ಕಥನಶಕ್ತಿ ಇರುವ ಲೇಖಕರು ಯಾವುದನ್ನು ಬರೆದರೂ ರಸವತ್ತಾಗಿ ಬರೆಯಬಲ್ಲರು ಎಂಬುದಕ್ಕೆ ಇಲ್ಲಿನ ಪೆರಿಯಾರ್ ಕುರಿತ ಬರೆಹವೇ ಸಾಕ್ಷಿ. ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿಯವರ ಹೊಸ ಪುಸ್ತಕ 'ನಾಡವರ್ಗಳ್' ಕೃತಿಯಿಂದ ಆಯ್ದ ಪೆರಿಯಾರ್ ಕುರಿತ ಲೇಖನ, ಈದಿನ ಓದುಗರಿಗಾಗಿ...
ತಮಿಳುಕುಲ ಪೆರಿಯಾರ್ ಅವರನ್ನು ‘ತಂದೈ ಪರಿಯಾರ್’ ಎಂದು ಕರೆಯುತ್ತದೆ. ಅವರ ಮಾದರಿಯ ವಿಚಾರವಾದವನ್ನು ಒಪ್ಪುವ ಹಾಗೂ ಅವರ ಅಭಿಮಾನಿಗಳ ಕಣ್ಣಲ್ಲಿ ಅವರೊಬ್ಬ ಪ್ರವಾದಿ. ನಾಸ್ತಿಕಾವಧೂತ, ತಮ್ಮ ಬಿಡುಗಡೆಯ ಹರಿಕಾರ, ಇಡೀ ತಮಿಳುನಾಡಿನ ವೈದಿಕೇತರ ಜನಸಮುದಾಯ ಒಂದಲ್ಲ ಒಂದು ರೀತಿಯಲ್ಲಿ ಈ ಪ್ರವಾದಿಯ ಪ್ರಭಾವಕ್ಕೆ ಒಳಗಾಗಿರುವುದು ಸತ್ಯ. ದೈವ, ಧರ್ಮ, ಆಚಾರವಿಚಾರಗಳನ್ನು ಅಲ್ಪಸ್ವಲ್ಪ ಮಟ್ಟಿಗೆ ಅಪ್ಪಿಕೊಂಡಿರುವಂಥವರೂ ಈ ಪ್ರವಾದಿ ಬೋಧಿಸಿದ ಇತರ ಸಾಮಾಜಿಕ ಸುಧಾರಣೆಗಳನ್ನು ನಂಬಿ ಪಾಲಿಸುತ್ತಾರೆ.
ತಮಿಳುನಾಡಿನ ಜೀವನಾಡಿಯನ್ನು ಚೆನ್ನಾಗಿ ಬಲ್ಲವರಾಗಿದ್ದ ಜನಪ್ರಿಯ ನಾಯಕ ಅಣ್ಣಾದೊರೈ- ಅವರನ್ನು ತಮಿಳರ್ ಅರಿಙ್ಙರ್ ಅಣ್ಣಾ (ಜ್ಞಾನಿ ಅಣ್ಣಾ) ಎನ್ನುತ್ತಾರೆ. ಪೆರಿಯಾರ್ ಬಗ್ಗೆ ಹೀಗೆ ಹೇಳುತ್ತಾರೆ: ”ಇತರ ದೇಶಗಳ ಕ್ರಾಂತಿಕಾರಿಗಳು, ಸಮಾಜ ಸುಧಾರಕರು ಶತಮಾನಗಳನ್ನು ಸವೆಸಿ ಪಡೆದಂಥ ಯಶಸ್ಸನ್ನು ಪೆರಿಯಾರ್ ಕೇವಲ ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಸಾಧಿಸಿದರು. ನೂರಿನ್ನೂರು ವರ್ಷಗಳ ಸಾಧನೆಯನ್ನು ಕೇವಲ ಇಪ್ಪತ್ತು ಮೂವತ್ತು ವರ್ಷಗಳಿಗೆ ಸಂಕುಚನಗೊಳಿಸಿ ಅದರ ಎಲ್ಲ ಫಲಗಳನ್ನು ನಮ್ಮ ಸಮಾಜಕ್ಕೆ ಧಾರೆಯೆರೆದಿದ್ದಾರೆ. ತಮ್ಮೆಲ್ಲ ಸಮಯ ಮತ್ತು ಶಕ್ತಿಯನ್ನು ಜನಸಾಮಾನ್ಯರಲ್ಲಿ ಆತ್ಮಗೌರವವನ್ನು ಮೂಡಿಸಲು ಹಾಗೂ ಸಾಮಾಜಿಕ ಅನಿಷ್ಟಗಳನ್ನು ತೊಡೆಯಲು ಉಗ್ರವಾಗಿ ಹೋರಾಡುವುದಕ್ಕಾಗಿ ಮುಡುಪಾಗಿಟ್ಟರು… ಅವರ ಪ್ರಭಾವ ನಮ್ಮ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಆಳವಾಗಿ ಬೇರೂರಿರುವುದರಿಂದ ನಾವು ನೆಮ್ಮದಿಯಿಂದಿರಬಹುದು”.
ಇಂಥ ನೆಮ್ಮದಿಯನ್ನು, ಭರವಸೆಯನ್ನು ಮೂಡಿಸಿದ ಪೆರಿಯಾರರನ್ನು ಕಂಡರೆ, ಇದೇ ಸಮಾಜದ ಮತ್ತೊಂದು ವರ್ಗಕ್ಕೆ ಎಲ್ಲಿಲ್ಲದ ಭಯ ಮತ್ತು ನಮ್ಮ ಪಾಡಿಗೆ ನಾವಿದ್ದುಬಿಡೋಣ ಎನ್ನುವ ಭಾವನೆ. ಆ ವರ್ಗವೆ ಬ್ರಾಹ್ಮಣ ಸಮುದಾಯ, ಬ್ರಾಹ್ಮಣರಿಗೆ ಪೆರಿಯಾರ್ ಓರ್ವ ರಾಕ್ಷಸ, ಉಗ್ರ ಬ್ರಾಹ್ಮಣ ವಿರೋಧಿ, ಬ್ರಾಹ್ಮಣೇತರರನ್ನು ಒಟ್ಟು ಮಾಡಿ ಬ್ರಾಹ್ಮಣರ ವಿರುದ್ಧ ಹಲ್ಲೆಗಿಳಿಯುವ ಗೂಂಡಾ ಎಂದು ಒಳಗೊಳಗೆ ಜರಿಯತೊಡಗಿದರು. ಬಹಿರಂಗವಾಗಿ ದೊಡ್ಡ ದನಿಯೆತ್ತಲಾರದೆ ತಮ್ಮ ಸಣ್ಣ ಪುಟ್ಟ ಪ್ರತಿಭಟನೆಗಳಲ್ಲಿ ಸಮಾಧಾನ ಕಂಡುಕೊಳ್ಳತೊಡಗಿದರು. ಇವರ ಪ್ರತಿಭಟನೆಯನ್ನು ಪೆರಿಯಾರ್ ತಮ್ಮ ಅಂತಿಮ ದಿನಗಳವರೆಗೆ ಎದುರಿಸುತ್ತಲೇ ಇದ್ದರು.
ಇದನ್ನು ಓದಿದ್ದೀರಾ?: ಬಾಬ್ರಿ ಮಸೀದಿ ಧ್ವಂಸಕ್ಕೆ 32 ವರ್ಷ: ಹಣವಿಲ್ಲದೆ ಸೊರಗುತ್ತಿದೆ ಹೊಸ ಮಸೀದಿ ಯೋಜನೆ
ಪೆರಿಯಾರ್ ಹುಟ್ಟುಹಾಕಿದ ಸ್ವಮರ್ಯಾದಾ ಚಳವಳಿ ಉಗ್ರಸ್ವರೂಪ ತಳೆದದ್ದು ನಿಜ. ಅದಕ್ಕೆ ಪೆರಿಯಾರರೇ ಎಷ್ಟರಮಟ್ಟಿಗೆ ಕಾರಣವೋ ಅಷ್ಟೆ ಸಾವಿರಾರು ವರ್ಷಗಳ ವರ್ಣಾಶ್ರಮ ವ್ಯವಸ್ಥೆಯೂ ಕಾರಣವೆಂದು ಹೇಳಬೇಕು. ಈ ವರ್ಣಾಶ್ರಮ ಧರ್ಮ, ಜಾತಿ ವ್ಯವಸ್ಥೆಯೆಂಬ ಶೋಷಣೆಯ ಅಶ್ವಕ್ಕೆ ಪೆರಿಯಾರೆಂಬ ಕಡಿವಾಣದ ಅಗತ್ಯ ತಮಿಳುನಾಡಿಗಂತೂ ಜರೂರಾಗಿ ಬೇಕಾಗಿತ್ತು. ಸುಧಾರಣೆಯ ಚಳವಳಿಗಳು ದೀರ್ಘಾವಧಿಯ ಕಾಲ ತೆಗೆದುಕೊಳ್ಳುತ್ತವೆ. ಅಣ್ಣಾದೊರೈಯವರ ಮಾತುಗಳನ್ನು ಗಮನಿಸಿದಾಗ ಪೆರಿಯಾರ್ ತೆಗೆದುಕೊಂಡ ಅಲ್ಪಾವಧಿಯ ಕಾಲಘಟ್ಟದಲ್ಲಿ ಹಲವು ಏರುಪೇರುಗಳು, ಹಿಂಸೆ, ಪ್ರತಿಭಟನೆಗಳು ಉಗ್ರ ಸ್ವರೂಪ ಪಡೆದುಬಿಟ್ಟಿವೆ. ಬ್ರಾಹ್ಮಣರ ವಿರುದ್ಧ ಹಿಂಸೆಗೆ ಪ್ರಚೋದಿಸಿದರೆಂಬ ಆಪಾದನೆಯ ಮೇಲೆ ಪೆರಿಯಾರ್ ಅವರಿಗೆ ಆರು ತಿಂಗಳ ಜೈಲುಶಿಕ್ಷೆಯಾಯಿತು. ಆ ಸಂದರ್ಭದಲ್ಲಿ 1958ರ ಜನವರಿ ತಿಂಗಳಲ್ಲಿ ರಾಮಮನೋಹರ ಲೋಹಿಯಾ ಅವರು ಮದರಾಸಿಗೆ ಬಂದು ಪೆರಿಯಾರರನ್ನು ಭೆಟ್ಟಿಯಾಗುತ್ತಾರೆ. ಆಗ ಪೆರಿಯಾರರಿಗೆ ಎಂಭತ್ತರ ಗಡಿಮುಟ್ಟುವ ವಯಸ್ಸು. ”ನಿಮ್ಮ ವಯಸ್ಸಿನ ವ್ಯಕ್ತಿ ಜೈಲಿನಲ್ಲಿರಕೂಡದು” ಎನ್ನುತ್ತಾರೆ ಲೋಹಿಯಾ, “ನಾನು ಹಿಂಸೆಯನ್ನು ಪ್ರಚೋದಿಸುವ ವ್ಯಕ್ತಿಯಲ್ಲ. ಶಾಂತರೀತಿಯಲ್ಲಿ ಬ್ರಾಹ್ಮಣತ್ವವನ್ನು ನಿರ್ಮೂಲನಗೊಳಿಸದಿದ್ದಲ್ಲಿ ಜನ ಹಿಂಸೆಗಿಳಿದರೆ ಆಶ್ಚರ್ಯ ಪಡಬೇಕಿಲ್ಲವೆಂಬ ಮಾತನ್ನಷ್ಟೆ ನಾನು ಹೇಳಿದ್ದು…” ಎನ್ನುತ್ತಾರೆ ಪೆರಿಯಾರ್.

ಈ ಸಂದರ್ಭದಲ್ಲಿ ಪೆರಿಯಾರ್ ಕೈಗೊಂಡಿರುವ ಜಾತಿಪದ್ಧತಿಯ ನಿರ್ಮೂಲನ ಆಂದೋಲನವನ್ನು ಮೆಚ್ಚುವ ಲೋಹಿಯಾ ಇದು ವ್ಯಕ್ತಿಗತವಾಗಿ ಬ್ರಾಹ್ಮಣರ ವಿರುದ್ಧ ಇರಬಾರದೆಂದು ತಿಳಿಸುತ್ತಾರೆ. ಪೆರಿಯಾರ್, ಇದು ಮದ್ರಾಸಿನ ಬ್ರಾಹ್ಮಣರ ಕೈಯಲ್ಲಿರುವ ಪತ್ರಿಕೋದ್ಯಮ ತನ್ನ ಮೇಲೆ ಮಾಡುತ್ತಿರುವ ತೇಜೋವಧೆ ಎಂಬುದನ್ನು ಲೋಹಿಯಾರಿಗೆ ಮನವರಿಕೆ ಮಾಡಿಕೊಡುತ್ತಾರೆ. ಇದೇ ಸಂದರ್ಭದಲ್ಲಿ ಲೋಹಿಯಾ ಪೆರಿಯಾರರ ಗಾಂಧಿ ವಿರೋಧಿ ನಿಲುವು, ಹಿಂದಿ ವಿರೋಧಿ ನಿಲುವು, ಪ್ರತ್ಯೇಕ ದ್ರಾವಿಡ ಸ್ಥಾನದ ಬೇಡಿಕೆಗಳನ್ನು ಕುರಿತು ಚರ್ಚಿಸುತ್ತಾರೆ. ಅದಕ್ಕೆ ಪೆರಿಯಾರ್, ”ಇವ್ಯಾವವೂ ಮಹತ್ವದವಲ್ಲ. ಮುಖ್ಯವಾಗಿ ನಮ್ಮ ಹೋರಾಟ ಜಾತಿ ಪದ್ಧತಿಯ ವಿರುದ್ಧ ಮಾತ್ರ. ಬ್ರಾಹ್ಮಣರ ವಿರುದ್ಧ ವ್ಯಕ್ತಿಗತ ಹಿಂಸೆಯನ್ನು ಎಂದೂ ಪ್ರಚೋದಿಸುವುದಿಲ್ಲ ಎಂದು ಮತ್ತೊಮ್ಮೆ ಹೇಳುತ್ತೇನೆ. ನಮ್ಮ ಪಕ್ಷದ ಮುಖವಾಣಿ ‘ವಿಡುದಲೈ’ ಪತ್ರಿಕೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಎಂದೂ ಹಿಂಸೆಯ ಪ್ರಸ್ತಾಪ ಮಾಡಿಲ್ಲ” ಎಂದು ಲೋಹಿಯಾರಿಗೆ ತಿಳಿಸುತ್ತಾರೆ.
ಪೆರಿಯಾರರ ಕ್ರಿಯಾಶಕ್ತಿಯನ್ನು ಬಹುವಾಗಿ ಮೆಚ್ಚುವ ಲೋಹಿಯಾ, ಆಗಿನ ಪ್ರಧಾನಮಂತ್ರಿ ನೆಹರೂ, ದ್ರಾವಿಡ ಕಳಗಂ ಪಕ್ಷದ ಚಟುವಟಿಕೆಗಳನ್ನು ಖಂಡಿಸಲು ಬಳಸಿದ ಭಾಷಾವೈಖರಿಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಜಾತಿ ನಿರ್ಮೂಲನಾ ಆಂದೋಲನದಲ್ಲಿ ಪೆರಿಯಾರರ ಜೊತೆಗೆ ಹೆಗಲೆಣೆಯಾಗಿ ನಿಲ್ಲುವುದಾಗಿ ತಿಳಿಸುವ ಲೋಹಿಯಾ, ಪೆರಿಯಾರರ ಪ್ರತ್ಯೇಕ ರಾಷ್ಟ್ರದ ಬೇಡಿಕೆಯ ಬಗ್ಗೆ, ಪೆರಿಯಾರರು ಗಾಂಧಿ ಭಾವಚಿತ್ರಗಳನ್ನು ಸುಡುತ್ತಿದ್ದುದರ ಬಗ್ಗೆ ತಮ್ಮ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಅದೊಂದು ಚರಿತ್ರಾರ್ಹವಾದ ಭೇಟಿ.
ಪೆರಿಯಾರ್ ಗಾಂಧೀಜಿಗಿಂತ ಹತ್ತುವರ್ಷ ಕಿರಿಯರು, ನೆಹರೂಗಿಂತ ಹತ್ತುವರ್ಷ ಹಿರಿಯರು, ತೊಂಬತ್ತು ವರ್ಷಗಳ ದೀರ್ಘಾವಧಿಯವರೆಗೆ ಅವರು ಬದುಕಿದರು. ಅವರು ತೀರಿಕೊಂಡದ್ದು 1973ರಲ್ಲಿ. ಅದೇ ವರ್ಷ ಅವರು ಬೆಂಗಳೂರಿನ ಸಭೆಯೊಂದಕ್ಕೆ ಆಹ್ವಾನಿತರಾಗಿದ್ದರು. ‘ಕರ್ನಾಟಕ ವಿಚಾರವಾದಿಗಳ ಸಂಘ’ ಅವರನ್ನು ಕರೆಸಿತ್ತು. ಪ್ರೊ. ಧರ್ಮಲಿಂಗಂ, ಪ್ರೊ. ಎಂ.ಡಿ. ನಂಜುಂಡಸ್ವಾಮಿ, ವೇಮಣ್ಣ- ಮುಂತಾದವರು ಪುರಭವನದಲ್ಲಿ ಸಭೆ ಏರ್ಪಡಿಸಿದ್ದರು. ಆ ವೇಳೆಗಾಗಲೆ ‘ವಿಚಾರವಾದಿ ಗೆಳೆಯರ ಬಳಗ’ವೆಂಬ ಒಂದು ಮರಿ ಸಂಘವನ್ನು ನಾವೆಲ್ಲ ಸೇರಿ ಹುಟ್ಟು ಹಾಕಿದ್ದೆವು. ಸಿದ್ದಲಿಂಗಯ್ಯ ದಲಿತ ಕವಿಯಾಗಿ ರೂಪುಗೊಳ್ಳುತ್ತಿದ್ದರು. ನಮ್ಮ ಜೊತೆಗೆ ಗೆಳೆಯ ಡಿ.ಆರ್. ನಾಗರಾಜ್ ಇದ್ದ. ನಾವೆಲ್ಲ ಈ ಸಭೆಗೆ ಮರಿ ಸ್ವಯಂಸೇವಕರು. ಆ ವೇಳೆಗೆ ಪೆರಿಯಾರ್ ಮೂತ್ರಪಿಂಡದ ತೊಂದರೆಯಿಂದ ಜೀರ್ಣರಾಗಿದ್ದರು. ಮೂತ್ರಪಿಂಡಕ್ಕೆ ಜೋಡಿಸಲಾಗಿದ್ದ ನಳಿಕೆಗಳನ್ನು ಹಿಡಿದಿದ್ದ ಸಹಾಯಕರೊಬ್ಬರ ಜೊತೆಯಲ್ಲಿ ವೇದಿಕೆಗೆ ಆಗಮಿಸಿದರು. ಅಲ್ಲಿ ಯಥಾಪ್ರಕಾರ ವಿರೋಧಿಗಳ ಗುಂಪು ಗದ್ದಲವೆಬ್ಬಿಸಿತು. ಕನ್ನಡಾಭಿಮಾನಿಗಳು ವಿಚಾರವಾದ ಹೇಳಲು ತಮಿಳಿನವರು ಯಾಕೆ ಬೇಕು ಎಂಬ ವಾದವನ್ನು ಮುಂದೊಡ್ಡಿ ಅಡ್ಡಿ ಪಡಿಸಲೆತ್ನಿಸಿದರು. ಅವರನ್ನು ಹೊರದಬ್ಬಿದ ಮೇಲೆ ಕನ್ನಡದ ಪ್ರಖ್ಯಾತ ಲೇಖಕ ಪಿ. ಲಂಕೇಶ್ ಅಂದು ಒಂದು ಮಹತ್ತರ ಸ್ವಾಗತ ಭಾಷಣ ಮಾಡಿದ್ದರು. ಅಲ್ಲಿ ಪೆರಿಯಾರರ ಭಾಷಣದ ನಡುನಡುವೆ ನಡೆದ ಅಡೆತಡೆಗಳು, ನನಗೂ ದಲಿತ ಕವಿ ಸಿದ್ದಲಿಂಗಯ್ಯನವರಿಗೂ ಗೂಸಾಗಳು ಬಿದ್ದದ್ದು ಇವನ್ನೆಲ್ಲ ಕುರಿತು ಮತ್ತೊಮ್ಮೆ ಯಾವಾಗಲಾದರೂ ಬರೆಯಬೇಕು. ಸಿದ್ದಲಿಂಗಯ್ಯ ತಮ್ಮ ಆತ್ಮಕಥೆ ‘ಊರುಕೇರಿ’ಯಲ್ಲಿ ಸೂಕ್ಷ್ಮವಾಗಿ ಇದನ್ನು ದಾಖಲಿಸಿದ್ದಾರೆ.
ಪೆರಿಯಾರ್, ಬ್ರಿಟಿಷರು ಕೆಲವೇ ಬ್ರಾಹ್ಮಣರ ಕೈಗೆ ಅಧಿಕಾರವನ್ನು ಹಸ್ತಾಂತರ ಮಾಡಿ ಸ್ವಾತಂತ್ರ‍್ಯ ಎಂಬುದಾಗಿ ಘೋಷಿಸುತ್ತಾರೆಂದು ಅದನ್ನು ವಿರೋಧಿಸಿದರು. ವರ್ಣಾಶ್ರಮ ವ್ಯವಸ್ಥೆ, ಜಾತಿ ಪದ್ಧತಿ ನಿರಾಕರಿಸಿದರು. ಸಂವಿಧಾನವನ್ನು ನಿರಾಕರಿಸಿದರು. ಸಾಂಪ್ರದಾಯಕವಾದ ಎಲ್ಲ ಸಮಾಜ ವ್ಯವಸ್ಥೆಯನ್ನು ಧಿಕ್ಕರಿಸಿದರು. ನೋಬಲ್ ಪುರಸ್ಕೃತ ವಿ.ಎಸ್. ನೈಪಾಲ್ ಅವರ ಭಾಷೆಯಲ್ಲಿ ಅವರೊಬ್ಬ ಗಾಂಧಿ ವಿರೋಧಿ. ಹಿಂದೂ ವಿರೋಧಿ. ದೈವ ವಿರೋಧಿ. ವಿಮರ್ಶಕ ಡಿ.ಆರ್. ನಾಗರಾಜ್ ಪೆರಿಯಾರ್ ಅವರನ್ನು ಸರ್ವನಿರಾಕರಣ ವಾದವನ್ನು ಬೋಧಿಸಿದ ಋಷಿಯೆಂದು ಕರೆಯುತ್ತಾರೆ.
ಪೆರಿಯಾರರ ಪೂರ್ವಾಶ್ರಮ ಅಚ್ಚರಿಯನ್ನುಂಟು ಮಾಡುವ ವಿವರಗಳನ್ನು ನೀಡುತ್ತದೆ. ವಿದ್ಯಾಭ್ಯಾಸದಲ್ಲಿ ಅಷ್ಟೇನು ಚುರುಕಿನವರಾಗಿರಲಿಲ್ಲವಾದರೂ ವ್ಯವಹಾರ ಕುಶಲತೆಯಲ್ಲಿ ಯಶಸ್ಸು ಪಡೆದ ವ್ಯಕ್ತಿ. ಜೀವನೋಪಾಯಕ್ಕಾಗಿ ತಂದೆ ಕಲ್ಲು ನುಣುಪುಗೊಳಿಸುವ ಕೆಲಸ ಮಾಡುತ್ತಿದ್ದರು.
ಸಣ್ಣಪುಟ್ಟ ವ್ಯಾಪಾರ ಮಾಡುತ್ತ ಬೆಳೆಯುತ್ತಿದ್ದಂತೆ ಮಗ ರಾಮಸ್ವಾಮಿ ನಾಯ್ಕರ್ ತಮ್ಮ ವ್ಯಾಪಾರ ವೃತ್ತಿಗೆ ಒಳ್ಳೆಯ ಸಹಾಯಕನಾದ. ಅಪ್ಪ 1911ರಲ್ಲಿ ತೀರಿಕೊಳ್ಳುವ ವೇಳೆಗೆ ರಾಮಸ್ವಾಮಿ ಒಬ್ಬ ಸಮರ್ಥ ನಾಯಕನಾಗಿ ಈರೋಡಿನಲ್ಲಿ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಅನೇಕ ಜವಾಬ್ದಾರಿ ಸ್ಥಾನಗಳು ಇವರ ಹೆಗಲಿಗೆ ಬಿದ್ದವು. 1920ರ ವೇಳೆಗೆ ಸುಮಾರು 29 ಮುಖ್ಯ ಸಾರ್ವಜನಿಕ ಹುದ್ದೆಗಳನ್ನು ಇವರು ನಿರ್ವಹಿಸುತ್ತಿದ್ದರು. ಈರೋಡಿನ ದೇವಾಲಯದ ಕೆಲಸವೂ ಈ ವ್ಯಕ್ತಿಯ ಮೇಲೇ ಹೊರಿಸಿದರು. ಅವರು ಹನ್ನೆರಡು ವರ್ಷಗಳ ಕಾಲ ಗೌರವ ಮ್ಯಾಜಿಸ್ಟ್ರೇಟ್ ಆಗಿದ್ದರು. ಕೆಲವು ವರ್ಷಗಳ ಕಾಲ ಮುನ್ಸಿಪಲ್ ಕೌನ್ಸಿಲ್‌ನ ಸದಸ್ಯರಾಗಿದ್ದು 1919ರಲ್ಲಿ ಈರೋಡಿನ ಮುನ್ಸಿಪಾಲಿಟಿಯ ಅಧ್ಯಕ್ಷರಾಗಿದ್ದರು. ಸರ್ಕಾರಿ ಕೆಲಸಗಾರರ ಅಸಮರ್ಥತೆ, ಅಶ್ರದ್ಧೆ, ಲಂಚಗುಳಿತನದ ಬಗ್ಗೆ ಕೆಂಡ ಕಾರುತ್ತ ಕೆಲಸ ಮಾಡಿಸುತ್ತಿದ್ದರು. ಅವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಈರೋಡಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಾಯಂ ಆಗಿ ರೂಪುಗೊಂಡಿತು. ಈರೋಡಿನ ರಸ್ತೆಬದಿಗಳನ್ನು ಅನಧಿಕೃತವಾಗಿ ಆಕ್ರಮಿಸಿಕೊಂಡಿದ್ದ ಅಂಗಡಿಗಳ ಮಾಲೀಕರನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿದರು. ಸ್ವತಃ ವ್ಯಾಪಾರಿಯಾಗಿದ್ದ ರಾಮಸ್ವಾಮಿಯವರ ಇಂಥ ಕೆಲಸವನ್ನು ಇತರ ವ್ಯಾಪಾರಿಗಳು ವಿರೋಧಿಸಲಾಗದಷ್ಟು ನೈತಿಕ ಸ್ಥೈರ್ಯವನ್ನು ಗಳಿಸಿಕೊಂಡಿದ್ದರು. ದೇವಾಲಯಗಳ ಆಡಳಿತ ವ್ಯವಸ್ಥೆಯಲ್ಲಿ ಸರಿಯಾದ ಲೆಕ್ಕಪತ್ರಗಳನ್ನು ಇಡಬೇಕೆಂದು, ಪ್ರತಿಯೊಂದು ಖರ್ಚಿನ ಲೆಕ್ಕವನ್ನೂ ದಾಖಲೆ ಮಾಡಬೇಕೆಂದು ಒತ್ತಾಯಿಸಿದರು. ಮುನ್ಸಿಪಲ್ ಅಧ್ಯಕ್ಷರಾಗಿ ಕೆಲವೇ ತಿಂಗಳುಗಳಲ್ಲಿ ಈರೋಡಿನ ಚರಂಡಿ ವ್ಯವಸ್ಥೆ ಎಷ್ಟು ಅಚ್ಚುಕಟ್ಟಾಯಿತೆಂದರೆ, ಆಗ್ಗೆ ಸೇಲಂ ಪ್ರಾಂತ್ಯದಲ್ಲಿ ಮುನ್ಸಿಪಲ್ ಕೌನ್ಸಿಲ್ಲಿನ ಅಧ್ಯಕ್ಷರಾಗಿದ್ದ ಸಿ. ರಾಜಗೋಪಾಲಾಚಾರಿಯವರು ಈ ಕೆಲಸದಲ್ಲಿ ಪರಿಣಿತರಾದ ಕೆಲವು ಸ್ಯಾನಿಟರಿ ಇನ್‌ಸ್ಪೆಕ್ಟರ್‌ಗಳನ್ನು ತಮ್ಮ ಪ್ರಾಂತ್ಯಕ್ಕೆ ಕಳಿಸಿಕೊಡಿ ಎಂದು ಕೇಳುವಂತಾಯಿತು.
ಸಾರ್ವಜನಿಕ ಬದುಕಿಗೆ ಅವರು ತಮ್ಮನ್ನು ತಾವು ತೀವ್ರವಾಗಿ ತೊಡಗಿಸಿಕೊಂಡರು. ಆ ವೇಳೆಗೆ ತಮ್ಮ ಕುಟುಂಬವು ಆರ್ಥಿಕವಾಗಿ ಉನ್ನತಿಗೇರಿದ್ದುದರಿಂದ ತಮ್ಮೆಲ್ಲ ಸಂಪತ್ತನ್ನು ಸಾರ್ವಜನಿಕ ಸೇವೆಗೆ ಮುಡುಪಿಡಲು ತಮ್ಮ ತಂದೆಯವರ ಹೆಸರಿನಲ್ಲಿ ಧಾರ್ಮಿಕ ದತ್ತಿಗಳನ್ನು ಸ್ಥಾಪಿಸಿದರು. ಸೋದರ ಸೋದರಿಯರನ್ನು ಈ ಕಾರ್ಯಕ್ಕಾಗಿ ಮನವೊಲಿಸಿದರು. ಯಾವುದೇ ಭೋಜನಕೂಟವೆಂದರೆ ಮದ್ಯ ಅನಿವಾರ್ಯವೆಂದು ನಂಬಿದ್ದ ಹಲವಾರು ಗೆಳೆಯರ ನಡುವೆಯಿದ್ದರೂ ಪೆರಿಯಾರ್ ತಮ್ಮ ಜೀವನಪರ್ಯಂತ ಮದ್ಯಸೇವನೆಯಿಂದ ದೂರವಿದ್ದರು.
ಪೆರಿಯಾರ್ 1919ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಜಲಿಯನ್ ವಾಲಾಬಾಗ್‌ನಲ್ಲಿ ಜನರಲ್ ಡೈರ್ ನಡೆಸಿದ ಹತ್ಯಾಕಾಂಡದ ನಂತರ ತಮ್ಮನ್ನು ತಾವು ಸಕ್ರಿಯವಾಗಿ ಕಾಂಗ್ರೆಸ್ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡರು. ಸಾಮಾಜಿಕ ಅನಿಷ್ಟಗಳಾದ ಅಸ್ಪೃಶ್ಯತೆ ಮತ್ತು ಶೇಂದಿ ಕುಡಿತದ ಬಗ್ಗೆ ತೀವ್ರವಾಗಿ ತಮ್ಮ ವಿರೋಧ ವ್ಯಕ್ತಪಡಿಸುತ್ತ ಆಂದೋಲನ ಪ್ರಾರಂಭಿಸಿದರು. ಪೆರಿಯಾರ್ ಅವರ ಶಕ್ತಿ ಸಾಮರ್ಥ್ಯಗಳ ಅರಿವು ಎಲ್ಲರಿಗಿಂತ ಮೊದಲು ಬ್ರಿಟಿಷರಿಗೆ ಗೊತ್ತಾಯಿತು. ಅವರಿಗೊಂದು ‘ರಾವ್ ಬಹದ್ದೂರ್’ ಪದವಿ ಕೊಟ್ಟು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಯತ್ನವನ್ನು ಪೆರಿಯಾರ್ ನಯವಾಗಿ ತಳ್ಳಿ ಹಾಕಿ ತಮ್ಮ ಗುರಿಯತ್ತ ದೃಢವಾದ ಹೆಜ್ಜೆಯಿಡತೊಡಗಿದರು. ಗಾಂಧೀಜಿಯವರ ತತ್ವಗಳನ್ನು ಚಾಚೂತಪ್ಪದೆ ಪಾಲಿಸತೊಡಗಿದರು. ಮಿಲ್ಲಿನ ಬಟ್ಟೆ ಬಿಟ್ಟು ಕೈಯಿಂದ ನೂತ ಖಾದಿ ಬಟ್ಟೆ ಧರಿಸತೊಡಗಿದರು. ತಮ್ಮ ಮನೆಮಂದಿಯೂ ಧರಿಸುವಂತೆ ಮನವೊಲಿಸಿದರು. ತಮಿಳುನಾಡಿನಾದ್ಯಂತ ಖಾದಿ ಪ್ರಚಾರದಲ್ಲಿ ತೊಡಗಿದರು. ತಮ್ಮ ಜೊತೆಗೇ ಚರಕವನ್ನು ಹೊತ್ತುಕೊಂಡು ಹೋಗಿ ಪ್ರಚಾರ ಭಾಷಣಗಳಲ್ಲಿ ತೊಡಗಿದರು.
ಗಾಂಧೀಜಿ 1920ರಲ್ಲಿ ಅಸಹಕಾರ ಚಳವಳಿ ಆರಂಭಿಸಿದರು. ಕಾಂಗ್ರೆಸ್ ಕಾರ್ಯಕರ್ತರಿಗೆ ಕಾನೂನು ಕಟ್ಟಳೆಗಳಿಗಾಗಿ ಕೋರ್ಟು ಕಚೇರಿಗಳಿಗೆ ಹೋಗಬಾರದೆಂದು ಗಾಂಧೀಜಿ ತಾಕೀತು ಮಾಡಿದ್ದರು. ಪೆರಿಯಾರ್ ತಮ್ಮ ಕುಟುಂಬದಲ್ಲಿದ್ದ ಅನೇಕ ಪ್ರಾಮಿಸರಿ ನೋಟುಗಳನ್ನು, ಅಡಮಾನ ಪತ್ರಗಳನ್ನು ನಾಶಗೊಳಿಸಿ ಕುಟುಂಬಕ್ಕೆ ಬರಬೇಕಾಗಿದ್ದ ಸಹಸ್ರಾರು ರೂಪಾಯಿಗಳನ್ನು ಕಳೆದುಕೊಂಡರು. ಸೇಲಂನ ವಿಜಯನಾಗಚಾರಿಯೆಂಬುವವರು ಪೆರಿಯಾರ್ ಬಳಿ ಬಂದು ಈ ಎಲ್ಲ ಪತ್ರಗಳನ್ನು ಬೇರೆ ಯಾರ ಹೆಸರಿಗಾದರೂ ವರ್ಗಾವಣೆ ಮಾಡಿರಿ- ಅವರು ಹಣ ಪಡೆದು ನಿಮ್ಮ ಕುಟುಂಬಕ್ಕೆ ಕೊಡುತ್ತಾರೆ ಎಂದು ಸಲಹೆ ನೀಡಲು ಬಂದಾಗ ಪೆರಿಯಾರ್ ಕಾಂಗ್ರೆಸ್ ಸಂಸ್ಥೆಗೆ ನಾನು ದ್ರೋಹ ಮಾಡಲಾರೆ ಎಂದು ನಿರ್ದಾಕ್ಷಿಣ್ಯವಾಗಿ ತಿಳಿಸಿಬಿಡುತ್ತಾರೆ.
ಕುಡಿತದ ವಿರುದ್ಧ 1921ರಲ್ಲಿ ಗಾಂಧೀಜಿ ಕಾರ್ಯಕ್ರಮ ಹಾಕಿಕೊಂಡಾಗ, ತಮ್ಮದೇ ಸ್ವಂತ 500 ತೆಂಗಿನ ಮರಗಳನ್ನು ಕಡಿದು ಉರುಳಿಸಿಬಿಡುತ್ತಾರೆ. ಪೆರಿಯಾರ್, ತಮ್ಮ ಹೆಂಡತಿ ಮತ್ತು ತಂಗಿ, ನಾಗಮೈ ಮತ್ತು ಕಣ್ಣಮ್ಮ -ಈ ಕೆಲಸದಲ್ಲಿ ಪೆರಿಯಾರ್ ಅವರಿಗೆ ಹೆಗಲೆಣೆಯಾಗಿ ಕೆಲಸ ಮಾಡುತ್ತಾರೆ. ಕಾಂಗ್ರೆಸ್ ಕೆಲಸವನ್ನು ಪೆರಿಯಾರ್ ಎಷ್ಟರಮಟ್ಟಿಗೆ ಹಚ್ಚಿಕೊಂಡರೆಂದರೆ- ಅವರ ನಾಯಕತ್ವದ ಅಪಾರ ಸಾಮರ್ಥ್ಯ ಕಂಡ ಪಕ್ಷ ಅವರನ್ನು ತಮಿಳುನಾಡು ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನಾಗಿ ನಿಯುಕ್ತಿ ಮಾಡಿತು. ಅದರ ಮರುವರ್ಷ ಪಕ್ಷದ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 1923-24ರ ಈ ನಿರ್ಣಾಯಕ ಗಳಿಗೆಯಲ್ಲಿ ನಿಸ್ವಾರ್ಥ ನಾಯಕ ಪೆರಿಯಾರ್ ಅವರಿಗೆ ಒಂದು ಕಟುಸತ್ಯ ಗೋಚರವಾಯಿತು- ಅದು ಕಾಂಗ್ರೆಸ್ಸಿನ ಮನೆಯಲ್ಲಿ ಎಲ್ಲವೂ ನೆಟ್ಟಗಿಲ್ಲ ಎಂಬ ಸತ್ಯ. ಮೇಲು ಜಾತಿಯ ಜನರು- ಅದರಲ್ಲೂ ಮುಖ್ಯವಾಗಿ ತಮಿಳುನಾಡು ಕಾಂಗ್ರೆಸ್‌ನಲ್ಲಿ ಜಾತಿ ತಾರತಮ್ಯವನ್ನು ಕಾಯ್ದುಕೊಂಡು ಹೋಗುವುದರಲ್ಲೇ ನಿರತರಾಗಿದ್ದ ಅಂಶ ಗೋಚರಿಸತೊಡಗಿತು. 1919ರಲ್ಲಿ ಪೆರಿಯಾರ್ ಕಾಂಗ್ರೆಸ್ ಸೇರುವಾಗ, ಕಾಂಗ್ರೆಸ್ಸಿನ ಪ್ರತಿಷ್ಠಿತ ವ್ಯಕ್ತಿಗಳ ಸಹಕಾರದೊಡನೆ ಅಸ್ಪೃಶ್ಯತೆಯನ್ನು ತೊಡೆದು ಹಾಕಬಹುದೆಂಬ ಆಸೆಯಿಟ್ಟುಕೊಂಡಿದ್ದರು. ಹಿಂದುಳಿದ ಮತ್ತು ನಿರ್ಗತಿಕ ಜನರ ಶಿಕ್ಷಣ ಮತ್ತು ಉದ್ಯೋಗ ಸ್ಥಿತಿಗತಿಗಳನ್ನು ಉನ್ನತೀಕರಿಸಿ ಸರ್ಕಾರಿ ಕೆಲಸಗಳಲ್ಲಿ ಅವರಿಗೆ ಸಿಗಬೇಕಾದ ಪಾಲನ್ನು ದೊರಕಿಸಿಕೊಡಬಹುದೆಂಬ ಆಸೆಯಿಟ್ಟುಕೊಂಡಿದ್ದರು. ಈ ಎಲ್ಲ ಭರವಸೆಗಳೊಂದಿಗೆ ತಿರುನಲ್ವೇಲಿಯಲ್ಲಿ ನಡೆದ 1920ರ ತಮಿಳುನಾಡು ಕಾಂಗ್ರೆಸ್ ಅಧಿವೇಶನದಲ್ಲಿ ಸರ್ಕಾರವು ಶಿಕ್ಷಣ ಕ್ಷೇತ್ರ ಮತ್ತು ಉದ್ಯೋಗ ವಲಯದಲ್ಲಿ ಜಾತಿ ಆಧಾರಿತ ಪ್ರತಿನಿಧಿತ್ವ ಒಪ್ಪಿಕೊಳ್ಳಬೇಕೆಂಬ ಗೊತ್ತುವಳಿಯನ್ನು ಮಂಡಿಸಬಯಸಿದರು. ಆದರೆ, ವಿಷಯ ಸಮಿತಿ ಒಪ್ಪಿಗೆ ನೀಡಿದರೂ ಅಧಿವೇಶನದ ಅಧ್ಯಕ್ಷರಾಗಿದ್ದ ಎಸ್. ಶ್ರೀನಿವಾಸ ಅಯ್ಯಂಗಾರ್ ಅವರು ಇಂಥ ಗೊತ್ತುವಳಿ ಜಾತಿ ಸಂಘರ್ಷವನ್ನುಂಟುಮಾಡುತ್ತದೆಂಬ ಕಾರಣ ನೀಡಿ ತಳ್ಳಿಹಾಕಿದರು.
ಇದನ್ನು ಓದಿದ್ದೀರಾ?: ಬಾಬರಿ ಮಸೀದಿ ಧ್ವಂಸ ತರುವಾಯ ತೀವ್ರಗೊಂಡ ಮುಸ್ಲಿಮರ ಮೇಲಿನ ದಾಳಿ
ಪೆರಿಯಾರ್ ನಿರಾಶರಾದರೂ ಭರವಸೆ ಕಳೆದುಕೊಳ್ಳದೆ 1921ರಲ್ಲಿ ತಂಜಾವೂರಿನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಈ ಪ್ರಸ್ತಾವವನ್ನು ಮಂಡಿಸಬಯಸಿದರು. ಆಗ ಸಿ. ರಾಜಗೋಪಾಲಾಚಾರಿ ಅವರು ಇದನ್ನು ಒಂದು ತತ್ವವನ್ನಾಗಿ ಎಲ್ಲ ಕಾಂಗ್ರೆಸ್ಸಿಗರೂ ಒಪ್ಪುತ್ತಾರಾದರೂ, ಇಂಥ ಗೊತ್ತುವಳಿಯನ್ನು ಮಂಡಿಸಲು ಇನ್ನೂ ಕಾಲ ಪರಿಪಕ್ವವಾಗಿಲ್ಲ ಎಂದು ವಿಫಲಗೊಳಿಸಿಬಿಟ್ಟರು. ಛಲದಿಂದ ಪೆರಿಯಾರ್ ಮತ್ತೆ 1922ರಲ್ಲಿ ತಿರುಪುರದ ಅಧಿವೇಶನದಲ್ಲಿ ಮಂಡಿಸಿದಾಗ ಅದು ಗಂಭೀರ ಚರ್ಚೆಗೆ ಗ್ರಾಸವಾಯಿತು. ಶಾಸ್ತ್ರ ಪುರಾಣಗಳನ್ನು ಉದ್ಧರಿಸುತ್ತಾ ಚರ್ಚೆಯಲ್ಲೇ ನಿರತರಾದ ಹೃದಯಹೀನ ಉನ್ನತ ಜಾತಿಯ ಜನರನ್ನು ಉದ್ದೇಶಿಸಿ- ಹಿಂದುಳಿದ ಮತ್ತು ನಿಮ್ನ ಜಾತಿಯ ಜನರಿಗೆ ನ್ಯಾಯವೊದಗಿಸುವ ಮನಸ್ಸುಳ್ಳ ಜನರು ಮುಂದೆ ಬಂದು ಮನುಧರ್ಮಶಾಸ್ತ್ರ ಮತ್ತು ರಾಮಾಯಣವನ್ನು ಸುಡಬೇಕು ಎಂದು ಘರ್ಜಿಸಿದರು. ಆ ಗೊತ್ತುವಳಿ ಅಂಗೀಕಾರವಾಗಲು ಸೋತಿತು. ಮತ್ತೆ 1923ರಲ್ಲಿ ಸೇಲಂ ಅಧಿವೇಶನದಲ್ಲಿ ಅದೇ ಗೊತ್ತುವಳಿಯನ್ನು ಮಂಡಿಸಿದಾಗ ಎರಡು ಗುಂಪಿನ ಜನರ ನಡುವೆ ತೀವ್ರ ವಿರಸವುಂಟಾಗಿ ಅದನ್ನು ಮತಕ್ಕೆ ಒಡ್ಡಲೇಯಿಲ್ಲ. ಮುಂದೆ ತಿರುವಣ್ಣಾಮಲೈಯಲ್ಲಿ 1924ರಲ್ಲಿ ಅಧಿವೇಶನ ನಡೆದಾಗ ತಮಿಳುನಾಡಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಪೆರಿಯಾರ್ ತಾವು ಪ್ರತಿಪಾದಿಸುತ್ತಿದ್ದ ಸಾಮಾಜಿಕ ನ್ಯಾಯದ ಪ್ರತಿಪಾದನೆಯನ್ನು ತುಂಬಾ ಸಮರ್ಥವಾಗಿ ಮಾಡಿದರು. ನಮ್ಮ ಸಮಾಜದಲ್ಲಿ ಬ್ರಾಹ್ಮಣರು ಮತ್ತು ಅಬ್ರಾಹ್ಮಣರ ನಡುವೆ ಸೌಹಾರ್ದವೇ ಇಲ್ಲದಂತಾಗಿದೆ. ದೇಶಾಭಿಮಾನಿಗಳು ಈ ವಿಷಯವನ್ನು ಗಂಭೀರವಾಗಿ ಅಧ್ಯಯನ ಮಾಡಿ ಈ ತಪ್ಪನ್ನು ಸರಿಪಡಿಸಬೇಕು ಎಂದು ವಾದಿಸಿದರು. ಇಷ್ಟಾದರೂ ಜಾತಿ ಆಧಾರಿತ ಪ್ರಾತಿನಿಧ್ಯತೆಯ ಗೊತ್ತುವಳಿ ಪಾಸಾಗಲಿಲ್ಲ.
1924ರಲ್ಲಿ ಕೇರಳದಲ್ಲಿ ನಡೆದ ವೈಕ್ಕಂ ಸತ್ಯಾಗ್ರಹಕ್ಕೆ ಪೆರಿಯಾರರ ನಾಯಕತ್ವ ಅನಿವಾರ್ಯವಾಯಿತು. ಅವರು ಅಲ್ಲಿ ದೇವಾಲಯದ ರಸ್ತೆಯನ್ನು ಕೇವಲ ಬ್ರಾಹ್ಮಣರಿಗೆ ಮಾತ್ರ ಮೀಸಲಾಗಿದ್ದುದನ್ನು ತೆರವು ಮಾಡಿಸಿ ಮುಕ್ತ ಮಾರ್ಗವನ್ನಾಗಿಸಿದರು. ಅಲ್ಲಿನ ಎಲ್ಲ ನಾಯಕರನ್ನೂ ಬಂಧಿಸಿದ್ದರಿಂದ ಪೆರಿಯಾರ್ ಅಲ್ಲಿ ನಾಯಕತ್ವ ವಹಿಸಿಕೊಳ್ಳಬೇಕಾಯಿತು. ಅಲ್ಲಿನ ಯಶಸ್ಸು ಅವರಿಗೆ ‘ಹೀರೋ ಆಫ್ ದಿ ವೈಕ್ಕಂ’ ಎಂಬ ಬಿರುದನ್ನು ತಂದುಕೊಟ್ಟಿತು. ಆದರೆ ಅವರ ವೈಕ್ಕಂ ಹೋರಾಟದ ಯಶಸ್ಸನ್ನು ಕುರಿತು ಯಾವ ಪತ್ರಿಕೆಗಳೂ ಬರೆಯಲಿಲ್ಲ. ಮತ್ತೊಬ್ಬ ಸಾಂಸ್ಕೃತಿಕ ನಾಯಕ ತಿರು ವಿ.ಕಾ. ಅವರು ಮಾತ್ರ ನವಶಕ್ತಿ ಪತ್ರಿಕೆಯಲ್ಲಿ ಬರೆದರು. ಇದರಿಂದ ಬೇಸರಗೊಂಡ ಪೆರಿಯಾರ್ 1925ರಲ್ಲಿ ಈರೋಡಿನಿಂದ ‘ಕುಡಿಯರಸು’ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು.

ವೈಕ್ಕಂನಿಂದ ಹಿಂತಿರುಗಿದ ಕೂಡಲೆ ಸತತ ಆರನೆ ಬಾರಿಗೆ ತಮಿಳುನಾಡು ಕಾಂಗ್ರೆಸ್ಸಿನ ಅಧಿವೇಶನದಲ್ಲಿ ತಮ್ಮ ಪ್ರಿಯವಾದ ಜಾತ್ಯಾಧಾರಿತ ಪ್ರತಿನಿಧಿತ್ವದ ಗೊತ್ತುವಳಿ ಮಂಡಿಸುವ ಪ್ರಯತ್ನ ಮಾಡಿದರು. ಕಾಂಚೀಪುರದಲ್ಲಿ ನಡೆದ 1925ರ ಅಧಿವೇಶನದಲ್ಲಿ ತಿರು ವಿ.ಕಾ. ಅವರು ಅಧ್ಯಕ್ಷರು. ಬಹಿರಂಗ ಅಧಿವೇಶನದಲ್ಲಿ ವಿರೋಧ ಉಂಟಾಗುವುದರ ಸುಳಿವು ಸಿಕ್ಕ ತಿರು ವಿ.ಕಾ. ಗೊತ್ತುವಳಿ ಮಂಡಿಸಲು ಅವಕಾಶ ಮಾಡಿಕೊಡಲೇ ಇಲ್ಲ. ತೀವ್ರ ಜಿಗುಪ್ಸೆಯಿಂದ ಪೆರಿಯಾರ್ ಕಾಂಗ್ರೆಸ್ ಪಕ್ಷದಿಂದ ಹೊರನಡೆದರು. ಕಾಂಗ್ರೆಸ್ ಪಕ್ಷದ ಮುಂದುವರೆದ ಜಾತಿಯ ಸದಸ್ಯರು ಹಿಂದುಳಿದವರ ಉದ್ಧಾರದ ಬಗ್ಗೆ ಕೇವಲ ಬಾಯುಪಚಾರದ ಮಾತುಗಳನ್ನಾಡುವವರು. ಇವರಲ್ಲಿ ಜಾತೀಯತೆಯ ಬೇರು ತುಂಬಾ ಆಳವಾಗಿ ಬೇರುಬಿಟ್ಟಿವೆ ಎಂದು ಪೆರಿಯಾರ್‌ಗೆ ಮನವರಿಕೆಯಾಗಿತ್ತು.
ಈ ಹಿಂದೆ 1920ರಲ್ಲಿ ಗಾಂಧೀಜಿ ಅಸಹಕಾರ ಚಳವಳಿ ಆರಂಭಿಸಿದಾಗ ಕಾಂಗ್ರೆಸ್ಸಿಗರು ತಮ್ಮ ಮಕ್ಕಳನ್ನು ಬ್ರಿಟಿಷ್ ಆಡಳಿತಗಾರರ ಸುಪರ್ದಿನಲ್ಲಿರುವ ಯಾವ ಶಾಲೆಗಳಿಗೂ ಕಳಿಸಬಾರದೆಂದು ಸಲಹೆ ನೀಡಿದ್ದರು. ಆಗ ಕೆಲವು ದತ್ತಿ ಸಂಸ್ಥೆಗಳು, ಸಾರ್ವಜನಿಕರು ಹೊಸ ಶಾಲೆಗಳನ್ನು ಪ್ರಾರಂಭಿಸಿದ್ದರು. ತಿರುನಲ್‌ವೇಲಿ ಜಿಲ್ಲೆಯ ಚೇರನ್ ಮಾದೇವಿ ಎಂಬಲ್ಲಿ ತಮಿಳುನಾಡು ಕಾಂಗ್ರೆಸ್ ಪಕ್ಷದ ಅನುದಾನದ ನೆರವಿನಿಂದ ಒಂದು ಶಾಲೆ ಪ್ರಾರಂಭವಾಯಿತು. ಕಟ್ಟಾ ಕಾಂಗ್ರೆಸ್ಸಿಗರಾಗಿದ್ದ ವಿ.ವಿ.ಎಸ್. ಅಯ್ಯರ್ ಇದರ ಉಸ್ತುವಾರಿ ವಹಿಸಿಕೊಂಡಿದ್ದರು. ತಮಿಳುನಾಡು ಕಾಂಗ್ರೆಸ್ಸು ವಾರ್ಷಿಕ ಹತ್ತುಸಾವಿರ ರೂ.ಗಳನ್ನು ಈ ಶಾಲೆಗೆ ಅನುದಾನವಾಗಿ ನೀಡುತ್ತಿತ್ತು. 1925ನೇ ಸಾಲಿನ ಅರ್ಧ ಅನುದಾನವನ್ನು ಪೆರಿಯಾರ್ ಕಾಂಗ್ರೆಸ್ ಕಾರ್ಯದರ್ಶಿಯಾಗುವ ವೇಳೆಗಾಗಲೆ ನೀಡಲಾಗಿತ್ತು. ಉಳಿದರ್ಧ ಅನುದಾನ ನೀಡಬೇಕಾಗಿತ್ತು. ಅಲ್ಲಿ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆಯ ಬಗೆಯ ಊಟ ನೀಡಲಾಗುತ್ತಿದ್ದ ಸಂಗತಿ ಪೆರಿಯಾರರಿಗೆ ಗೊತ್ತಾಗಿ ಅವರು ಈ ತಪ್ಪನ್ನು ಸರಿಪಡಿಸಬೇಕೆಂದು ಅಯ್ಯರ್ ಅವರ ಬಳಿ ಪ್ರಸ್ತಾಪಿಸಿದರು. ಅಯ್ಯರ್ ಅದನ್ನು ನಿರ್ಲಕ್ಷಿಸಿಬಿಟ್ಟರು. ಉಳಿದರ್ಧ ಅನುದಾನ ಹಣ ನೀಡಲು ಪೆರಿಯಾರ್ ನಿರಾಕರಿಸಿದರು. ಆದರೆ ಕಾರ್ಯದರ್ಶಿ ಪೆರಿಯಾರರ ಗಮನಕ್ಕೆ ಬಾರದ ಹಾಗೆ ಜಂಟಿ ಕಾರ್ಯದರ್ಶಿಗಳ ಮೂಲಕ ಅಯ್ಯರ್ ಅನುದಾನವನ್ನು ಮಂಜೂರು ಮಾಡಿಸಿಕೊಂಡುಬಿಟ್ಟರು. ಈ ಸಂಗತಿ ಗೊತ್ತಾದ ಪೆರಿಯಾರ್ ಅದನ್ನು ಬಹಿರಂಗಗೊಳಿಸಿದರು. ಸಾರ್ವಜನಿಕ ಶಾಲೆಯನ್ನು ಹೀಗೆ ನಡೆಸುವುದರ ವಿರುದ್ಧ ಪ್ರಮುಖ ಕಾಂಗ್ರೆಸ್ಸಿಗರಾಗಿದ್ದ ಡಾ. ವರದರಾಜುಲು ನಾಯ್ಡು, ತಿರು ವಿ.ಕಾ., ಎಸ್. ರಾಮನಾಥನ್ ಮುಂತಾದವರು ಖಂಡಿಸಿದರು. ಅದನ್ನು ಗಾಂಧೀಜಿ ಗಮನಕ್ಕೆ ತಂದಾಗ ವಿ.ವಿ.ಎಸ್. ಅಯ್ಯರ್ ಅವರ ಕಠಿಣ ನಿಲುವಿನಿಂದಾಗಿ ಅವರ ಸಂಧಾನವೂ ಮುರಿದುಬಿತ್ತು. ಆದ್ದರಿಂದ ಆ ಶಾಲೆಯೂ ಮುಚ್ಚಿ ಹೋಯಿತು.
ಇದನ್ನು ಓದಿದ್ದೀರಾ?: ಅಂಬೇಡ್ಕರ್ ವಿಶೇಷ | ಚಿರಂಜೀವಿಯಾಗಿ ಬದುಕಿರುವ ಬಾಬಾಸಾಹೇಬರನ್ನು ‘ಕಾಣುವುದು’ ಯಾವಾಗ?
ಈ ಘಟನೆ ನಡೆದದ್ದು ಪೆರಿಯಾರ್ ಕೊನೆಯಬಾರಿಗೆ 1925ರಲ್ಲಿ ಕಾಂಚೀಪುರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ತಮ್ಮ ಪ್ರಿಯವಾದ ಪ್ರಸ್ತಾವವನ್ನು ಮಂಡಿಸುವುದಕ್ಕೆ ಕೆಲ ದಿನಗಳ ಮೊದಲು, ನಂತರ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ಕೊಟ್ಟರು. ನೇರವಾಗಿ ಶೂದ್ರರನ್ನು ಜಾಗೃತಗೊಳಿಸುವ ಕೆಲಸಕ್ಕೆ ತೊಡಗಿದರು. ಆನಂತರ ಅವರ ನಿರಂತರ ಹೋರಾಟದ ಫಲವಾಗಿ ಈ ಮಸೂದೆ ಜಾರಿಯಾದದ್ದು ಬೇರೊಂದು ಕಥೆ, ಅದರಲ್ಲಿ ಪೆರಿಯಾರ್ ಯಶಸ್ಸನ್ನು ಕಂಡರು. ಸರ್ಕಾರಿ ಆಜ್ಞೆ ನಂ. 1129 ದಿನಾಂಕ 15.12.1928ರಂದು ಜಾರಿಗೆ ಬಂದು ಬ್ರಾಹ್ಮಣರು, ಬ್ರಾಹ್ಮಣೇತರರು, ಕ್ರಿಶ್ಚಿಯನ್ನರು, ಮುಸ್ಲಿಮರು, ಹಿಂದುಳಿದ ಮತ್ತು ನಿಮ್ನ ವರ್ಗದ ಜನಜಾತಿಗಳು ತಮ್ಮ ಸಂಖ್ಯೆಗನುಗುಣವಾದ ಪ್ರಾತಿನಿಧಿತ್ವವನ್ನು ಸರ್ಕಾರಿ ಉದ್ಯೋಗಗಳಲ್ಲಿ ಮತ್ತು ಶಿಕ್ಷಣಕ್ಷೇತ್ರದಲ್ಲಿ ಪಡೆಯುವಂತಾಯಿತು.
ಪೆರಿಯಾರ್ ರಚ್ಚೆ ಹಿಡಿದ ಮಗುವಿನಂತೆ ಹಠ ಹಿಡಿದು ತನಗೆ ಸಿಗಲಾರದ್ದನ್ನು ದಕ್ಕಿಸಿಕೊಂಡರು. ಅಂಥ ಹಠಮಾರಿತನವನ್ನು ತಮಿಳು ಕುಲಕ್ಕೆ ಕಲಿಸಿಕೊಟ್ಟರು. ಅವರು ಈಗಲೂ ಇಂಥ ಹಠಮಾರಿತನದಿಂದಲೇ ಅಸಾಧ್ಯವಾದುದನ್ನು ಸಾಧ್ಯವಾಗಿಸಿಕೊಳ್ಳುತ್ತಿದ್ದಾರೆ. ರಚ್ಚೆ ಹಿಡಿದ ಮಕ್ಕಳು ಒಮ್ಮೊಮ್ಮೆ ಕೈಗೆ ಸಿಕ್ಕಿದ್ದನ್ನು ಎಸೆದು ನಾಶಮಾಡುತ್ತವೆ. ಅದರ ಹಿಂದೆ ಪಡೆಯಬೇಕೆಂಬ ಆರ್ತತೆಯಿರುತ್ತದೆ. ಪೆರಿಯಾರ್ ನೈರಾಶ್ಯದ ಅಂಚಿನಲ್ಲಿ ಕಮರಿಹೋಗಲಿಲ್ಲ. ಇಡೀ ಜನಸಮುದಾಯವನ್ನು ಸಮುದ್ರದಂತೆ ಎಬ್ಬಿಸಿ ನಿಲ್ಲಿಸಿದರು.
ಪುಸ್ತಕಕ್ಕಾಗಿ ಸಂಪರ್ಕ: ಜೀರುಂಡೆ ಪುಸ್ತಕ, 97422 25779