ವ್ಯಕ್ತಿಚಿತ್ರ | ಬೆಂಗಳೂರಿನ ನೂತನ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಎಂಥವರು?

Date:

Advertisements
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಹೊರಡಿಸಿದ್ದ ಸಮನ್ಸ್ ಮತ್ತು ಜನಾರ್ದನ ರೆಡ್ಡಿ ವಿರುದ್ಧದ ಬಂಧನ ವಾರಂಟ್‌ಅನ್ನು ಜಾರಿ ಮಾಡುವಲ್ಲಿ ಸೀಮಂತ್ ಕುಮಾರ್ ವಿಫಲರಾಗಿದ್ದರು. ರಾಜಕೀಯ ಒತ್ತಡಕ್ಕೆ ಮಣಿದು ಕರ್ತವ್ಯಲೋಪ ಎಸಗಿದ್ದರು ಎಂಬ ಗುರುತರ ಆರೋಪವಿದೆ. ಇದೇ ಕಾರಣಕ್ಕಾಗಿ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಿತ್ತು. ಈಗ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರು...

ಐಪಿಎಲ್‌ನ 18 ವರ್ಷಗಳ ಟೂರ್ನಿಯಲ್ಲಿ ಮೊದಲ ಬಾರಿಗೆ ಕಪ್‌ ಗೆದ್ದ ಆರ್‌ಸಿಬಿ ತಂಡದ ಸಂಭ್ರಮಾಚರಣೆಯು ಭಯಾನಕ ದಿನವಾಗಿ ಮಾರ್ಪಟ್ಟಿತ್ತು. ರಾಜ್ಯದಲ್ಲಿ ಸೂತಕದ ಛಾಯೆ ಆವರಿಸಿತ್ತು. ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಮತ್ತು 11 ಮಂದಿಯ ಸಾವು ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ್‌ ಸೇರಿದಂತೆ ಐವರು ಪೊಲೀಸ್‌ ಅಧಿಕಾರಿಗಳ ತಲೆದಂಡವಾಗಿದೆ. ದಯಾನಂದ್‌ ಅವರ ಅಮಾನತಿನಿಂದ ತೆರವಾದ ಹುದ್ದೆಗೆ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಸೀಮಂತ್ ಕುಮಾರ್ ನೇಮಕವು ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದು, ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ, ಸೀಮಂತ್ ಕುಮಾರ್ ಸಿಂಗ್ ಅವರು 1996ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ಮೂಲತಃ ಬಿಹಾರದವರು. ಕಳೆದ 30 ವರ್ಷಗಳಿಂದ ಕರ್ನಾಟಕ ಕೇಡರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ, ಅವರು ಬೆಂಗಳೂರು ನಗರದ 39ನೇ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

ಸೀಮಂತ್ ಕುಮಾರ್ ಔದ್ಯೋಗಿಕ ಪಯಣ

Advertisements

ರಾಜ್ಯದಲ್ಲಿ ವಿವಿಧ ಪೊಲೀಸ್‌ ಹುದ್ದೆಗಳನ್ನು ನಿಭಾಯಿಸಿರುವ ಸೀಮಂತ್‌ ಕುಮಾರ್, ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) 2000ನೇ ಇಸವಿಯಲ್ಲಿ ಕರ್ನಾಟಕಕ್ಕೆ ನಿಯೋಜನೆಗೊಂಡರು. 2004ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದರು. ಅಲ್ಲದೆ, 2010ರಲ್ಲಿ ಮಂಗಳೂರು ನಗರವನ್ನು ‘ಪೊಲೀಸ್ ಕಮಿಷನರೇಟ್’ ಆಗಿ ಮಾರ್ಪಡಿಸಿದಾಗ, ಮಂಗಳೂರು ನಗರದ ಮೊದಲ ಪೊಲೀಸ್‌ ಆಯುಕ್ತರಾಗಿ ಸೇವೆ ಸಲ್ಲಿಸಿದರು.

ಆನಂತರ, 2007-10ರಲ್ಲಿ ಬಳ್ಳಾರಿ ಜಿಲ್ಲೆಗೆ ಎಸ್‌ಪಿ ಆಗಿ ನೇಮಕಗೊಂಡರು. ಅದು ರಾಜ್ಯ ರಾಜಕಾರಣದಲ್ಲಿ ಹೊಸ ಬೆಳವಣಿಗೆಗೆ, ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಕಾರಣವಾಗಿದ್ದ ಕಾಲ. ಆಗ ಅವರ ವಿರುದ್ಧ ಅದಕ್ಷತೆ, ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು. ಅದಕ್ಕೂ ಮುನ್ನ 8 ವರ್ಷಗಳ ಕಾಲ ಕಳಂಕರಹಿತರಾಗಿ ಸೇವೆ ಸಲ್ಲಿಸಿದ್ದ ಸೀಮಂತ್ ಕುಮಾರ್ ವಿರುದ್ಧ ಭ್ರಷ್ಟ ಅಧಿಕಾರಿ ಎಂಬ ಗುರುತರ ಆರೋಪ ಕೇಳಿಬಂದಿತು. ಪೊಲೀಸ್ ಅಧಿಕಾರಿಗಳ ವಲಯದಲ್ಲಿ ಅವರನ್ನು ‘ಬಳ್ಳಾರಿ ರೆಡ್ಡಿಯ ವ್ಯಕ್ತಿ’ ಎಂದು ಕರೆಯಲಾಯಿತು. ಆ ಕಾರಣಕ್ಕಾಗಿ ಅವರು ಸಿಬಿಐ ತನಿಖೆಗೂ ಒಳಪಡಬೇಕಾಯಿತು.

ಈ ಲೇಖನ ಓದಿದ್ದೀರಾ?: ಬೆಂಗಳೂರು ದುರಂತ | ಭೀಕರ ಘಟನೆಗೆ ಏನೆಲ್ಲ ಕಾರಣಗಳು– ಸಂಪೂರ್ಣ ವರದಿ

ಬಳ್ಳಾರಿಯಿಂದ ಸೀಮಂತ್ ಕುಮಾರ್ ಅವರನ್ನು ಮಂಗಳೂರಿಗೆ ಪೊಲೀಸ್ ಆಯುಕ್ತರಾಗಿ ವರ್ಗಾವಣೆ ಮಾಡಲಾಯಿತು. ನಂತರ, ಮಂಡ್ಯ, ಕೊಡಗು ಜಿಲ್ಲೆಯ ಎಸ್‌ಪಿಯಾಗಿ ಸೇವೆ ಸಲ್ಲಿಸಿದರು. ಉಡುಪಿ ಭಾಗದಲ್ಲಿ ‘ಆ್ಯಂಟಿ ನಕ್ಸಲ್ ಫೋರ್ಸ್’ (ಎಎನ್ಎಫ್) ಕಮಾಂಡರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ಸೀಮಂತ್ ಕುಮಾರ್ ಅವರನ್ನು 2020ರಲ್ಲಿ ಮಂಗಳೂರು ವಿಭಾಗದ ಪಶ್ಚಿಮ ವಲಯದ ಐಜಿಪಿಯಾಗಿ ನೇಮಿಸಲಾಗಿತ್ತು. ಆದರೆ, ಆ ಹುದ್ದೆಯನ್ನು ಸ್ವೀಕರಿಸಲು ಸೀಮಂತ್ ಕುಮಾರ್ ನಿರಾಸಕ್ತಿ ತೋರಿಸಿದ್ದರು. ಹೀಗಾಗಿ, ಅವರನ್ನು ಬೆಂಗಳೂರಿನ ಸೆಂಟ್ರಲ್ ರೇಂಜ್‌ನ ಐಜಿಪಿಯಾಗಿ ನೇಮಿಸಲಾಯಿತು. ಜೊತೆಗೆ, ಬೆಂಗಳೂರು ಪೂರ್ವ ವಿಭಾಗದ ಅಡಿಷನಲ್ ಪೊಲೀಸ್ ಕಮಿಷನರ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಈಗ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ನೇಮಕಗೊಳ್ಳುವ ಮೊದಲು ಅವರು ಬೆಂಗಳೂರು ಮೆಟ್ರೋಪಾಲಿಟನ್ ಟಾಸ್ಕ್ ಫೋರ್ಸ್‌ನ ಎಡಿಜಿಪಿಯಾಗಿ ಸೇವೆ ಸಲ್ಲಿಸುತ್ತಿದ್ದರು.

2020ರಲ್ಲಿ ದೇಶಾದ್ಯಂತ ಆಕ್ರಮಿಸಿಕೊಂಡ ಕೊರೋನ ಸೋಂಕಿನ ಸಮಯದಲ್ಲಿ ಸೀಮಂತ್ ಕುಮಾರ್ ಅವರು ಬಿಹಾರ ಮತ್ತು ಝಾರ್ಖಂಡ್‌ನಿಂದ ಬೆಂಗಳೂರಿಗೆ ವಲಸೆ ಬಂದಿದ್ದ ವಲಸಿಗ ಕಾರ್ಮಿಕರಿಗೆ ನೆರವು ನೀಡುವ ನೋಡಲ್ ಅಧಿಕಾರಿಯಾಗಿದ್ದರು. ಆ ಸಮಯದಲ್ಲಿ ಅವರ ನೇತೃತ್ವದ ತಂಡವು ಎನ್‌ಜಿಒಗಳು, ಐಟಿ ಉದ್ಯೋಗಿಗಳು ಹಾಗೂ ದಾನಿಗಳ ನೆರವು ಪಡೆದು 60,000ಕ್ಕೂ ಹೆಚ್ಚು ಆಹಾರ ಕಿಟ್‌ಗಳನ್ನು ಕಾರ್ಮಿಕರಿಗೆ ವಿತರಿಸಿತ್ತು. ಅಲ್ಲದೆ, ಸಾವಿರಾರು ಕಾರ್ಮಿಕರಿಗೆ ಆಶ್ರಯ ಮತ್ತು ಸಾರಿಗೆ ವ್ಯವಸ್ಥೆ ಮಾಡಿತ್ತು.

ಈ ನಡುವೆ, 2022ರಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಸೀಮಂತ್ ಕುಮಾರ್ ಅವರನ್ನು ‘ಆ್ಯಂಟಿ ಕರಪ್ಶನ್ ಬ್ಯೂರೋ’ (ಎಸಿಬಿ) ಮುಖ್ಯಸ್ಥರನ್ನಾಗಿ ನೇಮಿಸಿತ್ತು. ಎಸಿಬಿಗೆ ಸೀಮಂತ್ ಕುಮಾರ್ ಅವರ ನೇಮಕದ ವಿರುದ್ಧ ಭಾರೀ ಆಕ್ಷೇಪಗಳು ಕೇಳಿಬಂದಿದ್ದವು. ಅವರ ನೇಮಕಕ್ಕೂ ಕೆಲವೇ ದಿನಗಳ ಮೊದಲು ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌.ಪಿ ಸಂದೇಶ್‌ ಅವರು, ”ಈ ಭ್ರಷ್ಟರೆಲ್ಲ ಸೇರಿ ನನ್ನನ್ನೇ ವರ್ಗಾವಣೆ ಮಾಡಿಸುವಷ್ಟು ಶಸಕ್ತರು” ಎಂದು ಕಿಡಿಕಾರಿದ್ದರು. ನ್ಯಾಯಮೂರ್ತಿ ಸಂದೇಶ್ ಅವರು ಯಾರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರೋ ಅವರಲ್ಲಿ ಸೀಮಂತ್‌ ಕುಮಾರ್ ಕೂಡ ಒಬ್ಬರು ಎಂದು ‘ಕರ್ನಾಟಕ ರಾಷ್ಟ್ರ ಸಮಿತಿ’ ಪಕ್ಷದ ಮುಖ್ಯಸ್ಥ ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದರು. ಸರ್ಕಾರ ಅಂತಹ ಅಧಿಕಾರಿಯನ್ನು ‘ಆ್ಯಂಟಿ ಕರಪ್ಶನ್ ಬ್ಯೂರೋ’ (ಎಸಿಬಿ) ಮುಖ್ಯಸ್ಥರನ್ನಾಗಿ ನೇಮಿಸಿ, ಕುರಿ ಕಾಯಲು ತೋಳ ನೇಮಿಸಿದಂತೆ ಎಂದು ಸಾರ್ವಜನಿಕ ದೂಷಣೆಗೆ ಒಳಗಾಯಿತು.

ಸೀಮಂತ್ ಕುಮಾರ್ ವಿರುದ್ದದ ಗಂಭೀರ ಆರೋಪಗಳು

2007-10ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಆಗಿದ್ದ ಸೀಮಂತ್ ಕುಮಾರ್ ಅವರು ಬಳ್ಳಾರಿಯ ಗಣಿ ಕುಳ, ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಜನಾರ್ದನ ರೆಡ್ಡಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದರು ಎಂಬ ಗಂಭೀರ ಆರೋಪಗಳಿವೆ. ರೆಡ್ಡಿ ಅವರ ‘ಓಬುಳಾಪುರಂ ಮೈನಿಂಗ್ ಕಂಪನಿ’ (ಒಎಂಸಿ) ನಡೆಸಿದ್ದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಹೊರಡಿಸಿದ್ದ ಸಮನ್ಸ್ ಮತ್ತು ರೆಡ್ಡಿ ವಿರುದ್ಧದ ಬಂಧನ ವಾರಂಟ್‌ಅನ್ನು ಜಾರಿ ಮಾಡುವಲ್ಲಿ ಸೀಮಂತ್ ಕುಮಾರ್ ವಿಫಲರಾಗಿದ್ದಾರೆ. ಅವರು ರಾಜಕೀಯ ಒತ್ತಡಕ್ಕೆ ಮಣಿದು ಕರ್ತವ್ಯಲೋಪ ಎಸಗಿದ್ದಾರೆ ಎಂಬ ಗುರುತರ ಆರೋಪವಿದೆ. ಇದೇ ಕಾರಣಕ್ಕಾಗಿ ಅವರನ್ನು ಸಿಬಿಐ ತನಿಖೆಗೆ ಒಳಪಡಿಸಿತ್ತು. ಆದರೆ, ಆರೋಪಗಳು ಸಾಬೀತಾಗದ ಕಾರಣ, ಅವರು ತಮ್ಮ ವೃತ್ತಿಯನ್ನು ಮುಂದುವರೆಸಿದರು.

ಅಲ್ಲದೆ, 2012ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಹೋಮ್‌ಸ್ಟೇ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಮಂಗಳೂರಿನಿಂದ ವರ್ಗಾವಣೆ ಮಾಡಲಾಗಿತ್ತು. ಆ ವರ್ಗಾವಣೆಯು ಸೀಮಂತ್ ಕುಮಾರ್ ಅವರ ಸಾಮರ್ಥ್ಯದ ಬಗ್ಗೆ ಸಾರ್ವಜನಿಕವಾಗಿ ಅನುಮಾನಗಳು ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಬೆಂಗಳೂರು ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್

ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರಂತ ಕಾಲ್ತುಳಿತ ಘಟನೆಯಲ್ಲಿ 11 ಮಂದಿ ಮೃತಪಟ್ಟ ಬಳಿಕ, ಇದ್ದುದರಲ್ಲಿಯೇ ದಕ್ಷ ಅಧಿಕಾರಿ ಎನಿಸಿಕೊಂಡಿದ್ದ ಕನ್ನಡಿಗ ಬಿ. ದಯಾನಂದ ಅವರನ್ನು ಅಮಾನತುಗೊಳಿಸಿ, ಬೆಂಗಳೂರು ಪೊಲೀಸ್‌ ಆಯುಕ್ತ ಹುದ್ದೆಗೆ ಸೀಮಂತ್ ಕುಮಾರ್ ಅವರನ್ನು ಸರ್ಕಾರ ನೇಮಕ ಮಾಡಿದೆ. ತಾವು ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಸೀಮಂತ್ ಕುಮಾರ್ ಅವರು ಆರ್‌ಸಿಬಿ ತಂಡದ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X