ಮುಖ್ಯಮಂತ್ರಿ ಬದಲಾವಣೆಯು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಹುದ್ದೆಯ ಬದಲಾವಣೆ ಮಾತ್ರವೇ ಆಗಿರುವುದಿಲ್ಲ. ಹುದ್ದೆಯ ಜೊತೆಗೆ, ಇಡೀ ಸರ್ಕಾರ ಮತ್ತು ಪಕ್ಷದ ರಾಜಕೀಯ ಭವಿಷ್ಯ ಮತ್ತು ಸಮೀಕರಣಗಳನ್ನು ಬದಲಾಯಿಸಲಿದೆ.
ರಾಜ್ಯ ರಾಜಕಾರಣದಲ್ಲಿ ಕಳೆದ 3 ವರ್ಷಗಳಿಂದ ಆಗಾಗ್ಗೆ ಚರ್ಚೆಗೆ ಬರುತ್ತಿದ್ದ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಚರ್ಚೆಗಳಿಗೆ ಕಡೆಗೂ ತೆರೆಬಿದ್ದಿದೆ. ಸೋಮವಾರ, ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಮಾತಿಗೆ ಮನ್ನಣೆ ನೀಡಿ, ತಮ್ಮ ಹುದ್ದೆಯನ್ನು ಬಿಟ್ಟುಕೊಡಲು ಒಪ್ಪಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ, ತಮ್ಮನ್ನು ರಾಜ್ಯಸಭೆಗೆ ಕಳಿಸುವ ಪ್ರಸ್ತಾಪವನ್ನು ಅವರು ತಿರಸ್ಕರಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಅಂತೂ, ಹಾಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೇರುವುದು ಖಚಿತವಾಗಿದೆ.
2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ, ಅಧಿಕಾರ ಹಂಚಿಕೆಯ ಮಾತುಕತೆಗಳು ನಡೆದಿದ್ದವು. ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿರುತ್ತಾರೆ. ಆ ನಂತರದ 2 ವರ್ಷಗಳ ಅಧಿಕಾರವು ಡಿ ಕೆ ಶಿವಕುಮಾರ್ ಅವರದ್ದಾಗಿರುತ್ತದೆ ಎಂಬ ಆಂತರಿಕ ಒಪ್ಪಂದವಾಗಿತ್ತು ಎಂದು ಹೇಳಲಾಗುತ್ತಿತ್ತು. ಅದು ಈಗ ಸ್ಪಷ್ಟವಾಗಿದೆ. ಅವಧಿ ಹಂಚಿಕೆ ಸೂತ್ರದಂತೆ, ಈಗ ನಾಯಕತ್ವ ಬದಲಾವಣೆ ನಿಶ್ಚಿತವಾಗಿದೆ.
ಸದ್ಯಕ್ಕೆ, 2028ರ ರಾಜ್ಯ ವಿಧಾನಸಭಾ ಚುನಾವಣೆ, ಆ ನಂತರದ ಲೋಕಸಭಾ ಚುನಾವಣೆ ಹಾಗೂ ಇತರ ಪ್ರಮುಖ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಮತ್ತು ಪಕ್ಷದಲ್ಲಿ ಬದಲಾವಣೆಗಳನ್ನು ತರಲು ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಹೊರಗುಳಿದರೆ, ಮುಂದೇನು?
ಮುಖ್ಯಮಂತ್ರಿ ಬದಲಾವಣೆಯು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಹುದ್ದೆಯ ಬದಲಾವಣೆ ಮಾತ್ರವೇ ಆಗಿರುವುದಿಲ್ಲ. ಹುದ್ದೆಯ ಜೊತೆಗೆ, ಇಡೀ ಸರ್ಕಾರ ಮತ್ತು ಪಕ್ಷದ ರಾಜಕೀಯ ಭವಿಷ್ಯ ಮತ್ತು ಸಮೀಕರಣಗಳನ್ನು ಬದಲಾಯಿಸಲಿದೆ.
ಸದ್ಯಕ್ಕೆ, ಕಾಂಗ್ರೆಸ್‌ನ ದೊಡ್ಡ ಶಕ್ತಿ ಮತ್ತು ಮತ ಬ್ಯಾಂಕ್ ಆಗಿ ಉಳಿದಿರುವುದು ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ಸಮುದಾಯ. ಸಿದ್ದರಾಮಯ್ಯ ಅವರು ಅಹಿಂದ ಸಮುದಾಯಗಳಲ್ಲಿ ಭಾರೀ ಪ್ರಭಾವ ಹೊಂದಿದ್ದರು. ಸಿದ್ದರಾಮಯ್ಯರ ಕಾರಣಕ್ಕಾಗಿಯೇ ಈ ಸಮುದಾಯಗಳು ಕಾಂಗ್ರೆಸ್ ಜೊತೆ ಪ್ರಬಲವಾಗಿ ನಿಂತಿದ್ದವು ಎಂದರೂ ತಪ್ಪಿಲ್ಲ. ಕಳೆದ ಚುನಾವಣೆಯಲ್ಲಿ ಈ ಸಮುದಾಯಗಳ ಬೆಂಬಲವೇ ಕಾಂಗ್ರೆಸ್‌ಗೆ ಸುಭದ್ರ ಅಧಿಕಾರವನ್ನೂ ನೀಡಿತ್ತು.
ಈಗ, ನಾಯಕತ್ವ ಬದಲಾವಣೆಯಾಗಿ, ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ. ಸರ್ಕಾರದಲ್ಲಿಯೂ ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಮನ್ನಣೆ-ಮಣೆ ಸಿಗುವ ಸಾಧ್ಯತೆ ಇದೆ. ಪರಿಣಾಮ, ಅಹಿಂದ ಮತಬ್ಯಾಂಕ್ ಅಖಂಡವಾಗಿ ಕಾಂಗ್ರೆಸ್ ಜೊತೆ ಉಳಿಯಲಾರದು ಎಂಬ ಅಭಿಪ್ರಾಯಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.
ಮುಖ್ಯವಾಗಿ, ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿಯ ಕೂಗು ದಶಕಗಳಿಂದ ಕೇಳಿಬರುತ್ತಿದೆ. ಈಗಲೂ, ನಾಯಕತ್ವ ಬದಲಾದರೆ, ದಲಿತ ಸಮುದಾಯದ ನಾಯಕರಿಗೆ ಮುಖ್ಯಮಂತ್ರಿ ಹುದ್ದೆ ಕೊಡಬೇಕೆಂಬ ಬೇಡಿಕೆ ಮುಂಚೂಣಿಯಲ್ಲಿಯೇ ಇದೆ. ಜೊತೆಗೆ, ಒಳಮೀಸಲಾತಿ ವಿಚಾರದಲ್ಲಿ ಸರ್ಕಾರ ಅನುಸರಿಸಿದ ವಿಳಂಬ ಧೋರಣೆಯು, ಕಾಂಗ್ರೆಸ್ ವಿರುದ್ಧ ದಲಿತ ಸಮುದಾಯ ಆಕ್ರೋಶಗೊಳ್ಳಲು ಕಾರಣವಾಗಿದೆ. ಈ ಸಮಯದಲ್ಲಿ, ಸಿದ್ದರಾಮಯ್ಯರನ್ನು ಕೆಳಗಿಳಿಸಿ, ದಲಿತ ಸಮುದಾಯಕ್ಕೆ ಅವಕಾಶ ಕೊಡದೆ, ಒಕ್ಕಲಿಗ ನಾಯಕರಿಗೆ ಆ ಹುದ್ದೆ ಕೊಟ್ಟರೆ, ಇದು ದಲಿತ ಸಮುದಾಯದ ಅಸಮಾಧಾನಕ್ಕೂ ಗುರಿಯಾಗಲಿದೆ. ಪರಿಣಾಮ, ದಲಿತ ಸಮುದಾಯ ಕಾಂಗ್ರೆಸ್‌ನಿಂದ ದೂರ ಸರಿಯುವ ಅಪಾಯವೂ ಇದೆ.
ಗಮನಾರ್ಹವಾಗಿ, ಭ್ರಷ್ಟಾಚಾರದ ಆರೋಪಗಳು, ಗ್ಯಾರಂಟಿ ಯೋಜನೆಗಳು ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದಲ್ಲಿ ಅಸಮರ್ಪಕತೆಗಳು, ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬದಂತಹ ಹತ್ತಾರು ಆರೋಪಗಳು ಸರ್ಕಾರದ ಮೇಲಿವೆ. ನಿಧಾನವಾಗಿ ಆಡಳಿತ ವಿರೋಧಿ ಅಲೆಯೂ ರೂಪುಗೊಳ್ಳುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿ ಮತ್ತು ಮಾಧ್ಯಮಗಳು ಕಾಂಗ್ರೆಸ್ ವಿರುದ್ಧ ಜನಾಭಿಪ್ರಾಯ ರೂಪಿಸುತ್ತಿವೆ.
ಇದೇ ಸಮಯದಲ್ಲಿ, ನಾಯಕತ್ವ ಬದಲಾವಣೆಯಾಗುತ್ತಿದೆ. ಈ ಬದಲಾವಣೆಯು ಆಡಳಿತದ ವಿರೋಧಿ ಅಲೆಯನ್ನು ತಡೆಯಲಿದೆ, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಲಿದೆ. ರಾಜ್ಯದಲ್ಲಿ ಸರ್ಕಾರವು ಹುರುಪಿನಿಂದ ಕೆಲಸ ಮಾಡಲಿದೆ. ರಾಜ್ಯದಲ್ಲಿ ಪಕ್ಷಕ್ಕೆ ಹೊಸ ಅಲೆ ಸೃಷ್ಟಿಯಾಗಲಿದೆ ಎಂದು ಪಕ್ಷದ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಇದು ಹೇಗೆ ಎನ್ನುವುದು ಮುಂದಿನ ದಿನಗಳೇ ಹೇಳಲಿವೆ.
ಡಿ.ಕೆ. ಶಿವಕುಮಾರ್ ಅವರಿಂದ ಸದೃಢ ಸರ್ಕಾರ ಸಾಧ್ಯವೇ?
ಡಿ.ಕೆ. ಶಿವಕುಮಾರ್ ಪಕ್ಷದೊಳಗಿನ ಪ್ರಭಾವಿ ನಾಯಕ ಮಾತ್ರವಲ್ಲ, ಪಕ್ಷಕ್ಕೆ ಹಲವು ಸಂದರ್ಭಗಳಲ್ಲಿ ಆಪದ್ಬಾಂಧವನಾಗಿಯೂ ನಿಂತವರು. ಪಕ್ಷವು ದೇಶದ ವಿವಿಧ ರಾಜ್ಯಗಳಲ್ಲಿ ಮತ್ತು ಕರ್ನಾಟಕದಲ್ಲಿ ನೆಲಕಚ್ಚಿದ್ದಾಗ ಕೆಪಿಸಿಸಿ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡು, ಸ್ವಂತ ಸಂಪನ್ಮೂಲ ಮತ್ತು ಕಾರ್ಯತಂತ್ರದ ಮೂಲಕ ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದವರು.
ಆದ್ದರಿಂದ, ಅವರು ಮುಖ್ಯಮಂತ್ರಿಯಾದರೆ, ಕಾಂಗ್ರೆಸ್‌ಗೆ ಹೊಸ ಉತ್ಸಾಹ ಬರಲಿದೆ ಎಂದು ಕಾಂಗ್ರೆಸ್ಸಿನ ಒಂದು ಬಣ ನಂಬಿದೆ. ಆದರೆ, ಅದು ಅಷ್ಟು ಸುಲಭವೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಏಕೆಂದರೆ, ಕೇಂದ್ರದಲ್ಲಿರುವ ಆಕ್ರಮಣಕಾರಿ ಮೋದಿ-ಶಾ ಜೋಡಿಯ ಸರ್ಕಾರ, ಡಿ.ಕೆ ಶಿವಕುಮಾರ್ ಅವರನ್ನು ನಿಶ್ಚಿಂತೆಯಿಂದ ಆಡಳಿತ ನಡೆಸಲು ಬಿಡುತ್ತಾರೆಯೇ? ಮುಂದಿನ 2028ರ ಚುನಾವಣೆ ಮೇಲೆ ಕಣ್ಣಿಟ್ಟ ಈ ಜೋಡಿ, ಡಿ.ಕೆ. ಶಿವಕುಮಾರ್ ಅವರನ್ನು ತಮ್ಮ ಅಧಿಕಾರ ಬಳಸಿ ಇಕ್ಕಳಕ್ಕೆ ಸಿಲುಕಿಸುವುದಿಲ್ಲವೇ? ಕೇಂದ್ರದ ತನಿಖಾ ಸಂಸ್ಥೆಗಳು ಮತ್ತು ಗೋದಿ ಮೀಡಿಯಾ ಬಳಸಿಕೊಂಡು ಕಾಂಗ್ರೆಸ್ ಸರ್ಕಾರಕ್ಕೆ ಕೆಟ್ಟ ಹೆಸರು ಛಾಪಿಸಲು ಷಡ್ಯಂತ್ರ ರೂಪಿಸುವುದಿಲ್ಲವೇ ಎಂಬ ಚರ್ಚೆಗಳೂ ನಡೆಯುತ್ತಿವೆ.
ಇದೆಲ್ಲಕ್ಕಿಂತ ಮುಖ್ಯವಾಗಿ, ಡಿ ಕೆ ಶಿವಕುಮಾರ್ ಒಕ್ಕಲಿಗ ಸಮುದಾಯವರು. ಈ ಸಮುದಾಯದ ಪ್ರಬಲ ನಾಯಕನೂ ಕೂಡ. ಕರ್ನಾಟಕದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳಲು, ಇದೇ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ. ಜೆಡಿಎಸ್‌ಅನ್ನು ಮುಂದಿಟ್ಟುಕೊಂಡು ಒಕ್ಕಲಿಗ ಮತಗಳಿಗೆ ದಾಳ ಹಾಕುತ್ತಿದೆ. ಒಂದು ವೇಳೆ, ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಒಳ್ಳೆಯ ಆಡಳಿತ ನೀಡಿದರೆ, ಇಡೀ ಸಮುದಾಯ ಶಿವಕುಮಾರ್ ಬೆನ್ನಿಗೆ ನಿಲ್ಲುತ್ತದೆ. ಅಲ್ಲಿಗೆ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ತಂತ್ರ ವಿಫಲವಾಗುತ್ತದೆ.
ಹೇಳಿಕೇಳಿ, ಡಿ.ಕೆ ಶಿವಕುಮಾರ್ ಅವರು ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ, ಅಕ್ರಮ ಹಣ ವರ್ಗಾವಣೆ ಪ್ರಕರಣ, ಆದಾಯ ತೆರಿಗೆ (IT) ವಂಚನೆ ಪ್ರಕರಣಗಳು ಸೇರಿದಂತೆ ಪ್ರಮುಖ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಈಗಾಗಲೇ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಅವರನ್ನು ಬಂಧಿಸಿ ದೆಹಲಿಯ ತಿಹಾರ್ ಜೈಲಿಗೆ ದೂಡಿತ್ತು. ಪ್ರಸ್ತುತ, ಈ ಪ್ರಕರಣ ರದ್ದಾಗಿದ್ದರೂ, ಅಪರಾಧ ಸಂಚು (IPC ಸೆಕ್ಷನ್ 120B) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮತ್ತೊಂದು ಇಸಿಐಆರ್ ಸಿದ್ದಪಡಿಸಿ, ತನಿಖೆ ನಡೆಸುತ್ತಲೇ ಇದೆ.
ಈ ಲೇಖನ ಓದಿದ್ದೀರಾ?: ಬಿಡದಿ ಟೌನ್‌ಶಿಪ್: ‘ಲ್ಯಾಂಡ್ ಮಾಫಿಯಾ’ಕ್ಕೆ ಬಗ್ಗದ ರೈತರು
ಈ ಪ್ರಕರಣಗಳನ್ನು ಮುಂದಿಟ್ಟುಕೊಂಡು ಮೋದಿ ಸರ್ಕಾರವು ಕೇಂದ್ರ ತನಿಖಾ ಸಂಸ್ಥೆಗಳನ್ನು ಡಿ ಕೆ ಶಿವಕುಮಾರ್ ವಿರುದ್ಧ ನಿರಂತರವಾಗಿ ಛೂಬಿಡಬಹುದಾದ ಸಾಧ್ಯತೆಗಳು ಹೆಚ್ಚಿವೆ. ಹಾಗೆ ನೋಡಿದರೆ, ಯಾವುದೇ ಸಾಕ್ಷ್ಯಗಳೇ ಇಲ್ಲದ ಪ್ರಕರಣದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಮೋದಿ-ಶಾ ಜೋಡಿ ಮೂಲೆಗುಂಪು ಮಾಡಿತು. ಬಂಗಾಳದ ಮಮತಾ ಬ್ಯಾನರ್ಜಿ, ತಮಿಳುನಾಡಿನ ಎಂ.ಕೆ ಸ್ಟಾಲಿನ್ ಅವರು ಅಧಿಕಾರ ಕಳೆದುಕೊಳ್ಳುವುದು ಮಾತ್ರವಲ್ಲ, ಶಾಸಕತ್ವವನ್ನೂ ಕಳೆದುಕೊಳ್ಳುವಂತೆ ಮಾಡಿತು. ಹೀಗಿರುವಾಗ, ಪ್ರಮುಖ ಪ್ರಕರಣಗಳನ್ನು ಎದುರಿಸುತ್ತಿರುವ ಡಿ ಕೆ ಶಿವಕುಮಾರ್ ಅವರು ಸುಲಭವಾಗಿ ಆಡಳಿತ ನಡೆಸಲು ಈ ಮೋದಿ-ಶಾ ಜೋಡಿ ಬಿಡುತ್ತದೆಯೇ?
ಇದು ಕಾಂಗ್ರೆಸ್ಸಿಗರಿಗೂ ಗೊತ್ತಿದೆ. ಆದರೆ, ಡಿ ಕೆ ಶಿವಕುಮಾರ್‌ಗೆ ಅಧಿಕಾರ ಕೊಡುವುದು ಕಾಂಗ್ರೆಸ್ ಹೈಕಮಾಂಡ್‌ಗೆ ಅನಿವಾರ್ಯವೂ ಆಗಿದೆ.
ಸಿಎಂ ರೇಸ್‌ನಲ್ಲಿ ಡಿಕೆಶಿಯಲ್ಲದೆ ಬೇರೆ ನಾಯಕರಿಲ್ಲವೇಕೆ?
ಸದ್ಯದ ಪರಿಸ್ಥಿತಿಯಲ್ಲಿ, ಕಳೆದ ಹಲವು ತಿಂಗಳುಗಳಿಂದ ಮುಖ್ಯಮಂತ್ರಿ ರೇಸ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರ ಹೆಸರೊಂದೇ ಪ್ರಬಲವಾಗಿ ಕೇಳಿಬರುತ್ತಿತ್ತು. ದಲಿತ ಮುಖ್ಯಮಂತ್ರಿ ಕೂಗು ಸಮುದಾಯದಲ್ಲಿದ್ದರೂ, ಪಕ್ಷದೊಳಗೆ ಈ ಕೂಗು ಪ್ರಬಲವಾಗಿರಲಿಲ್ಲ. ಪಕ್ಷದ ಒಳಗಿರುವ ಇತರ ಹಿರಿಯ ಅಥವಾ ಸಮರ್ಥ ನಾಯಕರು ಈ ರೇಸ್‌ನಲ್ಲಿ ಮುಂಚೂಣಿಗೆ ಬಂದಿಲ್ಲ.
ಕಾಂಗ್ರೆಸ್‌ನಲ್ಲಿ ಎಂ.ಬಿ. ಪಾಟೀಲ್, ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ ಹಾಗೂ ರಾಮಲಿಂಗಾರೆಡ್ಡಿ ಅವರಂತಹ ಹಿರಿಯ ಮತ್ತು ಅನುಭವಿ ನಾಯಕರಿದ್ದಾರೆ. ಆದರೆ, ಅವರಲ್ಲಿ ಯಾರೊಬ್ಬರೂ ಮಾಸ್ ಲೀಡರ್ ಗಳಲ್ಲ. ತಮ್ಮ ಜಾತಿಯನ್ನು ಮೀರಿ ಪ್ರಭಾವಿಸುವಷ್ಟು ನಾಯಕರಲ್ಲ.
ಲಿಂಗಾಯತ ಸಮುದಾಯದಲ್ಲಿ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ, ಎಚ್.ಕೆ. ಪಾಟೀಲ್ ಅವರಂತಹ ನಾಯಕರಿದ್ದರೂ, ಸಮುದಾಯದ ಬೆಂಬಲವನ್ನು ಸಂಪೂರ್ಣವಾಗಿ ಕಾಂಗ್ರೆಸ್ ಕಡೆಗೆ ತಿರುಗಿಸುವಷ್ಟು ಪ್ರಭಾವಿಗಳಲ್ಲ. ಜೊತೆಗೆ, ಉತ್ತರ ಕರ್ನಾಟಕದ ನಾಯಕರ ನಡುವೆಯೇ ಆಂತರಿಕ ಪೈಪೋಟಿ ಇದೆ.
ಇನ್ನು ದಲಿತ ನಾಯಕತ್ವದಲ್ಲಿ ಕೆ.ಎಚ್. ಮುನಿಯಪ್ಪ, ಜಿ. ಪರಮೇಶ್ವರ್ ಅವರು ಅತ್ಯಂತ ಹಿರಿಯ ನಾಯಕರಾಗಿದ್ದಾರೆ. ಆದರೆ, ಅವರ ಪ್ರಾಬಲ್ಯ ಮತ್ತು ಪ್ರಭಾವ ಕೋಲಾರ ಮತ್ತು ತುಮಕೂರಿಗಷ್ಟೇ ಸೀಮಿತವಾಗಿದೆ. ಜೊತೆಗೆ, ಒಳಮೀಸಲಾತಿ ವಿಚಾರದಲ್ಲಿ ಅವರ ಮೌನ ಮತ್ತು ನಿಲುವು ದಲಿತ ಸಮುದಾಯದಲ್ಲಿ ಅಸಮಾಧಾನವನ್ನೂ ಹುಟ್ಟುಹಾಕಿದೆ. ಆದ್ದರಿಂದ, ಅವರ ಹೆಸರು ಪದೇ-ಪದೇ ಹಿಂದೆ ಸರಿಯುತ್ತಲೇ ಇದೆ.



