ಕೇಂದ್ರ ಸರ್ಕಾರ ನಡೆಸುವ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿ, ಸರ್ಕಾರದ ನಿರ್ಲಕ್ಷ್ಯದಿಂದಾಗಿ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೀವ ಕಳೆದುಕೊಂಡರು. ಬೇಜವಾಬ್ದಾರಿತನ ತೋರಿದ ಸರ್ಕಾರದ ವಿರುದ್ಧ ದೆಹಲಿಯಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದರು, ಅಮರಣಾಂತ ಉಪವಾಸ ಕುಳಿತರು, ಲಾಠಿ ಏಟು ತಿಂದರು, ರಕ್ತ ಹರಿಸಿದರು, ಕೊನೆಗೂ ಬಿಂಕದರಮನೆಯ ಜಂಬದ ಕೋಳಿಯ ಬಲಿ ಪಡೆದರು.
ಸ್ವತಃ ಪ್ರಧಾನಮಂತ್ರಿ ಮಧ್ಯರಾತ್ರಿ ದುಃಸ್ವಪ್ನ ಕಂಡು ಎದ್ದು ಮಾತು ಬಾರದ ಬಾಲಕನಂತೆ ತಡವರಿಸುತ್ತಾ ವಿಡಿಯೋ ಮಾಡಿ ಜನರ ಆಕ್ರೋಶ ತಣಿಸಲೆತ್ನಿಸಿದರು. ಹೌದು, ಇಲ್ಲಿ ವಿದ್ಯಾರ್ಥಿ (ಜೆನ್-ಜಿ) ಹೋರಾಟ ಗೆದ್ದಿತ್ತು. ಹೋರಾಟಗಳು ಸಪ್ಪೆಯಾಗುತ್ತಿವೆ ಏನೋ ಎನ್ನುವಷ್ಟರಲ್ಲಿ ದೆಹಲಿಯ ವಿದ್ಯಾರ್ಥಿ ಹೋರಾಟ ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿ, ಸದ್ದಡಗದವರ ಸದ್ದಡಗಿಸಿತು.
ಮಳೆ ನಿಂತರೂ ಮಳೆಹನಿ ನಿಲ್ಲಬೇಕಲ್ಲ; ದೇಶದ ವಿವಿಧ ಮೂಲೆಗಳಲ್ಲಿ ಹೋರಾಟಗಳು ಭುಗಿಲೇಳುತ್ತಿವೆ. ಸಂಪೂರ್ಣ ನೀಟ್ ಪದ್ಧತಿಯನ್ನು ಕೈಬಿಡಬೇಕು, ವೈದ್ಯಕೀಯ ಸೀಟುಗಳ ವಿಷಯದಲ್ಲಿ ರಾಜ್ಯಗಳಿಗೆ ಸ್ವಾಯತ್ತತೆ ನೀಡಬೇಕು, ಎನ್‌ಟಿಎ ರದ್ದುಗೊಳಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ತಮಿಳುನಾಡು ಸರ್ಕಾರವಂತೂ ತನ್ನ ವಿಧಾನಸಭೆಯಲ್ಲಿ ನೀಟ್ ವಿರೋಧಿ ನಿರ್ಣಯವನ್ನು ಅಂಗೀಕರಿಸಿ ‘ನೀಟ್ ಒಪ್ಪುವುದಿಲ್ಲ’ ಎಂದು ಘೋಷಿಸಿದೆ. ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ದೆಹಲಿಯ ಪ್ರತಿಭಟನೆಯಲ್ಲಿ ಕೇವಲ ಹೆಗ್ಗಳಿಕೆಗೆಂದು ಭಾಗವಹಿಸಲಿಲ್ಲ, ಬದಲಾಗಿ ತನ್ನ ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ರಕ್ಷಣೆಗಾಗಿ ಎಂಬುದಕ್ಕೆ ವಿಧಾನಸಭೆಯಲ್ಲಿ ತೆಗೆದುಕೊಂಡ ನಿರ್ಣಯವೇ ಸಾಕ್ಷಿ ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು.
2017ರಲ್ಲಿ ತಮಿಳುನಾಡು ವಿಧಾನಸಭೆ ನೀಟ್‌ನಿಂದ ವಿನಾಯಿತಿ ಕೋರಿ ಎರಡು ಮಸೂದೆಗಳನ್ನು ಅಂಗೀಕರಿಸಿತು. ಅವುಗಳಿಗೆ ರಾಷ್ಟ್ರಪತಿಯ ಅನುಮೋದನೆ ದೊರೆಯಲಿಲ್ಲ. 2021ರಲ್ಲಿ ಮತ್ತೆ ನೀಟ್ ವಿನಾಯಿತಿ ಕೋರಿ ಮಸೂದೆ ಅಂಗೀಕರಿಸಲಾಯಿತು. ಜೊತೆಗೆ ವೈದ್ಯಕೀಯ ಪ್ರವೇಶವನ್ನು ಮುಖ್ಯವಾಗಿ 12ನೇ ತರಗತಿಯ ಅಂಕಗಳ ಆಧಾರದ ಮೇಲೆ ನಡೆಸುವುದಾಗಿ ಹೇಳಿತು. ನಂತರ 2025ರಲ್ಲಿ ಆ ಮಸೂದೆಯನ್ನು ರಾಷ್ಟ್ರಪತಿ ತಿರಸ್ಕರಿಸಿದರು. ಇಷ್ಟೆಲ್ಲ ತಿರಸ್ಕಾರದ ನಡುವೆಯೂ ತಮಿಳುನಾಡು ಆಗಸ್ಟ್‌ನಲ್ಲಿ ಮತ್ತೊಮ್ಮೆ ವಿಧಾನಸಭೆಯಲ್ಲಿ ನೀಟ್ ರದ್ದುಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಮಾದರಿ ನಿರ್ಣಯವನ್ನು ಅಂಗೀಕರಿಸಿದೆ.
ಇದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಹೆಜ್ಜೆ ಇಡಬೇಕಿದೆ. ನೀಟ್ ವಿರೋಧಿ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಬೇಕು. ಜೊತೆಗೆ ರಾಜ್ಯದ ಶಾಸಕರು, ಸಂಸದರುಗಳು ರಾಜ್ಯದ ವಿದ್ಯಾರ್ಥಿಗಳ ಪರವಾಗಿ ಸದನ ಮತ್ತು ಸಂಸತ್ತುಗಳಲ್ಲಿ ಧ್ವನಿ ಎತ್ತಬೇಕು. ಮುಖ್ಯವಾಗಿ ರಾಜ್ಯದ ವಿದ್ಯಾರ್ಥಿಗಳು ಧೀರೋದಾತ್ತ ಹೋರಾಟ ಸಂಘಟಿಸಬೇಕು. ಕೆಳಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಪಾಠ ಕಲಿಸಿ ತಮ್ಮ ಹಕ್ಕನ್ನು ರಾಜ್ಯದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ನ್ಯಾಯಾಲಯಗಳೂ ಇಂದು ಇಂಥ ಗಂಭೀರ ಸಮಸ್ಯೆಗಳ ನಿವಾರಣೆಗೆ ತಲೆಹಾಕುತ್ತಿಲ್ಲ. ಬದಲಾಗಿ ಇಂಥ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಸಮಯವಿಲ್ಲ ಎಂದು ಹೇಳುವ ಕರಾಳ ಸಂದರ್ಭದಲ್ಲಿ ಹೋರಾಟ ಬಿಟ್ಟು ಬೇರೆ ಇನ್ನಾವ ದಾರಿ ಇದೆ…?
ಜಾಗತೀಕರಣದ ಕೃಪಾಪೋಷಣೆಯಿಂದ ಕೊಬ್ಬಿ ಬೆಳೆದ ಶಿಕ್ಷಣದ ವ್ಯಾಪಾರೀಕರಣ ಮತ್ತು ಖಾಸಗೀಕರಣದ ನೀತಿಗಳಿಂದ, ನಮ್ಮ ದೇಶದ ಶಿಕ್ಷಣ ಅದರಲ್ಲೂ ವೈದ್ಯಕೀಯ ಶಿಕ್ಷಣ ಮಾರುಕಟ್ಟೆಯ ವಸ್ತು ಎಂಬ ಪರಿಕಲ್ಪನೆ ದಾಟಿ ಹರಾಜಿನ ವಸ್ತುವಾಗಿ ಪರಿವರ್ತನೆ ಹೊಂದಿತು. ಹಾಗಾಗಿ ದೇಶದಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಎಂಬ ವ್ಯಾಪಾರದಂಗಡಿಗಳು ನಾಯಿಕೊಡೆಗಳಂತೆ ತಲೆ ಎತ್ತಿದವು.
ಬಹುತೇಕ ರಾಜಕಾರಣಿಗಳ ಒಡೆತನದಲ್ಲಿನ ಈ ವ್ಯಾಪಾರವನ್ನು ಉಜ್ವಲಗೊಳಿಸಲು, ಅಂದರೆ ಉತ್ತಮ ದರ ನೀಡುವ ಗ್ರಾಹಕರನ್ನು ಸೆಳೆಯಲು ನಮ್ಮ ರಾಜ್ಯದಲ್ಲಿ ಅಸ್ತಿತ್ವವಿದ್ದ ಕೆ-ಸಿಇಟಿಯಂತಹ ರಾಜ್ಯಮಟ್ಟದ ವಿವಿಧ ಪರೀಕ್ಷೆ ಅಥವಾ ಮಾನದಂಡಗಳ ಕತ್ತು ಹಿಸುಕಿ, ವೈದ್ಯಕೀಯ ಸೀಟುಗಳ ವ್ಯಾಪಾರಕ್ಕೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಗಿರಾಕಿಗಳನ್ನು ತರಲು ಇಡೀ ದೇಶಕ್ಕೆ ಏಕರೂಪದ ನೀಟ್ ಪರೀಕ್ಷೆಯನ್ನು 2016ರಲ್ಲಿ ಜಾರಿಗೊಳಿಸಲಾಯಿತು. ಜೊತೆಗೆ ಇದಕ್ಕೆ ಕೈ ಸೇರಿಸಿದ್ದು ಈ ದೇಶದ ಟ್ಯೂಷನ್ ಮಾಫಿಯಾ. ಪರಿಣಾಮ ದೇಶದ ಬಡ, ಪ್ರತಿಭಾವಂತ ಮಕ್ಕಳು ವೈದ್ಯಕೀಯ ಶಿಕ್ಷಣದಿಂದ ವಂಚನೆಗೊಳಗಾದರು.
ದೇಶದಲ್ಲಿ ಲಭ್ಯವಿದ್ದ ಒಟ್ಟು 1,36,939 ವೈದ್ಯಕೀಯ ಸೀಟುಗಳಲ್ಲಿ ಹಣವುಳ್ಳವರಿಗೆಂದೇ 71,552 ಸೀಟುಗಳನ್ನು ಹರಾಜಿಗಿಡಲಾಯಿತು. ಅಂದರೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಪಾಲಿಗೆ ಈ 71,552 ಸೀಟುಗಳು ಶಾಶ್ವತವಾಗಿ ಇಲ್ಲವಾದವು!! ಇನ್ನು ಉಳಿದ ಸೀಟುಗಳಿಗಾಗಿ ಅದೆಂತಹ ಪೈಪೋಟಿ ಸೃಷ್ಟಿಸಿದರೆಂದರೆ ಪ್ರತಿ ವರ್ಷ ಸರಿಸುಮಾರು ಸುಮಾರು 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾನಸಿಕ ಒತ್ತಡ, ಖಿನ್ನತೆಗೊಳಗಾಗುತ್ತಿದ್ದಾರೆ.
ನಮ್ಮ ದೇಶದ ಒಟ್ಟಾರೆ ಇಡೀ ಶೈಕ್ಷಣಿಕ ವಾತಾವರಣವು ಇಂದು ಪಾತಾಳಕ್ಕೆ ತಲುಪಿದೆ. 2024ರ ಎನ್‌ಸಿಆರ್‌ಬಿ ವರದಿ ಹೇಳುವಂತೆ, ನಮ್ಮ ದೇಶದಲ್ಲಿ ಈಗ ವರ್ಷಕ್ಕೆ 14,488 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂದರೆ ಪ್ರತಿ ದಿನಕ್ಕೆ 40 ಜನ ವಿದ್ಯಾರ್ಥಿಗಳ ಆತ್ಮಹತ್ಯೆ. ಇದನ್ನು ಆತ್ಮಹತ್ಯೆ ಎಂದು ಕರೆಯಲಾಗದು, ಇದು ದೇಶದ ಯುವ ಚೇತನಗಳ ವ್ಯವಸ್ಥಿತ ಕೊಲೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಶಿಕ್ಷಣದ ಖಾಸಗೀಕರಣ, ಜಾಗತೀಕರಣ ಮತ್ತು ವಾಣಿಜ್ಯೀಕರಣದ ನೀತಿಗಳಿಂದಾಗಿ ವೈದ್ಯಕೀಯ ಕ್ಷೇತ್ರ ಬಂಗಾರದ ಮೊಟ್ಟೆ ಇಡುವ ಕೋಳಿಯಾಯಿತು. ಬಂಗಾರದ ಮೊಟ್ಟೆಯನ್ನು ಹೆಚ್ಚು ಹೆಚ್ಚು ಪಡೆಯಲು ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಅಕ್ರಮಗಳನ್ನು, ಅನ್ಯಾಯಗಳನ್ನು, ವಿಶೇಷವಾಗಿ ದುಡ್ಡುಳ್ಳವರ ಹಿತ ಕಾಪಾಡುವ ಸರಳ ಮತ್ತು ಕೇಂದ್ರೀಕೃತ ದಾರಿಗಳು ನಮ್ಮ ದೇಶದ ಕಡು ಭ್ರಷ್ಟರಿಗೆ ಮತ್ತು ವೈದ್ಯಕೀಯ ಶಿಕ್ಷಣದ ದಲ್ಲಾಳಿಗಳಿಗೆ ಬೇಕಾಗಿತ್ತು. ಇದೆಲ್ಲವನ್ನೂ ಏಕಕಾಲಕ್ಕೆ ಸಾಕಾರಗೊಳಿಸಿದ್ದು ಈ ‘ನೀಟ್’.
ಶಿಕ್ಷಣ ಕ್ಷೇತ್ರವು ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳ ಜವಾಬ್ದಾರಿಯಾಗಿದೆ. ಇದು ಸಂವಿಧಾನದ ಸಮವರ್ತಿ ಪಟ್ಟಿಯಲ್ಲೂ ಬರುವುದರಿಂದ ಈ ವಿಷಯದಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರದಷ್ಟೇ ಹಕ್ಕಿದೆ. ವಾಸ್ತವದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಶೈಕ್ಷಣಿಕ ನೀತಿಗಳಿಗೆ ಸ್ವಾಯತ್ತತೆ ನೀಡಿ ಶಿಕ್ಷಣವನ್ನು ಬಲಿಷ್ಠಗೊಳಿಸಬೇಕು. ಬದಲಾಗಿ ಹಸ್ತಕ್ಷೇಪ ಮಾಡುವ ಯಾವ ಹಕ್ಕೂ ಕೇಂದ್ರ ಸರ್ಕಾರಕ್ಕೆ ಇಲ್ಲ. ಯಾಕೆಂದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಷ್ಟೇ ಅಲ್ಲ, ಒಕ್ಕೂಟ ವ್ಯವಸ್ಥೆಯೂ ಹೌದು. ಇದನ್ನು ಗೌರವಿಸುವುದು ಕೇಂದ್ರ ಸರ್ಕಾರದ ಆದ್ಯಕರ್ತವ್ಯ ಮತ್ತು ಜವಾಬ್ದಾರಿಯೂ ಹೌದು. ಒಂದು ವೇಳೆ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿದರೆ ಅದು ಕೇವಲ ಹಸ್ತಕ್ಷೇಪವಾಗುಳಿಯುವುದಿಲ್ಲ, ಬದಲಾಗಿ ಅದು ರಾಜ್ಯದ ಮೇಲೆ ಮಾಡುವ ದಬ್ಬಾಳಿಕೆಯಾಗುತ್ತದೆ.
ದೇಶದಲ್ಲಿಯೇ ಅತಿ ಹೆಚ್ಚು ವೈದ್ಯಕೀಯ ಸೀಟು ಹೊಂದಿದ ರಾಜ್ಯ ಕರ್ನಾಟಕ. ಆದರೆ ಕರ್ನಾಟಕದ ಮಕ್ಕಳಿಗೆ ಮೆರಿಟ್ ಸೀಟು ಸಿಗದ ಹಾಗೆ, ಸಿಕ್ಕರೂ ಕಲಿಯದ ಹಾಗೆ ದುಬಾರಿ ಶುಲ್ಕ ಹೇರಿವೆ ಸರ್ಕಾರ ಮತ್ತು ಈ ನೀಟ್ ವ್ಯವಸ್ಥೆ!! ಅಂದರೆ ಕರ್ನಾಟಕದ ವೈದ್ಯಕೀಯ ಶಿಕ್ಷಣವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ತೆರೆದಿಟ್ಟಿದೆ. ರಾಜ್ಯಕ್ಕೆ ಒಂದಷ್ಟು ಸೀಟುಗಳು ಮೀಸಲು ಇವೆಯಾದರೂ ನೀಟ್‌ನಂತಹ ಮಾನದಂಡಗಳಿಂದಾಗಿ ದುಡ್ಡುಳ್ಳವರಿಗೆ ಮಾತ್ರ ಬೇಗ ಸಿಗುತ್ತವೆ.
ವೈದ್ಯಕೀಯ ಶಿಕ್ಷಣವಿಂದು ಸಂಪೂರ್ಣವಾಗಿ ಮಾರಾಟದ ವಸ್ತು ಮತ್ತು ದುಡ್ಡುಳ್ಳವರ ಸ್ವತ್ತು ಆಗಿದೆ. ಇದರಲ್ಲಿ ಕೇವಲ ದುಡ್ಡು ಮತ್ತು ವೈದ್ಯಕೀಯ ಸೀಟುಗಳ ಪ್ರಶ್ನೆ ಮಾತ್ರವೇ ಅಡಗಿಲ್ಲ. ಇದರಲ್ಲಿ ನಮ್ಮ ದೇಶದ ಆರೋಗ್ಯ ಕ್ಷೇತ್ರದ ಮೂಲ ಪ್ರಶ್ನೆಯೂ ಅಡಗಿದೆ. ಹೀಗೆ ವೈದ್ಯಕೀಯ ಶಿಕ್ಷಣವು ವ್ಯಾಪಾರದ ವಸ್ತುವಾದರೆ ಭವಿಷ್ಯದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರ ಏನಾಗಬೇಡ? ಅಂತಿಮವಾಗಿ ಆರೋಗ್ಯ ಸೌಲಭ್ಯವು ಕೂಡಾ ದುಡ್ಡುಳ್ಳವರ ಸ್ವತ್ತಾಗುತ್ತದೆ. ಕಡುಬಡವರಿಗೆ, ಜನಸಾಮಾನ್ಯರಿಗೆ, ಕೂಲಿಕಾರ್ಮಿಕರಿಗೆ ಉಳಿಯುವುದೇನು? ಆಸ್ಪತ್ರೆಗಿಂತ ಸ್ಮಶಾನದ ಹಾದಿ ಹತ್ತಿರವಾಗುತ್ತದಷ್ಟೇ. ಕಲ್ಪಿಸಿಕೊಳ್ಳಿ, ಎಂತಹ ಭಾರತ ಸೃಷ್ಟಿಯಾಗುತ್ತಿದೆ!!
ತಮಿಳುನಾಡಿನ ಮಾದರಿಯನ್ನು ಕರ್ನಾಟಕವೂ ಸೇರಿದಂತೆ ದಕ್ಷಿಣದ ಎಲ್ಲಾ ರಾಜ್ಯಗಳು ಅನುಸರಿಸಬೇಕಿದೆ ಮತ್ತು ವಿವಿಧ ರಾಜ್ಯಗಳಿಗೂ ಪಸರಿಸಬೇಕಿದೆ. ಈ ಕೆಲಸವನ್ನು ನಮ್ಮ ರಾಜ್ಯದಲ್ಲಿ ಮುಖ್ಯಮಂತ್ರಿಗಳೇ ಮುತುವರ್ಜಿ ವಹಿಸಿ ಮಾಡಬೇಕಿದೆ.
ಯಾವತ್ತೂ ಕಾಂಗ್ರೆಸ್‌ನ ಟ್ರಬಲ್‌ಶೂಟರ್ ಪಾತ್ರ ನಿರ್ವಹಿಸುತ್ತಾ ಬಂದ ಇವತ್ತಿನ ಮುಖ್ಯಮಂತ್ರಿಗಳು ಈಗ ನೀಟ್ ರದ್ದುಗೊಳಿಸಿ ಹಳೆಯ ಕೆ-ಸಿಇಟಿ ಜಾರಿಗೊಳಿಸಿ ಕೇಂದ್ರ ಸರ್ಕಾರಕ್ಕೆ ಟ್ರಬಲ್ ಹೇರಿ ಸವಾಲು ಹಾಕಿದಾಗ ಮಾತ್ರವೇ ಕನಕಪುರದ ಬಂಡೆಗೊಂದು ಮೆರಗು ಬರುತ್ತದೆ. ‘ತಾನು ಬಂಡೆ, ಕೇಂದ್ರ ಸರ್ಕಾರವನ್ನು ಎದುರು ಹಾಕಿಕೊಂಡು ಅಚಲವಾಗಿ ನಿಲ್ಲುವ ಬಂಡೆ, ಯಾರಿಗೂ ಬಗ್ಗದ ಬಂಡೆ’ ಎಂದು ತೋರಿಸುವ ಸಂದರ್ಭವೂ ಇದೀಗ ರಾಜ್ಯದ ಮುಖ್ಯಮಂತ್ರಿಗಳ ಮುಂದಿದೆ. ಜೊತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಟ್ಟು ಹೋದ ಹೆಜ್ಜೆಗಳನ್ನು ದಾಟಿ, ತನ್ನ ಛಾಪನ್ನು ಮೂಡಿಸುವ ಸುವರ್ಣಾವಕಾಶವೂ ಎದುರಿಗಿದೆ.

ಹೆಚ್.ಟಿ. ಭರತಕುಮಾರ
ಲೇಖಕರು,
ಸಾಮಾಜಿಕ ಕಾರ್ಯಕರ್ತರು, ವಿಜಯಪುರ




