ಪುರ್ಲಮುತ್ತಯ್ಯ -ಭೂಮಿಗೆ ಇಳಿದ ಬೇರು

Date:

Advertisements

ನೇಗಿಲು ಹೊತ್ತ ರೈತನ ಚಿಹ್ನೆಯಡಿ ಕುರಿ ಕಾಯುವ ಪುರ್ಲಮುತ್ತಯ್ಯ ಅಭೂತಪೂರ್ವವಾಗಿಯೇ ಗೆದ್ದುಬಿಟ್ಟರು. ಆ ಊರಿನ ಜನರಿಗೆ ಹೆಗಡೆ ಯಾರೆಂದು ಗೊತ್ತಿರಲಿಲ್ಲ̤ ಇಂದಿರಾ ಕಾಂಗ್ರೆಸ್ಸಿನ ಕೆಂಪು ಜ್ವಾಳ ಕೊಟ್ಟ ಇಂದ್ರವ್ವನನ್ನು ಮತ್ತು ಭೂಮಿ ಕೊಟ್ಟು ಸ್ವಾಭಿಮಾನದ ಬದುಕನ್ನು ಬದುಕುವಂತೆ ಮಾಡಿದ ದೇವರಾಜ್ ಅರಸರನ್ನು ಬಿಟ್ಟರೆ ಬೇರಾರೂ ಗೊತ್ತಿರಲಿಲ್ಲ.

ಪುರ್ಲಮುತ್ತಯ್ಯ! ಹೆಸರು ಮರೆಯಾಗಿ ಹೋಗಿರಬಹುದು. ಆದರೆ ನಿರಕ್ಷರಕುಕ್ಷಿಯಾದ ಮೂರು ಸಾವಿರಕ್ಕೂ ಹೆಚ್ಚು ಕುರಿಗಳನ್ನು ಸಾಕುತ್ತಿದ್ದ ಪೂರ್ಣ ಮುತ್ತಯ್ಯ ಒಬ್ಬ ಗಟ್ಟಿ ಮನುಷ್ಯ̤ ಜನರ ಬಾಯಲ್ಲಿ ಪುರ್ಲಣ್ಣ, ಪುರ್ಲಮುತ್ತಣ್ಣ, ಪುರ್ಲಮುತ್ತಯ್ಯನಾಗಿ ಜನಪ್ರಿಯವಾಗಿದ್ದು ಇತಿಹಾಸ. ಕಷ್ಟ ಎಂದು ಬಂದವರಿಗೆ ಸಹಾಯ ಮಾಡುವ ಉದಾರಿ ಮನುಷ್ಯನಾಗಿದ್ದ ಈತ ಹಿಂದುಳಿದ ಗಿರಿಜನ ವರ್ಗಕ್ಕೆ ಸೇರಿದವನಾಗಿದ್ದ. ಈತನೆಂದೂ ಅಧಿಕಾರಕ್ಕೆ ಹಪಹಪಿಸಿದವನಲ್ಲ. ಈತನ ಗುಣಗಳನ್ನು ಗುರುತಿಸಿ ರಾಜಕಾರಣಕ್ಕೆ ತಂದಿದ್ದು ಜನತಾ ಪಕ್ಷದ ರಾಮಕೃಷ್ಣ ಹೆಗಡೆ. 1985ರಲ್ಲಿ ಜನತಾ ಪಕ್ಷದಿಂದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಿಂದ ಪುರ್ಲಮುತ್ತಯ್ಯರನ್ನು ಸ್ಪರ್ಧಿಸುವಂತೆ ಹೇಳಿದ್ದು ಮತ್ತು ಗೆದ್ದಿದ್ದು ಈಗ ಇತಿಹಾಸ. ಈ ಗೆಲುವು ಕರ್ನಾಟಕ ಪ್ರಜಾಪ್ರಭುತ್ವದ ಸೌಂದರ್ಯವನ್ನೇ ಹೆಚ್ಚಿಸಿದ್ದು ಸುಳ್ಳಲ್ಲ.

ಸಾಮಾನ್ಯ ಜನರಿಗೆ ಸಹಜವಾಗಿ ಮತ್ತು ಸುಲಭವಾಗಿ ಸಿಗಬಲ್ಲವನಾಗಿದ್ದ ಈತ ಅಧಿಕಾರದ ಮದವನ್ನು ಎಂದಿಗೂ ತಲೆಗೇರಿಸಿಕೊಳ್ಳಲಿಲ್ಲ. ಜನ ಸಾಮಾನ್ಯರ ದೃಷ್ಟಿಯಲ್ಲಿ “ಮಾವ್ವಾಡು”(ನಮ್ಮೋನು)ಎಂಬಂತಹ ಅಭಿಮಾನವನ್ನು ಹುಟ್ಟಿಸಿದ ರೀತಿಯಲ್ಲಿಯೇ ಈತನ ಕುರಿತು ತರಹೇವಾರಿ ಜೋಕುಗಳು ಸಹ ಚಾಲ್ತಿಯಲ್ಲಿದ್ದವು. ಪುರ್ಲಮುತ್ತಯ್ಯ ಎಲ್ಲಾ ರೈತರಂತೆ ಈತನು ಕೂಡ ಭೂಮಿಗೆ ಅಂಟಿಕೊಂಡಿದ್ದ. ಜೊತೆಗೆ ಕುರಿ ಸಾಕುವುದರಲ್ಲಿ ಪರಿಣಿತನಾಗಿ ಅದ್ಹೇಗೋ ಏನೋ ಮೂರೂವರೆ ಸಾವಿರ ಕುರಿಗಳನ್ನು ಸಾಕಿಕೊಂಡಿದ್ದ. ಆ ಕುರಿಗಳೋ ಈತನ ಮಾತನ್ನು ಪಾಲಿಸುವ ವಿಧೇಯ ವಿದ್ಯಾರ್ಥಿಗಳಂತೆ ಇರುತ್ತಿದ್ದವು.

Advertisements

ಅದೊಂದು ದಿನ, ಜನತಾ ಪಾರ್ಟಿಯ ರಾಮಕೃಷ್ಣ ಹೆಗಡೆಯವರಿಂದ ಮೊಳಕಾಲ್ಮೂರಿನ ಕುಮಾರಸ್ವಾಮಿ ಎಂಬುವರಿಗೆ ದೂರವಾಣಿ ಕರೆಯೊಂದು ಬಂದಿತು. ಆ ಕರೆಯಲ್ಲಿ, ಆ ಊರಿನ ಮೇಲ್ವರ್ಗಕ್ಕೆ ಸೇರಿದ ಕುಮಾರಸ್ವಾಮಿಯವರನ್ನು ಜನತಾ ಪಕ್ಷದ ಮೊಳಕಾಲ್ಮೂರು ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರಂತೆ. ಅದಕ್ಕೆ ಕುಮಾರಸ್ವಾಮಿ, “ಅಯ್ಯೋ ಸಾರ್… ಇಲ್ಲಿ, ನಾಯಕರು ಮತ್ತು ಮಾದಿಗ ಜನಾಂಗದವರೇ ಬಹುಸಂಖ್ಯಾತರು. ಅವರಿಗೆ ಟಿಕೇಟು ಕೊಟ್ಟು ಗೆಲ್ಲಿಸೋದು ನ್ಯಾಯ. ನನಿಗೆ ಬೇಡ, ಇಲ್ಲಿ ನಮ್ಮೂರಿನವನೇ ಪುರ್ಲ ಮುತ್ತಯ್ಯ ಅಂತಾ ಇದಾನೆ, ಅವನಿಗೆ ಕೊಡಬಹುದು “ಎಂದರಂತೆ.

ಮೌಲ್ಯಾಧಾರಿತ ಮತ್ತು ಪ್ರಯೋಗಶೀಲ ರಾಜಕಾರಣದಿಂದ ಅಷ್ಟೊತ್ತಿಗಾಗಲೇ ನೀರ್ ಸಾಬ್ ನಜೀರ್ ಸಾಬ್, ಎಂ ಪಿ ಪ್ರಕಾಶ್, ಕ್ರಿಯಾಶೀಲ ಜೆ ಎಚ್ ಪಟೇಲರು, ಸ್ಟೋರ್ ಕೀಪರ್ ಆಗಿದ್ದ ಗೋವಿಂದ ಕಾರಜೋಳ, ಜಿಗಜಿಣಗಿ ಮುಂತಾದವರನ್ನು ರಾಜಕಾರಣದ ಮುಖ್ಯವಾಹಿನಿಗೆ ತಂದಿದ್ದ ಹೆಗಡೆಯವರಿಗೆ, ಈ ಬಾಯಿ ತುಂಬಾ ಎಲೆ ಅಡಿಕೆ ಹಾಕಿಕೊಂಡು ಕುರಿ ಮೇಯಿಸುತ್ತಿದ್ದ ಪುರ್ಲಮುತ್ತಯ್ಯ ಕೂಡ ಕುತೂಹಲಿಯಂತೆ ಕಂಡುಬಂದರು. ಟಿಕೇಟು ಸಿಕ್ಕು, ನೇಗಿಲು ಹೊತ್ತ ರೈತನ ಚಿಹ್ನೆಯಡಿ ಕುರಿ ಕಾಯುವ ಪುರ್ಲಮುತ್ತಯ್ಯ ಅಭೂತಪೂರ್ವವಾಗಿಯೇ ಗೆದ್ದುಬಿಟ್ಟರು. ಆ ಊರಿನ ಜನರಿಗೆ ಹೆಗಡೆ ಯಾರೆಂದು ಗೊತ್ತಿರಲಿಲ್ಲ̤ ಇಂದಿರಾ ಕಾಂಗ್ರೆಸ್ಸಿನ ಕೆಂಪು ಜ್ವಾಳ ಕೊಟ್ಟ ಇಂದ್ರವ್ವನನ್ನು ಮತ್ತು ಭೂಮಿ ಕೊಟ್ಟು ಸ್ವಾಭಿಮಾನದ ಬದುಕನ್ನು ಬದುಕುವಂತೆ ಮಾಡಿದ ದೇವರಾಜ್ ಅರಸುರನ್ನು ಬಿಟ್ಟರೆ ಬೇರಾರೂ ಗೊತ್ತಿರಲಿಲ್ಲ.

ಹೆಗಡೆ 1

ಪುರ್ಲಮುತ್ತಯ್ಯ ಎಂಬ ಕಣ್ಣೆದುರಿಗಿನ ಮನುಷ್ಯನನ್ನು ಗೆಲ್ಲಿಸಿದರು. ಇಂಥಾ ಪೂರ್ಣ ಮುತ್ತಯ್ಯ ಗೆದ್ದೆನೆಂದು ಬೀಗದೆ, ತನ್ನ ಕುರಿ ಕಾಯುವ ಕಾಯಕವನ್ನೂ ಬಿಡದೆ ಮುಂದುವರಿಸಿದರು. ತನ್ನೂರಿನ ಜನಗಳಿಗೆ ಅತ್ಯಗತ್ಯವಾಗಿದ್ದ ಕುಡಿಯುವ ನೀರಿಗೆ ಆದ್ಯತೆ ಕೊಟ್ಟರು. ಎಷ್ಟೋ ಹಳ್ಳಿಗಳಲ್ಲಿ ಶಾಲೆಗಳಿರಲಿಲ್ಲ. ಶಾಲೆಗಳೇಕಿಲ್ಲ ಎಂದು ಕೇಳಿದರೆ “ಅಯ್ಯೋ…ಇಲ್ಲಿರೋ ಜನಗಳೆಲ್ಲಾ ಹಿಂದುಳಿದೋರು, ಅವರಿಗೆ ಸಾಲೀ ಪಾಲೀ ಓದ್ಸೋಕ್ಗಲ್ಲ “ಎಂದು ಹೇಳುತ್ತಿದ್ದ ಕಾಲವದು. ಸುಡುಸುಡು ಬಡತನ ಬೇರೆ ಸುಡುತ್ತಿತ್ತು. ಎಷ್ಟೋ ಊರುಗಳು ಬರ ಪೀಡಿತದಿಂದ ನಲುಗುತ್ತಿದ್ದವು. ಇಂತಹ ಊರುಗಳಲ್ಲಿ ಮಕ್ಕಳನ್ನು ಶಾಲೆಗಳಿಗೆ ಸೇರಿಸುವುದು ಕನಸಿನ ಜನರ ಪಾಲಿಗೆ ಮಾತಾಗಿತ್ತು. ಇದನ್ನರಿತಿದ್ದ ನಿರಕ್ಷರಿ ಮುತ್ತಯ್ಯ, ಮೊದಲಿಗೆ ಓದುವ ಹುಡುಗರಿಗೆ ಹಾಸ್ಟೆಲ್ಲುಗಳ ಸ್ಥಾಪನೆಗೆ ಒತ್ತು ಕೊಟ್ಟರು. ಉಳಕೊಳ್ಳಾಕ, ಉಣ್ಣಾಕ ಕೂಳು, ನೀರು ಕೊಡುವ ಹಾಸ್ಟೆಲ್ಲುಗಳಿಂದಾಗಿ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಕೂಡ ತಂತಾನೆ ಏರುತ್ತಾ ಹೋಯಿತು. ಊರ ಕೆಲವು ಅಕ್ಷರಸ್ಥರಿಂದ ತೀವ್ರ ಅಸಡ್ಡೆ, ಅವಮಾನಗಳನ್ನು ಎದುರಿಸಿದರೂ ಎಲೆ ಅಡಿಕೆಯ ಜೊಲ್ಲು, ಅಂಗಿಯ ಮೇಲೆ ಸುರಿಸಿಕೊಂಡರೂ ಪುರ್ಲಮುತ್ತಯ್ಯ ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ.

ತನ್ನ ಅವಧಿ ಇದ್ದಾಗಲೂ, ಮುಗಿದಾಗಲೂ ಆತ ಸ್ಥಿತಪ್ರಜ್ಞನಂತೆ ಕುರಿ ಕಾಯುತ್ತಿದ್ದ. ಎಷ್ಟೋ ಸಾರಿ ವಸತಿ ಶಾಲೆಗಳಿಗೆ ಕೊಠಡಿ ಕಟ್ಟಿಸಲು ಸರ್ಕಾರಿ ಅನುದಾನದ ಕೊರತೆಯುಂಟಾದಾಗ ಒಂದಿಪ್ಪತ್ತು ಕುರಿಗಳನ್ನು ಹೊಡೆದುಕೊಂಡು ಹೋಗಿ ಮಾರಿ ಬಂದ ಹಣದಲ್ಲಿ ಶಾಲಾ ಕೊಠಡಿಗಳನ್ನು ಕಟ್ಟಿರಿ ಎನ್ನುತ್ತಿದ್ದ.

ಪುರ್ಲ ಮುತ್ತಯ್ಯ

ಮೊನ್ನೆ ದಿನ ಶಾಸಕರೊಬ್ಬರು ತಮ್ಮ ಕ್ಷೇತ್ರದ ಮನೆಯಿಲ್ಲದ ಬಡ ಜನರಿಗೆ ಮನೆಗಳನ್ನು ಮಂಜೂರು ಮಾಡಿಸಿಕೊಳ್ಳಲು ವಿಫಲರಾದದ್ದು ಮತ್ತು ವಸತಿ ಇಲಾಖೆಯಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರದ ಕುರಿತ ಆಡಿಯೋ ವೈರಲ್ ಆಯಿತು. ಇದಕ್ಕೂ ಹಿಂದಿನ ಸರ್ಕಾರಗಳ ಚುನಾಯಿತ ಶಾಸಕ, ಸಚಿವರುಗಳು ಅಧಿಕಾರಕ್ಕಾಗಿ ಅನೈತಿಕ ರಾಜಕಾರಣದ ಆತ್ಯಂತಿಕ ಸ್ಥಿತಿಯಾಗಿ ಬಾಂಬೆಗೆ ಓಡಿ ಹೋಗಿದ್ದು, ರೆಸಾರ್ಟಿನ ರಾಜಕಾರಣ ನಡೆದಿದ್ದು ಯಾವುದೂ ರಹಸ್ಯವೇನಲ್ಲ. ತೀರಾ ಇತ್ತೀಚೆಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಶೈಕ್ಷಣಿಕ ಮತ್ತು ಉದ್ಯೋಗ ಅವಕಾಶಗಳಿಗಾಗಿ 371ಜೆ ವಿಶೇಷ ಸ್ಥಾನಮಾನವನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ. ಆದರೆ ಈ ಕಾಯಿದೆಯನ್ನು ಅನುಷ್ಟಾನಗೊಳಿಸುವಾಗಲೂ ಹಲವಾರು ತೊಡಕುಗಳು ಕಾಣಿಸಿಕೊಳ್ಳುತ್ತಲೆ ಇವೆ.

ಇವುಗಳ ಕುರಿತು ಗಮನಸೆಳೆದ ಈ ಭಾಗದ ಹಿರಿಯ ಶಾಸಕರೊಬ್ಬರಿಗೆ, “ರೀ… ಎಮ್ಮೆಲ್ಲೆ ಸಾಹೇಬ್ರೆ, ನಿಮ್ಮ ಕ್ಷೇತ್ರಕ್ಕೆ ಅನುದಾನ ಬೇಕಾ? ತಗೊಂಡೋಗ್ರಿ, ಅದನ್ನು ಬಿಟ್ಟು ಈ ಕೆಲಸಕ್ಕೆ ಬಾರದ 371ಜೆ ಅದೂ- ಇದೂ ಅಂತ ತಲೆನೋವು ನನಿಗೆ ಹಚ್ಚಾಕ ಬರಬೇಡಿ ನೀವು” ಹೀಗೆ ಹೇಳಿದ ಮಹಾನುಭಾವ ಸಚಿವರೂ ಸಹ ಹೈದ್ರಾಬಾದ್ ಕರ್ನಾಟಕ ಪ್ರದೇಶದಿಂದ ಬಂದವರೇ ಆಗಿದ್ದರೆಂಬುದು ವಿಪರ್ಯಾಸ.

ಇಂಥಾ ಹೊತ್ತಿನಲ್ಲಿ ತಮ್ಮ ಕ್ಷೇತ್ರವನ್ನು ತಾಯಿಯಂತೆ ಕಂಡ, ಅಲ್ಲಿನ ಜನರನ್ನು ಮಕ್ಕಳಂತೆ ಪೊರೆದ ಪೂರ್ಣ ಮುತ್ತಪ್ಪ ಜನರ ಹೃದಯದಲ್ಲಿ ಪುರ್ಲಮುತ್ತಯ್ಯನಾಗೇ ಇರುವ ಅಪ್ಪಟ ಜೀವಪರ ಮನುಷ್ಯ ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತಾರೆ.

ನೈತಿಕ ಅಧಃಪತನದ ಕಡೆಗೆ ಸಾಗುತ್ತಿರುವ ಈ ಹೊತ್ತಿನ ರಾಜಕಾರಣದ ಬಗ್ಗೆ, ಸಮಾಜದ ಹಲವು ವಿಕೃತಿಗಳ ಬಗ್ಗೆ ಗಂಟೆಗಟ್ಟಲೆ ಹೆಚ್ಚು ಆತಂಕದಿಂದ ಚರ್ಚಿಸುವ ನಮಗೆ ಪುರ್ಲಮುತ್ತಯ್ಯರಂಥ ಭೂಮಿಗೆ ತಾಗಿದ ಬೇರು ಕಾಣಿಸುವುದೇ ಇಲ್ಲ.

ಈ ಕಾಲದ ರಾಜಕಾರಣದಲ್ಲಿ, ಎಲ್ಲರೂ ಡೆಲ್ಲಿಯ ಕಡೆಗೆ, ಡೆಲ್ಲಿಯ ಹೈಕಮಾಂಡುಗಳ ಅಣತಿಗೆ ಕಾಯುವುದರಿಂದ ಮತ್ತೊಬ್ಬ ಪುರ್ಲ ಮುತ್ತಯ್ಯನಿಗೆ ಈಗ ಟಿಕೇಟು ಸಿಗಲಾರದು. ಈ ರೀತಿ ಯೋಚಿಸಲಿಕ್ಕೂ ಆಗದು. ಮೊಳಕಾಲ್ಮೂರು, ದೂರದ ಡೆಲ್ಲಿಗೆ ಅರ್ಥವಾಗುವುದಿಲ್ಲ.

ಎಲ್ಲಿಯವರೆಗೆ ಮೊಳಕಾಲ್ಮೂರು ಮತ್ತಿಂಥದೇ ಊರುಗಳು ಅರ್ಥವಾಗುವುದಿಲ್ಲವೋ ಅಲ್ಲಿಗೆ ಭಾರತವೂ ಅರ್ಥವಾಗುವುದಿಲ್ಲ. ಇವತ್ತಿನ ರಾಜಕಾರಣ ಬಯಲಿಗೆ ಬರಬೇಕು. ಆದರೆ ಈ ಹೊತ್ತಿನ ದುರಂತವೆಂದರೆ, ರಾಜಕಾರಣದ ಎಲ್ಲಾ ಮಹತ್ತರ ನಿರ್ಧಾರಗಳು ಸಾಮಾನ್ಯ ಜನರ ಸನಿಹವೇ ಇರದ ಫೈವ್‌ಸ್ಟಾರ್ ಹೋಟೆಲುಗಳಲ್ಲಿ, ಇಲ್ಲವೇ ರೆಸಾರ್ಟುಗಳಲ್ಲಿ ನಿರ್ಧರಿತವಾಗುತ್ತವೆ.

ಈ ಹೊತ್ತಿನ ರಾಜಕಾರಣದ ನಿಶೆಗೆ ಸಿಕ್ಕ ಯುವಕರು ಪ್ರಭುತ್ವದ ನಿಷ್ಕ್ರಿಯತೆಯನ್ನು ಅರ್ಥಮಾಡಿಕೊಳ್ಳಲಾರರು. ಅದೂ ಹೋದರೆ ಹೋಗಲಿ, ಚುನಾವಣೆಯ ಸಂದರ್ಭಗಳಲ್ಲಿ ಗಣಿ ಧಣಿಗಳ ಅಪರಿಮಿತ ಹಣದ ಆಸೆ ಆಮಿಷಗಳಿಗೆ ಮಕ್ಕಳನ್ನು ಎಲೆಕ್ಷನ್ನಿನ ನಂತರ ದಾರಿಗೆ ತರೋದು ತಂದೆ ತಾಯಿಯರಿಗೆ ಕಷ್ಟ ಕಷ್ಟ. ಹೀಗಾಗಿ ಎಷ್ಟೋ ವೃದ್ಧರು ಅಸಹನೆಯಿಂದ “ಅವರಿಗೆ ಹೇಳಿ, ನಾವು ಈಗ ಇರುವಂತೆ ಹೇಗೋ ಬದುಕುತ್ತೇವೆ. ನಿಮ್ಮ ಸಹವಾಸವೇ ಬೇಡ”ಎಂದು ಕೂಗುತ್ತಿರುವಂತೆ ಭಾಸವಾಗುತ್ತದೆ.

ಇದನ್ನೂ ಓದಿ ಹೇಮಾ ಕಮಿಟಿ ವರದಿಯಲ್ಲಿದ್ದ ಎಲ್ಲ 35 ಪ್ರಕರಣ ಕೈಬಿಟ್ಟ ಕೇರಳ ಸರ್ಕಾರ; ಮರೀಚಿಕೆಯಾದ ನ್ಯಾಯ

ಮೊಳಕಾಲ್ಮೂರುಗಳಂತಹ ಅನೇಕ ಊರುಗಳು ದೆಹಲಿಯ ದರಬಾರಿಗೆ, ಬೆಂಗಳೂರಿಗರಿಗೆ ಅರ್ಥವಾಗುವುದೇ ಇಲ್ಲ.ಅವರಿಗೆ ಅರ್ಥವಾಗಬೇಕಾದರೆ ಒಂದೋ ದುರಂತಗಳು ಸಂಭವಿಸಬೇಕು ಇಲ್ಲವೇ ಚಳವಳಿಗಳು ಸಂಭವಿಸಬೇಕು. ಹಸಿವಿನ ಹೋರಾಟದಲ್ಲಿರುವ ಜನತೆಗೆ ಸದ್ಯಕ್ಕಂತೂ ಎರಡನೆಯ ಆಪ್ಷನ್ ಗಳಿಲ್ಲ. ವಿವೇಕವೆನ್ನುವುದು ಮುದಿವಯಸ್ಸಿನ ಹಾಗೆ ಬಂದೇ ಬರುವುದು ಎನ್ನುವ ದೂರದ ಆಸೆಯಂತೂ ಇದ್ದೇ ಇದೆ. ಅಂತಹ ದಿನಗಳು ಬರಲಿ ಎಂಬ ಆಶಯ ನನ್ನದು.

IMG 20250630 195411
ಬಿ ಶ್ರೀನಿವಾಸ
+ posts

ಸಾಹಿತಿಗಳು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಿ ಶ್ರೀನಿವಾಸ
ಬಿ ಶ್ರೀನಿವಾಸ
ಸಾಹಿತಿಗಳು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X