ಭಾರತೀಯ ಚಿತ್ರರಂಗದಲ್ಲಿ ಸುದೀರ್ಘ ವರ್ಷಗಳ ಕಾಲ ಸಕ್ರಿಯವಾಗಿದ್ದ ಖ್ಯಾತ ನಿರ್ದೇಶಕ, ಚಿತ್ರಕತೆಗಾರ, ನಿರ್ಮಾಪಕ ಶ್ಯಾಮ್ ಬೆನಗಲ್ ತಮ್ಮ 90ರ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಚಿತ್ರರಂಗದ ಹಿರಿಯ ವ್ಯಕ್ತಿ ಕಣ್ಮರೆಯಾಗಿದ್ದಾರೆ. ಭಾರತದಲ್ಲಿ ಸಿನಿಮಾ ರಂಗದ ಆಯಾಮವನ್ನೇ ಬದಲಿಸಿ, ಹೊಸ ರೀತಿಯ ಸಿನಿಮಾಗಳಿಗೆ ನಾಂದಿ ಹಾಡಿದ ಬೆನಗಲ್, ಶ್ರೇಷ್ಠ ಸಿನಿಮಾ ನಿರ್ಮಾಪಕ ಎಂಬ ಹಿರಿಮೆಯನ್ನು ಪಡೆದಿದ್ದವರು. ಮಿಗಿಲಾಗಿ ಕನ್ನಡಿಗರು, ಕರ್ನಾಟಕದವರು.
ಬೆನಗಲ್ ಅವರು ಜಾಹೀರಾತು ನಿರ್ಮಾಣ, ಕಂಟೆಂಟ್ ರೈಟರ್, ಬೋಧಕ ವೃತ್ತಿಯಿಂದ ಹಿಡಿದು ಕಿರುತೆರೆಯಲ್ಲಿ ಧಾರಾವಾಹಿಗಳ ನಿರ್ಮಾಣ, ನಿರ್ದೇಶಕ, ನಿರ್ಮಾಪಕನವರೆಗೂ ಕೆಲಸ ಮಾಡಿದ್ದಾರೆ. 1970/80ರ ದಶಕಗಳಲ್ಲಿ ಹೊಸ ಅಲೆಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ, ಚಿತ್ರರಂಗಕ್ಕೆ ಹೊಸ ಬುನಾದಿ ಹಾಕಿಕೊಟ್ಟಿದ್ದಾರೆ. ಹೊಸ ಅಲೆ ಸಿನಿಮಾ ಚಳುವಳಿಯ ಭಾಗವಾಗಿದ್ದ ಬೆನಗಲ್ ಸಿನಿಮಾ ನಿರ್ಮಾಣದಲ್ಲಿ ವಿಭಿನ್ನ ಸಾಧ್ಯತೆಗಳನ್ನು, ಹೊಸ ಪ್ರಯೋಗಗಳನ್ನು ಪರಿಚಯಿಸಿದ್ದವರು. ಸಮಾಜದಲ್ಲಿನ ಅಸಮಾನತೆ ಮತ್ತು ಅನ್ಯಾಯಗಳಿಗೆ ಕನ್ನಡಿ ಹಿಡಿಯುವ ಪರ್ಯಾಯ ಸಿನಿಮಾಗಳನ್ನು ತೆರೆಗೆ ತಂದವರು. ಚಿತ್ರರಂಗದಲ್ಲಿ ಹೊಸ ಮನ್ವಂತರ ಸೃಷ್ಟಿಸಿದ್ದ ಬೆನಗಲ್ ಅವರಿಗೆ ಬರೋಬ್ಬರಿ 18 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ನಾನಾ ಗೌರವಗಳು ಸಂದಿವೆ.
ಬೆನಗಲ್ ಹುಟ್ಟಿದ್ದು ಹೈದರಾಬಾದ್ನಲ್ಲಿ. ಆದರೆ, ಅವರು ಕನ್ನಡಿಗರು. ಅವರ ತಂದೆ ಶ್ರೀಧರ್ ಬಿ ಬೆನಗಲ್ ಅವರು ಮೂಲತಃ ಕರ್ನಾಟಕದವರು. ಉಡುಪಿ ಜಿಲ್ಲೆಯ ಬ್ರಹ್ಮಾವರದ ಬೆನಗಲ್ ಗ್ರಾಮದವರು. ಶ್ರೀಧರ್ ಅವರೂ ಕೂಡ ಚಿತ್ರರಂಗದಲ್ಲಿ ಫೋಟೋಗ್ರಫಿ ಕೆಲಸ ಮಾಡುತ್ತಿದ್ದರು. ಅವರೊಂದಿಗೆ ಬೆಳೆದ ಬೆನಗಲ್ ಅವರಿಗೂ ಸಿನಿಮಾ ಮೇಲಿನ ಆಸಕ್ತಿ ಚಿಕ್ಕವಯಸ್ಸಿನಲ್ಲಿಯೇ ಚಿಗುರೊಡೆದಿತ್ತು. ತಮ್ಮ ತಂದೆ ಕೊಡಿಸಿದ್ದ ಕ್ಯಾಮೆರಾದಲ್ಲಿ ಬೆನಗಲ್ ಅವರು 12ನೇ ವಯಸ್ಸಿನಲ್ಲಿಯೇ ಕಿರುಚಿತ್ರವೊಂದನ್ನು ತಯಾರಿಸಿದ್ದರು. ಸಿನಿಮಾ ಆಸಕ್ತಿಯನ್ನು ಪ್ರದರ್ಶಿಸಿದ್ದರು.
ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಬೆನಗಲ್, ವ್ಯಾಸಂಗ ಮಾಡುವಾಗಲೇ ವಿಶ್ವವಿದ್ಯಾಲಯದಲ್ಲಿ ಸಿನಿಮಾ ಕ್ಲಬ್ ಹುಟ್ಟುಹಾಕಿದ್ದರು. ಓದಿನ ಬಳಿಕ, ಮುಂಬೈನ ಜಾಹೀರಾತು ಕಂಪನಿಯಲ್ಲಿ ‘ಕಂಟೆಂಟ್ ರೈಟರ್’ ಆಗಿ ಕೆಲಸಕ್ಕೆ ಸೇರಿದರು. ಜಾಹೀರಾತು ನಿರ್ಮಾಣಗಳ ನಡುವೆಯೇ ಕಿರುಚಿತ್ರಗಳನ್ನೂ ಚಿತ್ರೀಕರಿಸುವ ಅಭ್ಯಾಸ ಮುಂದುವರೆಸಿದ್ದರು. ತಮ್ಮ ಸೃಜನಶೀಲತೆಯಿಂದ ಅದೇ ಕಂಪನಿಯಲ್ಲಿ ಕ್ರಿಯೇಟಿವ್ ಹೆಡ್ ಆಗಿಯೂ ಬಡ್ತಿ ಪಡೆದರು.

ಕರ್ನಾಟಕ ಮೂಲದ ಕುಟುಂಬದಲ್ಲಿ ಹುಟ್ಟಿ, ತೆಲುಗು ಸೀಮೆಯಲ್ಲಿ ಬೆಳೆದು, ಹಿಂದಿ ಪ್ರದೇಶಕ್ಕೆ ಲಗ್ಗೆ ಇಟ್ಟಿದ್ದ ಬೆನಗಲ್, ಗುಜರಾತಿ ಭಾಷೆಯಲ್ಲಿ ‘ಘೇರ್ ಬೈಟಾ ಗಂಗಾ’ (ಆವರಿಸಿದ ಗಂಗಾ) ಎಂಬ ಕಿರುಚಿತ್ರವನ್ನು 1962ರಲ್ಲಿ ನಿರ್ಮಾಣ ಮಾಡಿದ್ದರು. ಜಾಹೀರಾತು ಕ್ಷೇತ್ರದಲ್ಲಿ ಸುದೀರ್ಘ ಅವಧಿಯಲ್ಲಿ ದುಡಿದ ಅವರು 900ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳು ಮತ್ತು ಜಾಹೀರಾತುಗಳನ್ನು ತಯಾರಿಸಿದ್ದಾರೆ.
ಜೊತೆಗೆ, 1966 ಮತ್ತು 73ರ ನಡುವೆ ಬೆನಗಲ್ ಅವರು ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ (ಎಫ್ಟಿಐಐ) ಸಿನಿಮಾ ನಿರ್ಮಾಣಗಳ ಬಗ್ಗೆ ಬೋಧಿಸಿದ್ದಾರೆ. ಜಾಹೀರಾತು ನಿರ್ಮಾಣ, ಬೋಧನೆ, ಕಿರುಚಿತ್ರಗಳಿಂದ ಸಿನಿಮಾ ಇಂಡಸ್ಟ್ರಿಯತ್ತ ವಾಲಿದ ಬೆನಗಲ್ ಅವರು ಆವರೆಗೆ ಚಿತ್ರರಂಗವು ಮುಟ್ಟದಿದ್ದ ವಿಚಾರಗಳನ್ನು ಒಳಗೊಂಡು ಸಿನಿಮಾಗಳನ್ನು ಮಾಡಿದವರು.
ತೆಲಂಗಾಣದಲ್ಲಿ ಬಡವರ ಮೇಲಾಗುತ್ತಿದ್ದ ಆರ್ಥಿಕ, ಲೈಂಗಿಕ ಶೋಷಣೆಗಳನ್ನು ಸಿನಿಮಾದ ಮೂಲಕ ಮುನ್ನೆಲೆಗೆ ತಂದ ಖ್ಯಾತಿಯೂ ಬೆನಗಲ್ ಅವರದ್ದು. ಬಡವರ ಮೇಲಿನ ಶೋಷಣೆಗಳ ಕುರಿತು 1973ರಲ್ಲಿ ಹಿಂದಿಯಲ್ಲಿ ‘ಅಂಕುರ್’ ಸಿನಿಮಾವನ್ನು ತಯಾರಿಸಿದರು. ವಿಶೇಷವಾಗಿ ಈ ಸಿನಿಮಾಗೆ ಅವರು ನಾಯಕನನ್ನಾಗಿ ಆಯ್ಕೆ ಮಾಡಿದ್ದು, ಆಗತಾನೇ ಪ್ರವರ್ದಮಾನಕ್ಕೆ ಬರುತ್ತಿದ್ದ ಕನ್ನಡ ನಟ ಅನಂತನಾಗ್ ಅವರನ್ನು. ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿಯೂ ಸಂದಿತು.

ಆ ನಂತರದಲ್ಲಿ, ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯಗಳನ್ನು ಆಧರಿಸಿ ‘ನಿಶಾಂತ್’ ಎಂಬ ಪ್ರತಿರೋಧದ ಸಿನಿಮಾ ನಿರ್ಮಾಣ ಮಾಡಿದರು. ಮುಸ್ಲಿಂ ಮಹಿಳೆಯರ ಸ್ಥಿತಿಗತಿಗಳು, ಗ್ರಾಮೀಣ ಸಬಲೀಕರಣ ಸೇರಿದಂತೆ ಸಾಮಾಜಿಕ ವಿಷಯಗಳನ್ನಿಟ್ಟುಕೊಂಡು ಹತ್ತಾರು ಸಿನಿಮಾಗಳನ್ನು ಮಾಡಿದರು. 1985ರಲ್ಲಿ ಸತ್ಯಜಿತ್ ರೇ ಅವರ ಜೀವನಾಧಾರಿತ ಡಾಕ್ಯುಮೆಂಟರಿ ಸಿನಿಮಾವನ್ನೂ ಕೂಡ ನಿರ್ಮಾಣ ಮಾಡಿದ್ದಾರೆ. ಅವರ ಸಿನಿಮಾಗಳಲ್ಲಿ ಅಂಕುರ್, ನಿಶಾಂತ್, ಮಂಥನ್, ಭೂಮಿಕಾ, ತ್ರಿಕಾಲ್, ಸರ್ದಾರಿ ಬೇಗಂ, ಜುನೂನ್, ಕಲಿಯುಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಜುಬೇದಾ ಸಿನಿಮಾಗಳು ಚಿತ್ರರಂಗದಲ್ಲಿ ಹೊಸ ಮನ್ವಂತರ ಸೃಷ್ಟಿಸಿದ್ದವು.
ಅವರ ಪ್ರಯತ್ನಕ್ಕೆ ಗುಜರಾತ್ ಹಾಲು ಉತ್ಪಾದಕರ ಸಂಘವೂ ಸೇರಿದಂತೆ ಅನೇಕ ಸಹಕಾರ ಸಂಸ್ಥೆಗಳು ಸಾಥ್ ಕೊಟ್ಟವು. ಬೆನಗಲ್ ಅವರ ವಿಭಿನ್ನ ಚಿತ್ರಗಳು ಸಮಾಜದ ಗಮನ ಸೆಳೆದವು. ವಿಶೇಷ, ವಿಭಿನ್ನ ಸಿನಿಮಾಗಳೊಂದಿಗೆ ನಾಸಿರುದ್ದೀನ್ ಶಾ, ಓಂ ಪುರಿ, ಸ್ಮಿತಾ ಪಾಟೀಲ್, ಅಮರೀಶ್ ಪುರಿ ಸೇರಿದಂತೆ ಹಲವಾರು ಕಲವಿದರು ಬೆನಗಲ್ ಅವರ ಗರಡಿಯಲ್ಲಿ ಬೆಳೆದು ಖ್ಯಾತ ನಟ-ನಟಿಯರಾಗಿ ಚಿತ್ರರಂಗವನ್ನು ಆವರಿಸಿಕೊಂಡರು.
ಈ ವರದಿ ಓದಿದ್ದೀರಾ?: ಅದಾನಿ ಸೋಲಾರ್ ಒಪ್ಪಂದದ ಹಿಂದಿದೆ ಕೇಂದ್ರ-ಆಂಧ್ರ ಸರ್ಕಾರಗಳ ಚಮತ್ಕಾರ
ಕಿರುತೆರೆಯಲ್ಲಿ ಧಾರಾವಾಹಿ ನಿರ್ಮಾಣದಲ್ಲೂ ಸೈ ಎನ್ನಿಸಿಕೊಂಡ ಬೆನಗಲ್ ಅವರು ಭಾರತೀಯ ರೈಲ್ವೇ ವಿಚಾರವನ್ನಿಟ್ಟುಕೊಂಡು ‘ಯಾತ್ರಾ’ ಧಾರಾವಾಹಿ ನಿರ್ದೇಶಿಸಿದರು. ಅಲ್ಲದೆ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ‘ಡಿಸ್ಕವರಿ ಆಫ್ ಇಂಡಿಯಾ’ ಕೃತಿಯನ್ನು ಆಧಾರವನ್ನಾಗಿಕೊಂಡು ‘ಭಾರತ್ ಏಕ್ ಖೋಜ್’ ಎಂಬ ಧಾರಾವಾಹಿಯನ್ನೂ ನಿರ್ಮಾಣ ಮಾಡಿದರು. ಅಲ್ಲದೆ, ಸಂವಿಧಾನ ಕುರಿತು ಹತ್ತು ಭಾಗಗಳುಳ್ಳ ‘ಸೀರೀಸ್’ಗಳನ್ನೂ ಕೂಡ ಬೆನಗಲ್ ನಿರ್ಮಿಸಿದ್ದಾರೆ.

ಅಲ್ಲದೆ, 1980ರಿಂದ 86ರವರೆಗೆ ಆರು ವರ್ಷಗಳ ಕಾಲ ನ್ಯಾಷನಲ್ ಫಿಲ್ಮ್ ಡೆವಲಪ್ಮೆಂಟ್ ಕಾರ್ಪೊರೇಷನ್ (ಎನ್ಎಫ್ಡಿಸಿ) ನಿರ್ದೇಶಕರಾಗಿಯೂ ಬೆನಗಲ್ ಸೇವೆ ಸಲ್ಲಿಸಿದ್ದಾರೆ. 88ರ ಹರೆಯದರಲ್ಲೂ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದ ಬೆನಗಲ್ ಅವರು 2022ರಲ್ಲಿ ‘ಮುಜಿಬ್: ದಿ ಮೇಕಿಂಗ್ ಆಫ್ ಎ ನೇಷನ್’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದು ಅವರ ಕೊನೆಯ ಸಿನಿಮಾ.
ಸಿನಿಮಾ ರಂಗದಲ್ಲಿ ಮಾನವೀಯ ನೆಲೆ, ಪ್ರತಿರೋಧ, ಸೃಜನಶೀಲತೆಯನ್ನು ಕಟ್ಟಿಕೊಟ್ಟ ಬೆನಗಲ್ ಅವರಿಗೆ ಸಿನಿಮಾ ಕ್ಷೇತ್ರದಲ್ಲಿನ ನಾನಾ ವಿಭಾಗಗಳಲ್ಲಿ 18 ರಾಷ್ಟ್ರ ಪ್ರಶಸ್ತಿಗಳು ಸಂದಿವೆ. 1976ರಲ್ಲಿಯೇ ಪದ್ಮಶ್ರೀ, 1991ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರಿಗೆ 2005ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.