ಜಿಲ್ಲಾ ಉಸ್ತುವಾರಿ ಸಚಿವರು ಮಳೆಯಿಂದ ಉಂಟಾದ ಅವಾಂತರವನ್ನು ಪರಿಹರಿಸಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಸ್ಥಳೀಯ ಆಡಳಿತದೊಂದಿಗೆ ಸಮನ್ವಯದ ಕೊರತೆ, ತಕ್ಷಣದ ಪರಿಹಾರ ಕಾರ್ಯಗಳಲ್ಲಿ ನಿರಾಸಕ್ತಿ, ಕೃಷಿಕರಿಗೆ ನೆರವಿನ ಕೊರತೆ, ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡದಿರುವುದು, ಸಮುದಾಯ ಸಂವಾದದ ಕೊರತೆ, ಶಾಶ್ವತ ಪರಿಹಾರಕ್ಕೆ ಯೋಜನೆಗಳನ್ನು ರೂಪಿಸದಿರುವ ಕಾರಣ ಸಮಸ್ಯೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ. ಸಚಿವರುಗಳ ಬೇಜವಾಬ್ಧಾರಿತನದಿಂದ ಸಾರ್ವಜನಿಕರಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಹದಿನಾರು ವರ್ಷಗಳ ನಂತರ ರಾಜ್ಯಕ್ಕೆ ಈ ವರ್ಷ ಒಂದು ವಾರದ ಮೊದಲೇ ಮುಂಗಾರು ಆಗಮಿಸಿದ್ದು, ಭಾರೀ ಮಳೆಯಿಂದಾಗಿ ಉಂಟಾದ ಅವಾಂತರವು ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ. ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಬೆಂಗಳೂರಿನಂತಹ ಪ್ರದೇಶಗಳಲ್ಲಿ ಪ್ರವಾಹ, ಭೂಕುಸಿತ, ಸಂಚಾರದ ವ್ಯತ್ಯಯ, ಬೆಳೆ ನಾಶ ಮತ್ತು ಮೂಲಸೌಕರ್ಯಗಳಿಗೆ ಗಂಭೀರ ಹಾನಿಯಾಗಿದೆ. ಈ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಬಹುತೇಕ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗಳಲ್ಲಿರುವುದಿಲ್ಲ. ಅವರ ಕಾರ್ಯವೈಖರಿಯ ಬಗ್ಗೆ ಜನರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಮಳೆಯಿಂದಾದ ಅನಾಹುತವನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಗೆ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ನೆರೆ ಪರಿಹಾರ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡುವಂತೆ ಸೂಚಿಸಿದ್ದಾರೆ. ಈ ಪ್ರವಾಹ ಪರಿಸ್ಥಿತಿಯಲ್ಲಿ ಮೂರ್ನಾಲ್ಕು ಜಿಲ್ಲೆಯ ಉಸ್ತುವಾರಿ ಸಚಿವರು ಮಾತ್ರ ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಬೆಂಗಳೂರಿಗೆ ಆದ ಮಳೆ ಅನಾಹುತಕ್ಕೆ ಸ್ವತಃ ಮುಖ್ಯಮಂತ್ರಿ ಹಾಗೂ ಇಲ್ಲಿನ ಉಸ್ತುವಾರಿ ಸಚಿವರಾದ ಡಿಸಿಎಂ ಡಿ ಕೆ ಶಿವಕುಮಾರ್ ಅವರು ನಗರ ಪ್ರದಕ್ಷಿಣೆ ಮಾಡಿ ಮಳೆಯಿಂದ ಕಷ್ಟಕ್ಕೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುತ್ತಿದ್ದಾರೆ.
ಹಾಗೆಯೇ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಳೆಯ ಪರಿಣಾಮವಾಗಿ ನಂಜನಗೂಡು ತಾಲ್ಲೂಕಿನಲ್ಲಿ ಜಾನುವಾರು, ಕೋಳಿ,ಕುರಿ ಮುಂತಾದವುಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರ ಸೇರಿದಂತೆ ಪರಿಹಾರ ನೆರವು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಧಾರವಾಡ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಸಚಿವ ಸಂತೋಷ್ ಲಾಡ್ ಅವರು ತಮ್ಮ ಉಸ್ತುವಾರಿ ಜಿಲ್ಲೆಗೆ ಭೇಟಿ ನೀಡಿ ಬೆಣ್ಣಿಹಳ್ಳಾ ಮತ್ತು ತುಪ್ಪರಿಹಳ್ಳಾ ನದಿಗಳ ಪ್ರವಾಹ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು 200 ಕೋಟಿ ರೂ. ಹಣವನ್ನು ತುರ್ತಾಗಿ ಬಿಡುಗಡೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು, ಮಳೆಯ ಪರಿಣಾಮ ಉಂಟಾಗುವ ಯಾವುದೇ ಅನಾಹುತಗಳಿಗೆ ಅವರು ನೇರವಾಗಿ ಹೊಣೆಗಾರರಾಗಬೇಕೆಂದು ತಿಳಿಸಿದ್ದಾರೆ. ಇವರನ್ನು ಹೊರತುಪಡಿಸಿದರೆ ಉಳಿದ ಯಾವ ಸಚಿವರು ತಮಗೆ ನೀಡಿದ ಜಿಲ್ಲೆಗಳ ಉಸ್ತುವಾರಿಯ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಸ್ವತಃ ಮುಖ್ಯಮಂತ್ರಿಗಳೆ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ಪರಿಸ್ಥಿತಿಯನ್ನು ಅವಲೋಕಿಸಿ, ಪರಿಹಾರ ಕಾರ್ಯಗಳನ್ನು ನಿರ್ವಹಿಸುವಂತೆ ಸೂಚನೆ ನೀಡಿದ್ದರೂ, ಬಹುತೇಕ ಸಚಿವರು ಈ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೆಲವು ಸಚಿವರು ತಮ್ಮ ಜಿಲ್ಲೆಗಳಿಗೆ ಭೇಟಿ ನೀಡದೆ, ಬೆಂಗಳೂರಿನಿಂದಲೇ ಸೂಚನೆಗಳನ್ನು ನೀಡುತ್ತಿದ್ದಾರೆ. ಇದರಿಂದ ಸ್ಥಳೀಯ ಆಡಳಿತಕ್ಕೆ ಸರಿಯಾದ ಮಾರ್ಗದರ್ಶನ ಸಿಗದೆ, ಪರಿಹಾರ ಕಾರ್ಯಗಳು ವಿಳಂಬವಾಗಿವೆ. ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ, ಜನರು ಆಶ್ರಯ ಕೇಂದ್ರಗಳಿಗೆ ತಲುಪಲು ಸಾಧ್ಯವಾಗದೆ, ರಸ್ತೆಗಳು ಮುಳುಗಡೆಯಾದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಸಂಬಂಧಿತ ಸಚಿವರು ಸ್ಥಳಕ್ಕೆ ಭೇಟಿ ನೀಡಿ, ಜನರ ಕಷ್ಟಕ್ಕೆ ಸ್ಪಂದಿಸುವ ಬದಲು, ಕೇವಲ ದೂರವಾಣಿಯ ಮೂಲಕ ಸೂಚನೆ ನೀಡಿದ್ದಾರೆ, ಇದರಿಂದ ಸ್ಥಳೀಯ ಜನರಲ್ಲಿ ಆಕ್ರೋಶ ಮೂಡಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸೆಣಸಾಟ ಸೇನೆಯದು, ಮೆರೆದಾಟ ಮೋದಿಯದು!
ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ರಸ್ತೆಗಳು, ಸೇತುವೆಗಳು ಮತ್ತು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಜನರ ದೈನಂದಿನ ಜೀವನಕ್ಕೆ ತೀವ್ರ ತೊಂದರೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವಲ್ಲಿ ಕೂಡ ಸಚಿವರು ವಿಫಲರಾಗಿದ್ದಾರೆ. ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಪ್ರದೇಶಗಳಲ್ಲಿ, ತಾತ್ಕಾಲಿಕ ವಿದ್ಯುತ್ ವ್ಯವಸ್ಥೆಯನ್ನು ಒದಗಿಸುವ ಬಗ್ಗೆ ಸಚಿವರು ಯಾವುದೇ ಆಸಕ್ತಿ ತೋರಿಲ್ಲ, ಇದರಿಂದ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಸಚಿವರ ಈ ನಿರಾಸಕ್ತಿಯಿಂದ ಜನರಿಗೆ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದೆ.
ಕೃಷಿ ಕ್ಷೇತ್ರಕ್ಕೆ ಉಂಟಾದ ಹಾನಿಯನ್ನು ಬಹುತೇಕ ಸಚಿವರು ಗಂಭೀರವಾಗಿ ಪರಿಗಣಿಸಿಲ್ಲ. ಕೊಪ್ಪಳ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಂತಹ ಜಿಲ್ಲೆಗಳಲ್ಲಿ ಸಾವಿರಾರು ಹೆಕ್ಟೇರ್‌ನಷ್ಟು ಬೆಳೆಗಳು ನಾಶವಾಗಿವೆ. ಆದರೆ, ಈ ಹಾನಿಯ ಮೌಲ್ಯಮಾಪನಕ್ಕೆ ಸಚಿವರು ಕೃಷಿ ಇಲಾಖೆಯೊಂದಿಗೆ ಸಮರ್ಪಕವಾಗಿ ಸಹಕರಿಸಿಲ್ಲ. ರೈತರಿಗೆ ತಕ್ಷಣದ ಪರಿಹಾರವಾಗಿ ಬೆಳೆ ವಿಮೆಯ ಪರಿಹಾರ ಅಥವಾ ಆರ್ಥಿಕ ನೆರವಿನ ಬಗ್ಗೆ ಯಾವುದೇ ಗಂಭೀರ ಚರ್ಚೆ ನಡೆದಿಲ್ಲ. ಕಾಫಿ, ಜೋಳ, ಭತ್ತ ಸೇರಿದಂತೆ ಹಲವು ಬೆಳೆಗಳು ವಿಪರೀತ ಮಳೆಯಿಂದಾಗಿ ಹಾಳಾಗಿದ್ದು ರೈತರಿಗೆ ಈ ಬಗ್ಗೆ ನೆರವು ನೀಡಲು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಸಚಿವರ ನಿರ್ಲಕ್ಷ್ಯದಿಂದ ಅನ್ನದಾತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದಂತೆ ಸಚಿವರ ಕಾರ್ಯವೈಖರಿಯು ಕೂಡ ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಭಾರೀ ಮಳೆಯಿಂದ ಭೂಕುಸಿತ ಉಂಟಾಗಿರುವ ಪ್ರದೇಶಗಳಲ್ಲಿ, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವು ಮಂದಗತಿಯಲ್ಲಿ ಸಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಕಾರು ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ಘಟನೆಯನ್ನು ಸಚಿವರು ಗಂಭೀರವಾಗಿ ಪರಿಗಣಿಸಿಲ್ಲ. ರಸ್ತೆ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಯಾವುದೇ ತಕ್ಷಣದ ಕ್ರಮ ಕೈಗೊಳ್ಳಲಿಲ್ಲ. ತುಮಕೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸ್ಪರ್ಶದಿಂದ ಸಂಭವಿಸಿದ ದುರಂತಗಳನ್ನು ತಡೆಗಟ್ಟಲು, ವಿದ್ಯುತ್ ಇಲಾಖೆಗೆ ಸುರಕ್ಷಿತ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡುವಲ್ಲಿ ಸಚಿವರು ವಿಫಲರಾಗಿದ್ದಾರೆ. ಈ ನಿರಾಸಕ್ತಿಯಿಂದ, ಜನರು ಜೀವಭಯದಲ್ಲಿ ಓಡಾಡುವ ಪರಿಸ್ಥಿತಿ ಉಂಟಾಗಿದೆ.
ಪ್ರತಿ ವರ್ಷವೂ ವರುಣ ಹಲವು ಜಿಲ್ಲೆಗಳಲ್ಲಿ ಕಾಟ ಕೊಡುತ್ತಲೇ ಇರುತ್ತದೆ. ಮಳೆಯಿಂದಾಗಿ ಉಂಟಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಉಸ್ತುವಾರಿ ಸಚಿವರಿಂದ ಯಾವುದೇ ಗಂಭೀರ ಪ್ರಯತ್ನ ಕಂಡುಬಂದಿಲ್ಲ. ಮಳೆಯಿಂದ ಉಂಟಾದ ಹಾನಿಯನ್ನು ತಗ್ಗಿಸಲು, ಭವಿಷ್ಯದಲ್ಲಿ ಇಂತಹ ವಿಪತ್ತುಗಳನ್ನು ಎದುರಿಸಲು ಮೂಲಸೌಕರ್ಯ ಸುಧಾರಣೆ, ಒಳಚರಂಡಿ ವ್ಯವಸ್ಥೆಯ ದುರಸ್ತಿ ಮತ್ತು ಮಳೆನೀರು ಸಂಗ್ರಹಣೆಯಂತಹ ಯೋಜನೆಗಳ ಬಗ್ಗೆ ಯಾವುದೇ ಚರ್ಚೆಗಳನ್ನು ಸಚಿವರು ಆರಂಭಿಸಿಲ್ಲ. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಆರಂಭಿಸಲಾದ ಮಳೆ ನೀರು ಸಂಗ್ರಹಣೆ ಯೋಜನೆಯಂತಹ ಕಾರ್ಯಕ್ರಮಗಳನ್ನು ವಿಸ್ತರಿಸಲು ಯಾವುದೇ ಉತ್ಸಾಹ ತೋರಿಲ್ಲ. ಇಂತಹ ಯೋಜನೆಗಳನ್ನು ಹಮ್ಮಿಕೊಳ್ಳುವುದರಿಂದ ಭವಿಷ್ಯದಲ್ಲಿ ಮಳೆಯ ವಿಪತ್ತುಗಳಿಂದ ರಕ್ಷಣೆ ಕಲ್ಪಿಸಿಕೊಳ್ಳಬಹುದಾಗಿದೆ.
ಮಂತ್ರಿಗಳು ಅಧಿಕಾರ ಸಿಕ್ಕ ನಂತರ ಯಾರಿಗೂ ಸಿಗುವುದಿಲ್ಲ. ಸಾಮಾನ್ಯ ಜನರ ಸಂಪರ್ಕಕ್ಕಿರಲಿ ಅಧಿಕಾರಿಗಳ ಸಂಪರ್ಕಕ್ಕೂ ಸಚಿವರು ಸಿಗುವುದಿಲ್ಲ. ಹಾಗೆಯೆ ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸುವಲ್ಲಿ ಕೂಡ ವಿಫಲರಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಜೊತೆಗೆ ಸಹಕರಿಸುವ ಬದಲು, ಸಚಿವರು ಕೇವಲ ಔಪಚಾರಿಕ ಸೂಚನೆಗಳನ್ನು ನೀಡುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಇದರಿಂದ, ತುರ್ತು ಪರಿಹಾರ ಕಾರ್ಯಗಳು ಸಮರ್ಪಕವಾಗಿ ನಡೆಯದೆ, ಜನರ ಕಷ್ಟಗಳು ಮತ್ತಷ್ಟು ಹೆಚ್ಚಾಗುತ್ತಿವೆ.
ಇವೆಲ್ಲವನ್ನು ಗಮನಿಸಿದರೆ ಕರ್ನಾಟಕದ ಜಿಲ್ಲಾ ಉಸ್ತುವಾರಿ ಸಚಿವರು ಮಳೆಯಿಂದ ಉಂಟಾದ ಅವಾಂತರವನ್ನು ಪರಿಹರಿಸಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಸ್ಥಳೀಯ ಆಡಳಿತದೊಂದಿಗೆ ಸಮನ್ವಯದ ಕೊರತೆ, ತಕ್ಷಣದ ಪರಿಹಾರ ಕಾರ್ಯಗಳಲ್ಲಿ ನಿರಾಸಕ್ತಿ, ಕೃಷಿಕರಿಗೆ ನೆರವಿನ ಕೊರತೆ, ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡದಿರುವುದು, ಸಮುದಾಯ ಸಂವಾದದ ಕೊರತೆ, ಶಾಶ್ವತ ಪರಿಹಾರಕ್ಕೆ ಯೋಜನೆಗಳನ್ನು ರೂಪಿಸದಿರುವ ಕಾರಣ ಸಮಸ್ಯೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ. ಸಚಿವರುಗಳ ಬೇಜವಾಬ್ಧಾರಿತನದಿಂದ ಸಾರ್ವಜನಿಕರಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈಗಷ್ಟೆ ಮುಂಗಾರು ಆರಂಭವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಮಳೆ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಆದ್ದರಿಂದ ಈಗಲೇ ಎಚ್ಚೆತ್ತುಕೊಂಡು ಸಾರ್ವಜನಿಕರ ಜೀವ ಹಾಗೂ ಬದುಕಿನ ಆಧಾರವನ್ನು ರಕ್ಷಿಸುವ ಕೆಲಸ ಮಾಡಬೇಕಿದೆ.