ನುಡಿ ನಮನ | ಮನೋಹರವಾಗಿ ಗ್ರಂಥಮಾಲೆ ಕಟ್ಟಿದವರು ರಮಾಕಾಂತ ಜೋಶಿ

Date:

Advertisements

ರಮಾಕಾಂತ ಜೋಶಿ ಇದೇ ಮೇ 17, 2025ರಂದು ತಮ್ಮ 89ನೇ ವಯಸ್ಸಿನಲ್ಲಿ ತೀರಿಕೊಂಡರು. ವಯೋಸಹಜ ಬಾಧೆಗಳಿದ್ದರೂ ಆರೇಳು ತಿಂಗಳ ಹಿಂದೆ, ಡಾ ಆಮೂರ ಅವರ ಜನ್ಮಶತಮಾನೋತ್ಸವದ ಪ್ರಾರಂಭೋತ್ಸವದಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು. ಉತ್ಸಾಹ ಕುಂದಿರಲಿಲ್ಲ. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆಂದು ಭಾವಿಸಿರಲಿಲ್ಲ.

ಮೂರು ಪೀಳಿಗೆಯವರೆಗೆ ನನಗೆ ಮನೋಹರ ಗ್ರಂಥಮಾಲೆಯ ಸಂಪರ್ಕ ಇದೆ. ನಾನು 1967ರಿಂದ ಹುನಗುಂದ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯಲ್ಲಿ ತೊಡಗಿದಾಗಿನಿಂದ ರಮಾಕಾಂತ ಅವರ ತಂದೆ ಜಿ.ಬಿ.ಜೋಶಿ ಅವರು ಹುನಗುಂದಕ್ಕೆ ತಮ್ಮ ಗ್ರಂಥಮಾಲೆಯ ಪುಸ್ತಕಗಳ ಗಂಟನ್ನು ಹೊತ್ತು ಕೊಂಡು ಬರುತ್ತಿದ್ದರು. ನಾನೊಬ್ಬ ಹಳೆಯ ಚಂದಾದಾರನಾಗಿದ್ದರಿಂದ ಸೀದಾ ನಮ್ಮ ಮನೆಗೆ ಬರುತ್ತಿದ್ದರು. ಅವರನ್ನು ಆಸಕ್ತರ ಬಳಿಗೆ ಕರೆದುಕೊಂಡು ಹೋಗುತ್ತಿದ್ದೆ. ಉದ್ರಿಯೋ ರೋಖೋ ಅಂತೂ ಆಸಕ್ತರು ಓದಿದರೆ ಸಾಕು ಎಂಬುದು ಅವರ ಮನೋಭಾವವಾಗಿತ್ತು. ಹಾಗೆ ಅವರು ಮಾಲೆಯನ್ನು ಕಟ್ಟಿದರು, ಬೆಳೆಯಿಸಿದರು.

1993ರಲ್ಲಿ ಅವರ ನಿಧನದ ನಂತರ ಮಾಲೆಯ ಜವಾಬ್ದಾರಿಯನ್ನು ರಮಾಕಾಂತ ಅವರು ವಹಿಸಿಕೊಂಡು ಮುನ್ನಡೆಯಿಸುತ್ತ ಬಂದರು. ಕುರ್ತಕೋಟಿ ಅವರಿಂದಾಗಿ ಮಾಲೆಯ ಅಟ್ಟ ಚಿಂತಕರ ಚಾವಡಿಯಾಗಿ ಪ್ರತೀತವಾಯಿತು. ಕುರ್ತಕೋಟಿ, ಕಾರ್ನಾಡ, ಗಿರಡ್ಡಿ ಸಲಹೆಗಾರರಾಗಿ ಮಾಲೆಯ ಗುಣಮಟ್ಟವನ್ನು, ಅದರ ಘನತೆಯನ್ನು ಕಾಯ್ದುಕೊಂಡು ಬಂದರು. ರಮಾಕಾಂತ ಅವರು ಕಿಟಲ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದುಕೊಂಡು ಮಾಲೆಯ ಜವಾಬ್ದಾರಿಯನ್ನು ನಿರ್ವಹಿಸಬೇಕಿದ್ದರಿಂದ ಅವರು ಊರೂರು ಸುತ್ತುವುದನ್ನು ಬಿಡಬೇಕಾಯಿತು. ಹಳೆಯ ಚಂದಾದಾರರನ್ನು ಉಳಿಸಿಕೊಂಡು ತಮ್ಮ ವೃತ್ತಿ ಬಾಂಧವ್ಯದ ಮೂಲಕ, ಪತ್ರ ವ್ಯವಹಾರ ಮೂಲಕ ಇನ್ನಷ್ಟು ಚಂದಾದಾರರ ಬಳಗವನ್ನು ವಿಸ್ತರಿಸಿದರು. ಮನೋಹರ ಗ್ರಂಥಮಾಲೆ ಸದಭಿರುಚಿಯ ಸಾಹಿತ್ಯಕ್ಕೆ ಹೆಸರಾಯಿತು.

Advertisements

ರಮಾಕಾಂತ ಅವರು ಇದೇ ಮೇ 17, 2025ರಂದು ತಮ್ಮ 89ನೇ ವಯಸ್ಸಿನಲ್ಲಿ ತೀರಿಕೊಂಡರು. ವಯೋಸಹಜ ಬಾಧೆಗಳಿದ್ದರೂ ಆರೇಳು ತಿಂಗಳ ಹಿಂದೆ, ಡಾ ಆಮೂರ ಅವರ ಜನ್ಮಶತಮಾನೋತ್ಸವದ ಪ್ರಾರಂಭೋತ್ಸವದಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು. ಅವರ ಉತ್ಸಾಹ ಕುಂದಿರಲಿಲ್ಲ. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆಂದು ನಾನು ಭಾವಿಸಿರಲಿಲ್ಲ. ಅವರು ನನಗಿಂತ ಒಂಬತ್ತು ವರ್ಷ ಹಿರಿಯರಾಗಿದ್ದರೂ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ನನಗೆ ಒಂದು ವರ್ಷ ಜೂನಿಯರ್‌. ನಾವಿಬ್ಬರೂ ಇಂಗ್ಲಿಷ್ ವಿಭಾಗದ ವಿದ್ಯಾರ್ಥಿಗಳಾಗಿದ್ದರಿಂದ ಆಗಾಗ ಭೇಟಿ ಆಗುತ್ತಿದ್ದೆವು. ಮಾತುಕತೆ ಕಮ್ಮಿಯೇ. ಅವರು ಕ್ಲಾಸು ಮುಗಿಯುತ್ತಲೇ ಹೊರಟುಬಿಡುತ್ತಿದ್ದರು.

ಇಂಗ್ಲಿಷ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ನಮಗೆ ಬಿ.ಎ. ಜೂನಿಯರ್‌ ಕ್ಲಾಸ್ ದವರು ಫೇರ್‌ವೆಲ್ ಕಾರ್ಯ ಕ್ರಮ ಏರ್ಪಡಿಸಿದ್ದ(1964-65) ಪ್ರಸಂಗವನ್ನು ನನ್ನ ಬಳಿ ಇದ್ದ ಒಂದು ಫೋಟೊ ಈಚೆಗೆ ನೆನಪಿಸಿತು. ಅದನ್ನು ರಮಾಕಾಂತ ಅವರಿಗೆ ತೋರಿಸಿದಾಗ ಹಳೆಯ ನೆನಪುಗಳು ಮರುಕಳಿಸಿ ಖುಷಿಪಟ್ಟರು. ಅವರ ಮಗ ಸಮೀರ ಅದರಲ್ಲಿ ನನ್ನನ್ನು, ತಮ್ಮ ತಂದೆಯನ್ನು ಗುರುತಿಸಲು ಕಷ್ಟಪಡಬೇಕಾಯಿತು. ಕಾಲದ ಮಹಿಮೆ!

ಅವರು ಎಂಎಗೆ ಗುಜರಾತಿನ ಆನಂದ ವಿಶ್ವವಿದ್ಯಾಲಯಕ್ಕೆ ಹೋದರು. ಪಿ.ಎಚ್.ಡಿ.ಯನ್ನೂ ಅಲ್ಲಿಂದಲೇ ಮಾಡಿದರು. ಕುರ್ತಕೋಟಿ ಅವರ ಮಾರ್ಗದರ್ಶನ ದಲ್ಲಿ ತಮ್ಮ ಉನ್ನತ ಅಧ್ಯಯನವನ್ನು ಪೂರೈಸಿದರು. ನಾನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ.ಮುಗಿಸಿ ಹುನಗುಂದ ಕಾಲೇಜಿನಲ್ಲಿ ಅಧ್ಯಾಪಕನಾದೆ. ಮಾಲೆಯ ಪ್ರಕಟಣೆಗಳ ಮೂಲಕ ಸಂಬಂಧ ಮಾತ್ರ ಮುಂದುವರೆದಿತ್ತು. ನಾನು ಹುನಗುಂದದಲ್ಲಿ ನೀನಾಸಂ ನೆರವಿನಿಂದ ಟಿ.ಪಿ.ಅಶೋಕ ಅವರ ಮೂಲಕ ಸಾಹಿತ್ಯ ಶಿಬಿರಗಳನ್ನು ಸಂಘಟಿಸುತ್ತಿದ್ದೆ. ರಮಾಕಾಂತ ಒಮ್ಮೆ ಕುರ್ತಕೋಟಿಯವರ ಜೊತೆಗೆ ಹುನಗುಂದಕ್ಕೆ ಬಂದ ನೆನಪು. ಆ ಬಳಿಕ ವಿಜಯಪುರದಲ್ಲಿ ಅವರು ಪ್ರಿ. ಜಿ.ಬಿ.ಸಜ್ಜನ ಅವರ ಅಭಿನಂದನ ಸಮಾರಂಭಕ್ಕೆ ಕುರ್ತಕೋಟಿ ಅವರೊಂದಿಗೆ ಬಂದಾಗ ಭೇಟಿ. ಕುರ್ತಕೋಟಿ ಅವರು ಆಗಷ್ಟೇ ಬಂದಿದ್ದ ನನ್ನ ‘ಹವನ’ ಕಾದಂಬರಿ ಓದಿದ್ದನ್ನು ನೆನಪಿಸುತ್ತ ಅಲ್ಲಿಯೇ ಇದ್ದ ರಮಾಕಾಂತ ಅವರಿಗೆ ‘ಇವರಿಂದ ಮಾಲೆಗೆ ಕಾದಂಬರಿ ಬರೆಯಿಸಬೇಕು’ ಎಂದು ಸೂಚಿಸಿದರು.

ಮನೋಹರ ಗ್ರಂಥಮಾಲೆ
ಮನೋಹರ ಗ್ರಂಥಮಾಲೆ ಮಳಿಗೆಯಲ್ಲಿ ಗಿರೀಶ್‌ ಕಾರ್ನಾಡ್‌

ಅದೆಷ್ಟೋ ವರ್ಷಗಳ ನಂತರ ನಾನು ಧಾರವಾಡದ ಆಕರ್ಷಣೆಯಿಂದಾಗಿ,ನನ್ನ ಚಿಕ್ಕಪ್ಪ ಪಂಚಾಕ್ಷರಿ ಹಿರೇಮಠ ಅವರ ಒತ್ತಾಸೆಯಿಂದಾಗಿ ನಿವೃತ್ತಿಯ ನಂತರ 2004ರಲ್ಲಿ ಧಾರವಾಡಕ್ಕೆ ಬಂದು ನೆಲೆಸಿದೆ. ಆಗಲೇ ಕುರ್ತಕೋಟಿಯವರು ಇಹಲೋಕವನ್ನು ತ್ಯಜಿಸಿದ್ದರು.ಅಟ್ಟ ಅವರ ಹರಟೆಯಿಂದಾಗಿ ಜೀವಂತಗೊಳ್ಳುತ್ತಿದ್ದುದನ್ನು ಕೇಳಿದ್ದೆ. ಆ ಅವಕಾಶ ನನಗಿರಲಿಲ್ಲ. ಆದರೆ ಹುನಗುಂದಕ್ಕೆ ಬಂದಾಗಲೆಲ್ಲ ಅವರ ನಿರಾತಂಕ ಮಾತು ಕೇಳಿ ಆಸ್ವಾದಿಸಿದ್ದಿದೆ.

ನಾನು ಗಿರಡ್ಡಿ ಗೋವಿಂದರಾಜ ಅವರೊಂದಿಗಿನ ಬಾಂಧವ್ಯದಿಂದಾಗಿ ಅಟ್ಟಕ್ಕೆ ಆಗಾಗ ಹೋಗಬೇಕಾಯಿತು. ಆಗಲೇ ರಮಾಕಾಂತ ತಮ್ಮ ಬಹಳಷ್ಟು ಜವಾಬ್ದಾರಿಗಳನ್ನು ಸಮೀರಗೆ ವರ್ಗಾಯಿಸಿದ್ದರು. ನಾವು ಹರಟುತ್ತ ಕುಂತರೂ ಅದನ್ನು ಕೇಳುತ್ತಲೇ ಅವರು ಪ್ರೂಫ್ ನೋಡುತ್ತಲೋ, ಪತ್ರ ವ್ಯವಹಾರದಲ್ಲೋ ನಿರತರಾಗಿರುತ್ತಿದ್ದರು. ಸಮೀರ ಏನಾದರೂ ತಿಂಡಿ ತಿನಿಸುಗಳನ್ನು ಆರ್ಡರ್ ಮಾಡಿದಾಗ ಆ ಸಮಾರಾಧನೆಯಲ್ಲಿ ಸೇರುತ್ತ ಅವರು ತಮ್ಮ ಹಿಂದಿನ ನೆನಪುಗಳನ್ನು ವಿಶೇಷವಾಗಿ ತಮ್ಮ ತಂದೆಯ ಬಗ್ಗೆ, ಕುರ್ತಕೋಟಿ ಅವರ ಬಗ್ಗೆ ಕಾರ್ನಾಡರ ಬಗ್ಗೆ ಹಂಚಿಕೊಳ್ಳುತ್ತಿದ್ದರು. ಅವರು ಬಹಳ ಶಿಸ್ತಿನ ವ್ಯಕ್ತಿ. ಕೆಲಸದಲ್ಲಿ ಅಚ್ಚುಕಟ್ಟು. ಶಾಂತ, ನಿರ್ವುದ್ವಿಗ್ನ ವ್ಯಕ್ತಿತ್ವ. ಗಡಿಬಿಡಿ ಗೊಂದಲಗಳಿಗೆ ಅವಕಾಶವೇ ಇರುತ್ತಿರಲಿಲ್ಲ. ಅವರು ತಮ್ಮ ನೆನಪಿನ ಭಂಡಾರದಿಂದ ಮಾತಾಡುವಾಗಲೆಲ್ಲ ನಿರ್ದಿಷ್ಟವಾಗಿ, ಖಚಿತವಾಗಿ, ಗಟ್ಟಿಯಾಗಿ ಮಾತಾಡುತ್ತಿದ್ದರು. ಭಾಷಣಕ್ಕೆ ನಿಂತರೂ ಹಾಗೆಯೇ. ಆದರೆ ವೇದಿಕೆಯ ಮೇಲೇರಲು, ಭಾಷಣಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಈಚೀಚೆಗೆ ಸಮೀರನ ಆಗ್ರಹದಿಂದ ಅವರು ವೇದಿಕೆಗೆ ಬಂದಂತೆ ತೋರುತ್ತಿತ್ತು. ಆದರೆ ಈ ಸಮೀರನಾದರೂ ವೇದಿಕೆಯ ಮೇಲೆ ಬರಲು ಹಾಗೆಯೇ ಹಿಂದೇಟು. ಎಲ್ಲಾ ಹಿಂದೆ ನಿಂತು ಸಮರ್ಥ ವಾಗಿ ಸಂಘಟಿಸಿದರೂ ಮುಂದೆ ಬಂದು ವಿಜೃಂಭಿಸುವ ಜಾಯಮಾನದವರಲ್ಲ. ಕ್ರಿಯಾಶೀಲ ವ್ಯಕ್ತಿ.

ಈಚೀಚೆಗೆ ಪೂರ್ತಿಯಾಗಿ ಸಮೀರ ಜವಾಬ್ದಾರಿ ವಹಿಸಿಕೊಂಡಿದ್ದರೂ ವಿಶೇಷ ಸಂದರ್ಭಗಳಲ್ಲಿ ರಮಾಕಾಂತ ಅಟ್ಟಕ್ಕೆ ಬರುತ್ತಿದ್ದರು. ವಯಸ್ಸಾದವರು ಈ ಅಟ್ಟದ ಕಡಿದಾದ ಪಾವಟಿಗೆ ಏರಿ ಬರಬೇಕೆಂದರೆ ಸಾಹಸವೇ. ಅವರು ತಮ್ಮ ಎಂಬತ್ತೆಂಟರ ವಯಸ್ಸಿನಲ್ಲೂ ದೃಢವಾದ ಹೆಜ್ಜೆ ಇಡುತ್ತ ಹತ್ತಿ ಬರುತ್ತಿದ್ದರು.ಹಾಗೇ ನೆನಪಾಗುವುದು ಈ ಹಿಂದೆ ಹಿರಿಯರಾದ ವಯಸ್ಸಾದ ಆಮೂರವರು, ಕಣವಿಯವರು, ಕಲಬುರ್ಗಿಯವರು ಕಡಿದಾದ ಈ ಬೆಟ್ಟ ಏರಿ ಸಾಹಿತ್ಯ ಸಂಭ್ರಮದ ಮೀಟಿಂಗ್ ಗಳಿಗೆ ಬರುತ್ತಿದ್ದುದು. ಗಿರಡ್ಡಿಯವರು ವಹಿಸಿದ ಸಾಹಿತ್ಯ ಸಂಭ್ರಮದ ಕೆಲಸವನ್ನೂ ತಮ್ಮ ಮಾಲೆಯ ಕೆಲಸದೊಂದಿಗೆ ರಮಾಕಾಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದುದು ನೆನಪಾಗುತ್ತದೆ.

ಅವರು ಕುರ್ತಕೋಟಿಯವರ ಸಲಹೆ ನೆನಪಿಟ್ಟುಕೊಂಡು ವಿಶ್ವಾಸದಿಂದ ನನಗೆ ಕಾದಂಬರಿ ಬರೆದುಕೊಡಲು ಕೇಳಿದರು.’ಸದ್ಯ ಸಣ್ಣ ಕಥೆಗಳಿವೆ’ ಎಂದು ಅವನ್ನು ಕೊಟ್ಟಾಗ, ರಮಾಕಾಂತ ಅವರು ಗಿರಡ್ಡಿ ಅವರೊಂದಿಗೆ ಚರ್ಚಿಸಿ ಹಸ್ತಪ್ರತಿ ಪ್ರಕಟಿಸಲು ಮುಂದಾದರು. ಇದನ್ನು ‘ಮೊಲೆವಾಲು ನಂಜಾಗಿ’ ಕಥೆಗಳ ಸಂಕಲನದಲ್ಲಿ ಪ್ರಕಾಶಕರ ಮಾತಿನಲ್ಲಿ (2010) ರಮಾಕಾಂತ ನಮೂದಿಸಿದ್ದಾರೆ. ಅದರ ಎರಡನೇ ಮುದ್ರಣವನ್ನೂ(2016) ತಂದರು. ಇದಾಗಿ ಹನ್ನೊಂದು ವರ್ಷಗಳ ನಂತರ 2021ರಲ್ಲಿ ‘ಹಾವಳಿ’ ಕಾದಂಬರಿಯನ್ನು ಅವರಿಗೆ ನಾನು ಕೊಡಲು ಸಾಧ್ಯವಾಯಿತು. ಬರೆಯುತ್ತಿದ್ದಂತೆ ಎಷ್ಟು ಪುಟ ಆಗಬಹುದು ಎಂದಾಗ ಸುಮಾರು ಇನ್ನೂರು ಪುಟ ಆದೀತು ಎಂದಿದ್ದೆ. ಅವರು ಚಂದಾದಾರರಿಗೆ ಭರವಸೆ ಕೊಟ್ಟಿರುವ ಪ್ರಕಾರ ವರ್ಷದ ಪುಸ್ತಕಗಳನ್ನು ನಿಗದಿಗೊಳಿಸಿಕೊಂಡು ನನ್ನ ಎರಡು ನೂರು ಪುಟಗಳ ಹಸ್ತಪ್ರತಿಗಾಗಿ ಕಾಯುತ್ತಿದ್ದರು. ನನಗೆ ಅವರು ಕೊಟ್ಟಿರುವ ಕಾಲಾವಧಿ ಮೀರಿ ಹೋಗಿತ್ತು. ಆದರೆ ಬರೆಯುತ್ತ ನನ್ನ ಕೈಮೀರಿ ಕಾದಂಬರಿ ಸುಮಾರು 400 ಪುಟಗಳಷ್ಟು ಆಯಿತು. ಆದರೆ ಅವರು ಓದಿ ಮೆಚ್ಚಿಕೊಂಡು ಪ್ರಕಟಿಸುವುದಾಗಿ ಹೇಳಿದಾಗ ಸಂತೋಷಪಟ್ಟೆ. ಅದಕ್ಕೆ ಮಾಸ್ತಿ ಪ್ರಶಸ್ತಿ (2022)ಬಂದಾಗ ಲೇಖಕರೊಂದಿಗೆ ಪ್ರಕಾಶಕರಿಗೂ ಪ್ರಶಸ್ತಿ ಇರುವುದರಿಂದ ತಮ್ಮ 85ನೇ ವಯಸ್ಸಿನಲ್ಲಿ ಬೆಂಗಳೂರಿಗೆ ತಮ್ಮ ಶ್ರೀಮತಿ ಅವರೊಂದಿಗೆ ಬಂದು ಸಮಾರಂಭದಲ್ಲಿ ಭಾಗವಹಿಸಿದರು. ‘ಹಿರೇಮಠರ ಪುಸ್ತಕಕ್ಕೆ ಪ್ರಶಸ್ತಿ ಬಂದಿರುವುದರಿಂದ ಪ್ರಕಾಶನಕ್ಕೂ ಮಾಸ್ತಿ ಪ್ರಶಸ್ತಿ ಮೊದಲ ಸಲ ಬಂದಿತು’ ಎಂದು ಹೇಳಿದಾಗ ನಾನು ನನ್ನ ಮಾತಿನಲ್ಲಿ ‘ಪ್ರಕಾಶಕರು ಪ್ರಕಟಿಸಿದ್ದರಿಂದಾಗಿ ‘ಹಾವಳಿ’ ಕಾದಂಬರಿಗೆ ಈ ಪ್ರಶಸ್ತಿ ಬಂದಿತು’ ಎಂದು ಪ್ರಕಾಶಕರಿಗೆ ನನ್ನ ಕೃತಜ್ಞತೆ ಸಲ್ಲಿಸಿದೆ. ಯಾವುದೇ ಕೃತಿ ಅವರಿಗೆ ಪಸಂದ ಅನಿಸಿದಾಗ ಅವರು ತಮ್ಮ ಮೆಚ್ಚುಗೆಯನ್ನು ಮನಸಾರೆ ವ್ಯಕ್ತಪಡಿಸುತ್ತಿದ್ದರು. ಗುಣಗ್ರಾಹಿಗಳಾಗಿದ್ದರು. ಆದರೆ ಪರಿಚಯಸ್ತರು ಎಂದ ಮಾತ್ರಕ್ಕೇ ಪುಸ್ತಕ ಪ್ರಕಟಣೆಗೆ ಒಪ್ಪಿಕೊಳ್ಳುತ್ತಿರಲಿಲ್ಲ.

ಇದನ್ನೂ ಓದಿ ಗಡಿ ಭದ್ರತಾ ಪಡೆ ರಕ್ಷಣೆ ನೀಡದೆ ಜನರ ಜೀವ ತೆಗೆದಿದ್ದು ಮೋದಿ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ ಆರೋಪ

ಗ್ರಂಥ ಮಾಲೆಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ದಿಲ್ಲಿಯ ಭಾರತೀಯ ಪ್ರಕಾಶಕರ ಒಕ್ಕೂಟದ ವಿಶಿಷ್ಟ ಪ್ರಕಾಶಕರ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ 2007ರ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ, ಕಸಾಪ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ -ಇವು ಅದರ ಅರ್ಹತೆಗೆ ಸಂದಿರುವ ಗೌರವಗಳು. ಇವುಗಳ ಹಿಂದೆ ಅವರ ಪರಿಶ್ರಮ ಇದೆ. ಸಾಹಿತ್ಯದ ಸದಭಿರುಚಿ ಇದೆ. ದೀನಾನಾಥ ಮನ್ಹೋತ್ರಾ ಅವರು ಇಂಗ್ಲೀಷಿನಲ್ಲಿ ಬರೆದ ಬುಕ್ ಪಬ್ಲಿಷಿಂಗ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಈ ಪ್ರಕಾಶನ ಸಂಸ್ಥೆ ಯನ್ನು ಬೆಳೆಯಿಸಿ, ಸಮರ್ಥವಾಗಿ ಮುನ್ನಡೆಯಿಸಿದ ಹಿರಿಯರು ಈಗಿಲ್ಲ. ಮೆಣಸಿನಕಾಯಿ ಓಣಿಯಲ್ಲಿಯ ಅವರ ಮನೆ, ಅಟ್ಟ ಈ ಹಿರಿಯರಿಲ್ಲದೆ ಈಗ ಖಾಲಿ, ಖಾಲಿ. ಆದರೆ ಅವರು ತೋರುತ್ತಿದ್ದ ಸಮಾಧಾನ, ಸಮಚಿತ್ತ ಗುಣಗಳಲ್ಲಿ, ಅವರು ಬೆಳೆಯಿಸಿದ ಪ್ರಕಾಶನ ಸಂಸ್ಥೆಯಲ್ಲಿ ನಾವು ಅವರನ್ನು ಕಾಣುತ್ತಿರಬೇಕು. ಅವರಿಗೆ ನನ್ನ ಭಾವಪೂರ್ಣ ನುಡಿ ನಮನಗಳು.

ಮಲ್ಲಿಕಾರ್ಜುನ ಹಿರೇಮಠ
ಮಲ್ಲಿಕಾರ್ಜುನ ಹಿರೇಮಠ್‌
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X