ಜನರ ಮತವಿಲ್ಲ, ನಾಯಕರ ಸುಳಿವಿಲ್ಲ! ಆದರೂ ಖಾತೆಯಲ್ಲಿ ನೂರಾರು ಕೋಟಿ; ಯಾವುವು ಈ ‘ಪೇಪರ್ ಪಕ್ಷ’ಗಳು?

Date:

ಬಿಬಿಸಿ ತನಿಖಾ ವರದಿಯ ಪ್ರಕಾರ, ಗುಜರಾತ್ ಮೂಲದ ಆರಕ್ಕೂ ಹೆಚ್ಚು ನೋಂದಾಯಿತ ಗುರುತಿಸಲ್ಪಡದ ರಾಜಕೀಯ ಪಕ್ಷಗಳು 2023-24ರ ಒಂದೇ ಆರ್ಥಿಕ ವರ್ಷದಲ್ಲಿ ಬರೋಬ್ಬರಿ ₹1,700 ಕೋಟಿಗೂ ಹೆಚ್ಚು ದೇಣಿಗೆ ಪಡೆದಿವೆ. ವಿಪರ್ಯಾಸವೆಂದರೆ, ಬಿಜೆಪಿ ಹೊರತುಪಡಿಸಿ ಕಾಂಗ್ರೆಸ್ ಸೇರಿದಂತೆ ದೇಶದ ಪ್ರಮುಖ 5 ರಾಷ್ಟ್ರೀಯ ಪಕ್ಷಗಳು ಪಡೆದ ಒಟ್ಟು ನಿಧಿಗಿಂತಲೂ ಅಧಿಕ ಹಣವನ್ನು ಈ ‘ಪೇಪರ್’ ಪಕ್ಷಗಳು ಬಾಚಿಕೊಂಡಿವೆ.

ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷವೊಂದನ್ನು ನೋಂದಾಯಿಸುವುದು, ಸಾರ್ವತ್ರಿಕ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿ ಜನರ ಬಳಿ ಮತ ಕೇಳುವುದು ಅಧಿಕಾರಕ್ಕೆ ಬರುವ ಮೂಲ ಮಾರ್ಗ. ಹಾಗೆಯೇ ದೇಶದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಚುನಾವಣೆ ಎದುರಿಸಲು, ಪ್ರಚಾರ ನಡೆಸಲು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಸಂಘಟಿಸಲು ನೂರಾರು ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಸಂಗ್ರಹಿಸುತ್ತವೆ. ಆದರೆ, ದೇಶದ ರಾಜಕೀಯ ಹಣಕಾಸು ವ್ಯವಸ್ಥೆಯಲ್ಲಿ ಅತ್ಯಂತ ವಿಚಿತ್ರ ಹಾಗೂ ಅನುಮಾನಾಸ್ಪದ ಪ್ರವೃತ್ತಿಯೊಂದು ಬೆಳೆಯುತ್ತಿದೆ. ಚುನಾವಣಾ ಅಖಾಡದಲ್ಲೇ ಕಾಣಿಸದ ಕೆಲವು ಹೆಸರು ತಿಳಿಯದ ಪಕ್ಷಗಳು ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚಿನ ದೇಣಿಗೆ ಪಡೆಯುತ್ತಿವೆ ಎಂಬುದನ್ನು ಬಿಬಿಸಿ ತನಿಖೆ ಬಹಿರಂಗಪಡಿಸಿದೆ.

- Advertisement -

ಇತ್ತೀಚೆಗೆ ಬಿಬಿಸಿ ನಡೆಸಿದ ಸ್ಫೋಟಕ ತನಿಖಾ ವರದಿಯೊಂದು ದೇಶ ರಾಜಕೀಯ ದೇಣಿಗೆಯ ಹಿನ್ನೆಲೆಯಲ್ಲಿ ಅಡಗಿರುವ ದೊಡ್ಡ ಚಕ್ರವ್ಯೂಹವನ್ನು ತೆರೆದಿಟ್ಟಿದೆ. ಬಿಬಿಸಿ ನಡೆಸಿದ ಸುದೀರ್ಘ ಪರಿಶೀಲನೆಯು ಹಾಗೂ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ADR) ಸಂಗ್ರಹಿಸಿದ ಅಧಿಕೃತ ಅಂಕಿ-ಅಂಶಗಳು ನೋಂದಾಯಿತ ಎಂದು ಗುರುತಿಸಲ್ಪಡದ ರಾಜಕೀಯ ಪಕ್ಷಗಳ ಆರ್ಥಿಕ ವ್ಯವಹಾರಗಳ ಮೇಲಿರುವ ಕಪ್ಪು ಪರದೆಯನ್ನು ಸರಿಸಿದೆ. ಕೇವಲ ಕಾಗದದ ಮೇಲಷ್ಟೇ ಅಸ್ತಿತ್ವದಲ್ಲಿರುವ ಈ ಪಕ್ಷಗಳ ರಹಸ್ಯ ಕಚೇರಿಗಳು ಮತ್ತು ಅವುಗಳ ಅಕೌಂಟ್‌ಗೆ ಜಮೆಯಾಗುತ್ತಿರುವ ಕೋಟ್ಯಂತರ ಹಣದ ಸತ್ಯಾಸತ್ಯತೆಗಳನ್ನು ಈ ವರದಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಇದನ್ನೂ ಓದಿ: ಬಿಬಿಸಿ ತನಿಖಾ ವರದಿ: ಕುಂಭಮೇಳದಲ್ಲಿ ಗತಿಸಿದವರು ಕನಿಷ್ಠ 82 ಮಂದಿ

ರಾಷ್ಟ್ರೀಯ ಪಕ್ಷಗಳನ್ನೇ ಹಿಂದಿಕ್ಕಿದ ಅನಾಮಧೇಯ ಪಕ್ಷಗಳು

ಬಿಬಿಸಿ ತನಿಖಾ ವರದಿಯ ಪ್ರಕಾರ, ಗುಜರಾತ್ ಮೂಲದ ಆರಕ್ಕೂ ಹೆಚ್ಚು ನೋಂದಾಯಿತ ಗುರುತಿಸಲ್ಪಡದ ರಾಜಕೀಯ ಪಕ್ಷಗಳು 2023-24ರ ಒಂದೇ ಆರ್ಥಿಕ ವರ್ಷದಲ್ಲಿ ಬರೋಬ್ಬರಿ ₹1,700 ಕೋಟಿಗೂ ಹೆಚ್ಚು ದೇಣಿಗೆ ಪಡೆದಿವೆ. ವಿಪರ್ಯಾಸವೆಂದರೆ, ಬಿಜೆಪಿ ಹೊರತುಪಡಿಸಿ ದೇಶದ ಪ್ರಮುಖ 5 ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ (ಎಎಪಿ), ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ), ಸಿಪಿಐಎಂ ಮತ್ತು ಎನ್‌ಪಿಪಿ — ಈ ಐದೂ ಪಕ್ಷಗಳು ಸೇರಿ ಪಡೆದ ಒಟ್ಟು ದೇಣಿಗೆ ₹1,480 ಕೋಟಿ ಮಾತ್ರ! ಅಂದರೆ, ಈ ಐದು ಪ್ರಮುಖ ರಾಷ್ಟ್ರೀಯ ಪಕ್ಷಗಳು ಪಡೆದ ಒಟ್ಟು ನಿಧಿಗಿಂತಲೂ ₹220 ಕೋಟಿಗೂ ಹೆಚ್ಚು ಹಣವನ್ನು ಜನರಿಗೆ ಹೆಸರು ಕೂಡ ಗೊತ್ತಿರದ ಈ 6 ಪ್ರಾದೇಶಿಕ ‘ಪೇಪರ್’ ಪಕ್ಷಗಳು (ಬರೀ ಕಾಗದದಲ್ಲಿ ಲಿಖಿತವಾಗಿ ನೋಂದಾಯಿಸಿಕೊಂಡಿರುವ ಪಕ್ಷಗಳು) ಬಾಚಿಕೊಂಡಿವೆ!

ಪಕ್ಷದ ಹೆಸರು ಸ್ವೀಕರಿಸಿದ ಒಟ್ಟು ದೇಣಿಗೆ (2023-24) 2024 ಲೋಕಸಭೆ ಚುನಾವಣೆಯಲ್ಲಿ ನಿಲ್ಲಿಸಿದ ಅಭ್ಯರ್ಥಿಗಳು
ಆಮ್ ಜನಮತ್ ಪಾರ್ಟಿ ₹620 ಕೋಟಿಓರ್ವ ಅಭ್ಯರ್ಥಿ
ಸತ್ಯವಾದಿ ರಕ್ಷಕ್ ಪಾರ್ಟಿ ₹330 ಕೋಟಿ ಓರ್ವ ಅಭ್ಯರ್ಥಿ
ಸ್ವತಂತ್ರತಾ ಅಭಿವ್ಯಕ್ತ್ ಪಾರ್ಟಿ ₹219.6 ಕೋಟಿ ಬಹುತೇಕ ಶೂನ್ಯ
ನ್ಯೂ ಇಂಡಿಯಾ ಯುನೈಟೆಡ್ ಪಾರ್ಟಿ ₹200.6 ಕೋಟಿ ಬಹುತೇಕ ಶೂನ್ಯ
ಭಾರತೀಯ ನ್ಯಾಶನಲ್ ಜನತಾ ದಲ್ ₹191.6 ಕೋಟಿ ಬಹುತೇಕ ಶೂನ್ಯ
ಗರೀಬ ಕಲ್ಯಾಣ್ ಪಾರ್ಟಿ ₹138 ಕೋಟಿ ಬಹುತೇಕ ಶೂನ್ಯ

ಅತ್ಯಂತ ಕುತೂಹಲಕಾರಿ ವಿಷಯವೆಂದರೆ, ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ಪಡೆದದ್ದು ₹281 ಕೋಟಿ ದೇಣಿಗೆ. ಆದರೆ ಕೇವಲ ಒಬ್ಬನೇ ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸಿದ್ದ ‘ಆಮ್ ಜನಮತ್ ಪಾರ್ಟಿ’ ಪಡೆದದ್ದು ₹620 ಕೋಟಿ ದೇಣಿಗೆ! ದೇಶಾದ್ಯಂತ 893 ಅಭ್ಯರ್ಥಿಗಳನ್ನು ನಿಲ್ಲಿಸಿದ ಐದು ರಾಷ್ಟ್ರೀಯ ಪಕ್ಷಗಳಿಗಿಂತ, ಕೇವಲ 15 ಅಭ್ಯರ್ಥಿಗಳನ್ನು ನಿಲ್ಲಿಸಿದ ಈ ಆರು ಪಕ್ಷಗಳ ಖಾತೆಗಳು ಶ್ರೀಮಂತವಾಗಿವೆ!

ಬೀಗ ಜಡಿದ ಕಚೇರಿಗಳು ಮತ್ತು ನಾಪತ್ತೆಯಾದ ನಾಯಕರು

ಬಿಬಿಸಿ ವರದಿಗಾರರ ತಂಡವು ಈ ಬೃಹತ್ ದೇಣಿಗೆ ಪಡೆದ ಪಕ್ಷಗಳ ಅಸಲಿ ಕಚೇರಿಗಳು ಎಲ್ಲಿವೆ ಎಂದು ಹುಡುಕ ಹೊರಟಾಗ ಬೆಚ್ಚಿಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ. ಅಹಮದಾಬಾದ್‌ನ ನರೋಡಾ ಪ್ರದೇಶದ ಸಣ್ಣ ಸಣ್ಣ ವಾಣಿಜ್ಯ ಸಂಕೀರ್ಣಗಳು ಮತ್ತು ಮುಚ್ಚಿಹೋದ ವಸತಿ ಕಟ್ಟಡಗಳಲ್ಲಿ ಈ ಪಕ್ಷಗಳ ವಿಳಾಸಗಳಿದ್ದವು. ನೂರಾರು ಕೋಟಿ ವಹಿವಾಟು ನಡೆಸುವ ಯಾವುದೇ ಪಕ್ಷದ ಬೋರ್ಡ್ ಅಥವಾ ಸಿಬ್ಬಂದಿ ಅಲ್ಲಿ ಇರಲಿಲ್ಲ. ಸತ್ಯವಾದಿ ರಕ್ಷಕ್ ಪಾರ್ಟಿ’ ₹330 ಕೋಟಿ ದೇಣಿಗೆ ಪಡೆದಿದ್ದು, ಅದರಲ್ಲಿ ₹316 ಕೋಟಿಯನ್ನು ‘ಸಮಾಜ ಸೇವೆ’ಗೆ ಬಳಸಿದ್ದೇವೆ ಎಂದು ಚುನಾವಣಾ ಆಯೋಗಕ್ಕೆ ನೀಡಿದ ವರದಿಯಲ್ಲಿ ಹೇಳಿಕೊಂಡಿದೆ. ಆದರೆ ಈ ಕೋಟ್ಯಂತರ ಹಣವನ್ನು ಯಾರಿಗೆ, ಹೇಗೆ ನೀಡಲಾಯಿತು ಎಂಬ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಲಾಗಿಲ್ಲ.

ಹಣ ಅಕ್ರಮ ರವಾನೆ ಅಥವಾ ತೆರಿಗೆ ವಿನಾಯಿತಿ ಜಾಲವೇ?

ಈ ಅನಾಮಧೇಯ ಪಕ್ಷಗಳಿಗೆ ಇಷ್ಟೊಂದು ಕೋಟಿ ಹಣ ಎಲ್ಲಿಂದ ಮತ್ತು ಏಕೆ ಬರುತ್ತಿದೆ ಎಂಬ ಪ್ರಶ್ನೆಗೆ ಆರ್ಥಿಕ ತಜ್ಞರು ಮತ್ತು ಚುನಾವಣಾ ವಿಶ್ಲೇಷಕರು ಗಂಭೀರ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 13A ಪ್ರಕಾರ, ನೊಂದಾಯಿತ ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆಗೆ ಸಂಪೂರ್ಣವಾಗಿ 100% ಆದಾಯ ತೆರಿಗೆ ವಿನಾಯಿತಿ ಇರುತ್ತದೆ. ದೊಡ್ಡ ದೊಡ್ಡ ಉದ್ಯಮಿಗಳು ಅಥವಾ ವ್ಯಕ್ತಿಗಳು ತಮ್ಮ ಕಪ್ಪು ಹಣವನ್ನು ಶೇ. 100ರಷ್ಟು ತೆರಿಗೆ ವಿನಾಯಿತಿ ಇರುವ ಈ ‘ಕಾಗದದ ಪಕ್ಷಗಳ’ ಖಾತೆಗೆ ದೇಣಿಗೆ ರೂಪದಲ್ಲಿ ವರ್ಗಾಯಿಸಿ, ಕಮಿಷನ್ ಪಡೆದು ಮತ್ತೆ ನಗದಾಗಿ ಹಿಂಪಡೆಯುವ ಅಕ್ರಮ ತಂತ್ರವನ್ನು (Money Trail) ಅನುಸರಿಸುತ್ತಿರುವ ಶಂಕೆ ವ್ಯಕ್ತವಾಗಿದೆ. ಕಾರ್ಪೊರೇಟ್ ವಲಯದಲ್ಲಿ ತೆರಿಗೆ ತಪ್ಪಿಸಲು ‘ಶೆಲ್ ಕಂಪನಿ’ಗಳನ್ನು ಸೃಷ್ಟಿಸುವಂತೆಯೇ, ರಾಜಕೀಯ ರಂಗದಲ್ಲಿಯೂ ತೆರಿಗೆ ವಿನಾಯಿತಿಗಾಗಿಯೇ ಇಂತಹ ‘ಶೆಲ್ ಪೊಲಿಟಿಕಲ್ ಪಾರ್ಟಿ’ಗಳು ಕಾರ್ಯಾಚರಿಸುತ್ತಿವೆ.

ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಗೆ ದೊಡ್ಡ ಪೆಟ್ಟು

ದೇಶದಲ್ಲಿ ಪ್ರಸ್ತುತ 2,800ಕ್ಕೂ ಹೆಚ್ಚು ನೋಂದಾಯಿತ ರಾಜಕೀಯ ಪಕ್ಷಗಳಿವೆಯಾದರೂ, ಅವುಗಳಲ್ಲಿ ಶೇಕಡಾ 70ಕ್ಕೂ ಹೆಚ್ಚು ಪಕ್ಷಗಳು ಹಣಕಾಸಿನ ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ ಎಂದು ಎಡಿಆರ್ ವರದಿಗಳು ಕಳವಳ ವ್ಯಕ್ತಪಡಿಸಿವೆ. ಚುನಾವಣಾ ಆಯೋಗವು ಈ ಹಿಂದೆ ಇಂತಹ ಅನೇಕ ನಿಷ್ಕ್ರಿಯ ಪಕ್ಷಗಳ ನೋಂದಣಿಯನ್ನು ರದ್ದುಗೊಳಿಸಿದೆಯಾದರೂ, ಕಾನೂನಿನಲ್ಲಿರುವ ಲೋಪದೋಷಗಳನ್ನು ಬಳಸಿಕೊಂಡು ಇಂತಹ ನಕಲಿ ಪಕ್ಷಗಳು ಕಾರ್ಯನಿರ್ವಹಿಸುತ್ತಲೇ ಇವೆ. ಇಂತಹ ಹೊಸ ಹೊಸ ಪಕ್ಷಗಳು ಹುಟ್ಟಿಕೊಳ್ಳುತ್ತಲೇ ಇವೆ.

ಬಿಬಿಸಿಯ ಈ ವಿಶೇಷ ತನಿಖಾ ವರದಿಯು, ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಚುನಾವಣಾ ನಿಧಿ ಮತ್ತು ದೇಣಿಗೆಗಳ ಹೆಸರುಗಳಲ್ಲಿ ನಡೆಯುತ್ತಿರುವ ಬೃಹತ್‌ ಆರ್ಥಿಕ ಅಕ್ರಮಗಳನ್ನು ಜಗಜ್ಜಾಹೀರುಗೊಳಿಸಿದ್ದು, ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್ ತಕ್ಷಣವೇ ಈ ಪೇಪರ್ ಪಕ್ಷಗಳ ಆರ್ಥಿಕ ಮೂಲಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಎತ್ತಿಹಿಡಿದಿದೆ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ಹೊರಗುತ್ತಿಗೆ ನೇಮಕಾತಿಯಲ್ಲಿ ವಿಕಲಚೇತನರಿಗೆ ಉದ್ಯೋಗ ನೀಡಿ: ವಿನೋದ ಖೇಡ

ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ...

ಕೊಪ್ಪಳ: ಪ್ರೇಮ ವಿವಾಹದ ದ್ವೇಷಕ್ಕೆ ಯುವಕನ ಕುಟುಂಬದ ಮೇಲೆ ಮಾರಣಾಂತಿಕ ದಾಳಿ

ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಯುವಕನ ಕುಟುಂಬದ ಮೇಲೆ ಯುವತಿಯ ಕಡೆಯವರು ಮಾರಕಾಸ್ತ್ರಗಳಿಂದ...

ದಾಖಲೆಯ ರನ್ ಬೆನ್ನತ್ತಿದ ಭಾರತಕ್ಕೆ ಜಯ: ನ್ಯೂಜಿಲೆಂಡ್ ವಿರುದ್ಧ ಮಿಂಚಿದ ಸಂಜು ಸ್ಯಾಮ್ಸನ್

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡವು ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ...