ಆನ್‌ಲೈನ್‌ನಲ್ಲಿ ಮಾಂಸ ಮಾರಾಟ ಅಬಾಧಿತ; ಸ್ಥಳೀಯ ವ್ಯಾಪಾರಿಗಳ ಮೇಲೇಕೆ ನಿಷೇಧದ ಬರೆ?

Date:

Advertisements

ಸಾಮಾನ್ಯವಾಗಿ ದೇವರ ಹಬ್ಬದ ದಿನಗಳಲ್ಲಿ ಆಸ್ತಿಕರ ಮನೆಗಳಲ್ಲಿ ಮಾಂಸಾಹಾರ ಮಾಡದಿರುವ ಸ್ವಯಂ ನಿಯಂತ್ರಣವನ್ನು ನಮ್ಮ ಹಿರಿಯರ ಕಾಲದಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ. ಆದರೆ, ಸರ್ಕಾರ ನೀವು ಇಂತಹ ದಿನ ಮಾಂಸ ತಿನ್ನಬೇಡಿ ಎನ್ನುವುದಾಗಲಿ, ಮಾಂಸ ಸಿಗದಂತೆ ಮಾಡುವುದಾಗಲಿ ಆಹಾರ ಸ್ವಾತಂತ್ರ್ಯದ ಮೇಲಿನ ದಾಳಿ ಅನಿಸುತ್ತದೆ. ಆನ್‌ಲೈನ್‌ಗೆ ಇಲ್ಲದ ನಿಷೇಧ ಸ್ಥಳೀಯ ವ್ಯಾಪಾರಿಗಳ ಮೇಲೆ ಮಾತ್ರ ಏಕೆ?

ಮಾಂಸಾಹಾರ ಈ ದೇಶದ ಬಹುಸಂಖ್ಯಾತರ ಆಹಾರ ಪದ್ಧತಿ. ಜಗತ್ತಿನಲ್ಲಿ ಮಾಂಸಾಹಾರಿಗಳೇ ಬಹುಸಂಖ್ಯಾತರು. ಕೆಲ ದೇಶಗಳಲ್ಲಿ ಸಸ್ಯಾಹಾರ ಮಾತ್ರ ತಿನ್ನುವ ಜೀವನ ಕ್ರಮವೇ ಇಲ್ಲ. ಸಲಾಡ್‌ಗಳಲ್ಲಿ ಮಾತ್ರ ಸೊಪ್ಪು ತರಕಾರಿ ಬಳಕೆಯಲ್ಲಿದೆ. ಅವರವರ ಆಹಾರ ಕ್ರಮ ಅವರವರಿಗೆ ಶ್ರೇಷ್ಠ, ಹೀಗಿರುವಾಗ ಹಿಂದೂ ಹಬ್ಬಗಳ ಸಂದರ್ಭದಲ್ಲಿ ಮಾಂಸ ಮಾರಾಟ ನಿಷೇಧ ಹೇರುವುದು ಮಾಂಸಹಾರ ʼಕನಿಷ್ಠʼ ಎಂದು ಸರ್ಕಾರವೊಂದು ಅಧಿಕೃತವಾಗಿ ಸಾರಿದಂತೆಯೇ ಸರಿ. ಇದು ಬಹುಸಂಖ್ಯಾತರ ಆಹಾರ ಪದ್ಧತಿಗೆ ಮಾಡುವ ಅವಮಾನ.

ಮಾಂಸಾಹಾರ ಕನಿಷ್ಠ, ಸಸ್ಯಹಾರ ಶ್ರೇಷ್ಠ ಎಂಬ ಬ್ರಾಹ್ಮಣ್ಯವಾದಿ ʼಶ್ರೇಷ್ಠತೆಯ ವ್ಯಸನʼ ಇಂದು ನೆನ್ನೆಯದಲ್ಲ. ಸಾರ್ವಜನಿಕವಾಗಿ ಅದು ಆಗಾಗ ಚರ್ಚೆಗೆ ಗ್ರಾಸವಾಗುತ್ತಲಿರುತ್ತದೆ. ಸ್ವತಃ ಮಾಂಸಾಹಾರಿಗಳೇ ಕೆಲವು ನಿರ್ದಿಷ್ಟ ಸಭೆ ಸಮಾರಂಭ, ನಿರ್ದಿಷ್ಟ ಜಾಗ, ವಾರದ ಕೆಲವು  ಗೊತ್ತಾದ ದಿನಗಳಂದು ಮಾಂಸಾಹಾರ ಸೇವಿಸಬಾರದು ಎಂದು ಸ್ವಯಂ ನಿಷೇಧ ಹಾಕಿಕೊಂಡಿದ್ದಾರೆ. ಕೆಲವರು ಶ್ರಾವಣ ಮಾಸ ಪೂರ್ತಿ ಮಾಂಸಾಹಾರ ತ್ಯಜಿಸುವ ಪದ್ಧತಿಯಿದೆ. ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಬಾರದು, ಗೃಹಪ್ರವೇಶವಾದ ಒಂದು ತಿಂಗಳು ಮನೆಯಲ್ಲಿ ಮಾಂಸಾಹಾರ ಮಾಡಬಾರದು ಇಂತಹ ಹಲವು ನಿಷೇಧಗಳು ಇವೆ. ಆದರೆ ಅವೆಲ್ಲ ವೈಯಕ್ತಿಕ. ಆದರೆ ಸರ್ಕಾರವೇ ನಿಷೇಧ ಹೇರುವುದು ಸರಿಯಾದ ಕ್ರಮ ಅಲ್ಲ.

Advertisements

ರಾಮನವಮಿ ಪ್ರಯುಕ್ತ ಬೆಂಗಳೂರು ನಗರದಲ್ಲಿ ನಾಳೆ (ಏ 6) ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಮತ್ತು ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಕುರಿ, ಕೋಳಿ ಸೇರಿದಂತೆ ಯಾವುದೇ ರೀತಿಯ ಮಾಂಸ ಮಾರಾಟ, ಪ್ರಾಣಿ ವಧೆ ನಿಷೇಧಿಸಲಾಗಿದ್ದು, ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಪಶುಪಾಲನೆ ವಿಭಾಗ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಏನು ಮಾಡಿತ್ತೋ ಅದನ್ನೇ ಕಾಂಗ್ರೆಸ್‌ ಸರ್ಕಾರದಲ್ಲೂ ಸಂಪ್ರದಾಯದಂತೆ ಮುಂದುವರಿಸುತ್ತಾ ಬರಲಾಗುತ್ತಿದೆ. ಬೆಂಗಳೂರಿನಲ್ಲಿ ಶಿವರಾತ್ರಿಯಂದೂ ಮಾಂಸ ಮಾರಾಟ ನಿಷೇಧ ಮಾಡಲಾಗಿತ್ತು. ಕರ್ನಾಟಕಕ್ಕೆ ಸಂಬಂಧವೇ ಇಲ್ಲದ ಸಂತ ಟಿ.ಎಲ್. ವಾಸ್ವಾನಿ ಜಯಂತಿಯಂದೂ ನಿಷೇಧ ಮಾಡಲಾಗಿತ್ತು. ಇವರೆಲ್ಲ ಯಾರನ್ನು ಮೆಚ್ಚಿಸಲು ಹೊರಟಿದ್ದಾರೆ?

maxresdefault 600

ರಾಮನವಮಿ, ಶಿವರಾತ್ರಿ, ಗಣೇಶ ಹಬ್ಬ, ಮಹಾವೀರ ಜಯಂತಿ ಹಿಂದೂಗಳ ಹಬ್ಬ. ಆದರೆ ಈ ದೇಶದಲ್ಲಿ ಮುಸ್ಲಿಮರು, ಕ್ರೈಸ್ತರು, ಬೌದ್ಧರು ಇದ್ದಾರೆ. ಇವರೆಲ್ಲರೂ ಹಿಂದೂಗಳ ಹಬ್ಬದ ದಿನ ಮಾಂಸಹಾರ ತ್ಯಜಿಸಬೇಕು ಎಂಬುದು ಸರಿಯೇ? ಹಿಂದೂಗಳಾಗಿದ್ದೂ ಬೇರೆ ಬೇರೆ ದೇವರನ್ನು ಆರಾಧಿಸುವ ಸಮುದಾಯಗಳಿವೆ. ಕೆಲವು ಸಮುದಾಯಗಳಿಗೆ ರಾಮ, ಕೃಷ್ಣ, ಗಣೇಶ, ಸುಬ್ರಹ್ಮಣ್ಯ, ಶಿವ ಸಹಿತ ವಿವಿಧ ದೇವತೆಯರಿಗಿಂತ ಊರ ದೇವತೆ ಮಾರಮ್ಮನೇ ಶ್ರೇಷ್ಠ ಎಂಬ ಭಕ್ತಿ ಭಾವ ಇರಬಹುದು. ಈ ನೆಲದ ಮೂಲನಿವಾಸಿಗಳು ದೇವರಿಗೆ ಮಾಂಸವನ್ನೇ ನೈವೇದ್ಯವಾಗಿ ನೀಡುತ್ತಾರೆ. ಬುಡಕಟ್ಟು ಸಮುದಾಯಗಳು ಪ್ರಕೃತಿಯನ್ನೇ ದೇವರೆಂದು ಆರಾಧಿಸುತ್ತವೆ. ಅವರೆಲ್ಲ ವೈದಿಕರ ರಾಮನವಮಿಯ ದಿನ ಮಾಂಸಾಹಾರ ಸೇವಿಸಬಾರದು ಎಂಬುದು ಯಾವ ನ್ಯಾಯ?

ಶಿವನಿಗೆ ಬೇಡರ ಕಣ್ಣಪ್ಪ ಮಾಂಸವನ್ನು ನೈವೇದ್ಯವಾಗಿ ನೀಡಿದ್ದ ಎಂದು ಪುರಾಣಕತೆಗಳೇ ಹೇಳುತ್ತವೆ. ಅದು ಹೌದೋ ಅಲ್ಲವೋ ಚರ್ಚೆ ಬೇಡ. ವೈದಿಕರು/ ಸನಾತನಿಗಳು ಎಲ್ಲಾ ದೇವರುಗಳ ವಾರಸುದಾರರಂತೆ, ಭಕ್ತರು ಮತ್ತು ದೇವರ ನಡುವಿನ ಮಧ್ಯವರ್ತಿಗಳಂತೆ ವರ್ತಿಸುತ್ತಾ ತಲತಲಾಂತರದಿಂದ ಶೂದ್ರರನ್ನು ಶೋಷಿಸುತ್ತಾ, ಕಟ್ಟುಪಾಡುಗಳನ್ನು ಹೇರುತ್ತಾ ಬಂದಿದ್ದಾರೆ. ಆದರೆ ತಾವು ಜಾತ್ಯತೀತವಾದಿ ಎಂದು ಬೆನ್ನು ತಟ್ಟಿಕೊಳ್ಳುವ ಈ ಸರ್ಕಾರಗಳಿಗೆ ಏನಾಗಿದೆ?

ಅಷ್ಟಕ್ಕೂ ಭಕ್ತಿ ಆಚರಣೆ ವೈಯಕ್ತಿಕ. ಶತಮಾನಗಳಿಂದ ಅದು ಮನೆಯೊಳಗಿನ ಆಚರಣೆಯಾಗಿಯೇ ಇತ್ತು. ಆದರೆ, ಇತ್ತೀಚೆನ ಕೆಲ ದಶಕಗಳಿಂದ ಧರ್ಮ, ರಾಜಕಾರಣದೊಂದಿಗೆ ಬೆರೆತು ಆಚರಣೆಗಳೆಲ್ಲ ಬೀದಿಗೆ ಎಳೆದು ತರಲಾಗಿದೆ. ಅದು ಅನ್ಯ ಧರ್ಮದ ಮೇಲೆ ಸೇಡು ತೀರಿಸಿಕೊಳ್ಳುವ ವಿಷ ಕಾರುವ ಆಚರಣೆಯಾಗಿ, ಪೊಲೀಸರ ಬಿಗಿ ಬಂದೋಬಸ್ತಲ್ಲಿ ಆಚರಿಸುವ ಹಂತ ಮುಟ್ಟಿದೆ. ಅದರ ಮುಂದುವರಿದ ಭಾಗವಾಗಿ ನಿಷೇಧದ ಹಾವಳಿ ವಿಸ್ತರಿಸುತ್ತ ನಡೆದಿದೆ.

ಅಹಿಂಸೆಯ ಪ್ರತಿಪಾದಕರಾದ ಮಹಾತ್ಮ ಗಾಂಧಿ ಅವರ ಗೌರವಾರ್ಥ ಗಾಂಧಿಜಯಂತಿಯಂದು ಮಾಂಸಾಹಾರ ನಿಷೇಧ ಮಾಡುವ ಪರಂಪರೆ ಬಹಳ ಹಿಂದಿನಿಂದ ಇತ್ತು. ಆದರೆ, ಇತ್ತೀಚೆಗೆ ಮಧ್ಯಪ್ರದೇಶ, ಉತ್ತರ ಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ನವರಾತ್ರಿಯ ಒಂಭತ್ತು ದಿನವೂ ಮಾಂಸಾಹಾರ ನಿಷೇಧ ಮಾಡಲಾಗುತ್ತಿದೆ. ಕಳೆದ ಕೆಲ ವರ್ಷಗಳಿಂದ ಕರ್ನಾಟಕಕ್ಕೆ ಸಂಬಂಧವೇ ಇಲ್ಲದ ಸಂತ ಟಿ.ಎಲ್. ವಾಸ್ವಾನಿ ಜಯಂತಿಯಂದು ಮಾಂಸಾಹಾರ ನಿಷೇಧದ ಪ್ರಕಟಣೆಯನ್ನು ಬಿಬಿಎಂಪಿ ಹೊರಡಿಸುತ್ತಿದೆ. ಇದು ಅತಿರೇಕದ ಪರಮಾವಧಿ. ಉತ್ತರ ಭಾರತೀಯರ ಯಾವುದೋ ಒಂದು ಪಂಥವನ್ನು ಮೆಚ್ಚಿಸಲು ನಮ್ಮ ಜನರ ಆಹಾರ ಪದ್ಧತಿಗೆ ನಿಷೇಧದ ಕಡಿವಾಣ ಹಾಕುವುದು ಎಷ್ಟರ ಮಟ್ಟಿಗೆ ಸರಿ?

vijay karnataka 113315614

ಸಾಮಾನ್ಯವಾಗಿ ದೇವರ ಹಬ್ಬದ ದಿನಗಳಲ್ಲಿ ಆಸ್ತಿಕರ ಮನೆಗಳಲ್ಲಿ ಮಾಂಸಾಹಾರ ಮಾಡದಿರುವ ಸ್ವಯಂ ನಿಯಂತ್ರಣವನ್ನು ನಮ್ಮ ಹಿರಿಯರ ಕಾಲದಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ. ಆದರೆ, ಸರ್ಕಾರ ಪ್ರಜೆಗಳಿಗೆ ನೀವು ಮಾಂಸ ತಿನ್ನಬೇಡಿ ಎನ್ನುವುದಾಗಲಿ, ಮಾಂಸ ಸಿಗದಂತೆ ಮಾಡುವುದಾಗಲಿ ಆಹಾರ ಸ್ವಾತಂತ್ರ್ಯದ ಮೇಲಿನ ದಾಳಿ ಅನಿಸುತ್ತದೆ. ಇದರ ಜೊತೆಗೆ ಸರ್ಕಾರದ ಎಡಬಿಡಂಗಿತನವನ್ನು ಎತ್ತಿ ತೋರಿಸುತ್ತದೆ. ಆನ್‌ಲೈನ್‌ ಮಾರಾಟಕ್ಕೆ ಇಲ್ಲದ ನಿಷೇಧ ಸ್ಥಳೀಯ ವ್ಯಾಪಾರಿಗಳ ಮೇಲೆ ಮಾತ್ರ ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಆನ್‌ಲೈನ್‌ನಲ್ಲಿ ಮಾಂಸ ಮಾರಾಟಕ್ಕೆ ಯಾಕಿಲ್ಲ ನಿಷೇಧ?

ಸರ್ಕಾರದ ನಿಷೇಧ ಸ್ಥಳೀಯ ವ್ಯಾಪಾರಿಗಳ ಮೇಲೆ ಮಾತ್ರವೇ ಯಾಕೆ? ಆನ್‌ಲೈನ್‌ನಲ್ಲಿ ದೇಶದ ದೊಡ್ಡ ದೊಡ್ಡ ಕಂಪನಿಗಳು ಮಾಂಸ ಮಾರಾಟ ಮಾಡುತ್ತಿವೆ. ಆರ್ಡರ್‌ ಮಾಡಿದ ಕೆಲ ನಿಮಿಷಗಳಲ್ಲಿಯೇ ಮನೆ ಬಾಗಿಲಿಗೆ ತಂದುಕೊಡುತ್ತಾರೆ. ಅಂಬಾನಿ ಒಡೆತನದ ʼಜಿಯೋ ಮಾರ್ಟ್‌ʼJioMart, ಕರ್ನಾಟಕದ ಉದ್ಯಮಿ ಟಿ ವಿ ಮೋಹನ್‌ದಾಸ್‌ ಪೈ ಮಾಲೀಕತ್ವದ ʼಲೀಷಿಯಸ್‌ʼ Licious ಸೇರಿದಂತೆ ಹತ್ತಾರು ಆನ್‌ಲೈನ್‌ ಸ್ಟೋರ್‌ಗಳಲ್ಲಿ ಮಾಂಸ ಮಾರಾಟಕ್ಕೆ ಒಂದು ದಿನವೂ ನಿಷೇಧ ಹೇರಿಲ್ಲ. ಇದು ನಮ್ಮ ಬಡ, ಸಣ್ಣ ವ್ಯಾಪಾರಿಗಳ ಹೊಟ್ಟೆಗೆ ಹೊಡೆಯುವ ಕೆಲಸವಷ್ಟೇ. ಇದು ಸಣ್ಣ ವ್ಯಾಪಾರಿಗಳ ಅನ್ನ ಕಿತ್ತು ಶ್ರೀಮಂತ ಉದ್ಯಮಿಗಳ ತಟ್ಟೆಗೆ ಹಾಕುವ ದುಷ್ಟತನ. ನಾಳೆ ಭಾನುವಾರ, ಬಹುತೇಕ ಮಾಂಸಾಹಾರಿಗಳ ಮನೆಗಳಲ್ಲಿ ವಾರದ ರಜಾದಿನ ಕುಟುಂಬ ಸಮೇತರಾಗಿ ಮಾಂಸಾಹಾರ ತಯಾರಿಸಿ ಆಸ್ವಾದಿಸುತ್ತಾರೆ. ಸ್ಥಳೀಯ ಅಂಗಡಿಯಲ್ಲಿ ಮಾಂಸ ಸಿಗದ ಕಾರಣ ಎಲ್ಲರೂ ಆನ್‌ಲೈನ್‌ನಲ್ಲಿ ಖರೀದಿಸುತ್ತಾರೆ. ಇದು ದೊಡ್ಡ ಮಟ್ಟದಲ್ಲಿ ಆನ್‌ಲೈನ್‌ ಸ್ಟೋರ್‌ಗಳಿಗೆ ಲಾಭ ತರಲಿದೆ.

ಗಾಂಧಿಜಯಂತಿಯಂದು ಮಾತ್ರ ಇದ್ದ ಮಾಂಸ ಮಾರಾಟ ನಿಷೇಧ ಹೇರುವ ಕ್ರಮ ಈಗ ವರ್ಷದಲ್ಲಿ ಏಳು ದಿನಗಳಿಗೆ ಬಂದು ನಿಂತಿದೆ.

ಯಾವ್ಯಾವ ದಿನ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ?
ಸರ್ವೋದಯ ದಿನ
ಶಿವರಾತ್ರಿ
ರಾಮನವಮಿ
ಗಣೇಶೋತ್ಸವ
ಮಹಾವೀರ ಜಯಂತಿ
ಗಾಂಧಿ ಜಯಂತಿ
ಸಂತ ಟಿ.ಎಲ್. ವಾಸ್ವಾನಿ ಜಯಂತಿ

ಹಿಂದೂಗಳು ಹಬ್ಬ ಆಚರಿಸಲು ಬೇರೆ ಧರ್ಮದವರು ತಮ್ಮ ಆಹಾರ ಕ್ರಮ ತ್ಯಜಿಸಬೇಕೇ? ಹಿಂದೂಗಳಲ್ಲೇ ಮದುವೆ ಸೇರಿದಂತೆ ಬೇರೆ ಬೇರೆ ಶುಭ ಕಾರ್ಯಗಳಲ್ಲಿ ಮಾಂಸಹಾರವನ್ನು ಸೇವಿಸುವ ಸಮುದಾಯಗಳಿವೆ. ಈ ನಿಷೇಧದಿಂದ ಅವರಿಗೂ ತೊಂದರೆಯಾಗುತ್ತದೆ. ಸಾರ್ವತ್ರಿಕವಾಗಿ ನಿಷೇಧ ಹೇರುವ ಮೂಲಕ ಮಾಂಸಾಹಾರ ಕನಿಷ್ಠ, ಮೈಲಿಗೆ ಎಂಬ ಸಂದೇಶವನ್ನು ಬಿಬಿಎಂಪಿ ಅಧಿಕಾರಿಗಳು ಕೊಡುತ್ತಿದ್ದಾರೆಯೇ? ಇನ್ನು ಮುಂದೆಯಾದರೂ ಇಂತಹ ನಿಷೇಧಗಳೆಲ್ಲ ಬೇಕೇ ಎಂಬ ಬಗ್ಗೆ ಪರಾಮರ್ಶೆಗೆ ಒಳಪಡಿಸುವ ಅಗತ್ಯವಿದೆ.

My Post

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

3 COMMENTS

  1. ಬಹಳ ಅರ್ಥಪೂರ್ಣವಾದ ಲೇಖನವನ್ನು ಪ್ರಕಟಿಸಿದ ತಮಗೆ ಧನ್ಯವಾದಗಳು 🙏

    ನನ್ನ ಹೆಸರು ಕೆಎನ್ ನಾಗರಾಜು ನಾನು ಕರ್ನಾಟಕ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಮಾಂಸಹಾರ ನಿಷೇಧದ ದಿನಗಳ ಕುರಿತು ಹೋರಾಟ ಮಾಡಬೇಕೆಂದು ನಿರ್ಧರಿಸಿದ್ದು ನಾವು ನಿಮ್ಮ ಸಹಾಯವನ್ನು ಕೇಳುತ್ತಿದ್ದೇವೆ
    ನನ್ನ ಮೊಬೈಲ್ ಸಂಖ್ಯೆ9341232897

  2. ಬಾಡಿನ ಮಾರಾಟದ ಕುರಿತು ರಾಜ್ಯಸರಕಾರ ತಕ್ಕ ಆದೇಶ ಹೊರಡಿಸಲಿ.ಬಡಗಣ ಇಂಡಿಯಾದ ಕೆಲವು ಸಂತರ ಹೆಸರಲ್ಲಿ ಇಲ್ಲಿ ಬಾಡೂಟಕ್ಕೆ ತಡೆಒಡ್ಡುವುದು ತಪ್ಪು.
    ಬಿಬಿಎಂಪಿಯ ಬಡಗಣ ಬಾರತದ ಅದಿಕಾರಿಗಳು ಇದಕ್ಕೆಲ್ಲಾ ಕಾರಣ ಎಂಬಮಾತಿದೆ
    ಆಳಿವಿಕೆ ಇತ್ತ ಗಮನ ಹರಿಸಿ ನಿಚ್ಚಳ ನಡೆ ಹೊರಡಿಸಲಿ

  3. ನಿನ್ನೆ ಭಾನುವಾರ ಬಹಳಷ್ಟು ಮಾಂಸದ ಅಂಗಡಿಗಳನ್ನು ಮುಚ್ಚಲಾಗಿತ್ತು,ಇಂತಹದ್ದೇನಾದರೂ ಸಂದರ್ಭ ಬಂದಾಗ ಆನ್ಲೈನ್ ಮಾರಾಟಗಾರರು ನಮ್ಮಂತಹ ಸಣ್ಣ ವ್ಯಾಪಾರಸ್ಥರನ್ನು ಒಂದೆರಡು ದಿನ ಮುಂಚೆ ಸಂಪರ್ಕಿಸಿ ನಮ್ಮಿಂದ
    ಅತೀ ಕಡಿಮೆ ಬೆಲೆಯಲ್ಲಿ ಖರೀದಿಸಿ ಸ್ಟಾಕ್ ಮಾಡಿಟ್ಟುಕೊಳ್ಳುತ್ತವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X