ಸೌಜನ್ಯ ಪ್ರಕರಣ Exclusive | ಯಾರದ್ದೋ ಷಡ್ಯಂತ್ರಕ್ಕೆ ನಮ್ಮ ಕುಟುಂಬ ಛಿದ್ರಗೊಂಡಿದೆ- ಸುಧಾಕರ ರಾವ್‌

Date:

Advertisements
ಕೈಗೆ ಸ್ವಲ್ಪ ಹಣ ಸಿಕ್ಕರೆ ಸಾಕು ದೇವಸ್ಥಾನ ಸುತ್ತುವ ಅಭ್ಯಾಸವಿದ್ದ ಕಾರ್ಕಳದ ಬೈಲೂರಿನ ಮೇಷ್ಟ್ರೊಬ್ಬರ ಮಗ ಸಂತೋಷ್‌ ರಾವ್‌ ತಾನು ಕೆಲಸ ಮಾಡುತ್ತಿದ್ದ ಶೃಂಗೇರಿ ಹೊಟೇಲಿನಿಂದ ಹೊರಟು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಧರ್ಮಸ್ಥಳಕ್ಕೆ ಬಂದಿಳಿದು ಬಾಹುಬಲಿ ಬೆಟ್ಟದ ಮೆಟ್ಟಿಲಲ್ಲಿ ಸುಸ್ತಾಗಿ ಕುಳಿತಿದ್ದ. ಎರಡು ದಿನಗಳ ಹಿಂದೆ ನಡೆದ ಕ್ರೂರ ಘಟನೆಯ ಪರಿವೇ ಇಲ್ಲದಿದ್ದ ಸಂತೋಷನನ್ನು ಯಾರೋ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು...

ಆ ಮನೆಗೆ ಹನ್ನೊಂದು ವರ್ಷಗಳಿಂದ ಅಕ್ಕಪಕ್ಕದ ಮನೆಯವರಾಗಲಿ, ಸಂಬಂಧಿಗಳಾಗಲಿ, ಸ್ನೇಹಿತರಾಗಲಿ ಕಾಲಿಟ್ಟಿಲ್ಲವೇನೋ ! ನಾವು ಅಲ್ಲಿಗೆ ಹೋದಾಗ ಬಾಗಿಲಲ್ಲಿ ಹಣ್ಣು ಹಣ್ಣು ಮುದುಕರೊಬ್ಬರು ಕೈ ಮುಗಿದು ಬಿಕ್ಕಳಿಸುತ್ತಾ ನಮ್ಮನ್ನು ಬರ ಮಾಡಿಕೊಂಡರು. ನಂತರ ಒಂದು ನಿಮಿಷ ನಮ್ಮೆಲ್ಲರದ್ದೂ ಗಾಢ ಮೌನ. ಆ ವೃದ್ಧ ಉಸಿರು ಬಿಗಿಹಿಡಿದು ಉಮ್ಮಳಿಸಿ ಬರುವ ದುಃಖವನ್ನು ಪೂರ್ತಿ ಹೊರ ಹಾಕಲೂ ಆಗದೇ, ನುಂಗಲೂ ಆಗದೆ ಹೊಟ್ಟೆ ಹಿಡಿದು ನಿಂತೇ ಇದ್ದರು. ಎಂತಹ ದಯನೀಯ ಸ್ಥಿತಿಯೆಂದರೆ ಅದನ್ನು ವಿವರಿಸಲು ಪದಗಳೇ ಸಿಗುತ್ತಿಲ್ಲ.

ಪಾಳೆಗಾರಿಕೆ, ಹಣ, ಅಧಿಕಾರದ ಮದದಲ್ಲಿ ನಡೆದ ಘೋರ ಪಾಪಕೃತ್ಯವೊಂದನ್ನು ಮುಚ್ಚುವ ಹುನ್ನಾರದ ಭಾಗವಾಗಿ ಅಮಾಯಕ ಮಗನನ್ನು ಆರೋಪಿ ಮಾಡಿದ ಪರಿಣಾಮ, 38 ವರ್ಷಗಳ ಕಾಲ ಪಾಠ ಮಾಡಿ ಮೇಷ್ಟ್ರೊಬ್ಬರ ಕುಟುಂಬ ಮಾನಸಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಛಿದ್ರಗೊಂಡು ಅಜ್ಞಾತವಾಗಿ ಬದುಕುವಂತಾಗಿದೆ.

2012ರಲ್ಲಿ ಧರ್ಮಸ್ಥಳದಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ/ ಕೊಲೆ ಸಂಬಂಧ ಆರೋಪಿ ಎಂದು ಬಂಧನಕ್ಕೊಳಗಾಗಿ, ಹನ್ನೊಂದು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿ ಕಡೆಗೂ ನಿರ್ದೋಷಿಯಾದ ಕಾರ್ಕಳದ ಬೈಲೂರಿನ ಸಂತೋಷ್‌ ರಾವ್‌ ಅವರ ಮನೆಯ ಪರಿಸ್ಥಿತಿಯಿದು.

Advertisements

ಹನ್ನೊಂದು ವರ್ಷಗಳ ಕಾನೂನು ಹೋರಾಟದ ನಂತರ ನಿರ್ದೋಷಿಯಾಗಿ ಹೊರಬಂದರೂ ಸಂತೋಷ್‌ ರಾವ್‌ ಮಾಧ್ಯಮಗಳಿಗೆ ಹೇಳಿಕೆ ನೀಡಲು ನಿರಾಕರಿಸಿರುವ ಕಾರಣ ಅವರ ಅಣ್ಣ ಸಂಜಯ್‌ ರಾವ್‌ ಅವರನ್ನು ಸಂಪರ್ಕಿಸಿ ಅವರ ಮನೆಗೆ ಹೋಗುವ ಪ್ರಯತ್ನವನ್ನು ಈ ದಿನ ಡಾಟ್‌ ಕಾಮ್‌ ಮತ್ತು ನ್ಯೂಸ್‌ ಮಿನಿಟ್‌ ಮಾಡಿತ್ತು. ಶುಕ್ರವಾರ (ಜು.7) ಬೈಲೂರಿನ ಅವರ ಮನೆಗೆ ನಮ್ಮ ತಂಡ ಭೇಟಿ ನೀಡಿದಾಗ ಸಂತೋಷ್‌ ಅವರ ತಂದೆ ಸುಧಾಕರ ರಾವ್‌ ಮತ್ತು ಸಹೋದರ ಸಂಜಯ್‌ ರಾವ್‌ ಅವರು ಬಿಚ್ಚಿಟ್ಟ ನೋವುಗಳು ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.

ಸುಧಾಕರ ರಾವ್‌ ಅವರ ಒಡಲಾಳದ ಮಾತುಗಳು ಇಲ್ಲಿವೆ…
“ಅತ್ಯಾಚಾರದ ಆರೋಪ ಹೊರಿಸಿ ಸಂತೋಷನನ್ನು ಬಂಧನ ಮಾಡಿದ ದಿನದಿಂದ ಈ ಕ್ಷಣದವರೆಗೂ ನಾವು ಅನುಭವಿಸುತ್ತಿರುವ ನೋವು ಹೊರ ಜಗತ್ತಿನ ಅಂದಾಜಿಗೂ ಸಿಗಲಿಕ್ಕಿಲ್ಲ. ನಮ್ಮ ಇಡೀ ಕುಟುಂಬ ಮಾನಸಿಕವಾಗಿ ಸಾಮಾಜಿಕವಾಗಿ, ಆರ್ಥಿಕವಾಗಿ ಜರ್ಜರಿತಗೊಂಡಿದೆ. ನಮ್ಮನ್ನು ಆ ಕ್ಷಣದಿಂದ ಜನರು ನೋಡುವ ಬಗೆ ಬದಲಾಯಿತು. 38 ವರ್ಷ ಪಾಠ ಮಾಡಿದ ಮೇಷ್ಟ್ರು ನಾನು. ಆ ಘಟನೆಯಿಂದ ಅಕ್ಕಪಕ್ಕದ ಜನ ನಮ್ಮನ್ನು ಸಂಶಯದಿಂದ ನೋಡುವಂತೆ ಮಾಡಿತ್ತು. ಪರಿಚಿತರು ನಮ್ಮನ್ನು ಮತನಾಡಿಸದೇ ಇರುವುದು, ನೆಂಟರಿಷ್ಟರೂ ನಮ್ಮ ಮಾತನ್ನು ನಂಬದ ಸ್ಥಿತಿಗೆ ದೂಡಿತ್ತು.

ಸಂತೋಷ ಮೂರನೆಯ ಮಗ. ಮೊದಲ ಮಗನಿಗೆ ಅದಾಗಲೇ ಮದುವೆಯಾಗಿ ಆತ ಬೇರೆ ವಾಸವಿದ್ದ. ಆ ಘಟನೆಯ ನಂತರ ಸಂತೋಷನ ಎರಡನೇ ಅಣ್ಣ ಮತ್ತು ತಮ್ಮನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಅಮ್ಮ ಶಶಿಕಲಾ ದೇವಿ ಮುದ್ದಿನ ಮಗನ ಬಂಧನದ ನಂತರ ಹಾಸಿಗೆ ಹಿಡಿದಳು. ಒಮ್ಮೆಯಾದರೂ ಮಗನ ಮುಖ ನೋಡಬೇಕು ಎಂದು ಆಕೆ ಜೀವ ಹಿಡಿದಿಟ್ಟು ಕಾದರೂ ಆಕೆಯ ಆಸೆ ಈಡೇರಿಸಲು ಆಗಲಿಲ್ಲ ಎಂಬ ಕೊರಗು ಈಗಲೂ ಚುಚ್ಚುತ್ತಿದೆ. ನಾವೆಷ್ಟೇ ಅರ್ಜಿ ಸಲ್ಲಿಸಿದರೂ ಅಮ್ಮ- ಮಗನ ಭೇಟಿಗೆ ಕೋರ್ಟ್‌ ಅವಕಾಶ ನೀಡಲಿಲ್ಲ. ಅದೇ ಕೊರಗಿನಲ್ಲಿ ಆಕೆ ಕೊನೆಯುಸಿರೆಳೆದಳು. ಕೊನೆಗೆ ಅಂತ್ಯ ಸಂಸ್ಕಾರಕ್ಕಾದರೂ ಮಗನನ್ನು ಕಳಿಸಿಕೊಡಿ ಎಂಬ ಮನವಿಯನ್ನೂ ತಿರಸ್ಕರಿಸಲಾಯಿತು. ಅಷ್ಟು ಕ್ರೂರವಾಗಿ ನಮ್ಮನ್ನು ನಡೆಸಿಕೊಳ್ಳುವ ಹಕೀಕತ್ತು ಏನಿತ್ತೋ ಅವರಿಗೆ ಗೊತ್ತಿಲ್ಲ.

ಮಗನ ಬಂಧನದ ವಿಷಯ ತಿಳಿದು ಪೊಲೀಸ್‌ ಠಾಣೆಗೆ ಹೋದಾಗ ಪೊಲೀಸರು ನನ್ನ ಎದುರೇ ಹಿಗ್ಗಾಮುಗ್ಗ ಹೊಡೆಯುತ್ತಿದ್ದರು. ʼನನಗೆ ವಿಷಯವೇ ಗೊತ್ತಿಲ್ಲ ಅಪ್ಪ, ನಾನೇನೂ ಮಾಡಿಲ್ಲʼ ಎಂದು ಹೇಳಿಕೊಂಡ. ಪೊಲೀಸರ ಏಟು ಮತ್ತು ಅಪ್ಪನಿಗೆ ಆಗುವ ಅವಮಾನ ಸಹಿಸಲಾಗದೇ, ʼನಾನು ತಪ್ಪೊಪ್ಪಿಕೊಳ್ಳುತ್ತೇನೆ ಅಪ್ಪ… ಶಿಕ್ಷೆಯಾದರೆ ನನಗೆ ಒಬ್ಬನಿಗೆ ಆಗಲಿ… ನೀವೆಲ್ಲ ಹಿಂಸೆ ಅನುಭವಿಸುವುದು ಬೇಡʼ ಎಂದು ಹೇಳಿದ. ʼನೀನು ತಪ್ಪು ಮಾಡದ ಮೇಲೆ ಯಾಕೆ ತಪ್ಪೊಪ್ಪಿಕೊಳ್ಳುತ್ತಿ? ಬೇಡ ಹಾಗೆ ಮಾಡಬೇಡʼ ಎಂದು ಹೇಳಿದೆ. ಆದರೆ, ಪೊಲೀಸರು ಆತನಿಗೆ ನೀಡುತ್ತಿರುವ ಹಿಂಸೆಯ ಕಾರಣದಿಂದ ತಪ್ಪೊಪ್ಪಿಕೊಳ್ಳುವ ನಿರ್ಧಾರಕ್ಕೆ ಬಂದುಬಿಟ್ಟಿದ್ದ. ಅಸಲಿಗೆ ಸೌಜನ್ಯ ನಾಪತ್ತೆಯಾದ ರಾತ್ರಿ ಆತ ಶೃಂಗೇರಿಯ್ಲಲಿಯೇ ಇದ್ದ ಎಂಬುದಕ್ಕೆ ಪುರಾವೆ ಇತ್ತು. ಪೊಲೀಸರಿಗೆ ಇದು ಗೊತ್ತಿಲ್ಲದ ವಿಷಯವಲ್ಲ. ಆದರೆ ಅಮಾಯಕನೊಬ್ಬನನ್ನು ಅಪರಾಧಿ ಎಂದು ಬಿಂಬಿಸುವುದಕ್ಕೆ ಅವರಿಗೂ ಒತ್ತಡ ಇತ್ತು ಎನಿಸುತ್ತಿದೆ.

ಕುಸುಮಾವತಿ 1
ಸೌಜನ್ಯಳ ತಾಯಿ ಕುಸುಮಾವತಿ ಮತ್ತು ಸಂತೋಷ್‌ ತಂದೆ ಸುಧಾಕರ ರಾವ್‌ ಮೊದಲ ಬಾರಿ ಭೇಟಿಯಾಗಿ ಎದೆಭಾರ ಇಳಿಸಿಕೊಂಡ ಕ್ಷಣ…

ಸಂತೋಷ ಅಮ್ಮನ ಮುದ್ದಿನ ಮಗ. ಆತ ಓದಿನಲ್ಲೂ ಮುಂದಿದ್ದ. ಡಿಪ್ಲೊಮಾ ಮಾಡಿಕೊಂಡಿದ್ದ. ಎರಡೂ ಕೈಗಳಿಂದ ಏಕಕಾಲದಲ್ಲಿ ಮುದ್ದಾಗಿ ಬರೆಯುವ ವಿಶೇಷ ಪ್ರತಿಭೆ ಇತ್ತು. ಆದರೆ, ದೇವರ ಬಗೆಗಿನ ಒಲವು ಹೆಚ್ಚಾಗಿ ದೇವಸ್ಥಾನಗಳಿಗೆ ಸುತ್ತುವುದು ಅಭ್ಯಾಸ ಮಾಡಿಕೊಂಡಿದ್ದ. ಸ್ವಲ್ಪ ಹಣ ಕೈಗೆ ಬಂದರೆ ಸಾಕು ದೇವಸ್ಥಾನಗಳಿಗೆ ಹೋಗಿ ಬರುವುದು ಅವನ ರೂಢಿಯಾಗಿತ್ತು. ಆದರೆ ಮನೆ, ತಂದೆ ತಾಯಿ, ಸಹೋದರರ ಬಗ್ಗೆ ಅಪಾರ ಪ್ರೀತಿಯಿದ್ದ ಹುಡುಗ. ನನ್ನ ನಾಲ್ಕೂ ಮಕ್ಕಳಿಗೆ ಹೊರಗೆ ಸ್ನೇಹಿತರಿಲ್ಲ. ಅವರಿಗೆ ಅವರೇ ಸ್ನೇಹಿತರು. ಹೀಗಾಗಿ ಸಂತೋಷನ ಮೇಲೆ ಆರೋಪ ಬಂದ ನಂತರ ಮೂವರು ಮಕ್ಕಳ ಭವಿಷ್ಯವೂ ಮಂಕಾಯಿತು. ಇಬ್ಬರು ವಿದ್ಯಾಭ್ಯಾಸ ನಿಲ್ಲಿಸಿದರೆ ದೊಡ್ಡ ಮಗ ಸಂಜಯ ಸ್ವಂತ ವ್ಯವಹಾರ ಬಿಟ್ಟು ತಮ್ಮನಿಗಾಗಿ ಕೋರ್ಟು ಕಚೇರಿ ಅಲೆಯುವಂತಾಯಿತು. ನನ್ನ ಹೆಂಡತಿಯನ್ನು ಕಳೆದುಕೊಂಡ ನಂತರ ಈ ಮನೆಗೆ ಹೆಣ್ಣು ದಿಕ್ಕಿಲ್ಲದಂತಾಯಿತು. ಇಬ್ಬರು ಮಕ್ಕಳು ಅಡುಗೆ ಮಾಡಿಟ್ಟು ಕೆಲಸಕ್ಕೆ ಹೋದರೆ ಸಂಜೆ ಬರುತ್ತಾರೆ. ಉಳಿದಂತೆ ಏಕಾಂಗಿಯಾಗಿ ಮನೆಯಲ್ಲಿ ಕಳೆಯುವಂತಾಗಿದೆ. ಬಿಪಿ, ಶುಗರ್‌ ಕಾಯಿಲೆ ಇದೆ. ಓಡಾಡಲು ಕಷ್ಟವಾಗುತ್ತಿದೆ.

ʼಅಮ್ಮ ಇಲ್ಲದ ಮನೆಗೆ ಬರುವುದಕ್ಕೆ ಮನಸ್ಸಾಗುತ್ತಿಲ್ಲʼ ಎಂದು ಸಂತೋಷ ಮನೆಗೆ ಬರುವುದನ್ನೇ ನಿಲ್ಲಿಸಿದ. ಅವನಿಗೆ ಜಾಮೀನು ಸಿಕ್ಕ ನಂತರ ಒಮ್ಮೆಯಷ್ಟೇ ಮನೆಗೆ ಬಂದು ಹೋಗಿದ್ದ. ಈಗ ಸಿಬಿಐ ಕೋರ್ಟ್‌ ನಿರ್ದೋಷಿ ಎಂದು ಖುಲಾಸೆ ಮಾಡಿದ ಮೇಲೂ ಆತ ಮನೆಗೆ ಬಂದಿಲ್ಲ. ಗುಡಿಯೊಂದರಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತ, ಭಜನೆ ಮಾಡುತ್ತಾ ದಿನ ಕಳೆಯುತ್ತಿದ್ದಾನೆ. ಆತನಿಗೆ ಪೊಲೀಸರು ಗಂಭೀರವಾಗಿ ಹಲ್ಲೆ ಮಾಡಿದ ಪರಿಣಾಮ ಮೂಳೆ ನೋವು, ಹೊಟ್ಟೆ, ಕತ್ತು ನೋವಿದೆ. ಹಾಗಾಗಿ ಈಗ ದುಡಿಯುವುದಕ್ಕೂ ಆಗುತ್ತಿಲ್ಲ. ಅವನ ಜೀವನ ನಿರ್ವಹಣೆಗೆ ಸರ್ಕಾರ ನೆರವು ನೀಡಬೇಕಿದೆ. ನಾವೂ ಆ ಮಂಜುನಾಥನ ಭಕ್ತರೇ. ನೋಡುವ ಅವ ತಪ್ಪಿತಸ್ಥರಿಗೆ ಶಿಕ್ಷೆ ಕೊಡುತ್ತಾನಾ ಅಂತ” ಎನ್ನುತ್ತಾರೆ ಸುಧಾಕರ ರಾವ್‌.

ಬೈಲೂರು
ಸುಧಾಕರ ರಾವ್‌ ಅವರ ಮನೆ ʼಬಾಲಾಜಿʼ

ಹೆಪ್ಪುಗಟ್ಟಿದ ನೋವು, ಹುತ್ತಗಟ್ಟಿದ ಮನೆ: ಸುಧಾಕರ ರಾವ್‌ ಅವರ ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಯಾರದ್ದೋ ಷಢ್ಯಂತ್ರಕ್ಕೆ ಬಲಿಯಾಗಿ ತುಂಬು ಕುಟುಂಬದ ನಿಜ ಸಂತೋಷವನ್ನೇ ಕಳೆದುಕೊಂಡ ಮನೆ ಎಂಬುದು ಮೊದಲ ನೋಟಕ್ಕೇ ಅರಿವಾಗುತ್ತದೆ. ತಾಯಿ ಹೋದ ನಂತರ ಆ ಮನೆಯ ದೂಳು ಹೊಡೆದು ವರ್ಷಗಳೇ ಸಂದಿವೆಯೇನೋ. ಪಾತ್ರೆ, ವಸ್ತುಗಳೆಲ್ಲ, ಅಸ್ತವ್ಯಸ್ತಗೊಂಡ ಸ್ಥಿತಿಯಲ್ಲಿವೆ. ಮನೆಯ ಕೋಣೆಗಳ ಗೋಡೆಗಳೆಲ್ಲ ಹುತ್ತಗಟ್ಟಿವೆ. ಪ್ರಿಡ್ಜ್‌ ಆಫ್‌ ಮಾಡಿ ಮೂಲೆಗಿಡಲಾಗಿದೆ. ಟೀವಿ ಆನ್‌ ಮಾಡಿ ಅದೆಷ್ಟು ವರ್ಷಗಳಾದವೊ! ಹಗಲೆಲ್ಲ ಒಂಟಿ ಜೀವವೊಂದು ಹಳೆಯ ಘಟನೆಗಳ ಮೆಲುಕು ಹಾಕುತ್ತ ದಿನವೆಣಿಸುತ್ತಿದೆ. ಮಕ್ಕಳು ದುಡಿಯುತ್ತಿದ್ದಾರೆ. ಆದರೆ ಅವರಲ್ಲಿ ಜೀವನೋತ್ಸಾಹ ಬತ್ತಿದೆ. ಆಸೆಗಳೆಲ್ಲ ಕಮರಿ ಹೋಗಿವೆ.

ಆದರೆ, ಅವರಿನ್ನೂ ʼದೇವರು ಕೈ ಹಿಡಿತಾನೆʼ ಎಂದು ಕಾಯುತ್ತಿರುವಂತೆ ದೇವರ ಕೋಣೆಯಲ್ಲಿ ದೊಡ್ಡ ದೊಡ್ಡ ದೇವರ ಫೋಟೋಗಳ ಮುಂದೆ ನಿರಂತರ ತುಪ್ಪದ ದೀಪ ಉರಿಯುತ್ತಲೇ ಇದೆ. ಕೋಣೆಯ ತುಂಬ ಹರಳೆಣ್ಣೆ ಬಾಟಲಿ, ಕಂಚಿನ ದೀಪಗಳು ಪೂಜಾ ಪರಿಕರಗಳ ರಾಶಿಯೇ ಇದೆ.

ನಮ್ಮ ಜೊತೆ ಮಾತನಾಡುತ್ತಾ ಮನಸ್ಸು ಹಗುರ ಮಾಡಿಕೊಂಡ ಸುಧಾಕರ ರಾವ್‌, ನಾವು ಹೊರಡುವ ವೇಳೆಗೆ ರಾಜಕಾರಣದ ಮಾತು ಶುರು ಮಾಡಿದ್ದರು. ಮಾತನಾಡದೇ ಎಷ್ಟೋ ವರ್ಷಗಳಾದವೇನೋ ಎಂಬಷ್ಟು ಲವಲವಿಕೆ ಅವರ ಮುಖದಲ್ಲಿ ಕಂಡು ಬಂತು. ಮುಖ್ಯವಾಗಿ ಈ ಕುಟುಂಬಕ್ಕೆ ಬಂಧು-ಬಳಗ ಎಂಬುದೇ ಇಲ್ಲದಂತಾಗಿದೆ. ತುರ್ತಾಗಿ ಅವರಿಗೆ ಒಂದು ಹಿಡಿ ಪ್ರೀತಿ ಬೇಕು, ಅಪ್ಪುಗೆಯ ಸಾಂತ್ವನ ಬೇಕಿದೆ ಅಷ್ಟೇ. ಈ ಸಮಾಜ ಅಷ್ಟನ್ನೂ ನೀಡಲಾರದ ಮಟ್ಟಕ್ಕೆ ತಲುಪಿದೆ ಎಂಬುದಕ್ಕೆ ಆ ಮನೆಯೇ ಸಾಕ್ಷಿ.

ಹೇಮಾ 2
ಹೇಮಾ ವೆಂಕಟ್
+ posts

ʼಈ ದಿನ.ಕಾಮ್‌ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್
ಹೇಮಾ ವೆಂಕಟ್
ʼಈ ದಿನ.ಕಾಮ್‌ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

2 COMMENTS

  1. ಮಾದ್ಯಮ ಅಂತ ಕರೆಸಿಕೊಳ್ಳಬೇಕು ಎಂದಾದರೆ ಇಂತಹ ವರದಿಗಳನ್ನು ಮಾಡಬೇಕು. ಮನುಷ್ಯರು ಎಂದು ಕರೆಸಿಕೊಳ್ಳಬೇಕು ಎಂದಾದರೆ ಈ ವರದಿಯನ್ನು ಓದ ಬೇಕು, ಓದಿ ಹಂಚಿಕೊಳ್ಳಬೇಕು….

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X