ಸಣ್ಣತನದ ನಡವಳಿಕೆ ಪಿಯೂಷ್ ಗೋಯಲ್ ಅವರದ್ದೊ, ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳದ್ದೊ?

Date:

Advertisements

ಪಿಯೂಷ್‌ ಗೋಯಲ್‌ ಅವರ ಸಂಕುಚಿತ ಮಾತುಗಳು ಇದೇ ಮೊದಲೇನಲ್ಲ ಈ ಹಿಂದೆ ವಿರೋಧ ಪಕ್ಷದ ‘ಇಂಡಿಯಾ’ ಒಕ್ಕೂಟದ ಸದಸ್ಯರನ್ನು ‘ದೇಶದ್ರೋಹಿ’ಗಳೆಂದು ಕರೆದಿದ್ದರು. ಪಿಯೂಷ್‌ ವಿವಾದ ಇಷ್ಟಕ್ಕೆ ನಿಲ್ಲುವುದಿಲ್ಲ. ಕೆಲವು ತಿಂಗಳ ಹಿಂದೆ ಬೆಂಗಳೂರು ಹಾಗೂ ರಾಜ್ಯ ಸರ್ಕಾರದ ಮೇಲೆ ಕೆಂಗಣ್ಣು ತೋರಿದ್ದರು. ಗುಣಮಟ್ಟದ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರದ ನಿರಾಸಕ್ತಿಯಿಂದ ಬೆಂಗಳೂರು ನರಳುತ್ತಿದೆ. ಬೆಂಗಳೂರು ಹೊರತಾಗಿ ಭಾರತಕ್ಕೆ ಹೊಸ ಸಿಲಿಕಾನ್ ವ್ಯಾಲಿ ಬೇಕು ಎಂದಿದ್ದರು

ಇತ್ತೀಚಿಗಷ್ಟೆ ಮುಂಬೈನಲ್ಲಿ ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಿ ಪಿಯೂಷ್ ಗೋಯಲ್‌ ‘ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ತೆರಿಗೆಯಲ್ಲಿ ಕರ್ನಾಟಕ, ತಮಿಳುನಾಡು,ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ತಾವು ಕೇಂದ್ರಕ್ಕೆ ಸಲ್ಲಿಸಿದ ತೆರಿಗೆಯಲ್ಲಿ ಪಾಲಿಗೆ ಅನುಗುಣವಾಗಿ ತಮಗೆ ಪಾಲು ಸಿಗಬೇಕು ಎಂದು ಕೇಳುವುದು ಆ ರಾಜ್ಯಗಳ ಸಣ್ಣತನವಾಗಿದೆ. ಅಲ್ಲದೆ ಇದಕ್ಕಿಂತ ದುರದೃಷ್ಟಕರವಾದ ಘಟನೆ ಇನ್ನೊಂದಿಲ್ಲ. ದೇಶ ಅಭಿವೃದ್ಧಿಯಾಗಬೇಕಾದರೆ ಈಶಾನ್ಯ ಭಾಗದ 7 ರಾಜ್ಯಗಳು ಮತ್ತು ಪೂರ್ವದ ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಜಾರ್ಖಂಡ್‌ನಂಥ ರಾಜ್ಯಗಳು ಅಭಿವೃದ್ಧಿಯಾಗಬೇಕೆಂಬುದು ಪ್ರಧಾನಿ ಮೋದಿ ಅವರ ಅಭಿಪ್ರಾಯ. ಇತರೆ ರಾಜ್ಯಗಳು ಕೂಡಾ ಇದೇ ರೀತಿಯ ಮನೋಭಾವ ಹೊಂದಿರಬೇಕು. ಹೆಚ್ಚಿನ ತೆರಿಗೆ ಆದಾಯ ಹೊಂದಿರುವ ರಾಜ್ಯಗಳು, ಪ್ರಧಾನಿ ನರೇಂದ್ರ ಮೋದಿ ಅವರಂತೆ ವಿಶಾಲ ದೃಷ್ಟಿಕೋನದಿಂದ ಚಿಂತಿಸಬೇಕು’ ಎಂದು ಹೇಳಿದ್ದಾರೆ.

ಕೇಂದ್ರದ ಅನುದಾನ ತಾರತಮ್ಯದ ಕುರಿತು ಬಿಜೆಪಿಯೇತರ ಆಡಳಿತದ ದಕ್ಷಿಣದ ರಾಜ್ಯಗಳು ಕೇಂದ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವುದು ಸೇರಿದಂತೆ ನಾನಾ ರೀತಿಯಲ್ಲಿ ಹೋರಾಟ ನಡೆಸುತ್ತಿರುವ ಸಮಯದಲ್ಲೆ ಪಿಯೂಷ್ ಗೋಯಲ್‌ ನೀಡಿರುವ ಹೇಳಿಕೆ ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯುವ ಸಾಧ್ಯತೆ ಹೆಚ್ಚಾಗಿದೆ. ಪಿಯೂಷ್ ಮಾತು ಹೇಗಿದೆಯಂದರೆ ಯಾರಾದರೂ ತಾನು ಕೊಟ್ಟ ಹಣವನ್ನು ಮರಳಿ ವಾಪಸ್‌ ಕೇಳಿದರೆ ಹಣ ನೀಡಿದವರನ್ನೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತಾಗಿದೆ. ಪಿಯೂಷ್‌ ಗೋಯಲ್‌ ಅವರ ಸಂಕುಚಿತ ಮಾತುಗಳು ಇದೇ ಮೊದಲೇನಲ್ಲ ಈ ಹಿಂದೆ ವಿರೋಧ ಪಕ್ಷದ ‘ಇಂಡಿಯಾ’ ಒಕ್ಕೂಟದ ಸದಸ್ಯರನ್ನು ‘ದೇಶದ್ರೋಹಿ’ಗಳೆಂದು ಕರೆದಿದ್ದರು.   

Advertisements

ಪಿಯೂಷ್‌ ಗೋಯಲ್‌ ವಿವಾದ ಇಷ್ಟಕ್ಕೆ ನಿಲ್ಲುವುದಿಲ್ಲ. ಕೆಲವು ತಿಂಗಳ ಹಿಂದೆ ಬೆಂಗಳೂರು ಹಾಗೂ ರಾಜ್ಯ ಸರ್ಕಾರದ ಮೇಲೆ ಕೆಂಗಣ್ಣು ತೋರಿದ್ದರು. ಗುಣಮಟ್ಟದ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರದ ನಿರಾಸಕ್ತಿಯಿಂದ ಬೆಂಗಳೂರು ನರಳುತ್ತಿದೆ. ಬೆಂಗಳೂರು ಹೊರತಾಗಿ ಭಾರತಕ್ಕೆ ಹೊಸ ಸಿಲಿಕಾನ್ ವ್ಯಾಲಿ ಬೇಕು. ಕರ್ನಾಟಕ ಸರ್ಕಾರದ ಈ ಬೇಜವಾಬ್ದಾರಿತನದಿಂದಾಗಿ ಸಾವಿರಾರು ಉದ್ಯೋಗಗಳು ಮತ್ತು ಕೋಟಿಗಟ್ಟಲೆ ರೂಪಾಯಿ ಹೂಡಿಕೆಗಳು ರಾಜ್ಯದಿಂದ ದೂರವಾಗುತ್ತಿವೆ ಎಂದು ಹೇಳಿದ್ದರು. ಆಗ ಪಿಯೂಷ್‌ ಅವರ ಸಣ್ಣತನದ ಮಾತಿಗೆ ತಕ್ಕ ತಿರುಗೇಟು ನೀಡಿದ್ದ ರಾಜ್ಯ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ‘ಬೆಂಗಳೂರು ನಗರವು ತನ್ನ ಪರಿಸರ ವ್ಯವಸ್ಥೆ ಹಾಗೂ ತಂಪಾದ ವಾತಾವರಣದಿಂದ ಹೆಸರುವಾಸಿ. ಬೆಂಗಳೂರಿನಂತಹ ಸಮತೋಲಿತ ವಾತಾವರಣ ಹೊಂದಿದ ನಗರ ಭಾರತದಲ್ಲಿ ಬೇರೆ ಇಲ್ಲ. ಹೀಗಾಗಿ ಬೆಂಗಳೂರು ನಗರವು ದಶಕಗಳ ಹಿಂದೆಯೇ ಸಿಲಿಕಾನ್‌ ಸಿಟಿಯಾಗಿ ಗುರುತಿಸಿಕೊಂಡಿದೆ. ಭಾರತಕ್ಕೆ ನಮ್ಮದೇ ಆದ ಸಿಲಿಕಾನ್‌ ವ್ಯಾಲಿ ಬೇಕು ಎಂದಿರುವ ಕೇಂದ್ರ ಸಚಿವರು ಬೆಂಗಳೂರನ್ನು “ನಮ್ಮ ಸ್ವಂತ” ನಗರವೆಂದು ಏಕೆ ಪರಿಗಣಿಸುವುದಿಲ್ಲ ಹೀಗಾಗಿ ಹೊಸದಾಗಿ ಸಿಲಿಕಾನ್‌ ವ್ಯಾಲಿ ನಿರ್ಮಿಸುವ ಬದಲಿಗೆ ಬೆಂಗಳೂರಿನ ಅಭಿವೃದ್ಧಿಗೆ ಕೈಜೋಡಿಸಿ. ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು ಕೂಡ ಹಿಂದುಳಿದಿರುವುದನ್ನು ಗಮನಿಸಬೇಕು ಎಂದು ಹೇಳಿದ್ದರು.

ಪಿಯೂಷ್‌ ಗೋಯಲ್‌ ಅವರ ಕುಟುಂಬ ಹಾಗೂ ರಾಜಕೀಯ ಹಿನ್ನೆಲೆಯನ್ನು ಗಮನಿಸಿದರೆ ಎಲ್ಲ ಅಧಿಕಾರ ಅವರಿಗೆ ಆರಾಮದಾಯಕವಾಗಿ ಒಲಿದುಬಂದಿದೆ. ನೆಲಮಟ್ಟದಿಂದ ಬಂದ ಸಾಮಾನ್ಯ ಕಾರ್ಯಕರ್ತರ ಅವರಲ್ಲ. ತಂದೆ ವೇದ್‌ ಪ್ರಕಾಶ್ ಗೋಯಲ್‌ 2000ರ ದಶಕದಲ್ಲೇ ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. ತಾಯಿ ಚಂದ್ರಕಾಂತ್ ಗೋಯಲ್‌ ಮೂರು ಬಾರಿ ಶಾಸಕಿಯಾಗಿದ್ದರು. ವಂಶಪಾರಂಪರಿಕವಾದ ಅಧಿಕಾರ ತಾನಾಗಿಯೇ ದೊರಕಿತು. ಕಳೆದ 11 ವರ್ಷದಿಂದ ನರೇಂದ್ರ ಮೋದಿ ಸಂಪುಟದಲ್ಲಿ ವಿವಿಧ ಮಂತ್ರಿ ಹುದ್ದೆಗಳನ್ನು ಅನುಭವಿಸುತ್ತಿದ್ದಾರೆ. ಎರಡು ಬಾರಿ ರಾಜ್ಯಸಭೆ ಪ್ರತಿನಿಧಿಸಿದ್ದ ನಂತರ ಈ ಬಾರಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಸದಸ್ಯರಾಗಿದ್ದಾರೆ. ಹನ್ನೊಂದು ವರ್ಷಗಳಿಂದ ವಿವಿಧ ಮಂತ್ರಿಗಿರಿಯನ್ನು ಪಡೆದರೂ ಆಯಾ ಇಲಾಖೆಯನ್ನು ಅಭಿವೃದ್ಧಿಪಡಿಸಿದ್ದು ಮಾತ್ರ ಶೂನ್ಯ. ತೆರಿಗೆ, ದೇಶದ್ರೋಹ ಮುಂತಾದವುಗಳ ಬಗ್ಗೆ ಮಾತಾನಾಡುವ ಗೋಯಲ್ ರಾಜ್ಯ ಸರ್ಕಾರ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಮನವಿ ಮಾಡಿದ ಯಾವುದೇ ಬೇಡಿಕೆಗಳನ್ನು ಕೂಡ ಇಲ್ಲಿಯವರೆಗೆ ಈಡೇರಿಸಿಲ್ಲ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚುನಾವಣಾ ಪಾರದರ್ಶಕತೆ ನಗೆಪಾಟಲಿಗೀಡಾಯಿತೇ?

ಸಕಲೇಶಪುರದಲ್ಲಿ ನಡೆದ ಕಾಫಿ ಬೆಳೆಗಾರರ ಸಮಾವೇಶದಲ್ಲಿ ಕೆಲವು ತಿಂಗಳ ಹಿಂದೆ ಮಾತನಾಡಿದ್ದ ಗೋಯಲ್ 2011ರಿಂದ ಸ್ಥಗಿತಗೊಂಡಿದ್ದ ಸಮಗ್ರ ಕಾಫಿ ಅಭಿವೃದ್ಧಿ ಯೋಜನೆ ಮರು ಅನುಷ್ಠಾನ ಸೇರಿದಂತೆ ವಿವಿಧ ಕಡೆ ಕಾಫಿ ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ನಿರ್ಮಿಸುವ ಭರವಸೆ ನೀಡಿದ್ದರು. ಹಲವು ಯೋಜನೆಗಳಿಗೆ ಅನುದಾನ ನೀಡುವುದಾಗಿ ಕೂಡ ಹೇಳಿದ್ದರು. ಇವೆಲ್ಲವೂ ಇಲ್ಲಿಯವರೆಗೂ ಕೇವಲ ಮಾತುಗಳಾಗಿಯೆ ಉಳಿದಿವೆ.  

ತೆರಿಗೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ದಕ್ಷಿಣದ ರಾಜ್ಯಗಳಿಗೆ ಇತ್ತೀಚಿನ ವರ್ಷಗಳಲ್ಲಿ ಅನ್ಯಾಯವಾಗುತ್ತಲೇ ಇದೆ. 80 ಲೋಕಸಭಾ ಸ್ಥಾನಗಳಿರುವ ಉತ್ತರ ಪ್ರದೇಶಕ್ಕೆ ಅತ್ಯಂತ ಹೆಚ್ಚು ಅನುದಾನ ನೀಡಿದರೆ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ರಾಜಸ್ಥಾನ ನಂತರದ ಸ್ಥಾನದಲ್ಲಿವೆ. ದೇಶದಲ್ಲಿ ಹೆಚ್ಚು ತೆರಿಗೆ ಪಾವತಿ ಮಾಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ರಾಜ್ಯದಿಂದ ಪ್ರತಿ ವರ್ಷ 4.30 ಲಕ್ಷ ಕೋಟಿ ರೂ. ತೆರಿಗೆ ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತದೆ. ಆದರೂ, ತೆರಿಗೆ ಹಂಚಿಕೆಯಲ್ಲಿ ಕೇಂದ್ರವು ರಾಜ್ಯಕ್ಕೆ ದ್ರೋಹ ಮಾಡುತ್ತಲೇ ಬರುತ್ತಿದೆ. ಮಹಾರಾಷ್ಟ್ರದ ನಂತರ ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷ ತೆರಿಗೆ ಪಾಲಿನಲ್ಲಿ ಮತ್ತು ಕೇಂದ್ರದಿಂದ ಪ್ರಾಯೋಜಿತ ಯೋಜನೆಗಳ ಅನುದಾನಗಳಲ್ಲಿ ರಾಜ್ಯ ಪಡೆದುಕೊಂಡಿದ್ದು 50,257 ಕೋಟಿ ರೂ. ಮಾತ್ರ. ಅಂದರೆ ಕರ್ನಾಟಕದಿಂದ ಕೇಂದ್ರಕ್ಕೆ 100 ರೂಪಾಯಿ ನಿಡಿದರೆ, ಮರಳಿ ಸಿಗುವುದು 12 -15 ರೂಪಾಯಿ.

ಕಳೆದ ಐದು ವರ್ಷಗಳಲ್ಲಿ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಸುಮಾರು 60 ಸಾವಿರ ಕೋಟಿ ರೂ.ಗೂ ಹೆಚ್ಚು ಅನ್ಯಾಯವಾಗಿದೆ. ಇದರ ವಿರುದ್ಧ ಕೇಂದ್ರವನ್ನು ಪ್ರಶ್ನಿಸಬೇಕಾದ ಬಿಜೆಪಿ ಸಂಸದರು ರಾಜ್ಯದ ಜನರಿಗೆ ದ್ರೋಹವೆಸಗುತ್ತಿದ್ದಾರೆ. ಇತ್ತೀಚಿಗೆ ಕೇಂದ್ರದಿಂದ ರಾಜ್ಯಕ್ಕೆ ಕೇವಲ 6498 ಕೋಟಿ ರೂ.ಗಳ ತೆರಿಗೆ ಪಾಲು ಬಂದಿತ್ತು. ಆದರೆ ಉತ್ತರ  31000 ಕೋಟಿಗೂ ಹೆಚ್ಚಾಗಿ ಉತ್ತರ ಪ್ರದೇಶಕ್ಕೆ ನೀಡಲಾಗಿದೆ. ಉತ್ತರ ಪ್ರದೇಶಕ್ಕೂ ಕರ್ನಾಟಕಕ್ಕೂ ಹಂಚಿಕೆಯಾದ ಪಾಲಿನಲ್ಲಿ 30,000 ಕೋಟಿ ರೂ. ವ್ಯತ್ಯಾಸವಿದೆ.

ಬಡ ರಾಜ್ಯಗಳಿಗೆ ನೆರವು ನೀಡಬೇಕು ಎಂಬುದು ಸರಿ. ಆದರೆ, ಅದಕ್ಕೆಂದು ಪ್ರಗತಿ ಸಾಧಿಸುತ್ತಿರುವ ರಾಜ್ಯಗಳ ಹಿತಾಸಕ್ತಿಯನ್ನು ಹತ್ತಿಕ್ಕಬಾರದು. ಉತ್ತಮವಾಗಿ ಕಾರ್ಯನಿರ್ವಹಿಸಿ, ತೆರಿಗೆ ಸಂಗ್ರಹದಲ್ಲಿ ಗುರಿ ಮುಟ್ಟಿರುವ ಕರ್ನಾಟಕದಂತಹ ರಾಜ್ಯಗಳಿಗೆ ನಷ್ಟವಾಗುವುದನ್ನು ತಡೆಯಬೇಕು. ನ್ಯಾಯಯುತ ಪಾಲು ನೀಡಲು ಶಿಫಾರಸು ಮಾಡಬೇಕು. ಸ್ವತಃ ಪ್ರಗತಿ ಸಾಧಿಸಲು ಪ್ರಯತ್ನಿಸಲು ಒತ್ತಡ ಹೇರುವ ಅಗತ್ಯವಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳುವ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿರುತ್ತದೆ. ಆಡಳಿತ ಪಕ್ಷದ ಹಿತಾಸಕ್ತಿ ಗಮನಿಸಿ, ತಮ್ಮ ಪಕ್ಷದ ಸರ್ಕಾರಗಳಿರುವ ರಾಜ್ಯಗಳಿಗೆ ಮಾತ್ರ ಬಹುಪಾಲು ನೆರವು ನೀಡುವಂತಹ ಸ್ವಾರ್ಥ ಹಿತಾಸಕ್ತಿಯ ನಿರ್ಧಾರಗಳು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತವೆ. ಈ ತಾರತಮ್ಯ ಮುಂದಿನ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದನ್ನು ಪಿಯೂಷ್‌ ಗೋಯಲ್‌ ಅರಿಯಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X