ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ, ಆಪ್ತರಾದ ರುದ್ರೇಶ್, ಮರಿಸ್ವಾಮಿ, ವೈ.ಎಂ.ಅರುಣ್ ವಿರುದ್ಧ ಪೋಕ್ಸೊ ಹಾಗೂ ಸಾಕ್ಷ್ಯ ನಾಶ ಸಂಬಂಧ 2024ರ ಜುಲೈನಲ್ಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಜಾ ಆಗಿದೆ. ಈಗಲಾದರೂ ಟ್ರಯಲ್ ಶುರು ಮಾಡಿ ಆದಷ್ಟು ಬೇಗ ಸಂತ್ರಸ್ತೆಗೆ ನ್ಯಾಯ ಸಿಗುವಂತಾಗಬೇಕು.
ಮಾಜಿ ಮುಖ್ಯಮಂತ್ರಿ 85ರ ಇಳಿವಯಸ್ಸಿನ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿ ಒಂದು ವರ್ಷ ಪೂರ್ಣಗೊಂಡಿದೆ. ಕಳೆದ ಜುಲೈನಲ್ಲಿ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಇದುವರೆಗೂ ವಿಚಾರಣೆ ಶುರುವಾಗಿಲ್ಲ. ಜಾಮೀನು ವಿಸ್ತರಿಸೋದು, ಷರತ್ತು ಸಡಿಲಿಸೋದು, ಎಫ್‌ಐಆರ್/ ಚಾರ್ಜ್‌ಶೀಟ್ ರದ್ದು ಕೋರಿದ ಅರ್ಜಿ ವಿಚಾರಣೆ ನಡೆಸೋದು ಇಷ್ಟರಲ್ಲೇ ಕೋರ್ಟ್ ಸಮಯ ವ್ಯರ್ಥವಾಗುತ್ತಿದೆ. ಆರೋಪಿಯ ರಕ್ಷಣೆಗೆ ಪೋಕ್ಸೊ ನಿಯಮವನ್ನೇ ಗಾಳಿಗೆ ತೂರಲಾಗಿದೆ ಎಂಬ ಆರೋಪವಿದೆ. ಅದಕ್ಕೆ ಪೂರಕವೆಂಬಂತೆ ಪೋಕ್ಸೊ ಪ್ರಕರಣಗಳನ್ನು ಕಾಲಮಿತಿಯೊಳಗೆ ಮುಗಿಸಬೇಕು ಎಂಬ ಕಾಯ್ದೆಯ ನಿಯಮ ಪಾಲನೆಯಾಗುತ್ತಿಲ್ಲ ಎಂಬುದಂತು ಸ್ಪಷ್ಟವಾಗಿ ಕಣ್ಣಿಗೆ ರಾಚುತ್ತಿದೆ. ಬಡ ಯಂಕ, ಸೀನ, ನಾಣಿಗೆ ಮತ್ತು ಅಧಿಕಾರಸ್ಥ ಯಡಿಯೂರಪ್ಪನವರಂಥ ಪ್ರಭಾವಿಗಳಿಗೆ ಬೇರೆ ಬೇರೆ ಕಾನೂನು ಎಂಬುದನ್ನು ನ್ಯಾಯಧೀಶರೊಬ್ಬರು ಯಡಿಯೂರಪ್ಪನವರಿಗೆ ಜಾಮೀನು ನೀಡುವಾಗಲೇ ಪರೋಕ್ಷವಾಗಿ ಸಾರಿ ಹೇಳಿದ್ದರು. ವಾಸ್ತವದಲ್ಲಿ ಆಗುತ್ತಿರುವುದು ಅದೇ. ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಆರ್ಥಿಕವಾಗಿ ಬಲಿಷ್ಠರಾಗಿರುವ ವ್ಯಕ್ತಿಗಳ ಮೇಲೆ ಆರೋಪ ಬಂದಾಗ ಪೊಲೀಸರು ಮತ್ತು ನ್ಯಾಯಾಂಗ ವ್ಯವಸ್ಥೆ ನಡೆದುಕೊಳ್ಳುವ ರೀತಿ ಪಕ್ಷಪಾತಿಯಿಂದ ಕೂಡಿರುತ್ತದೆ ಎಂಬುದು ಸುಳ್ಳೇನಲ್ಲ. ಮುರುಘಾ ಮಠದ ಸ್ವಾಮೀಜಿ ವಿರುದ್ಧ ಮಠದ ವಿದ್ಯಾರ್ಥಿನಿಯರು ಅತ್ಯಾಚಾರದ ದೂರು ದಾಖಲಿಸಿ, ಪೋಕ್ಸೊ ಅಡಿ ಎಫ್‌ಐಆರ್ ದಾಖಲಾಗಿ ಒಂದು ವಾರವಾದರೂ ಪೊಲೀಸರು ಬಂಧಿಸಿರಲಿಲ್ಲ. ಯಡಿಯೂರಪ್ಪ ಪ್ರಕರಣದಲ್ಲಿ ಬಂಧಿಸದೇ ವಿಚಾರಣೆ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ.
ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಳೆದ 2024 ಮಾರ್ಚ್ 14ರಂದು ನೀಡಲಾಗಿದ್ದ ದೂರಿನ ಅನ್ವಯ ಪೋಕ್ಸೊ ಮತ್ತು 354 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
2024ರ ಫೆ. 2ರಂದು ಬಿಎಸ್‌ವೈ ಅವರನ್ನು ಭೇಟಿಯಾಗಲು ಮಹಿಳೆಯೊಬ್ಬರು ತಮ್ಮ ಅಪ್ರಾಪ್ತ (14 ವರ್ಷ)ವಯಸ್ಸಿನ ಮಗಳ ಜೊತೆಗೆ ಹೋಗುತ್ತಾರೆ. ತಮ್ಮ ಮಗಳ ಮೇಲೆ ಆದ ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ಕೊಡಲು ಹೋದರೆ ಪೊಲೀಸರು ಎಫ್‌ಐಆರ್ ಮಾಡುತ್ತಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ನೀವು ಸಹಾಯ ಮಾಡಬೇಕು ಎಂಬ ಮನವಿ ಮಾಡಿಕೊಳ್ಳುತ್ತಾರೆ. ಇದು ಯಡಿಯೂರಪ್ಪ ವಿರುದ್ಧ ದೂರು ನೀಡಿದ ಮಹಿಳೆಯ ಹೇಳಿಕೆ. ಅಷ್ಟೇ ಅಲ್ಲ ಆಕೆ ಯಡಿಯೂರಪ್ಪ ಅವರ ಜೊತೆಗೆ ಮಾತನಾಡಿರುವ ಆಡಿಯೋ ದಾಖಲೆ ಇದೆ.
ಯಡಿಯೂರಪ್ಪ ಅವರು ಬಾಲಕಿಯನ್ನು ತಮ್ಮ ಕೋಣೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಹೊರಬಂದ ಬಾಲಕಿ ತಾಯಿಯ ಬಳಿ ಯಡಿಯೂರಪ್ಪ ಅವರು ತನ್ನ ಟೀ ಶರ್ಟ್ ಒಳಗೆ ಕೈ ಹಾಕಿ ಎದೆಯ ಭಾಗವನ್ನು ಮುಟ್ಟಿರುವುದಾಗಿ ತಿಳಿಸಿದ್ದಾಳೆ. ತಕ್ಷಣ ಮತ್ತೆ ಯಡಿಯೂರಪ್ಪ ಕೂತಿದ್ದ ಸೋಫಾದ ಬಳಿ ಬಂದ ಮಹಿಳೆ, ಯಾಕೆ ಅಪ್ಪಾಜಿ ಹೀಗೆ ಮಾಡಿದ್ರಿ? ಈಗಾಗಲೇ ನನ್ನ ಮಗಳ ಮೇಲೆ ದೌರ್ಜನ್ಯ ಆಗಿದೆ. ಪೊಲೀಸರು ದೂರು ತೆಗೆದುಕೊಳ್ಳುತ್ತಿಲ್ಲ. ಸಹಾಯ ಮಾಡಿ ಎಂದು ನಿಮ್ಮ ಬಳಿಗೆ ಬಂದರೆ ನೀವೂ ನನ್ನ ಮಗಳಿಗೆ ದೌರ್ಜನ್ಯ ಮಾಡಿದ್ದೀರಿ. ಇದು ನ್ಯಾಯವೇ ಅಪ್ಪಾಜಿ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನು ಬಾಲಕಿ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾಳೆ. ಯಡಿಯೂರಪ್ಪ ಅವರು “ನಿನ್ನ ಮಗಳು ನನ್ನ ಮೊಮ್ಮಗಳಿದ್ದಂತೆ. ಆಕೆಗೆ ಲೈಂಗಿಕ ದೌರ್ಜನ್ಯ ಆಗಿದೆಯಾ ಎಂದು ಪರೀಕ್ಷೆ ಮಾಡಿದೆ” ಎಂದು ಹೇಳುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿತ್ತು.
2024ರ ಮಾರ್ಚ್ 14ರಂದು ಸದಾಶಿವನಗರ ಠಾಣೆಯಲ್ಲಿ ಸಂತ್ರಸ್ತ ಬಾಲಕಿಯ ತಾಯಿ ಯಡಿಯೂರಪ್ಪ ವಿರುದ್ಧ ದೂರು ದಾಖಲಿಸುತ್ತಾರೆ. ಪೊಲೀಸರು ಎಫ್‌ಐಆರ್ ಮಾಡಲು ಹಿಂದೇಟು ಹಾಕುತ್ತಾರೆ. ಕೆಲವು ಮಹಿಳಾಪರ ಸಂಘಟನೆಗಳು ದೂರುದಾರ ಮಹಿಳೆಗೆ ಬೆಂಬಲವಾಗಿ ನಿಂತು ಪೋಕ್ಸೊ ಅಡಿ ಎಫ್‌ಐಆರ್ ದಾಖಲಿಸುವಂತೆ ಒತ್ತಡ ಹೇರಿದ ನಂತರ ಎಫ್‌ಐಆರ್ ದಾಖಲಾಗುತ್ತದೆ. ಮಾರ್ಚ್ 14ರಂದೇ 25ನೇ ಎಸಿಎಂಎಂ ಜಡ್ಜ್ ಮುಂದೆ ಸಂತ್ರಸ್ತ ಬಾಲಕಿಯ ಹೇಳಿಕೆ 164ರ ಅಡಿ ದಾಖಲಾಗುತ್ತದೆ. ಅದೇ ದಿನ ಈ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸುತ್ತದೆ.
ಏಪ್ರಿಲ್ 12ರಂದು ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪಗೆ ಸಿಐಡಿ ನೋಟಿಸ್ ಜಾರಿ ಮಾಡಿತ್ತು. ಅಂದು ಹಾಜರಾದ ಆರೋಪಿಯ ಧ್ವನಿ ಸ್ಯಾಂಪಲ್ ಪಡೆಯಲಾಗಿತ್ತು. ಎಫ್‌ಎಸ್‌ಎಲ್ ವರದಿಯಲ್ಲಿ ವಿಡಿಯೋದಲ್ಲಿರುವ ಧ್ವನಿ ಮತ್ತು ಯಡಿಯೂರಪ್ಪ ಧ್ವನಿ ಮ್ಯಾಚ್ ಆಗಿತ್ತು ಎಂದು ಸಿಐಡಿ ಅಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಎಫ್‌ಐಆರ್‌ನಲ್ಲಿರುವ ಅಂಶಗಳೇನು?
ಈ ಹಿಂದೆ ನನ್ನ ಮಗಳ ಮೇಲೆ ಆಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಸಹಾಯ ಕೇಳಲೆಂದು ಫೆ. 2, 2024ರಂದು ನನ್ನ ಮಗಳನ್ನು ಕರೆದುಕೊಂಡು ಯಡಿಯೂರಪ್ಪ ಅವರ ಬಳಿ ಹೋಗಿದ್ದೆ. ನನ್ನ ಮಗಳ ಮೇಲಾಗಿದ್ದ ದೌರ್ಜನ್ಯವನ್ನು ಎಸ್‌ಐಟಿಗೆ ವಹಿಸುವ ವಿಚಾರವಾಗಿ ನೆರವು ಕೇಳಿಕೊಂಡು ಹೋಗಿದ್ದೆ. ಯಡಿಯೂರಪ್ಪನವರನ್ನು ನಾನು ಅಪ್ಪಾಜಿ ಎಂದು ಕರೆಯುತ್ತಿದ್ದೆ. ಅವರ ಮನೆಯಲ್ಲಿ ಅಂದು ಸುಮಾರು ಒಂಭತ್ತು ನಿಮಿಷಗಳ ಕಾಲ ಮಾತನಾಡಿ, ನಮಗೆ ಟೀ ಕೊಡಿಸಿದರು. ನನ್ನ ಮಗಳ ಕೈಯನ್ನು ಹಿಡಿದುಕೊಂಡು ಯಡಿಯೂರಪ್ಪನವರು ಮಾತನಾಡಿಸುತ್ತಿದ್ದಾಗ, ನನ್ನ ಮಗಳು ತಾತ ಎಂದು ಕರೆಯುತ್ತಿದ್ದಳು. ಆ ಬಳಿಕ ಮಗಳೊಂದಿಗೆ ಮಾತನಾಡುತ್ತೇನೆ ಎಂದು ಹೇಳುತ್ತಾ ಐದು ನಿಮಿಷ ತನ್ನ ರೂಮಿನೊಳಗೆ ಕರೆದುಕೊಂಡು ಹೋಗಿ, ಬಳಿಕ ಲಾಕ್ ಮಾಡಿದ್ದಾರೆ. ರೂಮಿನಲ್ಲಿ ನನ್ನ ಮಗಳು ಹಾಕಿದ್ದ ಶ್ವೆಟರ್‌ನ ಒಳಗೆ ಕೈ ಹಾಕಿ, ಬಲಭಾಗದ ಎದೆಯ ಮೇಲೆ ಕೈ ಹಾಕಿ, ಹಿಚುಕಿದ್ದಾರೆ. ಈ ವೇಳೆ ನನ್ನ ಮಗಳು ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಕೂಡ ಹೊರಗೆ ಬರಲು ಯಡಿಯೂರಪ್ಪನವರು ಬಿಡಲಿಲ್ಲ. ಆಮೇಲೆ ಮೆಲ್ಲಗೆ ಯಡಿಯೂರಪ್ಪನವರೇ ಬಾಗಿಲು ತೆರೆದಾಗ, ಮಗಳು ಓಡಿ ಬಂದು ಕೂಡಲೇ ರೂಮಿನೊಳಗೆ ನಡೆದ ವಿಚಾರವನ್ನು ತಿಳಿಸಿದ್ದಾಳೆ. ಈ ಬಗ್ಗೆ ಯಡಿಯೂರಪ್ಪ ಅವರೊಂದಿಗೆ ಯಾಕೆ ಹೀಗೆ ಮಾಡಿದ್ರಿ ಎಂದು ಕೇಳಿದ್ದಕ್ಕೆ, ಅವರು, “ಆಕೆಗೆ(ಮಗಳಿಗೆ) ರೇಪ್ ಆಗಿದೆಯೋ? ಇಲ್ಲವೋ? ಎಂದು ಚೆಕ್ ಮಾಡಲು ಹಾಗೆ ಮಾಡಿದೆ” ಎಂದು ಹೇಳಿರುವುದಾಗಿ ಸಂತ್ರಸ್ತ ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.”ನನ್ನ ಮಗಳಿಗಾದ ಅನ್ಯಾಯಕ್ಕೆ ನ್ಯಾಯ ಕೇಳಲು ಹೋಗಿದ್ದಾಗ ನನ್ನ ಮಗಳಿಗೆ ಯಡಿಯೂರಪ್ಪನವರು ಲೈಂಗಿಕ ಕಿರುಕುಳ ನೀಡಿದ್ದಾರೆ. ಹಾಗಾಗಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ಅಪ್ರಾಪ್ತ ಬಾಲಕಿಯ ತಾಯಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಯಡಿಯೂರಪ್ಪ ವಿರುದ್ಧ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
2024 ಏಪ್ರಿಲ್ 12ರಂದು ಯಡಿಯೂರಪ್ಪ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ನಂತರ ಎರಡು ತಿಂಗಳು ಸುಮ್ಮನಿದ್ದರು.
ಲೋಕಸಭಾ ಚುನಾವಣೆ ಮುಗಿಯುವವರೆಗೂ ಸಿಐಡಿ ಅಧಿಕಾರಿಗಳು ಆರೋಪಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಮಧ್ಯೆ ಮೇ 27ರಂದು ದೂರುದಾರೆ ಅನಾರೋಗ್ಯದಿಂದಾಗಿ ಮೃತಪಡುತ್ತಾರೆ. ಆನಂತರ ಸಂತ್ರಸ್ತೆಯ ಸಹೋದರ ಈ ಪ್ರಕರಣದ ತನಿಖೆ ನಡೆಸದಿರುವ ಸಿಐಡಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತಾರೆ.
“ಯಡಿಯೂರಪ್ಪ ಅವರನ್ನು ಪೋಕ್ಸೊ ಪ್ರಕರಣದಲ್ಲಿ ಬಂಧಿಸಲು ನಿರ್ದೇಶನ ನೀಡಬೇಕು. ಪ್ರಕರಣ ದಾಖಲಾಗಿ ಹಲವು ತಿಂಗಳುಗಳಾದರೂ ಪೊಲೀಸರಿಂದ ಯಾವುದೇ ಕ್ರಮವಿಲ್ಲ. ಯಡಿಯೂರಪ್ಪರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ. ಕನಿಷ್ಠ 41ಎ ಅಡಿ ನೋಟಿಸ್ ನೀಡಿ ಯಡಿಯೂರಪ್ಪರನ್ನು ವಿಚಾರಣೆಗೆ ಕರೆದಿಲ್ಲ” ಎಂದು ರಿಟ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
“ಬಿಎಸ್‌ವೈ ಮನೆಯ ಸಿಸಿಟಿವಿ ದೃಶ್ಯಾವಳಿ ಸೀಜ್ ಮಾಡಿಲ್ಲ. ದೂರುದಾರರಾಗಿರುವ ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದಾರೆ. ಲೈಂಗಿಕ ದೌರ್ಜನ್ಯ ನಡೆದು ಹಲವು ತಿಂಗಳಾದರೂ ಸಂತ್ರಸ್ತೆಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಯಡಿಯೂರಪ್ಪರನ್ನು ಕೂಡಲೇ ಬಂಧಿಸುವಂತೆ ನಿರ್ದೇಶಿಸಬೇಕೆಂದು” ಸಂತ್ರಸ್ತೆಯ ಸಹೋದರ ರಿಟ್ ಅರ್ಜಿಯಲ್ಲಿ ವಿವರಿಸಿದ ನಂತರ ಎಚ್ಚೆತ್ತುಕೊಂಡ ಸಿಐಡಿ ಅಧಿಕಾರಿಗಳು ಯಡಿಯೂರಪ್ಪಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗದೇ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಯಡಿಯೂರಪ್ಪ ಜೂ 17ರಂದು ವಿಚಾರಣೆಗೆ ಬರುತ್ತಿರುವುದಾಗಿ ತಿಳಿಸಿದ್ದರು.
“ಇಷ್ಟೆಲ್ಲ ಸಾಕ್ಷ್ಯ ಇದ್ದರೂ ಯಾಕೆ ಬಂಧಿಸಿಲ್ಲ” ಎಂದು ನ್ಯಾಯಮೂರ್ತಿ ಎಸ್‌ಪಿಪಿ ಅವರನ್ನು ಪ್ರಶ್ನೆ ಮಾಡುತ್ತಾರೆ. ಯಡಿಯೂರಪ್ಪ ಪ್ರಭಾವಿ. ಪುತ್ರ ಬಿಜೆಪಿ ಅಧ್ಯಕ್ಷ, ಮತ್ತೊಬ್ಬ ಪುತ್ರ ಸಂಸದ. ಅಲ್ಲದೇ ಅವರ ಲೊಕೇಷನ್ ಪತ್ತೆಯಾಗುತ್ತಿಲ್ಲ ಎಂಬ ವಾದ ಮಂಡಿಸುತ್ತಾರೆ. ಯಡಿಯೂರಪ್ಪ ಅವರ ಬಂಧನಕ್ಕೆ ವಾರಂಟ್ ಕೋರಿ (Karnataka Highcourt) ಅರ್ಜಿ ಸಲ್ಲಿಸುತ್ತಾರೆ. ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿಗೆ ಆದೇಶಿಸಿತು.
ವಾರಂಟ್ ಜಾರಿಯಾದ ನಂತರ ಯಡಿಯೂರಪ್ಪ ಅವರು ದೆಹಲಿಯಲ್ಲಿಯೇ ಇದ್ದು ಮೂರು ದಿನ ಸಿಐಡಿ ಅಧಿಕಾರಿಗಳಿಗೆ ಸಿಗದೇ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಜೂನ್ 14ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ “ಬಿ.ಎಸ್.ಯಡಿಯೂರಪ್ಪ ಯಾರೋ ಒಬ್ಬ ಯಂಕ, ನಾಣಿ, ಸೀನನಂತಹ ಸಾಮಾನ್ಯ ವ್ಯಕ್ತಿಯಲ್ಲ. ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ತಮ್ಮ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಅಷ್ಟಕ್ಕೂ ನೀವು ಯಾರನ್ನು ಸಂತುಷ್ಟಿಗೊಳಿಸುವ ಸಲುವಾಗಿ ಬಂಧಿಸಲು ತವಕಿಸುತ್ತಿದ್ದೀರಿ…” ಎಂಬ ಅಚ್ಚರಿಯ ಹೇಳಿಕೆಯ ಜೊತೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇಷ್ಟೆಲ್ಲ ಆಗಿ ಇನ್ನೆರಡು ತಿಂಗಳು ಕಳೆದರೆ ಒಂದು ವರ್ಷವಾಗುತ್ತದೆ. ಈಗಲೂ ಹೈಕೋರ್ಟ್ ಪೀಠ ಆರೋಪಿಯ ಜಾಮೀನು ವಿಸ್ತರಿಸುತ್ತ, ನಿಯಮ ಸಡಿಲಿಸುತ್ತಾ ಇದೆ.
ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ, ಆಪ್ತರಾದ ರುದ್ರೇಶ್, ಮರಿಸ್ವಾಮಿ, ವೈ.ಎಂ.ಅರುಣ್ ವಿರುದ್ಧ ಪೋಕ್ಸೊ ಹಾಗೂ ಸಾಕ್ಷ್ಯ ನಾಶ ಸಂಬಂಧ 2024ರ ಜುಲೈನಲ್ಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಜಾ ಆಗಿದೆ.
ಈ ಮಧ್ಯೆ ಎಫ್‌ಐಆರ್ ಮತ್ತು ಆರೋಪ ಪಟ್ಟಿ ರದ್ದುಪಡಿಸುವಂತೆ ಯಡಿಯೂರಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೇಳಿ 2025ರ ಫೆಬ್ರವರಿಯಲ್ಲಿ ಅರ್ಜಿಯನ್ನು ವಜಾ ಮಾಡಿದೆ.

ಈ ಮಧ್ಯೆ ಕಳೆದ ಸೋಮವಾರ (ಏ.7) “ಯಡಿಯೂರಪ್ಪ ಹಿರಿಯ ರಾಜಕಾರಣಿ ಆಗಿರುವುದರಿಂದ ದೆಹಲಿಗೆ ತೆರಳಬೇಕಿದೆ. ಅಲ್ಲದೆ ರಾಜಕೀಯ ಪಕ್ಷದ ಸಂಸದೀಯ ಸಮಿತಿ ಸದಸ್ಯರಾಗಿದ್ದಾರೆ. ಹೀಗಾಗಿ ಷರತ್ತು ಸಡಿಲಿಸಬೇಕು” ಎಂದು ಅವರ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ಹಿರಿಯ ರಾಜಕಾರಣಿಯಾಗಿ ಖಂಡನೀಯ ಕೃತ್ಯ ನಡೆಸಬಾರದು. ಇತರರಿಗೆ ಮಾದರಿಯಾಗುವಂತಹ ನಡವಳಿಕೆ ಇರಬೇಕು” ಎಂದು ಹೇಳಿರುವುದು ಯಡಿಯೂರಪ್ಪ ವಿರುದ್ಧದ ಆರೋಪದಲ್ಲಿ ಹುರುಳಿದೆ ಎಂಬುದು ನ್ಯಾಯಪೀಠಗಳಿಗೆ ಖಾತ್ರಿಯಿದೆ, ಆದರೆ ಈ ವಿಳಂಬ ಸರಿಯಲ್ಲ ಎಂದೆನ್ನಿಸದಿರುವುದು ವಿಪರ್ಯಾಸವೇ ಸರಿ.
ಈ ಮಧ್ಯೆ ಆರೋಪಿ ಯಡಿಯೂರಪ್ಪ ಅವರು ಕಳೆದ ನವೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅದು ಭಾರೀ ಆಕ್ಷೇಪಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ವಿರುದ್ಧ ಬಿಜೆಪಿ-ಜೆಡಿಎಸ್ ಆಯೋಜಿಸಿದ್ದ ಪಾದಯಾತ್ರೆಯಲ್ಲೂ ಬಿಎಸ್‌ವೈ ಭಾಗವಹಿಸಿದ್ದರು. ಕಳೆದ ವಾರ ಬೆಲೆ ಏರಿಕೆ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲೂ ಭಾಗವಹಿಸಿದ್ದರು. ತಮ್ಮ ಮೇಲೆ ಗಂಭೀರ ಆರೋಪ ಬಂದಿದ್ದರೂ, ಪ್ರಕರಣ ನ್ಯಾಯಾಲಯದಲ್ಲಿದ್ದರೂ ಯಡಿಯೂರಪ್ಪ ಅವರು ರಾಜಾರೋಷವಾಗಿ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ಹೈಕಮಾಂಡ್ ಪೋಕ್ಸೊ ಪ್ರಕರಣದ ಆರೋಪಿತ ಯಡಿಯೂರಪ್ಪ ಅವರನ್ನು ಪಕ್ಷದ ಸಂಸದೀಯ ಮಂಡಳಿಯಿಂದ ಕೆಳಗಿಳಿಸಿಲ್ಲ. ಇತ್ತೀಚೆಗೆ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಗಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧವೂ ಪಕ್ಷ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ.
ನೊಂದ ಹೆಣ್ಣುಮಗುವಿನ ಮನಸು, ಬದುಕಿನೊಂದಿಗಿನ ಚೆಲ್ಲಾಟ : ರೂಪ ಹಾಸನ
ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದ ಬಗ್ಗೆ ʼಈ ದಿನʼಕ್ಕೆ ಪ್ರತಿಕ್ರಿಯಿಸಿದ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ, “ಅಪ್ರಾಪ್ತ ಮಕ್ಕಳ ಮೇಲೆ ನಡೆಸಲಾಗುವ ಲೈಂಗಿಕ ದೌರ್ಜನ್ಯ ಸಂಬಂಧಿತ ಪೋಕ್ಸೊ ಪ್ರಕರಣವೆಂದರೆ ಅದೊಂದು ಸಂಜ್ಞೇಯ ಮತ್ತು ಜಾಮೀನುರಹಿತ ಅಪರಾಧ! ಇಲ್ಲಿ ಮೊದಲ ಹಂತದಲ್ಲೇ ಆರೋಪಿಯನ್ನು ಅಪರಾಧಿ ಎಂದೇ ಪರಿಗಣಿಸಲಾಗುತ್ತದೆ. ತಾನು ಹೇಗೆ ಅಪರಾಧಿಯಲ್ಲ ಎಂಬುದನ್ನು ಆರೋಪಿಯು ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಬೇಕಿರುತ್ತದೆ. ಹೀಗಾಗಿ ಆರೋಪಿ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುವುದರಿಂದ ಆರೋಪಿಯನ್ನು ತಕ್ಷಣವೇ ಬಂಧನಕ್ಕೊಳಪಡಿಸಬೇಕು. ತಕ್ಷಣವೇ ವಿಚಾರಣೆಯೂ ಪ್ರಾರಂಭವಾಗಿ ತುರ್ತಾಗಿ ನ್ಯಾಯದಾನ ನೀಡಬೇಕು. ಆದರೆ ಯಡಿಯೂರಪ್ಪ ಅವರಂತಹ ಪ್ರತಿಷ್ಠಿತರೂ, ಪ್ರಬಲರೂ ಆರೋಪಿಗಳಾದ ಕಾರಣ, ಇಂತಹ ಎಲ್ಲ ಕಠಿಣ ಕಾನೂನು ನಿಯಮಗಳಿಂದ ತಪ್ಪಿಸಿಕೊಳ್ಳುತ್ತಿರುವುದು ಅಕ್ಷಮ್ಯ.

ಯಡಿಯೂರಪ್ಪ ಅವರ ಪ್ರಕರಣ ದಾಖಲಾಗಿ ಒಂದು ವರ್ಷವೇ ಕಳೆದು ಹೋಗಿದ್ದರೂ ಇನ್ನೂ ನ್ಯಾಯಾಂಗ ವಿಚಾರಣೆ ಪ್ರಾರಂಭವೇ ಆಗದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು- ಸಂತ್ರಸ್ತ, ನೊಂದ ಹೆಣ್ಣುಮಗುವಿನ ಮನಸು ಹಾಗೂ ಬದುಕಿನೊಂದಿಗೆ ನಡೆಸುತ್ತಿರುವ ಕ್ರೂರ ಚೆಲ್ಲಾಟವಾಗಿದೆ. ಈಗ ಮತ್ತೆ ಯಡಿಯೂರಪ್ಪ- ‘ಇದೊಂದು ಸಂಜ್ಞೆಯ ಅಪರಾಧವೆಂದು ಪರಿಗಣಿಸಿರುವುದನ್ನು ರದ್ದುಪಡಿಸಬೇಕು, ಈ ಕುರಿತು ಹೊಸದಾಗಿ ಹೊರಡಿಸಲಾಗಿರುವ ಆದೇಶದಲ್ಲಿ ಕೆಲವೊಂದು ಕಾನೂನು ಅಂಶವನ್ನು ಸ್ಪಷ್ಟಪಡಿಸಬೇಕು’ ಎಂದು ಕೋರುವ ಮೂಲಕ ನ್ಯಾಯಾಲಯದ ಸಮಯವನ್ನು ವಿನಾಕಾರಣ ವ್ಯರ್ಥಗೊಳಿಸುತ್ತಿರುವುದು, ಪ್ರಕರಣ ವಿಚಾರಣೆ ನಡೆಯದಂತೆ ಮುಂದೂಡುತ್ತಿರುವುದು ಸ್ಪಷ್ಟವಾಗಿದೆ. ಆದರೆ ಇವೆಲ್ಲದರಾಚೆಗೆ ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ ಎಂಬುದನ್ನು- ನ್ಯಾಯಾಲಯವು ತುರ್ತು ವಿಚಾರಣೆ ಪ್ರಾರಂಭಿಸಿ, ನೊಂದ ಸಂತ್ರಸ್ತ ಬಾಲೆಗೆ ಸಮರ್ಪಕ ನ್ಯಾಯ ನೀಡುವ ಮೂಲಕ ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸುತ್ತಿದ್ದೇನೆ” ಎಂದರು.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.