ಪತನಗೊಂಡ ವಿಮಾನದಲ್ಲಿ ಬದುಕುಳಿದ ನಾಲ್ಕು ಪುಟ್ಟ ಮಕ್ಕಳ ಶೋಧ ನಡೆಸಿದ ತಂಡವು ಕಾಡಿಗೆ ಎಸೆದ ಆಹಾರ ಪದಾರ್ಥಗಳಿಂದಾಗಿ ಬದುಕುಳಿದಿದ್ದಾರೆ. ಆದರೆ, ಇವರು ಇಷ್ಟು ದಿನಗಳ ಕಾಲ ಬದುಕುಳಿಯಲು ಇವರ ಅಜ್ಜಿಯಿಂದ ಪಡೆದ ಜ್ಞಾನ ಪ್ರಮುಖ ಪಾತ್ರವಹಿಸಿದೆ ಎಂಬುದಾಗಿ ಸ್ಥಳೀಯ ವಾಪೆಸ್ನ ನಾಯಕ ಜಾನ್ ಮೊರೆನೊ ಹೇಳಿದ್ದಾರೆ. ಮಕ್ಕಳ ಮಾತಿನಲ್ಲೇ ಆ ನಲುವತ್ತು ದಿನಗಳ ನೈಜ ಕಥನ ಆಲಿಸಲು ಜಗತ್ತು ಕುತೂಹಲದಿಂದ ಕಾದಿದೆ
ಅಮೆಜಾನ್ ಕಾಡಿನಲ್ಲಿ ಪತನವಾದ ಲಘು ವಿಮಾನದಲ್ಲಿ ಬದುಕುಳಿದ ಮಕ್ಕಳು ನಲುವತ್ತು ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾರೆ. ಈ ನಾಲ್ಕು ಮಕ್ಕಳಲ್ಲಿ 11 ತಿಂಗಳು ಶಿಶು ಕೂಡ ಸೇರಿದೆ!
ಈ ನಾಲ್ಕು ಮಕ್ಕಳು ಕೊಲಂಬಿಯಾ ಮಿಲಿಟರಿಯವರು ಹೆಲಿಕಾಪ್ಟರ್ ಮೂಲಕ ಅಮೆಜಾನ್ ದಟ್ಟ ಕಾಡಲ್ಲಿ ಎಸೆಯುತ್ತಿದ್ದ ಆಹಾರ ತಿನ್ನುತ್ತಾ ತಮ್ಮದೇ ಬುಡಕಟ್ಟು ಪೂರ್ವಜರ ಜ್ಞಾನವನ್ನು ಬಳಸಿಕೊಂಡು ಬದುಕಿ ಉಳಿದಿದ್ದಾರೆ ಎನ್ನಲಾಗಿದೆ. ನಾಲ್ಕು ಮಕ್ಕಳಲ್ಲಿ 11 ತಿಂಗಳ ಶಿಶುವಿನ ಜೊತೆಗೆ 13, 9 ಮತ್ತು 4 ವರ್ಷಗಳ ಬಾಲಕರಿದ್ದರು. ಇವರೆಲ್ಲ ಹುಯಿಟೊಟೊ’ ಸ್ಥಳೀಯ ಬುಡಕಟ್ಟು ಸಮುದಾಯಕ್ಕೆ ಸೇರಿದ ಒಂದೇ ದಂಪತಿಯ ಮಕ್ಕಳು. ಕಾಡಿನಲ್ಲಿ 40 ದಿನಗಳನ್ನು ಕಳೆದು ಅಪೌಷ್ಟಿಕತೆಯಿಂದ ಬಳಲಿದರೂ ಇವರಲ್ಲಿ ಯಾರೂ ಗಂಭೀರ ಸ್ಥಿತಿಗೆ ತಲುಪಿಲ್ಲ ಎನ್ನುವುದು ಸೋಜಿಗದ ವಿಷಯವಾಗಿದೆ.
ಅಮೆಜಾನ್ ಕಾಡಿನಲ್ಲಿ ಇದೇ ಶುಕ್ರವಾರ (9.6.2023) ಈ ನಾಲ್ಕೂ ಸ್ಥಳೀಯ ಮಕ್ಕಳನ್ನು ರಕ್ಷಿಸಲಾಗಿದೆ. ಈ ಮಕ್ಕಳು ತಮ್ಮ ಪೋಷಕರ ಜೊತೆಗೆ ಅಮೆಜಾನ್ ಕಾಡಿನ ಮೇಲೆ ಹಾರುತ್ತಿದ್ದ ವಿಮಾನ 40 ದಿನಗಳ ಹಿಂದೆ ಮೇ 1ರಂದು ಎಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕಾಡಿನಲ್ಲಿ ಪತನವಾಗಿತ್ತು. ಅಮೆಜಾನ್ನ ಅತ್ಯಂತ ವಾಸಯೋಗ್ಯವಲ್ಲದ ಪ್ರದೇಶಗಳಲ್ಲಿ ಒಂದೆರಡು ಭಾರಿ ಬಿರುಗಾಳಿಯಿಂದ ಹೇಗೊ ಈ ಮಕ್ಕಳು ಬದುಕಿ ಉಳಿದುಕೊಂಡರು. ಜೊತೆಗೆ ಈ ದಟ್ಟಕಾಡು ಅನೇಕ ಭಕ್ಷಕ ಪ್ರಾಣಿಗಳು ಮತ್ತು ಬಂಡುಕೋರರ ಗುಂಪುಗಳ ನೆಲೆಯೂ ಆಗಿದೆ. ಈ ಧೈರ್ಯಶಾಲಿ ಮಕ್ಕಳು ದೇಶದ ಜನರಿಗೆ ಸಂಪೂರ್ಣ ಉಳಿವಿನ ಹೋರಾಟದ ಉದಾಹರಣೆಯನ್ನು ತೋರಿಸಿಕೊಟ್ಟಿದ್ದು ಅದು ದೇಶದ ಇತಿಹಾಸದಲ್ಲಿ ದಾಖಲೆಗೆ ಅರ್ಹವಾಗಿದೆ ಮತ್ತು ಸಂತೋಷದ ವಿಷಯವಾಗಿದೆ ಎಂಬುದಾಗಿ ಕೊಲಂಬಿಯಾ ದೇಶದ ಅಧ್ಯಕ್ಷರಾದ ಗುಸ್ಟಾವೊ ಪೆಟ್ರೊ ಹೇಳಿಕೆ ಕೊಟ್ಟಿದ್ದಾರೆ.

ಶೋಧ ನಡೆಸಿದ ತಂಡವು ಕಾಡಿಗೆ ಎಸೆದ ಆಹಾರ ಪದಾರ್ಥಗಳನ್ನು ತಿನ್ನುತ್ತಾ ಮಕ್ಕಳು ಬದುಕುಳಿದಿದ್ದಾರೆ. ಆದರೆ ಇವರು ಇಷ್ಟು ದಿನಗಳ ಕಾಲ ಬದುಕುಳಿಯಲು ಇವರ ಅಜ್ಜಿಯಿಂದ ಪಡೆದ ಜ್ಞಾನ ಪ್ರಮುಖ ಪಾತ್ರವಹಿಸಿದೆ ಎಂಬುದಾಗಿ ಸ್ಥಳೀಯ ನಾಯಕ ಜಾನ್ ಮೊರೆನೊ ಹೇಳಿದ್ದಾರೆ.
ಅಮೆಜಾನ್ ವರ್ಜಿನ್ ದಟ್ಟ ಮತ್ತು ಅಪಾಯಕಾರಿ ಕಾಡಾಗಿದ್ದು ಈ ಮಕ್ಕಳು ತಮ್ಮ ಸ್ಥಳೀಯ ಮತ್ತು ಪೂರ್ವಜರ ಜ್ಞಾನವನ್ನು ಬದುಕುಳಿಯಲು ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಆರೋಗ್ಯ ತಪಾಸಣೆ ಮತ್ತು ಮಾನಸಿಕ ಮೌಲ್ಯಮಾಪನಕ್ಕಾಗಿ ಮಕ್ಕಳನ್ನು ಸ್ಯಾನ್ ಜೋಸ್ ಡಿ ಗ್ವಾವಿಯರ್ ಪಟ್ಟಣಕ್ಕೆ ಸಾಗಿಸಲಾಗಿದೆ. ನಾಲ್ವರು ಸಹೋದರರು ಮತ್ತು ಅವರ ಪೋಷಕರು ಮೇ 1ನೇ ತಾರೀಖು ಬೆಳಿಗ್ಗೆ ಸ್ಯಾನ್ ಜೋಸ್ ಡಿ ಗ್ವಾವಿಯರ್ ಪಟ್ಟಣದಿಂದ ಅಮೆಜಾನ್ ಪ್ರಾಂತ್ಯದ ಅರರಾಕುವಾರಾಗೆ ಸೆಸ್ನಾ-206 ವಿಮಾನದಲ್ಲಿ ಹೊರಟಿದ್ದರು. ವಿಮಾನ ಹಾರಿಸುತ್ತಿದ್ದ ಪೈಲಟ್ ಮೇಡೇ ಎಂಬಾತ ಎಂಜಿನ್ನಲ್ಲಿ ತೊಂದರೆ ಕಾಣಿಸಿಕೊಂಡಿದೆ ಎಂದು ಎಚ್ಚರಿಕೆ ನೀಡಿದ್ದರು. ವಿಮಾನ ಬಿದ್ದ ಎರಡು ವಾರಗಳ ನಂತರ ವಿಮಾನವು ಸ್ಯಾನ್ ಜೋಸ್ ಡಿ ಗ್ವಾವಿಯರ್ನ ದಕ್ಷಿಣಕ್ಕೆ 175 ಕಿ.ಮೀ. ದೂರದಲ್ಲಿರುವ ಕಾಕ್ವೆಟಾ ಪ್ರಾಂತ್ಯದ ಕಾಡಿನಲ್ಲಿ ವಿಮಾನದ ಮೂತಿ ಆಳವಾಗಿ ನೆಲಕ್ಕೆ ಚುಚ್ಚಿಕೊಂಡು ಬಿದ್ದಿರುವುದು ತಿಳಿಯುತ್ತದೆ. ವಿಮಾನದಲ್ಲಿ ಮೂವರು ದೊಡ್ಡವರ ಶವಗಳು ಕಾಣಿಸಿಕೊಂಡು ಅದರಲ್ಲಿ 33 ವರ್ಷದ ನಾಲ್ಕು ಮಕ್ಕಳ ತಾಯಿಯ ಹೆಣವನ್ನು ಗುರುತಿಸಲಾಯಿತು. ಆದರೆ ಮಕ್ಕಳು ಕಾಣಿಸದೆ ಹುಡುಕಾಟ ನಡೆಸುತ್ತಿದ್ದಾಗ ಅವರು ಬದುಕಿ ಉಳಿದಿರುವ ಕೆಲವು ಸೂಚನೆಗಳು ಕಂಡುಬಂದವು.
ವಿಮಾನ ಬಿದ್ದಿರುವ ಸ್ಥಳದಿಂದ 500 ಮೀಟರುಗಳ ದೂರದಲ್ಲಿ ಮಕ್ಕಳು ನಡೆದುಹೋಗಿರುವ ಹೆಜ್ಜೆಗುರುತು, ಹಣ್ಣುಗಳ ಸಿಪ್ಪೆ ಮತ್ತು ನ್ಯಾಪ್ಕಿನ್ಸ್ ಬಿದ್ದಿದ್ದವು. ಆಪರೇಷನ್ ಹೋಪ್ ಎಂದು ಹೆಸರಿಸಲಾದ ರಕ್ಷಣಾ ಕಾರ್ಯವನ್ನು ತ್ವರಿತವಾಗಿ 150 ಸೈನಿಕರು, 200 ಸ್ವಯಂಸೇವಕರು ಮತ್ತು 10 ಬೆಲ್ಜಿಯಂ ಶೆಫರ್ಡ್ ನಾಯಿಗಳ ತಂಡವನ್ನು ಕಟ್ಟಿ 323 ಚ.ಕಿ.ಮೀ. ಪ್ರದೇಶವನ್ನು ಶೋಧನೆಗೆ ಆಯ್ಕೆ ಮಾಡಿಕೊಳ್ಳಲಾಯಿತು. ಶೋಧನೆಯ ವೇಳೆ 10 ನಾಯಿಗಳಲ್ಲಿ ವಿಲ್ಸನ್ ಹೆಸರಿನ ನಾಯಿ ಕಣ್ಮರೆಯಾಗಿ ಅದರ ಪತ್ತೆಯ ಕಾರ್ಯವನ್ನು ಮಾಡಲಾಯಿತು. ಹೆಲಿಕಾಪ್ಟರ್ಗೆ ಹೆಚ್ಚು ಸದ್ದು ಮಾಡುವ ಸ್ವೀಕರ್ ಜೋಡಿಸಿ ಹುಯಿಟೊಟೊ ಭಾಷೆಯಲ್ಲಿ ಮಕ್ಕಳೇ ಎಲ್ಲೀದ್ದಿರೋ ಅಲ್ಲೇ ಉಳಿದುಕೊಳ್ಳಿ ಎಂದು ಕೇಳಿಕೊಳ್ಳಲಾಯಿತು. ಅದೇ ವೇಳೆ ಮಕ್ಕಳು ಕಾಲುಗಳಿಗೆ ಬಟ್ಟೆಗಳನ್ನು ಸುತ್ತಿಕೊಂಡು ನಡೆಯುತ್ತಿರುವುದು ಕಂಡುಬಂದು, ಇದರಿಂದ ಮಕ್ಕಳನ್ನು ಪತ್ತೆಮಾಡುವ ಕೆಲಸ ಇನ್ನಷ್ಟು ಜಟಿಲಗೊಂಡಿತು. ದಿನಗಳು ಕಳೆದಂತೆ ಮಕ್ಕಳನ್ನು ಜೀವಂತವಾಗಿ ಕಂಡುಹಿಡಿಯುವ ಭರವಸೆಗಳು ಕ್ಷೀಣಿಸುತ್ತಿದ್ದವು. ಇದೇ ವೇಳೆ ಶೋಧ ನಡೆಸುತ್ತಿದ್ದ ತಂಡಕ್ಕೆ ಬಂಡುಕೋರ ಗುಂಪುಗಳ ಪರಿತ್ಯಕ್ತ ಶಿಬಿರಗಳು ಇರುವುದು ಗಮನಕ್ಕೆ ಬಂದಿತು. ಈ ಪ್ರದೇಶದಲ್ಲಿದ್ದ ಮತ್ತೊಂದು ಬಂಡುಕೋರ ಗುಂಪಿನೊಂದಿಗೆ ಕದನವಿರಾಮ ಕೊನೆಗೊಂಡ ಕಾರಣ ಶೋಧನೆ ನಡೆಸುತ್ತಿದ್ದ ತಂಡದಲ್ಲಿದ್ದ ಕೆಲವರು ಹಿಂದಕ್ಕೆ ಸರಿದರು. ಹೆಲಿಕಾಪ್ಟರುಗಳನ್ನು ಕಡಿಮೆ ಮಾಡುವುದರ ಜೊತೆಗೆ ಸ್ಯಾನ್ ಜೋಸ್ ಡಿ ಗ್ವಾವಿಯರ್ನನಲ್ಲಿನ ಸಂಯೋಜಿತ ಕಮಾಂಡ್ ಪೋಸ್ಟ್ ತಂಡವನ್ನು ವಿಸರ್ಜಿಸಲಾಯಿತು.

ಆದರೆ, ಮಕ್ಕಳನ್ನು ಪತ್ತೆಮಾಡಿದ ಎರಡು ದಿನಗಳಿಗೆ ಮುಂಚೆ ಬ್ರಿಗೇಡಿಯರ್ ಜನರಲ್ ಪೆಡ್ರೂ ಸ್ಯಾಂಚೆಜ್ ಅವರು ಮಕ್ಕಳು ಜೀವಂತವಾಗಿದ್ದಾರೆ. ಆದರೆ ದಟ್ಟ ಕಾಡಿನಿಂದ ಅವರ ಚಲನೆಯನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಇದು ಹುಲ್ಲಿನ ಕಡ್ಡಿಯಲ್ಲಿರುವ ಸೂಜಿಯಲ್ಲ, ಅದು ರಗ್ಗಿನಲ್ಲಿರುವ ಸಣ್ಣ ಚಿಗಟೆ, ಏಕೆಂದರೆ ಅವು ಚಲಿಸುತ್ತಲೇ ಇರುತ್ತವೆ. ಮಕ್ಕಳು ಇನ್ನೂ ಬದುಕಿದ್ದಾರೆ. ಒಂದು ವೇಳೆ ಅವರು ಸತ್ತುಹೋಗಿದ್ದರೆ ನಾವು ಅವರನ್ನು ಕಂಡುಹಿಡಿದುಬಿಡುತ್ತಿದ್ದೆವು’ ಎಂಬುದಾಗಿ ಸ್ಥಳೀಯ ಮಾಧ್ಯಮಗಳಿಗೆ ಪೆಡ್ರೂ ಹೇಳಿದರು.
ಶುಕ್ರವಾರ 9.6.2023 ರಂದು ಸಂಜೆ 5 ಗಂಟೆ ಸುಮಾರಿಗೆ ಸೇನಾ ರೇಡಿಯೋ, “ಪವಾಡ! ಪವಾಡ! ಹತ್ತು ಸೈನಿಕರು ಮತ್ತು ಎಂಟು ಸ್ಥಳೀಯ ಸ್ವಯಂಸೇವಕರ ಗುಂಪು ಹೊಸ ಟ್ರ್ಯಾಕ್ಗಳನ್ನು ಕಂಡುಹಿಡಿಯುವುದರ ಮೂಲಕ ಮಕ್ಕಳನ್ನು ಪತ್ತೆ ಮಾಡಿಯೇಬಿಟ್ಟಿತು” ಎಂದು ವರದಿ ನೀಡಿತು. ಶೋಧನೆಯ ತಂಡ ಥರ್ಮಲ್ ಕಂಬಳಿಗಳೊಂದಿಗೆ ಮಕ್ಕಳೊಂದಿಗೆ ಪೋಸ್ ನೀಡುತ್ತಿರುವ ಚಿತ್ರಗಳನ್ನು ಕೊಲಂಬಿಯಾ ಮಿಲಿಟರಿ ಟ್ವೀಟ್ ಮೂಲಕ ಪೋಸ್ಟ್ ಮಾಡಿತು. ಒಬ್ಬ ಸೈನಿಕ 11 ತಿಂಗಳ ಶಿಶುವಿನ ಬಾಯಿಗೆ ಹಾಲಿನ ಬಾಟಲಿ ಹಿಡಿದುಕೊಂಡಿದ್ದನು. ಕೊಲಂಬಿಯಾ ಮಿಲಿಟರಿ ನಮ್ಮ ಪ್ರಯತ್ನಗಳ ಒಕ್ಕೂಟವು ಮಕ್ಕಳ ಶೋಧನೆಯನ್ನು ಕೊನೆಗೂ ಸಾಧ್ಯವಾಗಿಸಿದೆ’ ಎಂದರೆ, ಮರುದಿನ ಶನಿವಾರ ಕೊಲಂಬಿಯಾ ಅಧ್ಯಕ್ಷ ಪೆಟ್ರೂ ಮಕ್ಕಳನ್ನು ಸಂಧಿಸಿ, ಮಕ್ಕಳು ಕಾಡಿನ ಮಕ್ಕಳಾಗಿದ್ದು ಅವರನ್ನು ಕಾಡು ಉಳಿಸಿದೆ’ ಎಂದು ಸಂತೋಷ ವ್ಯಕ್ತಪಡಿಸಿದರು.
ಮಕ್ಕಳನ್ನು ಕೊಲಂಬಿಯಾ ರಾಜಧಾನಿ ಬೊಗೋಟಾದ ಸೇನಾ ವಿಮಾನ ನಿಲ್ದಾಣಕ್ಕೆ ತರಲಾಗಿ ಅಲ್ಲಿಂದ ಆಂಬುಲೆನ್ಸ್ನಲ್ಲಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿ ಅವರು ಅಲ್ಲಿ ಸುಧಾರಿಸಿಕೊಳ್ಳುತ್ತಿದ್ದಾರೆ. ಇನ್ನು 40 ದಿನಗಳ ಮಕ್ಕಳ ಸಾವು ಬದುಕಿನ ಅಮೆಜಾನ್ ಅರಣ್ಯದ ರೋಚಕ ಯಶೋಗಾಥೆ ಮುಂದೆ ಕುತೂಹಲಕರವಾಗಿ ಪ್ರಕಟವಾಗಲಿದೆ. ಅದೆಂತಹ ಸಾಹಸಗಾಥೆ ಎನ್ನುವುದನ್ನು ಜಗತ್ತು ಕುತೂಹಲದಿಂದ ಎದುರು ನೋಡುತ್ತಿದೆ.

ಡಾ ಎಂ ವೆಂಕಟಸ್ವಾಮಿ
ಭೂವಿಜ್ಞಾನಿ, ಲೇಖಕ