ಪ್ರಜ್ವಲ್ ರೇವಣ್ಣ ಪ್ರಕರಣ ದೇಶ ಕಂಡು ಕೇಳರಿಯದ ಘೋರ ಕೃತ್ಯ ಎಂದುಕೊಂಡರೆ ಅದೇ ಸಮಯದಲ್ಲಿ ಅದಕ್ಕಿಂತಲೂ ಭೀಕರವಾದ ಮತ್ತೊಂದು ಪ್ರಕರಣ ಅದೂ ಕರ್ನಾಟಕದಿಂದಲೇ ಬಂದಿತ್ತು. ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಎಚ್‌ಐವಿ ಸೋಂಕಿತ ಮಹಿಳೆಯರನ್ನು ಬಳಸಿಕೊಂಡು ತನ್ನ ವಿರೋಧಿಗಳನ್ನು ಹನಿಟ್ರ್ಯಾಪ್ ಮಾಡಿಸಿ ಅವರಿಗೆ ಏಡ್ಸ್ ರೋಗ ಹರಡಿಸುತ್ತಿದ್ದ ಎಂಬ ಬೆಚ್ಚಿ ಬೀಳಿಸುವ ಸುದ್ದಿ ಹೊರ ಬಿದ್ದಿತ್ತು.
ಸಂಸದನಾಗಿರುವಾಗಲೇ ಹತ್ತಾರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ಅದರ ವಿಡಿಯೋ ಮಾಡಿಟ್ಟು ವಿಕೃತ ಆನಂದಪಡುತ್ತಿದ್ದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಸರಿಯಾದ ಶಾಸ್ತಿ ಆಗಿದೆ. ಹದಿನಾಲ್ಕು ತಿಂಗಳಿನಿಂದ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಪ್ರಜ್ವಲ್ ಜಾಮೀನು ಪಡೆಯಲು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿದ್ದಲ್ಲದೇ, ಮನೆ ಕೆಲಸದ ಮಹಿಳೆ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ತೀರ್ಪು ಬಡವರಿಗೂ ನ್ಯಾಯ ಸಿಗುತ್ತದೆ ಎಂಬ ಭರವಸೆಯನ್ನು ಮೂಡಿಸಿದೆ.
ಇದೇ ಆಗಸ್ಟ್ 2ರಂದು ಜೀವನಪರ್ಯಂತ ಜೈಲು ಶಿಕ್ಷೆ ಹಾಗೂ 11 ಲಕ್ಷದ 60 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಹೊರಬಿದ್ದಿದೆ. ತೀರ್ಪು ಹೊರ ಬರುತ್ತಿದ್ದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಅಶೋಕ್ ನಾಯಕ್, “ಈ ಗೆಲುವು ಸಂಪೂರ್ಣವಾಗಿ ಸಂತ್ರಸ್ತೆಯ ಗೆಲುವು. ಆಕೆಯ ಮೇಲೆ ಅತ್ಯಾಚಾರ ನಡೆದು ನಾಲ್ಕು ವರ್ಷ ಕಳೆದಿದ್ರೂ ಬಟ್ಟೆಯನ್ನು ಜೋಪಾನವಾಗಿಟ್ಟು ತನಿಖೆಯ ಸಮಯದಲ್ಲಿ ಎಸ್‌ಐಟಿಗೆ ನೀಡಿದ್ದರು. ಅದನ್ನು ಫೊರೆನ್ಸಿಕ್ ಪರೀಕ್ಷೆಗೆ ಕಳಿಸಿದಾಗ ಅತ್ಯಾಚಾರ ನಡೆದಿರುವುದಕ್ಕೆ ಸಾಕ್ಷ್ಯ ಸಿಕ್ಕಿತ್ತು. ಅಷ್ಟೇ ಅಲ್ಲ ಮಹಿಳೆಯ ಕುಟುಂಬದವರು ಆಕೆಗೆ ನೀಡಿದ ಧೈರ್ಯ ಎಲ್ಲ ಹೆಣ್ಣುಮಕ್ಕಳಿಗೂ ಸಿಗಬೇಕು. ವಿಡಿಯೋ ನೋಡಿದಾಗ ಅದರಲ್ಲಿ ನಿನ್ನ ತಪ್ಪಿಲ್ಲ ಎಂಬುದು ಗೊತ್ತಾಗಿದೆ. ನೀನು ಧೈರ್ಯವಾಗಿರು ಎಂದು ಮನೆಯವರು ಧೈರ್ಯ ತುಂಬಿದ್ದಾರೆ. ಸಂತ್ರಸ್ತೆ ಕೋರ್ಟ್‌ನ ಕಟಕಟೆಯಲ್ಲಿ ನಿಂತು ಗಳಗಳನೇ ಅಳುತ್ತಾ ನಾಲ್ಕು ವರ್ಷಗಳಿಂದ ಹೊಟ್ಟೆಯಲ್ಲಿಟ್ಟುಕೊಂಡಿದ್ದ ಸಂಕಟವನ್ನು ಹೊರ ಹಾಕಿದ್ದರು” ಎಂದು ಆಕೆ ಹೇಳಿದ್ದನ್ನು ನೆನಪಿಸಿಕೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಅಂಗಾಂಗದ ತುಣುಕು, ಕೋಣೆ, ಧ್ವನಿ ಎಲ್ಲವೂ ಮ್ಯಾಚ್ ಆಗಿತ್ತು. ಈ ಪ್ರಕರಣದಲ್ಲಿ ಸಾಕ್ಷ್ಯ ಸಂಗ್ರಹ, ಚಾರ್ಜ್‌ಶೀಟ್ ಸಲ್ಲಿಕೆ, ವಿಚಾರಣೆ ಎಲ್ಲವೂ ತ್ವರಿತವಾಗಿ ನಡೆದಿದೆ. ಇದು ನ್ಯಾಯದಾನದ ಅಪರೂಪದ ಮಾದರಿ.
ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಬಿ ಎನ್ ಜಗದೀಶ್ ಅವರು, “ಜೀವಕ್ಕಿಂತ ಹೆಚ್ಚಿನ ಹಾನಿ ಸಂತ್ರಸ್ತ ಮಹಿಳೆಗಾಗಿದೆ. ಒಪ್ಪಿಗೆಯಿಲ್ಲದೇ ಲೈಂಗಿಕ ಕ್ರಿಯೆಯ ಚಿತ್ರೀಕರಣ ಮಾಡಲಾಗಿದೆ. ಆಕೆಯನ್ನು ಬ್ಲಾಕ್ ಮೇಲ್ ಮಾಡಿ ಮತ್ತೆ ಮತ್ತೆ ಅತ್ಯಾಚಾರ ಮಾಡಲಾಗಿದೆ. ವೃದ್ಧ ಮಹಿಳೆಯ ಮೇಲಿನ ಅತ್ಯಾಚಾರದ ರೀತಿಯು ಆತನ ವಿಕೃತ ಮನಃಸ್ಥಿತಿ ತೋರಿಸುತ್ತದೆ. ಪ್ರಜ್ವಲ್ ಸಂಸದನಾಗಿದ್ದೂ, ಕಾನೂನು ತಿಳಿದಿದ್ದೂ ಇಂತಹ ನೀಚ ಕೃತ್ಯ ಎಸಗಿದ್ದಾನೆ. ಇದು ಇನ್ನೂ ಗಂಭೀರವಾದ ಅಪರಾಧ. ಈತನ ಮೇಲೆ ಈ ರೀತಿಯ ಇನ್ನಷ್ಟು ಕೇಸ್ಗಳಿವೆ. ಬಹಳಷ್ಟು ಜನರ ಅಶ್ಲೀಲ ವಿಡಿಯೋ ಮಾಡಿದ್ದಾನೆ. ಗರಿಷ್ಠ ಶಿಕ್ಷೆ ವಿಧಿಸಿ, ಇತರರಿಗೆ ಅದು ಎಚ್ಚರಿಕೆಯಾಗುವಂತೆ ನೋಡಿಕೊಳ್ಳಬೇಕು. ಜೀವನಪರ್ಯಂತ ಸೆರೆವಾಸದ ಶಿಕ್ಷೆ ವಿಧಿಸಬೇಕು’ ಎಂದು ವಾದಿಸಿದ್ದರು.

“ಪ್ರಜ್ವಲ್ ರೇವಣ್ಣ ಮೇಲಿನ ಅತ್ಯಾಚಾರದ ಆರೋಪ ಸಾಬೀತಾಗಲು ಸಂತ್ರಸ್ತೆಯ ದಿಟ್ಟತನವೇ ಮುಖ್ಯ ಕಾರಣ. ಹೀಗಾಗಿ ಇಲ್ಲಿ ವಿಶೇಷವಾಗಿ ನಾವು ಧನ್ಯವಾದ ಹೇಳಬೇಕಿರುವುದು ಸಂತ್ರಸ್ತೆಗೆ. ಆಕೆ ಒಬ್ಬ ಬಡ ಮಹಿಳೆ, ಆಕೆ ಕೇಸ್ ಹಾಕಿದ್ದು ದೊಡ್ಡ ಮನೆತನದವನ ಮೇಲೆ. ಅವರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಪ್ರಾಬಲ್ಯ ಹೊಂದಿದ್ದವರು. ಅಂಥವರಿಂದ ತೀವ್ರ ಒತ್ತಡವಿದ್ದರೂ ಸಹ ಧೈರ್ಯಗೆಡದೇ ನಮಗೆ ನ್ಯಾಯ ಬೇಕೇಬೇಕು ಎಂದು ಆಕೆ ನಮ್ಮ ಜೊತೆಗೆ ನಿಂತಿದ್ದಳು. ಆಕೆಯ ಸಹಕಾರದಿಂದ ನಮಗೆ ಹೆಚ್ಚಿನ ಸಾಕ್ಷ್ಯಾಧಾರ ಕಲೆಹಾಕಲು ಸಾಧ್ಯವಾಯಿತು. ಬಹುಶಃ ಈ ತೀರ್ಪಿನಿಂದಾಗಿ ಆಕೆಗೆ ಸಮಾಧಾನವಾಗಿರಬೇಕು” ಎಂದು ಎಸ್‌ಐಟಿ ಮುಖ್ಯಸ್ಥ ಬಿ ಕೆ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಒಟ್ಟು ಎಸ್‌ಐಟಿ ರಚನೆಯಾದ ನಂತರ ಅಧಿಕಾರಿಗಳು ಆರೋಪಿಯನ್ನು ಬಂಧಿಸುವಲ್ಲಿಂದ ಹಿಡಿದು ಕೊನೆಯವರೆಗೂ ನಡೆದುಕೊಂಡ ರೀತಿ ನಿಜಕ್ಕೂ ಶ್ಲಾಘನೀಯ. ಅದು ಮಹಿಳೆಯ ಘನತೆಯನ್ನು ಎತ್ತಿ ಹಿಡಿಯುವ ಮತ್ತು ಉಳ್ಳವರ ಸೊಕ್ಕು ಮುರಿಯುವ ರೀತಿಯ ಸಂದೇಶ ರವಾನಿಸಿದೆ. ಪ್ರಜ್ವಲ್ ರೇವಣ್ಣ ಒಂದು ತಿಂಗಳು ಜರ್ಮನಿಯಲ್ಲಿ ತಲೆ ಮರೆಸಿಕೊಂಡಿದ್ದು ನಂತರ ಬೆಂಗಳೂರಿಗೆ ವಾಪಸ್ಸಾದ ತಕ್ಷಣ ಆತನನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ಯುವಾಗ ಎರಡೂ ಕಡೆ ಮಹಿಳಾ ಅಧಿಕಾರಿಗಳಿದ್ದರು. ಹತ್ತಾರು ಮಹಿಳೆಯರ ಘನತೆಗೆ ಧಕ್ಕೆ ತಂದ ಪ್ರಭಾವಿಯೊಬ್ಬನನ್ನು ಮಹಿಳೆಯರೇ ಬಂಧಿಸಿ ಕರೆದೊಯ್ದ ನಡೆ ನಿಜಕ್ಕೂ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬುವಂತಿತ್ತು. ಈಗ ದೇಶವೇ ಖುಷಿಪಡುವಂತಹ ತೀರ್ಪೊಂದು ಕರ್ನಾಟಕದಿಂದ ಬಂದಾಯ್ತು.
ಈಗ ಮತ್ತೊಂದು ಮಹತ್ವದ ತೀರ್ಪಿನ ನಿರೀಕ್ಷೆಯಲ್ಲಿದೆ ಕರ್ನಾಟಕ
ಪ್ರಜ್ವಲ್ ರೇವಣ್ಣ ಪ್ರಕರಣ ದೇಶ ಕಂಡು ಕೇಳರಿಯದ ಘೋರ ಕೃತ್ಯ ಎಂದುಕೊಂಡರೇ ಅದೇ ಸಮಯದಲ್ಲಿ ಅದಕ್ಕಿಂತಲೂ ಭೀಕರವಾದ ಮತ್ತೊಂದು ಪ್ರಕರಣ ಅದೂ ಕರ್ನಾಟಕದ ರಾಜಕೀಯ ವಲಯದಿಂದಲೇ ಬಂದಿತ್ತು. ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಎಚ್‌ಐವಿ ಸೋಂಕಿತ ಮಹಿಳೆಯರನ್ನು ಬಳಸಿಕೊಂಡು ತನ್ನ ವಿರೋಧಿಗಳನ್ನು ಹನಿಟ್ರ್ಯಾಪ್ ಮಾಡಿಸಿ ಅವರಿಗೆ ಏಡ್ಸ್ ರೋಗ ಹರಡಿಸುತ್ತಿದ್ದ ಎಂಬ ಬೆಚ್ಚಿ ಬೀಳಿಸುವ ಸುದ್ದಿ ಹೊರ ಬಿದ್ದಿತ್ತು. ಈ ಮೂಲಕ ಕರ್ನಾಟಕ ಘೋರ ಅಪರಾಧದ ಮತ್ತೊಂದು ಮಾದರಿಗೆ ಕುಖ್ಯಾತವಾಗುವಂತಾಯ್ತು. ಶಾಸಕ ಮುನಿರತ್ನ ತನ್ನ ಸ್ವಾರ್ಥಕ್ಕಾಗಿ ಆತ ಇಡೀ ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುವ ದುಷ್ಕೃತ್ಯಕ್ಕೆ ಕೈ ಹಾಕಿದ್ದಲ್ಲದೇ, ಎಚ್‌ಐವಿ ಬಾಧಿತ ಮಹಿಳೆಯರನ್ನು ತನ್ನ ಅಪರಾಧ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಡಗಿಸಿಟ್ಟ ಕ್ಯಾಮರಾ ಮೂಲಕ ಚಿತ್ರೀಕರಿಸಿ ಅದೇ ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡಿ ಮತ್ತೆ ಮತ್ತೆ ಆತನಿಗೆ ಸಹಕರಿಸುವಂತೆ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು.
ಗುತ್ತಿಗೆದಾರನಿಗೆ ಜಾತಿನಿಂದನೆ, ಜೊತೆಗೆ ಮಹಿಳೆಯರ ಘನತೆಗೆ ಧಕ್ಕೆ ತರುವಂತೆ ಮಾತನಾಡಿರುವ ಆಡಿಯೊ ಪ್ರಕರಣದಲ್ಲಿ 2024ರ ಸೆಪ್ಟಂಬರ್ 13ರಂದು ಬಂಧನಕ್ಕೊಳಗಾಗಿ ಸೆ. 18ರಂದು ಜಾಮೀನು ಪಡೆದು ಬಿಡುಗಡೆಯಾಗಿದ್ದರೂ, ಸೆ. 19ರಂದು ಇಬ್ಬರು ಮಹಿಳೆಯರು ಪ್ರತ್ಯೇಕ ಅತ್ಯಾಚಾರ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಸೆ. 20ರಂದು ಮತ್ತೆ ಪೊಲೀಸರು ಬಂಧಿಸಿದ್ದರು.

ಮುನಿರತ್ನನಿಂದ ಅತ್ಯಾಚಾರ, ಬೆದರಿಕೆಗೆ ಒಳಗಾದ ಸಂತ್ರಸ್ತ ಮಹಿಳೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ ಈ ಏಡ್ಸ್ ಟ್ರ್ಯಾಪ್‌ನ ಇಂಚಿಂಚು ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಆತ ಎಚ್‌ಐವಿ ಬಾಧಿತ ಮಹಿಳೆಯರನ್ನು ಬಳಸಿಕೊಂಡಿದ್ದೇ ಅಲ್ಲದೇ ಬಲವಂತದಿಂದ ಡ್ರಗ್ಸ್ ಕೊಟ್ಟು ಅತ್ಯಾಚಾರ ಎಸಗಿರುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ ಒಮ್ಮೆ ಆತನ ಬಲೆಗೆ ಬಿದ್ದವರನ್ನು ಮತ್ತೆ ಹೊರಬರಲಾರದಂತೆ ಅತ್ಯಾಚಾರ, ಡ್ರಗ್ಸ್ ಬಳಕೆಯ ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿಸುತಿತ್ತು ಮುನಿರತ್ನನ ಪಾತಕಿಗಳ ಗ್ಯಾಂಗ್. ಅತ್ಯಾಚಾರ ಪ್ರಕರಣದಲ್ಲಿ ಒಂದು ತಿಂಗಳು ಬಂಧನದಲ್ಲಿದ್ದ ಮುನಿರತ್ನ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಬಿಜೆಪಿಯವರ ಪಾದಯಾತ್ರೆ, ಪ್ರತಿಭಟನಾ ಸಭೆ, ವಿಧಾನಸಭಾ ಅಧಿವೇಶನಗಳಲ್ಲೂ ಭಾಗಿಯಾಗಿದ್ದರು. ಬಿಜೆಪಿ ನಾಯಕ ಆರ್ ಅಶೋಕ್‌ಗೂ ಎಚ್‌ಐವಿ ರಕ್ತ ಇಂಜೆಕ್ಟ್ ಮಾಡುವ ಪ್ರಯತ್ನ ಮಾಡಿರುವ ಆರೋಪವಿದ್ದರೂ ಆತನನ್ನು ಪಕ್ಷದಿಂದ ಅಮಾನತು ಕೂಡ ಮಾಡಿಲ್ಲ. ವಿಧಾನಸಭಾ ಅಧಿವೇಶನದಲ್ಲಿ ಮಾತನಾಡುತ್ತ ತನ್ನ ಮೇಲೆ ಸುಳ್ಳು ಅತ್ಯಾಚಾರದ ಪ್ರಕರಣ ದಾಖಲಿಸಲಾಗಿದೆ, ರಾಜಕೀಯ ಷಡ್ಯಂತ್ರ ಎಂಬ ಆರೋಪ ಮಾಡಿದ್ದರು. ಇಷ್ಟೆಲ್ಲ ಆದರೂ ಯಾವುದೇ ಮುಜುಗರ, ಪಾಪಪ್ರಜ್ಞೆಯೂ ಇಲ್ಲದೆ ರಾಜಾರೋಷವಾಗಿ ಕ್ಷೇತ್ರದಲ್ಲಿ ಗೂಂಡಾಗಿರಿ ಮಾಡುತ್ತ ಸದಾ ಸುದ್ದಿಯಲ್ಲಿದ್ದಾರೆ.
ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿರುವ ಸಂತ್ರಸ್ತೆಯು ಎಸ್‌ಐಟಿ ವಿಚಾರಣೆಯ ವೇಳೆ ”ಮುನಿರತ್ನ ಅವರು ಶಾಸಕರಾಗಿದ್ದಾಗ ಮತ್ತು ಸಚಿವರಾಗಿದ್ದಾಗ ವಿಧಾನಸೌಧ, ವಿಕಾಸಸೌಧದಲ್ಲಿ ಹಾಗೂ ಸರಕಾರಿ ಕಾರಿನಲ್ಲೂ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದರು. 2020ರಲ್ಲಿ ಆರೋಪಿ ಕಿಯಾ ಕಾರ್ನಿವಲ್ ಕಾರಿನಲ್ಲಿ ಅತ್ಯಾಚಾರ ಮಾಡಿದ್ದ ಎಂದು ಆರೋಪಿಸಿದ್ದರು. ಸಂತ್ರಸ್ತೆಯ ದೂರು ಆಧರಿಸಿ 2024ರಲ್ಲಿ ಸೆ. 26 ಎಸ್‌ಐಟಿ ತನಿಖೆ ವೇಳೆ ಆ ಕಾರನ್ನು ತಪಾಸಣೆಗೆ ಒಳಪಡಿಸಿದಾಗ ಪತ್ತೆಯಾದ ಕೂದಲು ಸಂತ್ರಸ್ತೆಯ ಡಿಎನ್‌ಎಗೆ ಹೋಲುತ್ತದೆ ಎಂದು ಎಫ್‌ಎಸ್‌ಎಲ್ ವರದಿ ತಿಳಿಸಿದೆ.

ಮುನಿರತ್ನ ವಿರುದ್ಧ 2024 ಡಿಸೆಂಬರ್ 28ರಂದು ಎಸ್‌ಐಟಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ 2481 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ತಮ್ಮ ವಿರೋಧಿಗಳನ್ನು HIV- Aids ಪೀಡಿತರ ಮೂಲಕ ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಏಡ್ಸ್ ಹರಡುವಿಕೆಗೆ ಶಾಸಕ ಮುನಿರತ್ನ ದುಷ್ಕೃತ್ಯ ಎಸಗಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುನಿರತ್ನನ ಈ ಕೃತ್ಯಕ್ಕೆ ನೆರವು ನೀಡಿದ ಆರೋಪ ಹೊತ್ತಿದ್ದ ಪ್ರಕರಣದ ಎ-3 ಸುಧಾಕರ್, ಎ-7 ಪಿ ಶ್ರೀನಿವಾಸ್ ಮತ್ತು ಎ-8 ಇನ್ಸ್ ಪೆಕ್ಟರ್ ಅಯ್ಯಣ್ಣ ರೆಡ್ಡಿ ವಿರುದ್ಧ ದಾಖಲಾದ ಆಪಾದನೆ ಕೂಡ ತನಿಖೆಯಲ್ಲಿ ಸಾಬೀತಾಗಿದೆ. ಇನ್ಸ್‌ಪೆಕ್ಟರ್ ಬಿ. ಅಯ್ಯಣ್ಣ ರೆಡ್ಡಿಯನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದರು.
ಪ್ರಕರಣ ಸಂಬಂಧ ಎಸ್‌ಐಟಿ 146 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿತ್ತು. ಇದರಲ್ಲಿ ನ್ಯಾಯಾಧೀಶರ ಮುಂದೆ ಸಿಆರ್ಪಿಸಿ 164ರಡಿ 8 ಸಾಕ್ಷಿದಾರರು ಹೇಳಿಕೆ ನೀಡಿದ್ದಾರೆ. 850 ದಾಖಲೆಗಳನ್ನು ಒಳಗೊಂಡ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಮುನಿರತ್ನ ವಿರುದ್ಧ ಅತ್ಯಾಚಾರ, ಜಾತಿ ನಿಂದನೆ, ಬೆದರಿಕೆ ಹಾಗೂ ಹನಿಟ್ರ್ಯಾಪ್ ಯತ್ನ ಸೇರಿ 4 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ಗೆ ಜಾತಿನಿಂದನೆ ಹಾಗೂ ಬಿಜೆಪಿ ಕಾರ್ಯಕರ್ತೆ ಮೇಲಿನ ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಿ ಸಿಐಡಿ ನವೆಂಬರ್ 30ರಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಗುತ್ತಿಗೆದಾರನ ಬಳಿ ಲಂಚ ಕೇಳಿದ ಪ್ರಕರಣ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೂಡಾ ಸಿಕ್ಕಿದೆ. ಆದರೆ ಇನ್ನೂ ಕೋರ್ಟ್‌ನಲ್ಲಿ ಟ್ರಯಲ್ ಶುರುವಾಗಿಲ್ಲ. ಪ್ರಜ್ವಲ್ ಪ್ರಕರಣದ ರೀತಿಯಲ್ಲಿಯೇ ಮುನಿರತ್ನ ಪ್ರಕರಣದ ವಿಚಾರಣೆಯೂ ತ್ವರಿತವಾಗಿ ನಡೆದು ತೀರ್ಪು ಹೊರ ಬರಬೇಕು. ಜನಪ್ರತಿನಿಧಿಗಳೆಂದುಕೊಂಡವರು ಏನು ಬೇಕಾದರೂ ಮಾಡಬಹುದು ಎಂಬ ದುರಹಂಕಾರದ ಮನಸ್ಥಿತಿಗೆ ಮದ್ದು ಅರೆಯುವ ಕೆಲಸ ಕಾನೂನಿನ ಮೂಲಕ ಆಗಬೇಕಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಇನ್ನೂ ಎರಡು ಪ್ರಕರಣ ಇತ್ಯರ್ಥಕ್ಕೆ ಬಾಕಿ ಇದೆ. ಆದರೆ, ಮನೆಗೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಕೇವಲ ಹದಿನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಿ ಜೀವಾವಧಿ ಶಿಕ್ಷೆ ನೀಡಿರುವುದು ಸಾಮಾನ್ಯ ಜನರಲ್ಲಿ ಭರವಸೆ ಮೂಡಿಸಿದ್ದು, ತಮ್ಮ ಅಧಿಕಾರ ಪ್ರಭಾವ ಬಳಸಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುವ ದುರುಳರಿಗೆ ನಡುಕ ಹುಟ್ಟಿಸಿರುವುದಂತು ದಿಟ. ಎಷ್ಟೇ ಅಧಿಕಾರ, ಪ್ರಭಾವಿಗಳಾಗಿದ್ದರೂ ಕಾನೂನು ಸರಿಯಾಗಿ ಪಾಲಿಸಿದರೆ ಎಂಥವರಿಗೂ ನ್ಯಾಯ ಸಿಗುತ್ತದೆ ಎಂಬ ಸಂದೇಶ ರವಾನೆಯಾಗಿದೆ. ಈಗ ಎಲ್ಲರ ಚಿತ್ತ ಮುನಿರತ್ನ ಪ್ರಕರಣದ ಮೇಲಿದೆ. ಆತನ ವಿರುದ್ಧ ಇಬ್ಬರು ಮಹಿಳೆಯರು ಅತ್ಯಾಚಾರದ ದೂರು ನೀಡಿದ್ದು, ಗುತ್ತಿಗೆದಾರನ ವಿರುದ್ಧ ಜಾತಿನಿಂದನೆ ಪ್ರಕರಣ, ಜೊತೆಗೆ ಇತ್ತೀಚೆಗೆ ದಲಿತ ಕುಟುಂಬಗಳ ಮನೆ ನೆಲಸಮ ಸಂಬಂಧ ಮತ್ತೊಂದು ಪ್ರಕರಣ ದಾಖಲಾಗಿದೆ. ಮುನಿರತ್ನನ ಮೇಲೆ ಇಷ್ಟೊಂದು ಪ್ರಕರಣ ದಾಖಲಾದರೂ ಆತ ಇನ್ನೂ ಶಾಸಕ ಎಂಬುದೇ ಪ್ರಜಾಪ್ರಭುತ್ವದ ವ್ಯಂಗ್ಯ.
ಇದನ್ನೂ ಓದಿ ನಟಿ ರಮ್ಯಾಗೆ ಅತ್ಯಾಚಾರದ ಬೆದರಿಕೆ; ಯಥಾ ಹೀರೋ ತಥಾ ಫ್ಯಾನ್ಸು
ಪ್ರಜ್ವಲ್ ರೇವಣ್ಣ ಪ್ರಕರಣದ ತೀರ್ಪು ನ್ಯಾಯದಾನದ ಅಪರೂಪದ ಮಾದರಿಯಾಗಿದೆ. ಅದೇ ರೀತಿ ಕೆಟ್ಟ ಮಾದರಿಯೊಂದಿದೆ. ಬಿಜೆಪಿಯ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಮೇಲಿನ ಪೋಕ್ಸೊ ಕೇಸಿಗೆ ಸಂಬಂಧಿಸಿದಂತೆ ಅವರದೇ ಆಡಿಯೋ ದಾಖಲೆ ಇದ್ದರೂ, ಬಾಲಕಿಯ ಹೇಳಿಕೆ 146 ಅಡಿ ದಾಖಲಿಸಿದ್ದರೂ ಆರೋಪಿಯನ್ನು ವಶಕ್ಕೂ ಪಡೆಯಲಿಲ್ಲ. ಒಂದು ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದರೆ, ಮತ್ತೊಂದು ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ಅಲ್ಲದೇ ಆರೋಪಿ ಸಾಮಾನ್ಯ ವ್ಯಕ್ತಿ ಅಲ್ಲ ಎಂದು ಹೇಳುವ ಮೂಲಕ ನ್ಯಾಯಮೂರ್ತಿಗಳೇ ಬಂಧನ ಮಾಡದಂತೆ ಆದೇಶ ನೀಡಿದ್ದರು. ಸದ್ಯ ಸುಪ್ರೀಂ ಕೋರ್ಟ್ ವಿಚಾರಣೆಗೆ ತಡೆ ನೀಡಿದೆ. ಸಂತ್ರಸ್ತ ಬಾಲಕಿಗೆ ನ್ಯಾಯ ಮರೀಚಿಕೆಯಾಗಿದೆ. ಪೋಕ್ಸೊ ಕಾಯ್ದೆಯ ಎಲ್ಲ ನಿಯಮ ಉಲ್ಲಂಘನೆಯಾಗಿದೆ. ಈ ಪ್ರಕರಣದಲ್ಲಿ ಹಿರಿಯ ನ್ಯಾಯವಾದಿ ಬಾಲನ್ ಅವರೂ ಸಂತ್ರಸ್ತೆಯ ಪರ ವಾದಿಸುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಪಾಠ ಕಲಿಯದ ಪ್ರಜ್ವಲ್, ಕಲಿಸಿದ್ದು ಯಾರಿಗೆ?
- ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ ತಂಡ
ಎಸ್‌ಐಟಿ ಮುಖ್ಯಸ್ಥ – ಬಿಜಯ್ ಕುಮಾರ್ ಸಿಂಗ್ (ಎಡಿಜಿಪಿ) - ಎಸ್‌ಐಟಿ ಮೇಲುಸ್ತುವಾರಿ – ಸೀಮಾ ಲಾಟ್ಕರ್ (ಮೈಸೂರು ಕಮಿಷನರ್), ಡಾ. ಸುಮನಾ ಡಿ. ಪನ್ನೇಕರ್ (ಎಸ್ಪಿ ಬೆಂಗಳೂರು)
- ಪ್ರಕರಣದ ತನಿಖಾಧಿಕಾರಿ – ಎನ್. ಶೋಭಾ, ಪೊಲೀಸ್ ಇನ್ಸ್‌ಪೆಕ್ಟರ್ ಶಿವಾಜಿನಗರ ಮಹಿಳಾ ಪೊಲೀಸ್ ಠಾಣೆ
- ತನಿಖಾ ಸಹಾಯಕರು – ಎಎಸ್‌ಐ ರತ್ನಮ್ಮ, ವೈ. ಬಾಲಕೃಷ್ಣ.
- ಕೋರ್ಟ್‌ನಲ್ಲಿ ಕೇಸ್ ವಿಚಾರಣೆಗೆ ಸಹಕಾರ – ಪೊಲೀಸ್ ಇನ್ಸ್‌ಪೆಕ್ಟರ್ ನಂದೀಶ್, ಎಎಸ್‌ಐ ಮಮತಾ, ಪೊಲೀಸ್ ಕಾನ್ಸ್‌ಟೆಬಲ್ ಜಾಫರ್ ಸಾದಿಕ್, ಕಾಶಿನಾಥ್ ಕರಲಟ್ಟಿ
- ಎಸ್‌ಐಟಿ ಪರ ವಕೀಲರು: ಬಿ.ಎನ್ ಜಗದೀಶ್ (ವಿಶೇಷ ಸರ್ಕಾರಿ ಅಭಿಯೋಜಕರು), ಅಶೋಕ್ ಎನ್. ನಾಯಕ್ (ಸರ್ಕಾರಿ ಅಭಿಯೋಜಕರು)
- ಸಹಾಯಕ ವಕೀಲರು: ಬಿ.ಎಂ. ವಿಶಾಲ್, ಊರ್ಮಿಳಾ ಪುಲ್ಲತ್, ಮಾಳವಿಕಾ, ಸಾಕಿನ ಮೌಸಿನ್, ಮಹಾಲಕ್ಷ್ಮಿ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.