ಡಾ. ತಿಪ್ಪೇಸ್ವಾಮಿಯವರು ಅನ್ಯ ಜಾತಿಯವರಿಂದ ಪಡೆದ ಪ್ರೀತಿ ನಿರ್ಲಕ್ಷ್ಯ ಅವಮಾನ ಇತ್ಯಾದಿಯ ದಾಖಲೆಯೇ ಒಂದು ಬೃಹತ್ ಕೃತಿಗೆ ವಸ್ತುವಾಗಬಲ್ಲದು ಎಂದಿದ್ದ ಲಂಕೇಶರ ಆಶಯದಂತೆಯೇ 'ಮುಟ್ಟಿಸಿಕೊಂಡವರು' ಮೈದಾಳಿ ನಿಂತಿದೆ. ಕೋಟಿಗಾನಹಳ್ಳಿ ರಾಮಯ್ಯನವರ ಕಣ್ಣಿಗೆ ಕಂಡು ಕರುಳಿಗೆ ಇಳಿದ ತಿಪ್ಪೇಸ್ವಾಮಿಯವರ ಚಿತ್ತ ಮತ್ತು ಚಿತ್ರ ಇಲ್ಲಿದೆ...
ನನಗೆ ಡಾ.ತಿಪ್ಪೇಸ್ವಾಮಿಯವರ ವೈಯಕ್ತಿಕ ಪರಿಚಯ ಇರಲಿಲ್ಲ. ಆದರೆ ಅವರನ್ನು ಎರಡು ಬಾರಿ ಗುಂಪಿನಲ್ಲಿ ಒಬ್ಬನಾಗಿ ಕಾಣುವ ಅವಕಾಶ ಸಿಕ್ಕಿತ್ತು. ಮೊದಲ ಬಾರಿ ದಾವಣಗೆರೆಯ ಅವರದೇ ಹಾಸ್ಟೆಲಿನಲ್ಲಿ ನಡೆದ ‘ದಲಿತ ಸಂಘರ್ಷ ಸಮಿತಿ’ಯ ಶಿಬಿರದಲ್ಲಿ ಅವರನ್ನು ಕಂಡಿದ್ದು. ನನ್ನ ಕಣ್ಣಿಗೆ ಈಗ ಅವರ ನಿಖರ ರೂಪ ಕಲ್ಪಿಸಿಕೊಳ್ಳುವುದೂ ಆಗುತ್ತಿಲ್ಲ. ಆದರೆ ಮನಸಿಗೆ ಅವರು ಕುಳ್ಳಗಿದ್ದರು. ಕನ್ನಡಕ ಹಾಕಿದ್ದರು. ಯಾವುದೋ ಆಲದ ಬಿಳಲೋ ಬೊಡ್ಡೆಯಿಂದಲೋ ಮಾಡಿದಂತಿದ್ದರು ಅನ್ನೋ ಹಾಗೆ ತೋರುತ್ತೆ. ಅಥವಾ ಇದೂ ಕೂಡ ನನ್ನ ಕಣ್ಣು ನನಗೆ ಮೋಸ ಮಾಡಿ ಹಿಡಿದಿಟ್ಟುಕೊಂಡಿರುವ ಚಿತ್ರವಿದ್ದರೂ ಇರಬಹುದು. ಆದರೆ ಅವರು ಆ ಶಿಬಿರದಲ್ಲಿ ಮಾತಾಡಿದ್ದು ನೆನಪಿದೆ.
ಅವರು ಆ ಶಿಬಿರದಲ್ಲಿ ತಮ್ಮ ವಿದ್ಯಾಭ್ಯಾಸ, ಹಾಸ್ಟೆಲಿನ ಅನುಭವ ಹೇಳಿದರು. ಬಡವ ಅನ್ನುವ ಕಾರಣಕ್ಕಾಗಿ ಮೇಲು ಜಾತಿಯವರ ಹಾಸ್ಟಲಿನಲ್ಲಿ ಉಚಿತ ಊಟದ ಅವಕಾಶ ದೊರೆಯಿತಂತೆ. ಅವರು ಊಟಕ್ಕೆ ಹೋಗುವಾಗ ಲೋಟಕ್ಕೋ ತಟ್ಟೆಗೋ ಬದಲು ಕಾಸುಕೊಟ್ಟು ಕೊಂಡುಕೊಳ್ಳಲು ಆಗದೆ ಮಣ್ಣಿನ ಕುಡಿಕೆ ಒಯ್ಯುತ್ತಿದ್ದರಂತೆ. ಆದರೆ ಅಲ್ಲಿನ ಅಡುಗೆ ಆಳು ಪ್ರತಿ ಸಾರಿ ಆ ಕುಡಿಕೆಯನ್ನು ಬೇಕೆಂತಲೇ ಒಡೆದು ಹಾಕುತ್ತಿದ್ದನಂತೆ. ಯಾಕೆ? ಏನು? ಎಂದು ಕೇಳಲಿಕ್ಕಾಗದ ಇವರು ನಿತ್ಯ ಅಳುವನ್ನು ಒಳಗೊಳಗೆ ತಡೆದುಕೊಳ್ಳುತ್ತಿದ್ದರಂತೆ. ಕೊನೆಗೆ ತಡೆಯಲಾಗದೆ ಒಂದು ಹೊಸ ಅಲ್ಯುಮಿನಿಯಂ ಲೋಟವನ್ನು ಕೊಂಡು ಕೊಂಡು ಈ ಘಟಸ್ಫೋಟದಿಂದ ತಪ್ಪಿಸಿಕೊಂಡರಂತೆ.
ಇದನ್ನು ಓದಿದ್ದೀರಾ?: ಜನರ ಕವಿ ಲೋರ್ಕಾನ ನಾಲ್ಕು ನಾಟಕಗಳು: ಎಸ್.ಗಂಗಾಧರಯ್ಯ ಬರೆಹ
ಆನಂತರ ಆ ಆಳು ಒಬ್ಬ ದಲಿತನೆಂಬುದು ತಿಳಿಯಿತಂತೆ. ತನ್ನ ಕುಲದವನೊಬ್ಬ ಮಿಕ್ಕೆಲ್ಲರಿಗಿಂತ ದಯನೀಯವಾಗಿ ಕಾಣುವುದನ್ನು ಸಹಿಸದ ಅವನು ಅದನ್ನು ಒಡೆದು ಹಾಕುತ್ತಿದ್ದಿರಬಹುದು ಎಂದು ಎಷ್ಟೋ ವರ್ಷಗಳ ನಂತರ ಡಾಕ್ಟ್ರು ಇನ್ನೂ ಅದಕ್ಕೆ ಸಮಂಜಸ ಕಾರಣ ಹುಡುಕುತ್ತಿದ್ದವರಂತೆ ನುಡಿದರು. ಎಷ್ಟೋ ವರ್ಷಗಳ ನಂತರವೂ ಅವರೆದೆಯೊಳಗೆ ಹಾಗೇ ಉಳಿದಿದ್ದ ಆ ಕುಡಿಕೆಯ ಮಣ್ಣಿನ ಚೂರುಗಳು ನಮ್ಮೊಂದಿಗಿದ್ದ ದೇವನೂರ ಮಹಾದೇವರ ಕಣ್ಣೊಳಗೆ ಮುಳುಗಿ ಅದು ಪಂಚಮ ಪತ್ರಿಕೆಯ ಅವರ ‘ಕಿಡಿಗೇಡಿ ಕಣ್ಣೋಟ ಕಾಲಂ’ನಲ್ಲಿ ಎದ್ದಿತು.
ಇನ್ನು ಎರಡನೆಯ ಬಾರಿ ಅವರನ್ನು ಕಂಡಿದ್ದು… ಬೆಂಡಿಗೇರಿ ಪ್ರಕರಣವನ್ನು ಸಾವಿರಾರು ಬರಿಗಾಲುಗಳು ಬೆಂಗಳೂರಿನ ಬೆಂದ ಡಾಂಬರು ರಸ್ತೆಗಳಲ್ಲಿ ನಡೆದು ಪ್ರತಿಭಟಿಸಿದ ದಿನ. ಅವತ್ತು ಕಬ್ಬನ್ ಪಾರ್ಕಿನಲ್ಲಿ ಬಹಿರಂಗ ಸಭೆ ಮುಗಿಸಿ ಒಂದು ತಂಡ ವಿಧಾನಸೌಧದ ಜನತಾ ಪಕ್ಷದ ಧುರೀಣರನ್ನು ಕಂಡು ಪ್ರತಿಭಟನೆ ಮಾಡಿ ಬರಲು ಹೊರಟಿತು. ಅದೃಷ್ಟವಶಾತ್ ಆ ತಂಡದಲ್ಲಿ ನಾನೂ ಒಬ್ಬನಾಗಿದ್ದೆ. ಚಂದ್ರಪ್ರಸಾದ್ ತ್ಯಾಗಿ, ಎನ್. ವೆಂಕಟೇಶ್ ಇದ್ದರು. ಪ್ರೊ. ಬಿ.ಕೆ. ಇದ್ದರೋ ಇಲ್ಲವೋ ನೆನಪಿಲ್ಲ. ಹೀಗೆ ಹೋದ ತಂಡ ಬೆಂಡಿಗೇರಿ ಸತ್ಯಶೋಧಕ ಸಮಿತಿಯ ನೇತೃತ್ವ ವಹಿಸಿದ್ದ ಡಾ. ತಿಪ್ಪೇಸ್ವಾಮಿಯವರನ್ನು ಕಂಡಿತು. ನಮ್ಮೆಲ್ಲರ ಬುಸುಬುಸು ಬೆಂಕಿಯನ್ನು ಕಣ್ಣಲ್ಲೇ ಕಂಡ ಆ ಕಣ್ಣಿನ ಡಾಕ್ಟ್ರು ನಮ್ಮ ಕಣ್ಣೊಳಗಿಟ್ಟುಕೊಂಡಿದ್ದ ತಮ್ಮ ಅನುಭವದ ಚಿತ್ರವೊಂದನ್ನು ತೆಗೆದು ಎದುರುಗಿಟ್ಟರು.
ಆ ಚಿತ್ರ ಹೀಗಿದೆ… ಒಮ್ಮೆ ಒಬ್ಬ ಲಿಂಗ ಮತಸ್ಥ ಕಣ್ಣಿನ ಆಪರೇಷನ್‌ಗಾಗಿ ಅವರ ಬಳಿ ಬಂದನಂತೆ ಇವರು ಕಣ್ಣಿಗೆ ಹೊಲಿಗೆ ಆಪರೇಷನ್ ಮಾಡಿ ಯಾವ ಕಾರಣಕ್ಕೂ ನೀರು ಸೋಕಿಸಬಾರದೆಂದು ಎಚ್ಚರಿಸಿ ಕಳಿಸಿಕೊಟ್ಟರು. ಆದರೆ ಆಪರೇಷನ್ ಮಾಡಿದ್ದು ಒಬ್ಬ ಮಾದಿಗನೆಂಬುದನ್ನು ತಿಳಿದು ಮನೆಯವರು ಮತಸ್ಥರು ಗಂಗಾಸ್ನಾನದ ಮೂಲಕ ಅವನನ್ನು ಶುದ್ಧೀಕರಿಸಿದರು. ಅದಾದ ನಂತರವೂ ಎಲ್ಲವೂ ಶುದ್ಧವಾಗಿ ಕಣ್ಣೊಂದು ಮಾತ್ರ ಕೀವಾಯಿತು. ಹೆದರಿದ ಆತ ಕಂಡಕಂಡ ಖ್ಯಾತ ಮೇಲುಜಾತಿಯ ತಜ್ಞರ ಬಳಿಗೆ ಹೋಗಿ ಕಣ್ಣು ಉಳಿಸುವಂತೆ ಗೋಳಾಡಿದ. ಆಗ ಅವರು ಅವನಿಂದ ವಿಷಯ ತಿಳಿದು ”ಇದು ಗುರು ಡಾ.ತಿಪ್ಪೇಸ್ವಾಮಿಯವರು ಮುಟ್ಟಿದ ಕಣ್ಣು ಈಗ ಇದಿರುವ ಸ್ಥಿತಿ ನೋಡಿದರೆ ಅವರು ಮಾತ್ರ ಇದನ್ನು ಉಳಿಸಬಲ್ಲರು ನಾವು ಅವರ ಶಿಷ್ಯರು ನಮ್ಮಿಂದಾಗದು… ಅಲ್ಲೇ ಹೋಗು” (ಒತ್ತು ನನ್ನದು) ಎಂದು ತಿಳಿಸಿದರಂತೆ.
ಕೊನೆಗೆ ಆತ ವಿಧಿಯಿಲ್ಲದೆ ನನ್ನ ಕಣ್ಣು ಉಳಿಸಿ ಕೊಡಿ ಎಂದು ತಿರುಗಾ ಇವರ ಬಳಿಯೇ ಬಂದನಂತೆ ಇದು ಆ ಚಿತ್ರದ ಕಥೆ. ಇಷ್ಟು ಹೇಳಿ ಡಾಕ್ಟ್ರು ‘ನೋಡ್ರಪಾ ತಮ್ಮ ಕಣ್ಣನ್ನ ತಮ್ಮ ಕೈಯಿಂದಲೇ ಚುಚ್ಚಿ ಹಾಳುಮಾಡಿಕೊಳ್ಳೋ ಕೈಗಳು ಇನ್ನೊಬ್ಬನಿಗೆ ಮಲ ತಿನ್ನಿಸುವುದಕ್ಕೆ ಹಿಂದು ಮುಂದು ನೋಡ್ತಾವಾ?’ ಅಂದರು. ಕೆಲವರಿಗೆ ಜನತಾ ಪಕ್ಷದ ಅಧ್ಯಕ್ಷರಾಗಿಯೂ ಏನೂ ಮಾಡಲು ಕೈಲಾಗದಿದ್ದರಿಂದ ಈ ಮಾತು ಅನ್ನಿಸಿ ಹೊರಗೆ ಬಂದು ಗೊಣಗಾಡಿದರು.
ಇದನ್ನು ಓದಿದ್ದೀರಾ?: ತಲ್ಲೂರರ ‘ಗಾದಿMAY’ ಕೃತಿ ಕುರಿತು ರಹಮತ್ ತರೀಕೆರೆ ಏನು ಹೇಳಿದ್ದಾರೆ? ಇಲ್ಲಿದೆ ಓದಿ…
ಆದರೆ ಯಾಕೋ ಡಾಕ್ಟ್ರ ಈ ಕಥೆ ನನ್ನ ಕಣ್ಣಿಗಿಳಿಯಿತು. ಗ್ರಹಿಸಿ ಅಲ್ಲಿಂದ ತಂಡ ಪತ್ರಿಕಾ ಸಂಪಾದಕರನ್ನು, ವರದಿಗಾರರನ್ನು ಕಂಡು ಪ್ರಕರಣವನ್ನು ಸೂಕ್ಷ್ಮವಾಗಿ ವಿಶೇಷ ಕಾಳಜಿಯಿಂದ ಗಮನಿಸುವಂತೆ ಮನವರಿಕೆ ಮಾಡಿಕೊಡಲು ತೆರಳಿತು. ಹೀಗೆ ಕಾಣ್ತಾ ಕಾಣ್ತಾ ಲಂಕೇಶ್ ಮೇಷ್ಟ್ರನ್ನೂ ಕಂಡಿತು. ಅಷ್ಟರಲ್ಲೇ ಯಾರಿಗಾದರೂ ಈ ಕಣ್ಣಿನ ಕಥೆ ಹೇಳಿ ನನ್ನ ಕಣ್ಣಿಂದ ಅದನ್ನು ದಾಟಿಸದೆ ಬೇರೆ ದಾರಿಯೇ ಇಲ್ಲದಂತಾಗಿದ್ದ ನಾನು, ಅವರಿಗೆ ಡಾಕ್ಟ್ರು ಹೇಳಿದ ಕಣ್ಣಿನ ಕಥೆ ಹೇಳಿದೆ. ಅದು ಅವರ ಕಣ್ಣೊಳಗೆ ‘ಮುಟ್ಟಿಸಿಕೊಂಡವನು’ ಕಥೆಯಾಗಿ ಬೆಳೆಯಿತು ಅನ್ನಿಸುತ್ತೆ…
ಇವತ್ತಿನ ದಲಿತ ಮನಸ್ಸಿನ ತಲ್ಲಣ, ತಳಮಳ ನೋಡಿದರೆ… ಒಡೆದ ಕುಡಿಕೆಯ ಚೂರುಗಳನ್ನು ಎಷ್ಟೋ ವರ್ಷ ಎದೆಯಲ್ಲಿಟ್ಟುಕೊಂಡೇ ಇದ್ದ ಡಾಕ್ಟ್ರಂಥವರು ಈ ಎಡ-ಬಲಗಳ ಮೂಲಕ ಎರಡೂ ಕಣ್ಣು ಕಳೆದುಕೊಳ್ಳಲು ತಯಾರಾಗಿರುವ ನಮ್ಮಂಥ ನತದೃಷ್ಟ ಅಸ್ಪೃಶ್ಯರ ಕಣ್ಣುಗಳಿಗೂ ಚಿಕಿತ್ಸೆ ನೀಡಬಲ್ಲವರಾಗಿದ್ದರೇನೋ…
