8 ಬಾರಿ ಶಾಸಕರಾಗಿ ಆಯ್ಕೆಯಾಗಿರುವ 64 ವರ್ಷದ ಡಿ.ಕೆ ಶಿವಕುಮಾರ್ ಅವರ ಬಹು ದಿನಗಳ ರಾಜ್ಯದ ಮುಖ್ಯಮಂತ್ರಿಯಾಗುವ ಕನಸು ಈಗ ನನಸಾಗುತ್ತಿದೆ. ಆದರೆ, ಅವರ ಮುಂದಿನ ಹಾದಿ ಹೂವಿನ ಹಾಸಿಗೆಯಲ್ಲ ಎಂಬುದೂ ಅಷ್ಟೇ ಸ್ಪಷ್ಟ.
ಕರ್ನಾಟಕ ರಾಜಕಾರಣದಲ್ಲಿ ತಂತ್ರ, ಧೈರ್ಯ, ಸಂಘಟನೆ ಹಾಗೂ ನಿಷ್ಠೆಗೆ ಹೆಸರಾದ ಕೆಲವೇ ರಾಜಕಾರಣಿಗಳಲ್ಲಿ ದೊಡ್ಡಆಲಹಳ್ಳಿ ಕೆಂಪೇಗೌಡ ಶಿವಕುಮಾರ್, ಅರ್ಥಾತ್ ಡಿ.ಕೆ ಶಿವಕುಮಾರ್ ಒಬ್ಬರು. ನಾಲ್ಕು ದಶಕಗಳ ಹಿಂದೆ ವಿದ್ಯಾರ್ಥಿ ಸಂಘಟನೆಯ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಆರಂಭಿಸಿದ್ದ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಹಂತಕ್ಕೆ ಬೆಳೆದುಬಂದಿದ್ದಾರೆ. 2023 ಚುನಾವಣೆಯ ನಂತರ ಹೆಣೆಯಲಾಗಿದ್ದ ಅಧಿಕಾರ ಸೂತ್ರ ಹಂಚಿಕೆಯ ಒಪ್ಪಂದದಂತೆ ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಜ್ಜಾಗಿದ್ದಾರೆ.
ಡಿ.ಕೆ ಶಿವಕುಮಾರ್ ಜನನವಾಗಿದ್ದು, ಕೆಂಪೇಗೌಡ ಮತ್ತು ಗೌರಮ್ಮ ದಂಪತಿಯ ಮಗನಾಗಿ 1962ರ ಮೇ 15ರಂದು. ಹುಟ್ಟೂರು ಬೆಂಗಳೂರು ಗ್ರಾಮೀಣ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಆಲಹಳ್ಳಿ. ಹಳೆ ಮೈಸೂರು ಭಾಗದ ಪ್ರಭಾವಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಶಿವಕುಮಾರ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.
ಪ್ರಬಲ ಸಮುದಾಯದಲ್ಲಿ ಹುಟ್ಟಿದ್ದರೂ, ಅವರ ರಾಜಕೀಯ ಹಾದಿ ಇತಿಹಾಸ ಹೂವಿನ ಹಾದಿಯಾಗಿರಲಿಲ್ಲ. 1980ರಲ್ಲಿ 18ನೇ ವಯಸ್ಸಿನವರಾಗಿದ್ದ ಡಿ.ಕೆ ಶಿವಕುಮಾರ್, ಕಾಂಗ್ರೆಸ್ನ ವಿದ್ಯಾರ್ಥಿ ಘಟಕ ಎನ್ಎಸ್ಯುಐ ಮೂಲಕ ರಾಜಕೀಯ ಪ್ರವೇಶಿಸಿದರು. ಕೇವಲ ನಾಲ್ಕೇ ವರ್ಷದಲ್ಲಿ, 1984ರಲ್ಲಿ ಎನ್ಎಸ್ಯುಐ ರಾಜ್ಯ ಘಟಕದ ಅಧ್ಯಕ್ಷರೂ ಆದರು. ಮಾತ್ರವಲ್ಲದೆ, ತಮ್ಮ ಕಿರಿಯ ವಯಸ್ಸಿನಲ್ಲೇ 1985ರಲ್ಲಿ ಸಾತನೂರು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಸ್ಪರ್ಧಿಸುವ ಧೈರ್ಯ ತೋರಿದ್ದರು. ಆ ಚುನಾವಣೆಯಲ್ಲಿ 15,000 ಮತಗಳಿಂದ ಸೋತರೂ, ಹೈಕಮಾಂಡ್ ಕಣ್ಣಿನಲ್ಲಿ ಭರವಸೆಯ ನಾಯಕನಾಗಿ ಕಾಣಿಸಿಕೊಂಡರು. ನಂತರ, 1987ರಲ್ಲಿ ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಗೆದ್ದರು. 1989ರಲ್ಲಿ ತಮ್ಮ 27ನೇ ವಯಸ್ಸಿಗೆ ಸಾತನೂರು ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ವಿಧಾನಸೌಧ ಪ್ರವೇಶಿಸಿದರು.
1991ರಲ್ಲಿ ವೀರೇಂದ್ರ ಪಾಟೀಲ್ ಅವರ ನಿವೃತ್ತಿಯ ನಂತರ ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗುವಲ್ಲಿ 30ರ ಹರೆಯದ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಇದರ ಫಲವಾಗಿ ಬಂಗಾರಪ್ಪ ಸಂಪುಟದಲ್ಲಿ ಬಂಧಿಖಾನೆ (ಜೈಲು) ಸಚಿವರಾಗಿ ಕಿರಿಯ ವಯಸ್ಸಿನಲ್ಲೇ ಮಂತ್ರಿಗಿರಿಯನ್ನೂ ಗಿಟ್ಟಿಸಿಕೊಂಡರು. 1994ರಲ್ಲಿ ಪಕ್ಷದ ಆಂತರಿಕ ಪಿತೂರಿಯಿಂದಾಗಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದಾಗಲೂ ಧೃತಿಗೆಡದೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಭೇರಿ ಬಾರಿಸಿದರು.
ಡಿ.ಕೆ. ಶಿವಕುಮಾರ್ಗೆ ರಾಜಕೀಯವಾಗಿ ಪಾಠ ಕಲಿಸಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ. ಆದ್ದರಿಂದಲೇ, ಅವರನ್ನು ಶಿವಕುಮಾರ್ ತಮ್ಮ ರಾಜಕೀಯ ಗುರು ಎಂದೇ ಕರೆಯುತ್ತಾರೆ. 1999ರಲ್ಲಿ ಎಸ್.ಎಂ. ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅವರ ಪ್ರಚಾರದ ‘ಪಾಂಚಜನ್ಯ ಯಾತ್ರೆ’ಯನ್ನು ಯಶಸ್ವಿಯಾಗಿ ಸಂಘಟಿಸಿದವರು ಇದೇ ಶಿವಕುಮಾರ್. ಆ ಚುನಾವಣೆಯಲ್ಲಿ ಕಾಂಗ್ರೆಸ್ 132 ಸ್ಥಾನ ಗೆದ್ದು ಅಧಿಕಾರಕ್ಕೆ ಬಂದಾಗ ಶಿವಕುಮಾರ್ ನಗರಾಭಿವೃದ್ಧಿ ಮತ್ತು ಸಹಕಾರ ಸಚಿವರಾದರು. ಬೆಂಗಳೂರಿನ ಪ್ರಸಿದ್ಧ ಕೆ.ಆರ್. ಮಾರ್ಕೆಟ್ ಫ್ಲೈಓವರ್ ಸಿದ್ದವಾಗಿದ್ದೂ ಇದೇ ಅವಧಿಯಲ್ಲಿ.
ಜೊತೆಗೆ, ಎಸ್.ಎಂ ಕೃಷ್ಣರೊಂದಿಗೆ ಡಿ.ಕೆ ಶಿವಕುಮಾರ್ ಕೇವಲ ರಾಜಕೀಯವಲ್ಲದೆ ಕೌಟುಂಬಿಕ ನಂಟನ್ನೂ ಹೊಂದಿದ್ದಾರೆ. ಎಸ್.ಎಂ. ಕೃಷ್ಣ ಅವರ ಮೊಮ್ಮಗ ಅಮರ್ತ್ಯ ಹೆಗಡೆಗೆ ಶಿವಕುಮಾರ್ ತಮ್ಮ ಹಿರಿಯ ಮಗಳು ಐಶ್ವರ್ಯಾಳನ್ನು ಕೊಟ್ಟು ವಿವಾಹ ಮಾಡಿದ್ದಾರೆ.
ಎಸ್.ಎಂ ಕೃಷ್ಣರ ನೆಚ್ಚಿನ ಭಂಟನಾಗಿದ್ದ ಡಿ.ಕೆ ಶಿವಕುಮಾರ್, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ರಾಜಕೀಯ ಶತ್ರುವೂ ಆಗಿದ್ದರು. ಹಳೆ ಮೈಸೂರು ಭಾಗದ ರಾಜಕೀಯ ಪ್ರಾಬಲ್ಯಕ್ಕಾಗಿ ದೇವೇಗೌಡರ ಕುಟುಂಬ ಮತ್ತು ಡಿ.ಕೆ. ಶಿವಕುಮಾರ್ ನಡುವೆ ದಶಕಗಳ ಕಾಲ ತೀವ್ರ ಪೈಪೋಟಿ ನಡೆದಿದೆ. ಇಂದಿಗೂ ನಡೆಯುತ್ತಿದೆ.
ಗೌಡರ ಕುಟುಂಬ vs ಶಿವಕುಮಾರ್ ಮತ್ತು ರೌಡಿಸಂ ನಂಟು
1980 ದಶಕದಲ್ಲಿ ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಲ್ಲಿ ರಾಜಕೀಯ ಪ್ರಾಬಲ್ಯಕ್ಕಾಗಿ ದೇವೇಗೌಡರ ಕುಟುಂಬ ಮತ್ತು ಡಿ.ಕೆ ಶಿವಕುಮಾರ್ ನಡುವೆ ಭಾರಿ ಪೈಪೋಟಿ ಇತ್ತು. ಮುಖ್ಯಮಂತ್ರಿಯಾಗಬೇಕೆಂಬ ಮಹದಾಸೆಯಿಂದ ಸಾತನೂರಿಗೆ ವಲಸೆ ಬಂದು ಸ್ಪರ್ಧಿಸಿದ್ದ ದೇವೇಗೌಡರು, ರಾಮನಗರ ಭಾಗದಲ್ಲಿ ರಾಜಕೀಯವಾಗಿ ನೆಲೆ ಕಂಡುಕೊಂಡಿದ್ದರು. ಆದರೆ, ಈ ನೆಲೆಗೆ ಪೆಟ್ಟು ಕೊಟ್ಟಿದ್ದು ಡಿ.ಕೆ ಶಿವಕುಮಾರ್. 70-80ರ ದಶಕದ ಆರಂಭದಲ್ಲಿ ಕಲ್ಲು ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ಡಿ.ಕೆ ಶಿವಕುಮಾರ್ ಹಿಡಿತವನ್ನೂ ಸಾಧಿಸಿದ್ದರು. ಇದೇ ಹೊತ್ತಿನಲ್ಲಿ, ಬೆಂಗಳೂರಿನ ಕುಖ್ಯಾತ ಡಾನ್ ಆಗಿದ್ದ ಕೊತ್ವಾಲ್ ರಾಮಚಂದ್ರನ ಜೊತೆ ಡಿ.ಕೆ. ಶಿವಕುಮಾರ್ ಅವರಿಗೆ ನಂಟಿತ್ತು. ಆತನ ಬೆಂಬಲದೊಂದಿಗೆ ಡಿ.ಕೆ ಶಿವಕುಮಾರ್ ರಾಜಕೀಯವಾಗಿ ಬೆಳೆದರು ಎಂಬ ಪ್ರಬಲ ಆರೋಪಗಳೂ ಇದ್ದವು.
ಆದರೆ, ಈ ಆರೋಪಗಳ ಹಿಂದೆ, ದೇವೇಗೌಡರ ಕುಟುಂಬ ತಂತ್ರವೂ ಇದೆ ಎಂಬ ಪ್ರತ್ಯಾರೋಪಗಳೂ ಇವೆ. ಆರೋಪಗಳ ನಡುವೆಯೂ ದೇವೇಗೌಡರ ಕುಟುಂಬವನ್ನು ಮಣಿಸುವಲ್ಲಿ ಡಿ.ಕೆ ಶಿವಕುಮಾರ್ ಆಗಾಗ್ಗೆ ಯಶಸ್ಸು ಕಂಡಿದ್ದಾರೆ. 1999ರ ಸಾತನೂರು ಚುನಾವಣೆಯಲ್ಲಿ ದೇವೇಗೌಡರ ಪುತ್ರ ಎಚ್.ಡಿ. ಕುಮಾರ್ಸ್ವಾಮಿ ಅವರನ್ನು 15,000 ಮತಗಳ ಅಂತರದಿಂದ ಸೋಲಿಸುವ ಮೂಲಕ ಶಿವಕುಮಾರ್ ಹಳೆಯ ಸೋಲಿಗೆ ಸೇಡು ತೀರಿಸಿಕೊಂಡಿದ್ದರು. ನಂತರ 2002ರ ಕನಕಪುರ ಲೋಕಸಭೆ ಉಪಚುನಾವಣೆಯಲ್ಲಿ ದೇವೇಗೌಡರ ಎದುರು ಶಿವಕುಮಾರ್ ಸೋತರೂ, 2004ರ ಚುನಾವಣೆಯಲ್ಲಿ ತೇಜಸ್ವಿನಿ ರಮೇಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿ ದೇವೇಗೌಡರನ್ನು ಸೋಲಿಸುವ ಮಹಾ ತಂತ್ರ ರೂಪಿಸಿದ್ದರು. ಇದೇ ಕಾರಣಕ್ಕೆ 2004ರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಿವಕುಮಾರ್ ಸಚಿವರಾಗಬಾರದು ಎಂದು ದೇವೇಗೌಡರು ಕಟ್ಟುನಿಟ್ಟಿನ ಷರತ್ತು ವಿಧಿಸಿದ್ದರು. ಪಕ್ಷದ ಹಿತದೃಷ್ಟಿಯಿಂದ ಶಿವಕುಮಾರ್ ಆ ಅವಮಾನವನ್ನು ಸಹಿಸಿಕೊಂಡು ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.
ಈ ಲೇಖನ ಓದಿದ್ದೀರಾ?: ಮುಖ್ಯಮಂತ್ರಿ ಬದಲಾವಣೆ: ಏನಾಗಲಿದೆ ಸರ್ಕಾರದ ಭವಿಷ್ಯ?
2013ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ ಕೆಲವು ಗಂಭೀರ ಆರೋಪಗಳಿಂದಾಗಿ, ಸಿದ್ದರಾಮಯ್ಯ ಸಂಪುಟದಲ್ಲಿ ಇವರಿಗೆ ಸಚಿವ ಸ್ಥಾನ ತಪ್ಪಿತ್ತು. ಆದರೆ, ಹೈಕಮಾಂಡ್ ನೇಮಿಸಿದ ನ್ಯಾಯಾಂಗ ತಜ್ಞರ ಸಮಿತಿಯಿಂದ ಕ್ಲೀನ್ ಚಿಟ್ ಪಡೆದು, ಏಳೇ ತಿಂಗಳಲ್ಲಿ ಇಂಧನ ಸಚಿವರಾಗಿ ಸಂಪುಟ ಸೇರಿದರು. ಇಂಧನ ಸಚಿವರಾಗಿದ್ದಾಗ ತುಮಕೂರಿನ ಪಾವಗಡದಲ್ಲಿ ಏಷ್ಯಾದಲ್ಲೇ ಅತಿ ದೊಡ್ಡ ಸೌರ ವಿದ್ಯುತ್ ಸ್ಥಾವರವನ್ನೂ ಸ್ಥಾಪಿಸಿದರು. ಇಲ್ಲಿಂದಾಚೆಗೆ ‘ಫಲವತ್ತಾದ ಖಾತೆ’ಗಳನ್ನು ಡಿ.ಕೆ ಶಿವಕುಮಾರ್ ಪಡೆದುಕೊಳ್ಳಲಾರಂಭಿಸಿದರು.
ಕಾಂಗ್ರೆಸ್ನ ರಾಷ್ಟ್ರೀಯ ‘ವಿಶ್ವಾಸಾರ್ಹ ಟ್ರಬಲ್ ಶೂಟರ್’
ಡಿ.ಕೆ. ಶಿವಕುಮಾರ್ ದೇಶಾದ್ಯಂತ ಕಾಂಗ್ರೆಸ್ನ ‘ಟ್ರಬಲ್ ಶೂಟರ್’ ಎಂದೇ ಖ್ಯಾತಿ ಪಡೆದಿದ್ದಾರೆ. ಅದಕ್ಕೆ ಹಲವಾರು ಕಾರಣಗಳೂ ಇವೆ. 2002ರಲ್ಲಿ, ಅಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ರಾವ್ ದೇಶ್ಮುಖ್ ಸರ್ಕಾರ ವಿಶ್ವಾಸಮತ ಯಾಚಿಸುವ ಪರಿಸ್ಥಿತಿ ಎದುರಾಗಿದ್ದು, ಸರ್ಕಾರ ಉರುಳುವ ಸಾಧ್ಯತೆಯೂ ಇತ್ತು. ಆ ಸಮಯದಲ್ಲಿ, ಮಹಾರಾಷ್ಟ್ರದಲ್ಲಿ ಕುದುರೆ ವ್ಯಾಪಾರ ತಪ್ಪಿಸಲು ಅಲ್ಲಿನ ಎಲ್ಲ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ನಲ್ಲಿ ಇರಿಸಿ ದೇಶ್ಮುಖ್ ಸರ್ಕಾರ ಉಳಿಸಿಕೊಟ್ಟಿದ್ದರು.
ಅಂತೆಯೇ, 2017ರಲ್ಲಿ; ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಅವರ ಗೆಲುವು ಪ್ರತಿಷ್ಠೆಯಾಗಿತ್ತು. ಆಗಲೂ, ಗುಜರಾತ್ನ 42 ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ಗೆ ಕರೆತಂದಿದ್ದರು. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳ ಭಾರಿ ಒತ್ತಡದ ನಡುವೆಯೂ ಶಾಸಕರು ಕೈತಪ್ಪದಂತೆ ನೋಡಿಕೊಂಡು ಅಹ್ಮದ್ ಪಟೇಲ್ ಗೆಲುವು ಸಾಧಿಸುವಂತೆ ಮಾಡಿದರು. ಆಗ, ಅವರ ಹೆಸರು ರಾಷ್ಟ್ರ ಮಟ್ಟದಲ್ಲಿ ಮುನ್ನೆಲೆ ಬಂದಿತು.
ಇನ್ನು, 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದಾಗ, ಬಿಜೆಪಿ ಅಧಿಕಾರ ಹಿಡಿಯದಂತೆ ತಡೆಯಲು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸುವ ಆಪರೇಷನ್ ಮಾಸ್ಟರ್ಮೈಂಡ್ ಆಗಿ ಕೆಲಸ ಮಾಡಿದ್ದರು.
ರಾಜಕೀಯದಲ್ಲಿ ದೊಡ್ಡಗೌಡರನ್ನೇ ಎದುರು ಹಾಕಿಕೊಂಡು ಬೆಳೆದ, ರಾಷ್ಟ್ರಮಟ್ಟದಲ್ಲಿ ಟ್ರಬಲ್ ಶೂಟರ್ ಎಂದೇ ಬಿಂಬಿಸಿಕೊಂಡಿರುವ ಡಿ.ಕೆ ಶಿವಕುಮಾರ್, ನಾನಾ ರೀತಿಯ ಆರೋಪಗಳು, ಪ್ರಕರಣಗಳನ್ನೂ ಎದುರಿಸುತ್ತಿದ್ದಾರೆ.
ಡಿಕೆಶಿ ವಿರುದ್ಧ ಕಾನೂನು ಸವಾಲುಗಳು
ಯಶಸ್ಸಿನ ಜೊತೆಜೊತೆಯಲ್ಲೇ ಶಿವಕುಮಾರ್ ಭಾರಿ ಕಾನೂನು ಹೋರಾಟಗಳನ್ನು ಎದುರಿಸಿದ್ದಾರೆ. 2017ರಲ್ಲಿ ಗುಜರಾತ್ ಶಾಸಕರನ್ನು ರೆಸಾರ್ಟ್ನಲ್ಲಿ ಇರಿಸಿಕೊಂಡಿದ್ದ ಸಮಯದಲ್ಲಿಯೇ, ಡಿ.ಕೆ ಶಿವಕುಮಾರ್ ಅವರ ಇಡೀ ಕುಟುಂಬ ಮತ್ತು ಉದ್ಯಮಗಳ ಮೇಲೆ ಆದಾಯ ತೆರಿಗೆ (IT) ಇಲಾಖೆ ದಾಳಿ ನಡೆಸಿತು. ತದನಂತರ, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ 2019ರ ಸೆಪ್ಟೆಂಬರ್ನಲ್ಲಿ ಜಾರಿ ನಿರ್ದೇಶನಾಲಯ (ED) ಅವರನ್ನು ಬಂಧಿಸಿ, ದೆಹಲಿಗೆ ತಿಹಾರ್ ಜೈಲಿಗಟ್ಟಿತು. ಸುಮಾರು 50 ದಿನಗಳಿಗೂ ಹೆಚ್ಚು ಕಾಲ ಶಿವಕುಮಾರ್ ಜೈಲಿನಲ್ಲಿದ್ದರು. ಅವರು ಜೈಲಿನಲ್ಲಿದ್ದ ಸಮಯದಲ್ಲಿಯೇ ಅವರನ್ನು ಕಾಂಗ್ರೆಸ್ ಹೈಕಮಾಂಡ್ನ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಖುದ್ದಾಗಿ ಭೇಟಿ ಮಾಡಿ, ಬೆಂಬಲ ಸೂಚಿಸಿದ್ದರು.
ಇಷ್ಟೇ ಅಲ್ಲದೆ, ಅಕ್ರಮ ಗ್ರಾನೈಟ್ ಗಣಿಗಾರಿಕೆ ಆರೋಪ, ಶಾಂತಿನಗರ ವಸತಿ ಸಹಕಾರ ಸಂಘದ ಭೂ ಕಬಳಿಕೆ ಆರೋಪಗಳೂ ಡಿ.ಕೆ ಶಿವಕುಮಾರ್ ವಿರುದ್ಧ ಕೇಳಿಬಂದಿವೆ. ಅವರು ಆದಾಯ ಮೀರಿದ ಆಸ್ತಿ ಗಳಿಕೆ, ಅಕ್ರಮ ಹಣ ವರ್ಗಾವಣೆ, ಆದಾಯ ತೆರಿಗೆ (IT) ವಂಚನೆ ಪ್ರಕರಣಗಳು ಸೇರಿದಂತೆ ಪ್ರಮುಖ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಪ್ರಸ್ತುತ, ಅಕ್ರಮ ಹಣ ವರ್ಗಾವಣೆ ಪ್ರಕರಣ ರದ್ದಾಗಿದ್ದರೂ, ಅಪರಾಧ ಸಂಚು (IPC ಸೆಕ್ಷನ್ 120B) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮತ್ತೊಂದು ಇಸಿಐಆರ್ ಸಿದ್ದಪಡಿಸಿ, ತನಿಖೆ ನಡೆಸುತ್ತಲೇ ಇದೆ.
ಅಂದಹಾಗೆ, ಡಿ.ಕೆ. ಶಿವಕುಮಾರ್ ಭಾರತದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು. ಇಡೀ ದೇಶದಲ್ಲಿ ಹೆಚ್ಚು ಘೋಷಿತ ಆಸ್ತಿ ಇರುವ ರಾಜಕಾರಣಿಗಳಲ್ಲಿ ಡಿ.ಕೆ ಶಿವಕುಮಾರ್ ಅಗ್ರ 2ನೇ ಸ್ಥಾನದಲ್ಲಿದ್ದಾರೆ. ರಿಯಲ್ ಎಸ್ಟೇಟ್, ಹೋಟೆಲ್ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಶಿವಕುಮಾರ್ ಭಾರೀ ಹೂಡಿಕೆ ಮಾಡಿದ್ದಾರೆ. ಡಿಕೆಎಸ್ ಚಾರಿಟೇಬಲ್ ಟ್ರಸ್ಟ್ ಮತ್ತು ರಾಷ್ಟ್ರೀಯ ಶಿಕ್ಷಣ ಪ್ರತಿಷ್ಠಾನದ ಮೂಲಕ ಹಲವು ಪ್ರಮುಖ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಶೋಭಾ ಡೆವಲಪರ್ಸ್ನಲ್ಲಿ ದೊಡ್ಡ ಪಾಲುದಾರಿಕೆ ಹೊಂದಿದ್ದಾರೆ. 2023ರ ಚುನಾವಣಾ ಅಫಿಡವಿಟ್ನಲ್ಲಿ ಅವರು ಘೋಷಿಸಿರುವಂತೆ ಅವರ ಒಟ್ಟು ಆಸ್ತಿ ಮೌಲ್ಯ 1,413 ಕೋಟಿ ರೂ. ಆದರೂ, ಅವರ ಅಘೋಷಿತ ಆಸ್ತಿ ಇನ್ನೂ ಹಲವು ಪಟ್ಟು ಹೆಚ್ಚೇ ಇದೆ ಎಂಬ ಆರೋಪಗಳೂ ಇವೆ.
ಮುಖ್ಯಮಂತ್ರಿಯಾಗಿ ಮುಂದಿರುವ ಹೊಸ ಸವಾಲುಗಳು
ಸದ್ಯ 8 ಬಾರಿ ಶಾಸಕರಾಗಿ ಆಯ್ಕೆಯಾಗಿರುವ 64 ವರ್ಷದ ಡಿ.ಕೆ ಶಿವಕುಮಾರ್ ಅವರ ಬಹು ದಿನಗಳ ಕನಸು ಈಗ ನನಸಾಗುತ್ತಿದೆ. ಆದರೆ, ಅವರ ಮುಂದಿನ ಹಾದಿ ಹೂವಿನ ಹಾಸಿಗೆಯಲ್ಲ ಎಂಬುದೂ ಅಷ್ಟೇ ಸ್ಪಷ್ಟ. ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸರ್ಕಾರದಲ್ಲಿ ಯಾವುದೇ ಭಿನ್ನಮತ ಮೂಡದಂತೆ ಒಗ್ಗಟ್ಟಿನಿಂದ ಮುನ್ನಡೆಸುವುದು ಪ್ರಾಥಮಿಕ ಸವಾಲು. ಆದರೆ, ಇದನ್ನೂ ಮೀರಿದ ಕೆಲವು ಸವಾಲುಗಳಿವೆ.
ಅದರಲ್ಲಿ ಆಡಳಿತಾತ್ಮಕವಾಗಿ; ಸರ್ಕಾರವು ಕೇವಲ ಉಚಿತ ಗ್ಯಾರಂಟಿಗಳಿಗೆ ಸೀಮಿತವಾಗಿಲ್ಲ, ಬದಲಿಗೆ ಅಭಿವೃದ್ಧಿ ಆಧಾರಿತವಾಗಿದೆ ಎಂಬ ಬಲವಾದ ಕಲ್ಪನೆಯನ್ನು ಜನರಲ್ಲಿ ಮೂಡಿಸಬೇಕಿದೆ. ಜೊತೆಗೆ, ತಾವೇ ಹುಟ್ಟುಹಾಕಿದ ಯೋಜನೆಯಾದ ‘ಮೇಕೆದಾಟು ಅಣೆಕಟ್ಟೆ’ಯನ್ನು ತಾವೇ ಅಧಿಕಾರದಲ್ಲಿದ್ದಾಗಲೂ ಜಾರಿಗೊಳಿಸದಿದ್ದರೆ, ಅವರೂ ಈ ವಿಚಾರದಲ್ಲಿ ಗಂಭೀರವಾಗಿಲ್ಲ ಎಂದೇ ಅರ್ಥ ಕೊಡುತ್ತದೆ.
ಗಮನಾರ್ಹವಾಗಿ, ಮೋದಿ-ಶಾ ನೇತೃತ್ವದ ಕೇಂದ್ರ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ನಾನಾ ರೀತಿಯಲ್ಲಿ ಕಾಡುವುದಂತೂ ಸತ್ಯ. ಡಿ.ಕೆ ಶಿವಕುಮಾರ್ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಮುಂದಿಟ್ಟುಕೊಂಡು ಮೋದಿ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳನ್ನು ಡಿ.ಕೆ ಶಿವಕುಮಾರ್ ವಿರುದ್ಧ ನಿರಂತರವಾಗಿ ಛೂಬಿಡಬಹುದು. ಯಾಕೆಂದರೆ, ಯಾವುದೇ ಸಾಕ್ಷ್ಯಗಳೇ ಇಲ್ಲದ ಪ್ರಕರಣದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಮೋದಿ-ಶಾ ಜೋಡಿ ಮೂಲೆಗುಂಪು ಮಾಡಿತು. ಬಂಗಾಳದ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಂ.ಕೆ ಸ್ಟಾಲಿನ್ ಅವರು ಅಧಿಕಾರ ಕಳೆದುಕೊಳ್ಳುವುದು ಮಾತ್ರವಲ್ಲ, ಶಾಸಕತ್ವವನ್ನೂ ಕಳೆದುಕೊಳ್ಳುವಂತೆ ಮಾಡಿತು. ಹೀಗಿರುವಾಗ, ಪ್ರಮುಖ ಪ್ರಕರಣಗಳನ್ನು ಎದುರಿಸುತ್ತಿರುವ ಡಿ ಕೆ ಶಿವಕುಮಾರ್ ಅವರು ಸುಲಭವಾಗಿ ಆಡಳಿತ ನಡೆಸಲು ಈ ಮೋದಿ-ಶಾ ಜೋಡಿ ಬಿಡುತ್ತದೆಯೇ? ಈ ಜೋಡಿ ಮತ್ತು ಅವರಿಂದಾಗುವ ತೊಂದರೆಗಳನ್ನು ಡಿ.ಕೆ ಶಿವಕುಮಾರ್ ಗಟ್ಟಿಯಾಗಿ ಎದುರಿಸುವರೇ… ಕಾದು ನೋಡಬೇಕು.




