ರಾಷ್ಟ್ರಪತಿ ಆಡಳಿತದಲ್ಲಿ ಮಣಿಪುರ ಹೇಗಿದೆ, ಜನರಿಗೆ ನೆಮ್ಮದಿ ಲಭಿಸುವುದೆ?

Date:

Advertisements

ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ರಾಜೀನಾಮೆ ನೀಡಿದ ನಂತರ ಮತ್ತೊಬ್ಬ ನಾಯಕರು ಬಿಜೆಪಿಯಿಂದ ಆಯ್ಕೆಯಾಗದ ಕಾರಣದಿಂದ ಈಶಾನ್ಯ ರಾಜ್ಯ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿದೆ. ಮಣಿಪುರದ ಪರಿಸ್ಥಿಯನ್ನು ಕಳೆದ ಒಂದೂವರೆ ವರ್ಷದಿಂದ ಗಮನಿಸಿದರೆ ಸುಮಾರು ತಿಂಗಳುಗಳ ಹಿಂದೆಯೆ ರಾಷ್ಟ್ರಪತಿ ಆಳ್ವಿಕೆ ಹೇರಬೇಕಿತ್ತು. ಆದರೆ ಕೇಂದ್ರ ಹಾಗೂ ರಾಜ್ಯದ ಧೋರಣೆಯಿಂದ ಇದು ಸಾಧ್ಯವಾಗಲಿಲ್ಲ. 2023ರ ಮೇ ನಂತರ ಆರಂಭವಾದ ಗಲಭೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಮಣಿಪುರದಲ್ಲಿ 260 ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಜನ ಗಾಯಗೊಂಡಿದ್ದಾರೆ.  ಸಾವಿರಾರು ಮಂದಿ ಜನ ರಾಜ್ಯ, ದೇಶವನ್ನು ಬಿಟ್ಟಿದ್ದರೆ, 60 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಮೂಲ ನೆಲೆಗಳನ್ನು ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿ ಬದುಕುತ್ತಿದ್ದಾರೆ. ಪ್ರಸ್ತುತ ಜಾರಿಗೊಂಡಿರುವ ರಾಷ್ಟ್ರಪತಿ ಆಳ್ವಿಕೆಯು ಹಿಂಸಾತ್ಮಕ ಬಿಕ್ಕಟ್ಟನ್ನು ಶಾಂತಿಯುತ ಪರಿಹಾರವನ್ನು ಬಯಸುತ್ತಿರುವ ಸಾವಿರಾರು ಮಂದಿಗೆ ಭರವಸೆಯ ಆಶಾಕಿರಣವಾಗಿದೆ. ಆದರೆ ಜನರು ಶಾಸ್ವತವಾಗಿ ಹಿಂಸೆ ಕೊನೆಗೊಳ್ಳಲು ಬಯಸುತ್ತಿದ್ದಾರೆ.

ಸುಪ್ರೀಂ ತೀರ್ಪು ಸಿಎಂ ರಾಜೀನಾಮೆಗೆ ಕಾರಣ

ಸರ್ವೋಚ್ಚ ನ್ಯಾಯಾಲಯವು ಜನಾಂಗೀಯ ಹಿಂಸಾಚಾರದಲ್ಲಿ ಸಿಂಗ್ ಪಾತ್ರವನ್ನು ಆರೋಪಿಸಿರುವ ಆಡಿಯೊ ತುಣುಕುಗಳ ಸತ್ಯಾಸತ್ಯತೆಯ ಕುರಿತು ಮುಚ್ಚಿದ ಲಕೋಟೆಯಲ್ಲಿ ವಿಧಿವಿಜ್ಞಾನ ವರದಿಯನ್ನು ಕೇಳಿದ ದಿನಗಳ ಬಳಿಕ ಮಣಿಪುರ ಮುಖ್ಯಮಂತ್ರಿಗಳು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕುಕಿಗಳೊಂದಿಗೆ ಹಿಂಸಾಚಾರದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಶಸ್ತ್ರಾಗಾರಗಳಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಲು ತಮ್ಮದೆ ಸಮುದಾಯದ ಮೈತೇಯಿ ಗುಂಪುಗಳಿಗೆ ಅವಕಾಶ ನೀಡಲಾಗಿತ್ತು ಎಂದು ಸಿಂಗ್ ಹೇಳಿದ್ದರೆನ್ನಲಾದ ಸಂಭಾಷಣೆಗಳು ಈ ಆಡಿಯೊ ತುಣುಕುಗಳು ಇವೆ ಎನ್ನಲಾಗಿದೆ. ಅನಂತರದ ನಿರೀಕ್ಷಿತ ಬೆಳವಣಿಗೆಯಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಮುದ್ರೆ ಒತ್ತಲಾಯಿತು.

Advertisements

ರಾಷ್ಟ್ರಪತಿ ಅಳ್ವಿಕೆಯನ್ನು ಹೇರಿದ ನಂತರ ಕೇಂದ್ರವು ಮೂರು ತಿಂಗಳೊಳಗೆ ಮೈತೇಯಿ ಹಾಗೂ ಕುಕಿ ಸಮುದಾಯಗಳು ವಾಸಿಸುವ ಜಿಲ್ಲೆಗಳಲ್ಲಿ ಎರಡು ಸಮುದಾಯಗಳು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಕಾರ್ಯಾಚರಣೆ ಆರಂಭಿಸುವಂತೆ ಭದ್ರತಾಪಡೆಗಳಿಗೆ ಸೂಚಿಸಿದೆ. ಇದಕ್ಕಾಗಿಯೇ ಸೇನಾ ಪಡೆಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಲಾಗಿದೆ.  ಕಳೆದ ಒಂದು ವಾರದಲ್ಲಿ ಉಗ್ರ ಚಟುವಟಿಗೆಗಳಲ್ಲಿ ತೊಡಗಿಸಿಕೊಂಡಿದ್ದ 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.  ಬಂಧಿತರು ಕಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿ, ಪೀಪಲ್ಸ್ ಲಿಬರೇಶನ್ ಆರ್ಮಿ, ಪ್ರಿಪೇಕ್‌, ಕುಕಿ ನ್ಯಾಷನಲ್ ಆರ್ಮಿ ಮತ್ತು ಯುನೈಟೆಡ್ ನ್ಯಾಶನಲ್ ಕುಕಿ ಆರ್ಮಿಗಳಿಗೆ ಸೇರಿದವರು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಇವರಿಂದ ಕನಿಷ್ಠ 15 ಐಇಡಿಗಳು ಮತ್ತು ಎಚ್‌ಕೆ ರೈಫಲ್‌ಗಳು, ಐಎನ್‌ಎಸ್‌ಎಎಸ್ ಮತ್ತು ಎಕೆ ಸರಣಿಯ ರೈಫಲ್‌ಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಲಭೆ ಶುರುವಾದ 2023ರ ಮೇ ತಿಂಗಳಲ್ಲಿಇಂಫಾಲ್ ಕಣಿವೆಯಲ್ಲಿ ಶಸ್ತ್ರಾಸ್ತ್ರಗಳಿಂದ 6,000 ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಲೂಟಿ ಮಾಡಲಾಗಿದೆ. ಅವುಗಳಲ್ಲಿ ಅರ್ಧದಷ್ಟು ಇನ್ನೂ ಪತ್ತೆಹಚ್ಚಲಾಗಿಲ್ಲ. 

ಆರಂಭಗೊಳ್ಳದ ಶಾಂತಿಸಭೆಗಳು

ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿ ರಾಷ್ಟ್ರಪತಿ ಆಳ್ವಿಕೆ ಹೇರಿದ ನಂತರ ಕುಕಿ ಮತ್ತು ಮೈತೇಯಿ ಸಮುದಾಯಗಳನ್ನು ಪ್ರತಿನಿಧಿಸುವ ನಾಯಕರು ಕೇಂದ್ರದ ನಾಯಕರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಆದರೆ ಯಾವುದೇ ಔಪಚಾರಿಕ ಮಾತುಕತೆಗಳು ಆರಂಭಗೊಂಡಿಲ್ಲ. ಮೈತೇಯಿ ಮತ್ತು ಕುಕಿ ಗುಂಪುಗಳೆರಡೂ ತಮ್ಮ ಬೇಡಿಕೆಗಳಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಫೆಬ್ರುವರಿ 17 ರಂದು ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರಿಗೆ ನೀಡಿದ ಜ್ಞಾಪಕ ಪತ್ರದಲ್ಲಿ, ಮಣಿಪುರ ಏಕತೆಯ ಸಮನ್ವಯ ಸಮಿತಿ, ಮೈತೇಯಿ ಸಮೂಹದ ಪ್ರಭಾವಿ ವೇದಿಕೆಗಳು ಕುಕಿ ಸಂಘಟನೆಗಳ “ಪ್ರತ್ಯೇಕ ಆಡಳಿತ”ದ ಬೇಡಿಕೆಗೆ ತನ್ನ ವಿರೋಧವನ್ನು ಪುನರುಚ್ಚರಿಸಿದೆ. ಹಾಗೆಯೇ 2008 ರಿಂದ ಕುಕಿ ಪ್ರತ್ಯೇಕವಾದಿ ಗುಂಪುಗಳೊಂದಿಗೆ ಸಹಿ ಹಾಕಲಾದ ಒಪ್ಪಂದವನ್ನು ರದ್ದುಪಡಿಸಲು ಕರೆ, ಅಕ್ರಮ ಗಸಗಸೆ ಕೃಷಿ ಮತ್ತು ಮಾದಕವಸ್ತುಗಳ ಕಳ್ಳಸಾಗಣೆ ವಿರುದ್ಧದ ಹೋರಾಟ ಮತ್ತು ನೆರೆಯ ಮ್ಯಾನ್ಮಾರ್‌ನಿಂದ ಅಕ್ರಮ ಚಿನ್-ಕುಕಿ ವಲಸಿಗರನ್ನು ಪತ್ತೆಹಚ್ಚಲು ನಾಗರಿಕರ ರಾಷ್ಟ್ರೀಯ ನೋಂದಣಿಯ ಅನುಷ್ಠಾನ ಹಾಗೂ  ಒಂದು ತಿಂಗಳೊಳಗೆ ಸರ್ಕಾರ ರಚನೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿದೆ.

ಮತ್ತೊಂದೆಡೆ, ಬಹುತೇಕ ಎಲ್ಲ ಕುಕಿ-ಜೋ ಸಂಘಟನೆಗಳ ಅತ್ಯುನ್ನತ ಸಂಸ್ಥೆಯಾದ ಕುಕಿ ಝೋ ಕೌನ್ಸಿಲ್, ರಾಷ್ಟ್ರಪತಿ ಆಳ್ವಿಕೆಯನ್ನು ಸ್ವಾಗತಿಸಿದೆ ಮತ್ತು ಪ್ರತ್ಯೇಕ ಆಡಳಿತದ ಬೇಡಿಕೆಯನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸಿದೆ. ಜೊತೆಗೆ ಮೈತೇಯಿ ಪ್ರಾಬಲ್ಯವಿರುವ ಗುಂಪುಗಳಿಂದ ಕುಕಿ ಗುಂಪುಗಳು ಬೇರ್ಪಡುವ ಪ್ರಮುಖ ಬೇಡಿಕೆಯು ಒಂದಾಗಿದೆ.

ರಾಷ್ಟ್ರಪತಿ ಆಳ್ವಿಕೆಯ ನಂತರ ಶಾಸಕರ ನಿಲುವು

ವಿಧಾನಸಭೆಯಲ್ಲಿ ಒಟ್ಟು 59 ಶಾಸಕರಿದ್ದು, ಅವರಲ್ಲಿ 40ಕ್ಕೂ ಹೆಚ್ಚು ಮಂದಿ ಮೈತೇಯಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.  ಈ ಸಮುದಾಯದ 15 ಕ್ಕೂ ಹೆಚ್ಚು ಶಾಸಕರು ಮಣಿಪುರದ ಬಿಕ್ಕಟ್ಟನ್ನು ಪರಿಹರಿಸಲು ಕೇಂದ್ರ ಮತ್ತು ಪಕ್ಷದ ನಾಯಕರನ್ನು ಒತ್ತಾಯಿಸಿದ್ದಾರೆ. ಆದರೆ ಕುಕಿ ಗುಂಪುಗಳ ಬೇಡಿಕೆಗಳನ್ನು ಈ ಶಾಸಕರು ವಿರೋಧಿಸಿದ್ದಾರೆ.  ಮತ್ತೊಂದೆಡೆ, ಬಿಜೆಪಿಗೆ ಸೇರಿದ ಏಳು ಮಂದಿ ಸೇರಿದಂತೆ ಕನಿಷ್ಠ 10 ಕುಕಿ-ಜೋ ಶಾಸಕರು, ಸಂಧಾನದ ಇತ್ಯರ್ಥದ ಅಡಿಯಲ್ಲಿ ಶಾಂತಿ ಮತ್ತು ನ್ಯಾಯಕ್ಕಾಗಿ ಸಮಗ್ರ ರಾಜಕೀಯ ಮಾರ್ಗಸೂಚಿಯನ್ನು ರೂಪಿಸಬೇಕೆಂದು ಕೇಂದ್ರವನ್ನು ಒತ್ತಾಯಿಸಿದ್ದಾರೆ. ಇಂಫಾಲ್‌ ಕಣಿವೆಯಲ್ಲಿರುವ ಮೈತೇಯಿ ಪ್ರಾಬಲ್ಯದ 10 ಶಾಸಕರು ಅಂತರ ಕಾಯ್ದುಕೊಂಡಿದ್ದು, ರಾಜ್ಯದಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಶೀಘ್ರದಲ್ಲೇ ಕೊನೆಗೊಳಿಸುವಂತೆ ಮನವಿ ಮಾಡಿದ್ದಾರೆ.

ಭದ್ರತಾ ಪಡೆಗಳು ಕೈಗೊಂಡ ಕ್ರಮಗಳನ್ನು ಹೊರತುಪಡಿಸಿ, ಸಂಘರ್ಷವನ್ನು ಪರಿಹರಿಸಲು ಕೇಂದ್ರವು ಯಾವುದೇ ಮಹತ್ವದ ರಾಜಕೀಯ ನಿರ್ಧಾರವನ್ನು ತೆಗೆದುಕೊಂಡಿಲ್ಲ. ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಮೊದಲು, ಕೇಂದ್ರ ಸರ್ಕಾರವು ಮೈತೇಯಿ ಸಂಸ್ಥೆಗಳ ಬೇಡಿಕೆಯಂತೆ ಮ್ಯಾನ್ಮಾರ್‌ ದೇಶದ 1,641 ಕಿಮೀ ಗಡಿಯಲ್ಲಿ ಬೇಲಿ ಹಾಕುವುದಾಗಿ ಘೋಷಿಸಿತು. ಆದರೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ.  ಮಾಜಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಸೇರಿದಂತೆ ಮೈತೇಯಿ ಸಂಸ್ಥೆಗಳು ಕುಕಿ-ಚಿನ್ ವಲಸಿಗರ ನಿರಂತರ ಒಳನುಸುಳುವಿಕೆಯಿಂದ ಮಣಿಪುರದ ಜನಸಂಖ್ಯೆಯಲ್ಲಿ ಅಪಾರ ಬದಲಾವಣೆಯುಂಟಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕುಕಿ ಸಮುದಾಯದ ಗುಂಪುಗಳು ಅಕ್ರಮ ವಲಸೆಯ ಬಗ್ಗೆ ಮೈತೇಯಿ ಗುಂಪುಗಳು ತಪ್ಪು ಗ್ರಹಿಕೆ ಹೊಂದಿವೆ ಎಂದು ತಿರುಗೇಟು ನೀಡಿವೆ.

ಕೇಂದ್ರ ಹಾಗೂ ಬಿಜೆಪಿ ನಾಯಕರ ಅಸಡ್ಡೆ

ಮಣಿಪುರ ಜನರು ರಾಜ್ಯ ಬಿಜೆಪಿ ಸರ್ಕಾರದ ನಂಬಿಕೆ ಕಳೆದುಕೊಂಡಿದ್ದಾರೆ. ಸಾಂವಿಧಾನಿಕ ವ್ಯವಸ್ಥೆ ಕುಸಿದು ಬಿದ್ದಿದೆ. ಜನರಿಗೆ ಮುಂದಿನ ಭವಿಷ್ಯವೇನು ಎಂಬ ಚಿಂತೆ ಕಾಡುತ್ತಿದೆ. ಕಳೆದ ವರ್ಷ ಮಣಿಪುರದ ಬಿಜೆಪಿ ಶಾಸಕರ ನಿಯೋಗ ದೆಹಲಿಯಲ್ಲಿ ದಿನಗಟ್ಟಲೆ ಕಾದುಕುಳಿತರು ಪ್ರಧಾನಿ ಮೋದಿ ಅವರಿಗೆ ಭೇಟಿಯ ಅವಕಾಶ ನೀಡಲಿಲ್ಲ. ಹಲವು ಸಂಘರ್ಷದ ಜೊತೆಗೆ 2023ರ ಜುಲೈ ತಿಂಗಳಲ್ಲಿ ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ವಿಡಿಯೋ ಹೊರಬಿದ್ದಿತ್ತು. ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಎತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಬಾಯಿ ಮಾತಿನ ಒಂದೆರೆಡು ಹೇಳಿಕೆಗಳನ್ನು ನೀಡಿದರೆ ಹೊರತು ನೋವಿನಲ್ಲಿ ಕುಗ್ಗುತ್ತಿರುವ ಜನರನ್ನು ಭೇಟಿ ನೀಡಲಿಲ್ಲ. ದೇಶವಿದೇಶಗಳ ಸಮಸ್ಯೆಗಳ ಬಗ್ಗೆ ಮಾತನಾಡುವ, ರಾಯಬಾರಿಗಳನ್ನು ಕಳಿಸುವ ಪ್ರಧಾನಿಯವರು ಮಣಿಪುರದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದು ನಿಜಕ್ಕೂ ಬೇಸರದ ಸಂಗತಿ. ರಾಷ್ಟ್ರಪತಿ ಆಡಳಿತದಲ್ಲಾದರೂ ಈಶಾನ್ಯ ರಾಜ್ಯದ ಜನತೆ ನೆಮ್ಮದಿ ದೊರೆತು ಸಂಘರ್ಷ ಶಾಶ್ವತವಾಗಿ ಕೊನೆಗೊಳ್ಳಬೇಕಿದೆ. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X