ಸರ್ಕಾರಿ ಶಾಲೆಗಳ ಶಿಕ್ಷಣದ ಬಗ್ಗೆ ನಿಜಾರ್ಥದ ಕಾಳಜಿ ವಹಿಸಿದ್ದೇ ಆಗಿದ್ದರೆ ಇವತ್ತು ಖಾಸಗಿ ಶಾಲೆಗಳ ಆರ್ಭಟ ಹೆಚ್ಚುತ್ತಿರಲಿಲ್ಲ. ಸರ್ಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟದ ಬಗ್ಗೆ ಸರ್ಕಾರ ಏಕೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ? ಏಕೆಂದರೆ ಯಾವುದೇ ರಾಜಕಾರಣಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿಲ್ಲ. ಒಂದು ಊರಿನಲ್ಲಿ ಒಬ್ಬ ಶಾಸಕರ ಮಗ ಅಥವಾ ಸಚಿವರ ಮಗಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾಳೆ ಎಂದಾಗಿದ್ದಿದ್ದರೆ ಆ ಶಾಲೆ ಸೌಕರ್ಯವಂಚಿತವಾಗಿ ಉಳಿಯುತ್ತಿತ್ತೇ?
ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ನಯಾಪೈಸೆ ದಾಖಲಾತಿ ಶುಲ್ಕ ಇಲ್ಲ. ಸಮವಸ್ತ್ರ, ಪಠ್ಯಪುಸ್ತಕ ಸರ್ಕಾರ ಕೊಟ್ಟದ್ದು. ನೋಟ್ ಬುಕ್, ಬ್ಯಾಗು, ಕೊಡೆ, ಸ್ಲೇಟು, ಪೆನ್ನು, ಪೆನ್ಸಿಲು, ಜಾಮಿಟ್ರಿ ಬಾಕ್ಸ್ ಇತ್ಯಾದಿ ಅಪ್ಪ ಕೊಡಿಸಿದ್ದು. ಹಳೆ ಪುಸ್ತಕಗಳ ಮರುಬಳಕೆ, ಕಡಿಮೆ ದರದ ರಫ್ ಪುಸ್ತಕಗಳು, ನೋಟ್‌ಬುಕ್ ಗಳ ಪುಟಗಳು ಉಳಿದಿದ್ದರೆ ಅವೆಲ್ಲವನ್ನೂ ಜೋಡಿಸಿ ರಫ್ ಪುಸ್ತಕ ಮಾಡುವ ತಂತ್ರ. ಹೀಗೆ ಏಳನೇ ತರಗತಿ ದಾಟಿ ಹೈಸ್ಕೂಲು ಹತ್ತಿದಾಗ ಎಂಟರಿಂದ ಹತ್ತನೇ ತರಗತಿವರೆಗೆ ಪ್ರತಿ ವರ್ಷ ₹500 ಶುಲ್ಕ. ಪ್ರಾಥಮಿಕ, ಹೈಸ್ಕೂಲು ಕಲಿಕೆಯ ಒಟ್ಟು ಖರ್ಚು ಅಂದಾಜು ₹10 ಸಾವಿರದ ಒಳಗೆ ನಿಂತಿರಬಹುದು. ಅಷ್ಟೇ ಆಗಲು ಸಾಧ್ಯ. ಅದಕ್ಕಿಂತ ಹೆಚ್ಚು ಖರ್ಚಾಗುವಂಥದ್ದು ಏನೂ ಇರಲಿಲ್ಲ. ಇದು 2001ರಿಂದ 2010ರವರೆಗೆ ಸರ್ಕಾರಿ ಶಾಲೆಯಲ್ಲಿ ಕಲಿತ ಸಮಯದ ಖರ್ಚಿನ ವಿವರ.
ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳವಾಗಿ ಪೋಷಕರು ಕಂಗಾಲಾಗಿದ್ದಾರೆ. ಮಕ್ಕಳನ್ನು ಓದಿಸುವುದಾದರೂ ಹೇಗೆ ಎಂಬ ಚಿಂತೆ ಶುರುವಾಗಿದೆ. ಕೇವಲ ಮಕ್ಕಳ ಶಿಕ್ಷಣಕ್ಕಾಗಿ ಹಗಲು ರಾತ್ರಿ ಬೆವರು ಸುರಿಸಿ ದುಡಿಯುವ ಪೋಷಕರಿದ್ದಾರೆ. ಪತಿಯೂ ದುಡಿದು, ಪತ್ನಿಯೂ ದುಡಿದು ದುಡ್ಡು ಕೂಡಿಸಿ, ಶಾಲೆಯ ಶುಲ್ಕ, ಡೊನೇಷನ್ ಕಟ್ಟಿದ ಮೇಲೆಯೇ ಸಮಾಧಾನ ಅವರಿಗೆ. ‘ಖಾಸಗಿ ಶಾಲೆ ಶುಲ್ಕ ವೆಚ್ಚದ ವಿಚಾರದಲ್ಲಿ ನಮಗೆ ಏನೂ ಮಾಡಲು ಅಧಿಕಾರ ಇಲ್ಲ. ಅವರು ಕೋರ್ಟಿಗೆ ಹೋಗುತ್ತಾರೆ’ ಎಂದು ಸರ್ಕಾರ ಕೈತೊಳೆಯುತ್ತದೆ. ‘ಖಾಸಗಿ’ ಎನ್ನುವುದರ ಅಪಾಯ ಹೇಗೆ ಹೊಟ್ಟೆಗೆ ಹೊಡೆಯುತ್ತದೆ ಎನ್ನುವುದು ಹೊಟ್ಟೆಪಾಡಿನ ಬದುಕು ಕಟ್ಟಿಕೊಳ್ಳುವವರಿಗೆ ಈಗಲಾದರೂ ಅರ್ಥವಾಗಬೇಕು.

ಖಾಸಗಿ ಶಾಲೆ ಎಂಬ ಉದ್ಯಮ ಈಗ ಹಳ್ಳಿ ಹಳ್ಳಿಗಳಲ್ಲಿ ಹೋಟೆಲ್ ಉದ್ಯಮದ ಹಾಗೆ ತಲೆ ಎತ್ತಿದೆ. ಅಕ್ಷರ ಗೊತ್ತಿಲ್ಲದ ಹರೇಕಳ ಹಾಜಬ್ಬ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿಸಿ ಅಕ್ಷರ ಸಂತ ಎನಿಸಿಕೊಳ್ಳುವುದಕ್ಕೂ, ಅಕ್ಷರ ಗೊತ್ತಿದ್ದರೂ ಗೊತ್ತಿಲ್ಲದಿದ್ದರೂ ವ್ಯಾಪಾರ ಗೊತ್ತಿರುವವರು ನರ್ಸರಿ ಸ್ಕೂಲ್, ಇಂಗ್ಲಿಷ್ ಮೀಡಿಯಂ ಸ್ಕೂಲ್ ಎನ್ನುತ್ತ ಹಳ್ಳಿಗಳಲ್ಲಿ ಶಿಕ್ಷಣ ವ್ಯಾಪಾರ ಮಾಡುವುದಕ್ಕೂ ವ್ಯತ್ಯಾಸವಿದೆ. ನನ್ನೂರಿನ ಬಡ ಮಕ್ಕಳು ನನ್ನ ಹಾಗೆ ಅಕ್ಷರ ವಂಚಿತರಾಗಬಾರದು ಎಂಬುದು ಹಾಜಬ್ಬರು ಶಾಲೆ ಕಟ್ಟಿಸಿದ್ದರ ಹಿಂದಿನ ಉದ್ದೇಶವಾಗಿತ್ತು. ಆದರೆ ಖಾಸಗಿ ಶಾಲೆಗಳನ್ನು ನಾಯಿಕೊಡೆಗಳಂತೆ ಅಲ್ಲಲ್ಲಿ ತೆರೆಯುವವರ ಉದ್ದೇಶ ಏನು?
ಯಾವಾಗ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಿತೋ ಆಗ ಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳ ನಡುವಿನ ಅಂತರ, ಅಸಮಾನತೆ, ತಾರತಮ್ಯ ಮನೋಭಾವ ಹೆಚ್ಚಿತು. ಈಗ ಮಧ್ಯಮ ವರ್ಗದ ಕುಟುಂಬಗಳಷ್ಟೇ ಅಲ್ಲ, ಬಡ ಕುಟುಂಬದವರದ್ದೂ ‘ಇಂಗ್ಲೀಸ್ ಮೀಡಿಯಮ್ಮು’ ಹುಚ್ಚು ಜೋರಾಗಿದೆ. ಖಾಸಗಿ ಶಾಲೆಗಳ ಗೇಟಿನ ಮುಂದೆ ಮುಗಿಬೀಳುವ ಜನರ ಮನಸ್ಥಿತಿಯ ಬಗ್ಗೆ ಖೇದವಾಗುತ್ತದೆ. ಸರ್ಕಾರಿ ಶಾಲೆಗಳನ್ನು ಕೊಲ್ಲುತ್ತ ಬಂದವರು ಇದೇ ಮಧ್ಯಮ ವರ್ಗದ ಜನರೇ ಹೊರತು ಬೇರೆ ಯಾರೂ ಅಲ್ಲ. ಸರ್ಕಾರಿ ಶಾಲೆಗಳಲ್ಲಿ ಚೆನ್ನಾಗಿ ಕಲಿಸುವುದಿಲ್ಲ ಎಂದು ದೂರುತ್ತ, ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತ ಬಂದರು. ಈಗ ಶುಲ್ಕ ಹೆಚ್ಚಳ ಆಗುವಾಗ ಸರ್ಕಾರದ ಕಾಲು ಹಿಡಿಯಲು ಆರಂಭಿಸಿದ್ದಾರೆ. ನಮ್ಮದೇ ಸರ್ಕಾರಿ ಶಾಲೆಯನ್ನು ನಾವು ಉಳಿಸಬೇಕು, ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿಯೇ ಕೊಡಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಿ, ಶಿಕ್ಷಕ ವರ್ಗದ ಕಾರ್ಯಕ್ಷಮತೆಯ ಬಗ್ಗೆ ಆಗಾಗ ಶಾಲೆಗೆ ಭೇಟಿ ಕೊಟ್ಟು ಗಮನಹರಿಸುವುದು, ವಿಚಾರಿಸುವುದು ಮಾಡಿದ್ದರೆ ಇವತ್ತು ಖಾಸಗಿ ಶಾಲೆಗಳ ಮೋಹಕ್ಕೆ ಬಲಿಯಾಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಎಷ್ಟೊಂದು ದೊಡ್ಡ ಮೊತ್ತದ ಹಣವನ್ನು ಮಧ್ಯಮ ವರ್ಗದ ಜನ ಮಕ್ಕಳ ಶಾಲಾ ಶುಲ್ಕಕ್ಕೆ ವಿಧಿಸುತ್ತಿದೆ ಎಂಬುದೇ ಅಚ್ಚರಿ ಮೂಡಿಸುತ್ತದೆ. ಎಲ್ ಕೆ.ಜಿ, ಯುಕೆಜಿ ಮಕ್ಕಳಿಗೆ ಲಕ್ಷಗಟ್ಟಲೆ ಶುಲ್ಕ ಭರಿಸುತ್ತಾರೆ ಎಂದರೆ ಒಂದು ಪುಟ್ಟ ಮಗುವಿಗೆ ಲಕ್ಷಗಟ್ಟಲೆ ಖರ್ಚು ಮಾಡಿ ಕಲಿಸುವ ವಿಷಯವಾದರೂ ಏನಿದೆ? ಅದು ಏನನ್ನು ಕಲಿಯುತ್ತದೆ, ಆ ವಯಸ್ಸಿನಲ್ಲಿ ಆ ಮಗುವಿಗೆ ಏನು ಕಲಿಯಲು ಸಾಧ್ಯ? ಈ ಶುಲ್ಕದ ಮೊತ್ತಕ್ಕೂ ಆ ಮಗು ಒಂದು ವರ್ಷದಲ್ಲಿ ಕಲಿತದ್ದಕ್ಕೂ ಸಾರ್ಥಕ ಅನ್ನಿಸುವಂಥದ್ದು ಏನಾದರೂ ಇದೆಯೇ? ಅಥವಾ ಇದೇ ಕಲಿಕೆಯನ್ನು ಶುಲ್ಕವೇ ಇಲ್ಲದ ಸರ್ಕಾರಿ ಶಾಲೆಯಲ್ಲಿ ಮಗು ಕಲಿಯುತ್ತಿರಲಿಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಅವರನ್ನು ಕಾಡುವುದಿಲ್ಲವೇ?

ಲಕ್ಷ ಲಕ್ಷ ಖರ್ಚು ಪ್ರತಿ ವರ್ಷವೂ ಖಾಸಗಿ ಶಾಲಾ ಮಾಡಲೇಬೇಕಾದ ಅನಿವಾರ್ಯತೆ ಪೋಷಕರಿಗೆ ಇದೆ. ₹40 ಸಾವಿರ, ₹50 ಸಾವಿರ ಸಂಬಳಕ್ಕೆ ದುಡಿಯುವವರು ಅತ್ತ ಕುಟುಂಬದ ದೈನಂದಿನ ಖರ್ಚು ಇತ್ತ ಮಕ್ಕಳ ಶಾಲೆಯ ಖರ್ಚು ಹೊಂದಿಸಬೇಕೆಂದರೆ ಸಾಲದ ಮೊರೆ ಹೋಗಲೇಬೇಕಾಗುತ್ತದೆ. ಖಾಸಗಿ ಶಾಲೆಗೆ ಕೇವಲ ಲಕ್ಷಗಟ್ಟಲೆ ಶುಲ್ಕ ಭರಿಸಿದರೆ ಅಲ್ಲಿಗೆ ಮಗುವಿನ ಶಿಕ್ಷಣದ ಖರ್ಚು ಮುಗಿಯಿತು ಎಂದರ್ಥವಲ್ಲ, ಅದನ್ನು ಹೊರತುಪಡಿಸಿ ಪಠ್ಯಪುಸ್ತಕ, ಗುಣಮಟ್ಟದ ಬ್ಯಾಗು, ನೋಟ್ ಪುಸ್ತಕ ಇನ್ನೂ ಏನೇನು ಖರೀದಿಸಿ ಕೊಡಬೇಕೋ ಪ್ರತಿಯೊಂದೂ ಹೆಚ್ಚು ಬೆಲೆಯುಳ್ಳದ್ದೇ ಆಗಿರುತ್ತದೆ. ಅವರಿಗೆ ಕಡಿಮೆಯದ್ದು ತೆಗೆಸಿಕೊಟ್ಟರೆ ಅವರ ಸಹಪಾಠಿಯ ಮುಂದೆ ಆ ವಿದ್ಯಾರ್ಥಿ ಕಡಿಮೆ ಆಗಿಬಿಟ್ಟಾನು ಎಂಬ ಭಯ ಪೋಷಕರದ್ದು.
ಒಂದೇ ಸ್ಲೇಟನ್ನು ಒಂದರಿಂದ ಐದನೇ ತರಗತಿಯವರೆಗೆ ಬಳಸಿದ್ದಿದೆ. ಒಂದೇ ಬ್ಯಾಗು ಮೂರು ನಾಲ್ಕು ವರ್ಷ ಬಳಕೆಗೆ ಬರುತ್ತಿತ್ತು. ಅಥವಾ ಬ್ಯಾಗು ಇಲ್ಲದಿದ್ದರೆ ಸಣ್ಣ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಅದರಲ್ಲಿ ಪುಸ್ತಕ ತುಂಬಿಕೊಂಡು ಹೋಗುತ್ತಿದ್ದೆವು. ಆ ಕಾರಣಕ್ಕಾಗಿಯೇ ನಮ್ಮ ಶಾಲೆಯಲ್ಲಿ ಗುಜರಿ ಹೆಕ್ಕುವವರ ಮಕ್ಕಳೂ ಅತಿಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿ ಆಗಿರುತ್ತಿದ್ದದ್ದು. ಈಗಿನ ಮಕ್ಕಳಿಗೆ ಪ್ರತಿ ವರ್ಷ ಬ್ಯಾಗು ಸಹಿತ ಎಲ್ಲವೂ ಬದಲಾಗಬೇಕು. ಅವರ ಹಠಕ್ಕೆ ಪೋಷಕರು ಮಣಿಯಲೇಬೇಕು. ಖಾಸಗಿ ಶಾಲೆಯ ಬಸ್ಸುಗಳಿಗೆ ಮಕ್ಕಳು ಮಣಭಾರದ ಬ್ಯಾಗು ಹೊತ್ತು ಹತ್ತುವುದು ನೋಡಿದರೆ ಅಯ್ಯೋ ಎನಿಸುತ್ತದೆ. ಶಾಲೆಗೆ ಹೋಗುತ್ತಿದ್ದಾರೋ ಗಗನಯಾತ್ರೆಗೆ ಹೊರಟಿದ್ದಾರೋ ಎನ್ನುವ ಅನುಮಾನ ಬರುವಂತಿರುತ್ತದೆ ಅವರ ಸ್ಥಿತಿ. ಸರ್ಕಾರಿ ಶಾಲೆಯ ಮಕ್ಕಳ ಉಲ್ಲಾಸ ಕುಂದುವುದಿಲ್ಲ ಏಕೆಂದರೆ ಅವರಿಗೆ ಶಾಲೆ ನಡೆದುಕೊಂಡು ಹೋಗಬಹುದಾದಷ್ಟು ಅಂತರದಲ್ಲಿ ಇರುತ್ತದೆ. ರಸ್ತೆ ಬದಿಯಲ್ಲಿ ಒಂದೊಂದು ಊರಿನ ಹತ್ತಿಪ್ಪತ್ತು ವಿದ್ಯಾರ್ಥಿಗಳು ಒಟ್ಟಾಗಿ ಹರಟೆ ಹೊಡೆಯುತ್ತ ಶಾಲೆಗೆ ಬರುತ್ತಾರೆ. ಅಂತಹ ದೊಡ್ಡ ಭಾರವೇನೂ ಅವರ ಬ್ಯಾಗಿನಲ್ಲಿ ಇರುವುದಿಲ್ಲ.
ಸರ್ಕಾರಿ ಶಾಲೆಯಲ್ಲಿ ಏನು ಕಲಿಸುತ್ತಾರೆ? ಎಂದು ಹಲವರು ವ್ಯಂಗ್ಯವಾಗಿ ಕೇಳುವುದುಂಟು. ಸರ್ಕಾರಿ ಶಾಲೆಯಲ್ಲಿ ಕಲಿತವರೇನೂ ದಿಕ್ಕು ದೆಸೆಯಿಲ್ಲದೆ ಭಿಕ್ಷೆ ಬೇಡುತ್ತಿಲ್ಲವಲ್ಲ? ನೆಮ್ಮದಿಯಿಂದಲೇ ಇದ್ದಾರೆ ತಾನೆ? ಸರ್ಕಾರಿ ಶಾಲೆ ಏನು ಕಲಿಸುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಬದುಕು ಕಲಿಸುತ್ತದೆ ಎನ್ನುವುದಂತೂ ನಿಜ. ಸಮಾನತೆ, ಸಹಬಾಳ್ವೆ, ಸಹಕಾರ, ಮಮಕಾರ, ಸ್ವಾತಂತ್ರ್ಯ ಇವೆಲ್ಲವನ್ನೂ ಅನುಭವಿಸಲು ಸರ್ಕಾರಿ ಶಾಲೆಯಲ್ಲಿ ಸಾಧ್ಯವಿರುವಷ್ಟು ಖಾಸಗಿಯಲ್ಲಿ ಸಾಧ್ಯವಿರುವುದಿಲ್ಲ.

ಸರ್ಕಾರದ ತಪ್ಪೇನು?
ಸರ್ಕಾರಿ ಶಾಲೆಗಳ ಶಿಕ್ಷಣದ ಬಗ್ಗೆ ನಿಜಾರ್ಥದ ಕಾಳಜಿ ವಹಿಸಿದ್ದೇ ಆಗಿದ್ದರೆ ಇವತ್ತು ಖಾಸಗಿ ಶಾಲೆಗಳ ಆರ್ಭಟ ಹೆಚ್ಚುತ್ತಿರಲಿಲ್ಲ. ಸರ್ಕಾರಿ ಶಾಲೆಗಳ ಶಿಕ್ಷಣ ಗುಣಮಟ್ಟದ ಬಗ್ಗೆ ಸರ್ಕಾರ ಏಕೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ? ಏಕೆಂದರೆ ಯಾವುದೇ ರಾಜಕಾರಣಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿಲ್ಲ. ಒಂದು ಊರಿನಲ್ಲಿ ಒಬ್ಬ ಶಾಸಕನ ಮಗ ಅಥವಾ ಸಚಿವನ ಮಗಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾಳೆ ಎಂದಾಗಿದ್ದಿದ್ದರೆ ಆ ಶಾಲೆ ಸೌಕರ್ಯವಂಚಿತವಾಗಿ ಉಳಿಯುತ್ತಿತ್ತೇ? ಅಲ್ಲಿ ಗುಣಮಟ್ಟದ ಶಿಕ್ಷಣ ಸಾಧ್ಯ ಆಗುತ್ತಿರಲಿಲ್ಲವೇ? ಎಂದರೆ ತಮ್ಮ ಸ್ವಂತ ಲಾಭ, ಅನುಕೂಲ ಇದ್ದಾಗ ಮಾತ್ರ ಏನನ್ನಾದರೂ ಮಾಡಬಹುದೇ ಹೊರತು ಬಡವರ ಮಕ್ಕಳು ಓದುವ ಶಾಲೆಯನ್ನು ಹೆಚ್ಚು ಉದ್ಧಾರ ಮಾಡುವ ಅಗತ್ಯವಿಲ್ಲ ಎನ್ನುವ ಮನಸ್ಥಿತಿ.
ಇದನ್ನೂ ಓದಿ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ಪ್ರಶ್ನಿಸಿ, ಮೇ 20ರಂದು ಜನಾಗ್ರಹ ಸಮಾವೇಶ: ಬಡಗಲಪುರ ನಾಗೇಂದ್ರ
ಖಾಸಗಿ ಶಾಲೆಗಳ ಅಬ್ಬರವನ್ನು ಕೊನೆಗೊಳಿಸದೆ ಇದ್ದರೆ ಮುಂದೆಯೂ ಕೂಡ ಮಧ್ಯಮ ವರ್ಗ ಲಕ್ಷ ಲಕ್ಷ ಖರ್ಚು ಮಾಡುತ್ತಲೇ ಇರಬೇಕಾಗುತ್ತದೆ. ಸರ್ಕಾರಿ ಶಾಲೆಗಳ ಬಗ್ಗೆ, ಅಲ್ಲಿ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಆಗಬೇಕಾದ ಬಗ್ಗೆ ಗಂಭೀರ ಚಿಂತನೆ, ಅಗತ್ಯ ಹೋರಾಟ ನಡೆಯಬೇಕು. ಕಾಟಾಚಾರಕ್ಕೆ ಶಾಲೆಯನ್ನು ಅದರ ಪಾಡಿಗೆ ಬಿಟ್ಟು ಬಿಡುವುದಲ್ಲ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ, ಅವರ ವೇತನ, ಅವರ ಪ್ರತಿಭೆ, ಎಲ್ಲವೂ ಗಮನದಲ್ಲಿರಬೇಕು. ಇಲ್ಲಿ ನೇಮಕಾತಿ ಮಾಡಲಿಕ್ಕೇ ಸರ್ಕಾರಿ ಕಚೇರಿಗಳ ಟೇಬಲ್ಲಿನಿಂದ ಕಡತ ಮುಂದೆ ಸಾಗಲು ವರ್ಷವೇ ಬೇಕಾಗುತ್ತದೆ. ಇಡೀ ವ್ಯವಸ್ಥೆಯನ್ನು ಸರಿಪಡಿಸಲು ಜನಸಹಕಾರ ಬಹಳ ಮುಖ್ಯ. ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಲೇಬೇಕು, ಸರ್ಕಾರಿ ಶಾಲೆಗಳನ್ನು ಬಲಪಡಿಸಲೇಬೇಕು. ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವ ಕಾಲದಲ್ಲಿ ಮಕ್ಕಳ ಶುಲ್ಕದ ಹೊರೆ ಹೊತ್ತುಕೊಂಡು ಪೋಷಕರು ಹೈರಾಣಾಗುವಂತಾಗಬಾರದು. ಸರ್ಕಾರಿ ಶಾಲೆಯಲ್ಲಿಯೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎನ್ನುವ ಭರವಸೆಯನ್ನು ಸರ್ಕಾರವೂ ಮೂಡಿಸಬೇಕು.

ಶರೀಫ್ ಕಾಡುಮಠ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸದ್ಯ ಸೌದಿ ಅರೇಬಿಯಾದ ರಿಯಾಧ್ ನಲ್ಲಿದ್ದಾರೆ. ಪ್ರಜಾವಾಣಿ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ.
ಒಳ್ಳೆಯ ಬರಹ, ಆದರೆ ಅವರು ಹೇಳುತ್ತಿರುವ ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಕೊರತೆ ಇದೆ ಎನ್ನುವುದು ಯಾವ ವಿಷಯವನ್ನು ಉದ್ದೇಶಿಸಿ ಎನ್ನುವುದನ್ನು ಕೂಡ ತಿಳಿಸಿದರೆ ಉತ್ತಮ, ಅಥವಾ ಗುಣಮಟ್ಟ ಎಂದರೆ ಏನು ಎನ್ನುವುದನ್ನು ಆದರೂ ತಿಳಿಸಬೇಕು.
ಹೆಚ್ಚಿನ ಸರಕಾರಿ ಶಾಲೆಗಳನ್ನು ಉಳಿಸಬೇಕು ಎನ್ನುವ ಬರಹಗಾರರು ಆಗಲಿ, ಚಿಂತನೆಗಾರರು ಆಗಲಿ ಅಥವಾ ಹೋರಾಟ ಗಾರರು ಆಗಲಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಅಲ್ಲಿರುವ ವ್ಯವಸ್ಥೆಯನ್ನು ನೋಡಿ,ಅನುಭವಿಸಿ ಮಾತನಾಡುವುದಿಲ್ಲ. ದೂರದಿಂದ ಒಂದು ಕಲ್ಲು ನಮ್ಮದು ಇರಲಿ ಎಂದು ಬಿಸಾಡಿ ಬಿಡುತ್ತಾರೆ . ಇದರಿಂದ ಸರಕಾರಿ ಶಾಲೆಗೆ ಬರಲು ಮನಸ್ಸು ಮಾಡಿರುವ ಕೆಲವು ಪೋಷಕರು ಆದರೂ ದೂರ ಹೋಗುವ ಸಾಧ್ಯತೆ ಇದೆಯೇ ವಿನಃ , ಶಾಲೆಗೆ ಹತ್ತಿರ ಆಗುವ ಸಾಧ್ಯತೆ ಇರುವುದಿಲ್ಲ
ಸರಕಾರಿ ಶಾಲೆಗಳಲ್ಲಿ ಈಗ ಇರುವ ಕೊರತೆಗಳು ಎಂದರೆ ಬದ್ಧತೆ ಇಲ್ಲದ ಶಿಕ್ಷಕರು, ಅದು ಬಿಟ್ಟರೆ ಯಾವುದೇ ಶಿಕ್ಷಕರ ಕೊರತೆ ಕಾಣ ಸಿಗುವುದಿಲ್ಲ, ರಾಜ್ಯದಲ್ಲಿರುವ 50000 ದಷ್ಟು ಪ್ರಾಥಮಿಕ ಶಾಲೆಗಳಲ್ಲಿ ಇರುವಂತಹ ಶಿಕ್ಷಕರ ಕೊರತೆ ಸುಮಾರು 45000 ಇದರಲ್ಲಿ 35000 ದಷ್ಟು ಅತಿಥಿ ಶಿಕ್ಷಕರನ್ನು ಸರಕಾರ ನೇಮಿಸುತ್ತದೆ, ಅದಲ್ಲದೆ ಹೆಚ್ಚಿನ ಶಾಲೆಗಳಲ್ಲಿ ಆ ಶಾಲೆಯ ಎಸ್ಡಿಎಂಸಿ ಸಮಿತಿಯು ಗೌರವಧನವನ್ನು ಕೊಟ್ಟು ಕೂಡ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಯಾವುದೇ ರೀತಿಯಲ್ಲಿ ಶಿಕ್ಷಕರ ಕೊರತೆ ಆಗದ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡುತ್ತದೆ.
ಹೀಗಿರುವಾಗ ಮಕ್ಕಳಿಗೆ ಶಿಕ್ಷಣ ಲಭಿಸದೇ ಇರಲು ಕಾರಣವೇನು ? ಎಂಬುವುದರ ಬಗ್ಗೆ ಚರ್ಚೆಗಳು ಆದರೆ ಮಾತ್ರ ಸರಿಯಾದ ಶಿಕ್ಷಣ ಮಕ್ಕಳಿಗೆ ಸಿಗುವ ಸಾಧ್ಯತೆ ಇದೆ.
ಹೆಚ್ಚಿನ ಖಾಸಗಿ ಶಾಲೆಗಳಲ್ಲಿ ತರಬೇತಿ ಪಡೆಯದ ಶಿಕ್ಷಕರು ಇರುವಾಗ ಅಲ್ಲಿ ಒಳ್ಳೆಯ ಶಿಕ್ಷಣ ಸಿಗುತ್ತದೆ ಎನ್ನುವ ವ್ಯಾಮೋಹದಲ್ಲಿ ಅತೀ ಹೆಚ್ಚು ಶುಲ್ಕವನ್ನು ಕೊಟ್ಟು ಮಕ್ಕಳನ್ನು ದಾಖಲಾತಿ ಮಾಡುವ ಪೋಷಕರು, ಕಾಲ ಕಾಲಕ್ಕೆ ತರಬೇತಿ ಪಡೆಯುವ ಸರಕಾರಿ ಶಾಲೆಗಳ ಶಿಕ್ಷಕರಿಂದ ಒಳ್ಳೆಯ ಶಿಕ್ಷಣ ಸಿಗುವುದಿಲ್ಲ ಎಂದು ಕಣ್ಣು ಮುಚ್ಚಿ ನಂಬುತ್ತಾರೆ ಎಂದಾದರೆ, ಅದಕ್ಕೆ ಇಂತಹ ಬರಹಗಳು ಕೂಡ ಕಾರಣವಾಗುತ್ತದೆ ಎಂದರೆ ತಪ್ಪಾಗಲಾರದು
ಸರಕಾರಿ ಶಾಲೆಗಳಲ್ಲಿ ಈಗ ಇರುವಂತಹ ವ್ಯವಸ್ಥೆಯ ಅಡಿಯಲ್ಲಿ ಇರುವಂತಹ ಶಿಕ್ಷಕರು ಶಾಲೆಯ ಒಳಗೆ ಶಿಕ್ಷಣವನ್ನು ಬಿಟ್ಟು ಬೇರೆ ಎಲ್ಲಾ ಕೆಲಸಗಳಲ್ಲಿ ತೊಡಗಿಸಿ ಕೊಳ್ಳುತ್ತಾ, ಸರಕಾರಿ ಶಾಲೆಗಳಲ್ಲಿ ಸರಿಯಾದ ಶಿಕ್ಷಣವನ್ನು ನಾವು ಕೊಡುತ್ತಾ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾ ಇರುವುದು,ಸರಕಾರಿ ಶಾಲೆಗಳು ಈ ಅವಸ್ಥೆಗೆ ಬರಲು ಕಾರಣವೇ ವಿನ: ಬೇರೆ ಯಾವುದೇ ರೀತಿಯ ಬದಲಾವಣೆಗಳು ಸರಕಾರಿ ಶಾಲೆಗೆ ಆವಶ್ಯಕತೆ ಇರುವುದಿಲ್ಲ.