ಮಣಿಪುರ ತಿಂಗಳುಗಟ್ಟಲೆ ಹೊತ್ತಿ ಉರಿದರೂ ಪ್ರಧಾನಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ವಿದೇಶಗಳಿಗೆ, ಚುನಾವಣಾ ಪ್ರಚಾರಗಳಿಗೆ ಹತ್ತಾರು ಬಾರಿ ಭೇಟಿ ನೀಡುವವರು ಒಮ್ಮೆಯಾದರೂ ಗಲಭೆಪೀಡಿತ ರಾಜ್ಯಕ್ಕೆ ಭೇಟಿ ನೀಡಿ ನೋವು ಆಲಿಸಲಿಲ್ಲ. ಈ ಸಿಟ್ಟು ಮಣಿಪುರದ ಜನರಲ್ಲಿ ಇನ್ನೂ ಇದೆ. ಸದ್ಯ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದ್ದು. ಇನ್ನು ಮುಂದಾದರೂ ಈಶಾನ್ಯ ರಾಜ್ಯದ ಜನತೆಯಲ್ಲಿ ಶಾಂತಿ ನೆಲಸಲು ಪಕ್ಷಾತೀತವಾಗಿ ದ್ರೌಪದಿ ಮುರ್ಮು ಕ್ರಮಕೈಗೊಳ್ಳಬೇಕಿದೆ
ಮಣಿಪುರ ಗಲಭೆಗೆ ಸ್ವತಃ ಮುಖ್ಯಮಂತ್ರಿಯೇ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದ ಆಡಿಯೋ ದಾಖಲೆಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದ ಕೆಲವೇ ದಿನಗಳ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಮೂರು ದಿನಗಳಲ್ಲಿ ಸಿಎಂ ಸ್ಥಾನಕ್ಕೆ ಸೂಕ್ತ ನಾಯಕರು ಲಭಿಸದ ಕಾರಣ ಗುರುವಾರದಿಂದ (ಫೆ. 13) ರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿದೆ. ಮೇ 2023ರಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ದಿನದಿಂದಲೂ ಬಿರೇನ್ ಸಿಂಗ್ ಸಿಎಂ ಹುದ್ದೆಯಿಂದ ಕೆಳಗಿಳಿಯಬೇಕೆಂದು ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ದೇಶಾದ್ಯಂತ ಆಗ್ರಹಿಸಿದ್ದರು. ಹೆಚ್ಚು ಒತ್ತಡವಿದ್ದರೂ ಕಳೆದ 21 ತಿಂಗಳುಗಳಿಂದ ಅಧಿಕಾರದಿಂದ ಕೆಳಗಿಳಿದಿರಲಿಲ್ಲ. ಈಗ ಗಲಭೆಗೆ ನೇರ ಕಾರಣವಿರುವುದಾಗಿ ಆರೋಪ ಬಂದ ಬಳಿಗೆ ಅಧಿಕಾರದಿಂದ ನಿರ್ಗಮಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, “ಸಂವಿಧಾನದ 356 ನೇ ವಿಧಿ ಮತ್ತು ಆ ಪರವಾಗಿ ನನಗೆ ಅಧಿಕಾರ ನೀಡುವ ಇತರ ಎಲ್ಲ ಅಧಿಕಾರಗಳಿಂದ ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ, ಮಣಿಪುರ ರಾಜ್ಯ ಸರ್ಕಾರದ ಎಲ್ಲ ಕಾರ್ಯಗಳನ್ನು ಮತ್ತು ಆ ರಾಜ್ಯದ ರಾಜ್ಯಪಾಲರು ವಹಿಸಿರುವ ಅಥವಾ ಚಲಾಯಿಸಬಹುದಾದ ಎಲ್ಲ ಅಧಿಕಾರಗಳನ್ನು ನಾನು ಭಾರತದ ರಾಷ್ಟ್ರಪತಿಯಾಗಿ ವಹಿಸಿಕೊಳ್ಳುತ್ತೇನೆ” ಎಂದು ಅಧಿಸೂಚನೆ ಮೂಲಕ ತಿಳಿಸಿದ್ದಾರೆ.
ಸಂವಿಧಾನದ ವಿಧಿ 174(1)ರಂತೆ ರಾಜ್ಯ ವಿಧಾನಸಭೆಗಳ ಕೊನೆಯ ಅವಧಿಯ ಆರು ತಿಂಗಳುಗಳಲ್ಲಿ ಅಧಿವೇಶವನ್ನು ಕರೆಯುವುದು ಕಡ್ಡಾಯವಾಗಿದೆ. ಮಣಿಪುರದಲ್ಲಿ ಹಿಂದಿನ ವಿಧಾನಸಭಾ ಅಧಿವೇಶನ ಆ.12, 2024ರಂದು ಅಂತ್ಯಗೊಂಡಿತ್ತು ಮತ್ತು ಬುಧವಾರದೊಳಗೆ ಮುಂದಿನ ಅಧಿವೇಶನ ಆರಂಭಗೊಳ್ಳಬೇಕಿತ್ತು. ಆದರೆ ಭಾನುವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ರಾಜ್ಯಪಾಲ ಅಜಯ ಭಲ್ಲಾ ಅವರು ಸೋಮವಾರ ಆರಂಭಗೊಳ್ಳಬೇಕಿದ್ದ ಬಜೆಟ್ ಅಧಿವೇಶನವನ್ನು ರದ್ದುಗೊಳಿಸಿದ್ದರು. ಸೋಮವಾರದಿಂದ ಆರಂಭಗೊಳ್ಳಲಿದ್ದ ಅಧಿವೇಶನದಲ್ಲಿ ಸಿಂಗ್ ಸರಕಾರವು ಅವಿಶ್ವಾಸ ನಿರ್ಣಯ ಮತ್ತು ಸದನದಲ್ಲಿ ಬಲಾಬಲ ಪರೀಕ್ಷೆಯನ್ನು ಎದುರಿಸಬೇಕಿತ್ತು.ಆದರೆ ವಿಧಾನಸಭೆಯಲ್ಲಿ ತಾನು ಮಂಡಿಸಲಿದ್ದ ಅವಿಶ್ವಾಸ ನಿರ್ಣಯಕ್ಕೆ ಮೊದಲೇ ಬಿರೇನ್ ಸಿಂಗ್ ರಾಜೀನಾಮೆ ನೀಡಿರುವುದರ ಉದ್ದೇಶ ಬಿಜೆಪಿ ರಕ್ಷಿಸುವುದು ಆಗಿತ್ತೇ ವಿನಾ ಮಣಿಪುರದ ಜನತೆಯನ್ನಲ್ಲ ಎಂಬುದು ರಾಜಕೀಯ ಬಲ್ಲವರಿಗೆ ಅರ್ಥವಾಗುತ್ತದೆ.
ಮಣಿಪುರ ವಿಧಾನಸಭೆಯಲ್ಲಿ ಒಟ್ಟು 60 ಸ್ಥಾನಗಳಿದ್ದು ಬಹುಮತ ಸಂಖ್ಯೆಗೆ 31 ಸ್ಥಾನ ಬೇಕಿದೆ. ಬಿಜೆಪಿ 32, ಜೆಡಿಯು 5, ಎನ್ಪಿಪಿ 7, ಕೆಪಿಎ 2 ಸೇರಿ ಎನ್ಡಿಎ ಕಡೆ 46 ಶಾಸಕರ ಬೆಂಬಲವಿದೆ. ಕಾಂಗ್ರೆಸ್ನ 5 ಶಾಸಕರಿದ್ದಾರೆ. ಇತರೆ 3 ಮಂದಿ, ಜೆಡಿಯುನಿಂದ ಗೆದ್ದು ತಟಸ್ಥರಾಗಿರುವ ಒಬ್ಬರಿದ್ದು, 1 ಸ್ಥಾನ ಖಾಲಿ ಇದೆ. ಆದರೆ, ಆಡಳಿತಾರೂಢ ಶಾಸಕರೇ ಸಿಎಂ ವಿರುದ್ಧ ದಂಗೆ ಎದ್ದಿರುವ ಕಾರಣಕ್ಕೆ ಸಂಖ್ಯಾಬಲವಿದ್ದರೂ, ಶಾಸಕರ ಅವಿಶ್ವಾಸ ಗೆಲ್ಲುವ ವಿಶ್ವಾಸ ಬಿರೇನ್ ಸಿಂಗ್ಗೆ ಇಲ್ಲ. ಹೀಗಾಗೇ ಬೆಳಗ್ಗೆ ನವದೆಹಲಿಗೆ ಬಂದಿದ್ದ ಬಿರೇನ್ ಸಿಂಗ್ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಇದೀಗ 20 ಶಾಸಕರೊಂದಿಗೆ ರಾಜಭವನಕ್ಕೆ ಬಂದು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯಪಾಲರ ಹದ್ದು ಮೀರಿದ ವರ್ತನೆ- ಗೆರೆ ಎಳೆಯುವುದೇ ಕಾಯ್ದಿರಿಸಿರುವ ಸುಪ್ರೀಮ್ ತೀರ್ಪು?
ಜನಾಂಗೀಯ ಹಿಂಸಾಚಾರದಲ್ಲಿ ಸಿಂಗ್ ಪಾತ್ರವನ್ನು ಆರೋಪಿಸಿರುವ ಆಡಿಯೊ ತುಣುಕುಗಳ ಸತ್ಯಾಸತ್ಯತೆಯ ಕುರಿತು ಮುಚ್ಚಿದ ಲಕೋಟೆಯಲ್ಲಿ ವಿಧಿವಿಜ್ಞಾನ ವರದಿಯನ್ನು ಸುಪ್ರೀಂ ಕೋರ್ಟ್ ಕೇಳಿದ ಕೆಲವೇ ದಿನಗಳ ಬಳಿಕ ಮಣಿಪುರ ಮುಖ್ಯಮಂತ್ರಿಗಳು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕುಕಿಗಳೊಂದಿಗೆ ಹಿಂಸಾಚಾರದ ಸಂದರ್ಭದಲ್ಲಿ ರಾಜ್ಯ ಸರಕಾರದ ಶಸ್ತ್ರಾಗಾರಗಳಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಲು ಮೈತೇಯಿ ಗುಂಪುಗಳಿಗೆ ಅವಕಾಶ ನೀಡಲಾಗಿತ್ತು ಎಂದು ಸಿಂಗ್ ಹೇಳಿದ್ದರೆನ್ನಲಾದ ಸಂಭಾಷಣೆಗಳು ಈ ಈ ಆಡಿಯೋ ತುಣುಕುಗಳಲ್ಲಿ ಇವೆ ಎನ್ನಲಾಗಿದೆ. ನಿಜ ಬಯಲಾದರೆ ಸುಪ್ರೀಂ ಕೋರ್ಟ್ನಿಂದ ಭಾರಿ ದಂಡವನ್ನು ತಪ್ಪಿಸಿಕೊಳ್ಳುವುದಕ್ಕೆ ಪೂರ್ವಯೋಜಿತವಾಗಿ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದಿರುವುದು ಎಲ್ಲರಿಗೂ ತಿಳಿದಿರುವ ಸತ್ಯವಾಗಿದೆ.
250ಕ್ಕೂ ಹೆಚ್ಚು ಸಾವು, ಸಾವಿರಾರು ಮಂದಿ ನಿರಾಶ್ರಿತರು
ಮಣಿಪುರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮೈತೇಯಿ ಸಮುದಾಯ ಹೆಚ್ಚಾಗಿದ್ದಾರೆ. ಆರ್ಥಿಕವಾಗಿ ಪ್ರಬಲವಾಗಿರುವ ಸಮುದಾಯ ಕೂಡ. ಈ ಸಮುದಾಯವನ್ನು ಹೊರತುಪಡಿಸಿದರೆ ನಾಗಾ ಹಾಗೂ ಕುಕು ಬುಡಕಟ್ಟು ಸಮುದಾಯಗಳು ಮಣಿಪುರ ರಾಜ್ಯದ ಗುಡ್ಡಗಾಡು ಭಾಗದಲ್ಲಿ ನೆಲೆಸಿದ್ದಾರೆ. ಬುಡಕಟ್ಟು ಸಮುದಾಯ ನೆಲೆಸಿರುವ ಭೂ ಪ್ರದೇಶದಲ್ಲಿ ಅಭಿವೃದ್ದಿ ಕಡಿಮೆ. ಅಭಿವೃದ್ದಿ ಹೊಂದಿರುವ ಕಣಿವೆ ಭಾಗದಲ್ಲಿ ನೆಲೆಸಿರುವ ಮೈತೇಯಿ ಸಮುದಾಯ, ತಮ್ಮ ಪ್ರದೇಶದ ಹೊರಗೆ ಗುಡ್ಡಗಾಡು ಭಾಗದಲ್ಲೂ ಭೂಮಿ ಖರೀದಿ ಮಾಡುವ ಮನಸ್ಸು ಮಾಡಿತ್ತು. ತಮ್ಮ ಜನಸಂಖ್ಯೆ ಹೆಚ್ಚಾಗಿರುವ ಕಾರಣ, ಪ್ರದೇಶ ವಿಸ್ತರಣೆ ಮಾಡಲು ಮುಂದಾಗಿತ್ತು. ಆದರೆ, ಇದಕ್ಕೆ ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಜೊತೆಗೆ ಈ ಸಮುದಾಯ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನೂ ಕೇಳುತ್ತಿತ್ತು. ಇದಕ್ಕೆ ಪೂರಕ ಎಂಬಂತೆ ಮಣಿಪುರ ಹೈಕೋರ್ಟ್ ಮೈತೇಯಿ ಸಮುದಾಯದ ಪರವಾಗಿ ನಿಂತಿತ್ತು. ಕಳೆದ ವರ್ಷದ ಮೇ ಮಧ್ಯ ಭಾಗದೊಳಗೆ ಮೈತೇಯಿ ಸಮುದಾಯಕ್ಕೆ ವಿಶೇಷ ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಗಡುವು ನೀಡಲಾಗಿತ್ತು.
ಅಂದಿನಿಂದಲೇ ಎರಡೂ ಸಮುದಾಯಗಳ ನಡುವೆ ಘರ್ಷಣೆ ಶುರುವಾಯಿತು. ಮೈತೇಯಿ ಸಮುದಾಯದ ಜನರು ಕುಕಿ ಸಮುದಾಯ ಹೆಚ್ಚಾಗಿರುವ ಗುಡ್ಡಗಾಡು ಪ್ರದೇಶದಲ್ಲಿ ಭೂಮಿ ಖರೀದಿಗೆ ಮುಂದಾದರೆ ಕುಕಿ ಸಮುದಾಯಕ್ಕೆ ಹಿನ್ನಡೆಯಾಗುತ್ತದೆ. ಜೊತೆಯಲ್ಲೇ ಸರ್ಕಾರಿ ಉದ್ಯೋಗದಲ್ಲೂ ವಿಶೇಷ ಮೀಸಲಾತಿ ಸಿಕ್ಕರೆ, ಕುಕಿ ಹಾಗೂ ನಾಗಾ ಸಮುದಾಯದ ಪಾಲನ್ನು ಕಿತ್ತುಕೊಂಡಂತೆ ಆಗುತ್ತದೆ. ಆದರೆ, ಬಹುಸಂಖ್ಯಾತರಾಗಿರುವ ಮೈತೇಯಿ ಸಮುದಾಯದ ಜನರಿಗೆ ಸೂಕ್ತ ಶಿಕ್ಷಣ, ಉದ್ಯೋಗ ಹಾಗೂ ಭೂಮಿಯ ಅಗತ್ಯತೆ ಇರುವ ಕಾರಣ ಅವರಿಗೆ ಸೌಲಭ್ಯ ಸಿಗಬೇಕು ಎಂಬ ನಿಲುವನ್ನ ಕೋರ್ಟ್ ತಿಳಿಸಿತ್ತು. ಈ ಆದೇಶ ಕುಕಿ ಸಮುದಾಯವನ್ನು ಕೆರಳಿಸಿತ್ತು.
ಸರ್ಕಾರ ಕೋರ್ಟ್ ಆದೇಶಗಳನ್ನು ಪಾಲಿಸಬೇಕೆಂದು 2023 ಮೇ 3ರಂದು ಮೈತೇಯಿ ಸಮುದಾಯದ ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಆಫ್ ಮಣಿಪುರ ರಾಜ್ಯದಾದ್ಯಂತ ಟ್ರೈಬಲ್ ಸಾಲಿಡಾರಿಟಿ ಮಾರ್ಚ್ ನಡೆಸಲು ಕರೆ ನೀಡಿತ್ತು. ಇದಕ್ಕೆ ಸುಮಾರು 60 ಸಾವಿರ ಮಂದಿ ಸೇರಿದ್ದರು. ರ್ಯಾಲಿಯ ವೇಳೆಯಲ್ಲಿ ತೋರ್ಬಂಗ್ ಹಾಗೂ ಚುರಾಚಂದ್ಪುರ ಪ್ರದೇಶದಲ್ಲಿ ಗಲಭೆ ಉಂಟಾಯಿತು. 11 ಮಂದಿ ಗಾಯಗೊಂಡರು, ಕಾಂಗ್ಪೋಕಿ ಜಿಲ್ಲೆಯಲ್ಲಿ ಗುಂಡೇಟಿಗೆ ಇಬ್ಬರು ಮೃತಪಟ್ಟರು. ಪ್ರತಿಭಟನೆ ನಡೆಸಿದವರು ನಿಷೇಧಿತ ಕುಕಿ ಬಂಡುಕೋರರು ಎಂಬ ವದಂತಿ ಹಬ್ಬಿತು. ನಂತರದಲ್ಲಿ ಎರಡೂ ಸಮುದಾಯಗಳ ನಡುವೆ ತಿಂಗಳಾನುಗಟ್ಟಲೆ ನಡೆದ ಹಿಂಸಾಚಾರದಿಂದ 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ನೂರಾರು ಜನ ಗಾಯಗೊಂಡಿದ್ದಾರೆ. ಹಲವು ಸಾವಿರ ಜನ ರಾಜ್ಯ, ದೇಶವನ್ನು ಬಿಟ್ಟಿದ್ದರೆ, ಹತ್ತಾರು ಸಾವಿರ ಮಂದಿ ತಮ್ಮ ಮೂಲ ನೆಲೆಗಳನ್ನು ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿ ಬದುಕುತ್ತಿದ್ದಾರೆ.
ಮಣಿಪುರ ತಿಂಗಳುಗಟ್ಟಲೆ ಹೊತ್ತಿ ಉರಿದರೂ ಪ್ರಧಾನಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ವಿದೇಶಗಳಿಗೆ, ಚುನಾವಣಾ ಪ್ರಚಾರಗಳಿಗೆ ಹತ್ತಾರು ಬಾರಿ ಭೇಟಿ ನೀಡುವವರು ಒಮ್ಮೆಯಾದರೂ ಗಲಭೆಪೀಡಿತ ರಾಜ್ಯಕ್ಕೆ ಭೇಟಿ ನೀಡಿ ನೋವು ಆಲಿಸಲಿಲ್ಲ. ಈ ಸಿಟ್ಟು ಮಣಿಪುರದ ಜನರಲ್ಲಿ ಇನ್ನೂ ಇದೆ. ಸದ್ಯ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದ್ದು. ಇನ್ನು ಮುಂದಾದರೂ ಈಶಾನ್ಯ ರಾಜ್ಯದ ಜನತೆಯಲ್ಲಿ ಶಾಂತಿ ನೆಲಸಲು ಪಕ್ಷಾತೀತವಾಗಿ ದ್ರೌಪದಿ ಮುರ್ಮು ಕ್ರಮಕೈಗೊಳ್ಳಬೇಕಿದೆ.
