ಮೋದಿ ಆಡಳಿತ ಪರ್ವದಲ್ಲಿ ಕಾರ್ಪೊರೇಟ್ ಹಿತಗಳೇ ಪರಮ ಎನಿಸಿವೆ. ಈ ಹಿತಾಸಕ್ತಿಯನ್ನು ಕಾಪಾಡಲು ಯಾವ ಬೆಲೆಯನ್ನಾದರೂ ತೆರಲು ಸಿದ್ಧ ಎಂಬುದು ಸರ್ಕಾರದ ಅಧಿಕೃತ ನೀತಿಯೇ ಆಗಿ ಹೋಗಿರುವುದು ದುರಂತ. ಆದಿವಾಸಿಗಳು ಈ ದೇಶದಲ್ಲಿ ಜನಸಾಮಾನ್ಯರಿಗಿಂತ ಅಧಿಕವಾಗಿ ತಬ್ಬಲಿಗಳಾಗುತ್ತಿದ್ದಾರೆ. ಅವರ ಹಕ್ಕುಗಳಿಗೆ ಯಾವ ಬೆಲೆಯೂ ಇಲ್ಲದಂತೆ ಅವುಗಳನ್ನು ಮನಸೇಚ್ಛೆ ತುಳಿಯಲಾಗುತ್ತಿದೆ. ಕಾರ್ಪೊರೇಟ್ ಬಂಡವಾಳಶಾಹಿಗಳ ಹಿತಾಸಕ್ತಿಗಳೇ ಮೇಲುಗೈ ಸಾಧಿಸುತ್ತಿವೆ ಎಂಬುದಕ್ಕೆ ಸಿಜಿಮಲಿ ಆದಿವಾಸಿಗಳ ಹೋರಾಟ ಮತ್ತು ಅವರ ಸೋಲು ಮತ್ತೊಂದು ದುರಂತ ಉದಾಹರಣೆಗಳ ಸರಣಿಗೆ ಸಂದು ಹೋಗುತ್ತಿದೆ. ಉನ್ನತ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟದ ಮೂಲಕವಾದರೂ ನಮಗೆ ಕೊನೆಯ ಗಳಿಗೆಯಲ್ಲಿ ನ್ಯಾಯ ಸಿಗಬಹುದು ಎಂಬ ಒಂದು ಸಣ್ಣ ಭರವಸೆ ಮಾತ್ರ ಈಗ ಹೋರಾಟಗಾರರಲ್ಲಿ ಉಳಿದಿದೆ
ಒಡಿಶಾದ ರಾಯಗಡ ಜಿಲ್ಲೆಯ ಅಮಾಯಕ ಆದಿವಾಸಿಗಳು ತಮ್ಮ ನೆಲ, ಜಲ ಮತ್ತು ಕಾಡಿನ ಉಳಿವಿಗಾಗಿ ಕಳೆದ ಮೂರು ವರ್ಷಗಳಿಂದ ನಡೆಸುತ್ತಿದ್ದ ನಿರಂತರ ಹಾಗೂ ಅಹಿಂಸಾತ್ಮಕ ಹೋರಾಟ ಕೊನೆಗೂ ನೀರುಪಾಲಾಗಿದೆ. ಬಹುರಾಷ್ಟ್ರೀಯ ಗಣಿಗಾರಿಕಾ ದೈತ್ಯ ಕಂಪನಿ ‘ವೇದಾಂತ’ದ ಬೃಹತ್ ಬಾಕ್ಸೈಟ್ ಗಣಿಗಾರಿಕೆ ಯೋಜನೆಯ ವಿರುದ್ಧ ತಿರುಗಿಬಿದ್ದಿದ್ದ ಮೂಲನಿವಾಸಿಗಳ ಕೂಗನ್ನು ವ್ಯವಸ್ಥೆಯು ಅರಣ್ಯರೋದನ ಆಗಿಸಿದೆ. ಕೇವಲ ಆರ್ಥಿಕ ‘ಅಭಿವೃದ್ಧಿ’ ಹಾಗೂ ‘ಕೈಗಾರಿಕೀಕರಣ’ದ ಹೆಸರಿನಲ್ಲಿ ಒಡಿಶಾ ರಾಜ್ಯ ಸರ್ಕಾರವು ಗಣಿಗಾರಿಕೆ ಪ್ರಕ್ರಿಯೆಗಳಿಗೆ ಮುಕ್ತ ಅವಕಾಶ ಕಲ್ಪಿಸಿಕೊಡುವ ಮೂಲಕ ಆದಿವಾಸಿಗಳ ಬದುಕಿನ ಹಕ್ಕನ್ನು ಕಸಿದುಕೊಂಡಿದೆ.
ರಾಯಗಡ ಹಾಗೂ ಕಾಲಹಂಡಿ ಜಿಲ್ಲೆಗಳ ಗಡಿಭಾಗದಲ್ಲಿ ಹಬ್ಬಿರುವ ಹಸಿರು ಸಿರಿಭರಿತ ಸಿಜಿಮಲಿ ಗುಡ್ಡವು ಅಪಾರ ಪ್ರಮಾಣದ ಅತ್ಯಮೂಲ್ಯ ಖನಿಜ ಸಂಪತ್ತನ್ನು ತನ್ನ ಒಡಲಿನಲ್ಲಿ ಬಚ್ಚಿಟ್ಟುಕೊಂಡಿದೆ. ಈ ನಿಸರ್ಗ ಗಿರಿಶಿಖರದ ತುದಿಯಿಂದ ಬರೋಬ್ಬರಿ 31.10 ಕೋಟಿ ಟನ್ ಬಾಕ್ಸೈಟ್ ಅದಿರನ್ನು ಅಗೆದು ಹೊರತೆಗೆಯಲು ವೇದಾಂತ ಕಂಪನಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಅಗಾಧ ಪ್ರಮಾಣದ ಅದಿರನ್ನು ಗಣಿಯಿಂದ ಕೆಳಗೆ ಸಾಗಿಸಲು ಅತ್ಯಗತ್ಯವಾಗಿರುವ 4.99 ಹೆಕ್ಟೇರ್ ದಟ್ಟ ಅರಣ್ಯ ಪ್ರದೇಶದಲ್ಲಿ ಬೃಹತ್ ಸಂಪರ್ಕ ರಸ್ತೆ ನಿರ್ಮಿಸಲು ಒಡಿಶಾ ರಾಜ್ಯ ಸರ್ಕಾರವು ಇದೀಗ ಅಧಿಕೃತವಾಗಿ ಸಮ್ಮತಿ ಸೂಚಿಸಿದೆ.
ಸಿಜಿಮಲಿ ಗುಡ್ಡ ಎಂದರೆ ಅದು ಕೇವಲ ಕಲ್ಲು, ಮಣ್ಣು ಹಾಗೂ ಸಸ್ಯರಾಶಿಯಲ್ಲ; ಬದಲಾಗಿ ಅದು ಅಲ್ಲಿನ ಆದಿವಾಸಿಗಳ ಪಾಲಿಗೆ ತಲೆತಲಾಂತರಗಳಿಂದ ಪೂಜಿಸಿಕೊಂಡು ಬರುತ್ತಿರುವ ಪವಿತ್ರ ಆರಾಧನಾ ತಾಣವಾಗಿದೆ. ಇಲ್ಲಿನ ಕುಯಿ, ಕೊಂಡ್ ಸೇರಿದಂತೆ ವಿಭಿನ್ನ ಆದಿವಾಸಿ ಸಮುದಾಯಗಳು ಈ ಬೆಟ್ಟವನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವೆಂದೇ ಆಳವಾಗಿ ನಂಬಿವೆ. ದಿನನಿತ್ಯದ ಅರಣ್ಯ ಉತ್ಪನ್ನಗಳು ಮತ್ತು ಬೆಟ್ಟದ ಮೇಲಿನಿಂದ ಹರಿದುಬರುವ ಸಿಹಿನೀರಿನ ಝರಿಗಳನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡು ಬದುಕುತ್ತಿರುವ ಈ ಜನರಿಗೆ, ಇಲ್ಲಿ ನಡೆಯುವ ಗಣಿಗಾರಿಕೆಯೆಂದರೆ ಅದು ತಮ್ಮ ಸಾಂಸ್ಕೃತಿಕ ಅಸ್ತಿತ್ವಕ್ಕೇ ಎರವಾಗುವ ಮರಣಶಾಸನ.
ತೀವ್ರ ಸ್ವರೂಪದ ಪರಿಸರ ನಾಶದ ಭೀತಿ ಜನಾಂದೋಲನದ ಹಾಗೂ ವಿರೋಧದ ಪ್ರಮುಖ ಕಾರಣವಾಗಿದೆ. ಒಮ್ಮೆ ಇಲ್ಲಿ ಬೃಹತ್ ಯಂತ್ರಗಳ ಮೂಲಕ ಗಣಿಗಾರಿಕೆ ಆರಂಭವಾದರೆ ಸುತ್ತಮುತ್ತಲಿನ ಹತ್ತಾರು ನೈಸರ್ಗಿಕ ಜಲಮೂಲಗಳು ಸಂಪೂರ್ಣವಾಗಿ ಬತ್ತಿಹೋಗಲಿವೆ ಎಂಬ ತೀವ್ರ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ. 31.10 ಕೋಟಿ ಟನ್ ಬಾಕ್ಸೈಟ್ ಅದಿರನ್ನು ನಿರಂತರವಾಗಿ ಅಗೆದು ತೆಗೆಯುವಾಗ ಉಂಟಾಗುವ ಭಾರಿ ಧೂಳು ಮತ್ತು ಯಂತ್ರಗಳ ಕಿವಿಗಡಚಿಕ್ಕುವ ಶಬ್ದ ಮಾಲಿನ್ಯವು ಅರಣ್ಯದ ಅಪರೂಪದ ಜೀವವೈವಿಧ್ಯವನ್ನು ನಾಶಪಡಿಸುವುದಲ್ಲದೆ, ನೂರಾರು ಎಕರೆ ಕೃಷಿ ಭೂಮಿಯ ಫಲವತ್ತತೆಯನ್ನೂ ಶಾಶ್ವತವಾಗಿ ಕಸಿದುಕೊಳ್ಳಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ಮಾರಕ ಯೋಜನೆಯನ್ನು ವಿರೋಧಿಸಿ ಕಳೆದ ಮೂರು ವರ್ಷಗಳಿಂದ ಸಿಜಿಮಲಿ ಸುಪಾರಿಕ್ಷಾ ಸಮಿತಿ ಹಾಗೂ ಇತರ ಸಂಘಟನೆಗಳ ನೇತೃತ್ವದಲ್ಲಿ ಆದಿವಾಸಿಗಳು ನಿರಂತರವಾಗಿ ಬೀದಿಗಿಳಿದು ಅಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದರು. ಸಂವಿಧಾನಬದ್ಧವಾಗಿ ನಡೆಯುವ ಗ್ರಾಮ ಸಭೆಗಳಲ್ಲಿ ಗಣಿಗಾರಿಕೆ ವಿರುದ್ಧ ಒಕ್ಕೊರಲಿನ ಹಾಗೂ ಕಟ್ಟುನಿಟ್ಟಿನ ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು. ಪ್ರತಿಭಟನೆ ಹತ್ತಿಕ್ಕಲು ನಡೆದ ಪೊಲೀಸರ ದೌರ್ಜನ್ಯ, ಲಾಠಿ ಪ್ರಹಾರ, ನಾಯಕರ ಮೇಲಿನ ಸುಳ್ಳು ಮೊಕದ್ದಮೆಗಳು ಮತ್ತು ಅಕ್ರಮ ಬಂಧನದಂತಹ ತೀವ್ರ ಬೆದರಿಕೆಗಳ ನಡುವೆಯೂ ಕಾಡಿನ ಮಕ್ಕಳು ತಮ್ಮ ತಾಯ್ನೆಲದ ರಕ್ಷಣೆಗಾಗಿ ಹೋರಾಟದ ಕಿಡಿಯನ್ನು ಜೀವಂತವಾಗಿರಿಸಿದ್ದರು.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ | ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆದ ಪ್ಯಾರಾ ಅಥ್ಲೀಟ್ ಕೊಲೆ; ಪ್ರತಿಸ್ಪರ್ಧಿ ಬಂಧನ
ಆದರೆ, ಸರ್ಕಾರದ ಹಾಗೂ ಕಾರ್ಪೊರೇಟ್ ವಲಯದ ವಾದವೇ ಸಂಪೂರ್ಣ ಭಿನ್ನವಾಗಿದೆ. ಈ ಬೃಹತ್ ಗಣಿಗಾರಿಕೆ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ತೆರಿಗೆ ಹಾಗೂ ರಾಯಲ್ಟಿ ರೂಪದಲ್ಲಿ ಸಾವಿರಾರು ಕೋಟಿ ರೂಪಾಯಿ ಆದಾಯ ಹರಿದುಬರಲಿದೆ ಎನ್ನುತ್ತದೆ ಸರ್ಕಾರ. ಇದರ ಜೊತೆಗೆ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ, ಹಾಗೂ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯಡಿ ರಸ್ತೆ, ಆಸ್ಪತ್ರೆ, ಶಾಲೆಯಂತಹ ಮೂಲಸೌಕರ್ಯಗಳು ತ್ವರಿತವಾಗಿ ಅಭಿವೃದ್ಧಿಯಾಗಲಿವೆ ಎಂದು ವೇದಾಂತ ಕಂಪನಿ ಮತ್ತು ಸರ್ಕಾರ ಜಂಟಿಯಾಗಿ ಅಭಿವೃದ್ಧಿಯ ಮಂತ್ರವನ್ನು ಪ್ರತಿಪಾದಿಸುತ್ತಾ ಬಂದಿವೆ. ಆದರೆ ಇಂತಹ ನೂರಾರು ಪೊಳ್ಳು ಆಶ್ವಾಸನೆಗಳಿಗೆ ಕಾಲವೇ ಸಾಕ್ಷಿಯಾಗಿದೆ. ‘ಅಭಿವೃದ್ಧಿ’ಗೆ ನೆಲದ ಮೂಲನಿವಾಸಿಗಳ ಆಸ್ಥಾ ಕೇಂದ್ರಗಳನ್ನು ಬಲಿಕೊಡಬೇಕಿಲ್ಲ.

ಅಂತಿಮವಾಗಿ, ಆದಿವಾಸಿಗಳ ಮೂರು ವರ್ಷಗಳ ನಿರಂತರ ಕಣ್ಣೀರು, ಆಕ್ರೋಶ ಮತ್ತು ಪ್ರಜಾಸತ್ತಾತ್ಮಕ ಹೋರಾಟವನ್ನು ನಿರ್ದಾಕ್ಷಿಣ್ಯವಾಗಿ ಬದಿಗೊತ್ತಿ, 4.99 ಹೆಕ್ಟೇರ್ ದಟ್ಟ ಅರಣ್ಯವನ್ನು ಸಂಪರ್ಕ ರಸ್ತೆಗಾಗಿ ಕಡಿಯಲು ಸರ್ಕಾರ ಅಂತಿಮ ಮುದ್ರೆ ಒತ್ತಿದೆ. ವಾಸ್ತವದಲ್ಲಿ ಗಣಿಗಾರಿಕೆಗೆ ಈ ರಸ್ತೆಯೇ ಪ್ರಮುಖ ನಾಡಿಮಿಡಿತವಾಗಿದೆ. ಇದರ ಅಧಿಕೃತ ಅನುಮತಿಯೊಂದಿಗೆ ಬಹುರಾಷ್ಟ್ರೀಯ ವೇದಾಂತ ಕಂಪನಿಯು ಸಿಜಿಮಲಿ ಬೆಟ್ಟವನ್ನು ಕೊರೆಯುವ ತನ್ನ ಬಹುದಿನಗಳ ಆರ್ಥಿಕ ಕಾರ್ಯತಂತ್ರದಲ್ಲಿ ಮೊದಲ ಮತ್ತು ಅತಿ ದೊಡ್ಡ ಜಯವನ್ನು ಸಾಧಿಸಿದಂತಾಗಿದೆ. ಇದು ಹೋರಾಟಗಾರರಿಗೆ ನುಂಗಲಾರದ ತುತ್ತಾಗಿದೆ.
ಸರ್ಕಾರದ ಈ ಏಕಪಕ್ಷೀಯ ನಿರ್ಧಾರವು ಗಿರಿಜನರ ಬದುಕಿನಲ್ಲಿ ಇದೀಗ ತೀವ್ರ ತಲ್ಲಣ ಹಾಗೂ ಅಭದ್ರತೆಯನ್ನು ಸೃಷ್ಟಿಸಿದೆ. ನೂರಾರು ವರ್ಷಗಳಿಂದ ಅತಿ ಜತನದಿಂದ ಕಾಪಾಡಿಕೊಂಡು ಬಂದ ಕಾಡು, ಬೆಟ್ಟ ಮತ್ತು ತಮ್ಮ ಅನನ್ಯ ಸಂಸ್ಕೃತಿ ಶಾಶ್ವತವಾಗಿ ಕಣ್ಮರೆಯಾಗುವ ಭೀತಿಯಲ್ಲಿ ಅವರೀಗ ದಿನ ದೂಡುತ್ತಿದ್ದಾರೆ. ಅಭಿವೃದ್ಧಿಯ ರಥದ ಬೃಹತ್ ಚಕ್ರದಡಿ ಸಿಲುಕಿ ತಮ್ಮ ಹಕ್ಕು ಹಾಗೂ ನೆಲೆ ಕಳೆದುಕೊಳ್ಳುವ ಅಸಹಾಯಕತೆ ಆದಿವಾಸಿಗಳ ಮುಖದಲ್ಲಿ ಎದ್ದು ಕಾಣುತ್ತಿದೆ. ತಮ್ಮ ಆರ್ತನಾದ ಆಳುವ ಸರ್ಕಾರದ ಕಿವಿಗೆ ತಲುಪುತ್ತಿಲ್ಲ ಎಂಬ ತೀವ್ರ ಹತಾಶೆ ಕಾಡಿನ ಮಕ್ಕಳನ್ನು ಕಾಡುತ್ತಿದೆ.
ಮೋದಿ ಆಡಳಿತ ಪರ್ವದಲ್ಲಿ ಕಾರ್ಪೊರೇಟ್ ಹಿತಗಳೇ ಪರಮ ಎನಿಸಿವೆ. ಈ ಹಿತಾಸಕ್ತಿಯನ್ನು ಕಾಪಾಡಲು ಯಾವ ಬೆಲೆಯನ್ನಾದರೂ ತೆರಲು ಸಿದ್ಧ ಎಂಬುದು ಸರ್ಕಾರದ ಅಧಿಕೃತ ನೀತಿಯೇ ಆಗಿ ಹೋಗಿರುವುದು ದುರಂತ. ಆದಿವಾಸಿಗಳು ಈ ದೇಶದಲ್ಲಿ ಜನಸಾಮಾನ್ಯರಿಗಿಂತ ಅಧಿಕವಾಗಿ ತಬ್ಬಲಿಗಳಾಗುತ್ತಿದ್ದಾರೆ. ಅವರ ಹಕ್ಕುಗಳಿಗೆ ಯಾವ ಬೆಲೆಯೂ ಇಲ್ಲದಂತೆ ಅವುಗಳನ್ನು ಮನಸೇಚ್ಛೆ ತುಳಿಯಲಾಗುತ್ತಿದೆ. ಕಾರ್ಪೊರೇಟ್ ಬಂಡವಾಳಶಾಹಿಗಳ ಹಿತಾಸಕ್ತಿಗಳೇ ಮೇಲುಗೈ ಸಾಧಿಸುತ್ತಿವೆ ಎಂಬುದಕ್ಕೆ ಸಿಜಿಮಲಿ ಆದಿವಾಸಿಗಳ ಹೋರಾಟ ಮತ್ತು ಅವರ ಸೋಲು ಮತ್ತೊಂದು ದುರಂತ ಉದಾಹರಣೆಗಳ ಸರಣಿಗೆ ಸಂದು ಹೋಗುತ್ತಿದೆ. ಉನ್ನತ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟದ ಮೂಲಕವಾದರೂ ನಮಗೆ ಕೊನೆಯ ಗಳಿಗೆಯಲ್ಲಿ ನ್ಯಾಯ ಸಿಗಬಹುದು ಎಂಬ ಒಂದು ಸಣ್ಣ ಭರವಸೆ ಮಾತ್ರ ಈಗ ಹೋರಾಟಗಾರರಲ್ಲಿ ಉಳಿದಿದೆ.




