ಜಾತಿ ವ್ಯವಸ್ಥೆಯ ಕಟ್ಟುಪಾಡುಗಳು ಹಾಗೂ ಅಸಮಾಜ ನೀತಿಯ ಬೌದ್ಧಿಕ ದಾರಿದ್ರ್ಯವನ್ನು ಮೈಗೂಡಿಸಿಕೊಂಡಿರುವ ಇವರಿಗೆ ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು, ಜಾತ್ಯತೀತ, ಧರ್ಮ ನಿರಪೇಕ್ಷತೆ ಎಂಬ ವಾಸ್ತವದ ಪದಗಳೇ ಕಡು ವೈರಿಗಳು. ಇಂತಹ ಮಾನಸಿಕ ಅಸ್ಪೃಶ್ಯತೆಯ ವೈರತ್ವದ ಹಿನ್ನೆಲೆಯಿಂದ ಇವರು ಎರಡುವರೆ ಸಾವಿರ ವರ್ಷಗಳಿಂದ ಮೊದಲಗೊಂಡು ಇಂದಿನವರೆಗೂ ನಿಜ ಭಾರತೀಯರಾಗಲು ಸಾಧ್ಯವೇ ಆಗಿಲ್ಲ.
ಪ್ರೀತಿಯ ಮಹದೇವಣ್ಣ ಅವರ ಮಾತು ನೂರಕ್ಕೆ ನೂರು ಸರಿ. ಸರ್ಕಾರ ವೈದಿಕರಿಗೆ ಹಾಗೂ ಸ್ಪೃಶ್ಯರಿಗೆ 83 ರೂಪಾಯಿಗಳನ್ನು ನೀಡಿ 1 ರೂಪಾಯಿ ಕೊಟ್ಟಂತೆ ಮೌನವಾಗಿದೆ. 83 ರೂಪಾಯಿ ಪಡೆಯುತ್ತಿರುವ ದುಡಿಯದೇ- ಇನ್ನೊಬ್ಬರಿಂದ ದುಡಿಸಿಕೊಂಡೆ ವೈಭವವನ್ನು ಬಯಸುವ ವೈದಿಕರು ಹಾಗೂ ಸ್ಪೃಶ್ಯರು ತಮ್ಮ ಬ್ರಾಹ್ಮಣ ಹಾಗೂ ಬ್ರಾಹ್ಮಣ್ಯದ ಲೆವೆಲ್ಗೆ ಇದೇನು ಮಹಾ ಎಂದು ಬಹಿರಂಗವಾಗಿಯೇ ಗೊಣಗುತ್ತಿದ್ದಾರೆ. ಏಕೆಂದರೆ ಇವರು ಎರಡುವರೆ ಸಾವಿರ ವರ್ಷಗಳಿಂದ ನೂರಕ್ಕೆ ನೂರರಷ್ಟು ಮೀಸಲಾತಿಯನ್ನು ಏಕಮುಖವಾಗಿ ಅನುಭವಿಸಿದವರು.
ದಲಿತ ಸಮಾಜ ಇದರ ಅರಿವಿಲ್ಲದೆ ನಮಗೆ ಸಿಗಬಾರದ್ದು ಸಿಕ್ಕಿದೆ ಎಂಬ ಭ್ರಮೆಯಲ್ಲಿ ದೇವರು ಹಾಗೂ ದೇವಾಲಯದ ಮುಂದೆ ಕಣ್ಮುಚ್ಚಿ ನಿಂತಂತೆ ನಿಂತು ತಮಗೆ ಸಿಕ್ಕಿರುವ ಪಿತ್ರಾರ್ಜಿತ ಮೀಸಲಾತಿಯಲ್ಲಿಯೇ ಮತ್ತೆ ಒಳ ಮೀಸಲಾತಿಯ ಹೆಸರಿನಲ್ಲಿ ಕಿತ್ತಾಡುತ್ತಿದೆ. ಇವರ ಇಂತಹ ಕಿತ್ತಾಟಗಳು ಹಂಸಲೇಖ ಅವರು ಹೇಳುವ ಹಾಗೆ “ನೀರ ಮಜ್ಜಿಗೆಗೆ ಇಲ್ಲಿ ಊರ ಗೌಡರು – ನಾನು ನೀನು ಎಂದುಕೊಂಡು ಮಣ್ಣಿಗ್ ಉಯ್ದರು” ಎಂಬಂತಾಗಿದೆ.
ಇವರ ಇಂತಹ ಅವೈಜ್ಞಾನಿಕ ಕಿತ್ತಾಟಗಳೇ ಶತಶತಮಾನಗಳಿಂದ ಶಾಶ್ವತವಾಗಿ ನೂರಕ್ಕೆ ನೂರು ಮೀಸಲಾತಿ ಪಡೆದವರ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ಒಡೆದಾಳುವ ನೀತಿಯ ಕುತಂತ್ರಕ್ಕೆ ಹೆಮ್ಮೆ ತರುವ ಸಂಗತಿ. ಅವರಿಗೆ 75 ವರ್ಷಗಳಿಂದ 15 ಪರ್ಸೆಂಟ್ ಮೀಸಲಾತಿ ಪಡೆದವರನ್ನು ಹೇಗೆ ಮಟ್ಟ ಹಾಕಬೇಕು ಎಂಬುದು ಗೊತ್ತು, ಹಾಗೆ ಮುಂದೆ ಒಳ ಮೀಸಲಾತಿಯನ್ನು ಪಡೆಯುವವರನ್ನು ಹೇಗೆ ನಿಯಂತ್ರಿಸಬೇಕು ಎಂಬುದೂ ಗೊತ್ತು.

“ಅವರಿಗೆ ಗೊತ್ತು” ಎಂಬುದಕ್ಕೆ ಭಾರತ ಚರಿತ್ರೆಯಲ್ಲಿ ಬಹುದೊಡ್ಡ ದಾಖಲೆ ಮಾಡಲೇಬೇಕಾದ ಚಾರಿತ್ರಿಕ ಸತ್ಯಗಳಿವೆ. ಈ ಅರ್ಥದಲ್ಲೆ ಅಂಬೇಡ್ಕರ್ ಅವರು ಹೇಳಿದ್ದು ‘ಇತಿಹಾಸವನ್ನು ಮರೆತವರು- ಇತಿಹಾಸವನ್ನು ನಿರ್ಮಿಸಲಾರರು’ ಎಂದು.
ಇದು ವಾಸ್ತವದ ಚಿತ್ರಣ.
ಇಷ್ಟೆಲ್ಲ ಕಿತ್ತಾಟಗಳ ನಡುವೆಯೂ ದಲಿತರಿಗೆ 15+3=18 ರೂಪಾಯಿಯ ಮೌಲ್ಯ ಗೊತ್ತು. ಏಕೆಂದರೆ ಇವರು ಈಗ ಬಾಬಾಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಅವರು ರಚಿಸಿ – ಭಾರತ ಹಾಗೂ ಭಾರತೀಯರಿಗೆ ಅರ್ಪಿಸಿರುವ ಲಿಖಿತ ಸಂವಿಧಾನದ ಆಧಾರದಲ್ಲಿ ಮೀಸಲಾತಿಯನ್ನು ಕಾನೂನಾತ್ಮಕವಾಗಿ ಪಡೆಯಲು ಮುಂದಾಗಿರುವವರು. ಆದರೆ, ವೈದಿಕರಿಗೆ ಹಾಗೂ ಸ್ಪೃಶ್ಯರಿಗೆ 83 ರೂಪಾಯಿ ಮೌಲ್ಯ ಗೊತ್ತಿಲ್ಲ.
ಏಕೆಂದರೆ, ಇವರು ಶತಶತಮಾನಗಳಿಂದ ಅವರದೇ ಪ್ರಶ್ನಾರ್ತಿತ ಅಲಿಖಿತ ಸಂವಿಧಾನದ ಆಧಾರದಲ್ಲಿ ನೂರಕ್ಕೆ ನೂರರಷ್ಟು ಮೀಸಲಾತಿಯನ್ನು ಪಡೆದವರು. ಇವರಿಗೆ ತಮಗೆ ಲಿಖಿತ ಸಂವಿಧಾನದ ಆಧಾರದಲ್ಲಿ ಕಾನೂನುಗಳ ಅಡಿಯಲ್ಲಿ ದೊರಕಿರುವ 83% ಮೀಸಲಾತಿಯ ಮೌಲ್ಯವೇ ತಿಳಿದಿಲ್ಲ. ಇದು ನಮಗೆ ಭಿಕ್ಷೆ ಎನ್ನುವ ಭಾವನೆ ಅವರಲ್ಲಿದೆ.
ಇವರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆ ನಿಂತಿರುವ “ನಮ್ಮ ಜಾತಿ ಶ್ರೇಷ್ಠ” ಹಾಗೂ “ನಮ್ಮ ಧರ್ಮ ಶ್ರೇಷ್ಠ” ಎಂಬ ಅಮಲಿನಿಂದಾಗಿ ಇದು ತಿಳಿಯುವುದೂ ಇಲ್ಲ ಎಂಬುದು ಒಂದಾದರೆ, ಮತ್ತೊಂದು ಬಹುಮುಖ್ಯವಾಗಿ ಅವರೇ ಜಾತಿ ಹಾಗೂ ಧರ್ಮದ ಹಿನ್ನೆಲೆಯಿಂದ ಗುರುತಿಸಿರುವ ಅಸ್ಪೃಶ್ಯ ಸಮಾಜದ ಅಂಬೇಡ್ಕರ್ ಅವರು ಈ ಸೌಲಭ್ಯಗಳನ್ನು ನಮಗೆ ನೀಡಿದರು ಎಂಬ ಅವರ ಶಾಶ್ವತ ಅಂಧಕಾರದ ಮಾನಸಿಕ ಅಸ್ಪೃಶ್ಯತೆಯ ಮನಸ್ಸುಗಳೇ ಇದಕ್ಕೆ ಕಾರಣ.
ಮೀಸಲಾತಿ ಎಂಬ ವಿಷಯದಲ್ಲಿ ಶತಶತಮಾನಗಳಿಂದ “0” (ಸೊನ್ನೆ) ಆಗಿದ್ದ ದಲಿತರಿಗೆ 15+3=18 ರೂಪಾಯಿ ರೂಪದಲ್ಲಿ ಕೊಟ್ಟ ಮೀಸಲಾತಿ ಅತ್ಯಂತ ಹೆಚ್ಚು ಮೌಲ್ಯಯುತವಾದುದ್ದೆ. ಶತಶತಮಾನಗಳಿಂದಲೂ ದೇವರು ದೇವಾಲಯ ಹಾಗೂ ಅದರ ಸುತ್ತಲಿನ ಧರ್ಮದ ಹೆಸರಿನಲ್ಲಿ ನೂರಕ್ಕೆ ನೂರರಷ್ಟು ಮೀಸಲಾತಿಯನ್ನು ತಮ್ಮದಾಗಿಸಿಕೊಂಡು ಸ್ವ ಇಚ್ಛೆಯಿಂದ ತಮಗೆ ಬೇಕಾದಂತೆ ಅನುಭವಿಸುತ್ತಿದ್ದವರಿಗೆ 83%, ಅಂದರೆ ರೂಪಾಯಿ ಸೊನ್ನೆಗೆ ಸಮಾನವೇ ಸರಿ. ಏಕೆಂದರೆ, ಇಲ್ಲಿ ನೂರು ರೂಪಾಯಿ ಆಗಬೇಕಾದರೆ 15 ರೂಪಾಯಿಗಳ ಕೊರತೆ ಇದೆ. ಇದನ್ನು ಬಿಟ್ಟುಕೊಡಲು ಸಾಧ್ಯವಾಗದ – ಎರಡುವರೆ ಸಾವಿರ ವರ್ಷಗಳಿಂದ ಇದನ್ನು ಉಳಿಸಿಕೊಂಡು ಬಂದಿದ್ದ ಧರ್ಮ ಹಾಗೂ ಜಾತಿಯ ಅಹಂ ಮನಸ್ಸುಗಳಿಗೆ ನಮ್ಮ ಸಂವಿಧಾನ ಸಮಸಮಜಕ್ಕಾಗಿ ಉಲ್ಲೇಖ ಮಾಡುವ ಜಾತ್ಯತೀತತೆ ಹಾಗೂ ಸಮಾಜವಾದ ಎಂಬ ಪದಗಳನ್ನು ಸಂವಿಧಾನ ಬದ್ಧವಾಗಿ ಒಪ್ಪಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಈ ಪದಗಳನ್ನು ಮಾನಸಿಕವಾಗಿ ಜೀರ್ಣಿಸಿಕೊಳ್ಳಲು ಅವರಿಗೆ ಸದ್ಯದ ಮಟ್ಟಿಗೆ ಸಾಧ್ಯವಾಗುತ್ತಿಲ್ಲ. ಈ ಪದಗಳನ್ನು ಸಂವಿಧಾನದಲ್ಲಿ ತೆಗೆದರೆ ಮಾತ್ರ ನಾವು ನೂರಕ್ಕೆ ನೂರು ಮೀಸಲಾತಿಯನ್ನು ಪಡೆಯಬಹುದು ಎಂಬ ಭ್ರಮೆ ಅವರಿಗೆ. ಅವರಿಗೆ ಬೇಕಿರುವುದು ಜಾತೀಯತೆ ಹಾಗೂ ಅಸಮಾನ ಸಾಮಾಜಿಕ ಅನೀತಿ ಹಾಗೂ ಅಸ್ಪೃಶ್ಯತೆ ಎಂಬ ಶಾಶ್ವತ ಅಸಂವಿಧಾನಾತ್ಮಕ ಅಂಧಕಾರದ ಅಜ್ಞಾನದ ಬದುಕು. ಶತಶತಮಾನಗಳಿಂದ ಇದನ್ನೇ ಅಲ್ಲವೇ ಅವರು ಮಾಡಿಕೊಂಡು ಬಂದಿರುವುದು.

ಜಾತಿ ವ್ಯವಸ್ಥೆಯ ಕಟ್ಟುಪಾಡುಗಳು ಹಾಗೂ ಅಸಮಾಜ ನೀತಿಯ ಬೌದ್ಧಿಕ ದಾರಿದ್ರ್ಯವನ್ನು ಮೈಗೂಡಿಸಿಕೊಂಡಿರುವ ಇವರಿಗೆ ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು, ಜಾತ್ಯತೀತ, ಧರ್ಮ ನಿರಪೇಕ್ಷತೆ ಎಂಬ ವಾಸ್ತವದ ಪದಗಳೇ ಕಡು ವೈರಿಗಳು. ಇಂತಹ ಮಾನಸಿಕ ಅಸ್ಪೃಶ್ಯತೆಯ ವೈರತ್ವದ ಹಿನ್ನೆಲೆಯಿಂದ ಇವರು ಎರಡುವರೆ ಸಾವಿರ ವರ್ಷಗಳಿಂದ ಮೊದಲಗೊಂಡು ಇಂದಿನವರೆಗೂ ನಿಜ ಭಾರತೀಯರಾಗಲು ಸಾಧ್ಯವೇ ಆಗಿಲ್ಲ. ಇದರಿಂದ ಮುಕ್ತರಾಗುವವರೆಗೂ ಇವರು ಎಂದೆಂದಿಗೂ ಭಾರತೀಯರಾಗಲು ಸಾಧ್ಯವೇ ಇಲ್ಲ. ಏಕೆಂದರೆ ಇವರಲ್ಲಿ ರಾಷ್ಟ್ರಪ್ರೇಮಗಿಂತಲೂ ‘ ಜಾತಿ ‘ಪ್ರೇಮವೇ ಅಧಿಕವಾಗಿದೆ.
ಈಗ ನೀವೇ ಹೇಳಿ ಭಾರತೀಯರು ಎಂದರೆ ಯಾರು..?
ರಾಷ್ಟ್ರ ಪ್ರೇಮಿಗಳು ಎಂದರೆ ಯಾರು..?
ರಾಷ್ಟ್ರದ್ರೋಹಿಗಳು ಎಂದರೆ ಯಾರು..?
ಎರಡುವರೆ ಸಾವಿರ ವರ್ಷಗಳಿಂದ ಕಿಂಚಿತ್ತು ಮೀಸಲಾತಿಯನ್ನು ಪಡೆಯದೆ – ದುಡಿದು ಶ್ರಮದಿಂದ ರಾಷ್ಟ್ರವನ್ನು ಭದ್ರಬುನಾದಿಯ ಮೂಲಕ ಕಟ್ಟಿದವರೇ ಈ ನೆಲದ ರಾಷ್ಟ್ರ ಪ್ರೇಮಿಗಳಲ್ಲವೇ? ತಮಗೆ ಇಷ್ಟೆಲ್ಲ ಮಾನಸಿಕ ಹಾಗು ದೈಹಿಕ ತೊಂದರೆ ಕೊಟ್ಟರು ಸಹ ಎಂದಿಗೂ ತನ್ನ ದೇಶ ಹಾಗೂ ನೆಲದ ಬಗ್ಗೆ ಅಸಹಿಷ್ಣುತೆಯನ್ನು ಬಯಸದವರು ಈ ನೆಲದ ನಿಜವಾದ ರಾಷ್ಟ್ರೀಯತೆಯ ವಾರಸುದಾರರಲ್ಲವೇ?
ತಮಗೆ ಇಷ್ಟೆಲ್ಲ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದವರನ್ನು ಕಿಂಚಿತ್ತು ಶಪಿಸದೆ, ಬದಲಿಗೆ “ನಮ್ಮ ದಣಿಗಳು, ನಮ್ಮ ಸಾಹುಕಾರರು, ನಮ್ಮೂರ ಪಟೇಲರು, ನಮ್ಮೂರಿನ ಐನೋರು, ನಮ್ಮೂರಿನ ಗೌಡ್ರು” ಎಂದು ಅವರ ಗುಣಗಾನ ಮಾಡುತ್ತಾ – ತಮ್ಮ ಬಡತನವನ್ನು ಬಡತನ ಎಂದುಕೊಳ್ಳದೆ, ದುಡಿಮೆಯೇ ನಮ್ಮ ಆದ್ಯಕರ್ತವ್ಯ ಎಂದು ಭಾವಿಸಿ ತಮ್ಮ ಬೆವರಿನ ಮೂಲಕ ಅವರ ತೀರ್ಥದ ಬದುಕಿನ ಏಳ್ಗೆಯನ್ನು ಗೌರವದಿಂದ ಬಯಸಿದರಲ್ಲ 15+3=18 ಮೀಸಲಾತಿ ಪಡೆಯುತ್ತಿರುವ ಜನ ಇವರೇ ನಿಜವಾದ ರಾಷ್ಟ್ರೀಯ ವಾರಸುದಾರರು. ಇವರೇ ನಿಜವಾದ ರಾಷ್ಟ್ರೀಯವಾದಿಗಳು. ಧರ್ಮ – ದೇವರು – ದೇವಾಲಯ ಹಾಗೂ ದೇವಸುತ್ತ ನೋಡುವಂತಹ ಅಮಾನವೀಯ ಪದ್ಧತಿ ಕಟ್ಟುಪಾಡುಗಳ ಜನಕರು ರಾಷ್ಟ್ರೀಯವಾದಿಗಳಲ್ಲ. ಇವರು, ಇವರೇ ಬರೆದ ಇತಿಹಾಸದಲ್ಲಿ ತಮ್ಮನ್ನು ರಾಷ್ಟ್ರೀಯವಾದಿಗಳು ಎಂದು ಕರೆದುಕೊಂಡಿದ್ದಾರೆ. ನಾನು – ನಮ್ಮದು ಎಂಬ ರಾಷ್ಟ್ರದ ಪರಿಕಲ್ಪನೆ ಹುಟ್ಟದವರಿಗೆ ಹೇಗೆ ರಾಷ್ಟ್ರೀಯತೆ ಹುಟ್ಟಲು ಸಾಧ್ಯ..?
ತಮ್ಮ ಹೊಟ್ಟೆಗೆ ಅರೆಗಂಜಿಯನ್ನು ಕುಡಿದು – ಇವರ ದುಡಿಮೆಯ ಪಾಲನ್ನು ಕಿತ್ತುಕೊಂಡು ಹೊಟ್ಟೆ ತುಂಬ ಉಂಡು ಮೆರೆದವರ ಏಳಿಗೆಗಾಗಿಯೇ ಹಗಲಿರುಳು ಜೀತಗಾರಿಕೆಯ ಮೂಲಕ ಮೂಲಕ ಶ್ರಮಿಸಿದರಲ್ಲ. ಅವರು ಈ ನೆಲದ ನಿಜವಾದ ರಾಷ್ಟ್ರೀಯವಾದಿಗಳು. ಆದರೆ, ಇವರಿಂದ ದುಡಿಸಿಕೊಂಡು ನಾವು ಸ್ಪೃಶ್ಯರು – ನಾವು ಧಾರ್ಮಿಕವಾಗಿ ಶ್ರೇಷ್ಠ ಕುಲದವರು ಎಂದು ತಮಗೆ ತಾವೇ ಸ್ವಯಂ ಘೋಷಣೆ ಮಾಡಿಕೊಂಡವರಲ್ಲ ಅವರೇ ಈ ನೆಲದ ನಿಜ ರಾಷ್ಟ್ರದ್ರೋಹಿಗಳು. ಇಂದು ಪ್ರಜಾಪ್ರಭುತ್ವ ಭಾರತದಲ್ಲಿ ಜನರಿಂದ ಜನರಿಗಾಗಿ ರಚಿಸಿರುವ ಸಂವಿಧಾನದ ಆಶಯಗಳಿಗೆ ಕಿಂಚಿತ್ತು ಬೆಲೆ ಕೊಡದೆ – ಸಂವಿಧಾನಕ್ಕೆ ವಿರುದ್ಧವಾಗಿ ಜಾತೀಯತೆ ಮಾಡುವವರು ಹಾಗೂ ಸಮಸಮಾಜವನ್ನು ಬಯಸದವರು ಸಂವಿಧಾನದ ಪ್ರಕಾರ ನಿಜ ರಾಷ್ಟ್ರದ್ರೋಹಿಗಳು.
ಇವರು ಶತಶತಮಾನಗಳಿಂದ ಜಾತೀಯತೆಯನ್ನು ಕಾಪಾಡಿಕೊಂಡು ಬಂದವರು ಹಾಗೂ ಆ ಮೂಲಕ ಅಸಮಾಜವಾದವನ್ನು ಬಯಸಿದವರು. ಅದಕ್ಕೆ ಸಮಸಮಾಜ ಬಯಸುವ, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವವನ್ನು ಬಯಸುವ ಭಾರತ ಸಂವಿಧಾನವೇ ಇವರಿಗೆ ಇಷ್ಟ ಇಲ್ಲ.
ಇವರಿಗೆ ಇಷ್ಟವಾದ ಸಂವಿಧಾನ ಎರಡುವರೆ ಸಾವಿರ ವರ್ಷಗಳಿಂದ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ಭಾರತವನ್ನು ಭೌತಿಕವಾಗಿ ಹಾಗೂ ಬೌದ್ಧಿಕವಾಗಿ ಪ್ರಪಂಚದ ಮಟ್ಟದಲ್ಲಿ ಯಾವ ಮಟ್ಟದಲ್ಲಿ ಬಡತನಕ್ಕೆ ದೂಡಿತು ಎಂಬುದನ್ನು ಭಾರತದ ಚರಿತ್ರೆ ಸ್ಪಷ್ಟವಾಗಿ ನಮ್ಮ ಮುಂದೆ ದಾಖಲಿಸುತ್ತದೆ.
ಈ ದಾಖಲೆಗಳನ್ನು ತೆರೆದ ಕಣ್ಣಿನಿಂದ ನೋಡುವ – ನೋಡಿದ್ದನ್ನು ವಸ್ತುನಿಷ್ಠವಾಗಿ ದಾಖಲಿಸುವ – ದಾಖಲೆ ಮಾಡಿದ್ದನ್ನು ಮುಂದಿನ ಪೀಳಿಗೆಗೆ ಭೋದಿಸುವ ಜಾಣ್ಮೆ ನಿಜವಾದ ಭಾರತೀಯ ವಾರಸುದಾರರಿಗೆ ಬೇಕಾಗಿದೆ. ಈ ಜಾಣ್ಮೆಯ ಕೆಲಸವನ್ನೇ ಚಾಚು ತಪ್ಪದೇ ರಾಷ್ಟ್ರೀಯತೆಯ ದೃಷ್ಟಿಯಿಂದ ಎಲ್ಲೋ ಲೋಪವಾಗದ ಹಾಗೆ ಮಾಡಿದ್ದು ಬಾಬಾಸಾಹೇಬ್ ಡಾ ಬಿ ಆರ್ ಅಂಬೇಡ್ಕರ್ ಅವರು.
ಇದನ್ನೂ ಓದಿ ನಕಲಿ ಅಂಕಪಟ್ಟಿ, ನಕಲಿ ಪದವಿ, ನಕಲಿ ಸೇವಾ ದಾಖಲೆಯ ಆರೋಪಿ ರಾಣಿ ಚೆನ್ನಮ್ಮ ವಿವಿ ಕುಲಪತಿಯಾದದ್ದಾದರೂ ಹೇಗೆ?
ಅಂಬೇಡ್ಕರ್ ತತ್ವ ಸಿದ್ಧಾಂತ ಹಾಗೂ ಅವರ ಸಮಸಮಾಜ ನಿರ್ಮಾಣದ ಸಂವಿಧಾನವನ್ನು ಒಪ್ಪದವರು ತಮ್ಮ ಪಾರಂಪರಿಕ ಅಜ್ಞಾನದ ಅಜೆಂಡದಲ್ಲಿಯೇ ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಆ ಸಂಘಟನೆ ಮೂಲಕ ಸಂವಿಧಾನವನ್ನೇ ವಿರೋಧಿಸುವ ಮಟ್ಟಕ್ಕೆ ಬಂದಿರುವುದು ದುರಂತ. 75 ವರ್ಷಗಳಿಂದಲೂ ಮೊದಲಗೊಂಡು ನಿರಂತರವಾಗಿ ಇದನ್ನೇ ಬಯಸುವ ಹಾಗೂ ಹಂಬಲಿಸುವ ಜನ ವರ್ಗ ಭಾರತ ಸಂವಿಧಾನದಲ್ಲಿ ಅಡಕವಾಗಿರುವ ಜಾತ್ಯತೀತತೆ ಹಾಗೂ ಸಮಾಜವಾದ ಎಂಬ ಪದಗಳನ್ನು ಒಪ್ಪುತ್ತಿಲ್ಲ. ಇದು ಸಹಜವಾದ ಪ್ರಕ್ರಿಯೆ ಹೌದು. ಇಂಥವರಿಂದ ಇನ್ನೇನನ್ನು ತಾನೇ ನಿರೀಕ್ಷಿಸಲು ಸಾಧ್ಯ.
ಈ ವಿಷಯದಲ್ಲಿ ಮಾತ್ರ ಈ ನೆಲದ ವಾರಸುದಾರರು ಹಾಗೂ ರಾಷ್ಟ್ರೀಯ ನಿಜ ಚರಿತ್ರೆಯನ್ನು ಬರವಣಿಗೆ ಮಾಡಬೇಕಾದವರು ಇತಿಹಾಸವನ್ನು ಮರೆಯದೆ ಇತಿಹಾಸವನ್ನು ವಸ್ತುನಿಷ್ಠವಾಗಿ ನಿರ್ಮಿಸಬೇಕಾಗಿದೆ. ಅದೇ ಅಂಬೇಡ್ಕರ್ ವಾದ, ಅಂಬೇಡ್ಕರ್ ಅವರು ಬಯಸಿದ ಭಾರತ.

ಎನ್ ಚಿನ್ನಸ್ವಾಮಿ ಸೋಸಲೆ
ಪ್ರಾಧ್ಯಾಪಕ, ಲೇಖಕ