ಬಿಎಸ್‌ವೈ ವಿರುದ್ಧ ಪೋಕ್ಸೊ ಪ್ರಕರಣ; ಚಾರ್ಜ್‌ಶೀಟ್‌ ಸಲ್ಲಿಸಿ ಒಂದು ವರ್ಷ; ನಿಂತು ಹೋದ ವಿಚಾರಣೆ

Date:

Advertisements

ಬಿಜೆಪಿಯ ಹಿರಿಯ ನಾಯಕ ಬಿ ಎಸ್‌ ಯಡಿಯೂರಪ್ಪ ವಿರುದ್ದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ದಾಖಲಾಗಿದ್ದ ಪೋಕ್ಸೊ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿ ಜೂನ್‌ 27ಕ್ಕೆ ಭರ್ತಿ ಒಂದು ವರ್ಷವಾಗುತ್ತದೆ. ಈ ಮಧ್ಯೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್‌ ತಡೆ ನೀಡಿದೆ. ಯಡಿಯೂರಪ್ಪ ಸುರಕ್ಷಿತವಾಗಿದ್ದಾರೆ

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 2024 ಮಾಚ್ 14ರಂದು ಸದಾಶಿವನಗರ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಬಿಜೆಪಿ ಹಿರಿಯ ಮುಖಂಡ ಬಿ ಎಸ್‌ ಯಡಿಯೂರಪ್ಪ ದೂರು ದಾಖಲಾಗಿತ್ತು. ಬಿಜೆಪಿಯ ಕಾರ್ಯಕರ್ತೆಯೂ ಯಡಿಯೂರಪ್ಪ ಅವರಿಗೆ ಪರಿಚಿತೆಯೂ ಆಗಿದ್ದ ಮಹಿಳೆ ಯಡಿಯೂರಪ್ಪನವರನ್ನು ಭೇಟಿಯಾಗಲು ಮಗಳ ಜೊತೆಗೆ ಡಾಲರ್ಸ್‌ ಕಾಲೋನಿಯ ಮನೆಗೆ ಹೋಗಿದ್ದಾಗ ಮಗಳನ್ನು ಯಡಿಯೂರಪ್ಪ ಅವರು ರೂಮಿಗೆ ಕರೆದೊಯ್ದು ಅಂಗಾಂಗ ಮುಟ್ಟಿ ಕಿರುಕುಳ ನೀಡಿದ್ದಾರೆ ಎಂಬುದು ಆರೋಪವಾಗಿತ್ತು. ರಾಜ್ಯ ಸರ್ಕಾರ ಪೋಕ್ಸೊ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿತ್ತು. ಅದಾದ ನಂತರ ಕೋರ್ಟ್ಗೆ ಚಾರ್ಜ್‌ಶೀಟ್‌ ಸಲ್ಲಿಸಿ ಒಂದು ವರ್ಷವಾಗುತ್ತಿದೆ. ಈ ಮಧ್ಯೆ ಹೈಕೋರ್ಟ್‌ನ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪ್ರಕರಣ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ವಿಪರ್ಯಾಸವೆಂದರೆ ಹೈಕೋರ್ಟ್‌ನ ಮತ್ತೊಂದು ಪೀಠ ವಿಚಾರಣೆಗೆ ತಡೆ ನೀಡಿದೆ.

ಪ್ರಕರಣ ದಾಖಲಾದ ಬಳಿಕ ಪೊಲೀಸರ ವಿಚಾರಣೆಗೆ ಯಡಿಯೂರಪ್ಪ ಹಾಜರಾಗಿ, “ದೂರು ನೀಡಿದ್ದ ಮಹಿಳೆಗೆ ಇತರರ ವಿರುದ್ಧ ದೂರು ನೀಡುವುದು ಒಂದು ಹವ್ಯಾಸವಾಗಿದೆ” ಎಂದು ಪೊಲೀಸರಿಗೆ ತಿಳಿಸಿದ್ದರು. ನಂತರ ಮೂರು ತಿಂಗಳು ಸಿಐಡಿ ಪೊಲೀಸರ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿರಲಿಲ್ಲ.

Advertisements

ಈ ಮಧ್ಯೆ ಲೋಕಸಭಾ ಚುನಾವಣೆ ಮುಗಿದಿತ್ತು. ದೂರು ನೀಡಿದ್ದ ಬಾಲಕಿಯ ತಾಯಿ ಮೇನಲ್ಲಿ ಅನಾರೋಗ್ಯದಿಂದ ಮೃತಪಟ್ಟರು. ಆ ನಂತರ ಬಾಲಕಿಯ ಸಹೋದರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಯಡಿಯೂರಪ್ಪ ಅವರನ್ನು ಬಂಧಿಸಲು ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

“ಪ್ರಕರಣ ದಾಖಲಾಗಿ ಹಲವು ತಿಂಗಳುಗಳಾದರೂ ಪೊಲೀಸರಿಂದ ಯಾವುದೇ ಕ್ರಮವಿಲ್ಲ. ಯಡಿಯೂರಪ್ಪರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ. ಕನಿಷ್ಠ 41ಎ ಅಡಿ ನೋಟಿಸ್ ನೀಡಿ ಯಡಿಯೂರಪ್ಪರನ್ನು ವಿಚಾರಣೆಗೆ ಕರೆದಿಲ್ಲ” ಎಂದು ರಿಟ್‌ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

“ಬಿಎಸ್‌ವೈ ಮನೆಯ ಸಿಸಿಟಿವಿ ದೃಶ್ಯಾವಳಿ ಸೀಜ್ ಮಾಡಿಲ್ಲ. ದೂರುದಾರರಾಗಿರುವ ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದಾರೆ. ಲೈಂಗಿಕ ದೌರ್ಜನ್ಯ ನಡೆದು ಹಲವು ತಿಂಗಳಾದರೂ ಸಂತ್ರಸ್ತೆಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಯಡಿಯೂರಪ್ಪರನ್ನು ಕೂಡಲೇ ಬಂಧಿಸುವಂತೆ ನಿರ್ದೇಶಿಸಬೇಕೆಂದು” ಸಂತ್ರಸ್ತೆಯ ಸಹೋದರ ರಿಟ್ ಅರ್ಜಿಯಲ್ಲಿ ವಿವರಿಸಿದ್ದರು.

ಪೋಕ್ಸೊ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪಗೆ ಸಿಐಡಿ ನೋಟಿಸ್ ನೀಡಿದ ಬೆನ್ನಲ್ಲೇ ಅವರು ಪ್ರಕರಣ ರದ್ದು ಕೋರಿ ಕರ್ನಾಟಕ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ.

“ಯಾವುದೇ ಕಾನೂನುಬಾಹಿರ ಕೃತ್ಯ ಎಸಗಿಲ್ಲ. ಫಿರ್ಯಾದಿ ಮಹಿಳೆಗೆ ದೂರು ನೀಡುವುದೇ ಹವ್ಯಾಸವಾಗಿತ್ತು. ಎಫ್ಐಆರ್ ದಾಖಲಾದ ನಂತರ ವಿಚಾರಣೆಗೆ ಹಾಜರಾಗಿದ್ದೆ. ಏಪ್ರಿಲ್​​​ 12ರಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದೆ. ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳದೇ ಧ್ವನಿ ಮಾದರಿ ಸಂಗ್ರಹಿಸಿದ್ದರು” ಎಂದು ಯಡಿಯೂರಪ್ಪ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

“ರೇಪ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡುವ ನೆಪದಲ್ಲಿ ಹದಿನೇಳು ವರ್ಷದ ಬಾಲಕಿಯನ್ನು ರೂಮಿನಲ್ಲಿ ಕರೆದುಕೊಂಡು ಆಕೆಯ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಪ್ರಕರಣದಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನು ಬಂಧಿಸಲು ನಿರ್ದೇಶಿಸಬೇಕು” ಎಂದು ರಾಜ್ಯ ಪ್ರಾಸಿಕ್ಯೂಷನ್ ನಗರದ ವಿಶೇಷ ನ್ಯಾಯಾಲಯಕ್ಕೆ 2024 ಜೂನ್‌ 12ರಂದು ಮನವಿ ಮಾಡಿತ್ತು.

ಈ ಕುರಿತ ಅರ್ಜಿಯನ್ನು ನಗರದ 51ನೇ ಸಿವಿಲ್ ಮತ್ತು ಹೆಚ್ಚುವರಿ ಸೆಷನ್ಸ್ ಹಾಗೂ ಪೋಕ್ಸೊ ಪ್ರಕರಣಗಳ ವಿಚಾರಣೆ ನಡೆಸುವ ತ್ವರಿತಗತಿಯ ವಿಶೇಷ ನ್ಯಾಯಾಲಯ-1ರ ನ್ಯಾಯಾಧೀಶ ಎನ್.ಎಂ. ರಮೇಶ್ ಜೂನ್‌ 13ರಂದು ವಿಚಾರಣೆ ನಡೆಸಿದರು‌.

ವಿಚಾರಣೆ ವೇಳೆ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಅಶೋಕ್ ನಾಯಕ್ ವಾದ ಮಂಡಿಸಿ, “ಆರೋಪಿಯು ತುಂಬಾ ಬಲಾಢ್ಯರು.‌ ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಇವರ ಇಬ್ಬರು ಪುತ್ರರಲ್ಲಿ ಒಬ್ಬರು ಹಾಲಿ ಸಂಸದರು ಹಾಗೂ ಮತ್ತೊಬ್ಬರು ಪಕ್ಷವೊಂದರ ರಾಜ್ಯ ಘಟಕದ ಅಧ್ಯಕ್ಷರು. ಇಂತಹವರು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ನೋಟಿಸ್ ಕೊಟ್ಟರೂ ವಿಚಾರಣೆಗೆ ಹಾಜರಾಗುತ್ತಿಲ್ಲ. ಬರದೆ ಸಮಯ ಕೇಳುತ್ತಿದ್ದಾರೆ” ಎಂದು ಹೇಳಿದ್ದರು.

“ಘಟನೆ ನಡೆದ ದಿನವೇ ಯಡಿಯೂರಪ್ಪ ಸಂತ್ರಸ್ತ ಬಾಲಕಿಯ ತಾಯಿಗೆ ₹2 ಲಕ್ಷ ನೀಡಿದ್ದಾರೆ. ಬೇಡ ಎಂದರೂ ಅವರ ಪರ್ಸಿನಲ್ಲಿ ತುರುಕಿ ಕಳಿಸಿದ್ದಾರೆ. ನೀನು ಕಷ್ಟದಲ್ಲಿ ಇದ್ದೀಯ. ಇಟ್ಟುಕೊ ಎಂದು ಸಮಾಧಾನ ಮಾಡುವ ನೆಪದಲ್ಲಿ ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ್ದಾರೆ. ಆ ತಾಯಿ ಮಾಡಿಕೊಂಡಿದ್ದ ವಿಡಿಯೊ ಡಿಲಿಟ್ ಮಾಡಿಸಿದ್ದಾರೆ. ಹೀಗೆ ಹಲವು ಹಂತಗಳಲ್ಲಿ ಸಾಕ್ಷ್ಯ ನಾಶ ಮಾಡುತ್ತಲೇ ಇದ್ದಾರೆ” ಎಂದು ಕೋರ್ಟ್‌ ಗಮನಕ್ಕೆ ತಂದಿದ್ದರು.

ವಾದ ಆಲಿಸಿದ ನ್ಯಾಯಾಧೀಶ ಎನ್ ಎಂ ರಮೇಶ್ ಅವರು ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ​ವಾರಂಟ್ ಆದೇಶ ಹೊರಡಿಸಿದ್ದರು. ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಮಾನ್ಯ ಮಾಡಿತ್ತು. ಜಾಮೀನು ಸಿಕ್ಕ ತಕ್ಷಣ ಯಡಿಯೂರಪ್ಪ ಸಿಐಡಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು.

ಸಿಐಡಿ ಎಡಿಜಿಪಿ ಬಿ ಕೆ ಸಿಂಗ್, ಡಿವೈಎಸ್‌ಪಿ ತನಿಖಾಧಿಕಾರಿ ಪೃಥ್ವಿಯವರಿಂದ ಯಡಿಯೂರಪ್ಪ ವಿಚಾರಣೆ ನಡೆದಿತ್ತು.

ಈ ನಡುವೆ ತಮ್ಮ ವಿರುದ್ಧ ದಾಖಲಾಗಿರುವ ದೂರು ಮತ್ತು ಪೋಕ್ಸೊ ವಿಶೇಷ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಯಡಿಯೂರಪ್ಪ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​​ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಬಂಧಿಸದಂತೆ ನಿರ್ದೇಶನ ನೀಡಿತ್ತು. ವಿಚಾರಣೆಗೆ ಹಾಜರಾಗಲು ಮಾತ್ರ ಸೂಚಿಸಿತ್ತು.

ವಿಪರ್ಯಾಸವೆಂದರೆ “ಬಂಧಿಸಿ ವಿಚಾರಣೆ ನಡೆಸಲು ಅವರೇನು ಯಂಕ ಸೀನ ನಾಣಿ ಅಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಪ್ರಕರಣಕ್ಕೆ ಹೆದರಿ ಅವರೇನು ವಿದೇಶಕ್ಕೆ ಓಡಿ ಹೋಗುವರೇ?” ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಪ್ರಶ್ನಿಸಿದ್ದರು. ಅಲ್ಲದೇ ಜೂನ್‌ 17ರವರೆಗೆ ಬಂಧಿಸಬೇಡಿ ಎಂದು ಆದೇಶ ನೀಡಿದ್ದರು. ನಂತರ ಅದನ್ನು ಖಾಯಂಗೊಳಿಸಿದ್ದರು. ಈಗ ಪ್ರಕರಣದ ವಿಚಾರಣೆಗೂ ತಡೆ ನೀಡಿದೆ.

ಚಾರ್ಜ್‌ಶೀಟ್‌ ಸಲ್ಲಿಸಿ ಒಂದು ವರ್ಷ!

ಪ್ರಕರಣಕ್ಕೆ ಸಂಬಂಧಿಸಿದಂತೆ 2024 ಜೂನ್‌ 27ರಂದು ಸಿಐಡಿ ಪೊಲೀಸರು ಚಾರ್ಜ್​ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಬಾಲಕಿ ದಾಖಲಿಸಿದ್ದ ಹಳೆಯ ಲೈಂಗಿಕ ಕಿರುಕುಳ ಕೇಸ್ ಬಗ್ಗೆ ವಿಚಾರಿಸುತ್ತಾ ಯಡಿಯೂರಪ್ಪ ಅವರು ರೂಮಿಗೆ ಕರೆದೊಯ್ದು ಅನುಚಿತವಾಗಿ ವರ್ತಿಸಿರುವುದನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್​ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ದಿನ ಸಂಪಾದಕೀಯ | ‘ಪೋಕ್ಸೊ’ ಶಿಕ್ಷೆಯಿಂದ ನುಣುಚಿಕೊಳ್ಳುವ ದಾಳವಾಗದಿರಲಿ ‘ಮದುವೆ’

ಬಾಲಕಿ ಪ್ರತಿಭಟಿಸಿದಾಗ ಹಣ ನೀಡಿ ಕಳುಹಿಸಿರುವುದಾಗಿ ಆರೋಪಿಸಲಾಗಿದೆ. ನಂತರ ಬಾಲಕಿಯ ತಾಯಿ ಇದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಬಳಿಕ ಪೋಸ್ಟ್ ಆಗಿದ್ದ ವಿಡಿಯೋ ಡಿಲಿಟ್​ ಮಾಡಿಸಲು ಮೂವರು ಪ್ರಯತ್ನಿಸಿದ್ದಾರೆ. ವೈ ಎಂ ಅರುಣ್, ಎಂ ರುದ್ರೇಶ್, ಜಿ ಮರಿಸ್ವಾಮಿ ಎನ್ನುವವರು ಮಹಿಳೆಯನ್ನು ಕರೆತಂದು ವಿಡಿಯೋ ಪೋಸ್ಟ್ ಡಿಲಿಟ್ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ನಾಲ್ವರ ವಿರುದ್ದವೂ ಪೊಲೀಸರು ಆರೋಪಪಟ್ಟಿ ದಾಖಲಿಸಿದ್ದಾರೆ.

ಪ್ರಕರಣ ರದ್ದು ಕೋರಿ ಹೈಕೋರ್ಟ್ಗೆ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದ ನಂತರ, ಪ್ರಕರಣ ರದ್ದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿಯೂ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

POCSO ಪ್ರಕರಣ | ವರ್ಷವಾದರೂ ಶುರುವಾಗದ ವಿಚಾರಣೆ; ಯಂಕನಿಗೊಂದು ನ್ಯಾಯ ಯಡಿಯೂರಪ್ಪರಿಗೊಂದು ನ್ಯಾಯ ಸರಿಯೇ?

ಪ್ರಕರಣದ ವಿಚಾರಣೆ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಮಧ್ಯೆ ಯಡಿಯೂರಪ್ಪ ಅವರು ಉಪ ಚುನಾವಣಾ ಪ್ರಚಾರ ಸಭೆಗಳಲ್ಲಿಯೂ, ರಾಜ್ಯಸರ್ಕಾರದ ವಿರುದ್ಧದ ಪ್ರತಿಭಟನಾ ಸಭೆಗಳಲ್ಲಿಯೂ ಭಾಗವಹಿಸಿದ್ದಾರೆ. ಬಾಲಕಿಯ ಪರವಾಗಿ ಬಾಲನ್‌ ಕೂಡ ವಾದಿಸಿದ್ದರು. ಪೋಕ್ಸೊ ಪ್ರಕರಣಗಳು ಕಾಲಮಿತಿಯೊಳಗೆ ಇತ್ಯರ್ಥವಾಗುತ್ತಿಲ್ಲ, ಶಿಕ್ಷೆಯ ಪ್ರಮಾಣ ಕೇವಲ 32% ಎಂದು ದಾಖಲೆಗಳು ಹೇಳುತ್ತಿವೆ. ಅದರ ಮಧ್ಯೆ ವ್ಯವಸ್ಥೆ ಉಳ್ಳವರಿಗೊಂದು, ಇಲ್ಲದವರಿಗೊಂದು ರೀತಿಯಲ್ಲಿ ವರ್ತಿಸುತ್ತಿದೆ ಎಂಬ ಆರೋಪ ಸುಳ್ಳಲ್ಲ. ಬಲಾಢ್ಯರು ಎಂತಹ ಕಠಿಣ ಕಾನೂನಿದ್ದರೂ ಪಾರಾಗುತ್ತಾರೆ ಎಂಬುದಕ್ಕೆ ಸದ್ಯ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ.

ಸಂತ್ರಸ್ತ ಬಾಲಕಿಯ ಪರವಾಗಿ ಖಾಸಗಿಯಾಗಿ ವಾದಿಸುತ್ತಿರುವ ಎಸ್‌ ಬಾಲನ್‌ ಅವರು ಸಾಕಷ್ಟು ಪ್ರಯತ್ನ ಪಟ್ಟರೂ ಯಡಿಯೂರಪ್ಪ ಅವರ ಬಂಧನ ಸಾಧ್ಯವಾಗಿಲ್ಲ. ಈಗ ವಿಚಾರಣೆಗೂ ತಡೆ ತಂದಿರುವುದು ಇಡೀ ಪೋಕ್ಸೊ ಕಾಯ್ದೆಯ ಅಣಕದಂತಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X