ಒಂದು ಕ್ವಿಂಟಾಲ್ ಕೊಬರಿ 18 ಸಾವಿರಕ್ಕೆ ಏರಿದರೆ, ತೆಂಗಿನಕಾಯಿ ಟನ್‌ಗೆ 50 ಸಾವಿರ, ಎಳನೀರು ಒಂದಕ್ಕೆ 70 ರೂಪಾಯಿ. ಮುಕ್ಕಣ್ಣೇಶ್ವರ ಎಂದು ಕರೆಸಿಕೊಳ್ಳುವ ತೆಂಗಿಗೆ ಮುಕ್ಕಣ್ಣನ ದೆಸೆ ತಿರುಗಿದೆ. ತೆಂಗು ಬೆಳೆಗಾರರ ಮೊಗದಲ್ಲಿ ಸಂತಸ ತಂದಿದೆ.
ತೆಂಗಿನಕಾಯಿ ಕೊಬರಿಗೆ ಅನೇಕ ವರ್ಷಗಳ ನಂತರ ಇತ್ತೀಚೆಗೆ ಬೆಲೆ ಬಂದಿದೆ. ಮಾರುಕಟ್ಟೆಯಲ್ಲೇ ಒದಗಿ ಬಂದ ಸ್ಪರ್ಧಾತ್ಮಕ ಬೆಲೆಯಿದು. ಇಳುವರಿ ಕಡಿಮೆಯಾಗಿ ಕಾಯಿ ಕೊಬರಿ ಮುಂದೆ ಮಾರುಕಟ್ಟೆಗೆ ಬರುವುದು ದುರ್ಲಭವಾಗಬಹುದು. 2022ರಲ್ಲಿ ಭಾರಿ ಮಳೆ ಸುರಿದು ನೀರು ಕುಡಿದು ಉಸಿರುಗಟ್ಟಿ ತೆಂಗಿನ ಮರಗಳು ಸತ್ತೇ ಹೋದವು. 2023ರಲ್ಲಿ ಮಳೆಯೇ ಬರಲಿಲ್ಲ. ಬರಗಾಲ ಮತ್ತು ಬಿರು ಬೇಸಿಗೆಯ ರಣಬಿಸಿಲು ಮುಂದುವರಿದ ಪರಿಣಾಮ ಮರಗಳ ಸುಳಿಬಿದ್ದು ಹೋಗತೊಡಗಿದವು. ಫಸಲು ಕಟ್ಟದಾದವು. ಹೊಂಬಾಳೆಯಲ್ಲಿ ತೆಂಗಿನ ಅರಳು ನಿಲ್ಲದೆ ಮರಗಳು ಬಳಲಿ ಪೈರು ನಿಲ್ಲದಂತಾಯಿತು. ಹವಾಮಾನ ಬದಲಾವಣೆ ಮತ್ತು ವೈಪರೀತ್ಯಗಳು ದೀರ್ಘಾವಧಿಯ ತೋಟಗಾರಿಕೆ ಆಧಾರಿತ ಬೇಸಾಯ ಕ್ರಮಗಳನ್ನೂ ಉಳಿಸದಂತಾಗಿದೆ. ರೈತರ ಪಡಿಪಾಟಲುಗಳು ಯಾವತ್ತಿಗೂ ತಪ್ಪದಂತಾಗಿವೆ. ಬೆಲೆ ಮತ್ತು ಮಳೆ ಕೈಯ್ಯಿಗೆ ಸಿಗದ ಕಳ್ಳನ ಹಾಗೆ ತಪ್ಪಿಸಿಕೊಂಡು ಹೋಗುತ್ತಲೇ ಇವೆ.
ಕಳೆದ ಎರಡು ವರ್ಷದಿಂದ ಕಾಯಿಕೊಬರಿ ಇಳುವರಿ ಕುಂಠಿತಗೊಂಡಿತು. ತೆಂಗಿನಕಾಯಿ, ಕೊಬರಿ, ಎಳನೀರಿಗೆ ಬೆಲೆ ನುಗ್ಗಿ ಬಂದಿದೆ. ಒಂದು ಕ್ವಿಂಟಾಲ್ ಕೊಬರಿ 18 ಸಾವಿರಕ್ಕೆ ಏರಿದರೆ, ತೆಂಗಿನಕಾಯಿ ಟನ್‌ಗೆ 50 ಸಾವಿರ, ಎಳನೀರು ಒಂದಕ್ಕೆ 70 ರೂಪಾಯಿ. ಮುಕ್ಕಣ್ಣೇಶ್ವರ ಎಂದು ಕರೆಸಿಕೊಳ್ಳುವ ತೆಂಗಿಗೆ ಮುಕ್ಕಣ್ಣನ ದೆಸೆ ತಿರುಗಿದೆ.
ಮನೆಗಳಿಂದ ಮಾರುಕಟ್ಟೆಯ ತನಕ ಎಲ್ಲೆಲ್ಲಿಯೂ ಕೊಬರಿ ದರ ಏರಿಕೆಯ ಮಾತುಗಳು. ಮಳೆ ಹೋಗಿ ರಾಗಿ ಪೈರು ಒಣಗುತ್ತಿದೆ. ರಾಗಿ ಬೆಳೆ ಆಗುವ ಭರವಸೆ ಕಳೆದುಕೊಂಡಿರುವ ರೈತರು, ಗೌರಿ ಮಾರನವಮಿ ಕಾಲದಲ್ಲಿ ಕೊಬರಿ ಬೆಲೆ ದಿಢೀರ್ ಏರಿಕೆಯಾಗಿರುವುದನ್ನು ಕಂಡು ಸಂತಸಗೊಂಡಿದ್ದಾರೆ.
ಇದನ್ನು ಓದಿದ್ದೀರಾ?: ಕಿಶನ್ ಪಟ್ನಾಯಕ್ : ಭಗವದ್ಗೀತೆಯ ಸ್ಥಿತಪ್ರಜ್ಞನ ಪರಿಕಲ್ಪನೆಯಂತೆ ಬದುಕಿದ ಅಸಾಧಾರಣ ಮನುಷ್ಯ
ಪಟ್ಟಿ ಮಾಡಲು ಹಣಕ್ಕೆ ವರ್ತಕರು ಪರದಾಡುವಷ್ಟರ ಮಟ್ಟಿಗೆ ಕೊಬರಿ ದರ ಏರುತ್ತಾ ಹೋಗಿದೆ. ಮಂದೆಯೂ ಕೊಬರಿ ಬೆಲೆ ಏರುತ್ತದೆ ಎಂದು ಕೊಬರಿ ಮಾರುಕಟ್ಟೆ ವ್ಯಾಪಾರ ವಹಿವಾಟು ಬಲ್ಲವರು ಹೇಳುತಿದ್ದಾರೆ. ಕೊಬರಿ ಮಾರಾಟ ಮಾಡಲಾಗದೆ ಅಟ್ಟದಲ್ಲೇ ಇಟ್ಟುಕೊಂಡು ಬೆಲೆ ಬರಬಹುದೆಂದು ಕಾಯುತಿದ್ದ ಬೆಳೆಗಾರರಿಗೆ ನಿರೀಕ್ಷೆ ಮೀರಿ ಬೆಲೆ ಬಂದಿರುವುದು ಸಂತಸ ತಂದಿದೆ. ತೆಂಗಿನ ಬೆಳೆ ಕಳೆದ ವರ್ಷಗಳಲ್ಲಿ ಇಳುವರಿ ಕುಂಠಿತವಾಗಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಮುಂದಿನ ವರ್ಷ ಕಾಯಿ ಕೊಬರಿಗೆ ಕೊರತೆ ಉಂಟಾಗುತ್ತದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ಈ ಹಿಂದೆ, ಕೊಬರಿ ಬೆಲೆ ಬಿದ್ದು ಹೋದಾಗ, ರೈತರು ತಾಲ್ಲೂಕು ಕೇಂದ್ರಗಳ ಮಿನಿ ವಿಧಾನಸೌದಗಳ ಮುಂದೆ ಒಲೆಯೂಡಿ ಅಡುಗೆ ಮಾಡಿಕೊಂಡು ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಸೇರುತಿದ್ದರು. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕೊಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ಕೊಡಲಾರದೆ ಪ್ರತಿಸಲವೂ ಚೌಕಾಶಿ ಮಾಡುತ್ತಿದ್ದವು. ರೈತರ ಬೇಡಿಕೆಯನ್ನು ಈಡೇರಿಸುವಲ್ಲಿ ಸರ್ಕಾರಗಳು ಮೀನ ಮೇಷ ಎಣಿಸಿ ಆಗೊಮ್ಮೆ ಈಗೊಮ್ಮೆ ಬಿಡಿಗಾಸಿನ ಬೆಂಬಲ ಬೆಲೆ ನೀಡುತ್ತಿದ್ದವು. ಲಕ್ಷ ಕೋಟಿಗಳ ವಾರ್ಷಿಕ ಆಯವ್ಯಯ ಮಂಡಿಸುವ ನಮ್ಮ ಸರ್ಕಾರಗಳು ರೈತರಿಗೆ ಬೆಂಬಲ ಬೆಲೆ ಕೊಡುವಾಗ ತೀರಾ ಐನೂರು ಸಾವಿರದ ಲೆಕ್ಕದಲ್ಲಿ ಕೊಟ್ಟು ಕೈತೊಳೆದುಕೊಂಡಿದ್ದೂ ಇದೆ.
ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಕೊಬರಿ ವ್ಯಾಪಾರ ವಹಿವಾಟಿಗೆ ಹೆಸರುವಾಸಿ. ಜಾಗತಿಕವಾಗಿಯೂ ತಿಪಟೂರು ಕೊಬರಿ ಮಾರುಕಟ್ಟೆ ವ್ಯವಹಾರವನ್ನು ವಿಸ್ತರಿಸಿಕೊಂಡಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ತಿಪಟೂರು ಮಾರುಕಟ್ಟೆಯ ಕೊಬರಿಗೆ ಬಹಳ ಬೇಡಿಕೆ ಇದೆ.
ವ್ಯಾಪಾರಿಗಳೇ ಹೆಚ್ಚಾಗಿ ಇಲ್ಲಿನ ಜನಪ್ರತಿನಿಧಿಗಳು. ಶಾಸಕರು, ಸಚಿವರು, ತಾಲ್ಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರಾದವರೆಲ್ಲಾ ಅನೇಕರು ಕೊಬರಿ ವ್ಯಾಪಾರವನ್ನೇ ಅವಲಂಬಿಸಿ ರಾಜಕಾರಣದ ಪ್ರಭಾವ ಬೆಳೆಸಿಕೊಂಡವರು. ಅನೇಕರ ರಾಜಕೀಯ ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ಕೊಬರಿ ಮಾರುಕಟ್ಟೆ ಪ್ರಭಾವ ಬೀರಿರುತ್ತದೆ. ಅಂತಹ ಕೆಲವರು ಕೋಟಿ ಕೋಟಿ ವಹಿವಾಟಿನ ಮಾರುಕಟ್ಟೆಯ ನಿಯಂತ್ರಣ ಮಾಡುವುದೂ ಉಂಟು. ಕೊಬರಿ ಮಾರುಕಟ್ಟೆ ವ್ಯಾಪಾರದ ಆಳ-ಅಗಲ ಅರಿಯದ ಕೆಲವರು ನಷ್ಟ ಮಾಡಿಕೊಂಡಿರುವುದೂ ಉಂಟು. ವ್ಯಾಪಾರ ಇಷ್ಟೇ ಸೈ ಎಂದು ಹೇಳಲಾಗದು. ಬುದ್ದಿವಂತರಿಗೆ ಲಾಭ, ದಡ್ಡರಿಗೆ ಉಂಡೇ ನಾಮ.
ಕೊಬರಿ ಬೆಲೆ ಏರಿಕೆಯ ಕಾರಣದಿಂದ ಸಮಿತಿಯ ಸಭಾಭವನದಲ್ಲಿ ಕೊಬ್ಬರಿಯ ಆನ್‌ಲೈನ್ ಟೆಂಡರ್ ಕುರಿತಂತೆ ತಿಪಟೂರಿನ ಶಾಸಕರಾದ ಕೆ.ಷಡಕ್ಷರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿದ ದಲ್ಲಾಲರ ಮತ್ತು ಖರೀದಿದಾರರ ಸಭೆಯಲ್ಲಿ ಚರ್ಚಿಸಿ ಕೈಗೊಂಡ ತೀರ್ಮಾನಗಳು ಕೊಬರಿ ಮಾರುಕಟ್ಟೆಯ ಬೆಲೆ ಏರಿಳಿತಗಳಿಗೆ ಕಡಿವಾಣ ಹಾಕುವ ರೀತಿಯಲ್ಲಿವೆ. ಕೊಬರಿ ಮಾರುಕಟ್ಟೆ ಪ್ರವೇಶಿಸಿದ ಕೂಡಲೇ ಗೇಟ್ ಎಂಟ್ರಿ ಕಡ್ಡಾಯ ಮಾಡಲಾಗಿರುತ್ತದೆ. ಟೆಂಡರ್ ಡಿಕ್ಲರೇಶನ್ ಸಮಯವನ್ನು ಇನ್ನು ಮುಂದೆ ಮಧ್ಯಾಹ್ನ 2 ಗಂಟೆಯ ಬದಲಾಗಿ 3 ಗಂಟೆಗೆ ಘೋಷಣೆ ಮಾಡುವುದು ಆಡಳಿತಾತ್ಮಕ ದೃಷ್ಟಿಯಿಂದ ಸರಿ. 01-10-2024ರಿಂದ ಪ್ರತಿ ಬುಧವಾರ ಮತ್ತು ಶನಿವಾರಗಳ ಬದಲಾಗಿ ವಾರಕ್ಕೆ ಎರಡು ದಿನ ಅಂದರೆ, ಪ್ರತಿ ಸೋಮವಾರ ಮತ್ತು ಗುರುವಾರಗಳಂದು ಮಾತ್ರ ಕೊಬ್ಬರಿಯ ಆನ್‌ಲೈನ್ ಟೆಂಡರ್ ಮಾಡುವುದು ರೈತರಿಗೆ ಮತ್ತು ವರ್ತಕರಿಗೆ ಅನುಕೂಲ. ಇದು ದೀರ್ಘಕಾಲದವರೆಗೆ ಮುಂದುವರಿದರೆ ಇನ್ನೂ ಉತ್ತಮ.

ಇದರ ಜೊತೆಗೆ ರೈತರು ಅನಾಮತ್ ಆಗಿ ಕೊಬ್ಬರಿಯನ್ನು ದಲ್ಲಾಲರ ಅಂಗಡಿಯಲ್ಲಿ ಇಡತಕ್ಕದ್ದಲ್ಲ ಎಂದು ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೆ ತರಲಾಗಿದೆ. ಗರಿಷ್ಠ 3 ಟೆಂಡರ್ ಆಗುವವರೆಗೆ ಮಾತ್ರ ರೈತರು ತಂದ ಕೊಬ್ಬರಿಯನ್ನು ದಲ್ಲಾಲರ ಅಂಗಡಿಗಳಲ್ಲಿ ಇಡಬಹುದು. ಪಟ್ಟಿ ಮಾಡದೆ ದೀರ್ಘಕಾಲ ರೈತರು ಮಾರುಕಟ್ಟೆಗೆ ತಂದ ಕೊಬರಿಯನ್ನು ಇಟ್ಟುಕೊಂಡರೆ ಅಂತಹ ದಲ್ಲಾಲರ ಮೇಲೆ ಕ್ರಮವಹಿಸಲಾಗುವುದು. ಖರೀದಿದಾರರು ಕನಿಷ್ಠ 5 ದಲ್ಲಾಲರ ಅಂಗಡಿಗೆ ಟೆಂಡರ್ ನಮೂದಿಸತಕ್ಕದ್ದು ಮತ್ತು ಅಂತಹ ಅಂಗಡಿಗಳಲ್ಲಿ ಖರೀದಿದಾರರು ಟೆಂಡರ್‌ಗಿಟ್ಟ ಎಲ್ಲ ಕೊಬ್ಬರಿಗೂ ಟೆಂಡರ್ ನಮೂದಿಸತಕ್ಕದ್ದು. ಖರೀದಿದಾರರು 3 ತಿಂಗಳವರೆಗೆ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದೇ ಇದ್ದಲ್ಲಿ ಅಂತಹ ಖರೀದಿದಾರರಿಗೆ ಕಾರಣ ಕೇಳುವ ನೋಟಿಸ್ ನೀಡಿ, ಸದರಿಯವರ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಲಾಗುವುದು ಎಂಬ ನಿಯಮಗಳನ್ನು ರೂಪಿಸಲಾಗಿದೆ. ಇವು ರೈತರಿಗೆ ಅನುಕೂಲ ಮಾಡಿಕೊಟ್ಟರೆ ಒಳ್ಳೆಯದು.
ಅಂತೂ ಕೊಬರಿ ಇರೋರಿಗೆ ಈಗ ಒಳ್ಳೆಯ ಕಾಲ ಮತ್ತು ಉತ್ತಮವಾದ ರೀತಿಯಲ್ಲಿ ಬೆಲೆ ಬಂದಿದೆ. ರೈತರ ಮೊಗದಲಿ ಸಂತಸ ತಂದಿದೆ.

ಉಜ್ಜಜ್ಜಿ ರಾಜಣ್ಣ
ಪತ್ರಕರ್ತ, ಲೇಖಕ, ಸಾಮಾಜಿಕ ಹೋರಾಟಗಾರ