ಹೊಸ ಓದು | ಮಂಜುನಾಥ್‌ಲತಾರ ‘ಸ್ಟೋರಿ ಟೆಲ್ಲರ್’ ಕೃತಿ ಕುರಿತು ಓಎಲ್ಎನ್ ಏನು ಹೇಳಿದ್ದಾರೆ?

Date:

Advertisements
ಕಥೆಗಾರ, ಕಲಾವಿದ, ನಾಟಕಕಾರ ಮಂಜುನಾಥ್‌ಲತಾ ಅವರ 'ಸ್ಟೋರಿ ಟೆಲ್ಲರ್ ಜವರ ಇನ್ನಿಲ್ಲ' ಕಥಾಸಂಕಲನದಲ್ಲಿ ಓದುಗರು ಗಮನಿಸಬೇಕಾದ, ಗಮನಿಸಿ ಇಲ್ಲಿನ ವಿಷಯಗಳನ್ನು ಚರ್ಚಿಸುವಂತೆ ಮಾಡಬಲ್ಲ ಕಥೆಗಳಿವೆ. ಈ ಕಥೆಗಳನ್ನು ಒಟ್ಟಾಗಿ ಓದಿದಾಗ ಅವರು ನಮ್ಮ ಕಾಲದ ಮುಖ್ಯ ಕಥೆಗಾರರಾಗಬಲ್ಲರು ಅನ್ನುವ ನಂಬಿಕೆ ಮೂಡಿದೆ.

ಬದಲಾವಣೆ ಅನ್ನುವುದು ವ್ಯಕ್ತಿಯ ಬದುಕಿನಲ್ಲಿ, ಸಮುದಾಯದ ಬದುಕಿನಲ್ಲಿ ಯಾವತ್ತಿಗೂ ನೋವಿನ ಸಂಗತಿಯೇ ಹೌದು. ಕನ್ನಡದ ಸಮುದಾಯಗಳ ಬದುಕಿನಲ್ಲಿ 1990ರ ದಶಕದ ಕೊನೆಯ ಭಾಗದಲ್ಲಿ ಆರಂಭವಾದ ಬದಲಾವಣೆಗಳ ವೇಗ ಎಂಥ ಆಘಾತಕಾರಿ ಅನ್ನುವ ಒಂದು ನೋಟ ಈ ಕಥೆಗಳಲ್ಲಿ ದೊರೆಯುತ್ತದೆ. ಯಾರೊಬ್ಬರ ಇಚ್ಛೆಗೆ ಒಳಪಟ್ಟಿರದ ಬದಲಾವಣೆ, ಅಭಿವೃದ್ಧಿಗಳು ಬಿಡಿ ಮನುಷ್ಯರ ಮತ್ತು ಸಮುದಾಯಗಳ ಬದುಕಿನಲ್ಲಿ ತಂದ ನೋವು, ನೆನಪುಗಳ ನಾಶ, ವ್ಯಕ್ತಿ ಮಾತ್ರ ಮುಖ್ಯವೆಂಬ ಬೇರಿಲ್ಲದ ಸ್ಥಿತಿ, ಮಾನವೀಯ ಸಂಬಂಧ ಎಂಬ ನುಡಿಗಟ್ಟಿನ ಅರ್ಥಪಲ್ಲಟ ಇಂಥ ಸಂಕಟಗಳೆಲ್ಲ ಕಳೆದ ಮೂರು ದಶಕಗಳ ಕಥೆ. ಮಂಜುನಾಥ್‌ಲತಾ ಅವರಂತೆಯೇ ದಯಾನಂದ ಅವರ ‘ಬುದ್ಧನ  ಕಿವಿ’ ಸಂಕಲನದ ಕಥೆಗಳು, ಇತ್ತೀಚೆಗೆ ಜನರ ಮನಸ್ಸನ್ನು ಅಲುಗಿಸಿರುವ ಕೆ.ಪಿ. ಲಕ್ಷ್ಮಣ್ ಅವರ ‘ಬಾಬ್ ಮಾರ್ಲಿ’ ನಾಟಕ ಇಂಥವು ಹೇಳುತ್ತಿರುವುದನ್ನು ಕೇಳುವ ಕಿವಿಗಳು ಬೇಕಾಗಿವೆ. ಚೋಮನ ಮಕ್ಕಳು ಅನುಭವಿಸಿದ ಸಂಕಟ ಅಮಾಸನ ಮಕ್ಕಳ ಕಾಲದಲ್ಲೂ ಇನ್ನಷ್ಟು ತೀವ್ರವಾಗಿದೆಯೇ ಹೊರತು ಕಡಿಮೆಯಾಗಿಲ್ಲ ಎಂಬುದನ್ನು ಈ ಕಥೆಗಳು ಮನದಟ್ಟು ಮಾಡುವಂತಿವೆ.

‘ಸ್ಟೋರಿ ಟೆಲ್ಲರ್ ಜವರ ಇನ್ನಿಲ್ಲ’ ಕುತೂಹಲ, ಮೆಚ್ಚುಗೆ, ಪ್ರಶ್ನೆಗಳನ್ನು ಓದುಗರ ಮನಸಿನಲ್ಲಿ ಮೂಡಿಸುವ ಕಥಾ ಸಂಕಲನ. ಇವತ್ತಿನ ಬದುಕಿನ ಅರ್ಥವನ್ನು ಮಂಜುನಾಥ್‌ಲತಾ ಕಟ್ಟಿಕೊಡುವ ಬಗೆ ಕುತೂಹಲವನ್ನು ಹುಟ್ಟಿಸುತ್ತದೆ, ಕಥೆಗಾರರು ತಮ್ಮದೇ ಕಥನ ಪರಂಪರೆ ರೂಪಿಸಿಕೊಳ್ಳಲು ನಡೆಸುತ್ತಿರುವ ಪ್ರಯತ್ನ ಮೆಚ್ಚುಗೆ ಗಳಿಸುತ್ತದೆ, ನಮ್ಮ ಬದುಕು ಹೀಗೇಕೆ ಇದೆ, ಇರಬಾರದು ಅಲ್ಲವೇ ಎಂದು ಬದುಕನ್ನು ಕುರಿತೇ ಪ್ರಶ್ನೆಗಳನ್ನು ಓದುಗರಲ್ಲಿ ಮೂಡಿಸುತ್ತವೆ. ಸಂಕಲನಕ್ಕೆ ಹೆಸರು ನೀಡಿರುವ ‘ಸ್ಟೋರಿ ಟೆಲ್ಲರ್ ಜವರ ಇನ್ನಿಲ್ಲ’ ಕಥೆಯೇ ಒಟ್ಟು ಸಂಕಲನದ ಕಾಳಜಿಯನ್ನು ಸೂಚಿಸುವಂತಿದೆ. ಸಮಾಜ, ಸಂಬಂಧಗಳನ್ನು ಕುರಿತು ಸುಮಾರು ಐವತ್ತು ವರ್ಷಗಳ ಹಿಂದೆ ಬರೆಯುತ್ತಿದ್ದ ರೀತಿಯ ಕಥೆಗಳನ್ನು ಈಗ ಹೇಳಲೂ ಬರೆಯಲೂ ಸಾಧ್ಯವಿಲ್ಲ, ಆ ಹಳೆಯ ಕಥೆಗಾರಿಕೆ/ಕಥೆಗಾರನಿಗೆ ಈಗ ತಾವಿಲ್ಲ ಅನ್ನುವ ಸೂಚನೆ ಕಥೆಗೆ ಇಟ್ಟಿರುವ ಹೆಸರಿನಲ್ಲೇ ಇರುವಂತೆ ತೋರಿತು.

‘ಹೊಸಬಟ್ಟೆಗಳ ಹಸಿವಾಸನೆ’ ಮಂಜುನಾಥ್‌ಲತಾ ಅವರ ಮುಖ್ಯ ಆಸಕ್ತಿಯೊಂದನ್ನು ಹಿಡಿದಿಟ್ಟಿದೆ. ಅದು ಈಗಿನ ದಿನಮಾನದ ಯುವ ಜೀವಗಳ ಬದುಕಿನ ಕ್ರಮದೊಡನೆ ಹೊಂದಿಕೊಳ್ಳಲಾಗದ ಹಿರೀಕ ತಾಯಿ ಜೀವ ತಬ್ಬಿಬ್ಬಾಗುವ ಕಥನ. ಮೇಲು ಮೇಲಿನ ಓದಿಗೆ ಈ ಕಥೆ ವ್ಯಂಗ್ಯ, ತಮಾಷೆ ಅನಿಸಿದರೂ ಅದರ ಒಳ ಪ್ರವಾಹವಾಗಿ ಇರುವುದು ವ್ಯಕ್ತಿಗಳ ಇಷ್ಟ-ಅನಿಷ್ಟವನ್ನು ಮೀರಿದ ‘ಬದಲಾವಣೆಯ ದುರಂತ’. ನಗರದಲ್ಲಿ ವಾಸಮಾಡುವ ಸುಶಿಕ್ಷಿತ ಸಂಬಳದಾರ ವರ್ಗದ ಬದುಕು ಈಗ ಇರುವಂತೆ ಇರುವುದು ವ್ಯಕ್ತಿಗತವಾದ ಆಯ್ಕೆಯಲ್ಲ, ನಮ್ಮ ರಾಜಕೀಯ, ಆರ್ಥಿಕ ಆಯ್ಕೆಗಳ ಪರಿಣಾಮ ಎಂದು ವ್ಯಾಖ್ಯಾನ ಮಾಡಬಹುದು. ಅದು ಪಾಂಡಿತ್ಯದ ಮಾತು. ಕಥೆಯಲ್ಲಿ ಮುಖ್ಯವಾಗುವುದು ಭಾವನೆ, ಭಾಷೆ, ಒಡನಾಟ ಎಲ್ಲವನ್ನೂ ಕತ್ತರಿಸಿಕೊಂಡ ತಲೆಮಾರುಗಳ ಸಂಕಟ. ಇದನ್ನು ವಾಸನೆ, ಸ್ಪರ್ಶ, ಎಳವೆಯಲ್ಲಿ ಬಾವಿಯಲ್ಲಿ ಮುಳುಗಿದ ನೆನಪಿನ ರೂಪಕ, ಸೀರೆಯೊಳಗೆ ಅಡಗಿಸಿಟ್ಟ ನುಸಿ ಉಂಡೆಯಂಥ ರೂಪಕಗಳ ಮೂಲಕ ಕಥೆಗಾರ ಹೇಳುತ್ತಾರೆ. ಟಿವಿ, ಪೊಲೀಸು ಇಂಥ ‘ಸಂಸ್ಥೆ’ಗಳೂ ಅಮಾನುಷವಾಗಿರುವುದನ್ನು ತೋರಿಸುತ್ತಾ ಕಥೆಯ ಕೊನೆಗೆ ಮನೆಯ ಕೆಲಸದವರು ಅಪಾರ್ಟ್ಮೆಂಟಿಗೆ ಬರಬಾರದು ಎಂದು ಮಾಡುವ ಘೋಷಣೆ ನೋವು ತುಂಬಿದ ವ್ಯಂಗ್ಯವನ್ನು ಓದುಗರಿಗೆ ದಾಟಿಸುತ್ತದೆ. ಸಾಮಾಜಿಕ ಬದಲಾವಣೆ ಸ್ಥೂಲವಾಗಿ ಅಪೇಕ್ಷಣೀಯ ಅನಿಸಿದರೂ ಅದಕ್ಕಾಗಿ ತೆರುವ ಮಾನವೀಯತೆಯ ಬೆಲೆ ಎಷ್ಟು ದೊಡ್ಡದು, ಅಂಥ ಬೆಲೆ ತೆತ್ತು ಈ ಥರದ ಬದುಕನ್ನು ಬಯಸಬೇಕೆ ಎಂಬ ಚಿಂತನೆಯ ಅಲೆಗಳನ್ನು ಹುಟ್ಟಿಸುತ್ತದೆ. ಕಥೆಯ ಆರಂಭದಲ್ಲಿ ಬಳಸಿರುವ ‘ಬೇರು ಸತ್ತೀ ಮರವನೆತ್ತಿ ನಿಲ್ಲಿಸು ಮಗು’ ಎಂಬ ಸಾಲುಗಳು ಕಥೆಗಾರರು ಓದುಗರಿಗೆ ದಾಟಿಸುವ ಅರ್ಥಸಂದಿಗ್ಧತೆಯತ್ತ ಗಮನ ಸೆಳೆಯುತ್ತವೆ. ಬೇರು ಸತ್ತ ಮರವನ್ನು ನಾಶಮಾಡುವುದು ಅನಿವಾರ್ಯ, ಬೇರು ಸತ್ತ ಮರದೊಳಗು ಅಲ್ಲಷ್ಟು ಇಲ್ಲಷ್ಟು ಉಳಿದಿರಬಹುದಾದ ಜೀವಂತಿಕೆಯನ್ನು ಏನು ಮಾಡಬೇಕು? ನಿರ್ಧಾರ ಸಲೀಸಾದದ್ದಲ್ಲ ಎಂದು ಸೂಚಿಸುವುದು ಕಥೆಯ ಹಿರಿಮೆ. ತೊಟ್ಟ ಬಟ್ಟೆ ಹೊಸತಾದರೂ ಮನಸಿನ ಆಳದಲ್ಲಿ ಬೇರು ಬಿಟ್ಟಿರುವ ಸ್ಮರಣೆಗಳ ವಾಸನೆ ಹಳತೇ ಅನ್ನುವಂತೆ ತೋರುತ್ತದೆ.

Advertisements

‘ಸ್ಟೋರಿ ಟೆಲ್ಲರ್ ಜವರ ಇನ್ನಿಲ್ಲ’ ಹಳೆಯ ಬದುಕಿನ ಕಥನವೇ ಮಾಯವಾಗುತ್ತಿರುವ ಚಿತ್ರಣವಾಗಿ ಕಾಣುತ್ತದೆ. ಕಥನ ಮಾತ್ರವಲ್ಲ ಬದುಕನ್ನು ಕಥೆಯಾಗಿ ಕಲ್ಪಿಸಿಕೊಂಡು ಹೇಳುತ್ತಾ ಬದುಕನ್ನು ತಿದ್ದುವ ಮನಸುಗಳೂ ಇಲ್ಲವಾಗುತ್ತಿರುವ ದುರಂತದ ನೆರಳು ಕಥೆಯಲ್ಲಿದೆ. ಕಥೆ ಹೇಳುವ ಜವರನನ್ನು ಮರೆತೆ ಅಂದುಕೊಂಡರೂ ಮರೆಯಲಾಗದ ನಿರೂಪಕನ ಚಡಪಡಿಕೆ ಬದುಕಿನ ಅರ್ಥವಂತಿಕೆಯನ್ನು ತಿಳಿಯಲು ಬಯಸುವ ಮನುಷ್ಯ ಹಂಬಲದ ಚಿತ್ರಣ ಅನಿಸಿತು. ಮಕ್ಕಳಿಗೆ ಹೊಸ ಕಥೆ ಹೇಳಲಾಗದ ನಿರೂಪಕ ತಾನು ಬಾಲ್ಯದಲ್ಲಿ ಕೇಳುತ್ತಿದ್ದ ಜವರ ಹೇಳುವ ಕಥೆಗಳನ್ನು ಮತ್ತೆ ಕೇಳಲು ಹಾತೊರೆಯುತ್ತಾನೆ. ಅವು ರಾಜ ರಾಣಿಯ ಕಥೆಗಳಲ್ಲ, ಬದುಕಿನ ಕಥೆಗಳು. ಹೊಸ ವಿವರ, ಹೊಸ ಪಾತ್ರಗಳು ಜೀವತಳೆಯುತಿದ್ದ ಕಥೆಗಳು. ಕೆಡುಕಿನಿಂದ ಬದುಕಿಗೆ ಕೆಟ್ಟದ್ದು ಆಗದಿರಲಿ ಎಂಬ ಹಂಬಲ ಹೊತ್ತು ಕೆಡುಕನ್ನು ಒಳಿತಾಗಲಿ ಎಂದು ಬದಲಿಸುವ ಕಥೆಗಳನ್ನು ಹೇಳುತಿದ್ದ ಜವರ ಕಣ್ಮರೆಯಾಗುವುದಕ್ಕೆ ಕಾರಣ ಬದಲಾದ ಬದುಕಿನ ರೀತಿ. ಬದುಕಿನ ‘ಕವಲು ದಾರಿ’ಗಳಲ್ಲಿ ಶಿಕ್ಷಣ, ಆಧುನಿಕ ನೌಕರಿ, ಸವಲತ್ತುಗಳ ದಾರಿ ಒಂದು, ಸಂಬಂಧ, ಕಲ್ಪನೆ, ಮರುಕ, ಕಥೆಯನ್ನು ಬದುಕಾಗಿಸುವ, ಬದುಕನ್ನು ಕಥೆಯಾಗಿಸುವ ಸಂಕಟದ ದಾರಿ ಇನ್ನೊಂದು. ಹಾಗೆ ಮಂಜುನಾಥ್‌ಲತಾ ಅವರ ಈ ಕಥೆಗಳಲ್ಲಿ ಕವಲುದಾರಿಯ ಮಾತು ಹಲವು ಬಾರಿ ಎದುರಾಗುತ್ತದೆ. ನಾವು ಸಮುದಾಯವಾಗಿ, ಸಮಾಜವಾಗಿ ಹಿಡಿದಿರುವ ದಾರಿಯ ಮಿತಿ, ನಾವು ಸಾಗದೆ ಇದ್ದ ಇನ್ನೊಂದು  ದಾರಿಯಲ್ಲಿ ಇದ್ದಿರಬಹುದಾದ ಒಳಿತು ಇಲ್ಲಿನ ಕಥೆಗಳ ಒಂದು ಮುಖ್ಯ ಆಶಯ. ನಿರೂಪಕ ಪಾತ್ರದ ಮಗಳು ಜವರನಲ್ಲಿ ಸ್ವಂತ ತಾತನನ್ನು ಕಾಣುವುದು, ಆ ಮಗಳನ್ನು ಮನುಷ್ಯ ಸಹಜ ಕಲ್ಪನೆ, ಸಂಬಂಧಗಳಿಂದ ದೂರ ಮಾಡುವ ಸಮ್ಮರ್ ಕ್ಯಾಂಪುಗಳ ವಿವರ, ಸೌದೆ ಅಂಗಡಿಯಲ್ಲಿ ಕೆಲಸ ಮಾಡುತ್ತ, ಎಳನೀರು ಕೊಚ್ಚುತ್ತ ಕಥೆ ಕೇಳುವವರಿಲ್ಲದ ಜವರ ಇವೆಲ್ಲ ಸೇರಿ ಓದುಗರ ಮನಸು ಭಾರವಾಗುತ್ತದೆ, ಚಿಂತನೆಗೆ ತೊಡಗುತ್ತದೆ.

ಇದನ್ನು ಓದಿದ್ದೀರಾ?: ಉಚಿತ ಕೊಡುಗೆಗಳ ಬಗ್ಗೆ ಅನುಮಾನವಿರಲಿ; ನಿಮ್ಮ ಮೆದುಳು ವಸಾಹತು ಕಾಲೋನಿಯಾಗದಿರಲಿ…

‘ಕೆಂಪುಷ್ಟ ಮಣ್ಣು ಮತ್ತು ಕೆನ್ನೀರು’ ನಮ್ಮ ಕಾಲದ ದುಃಸ್ವಪ್ನವಾಗಿರುವ ರಿಯಲ್ ಎಸ್ಟೇಟ್ ವ್ಯವಹಾರ ಜನ್ಮಕೊಟ್ಟಿರುವ ಕೇಡುಗಳನ್ನು ಕುರಿತದ್ದು. ಇನ್ನೊಬ್ಬ ಕಥೆಗಾರ ಸ್ವಾಮಿ ಪೊನ್ನಾಚಿಯವರೂ ರಿಯಲ್ ಎಸ್ಟೇಟ್ ದುರಂತ ಕುರಿತ ಕಥೆಯೊಂದನ್ನು ಬರೆದಿದ್ದಾರೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ವಸುಧೇಂದ್ರ ಬರೆದ ‘ಕೆಂಪು ಗಿಣಿ’ಯೂ ನೆನಪಾಗುತ್ತದೆ. ಕನ್ನಡದ ಹೊಸ ಕಥೆಗಾರರು ತಮ್ಮ ಸುತ್ತಲ ಘಟನೆಗಳ ಮೂಲಕ ಬದುಕಿನ ಪ್ರಶ್ನೆಗಳು ಒಡ್ಡುವ ಸವಾಲನ್ನು ಚಿತ್ರಿಸುವ ರೀತಿಗೆ ಇವು ಉದಾಹರಣೆಗಳೆಂಬಂತೆ ಕಂಡಿವೆ. ಭೂಸುಧಾರಣೆಯ ಕಾನೂನು ಮತ್ತು ಇವತ್ತಿನ ಕಬಂಧ ಬಾಹುಗಳಾಗಿರುವ ರಿಯಲ್ ಎಸ್ಟೇಟ್ ಎರಡೂ ಮಂಜುನಾಥ್‌ಲತಾ ಅವರ ಕಥೆಯಲ್ಲಿ ನಮಗೆ ಎದುರಾಗುತ್ತವೆ.

‘ಕೊಡಗನಟ್ಟಿ ಗುಂಪಿಗೆ ಸೇರಿದ ನೀಲಸಟ್ಟಿಯ ಸಂಬಂಧಿಗಳೆಲ್ಲ ತಮಗೆ ಪೂರ್ವಾರ್ಜಿತವಾಗಿ ಬಂದಿದ್ದ ಅರೆಕೊರೆ ಜಮೀನುಗಳನ್ನೆಲ್ಲ ಎಂದೋ ಮಾರಿ ಹಾಕಿ ಕಣ್ಣಿಗೆ ಕಂಡ ಕೆಲಸಗಳನ್ನೆಲ್ಲ ಮಾಡಿ ಮುಗಿಸಿ ಮುದುಕರಾಗಿ ಬದುಕು ತಳ್ಳುತ್ತಿದ್ದರು. ಅವರ ಮಕ್ಕಳು, ಮೊಮ್ಮಕ್ಕಳು ಕಬ್ಬಿಣದ ಕೆಲಸ, ಗಾರೆ ಕೆಲಸ, ಕಬ್ಬು ಕಟಾವು, ಫ್ಯಾಕ್ಟರಿ ಗಾರ್ಡ್ ಕೆಲಸ- ಹೀಗೆ ಅವರವರಿಗೆ ಒಗ್ಗಿದ ಕಾಯಕಗಳನ್ನು ಹಿಡಿದು ನಡೆದಿದ್ದರು. ಇದ್ದ ಕೊರೆಹೊಲಗಳನ್ನೂ ಕಳೆದುಕೊಂಡು ನಿಂತಿದ್ದ ಅವರನ್ನೆಲ್ಲ ಗೇಲಿನಗೆಯೊಂದಿಗೆ ನೋಡುತ್ತಾ ನೀಲಸಟ್ಟಿ ತನ್ನ ಪಾಲಿಗೆ ಬಂದಿದ್ದ ಒಂದು ಎಕರೆ ಎಂಟು ಗುಂಟೆ ಜಮೀನನ್ನು ಬದುಕಿನ ಕೊನೆಯ ಆಸರೆ ಎಂಬಂತೆ ಆತುಕೊಂಡಿದ್ದ.’

-ಎಂಬ ವಿವರವೇ ನೀಲಸೆಟ್ಟಿಯ ಅಸಹಾಯಕತೆಯನ್ನು ತೋರುತ್ತದೆ. ಹಣ, ಶ್ರಮವಿಲ್ಲದ ದುಡಿಮೆಗಳ ಸೆಳೆತ ಮತ್ತು ಬದುಕನ್ನು ಕಟ್ಟಿಕೊಳ್ಳಲು ನೆಲವನ್ನು ನಂಬಿದ ದುರ್ಬಲ ಸಮುದಾಯದ ಭಾವುಕ ಬದುಕುಗಳ ಮುಖಾಮುಖಿ ಈ ಕಥೆಯಲ್ಲಿದೆ. ಅತಿ ದುಬಾರಿ ವಸ್ತುಗಳಾಗಿರುವ ಶಿಕ್ಷಣ ಮತ್ತು ಆರೋಗ್ಯ ಎಂಬ ಸರಕುಗಳಿಂದ ದೂರವೇ ಉಳಿದ ನೀಲಸೆಟ್ಟಿಯ ಎದುರಿಗೆ ಇರುವುದು ಉಳ್ಳವನು, ಕಾನೂನು ತಿಳಿದವನು ಇತ್ಯಾದಿಗಳೆಲ್ಲ ಆಗಿರುವ ಚಿನ್ನಯ್ಯಬುದ್ಧಿ. ಅವನ ಅಪ್ಪ ಭೂ ಸುಧಾರಣೆ ಕಾಲದಲ್ಲಿ ಹಂಚಿದ ಭೂಮಿ ಪಡೆದೇ ಬದುಕು ಕಟ್ಟಿಕೊಂಡವನ ಮಗ ನೀಲಸೆಟ್ಟಿ ಎಂದು ತಿಳಿದು ಬುದ್ದಿಯವರ ಮನಸು ಕರಗಿದರೂ ನೆಲದ ಆಸೆ ಬಿಡದು.

‘ಎಲ್ಲವನ್ನೂ ತೊರೆದು ಹೋದ ಬುದ್ದಿಯವರ ತಂದೆ, ಹರಿದು ಹಂಚಿ ಹೋದ ಜಮೀನುಗಳು, ತನ್ನ ಹೊಲದ ತೆಂಗು, ಮಾವು, ಆಸ್ಪತ್ರೆಯಲ್ಲಿ ಮಲಗಿರುವ ಹೆಂಡತಿ, ಬಾಸಿಂಗ ಕಟ್ಟಿಕೊಂಡು ಕುಂತಿರುವ ಕುಂಟುಮಗಳು, ಏನನ್ನೋ ಹುಡುಕುತ್ತಿರುವ ಬುದ್ದಿಯವರ ಕನ್ನಡಕದ ಹಿಂದಿನ ಸ್ವಚ್ಛ ಕಣ್ಣುಗಳು…ಇವೆಲ್ಲವೂ ಕೆಂಪುಷ್ಪ ಮಣ್ಣಿನೊಂದಿಗೆ ಕಲಸಿಕೊಂಡು ಹರಿವ ಕೆನ್ನೀರ ಕನ್ನಡಿಯಲ್ಲಿ ಕಂಡಂತಾಗಿ ನೀಲಸಟ್ಟಿ ಧ್ಯಾನಸ್ಥಸ್ಥಿತಿಯಲ್ಲಿ ನಿಂತಂತೆಯೇ ‘ಹೂಂ’ಗುಟ್ಟಿದ.’

-ಈ ವಿವರವು ಭಾವುಕತೆಯೇ ಸೆಟ್ಟಿಯಂಥ ಜನರ ದುರಂತಕ್ಕೂ ಕಾರಣವಾಗುವುದನ್ನು ಸೂಚಿಸುತ್ತದೆ. ಕೋರ್ಟಿನಲ್ಲಿ ವ್ಯವಹಾರ ನಡೆದು ನಿರೀಕ್ಷಿತವಾದ ರೀತಿಯಲ್ಲೇ ಸೆಟ್ಟಿ ಸೋತು ಜಮೀನು ಕಳಕೊಳ್ಳುವುದು ರೂಪಕಗಳ ಮೂಲಕ ಚಿತ್ರಣಗೊಂಡಿದೆ.

‘ಕೋರ್ಟ್ ಕಟ್ಟಡದ ಕೆಂಪು, ತೋಟದ ಕೆಂಪುಷ್ಪ ಮಣ್ಣಿನ ಕೆಂಪು ಕಣ್ಣಿಗೆ ರಾಚಿದಂತಾಗಿ ಕುಸಿದು ಕುಳಿತುಬಿಟ್ಟಿದ್ದ.’

‘ಸುತ್ತಲ ಗೌಜು ಗದ್ದಲಗಳು ಕಿವಿಗೆ ತಾಕದವನಂತೆ ನಿಂತೇ ಇದ್ದ ಅವನನ್ನು ಜೋರಾಗಿ ಹಾರ್ನ್ ಬಜಾಯಿಸಿಕೊಂಡು ಬಂದು ನಿಂತ ಬಸ್ಸು ಎಚ್ಚರಿಸಿತು. ಹಿಂದಿನ ಬಾಗಿಲಿನಿಂದ ತಲೆ ಹೊರಗೆ ಹಾಕಿದ ಕಂಡಕ್ಟರ್ ”ಏಯ್ ಮುದ್ಕ ಕೆಂಪು ಬಸ್‌ಗೆ ಸಿಕ್ಕಾಕಂಡ್ರೆ ಗೌರ್ಮೆಂಟ್ನಿಂದ ಪರಿಹಾರ ಗ್ಯಾರಂಟಿ ಅಂತ ಸಾಯೋಕೆ ಬಂದಿದೀಯಾ?!” ಎಂದು ಜೋರಾಗಿ ಛೇಡಿಸಿ ನಕ್ಕು ”ರೈಟ್ ರೈಟ್” ಅಂದ…”

ಕೊನೆಯ ವಾಕ್ಯವು ನಮ್ಮ ಕಾಲದ ಬದುಕು ಎಷ್ಟರ ಮಟ್ಟಿಗೆ ಸ್ವಕೇಂದ್ರಿತವಾಗಿದೆ, ಸಮುದಾಯದ, ಜೊತೆಯ ಮನುಷ್ಯರ ಸಂಕಟಕ್ಕೆ ಕುರುಡಾಗಿದೆ, ಉಡಾಫೆಯ ಕ್ರೌರ್ಯದಿಂದ ತುಂಬಿದೆ ಅನ್ನುವುದನ್ನು ಸೂಚಿಸುತ್ತದೆ.

‘ದಂಡ ಸಂಹಿತೆ ಅಥವಾ ಕೊಂದವರುಳಿದರು ಎಂದುಕೊಳ್ಳಿ’ ಕಥೆಯು ಮಂಜುನಾಥ್ ಲತಾ ಅವರ ಇನ್ನೊಂದು ಆಸಕ್ತಿಯಾಗಿರುವ ಐಡೆಂಟಿಟಿಯ ಪ್ರಶ್ನೆಯನ್ನು ಕುರಿತದ್ದು. ಬದಲಾದ ಪರಿಸರದಲ್ಲಿ ಬದಲಾದ ವ್ಯಕ್ತಿ ಅದು ನೆನಪುಗಳನ್ನು ಒರೆಸಿ ಹಾಕುವ ಪರಿಸರ. ಹೊರಗಿನ ಪರಿಸರದ ಬಗ್ಗೆ ಎಚ್ಚರವಿಲ್ಲದೆ ಗತಕಾಲದ ನೆನಪು, ಆಚಾರಗಳಿಗೆ ಬದ್ಧರಾದ ಸಮೂಹ, ಪಡೆದ ತಿಳಿವಳಿಕೆಯನ್ನು ಜನರ ಮನಸು ಮುಟ್ಟುವ ಭಾಷೆಯಲ್ಲಿ ತಿಳಿಸಲಾಗದ ನಾಯಕ ಪಾತ್ರ ಇವೆಲ್ಲ ಇರುವ ಕಥೆಯ ನಿರೂಪಣೆಯಲ್ಲಿ ದ್ಯಾವನೂರು ಸಂಕಲನದ ರಚನೆಗಳಲ್ಲಿ ಬಳಕೆಯಾಗಿರುವ ಕಥನ ವಿಧಾನದ ನೆನಪುಗಳಿವೆ. ಕ್ರಿಯಾಪದ ಬಳಕೆ, ಬಣ್ಣಗಳ ಬಳಕೆ ಗಮನ ಸೆಳೆಯುತ್ತದೆ. ಇಷ್ಟು ದಶಕಗಳು ಕಳೆದರೂ ತಳಸಮುದಾಯದ ಬದುಕು ದ್ಯಾವನೂರು ಕಥಾಸಂಕಲನದ ಕಾಲದಷ್ಟೇ, ಅಥವಾ ಇನ್ನೂ ದಾರುಣವಾಗಿರುವುದನ್ನು ಸೂಚಿಸುತ್ತದೆ.

‘ತಾಲ್ಲೂಕು ಕೇಂದ್ರ ಕೂಡ್ಲುಪಟ್ಟಣದಿಂದ ಹತ್ತೇ ಮೈಲು ದೂರದ ನನ್ನ ಊರು ಜಗಜಗಿಸುವ ಚಹರೆಗಳನ್ನು ಧರಿಸಿ ಹೊಸದಾಗಿ ಕಾಣತೊಡಗಿತ್ತು. ಮೊಬೈಲು ಟವರ್, ಥಿಯೇಟರ್ ಆಗಿ ಮೇಲ್ದರ್ಜೆ ಪಡೆದ ಟೆಂಟು, ಹೈಸ್ಕೂಲು ಹಿಂದೆ ಪುಟ್ಟದೊಂದು ಪಾರ್ಕು, ಊರಾಚೆಯ ಬಾರ್ ಮತ್ತು ರೆಸ್ಟೋರೆಂಟು, ಇಸ್ಪೀಟು ಕ್ಲಬ್ಬು- ಇಂತಹವು ನಾನಿದ್ದ ನಗರದಲ್ಲಿ ನನಗೆ ಹೊಸವೇನೂ ಅಲ್ಲ; ಆದರೆ ಊರಿಗೆ ಕಾಲಿಟ್ಟು ಅಡ್ಡಾಡುತ್ತಲೇ ಅಂತಹವೆಲ್ಲವೂ ಇಲ್ಲಿ ಧುತ್ತನೆ ಉದ್ಭವಗೊಂಡಂತೆ ಹೊಸದಾಗಿ ಕಾಣತೊಡಗಿದ್ದವು.’

ಈ ವಿವರಣೆಯು ಹುಚ್ಚಮಾಸ್ತಿಯು ದಿನಕರ ಮಾಸ್ತರ್ ಆಗಿ ಸಾಮಾಜಿಕ ಮನ್ನಣೆ ಪಡೆದರೂ ತನ್ನವರ ಮನಸು ಮುಟ್ಟಲಾಗದ ದುರಂತವನ್ನು ಹೊರಲೋಕದ ಬದಲಾವಣೆ ಒಳಲೋಕದ ಸಂಕಟಗಳನ್ನು ಓದುಗರಿಗೆ ದಾಟಿಸುತ್ತದೆ. ಅಸ್ಮಿತೆಯ ಪ್ರಶ್ನೆಯನ್ನು ಈ ಕಥೆ ಪರಿಶೀಲಿಸುವ ರೀತಿ ಗಮನ ಸೆಳೆಯುತ್ತದೆ. ಕಥೆಯ ಪಾತ್ರಗಳೊಡನೆ ಕತೆಗಾರನ ಪಾತ್ರವೂ ಪ್ರವೇಶ ಪಡೆದಿದೆ. ಇದು ಹಳೆಯ ತಂತ್ರವೇ ಆದರೂ ಕಥೆಯ ವಸ್ತುವನ್ನು ಹಲವು ಕೋನಗಳಿಂದ ನೋಡಲು ಈ ಕಥೆಯಲ್ಲಿ ಓದುಗರಿಗೆ ಸಹಾಯಕವಾಗಿದೆ.

‘ಆತ್ಮದ ಗಿಡುಗ’ ಸ್ತ್ರೀವಾದದ ಚಿಂತನೆಯನ್ನು ಕುರಿತು ಅಲಿಗರಿ ಥರದ ಕಥೆಯನ್ನು ಕಟ್ಟುವ ಪ್ರಯತ್ನವಾಗಿ ಕುತೂಹಲ ಹುಟ್ಟಿಸುತ್ತದೆ. ಪಾತ್ರಗಳು ಅಲ್ಲಲ್ಲಿ ಕನ್‌ಫ್ಯೂಸ್ ಆಗುತ್ತವೆ. ‘ಸತ್ಯ ಹೇಳೋಕೆ ಪಾತ್ರವಾದರೇನು, ನಿಜವ್ಯಕ್ತಿತ್ವ ಆದ್ರೆ ಏನು? ಅಲ್ಲಿ ಸೆಟ್‌ನಲ್ಲಿ ನೋಡಿದ್ರೆ ಆ ಡೈರೆಕ್ಟರ್ ಹೇಳಿಕೊಟ್ಟಂತೆ ಮಾಡ್ಬೇಕು; ನನ್ನ ಸ್ವಂತ ಮಾತುಗಳನ್ನ ಇಲ್ಲಾದ್ರೂ ಹುಡುಕೋಣ ಅಂತ ಇಲ್ಲಿಗೆ ಬಂದ್ರೆ ನೀವೂ ಆ ರೂಪಕನ ಹಾಗೇ ಮಾತಾಡ್ತಿದೀರಲ್ಲಾ!’ ಎಂದು ಟಿವಿ ಸೀರಿಯಲ್‌ನ ಕಾಲ್ಪನಿಕ ಪಾತ್ರವೊಂದು ಜೀವ ತಳೆದು ಹೇಳುವ ಮಾತು ಸಿದ್ಧಾಂತ ರೂಪದಲ್ಲಿರುವ ತಿಳಿವಳಿಕೆಯನ್ನು ಜನರ ಮನಸಿಗೆ ತಾಗುವ ಹಾಗೆ ಹೇಳಲು ತಕ್ಕ ಭಾಷೆ ಹುಡುಕಿಕೊಳ್ಳಲಾಗದ ಶಿಕ್ಷಿತರ ಮನಸ್ಥಿತಿ, ಸಾಮಾಜಿಕ ಮಾಧ್ಯಮಗಳ ಪ್ರಭಾವ, ಹೆಣ್ಣಿನ ಮೇಲೆ ನಡೆವ ದೈಹಿಕ, ಮಾನಸಿಕ ಹಿಂಸೆ ಹೀಗೆ ಹಲವು ಸಂಗತಿಗಳ ನಡುವೆ ತಕ್ಕ ಸಮತೋಲವನ್ನು ಕಂಡುಕೊಂಡಿದ್ದರೆ ಇನ್ನೂ ಒಳ್ಳೆಯ ಕಥೆಯಾಗಬಹುದಿತ್ತು ಅನಿಸಿತು.

‘ದತ್ತೂರಿ ಶೇಷನ ಧ್ವನಿ ಸಿದ್ಧಾಂತ’ ಕಥೆಯು ಅವಕಾಶ ಅರಸಿ ನಗರಕ್ಕೆ ಬರುವ ಹಳ್ಳಿಯ ಯುವಕರ ಪಾಡಿಗೆ ಒಂದು ರೂಪಕದ ಹಾಗಿದೆ. ಇಲ್ಲಿನ ಕತೆಗಾರ ಮತ್ತು ಕಂಠದಾನ ಕಲಾವಿದ ಇಬ್ಬರೂ ಒಂದೇ ದುಸ್ಥಿತಿಯಲ್ಲಿರುವವರು. ಕಥೆಯ ಹೆಸರಿನ ಭಾಗವಾಗಿರುವ ‘ಧ್ವನಿಸಿದ್ಧಾಂತ’ ಎಂಬ ನುಡಿ ಸಾಮಾಜಿಕ ವಾಸ್ತವಕ್ಕೂ ತಾತ್ವಿಕ ಚಿಂತನೆಗಳ ಅಮೂರ್ತ ಸ್ವಭಾವಕ್ಕೂ ಕನ್ನಡಿ ಹಿಡಿಯುವಂತಿದೆ. ಹೊಸ ತಂತ್ರಜ್ಞಾನ ಅವಕಾಶಗಳ ಬಾಗಿಲು ತೆರೆಯುತ್ತದೆ ನಿಜ, ಹಾಗೆಯೇ ಬಡ ಜನ ತಮ್ಮ ದೇಹದ ಮೂಲಕ, ಇರುವ ಬುದ್ಧಿಮತ್ತೆಯ ಮೂಲಕ ಹೊಟ್ಟೆ ತುಂಬಿಸಿಕೊಳ್ಳಲು ಹುಡುಕಿಕೊಂಡ ಕೆಲಸಗಳನ್ನೂ ಕದಿಯುತ್ತದೆ. ಶೇಷನಾಯ್ಕ ಕನಸುಗಳನ್ನು ಹೊತ್ತು ನಗರಕ್ಕೆ ಬಂದು ಜಾಹೀರಾತು ಕೂಗಿ ಹೇಳುವ ಕೆಲಸ ಗಿಟ್ಟಿಸಿ, ಡಬ್ಬಿಂಗ್ ಆರ್ಟಿಸ್ಟ್ ಆಗುವ ಕನಸು ಹೊತ್ತವನು. ಕಥೆಯ ನಿರೂಪಕ ಸೀರಿಯಲ್, ಸಿನಿಮಾಗಳಿಗೆ ಕಥೆ ಬರೆಯುವ ಆಸೆ ಹೊತ್ತವನು.

ಧ್ವನಿಮುದ್ರಿತ ರೆಡಿಮೇಡ್ ಘೋಷಣೆಗಳನ್ನು ಅಳವಡಿಸಿಕೊಂಡು ಆಟೋ ಚಾಲಕರೇ ಎರಡನ್ನೂ ನಿಭಾಯಿಸತೊಡಗುವ ತಂತ್ರಜ್ಞಾನ ಬರುತ್ತಲೇ ಇವನಂತಹ ಎಷ್ಟೋ ಜನ ‘ಉದ್ಘೋಷಕರು ಕಂಗಾಲಾಗಿದ್ದರು’ ಎಂಬ ವಿವರಣೆ, ಮತ್ತು ‘ಎಲ್ಲವನ್ನೂ ಹೇಳಿಕೊಳ್ಳಲೆಂದೇ ತಯಾರಾಗಿ ಬಂದವನಂತೆ, ಗಂಟಲಿನಿಂದ ಸಣ್ಣಸಣ್ಣ ಸ್ವರಗಳನ್ನು ಕಿತ್ತುಕಿತ್ತು ತೆಗೆದು ಮಾತುಗಳನ್ನು ಜೋಡಿಸಿಕೊಳ್ಳುವವನಂತೆ ಹೇಳತೊಡಗಿದ.’

‘ನಮಗೆ ಬೇಕಾಗಿರುವುದು ನಿಮ್ಮಂತವರ ಕಥೆಯಲ್ಲ, ರೋಚಕತೆ’ ಎಂಬ ಮಾತುಗಳು ಕಥೆಯೊಳಗೆ ಅಡಗಿರುವ ದುರಂತ ಓದುಗರ ಮನಸಿನಲ್ಲಿ ಮೊಳಗುವಂತೆ ಮಾಡುತ್ತವೆ.

‘ತಳತೇರು’ ಭ್ರಾಮಕತೆ ಮತ್ತು ವಾಸ್ತವತೆಗಳ ಗಡಿರೇಖೆಯ ಮೇಲೆ ನಡೆಯುವ ಕಥೆ. ಇದರ ಭಾಷೆ, ನಿರೂಪಣೆ ಎಲ್ಲವೂ ಮಿಕ್ಕ ಕಥೆಗಳಿಗಿಂತ ಬೇರೆಯಾಗಿ ತೋರುತ್ತವೆ. ಕಾವ್ಯದ ಹಾಗೆ ಕೆಲವು ಎಡೆಗಳಲ್ಲಿ ಅನಿಸಿದರೂ ಭಾಷೆ ರೂಢಿಗತವಾಗಿರುವ ಕಾರಣಕ್ಕೆ ಕನ್ನಡದೊಂದು ಬಹಳ ಒಳ್ಳೆಯ ಕಥೆ ಆಗಬಹುದಾಗಿದ್ದ ಅವಕಾಶ ಕಳೆದುಕೊಂಡಿದೆ ಅನಿಸಿತು.

‘ಅದೊಂದು ಬೃಹದಾಕಾರದ ತೇರು. ಅದಕ್ಕೆ ಸರಿಸುಮಾರು ನೂರೆಂಬತ್ತು ವರ್ಷಗಳಾದರೂ ಆಗಿರಬಹುದು ಎಂದು ಜನ ಹೇಳುತ್ತಾರೆ. ಅದರ ನಾಲ್ಕು ಚಕ್ರಗಳು ಹದಿನೆಂಟು ಅಡಿ ಎತ್ತರದವು. ಮಳೆ-ಬಿಸಿಲು ಬಂದಾಗ ಹಕ್ಕಿಗಳು, ದನ-ಕರುಗಳು ಅಷ್ಟೇಕೆ ಸುತ್ತಮುತ್ತಲಿನ ಭಿಕ್ಷುಕರು, ಆಕಸ್ಮಿಕವಾಗಿ ಊರಿಗೆ ಬಂದು ಕತ್ತಲಾದ ಮೇಲೆ ನೆಲೆ ಕಾಣದವರು ಇಂತಹವರೆಲ್ಲರೂ ತೇರಿನಡಿ ಆಶ್ರಯ ಪಡೆಯುತ್ತಿದ್ದರು. ಅಲ್ಲೇ ಗೋಣಿಚೀಲವನ್ನೋ, ಪ್ಲಾಸ್ಟಿಕ್ ಚಾಪೆ, ಹೊದಿಕೆಯನ್ನೋ ತಂದು ನೆಲೆ ಕಂಡುಕೊಳ್ಳುತ್ತಿದ್ದರು. ಮರದ ತೇರು ಮಳೆ, ಬಿಸಿಲಿಗೆ ನೆನೆಯದಿರಲೆಂದು, ಒಣಗದಿರಲೆಂದು ಬೃಹದಾಕಾರದ ಆ ತೇರಿಗೆ ತೆಂಗಿನ ಗರಿಗಳನ್ನು ತುದಿಯಿಂದ ಚಕ್ರದವರೆಗೂ ಮುಚ್ಚುತ್ತಿದ್ದರು. ಮರದ ತೇರಿನ ತಂಪು, ತೆಂಗಿನ ಗರಿಯ ತಂಪು ಎಲ್ಲವೂ ತೇರಿನಡಿ ಮಲಗಿ ನೆಮ್ಮದಿ ಬಯಸಿ ಬಂದವರಿಗೆ ನೆರಳಾಗಿದ್ದವು’- ಎಂಬ ವಿವರಣೆ  ಮತ್ತು ಮುಖ್ಯ ನಿರೂಪಕಿಯಾದ ಮಾಲಿಂಗಿಯ ನೋವಿನ ಕಥೆ, ಅವಳು ಸೇಡು ತೀರಿಸಿಕೊಂಡು ದೇಗುಲದ ತೇರನ್ನು ಸುಟ್ಟವರ, ತನಗೆ ತೊಂದರೆ ಮಾಡಿದವರ ಹೆಣಗಳನ್ನು  ಮುರುಕಲು ತೇರಿನಡಿಯಲ್ಲಿ ಬಚ್ಚಿಟ್ಟಿದ್ದನ್ನು ಕಥೆಗಾರನಿಗೆ ತೋರಿಸುವುದು ಇವೆಲ್ಲ ಕನಸಿನ ಹಾಗೋ ಅರೆ ಎಚ್ಚರದ ಅನುಭವದ ಹಾಗೋ ಅನಿಸುತ್ತದೆ. ಕಥೆಯ ನಿರೂಪಕ ಓದುತ್ತಿದ್ದ ಬುದ್ಧನ ಜಾತಕಕಥೆಗಳು ಮತ್ತು ಕಥೆಯ ಕೊನೆಯಲ್ಲಿ ಕಾಣುವ ‘ಮಣ್ಣಿನಲ್ಲಿ ಕೊರೆದ ಬುದ್ಧನ ವಿಗ್ರಹ’ ಎಂಬ ವಿವರ ಧರ್ಮ-ಶೋಷಣೆ-ಹೆಣ್ಣಿನ ಬದುಕು-ಸೇಡು-ಕ್ರೌರ್ಯ-ನ್ಯಾಯಗಳ ಪ್ರಶ್ನೆಗಳನ್ನೆಲ್ಲ ಒಟ್ಟಿಗೆ ಹಿಡಿಯಲು ಪ್ರಯತ್ನಿಸಿದಂತಿದೆ.

‘ಮರಕುಟಿಕ’ ಕಥೆ ಲೇಖಕ-ಓದುಗರ ಸಂಬಂಧದ ವ್ಯಾಖ್ಯಾನದಂತಿದೆ. ಕಥೆ ಕೇಳುವ, ಕೇಳಿದ ಕಥೆಗೆ ಸ್ಪಂದಿಸುವ ಜೀವವನ್ನು ಹುಡುಕುವ ಕಥೆಗಾರ, ಅಂತವನೊಬ್ಬ ಕೊನೆಗೂ ಸಿಕ್ಕನೆಂದು ಕಥೆ ಹೇಳಿ, ಪ್ರತಿಕ್ರಿಯೆಗೆ ಕಾಯುತ್ತಿದ್ದರೆ ಕೇಳುಗ ಕಿವುಡನೆಂಬ ತಿಳಿವಳಿಕೆ ಪಡೆಯುವ ಕಥೆ ಕನ್ನಡದ ಇಂದಿನ ಹೊಸ ಬರಹಗಾರರು ಎದುರಿಸುತ್ತಿರುವ ಸಮಸ್ಯೆಯ ರೂಪಕದಂತಿದೆ.

‘ಕುರಿಯಯ್ಯನ ಅಮಾಸ ಮಾದಯ್ಯನಾಗಿ ಬೆಳೆದು…’ ಸಾಹಿತ್ಯಾಸಕ್ತರು ಗಮನಿಸಬೇಕಾದ ಇನ್ನೊಂದು ಕಥೆ. ದೇವನೂರ ಮಹಾದೇವ ಚಿತ್ರಿಸಿದ ಅಮಾಸ ಬೆಳೆದು ಇವತ್ತಿನ ಬದುಕನ್ನು ಪಾಸಿಟಿವ್ ಆಗಿ ನೋಡುವ ಚಿತ್ರ ಇಲ್ಲಿದೆ. ಇದು ಈ ದಿನಮಾನಕ್ಕೆ ಅಗತ್ಯವಾದ ಕಥೆ. ಸಾಹಿತ್ಯ ಮತ್ತು ಬದುಕುಗಳ ಸಾತತ್ಯ ಮತ್ತು ಪಾಸಿಟಿವ್ ಬೆಳವಣಿಗೆಯ ಚಿತ್ರ ಇಲ್ಲಿದೆ. ಕುರಿದೊಡ್ಡಿಯ ಚಿತ್ರದ ಮೂಲಕ ಸಹಬಾಳುವೆಯ ಆಶಯವನ್ನು ಹೇಳುತ್ತದೆ. ಮಂಟೆಸ್ವಾಮಿ, ಯೇಸು, ಕುರಿದೊಡ್ಡಿಗಳ ಸಂಬಂಧ ಕಲ್ಪಿಸುತ್ತ ಹೊಸ ತಲೆಮಾರಿನ ಲೇಖಕರು ವ್ಯಕ್ತಿ, ಸಂಸ್ಕೃತಿ, ಸಹಬಾಳುವೆಯ ಕನಸನ್ನು ಜೀವಂತವಾಗಿರಿಸಲು ಹೆಣಗುತ್ತಿರುವ, ವಿಶ್ವಾಸ ಮತ್ತು ಧೈರ್ಯಗಳನ್ನು ಒಗ್ಗೂಡಿಸಿಕೊಂಡಿರುವ ಚಿತ್ರ ಮೂಡುತ್ತದೆ.

ಇದನ್ನು ಓದಿದ್ದೀರಾ?: ಕನಕ ವಿಶೇಷ | ಬೇಡನಾಗಿರುವ ಕನಕದಾಸನನ್ನು ಕುರುಬನನ್ನಾಗಿಸಲಾಗಿದೆ; ಏನಿದು ಗೊಂದಲ?

‘ಕುರಿಗಳ ಬಗ್ಗೆ, ಅವುಗಳ ಒಡನಾಟದ ಬಗ್ಗೆ ಆತ ಹೇಳುವುದು ಮುಗಿಯುವುದೇ ಇಲ್ಲವೇನೋ ಎಂದು ಅನ್ನಿಸತೊಡಗಿತ್ತು. ದಿನಬೆಳಗಾಗಿ ಅವುಗಳ ಆರೈಕೆಯಲ್ಲಿಯೇ, ಅವುಗಳ ಬೆಳವಣಿಗೆಯಲ್ಲಿಯೇ, ಅವುಗಳ ಕಣ್ಣುಗಳ ಬೆಳಕಲ್ಲಿಯೇ ತನ್ನ ಬದುಕಿನ ಅಮಾವಾಸ್ಯೆಯನ್ನು ಕಳೆದುಕೊಂಡಿರುವ ಮಾದಯ್ಯ ನನ್ನ ಕಣ್ಣಿಗೆ ಅಂದು ದೇವನೂರ ಮಹಾದೇವ ಅವರು ಸೃಷ್ಟಿಸಿದ ಹನ್ನೆರಡು ವರ್ಷದ ಬಾಲಕ ಅಮಾಸ ಇಂದು ದೊಡ್ಡವನಾಗಿ, ಅರವತ್ತೈದು ವರ್ಷ ವಯಸ್ಸಿನ ‘ಅಮಾಸ ಮಾದಯ್ಯ’ನಾಗಿ ಎದುರಿಗೆ ನಿಂತಿದ್ದಾನೇನೋ ಎಂಬಂತೆ ಕಂಡ. ಕುರಿಯಯ್ಯನ ‘ಕಿದ್ದಂಡೆ’ಯಲ್ಲಿ, ‘ಕಣ್ಣ ಮಟಾರ’ದಲ್ಲಿ ಬೆಳೆದ ದೇವನೂರರ ಅಮಾಸ ಕುರಿಯಯ್ಯನನ್ನೂ ಮೀರಿಸುವವನಂತೆ ಇಂದು ಮಾದಯ್ಯ ಬೆಳೆದು ನಿಂತಿದ್ದಾನೆ. ಅವನು ಇನ್ನು ಕುರಿಯಯ್ಯನಂತೆ ಕಣ್ಣು ಮಂಜಾಗಿ ಒಂದೊಂದೇ ಅಂದಾಜಿನಲ್ಲಿ ಕುರಿಗಳನ್ನು ಲೆಕ್ಕ ಹಾಕುವುದಿಲ್ಲ! ನಮ್ಮೆಲ್ಲರೊಳಗೆ ಬೆಳೆಯುತ್ತಾ ಬೆಳೆಯುತ್ತಾ ಸರಿಯಾಗಿ ಲೆಕ್ಕ ಹಾಕುತ್ತಾನೆ, ಲೆಕ್ಕ ಚುಕ್ತಾ ಮಾಡುತ್ತಾನೆ.’

ಕೊನೆಯದಾಗಿ ಈ ಕಥೆಗಳ ಭಾಷೆಯ ಬಗ್ಗೆ ಕೆಲವು ಮಾತು ಹೇಳಲೇಬೇಕು. ಜಾಡಿಗೆ ಬಿದ್ದ ವಾಡಿಕೆಯ ಗದ್ಯದ ಬಳಕೆ ಈ ಕಥೆಗಳ ಕೊರತೆ ಅನಿಸಿತು. ಮುಖ್ಯವಾಗಿ ಒಂದೇ ಬಗೆಯ ಕ್ರಿಯಾಪದಗಳ ಮೂಲಕ ವಾಕ್ಯವನ್ನು ಕೊನೆಗೊಳಿಸುವುದು (‘ತೊಡಗು’ ಎಂಬ ಕ್ರಿಯಾಪದದ ಅತಿಯಾದ ಬಳಕೆ ಒಂದು ಉದಾಹರಣೆ), ವಾಕ್ಯಗಳ ಸಮತೋಲ, ಎಲ್ಲಕ್ಕಿಂತ ಮಿಗಿಲಾಗಿ ಪರಿಚಿತವಾದ ಪದಗಳನ್ನು ಬಳಸಿ ಪರಿಚಿತವಾದ ವಾಕ್ಯರಚನೆಯನ್ನು ಬಳಸುವ ರೀತಿ ಇಂದಿನ ಬಹಳಷ್ಟು ಕಥೆಗಾರರಲ್ಲಿ ಕಾಣುವ ಮಿತಿ. ಅದರತ್ತ ಗಮನ ನೀಡಿ ಭಾಷೆಯಲ್ಲಿ ಹೊಸತನಕ್ಕೆ ಹಂಬಲಿಸಿ ತಂದರೆ ಮಂಜುನಾಥ್‌ಲತಾ ಕನ್ನಡದ ಉತ್ತಮ ಕಥೆಗಾರರಲ್ಲೊಬ್ಬರಾಗುತ್ತಾರೆ ಅನಿಸಿತು.

-ಓ.ಎಲ್. ನಾಗಭೂಷಣ ಸ್ವಾಮಿ (ಮುನ್ನುಡಿಯಿಂದ), ಸಂಗಾತ ಪುಸ್ತಕ, ಸಂಪರ್ಕ ಸಂಖ್ಯೆ: 9341757653

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X