ಜಾತಿ-ಮತಗಳ ಬೇಲಿಯನ್ನು ಕಿತ್ತೆಸೆದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದವರು.

ಮಲೆನಾಡು ಪ್ರಾಂತ್ಯದಲ್ಲಿ ಜಲಾಶಯಗಳು ಹಾಗೂ ಅಣೆಕಟ್ಟುಗಳನ್ನು ನಿರ್ಮಿಸುವ ಪ್ರಕ್ರಿಯೆ, ಆ ಪ್ರಕ್ರಿಯಲ್ಲಿ ಅಸ್ತ-ವ್ಯಸ್ಥವಾದ ಜನಜೀವನ, ಸಂತ್ರಸ್ತರ ಪರಿಸ್ಥಿತಿ, ಅದರಲ್ಲೂ ಮೇಲ್ವರ್ಗದ ಹಾಗೂ ಕೆಳವರ್ಗದ ಸಂತ್ರಸ್ತರಿಗೆ ಸರ್ಕಾರದ ’ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ನೀತಿ’, ಮಲೆನಾಡು ಭಾಗದಲ್ಲಿ ಒಮ್ಮೆಗೇ ಶುರುವಾದ ಅಭಿವೃದ್ದಿ ಮತ್ತು ನಗರೀಕರಣ, ಕಾಡಿನ ನಾಶ, ಅಣೆಕಟ್ಟುಗಳ ನಿರ್ಮಾಣದ ಸಂದರ್ಭದಲ್ಲಿ ವಲಸೆ ಬರುತ್ತಿದ್ದ ಕಾರ್ಮಿಕರು, ಅದರಿಂದುಂಟಾದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಏರು-ಪೇರುಗಳು, ಪ್ರಕೃತಿ ವಿಕೋಪಗಳು ಇವೆಲ್ಲವುಗಳನ್ನು ಸಮಾಜಕ್ಕೆ ತೆರೆದಿಟ್ಟ ಮೊದಲಿಗರು ಅವರು. ಇವರ ಕಾದಂಬರಿ ಮತ್ತು ಕತೆಗಳಲ್ಲಿ ಜೋಗ ಜಲಪಾತದ ಹುಟ್ಟು ಮತ್ತು ಬೆಳವಣಿಗೆ ಮಾತ್ರವಲ್ಲದೇ ಅಲ್ಲಿನ ಪ್ರತಿಯೊಂದು ಕಲ್ಲು-ಕಲ್ಲಿನ ಮಾಹಿತಿಯೂ ಸಿಗುತ್ತದೆ. ಶರಾವತಿ ನದಿಯ ಉಗಮ, ಅದರಿಂದ ಹುಟ್ಟಿಕೊಂಡ ನಾಗರೀಕತೆ, ಅಲ್ಲಿನವರ ಜೀವನಶೈಲಿ, ಅವರು ಮಾಡುತ್ತಿದ್ದ ವೃತ್ತಿ, ಇವುಗಳನ್ನು ಸಕ್ಷಮವಾಗಿ, ಸವಿವರವಾಗಿ ತಮ್ಮ ಬರಹಗಳಲ್ಲಿ ಚಿತ್ರಣವನ್ನು ಕೊಟ್ಟು ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಕರಾವಳಿ ಈ ಮೂರೂ ಪ್ರಾಂತ್ಯಗಳ ಸಂಪೂರ್ಣ ಇತಿಹಾಸವನ್ನು ನಮಗೆ ತಿಳಿಸಿಕೊಟ್ಟವರಲ್ಲಿ ಇವರು ಮೊದಲಿಗರು.
ಮಲೆನಾಡು ಪ್ರಾಂತ್ಯಗಳಲ್ಲಿ ಮಲೆನಾಡು ಜನಜೀವನ, ಪ್ರಕೃತಿ ಮತ್ತು ಸಂಸ್ಕೃತಿಯನ್ನುಳಿಸಲು ಹೋರಾಡಿದವರಲ್ಲಿ ಮುಂಚೂಣಿಗರು. ಜನರನ್ನು ಬೆಸೆಯಲೆಂದು ಈ ಪ್ರಾಂತ್ಯಗಳಲ್ಲಿ ನಿರ್ಮಾಣವಾದ ಒಂದೊಂದೂ ಅಣೆಕಟ್ಟು, ಸೇತುವೆ, ಕಾಲುವೆಗಳು ಯಾವ ಯಾವ ರೀತಿಯಲ್ಲಿ ಜನರನ್ನು ಒಡೆದು ಚೂರು-ಚೂರಾಗಿಸಿದವು ಎಂಬ ವಿಪರ್ಯಾಸವನ್ನು ತಿಳಿಸಿಕೊಟ್ಟವರು. ನಾ ಡಿಸೋಜರವರ ಕಾಲಘಟ್ಟದ ಬಹುತೇಕ ಸಾಹಿತಿಗಳು ಒಬ್ಬ ಕಥಾನಾಯಕ ಹಾಗೂ ಕಥಾನಾಯಕಿಯುಳ್ಳ ರೊಮ್ಯಾಂಟಿಕ್ ಫ್ಯಾಂಟಸಿಯ ಕಾದಂಬರಿಗಳನ್ನು ರಚಿಸುವಾಗ ಇವರು ತಮ್ಮ ಕಾದಂಬರಿಗಳಲ್ಲಿ, ಕತೆಗಳಲ್ಲಿ ಕೇವಲ ಕಲ್ಪನಾಲೋಕದ ಮನರಂಜನೆಗೆ ಒತ್ತು ಕೊಡದೇ ಜನಸಾಮಾನ್ಯರ ಶೋಷಿತರ ಕಷ್ಟಗಳಿಗೆ ದನಿಯಾದವರು.

ನಾ ಡಿಸೋಜರವರು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯೂ ಅಪರಿಮಿತವಾದದ್ದು. ಮಕ್ಕಳ ಸಾಹಿತ್ಯವೆಂದ ಮಾತ್ರಕ್ಕೆ ಕೇವಲ ಶಿಶು ಸಾಹಿತ್ಯವನ್ನು ಬರೆದು ಪ್ರಕಟಿಸುವ ಕಾಲದಲ್ಲಿ ಮಕ್ಕಳ ಅಗತ್ಯವಾಗಿದ್ದ ಸಾಹಿತಿ ಅವರು. ಅವರು ಹಿರಿಯರಿಗಾಗಿ ಬರೆಯುವ ಕಾಳಜಿಯಲ್ಲೇ ಮಕ್ಕಳಿಗಾಗಿಯೂ ಸಾಹಿತ್ಯವನ್ನು ಬರೆದವರು. ಮಕ್ಕಳ ಸಾಹಿತ್ಯವೆಂದಾಕ್ಷಣ ಅತಿರಂಚಿತ ಸಾಹಸಗಳ ಚಿತ್ರಣಗಳನ್ನು ಕೊಡುವ ಮಕ್ಕಳ ಸಾಹಿತಿಗಳ ಮಧ್ಯದಲ್ಲಿ ನಾಡಿಯವರು ವಿಭಿನ್ನವಾದದ್ದನ್ನು ರಚಿಸುತ್ತಿದ್ದರು. ಇವರು ಮಕ್ಕಳ ಸಾಹಿತ್ಯದಲ್ಲಿ ಕಟ್ಟಿಕೊಡುವ ಸಾಹಸ ಅಂದಿನ ಮಕ್ಕಳ ಬಾಲ್ಯದ ಒಂದು ಭಾಗವೇ ಆಗಿತ್ತು. ಅವರ ಪುಸ್ತಕಗಳಲ್ಲಿ ಎಲ್ಲೆಂದರಲ್ಲಿ ಆಡುತ್ತ ಮರ ಹತ್ತಿ ಹಕ್ಕಿಗಳ ಮೊಟ್ಟೆ, ಮರಿ ಎಣಿಸುವವರು, ಹೊಳೆ ತುಂಬಿದಾಗಲೂ ಸಂಕ ದಾಟುವವರು, ಹೊಳೆ, ಸಮುದ್ರಗಳಲ್ಲಿ ನಿರಾಯಾಸವಾಗಿ ಈಜುವವರು, ಗಾಳ ಹಾಕುವವರು, ಗದ್ದೆಗಳಲ್ಲಿ ಬೆಳ್ಳೇಡಿ ಹಿಡಿಯುವವರು ಇಂತಹ ಮಕ್ಕಳ ಚಿತ್ರಣಗಳು ಭರಪೂರವಾಗಿ ತುಂಬಿವೆ.
ನನಗೆ ಬಾಲ್ಯದಿಂದಲೂ ನಾ ಡಿಸೋಜರವರು ಪ್ರೇರಣೆಯಾಗಿದ್ದರು. ಅವರು ಬರೆದಂತೆ ಬದುಕಿದ ವ್ಯಕ್ತಿ. ಬರವಣಿಗೆಯೆನ್ನುವುದು ಕೇವಲ ಮನೋರಂಜನೆಗಾಗಿ ಅಲ್ಲ. ಬರಹಗಾರನಿಗೆ ಸಾಮಾಜಿಕ ಕಳಕಳಿಯೂ ಇರಬೇಕೆನ್ನುತ್ತಿದ್ದ ವ್ಯಕ್ತಿ ಅವರು. ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ತನ್ನಷ್ಟಕ್ಕೆ ತಾನು ಬರೆಯುತ್ತಾ ಹೋದವರು. “ಹಿಂದೆಲ್ಲಾ ನನಗೆ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಪತ್ರಗಳ ಮೂಲಕ ಸಂಪರ್ಕಿಸುತ್ತಿದ್ದರು. ಅವರು ಬರೆದ ಬರಹಗಳು ಪ್ರತಿನಿತ್ಯ ಪತ್ರಿಕೆಗಳಲ್ಲಿ ಓದಲು ಸಿಗುತ್ತಿದ್ದವು. ಆದರೀಗ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ನಿರತರಾಗಿದ್ದಾರೆ. ಅದರಿಂದಲೇ ನನಗೆ ಬಹಳಷ್ಟು ಜನರ ಸಂಪರ್ಕ ತಪ್ಪಿಹೋಗಿದೆ. ಬಹುತೇಕರ ಬರಹಗಳಲ್ಲಾಗಲೀ, ನಡೆ-ನುಡಿಗಳಲ್ಲಿ ಯಾವುದೇ ಸಾಮಾಜಿಕ ಕಳಕಳಿ ಕಂಡುಬರುತ್ತಿಲ್ಲ” ಎಂದಿದ್ದರು. ನಾ ಡಿಸೋಜಾರಂತಹ ಹಿರಿತಲೆಮಾರುಗಳು ಅಗಲುತ್ತಾ ಹೋದಂತೆಲ್ಲಾ ಯುವಪೀಳಿಗೆಯನ್ನು ಮಾರ್ಗದರ್ಶಿಸುವವರಾರು ಎಂಬ ತಲ್ಲಣವಾಗುತ್ತದೆ.
ಒಡನಾಟದ ನೆನಪು
ನಾ ಡಿಸೋಜರವರ ಬರಹಗಳು ಎಷ್ಟು ವಿನೂತನ ಹಾಗೂ ಸುಂದರವೋ ಅಷ್ಟೇ ಅವರ ಬದುಕು ಕೂಡಾ. ಅವರಲ್ಲಿ ಒಂದಿಷ್ಟೂ ಕಲ್ಮಶವೆಂಬುದು ಇರಲಿಲ್ಲ. ನಾನು ಬಹಳ ಹತ್ತಿರದಿಂದ ನೋಡಿದ ಸಾಹಿತಿಯೆಂದರೆ ಅದು ನಾ ಡಿಸೋಜರವರು. ಅವರೊಂದಿಗಿನ ಕೆಲ ನೆನಪುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನಾನು ಅವರೊಂದಿಗೆ ಒಡನಾಡಲು ಪ್ರಾರಂಭಿಸಿದ್ದು ಬಹಳ ಸಣ್ಣ ವಯಸ್ಸಿನಿಂದ. ನಾನಾಗ ಎರಡನೇ ತರಗತಿ ಮುಗಿಸಿದ್ದೆ. ಬೇಸಿಗೆ ರಜೆಯ ಹೊತ್ತು. ನನ್ನ ಕವಿತೆಗಳ ಹಸ್ತಪ್ರತಿಯೊಂದಿಗೆ ಮೊಟ್ಟ ಮೊದಲ ಬಾರಿಗೆ ನಾ ಡಿಸೋಜರವರ ಮನೆಗೆ ಭೇಟಿ ನೀಡಿದ್ದೆ. ತಮ್ಮ ಕೆಲಸದೊತ್ತಡಗಳ ನಡುವೆಯೂ ನನ್ನ ಕವಿತೆಗಳನ್ನೆಲ್ಲಾ ತಾಳ್ಮೆಯಿಂದ ಓದಿದ ಅವರು ನನಗೆ ಮತ್ತಷ್ಟು ಕವಿತೆಗಳನ್ನು ಬರೆಯಲು ಪ್ರೋತ್ಸಾಹ ನೀಡಿದ್ದಲ್ಲದೇ ನನ್ನ ಪುಸ್ತಕಕ್ಕೆ ಮುನ್ನುಡಿಯನ್ನೂ ಬರೆದುಕೊಟ್ಟಿದ್ದರು. ನಾ ಡಿಸೋಜರವರ ಪತ್ನಿ ಫಿಲೋಮಿನಾರವರು ನನ್ನ ಕೆನ್ನೆ ಹಿಂಡಿ ಮುದ್ದಾಡಿ, ನನಗೆ ರುಚಿ ರುಚಿಯಾದ ಅಡುಗೆಯನ್ನು ಬಡಿಸಿ ಉಣಿಸಿ ಕಳಿಸಿದ್ದರು.

ಅದಾದ ನಂತರ ನಾನು ಏನೇ ಬರೆದರೂ ನಾ ಡಿಸೋಜರವರು ತಪ್ಪದೇ ನನ್ನೆಲ್ಲಾ ಬರಹಗಳನ್ನು ಓದಿ ನನಗೆ ಮಾರ್ಗದರ್ಶನ ನೀಡುತ್ತಿದ್ದರು. ನನ್ನನ್ನು “ಮಗಳು ಮುದ್ದು” ಎಂದೇ ಕರೆಯುತ್ತಿದ್ದರು. ನಾನು ಮತ್ತು ನನ್ನಕ್ಕ ಸೇರಿ ತರುತ್ತಿದ್ದ ’ಮಂದಾನಿಲ’ ಪತ್ರಿಕೆಯ ಎಲ್ಲಾ ಸಂಚಿಕೆಗಳ ಪ್ರತಿಯೊಂದು ಬರಹಗಳನ್ನೂ ಓದಿ ನನಗೆ ಪತ್ರ ಬರೆಯುತ್ತಿದ್ದರು. ನನ್ನ ಎರಡನೇ ಪುಸ್ತಕಕ್ಕೆ ಮುನ್ನುಡಿಯನ್ನು ಬರೆಯುವಾಗ ತಮ್ಮ ಕೈಬರಹವನ್ನು ಓದಲು ನನಗೆ ಕಷ್ಟವಾಗುತ್ತದೆ ಎಂದೆಣಿಸಿ ಅವರು ಸೈಬರ್ ಶಾಪ್ ಗೆ ಹೋಗಿ ಮುನ್ನುಡಿಯನ್ನು ಟೈಪಿಸಿ ಅದರ ಪ್ರತಿಯನ್ನು ನನ್ನ ಕೈಗಿತ್ತಿದ್ದರು. ಬಿಡುವಾದಾಗಲೆಲ್ಲಾ ತಮ್ಮ ಕಾದಂಬರಿಗಳನ್ನು ಹಾಗೂ ಇತರ ಪುಸ್ತಕಗಳನ್ನು ನನಗೆ ಕಳಿಸಿಕೊಡುತ್ತಿದ್ದರು. ನಮ್ಮ ಮನೆಗೆ ಬರುವಾಗೆಲ್ಲಾ ಫಿಲೋಮಿನಾ ಆಂಟಿ ಅವರ ಕೈಯಾರೆ ಮಾಡಿದ ರುಚಿಕರ ಕಜ್ಜಾಯವನ್ನು ಡಬ್ಬಿಗಳಲ್ಲಿ ತುಂಬಿ ತರುತ್ತಿದ್ದರು.
ಕೆಲವು ತಿಂಗಳ ಹಿಂದಷ್ಟೇ ಮತ್ತೆ ನಾ ಡಿಸೋಜರವರ ಮನೆಗೆ ಕುಟುಂಬದೊಂದಿಗೆ ಭೇಟಿ ನೀಡಿದ್ದೆ. ಅವರ ನಿಷ್ಕಲ್ಮಶ ನಗು, ಪ್ರೀತಿ ಹಾಗೂ ಮಾತುಗಳು ಎಲ್ಲವೂ ಹಾಗೆಯೇ ಇದ್ದವು. ಫಿಲೋಮಿನಾ ಆಂಟಿ ಎಂದಿನಂತೆ ನಗುನಗುತ್ತಾ ನಮ್ಮನ್ನು ಸ್ವಾಗತಿಸಿದರು. ನಾವು ಸುಮಾರು ಹದಿನೆಂಟು ವರ್ಷಗಳ ಹಿಂದೆ ಅವರಿಗೆ ಉಡುಗೊರೆಯಾಗಿ ಕೊಟ್ಟ ರಾಜಸ್ಥಾನದ ಕೌದಿಯನ್ನು ಇನ್ನೂ ಜೋಪಾನವಾಗಿ ಇಟ್ಟಿದ್ದೇನೆ ಎಂದು ಅವರು ಹೇಳುವಾಗ ನನ್ನ ಕಣ್ಣುಗಳು ತೇವವಾದವು. ಆಂಟಿಯ ಕಣ್ಣುಗಳಲ್ಲಿ ಜಿನುಗುವ ಅಕ್ಕರೆ, ಅವರ ಮುಗ್ದ ಮಾತುಗಳು ಎಲ್ಲವನ್ನೂ ನೋಡುವಾಗ ಗಂಟಲು ಗದ್ಗದಿತವಾಯಿತು. “ಊಟ ಮಾಡಿಕೊಂಡು ಹೋಗು” ಎನ್ನುತ್ತಾ ಬೇಡವೆಂದರೂ ಅಡುಗೆಮನೆಯತ್ತ ಓಡುತ್ತಾ ಪಾನಕ, ತಿಂಡಿ-ತಿನಿಸುಗಳನ್ನು ತಟ್ಟೆಗೆ ಹಾಕಿ ತಿನ್ನುವಂತೆ ಒತ್ತಾಯಿಸಿದರು. ಅವರಿಬ್ಬರನ್ನು ಬೀಳ್ಕೊಟ್ಟು ಬೆಂಗಳೂರಿಗೆ ವಾಪಾಸಾಗುವಾಗ ದಾರಿಯುದ್ದಕ್ಕೂ ಕಣ್ಣಲ್ಲಿ ಹೊಸ್ತಿಲಲ್ಲಿ ನಿಂತು “ಬಾಯ್” ಹೇಳುತ್ತಿದ್ದ ಅವರ ಚಿತ್ರಣವೇ ಕೂತುಬಿಟ್ಟಿತ್ತು.
ಇದನ್ನೂ ಓದಿ ಸಾಗರದಷ್ಟು ಬರೆದು ಮುಗಿಸಿದ್ದರು ನಾ ಡಿಸೋಜ
ಇಂದು ಅವರು ಅಗಲಿದ್ದಾರೆ. ಅವರ ಪಾರ್ಥೀವ ಶರೀರವನ್ನು ಕಟ್ಟ ಕಡೆಯ ಬಾರಿ ನೋಡಿ ಬರಬೇಕೆಂದು ನಾನು ನನ್ನ ಕುಟುಂಬಸ್ಥರೊಡನೆ ಹೊರಟಿದ್ದೇನೆ. ಆದರೆ ಮನಸ್ಸಿನ ಒಂದು ಮೂಲೆಯಲ್ಲಿ ಏನೋ ಅಳುಕು ಮೂಡುತ್ತಿದೆ. ಇಂದು ಅವರ ಶರೀರವನ್ನು ಕಡೆಯದಾಗಿ ನೋಡುವ ಕಹಿಗಳಿಗೆ ಹಲವು ದಶಕಗಳಿಂದ ಮನಸ್ಸಿನಲ್ಲಿ ಜೀವಂತವಾಗಿ ಅಚ್ಚೊತ್ತಿ ಕೂತಿರುವ ಅವರ ನಗುಮುಖದ ಆ ಸಿಹಿ ನೆನಪುಗಳನ್ನು ಎಲ್ಲಿ ಕಲುಷಿತಗೊಳಿಸಿಬಿಡುತ್ತದೋ ಎಂದು. ನಾನು ಕಂಡಂತೆ ನಾ. ಡಿಸೋಜ ಹಾಗೂ ಅವರ ಪತ್ನಿ ಫಿಲೋಮಿನಾರವರು ಜೋಡಿ ಹಕ್ಕಿಗಳಂತಿದ್ದವರು. ನಾ ಡಿಸೋಜರವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಅವರೊಂದಿಗೆ ಫಿಲೋಮಿನಾರವರು ಹಾಜರಿದ್ದು ಅವರು ವೇದಿಕೆಯಲ್ಲಾಡುವ ಮಾತುಗಳನ್ನು ಪ್ರೀತಿಯಿಂದ ಕೇಳುತ್ತಿದ್ದರು. ದಾಂಪತ್ಯ ಜೀವನವನ್ನು ನಡೆಸುತ್ತಾ ಇಷ್ಟು ವರುಷಗಳಾದರೂ ಇಬ್ಬರ ಕಣ್ಣುಗಳಲ್ಲೂ ಪರಸ್ಪರ ಜಿನುಗುವ ಪ್ರೀತಿ ಮಾತ್ರ ಸ್ವಲ್ಪವೂ ಕುಂದಿರಲಿಲ್ಲ. ಫಿಲೋಮಿನಾರವರು ದುಃಖವನ್ನು ಹೇಗೆ ಸಹಿಸುವರೋ ತಿಳಿಯದು.

ವಿತಾಶಾ ರಿಯಾ ರೋಡ್ರಿಗಸ್ (ಮುದ್ದು ತೀರ್ಥಹಳ್ಳಿ)
ಯುವ ಬರಹಗಾರ್ತಿ, ನಾಲ್ಕು ಕವನ ಸಂಕಲನ, ಒಂದು ಲಲಿತಪ್ರಬಂಧ ಕೃತಿ ಪ್ರಕಟಿಸಿದ್ದಾರೆ. ʼಕಾಡ ಹಾದಿಯ ಹೂಗಳುʼ ಕಾದಂಬರಿ ಚಲನಚಿತ್ರವಾಗಿದೆ. ಸದ್ಯ ಹೈಕೋರ್ಟ್‌ನಲ್ಲಿ ವಕೀಲರು