ಹೆಲ್ತ್ ಕೇರ್ ಗ್ಲೋಬಲ್ ಎಂಟಪ್ರೈಸಸ್‌ನಲ್ಲಿ ನಿಯಮಬಾಹಿರ ವೈದ್ಯಕೀಯ ಪ್ರಯೋಗದ ಆರೋಪಕ್ಕೆ ಸಂಬಂಧಿಸಿದಂತೆ, ಪರಿಶೀಲನೆ ನಡೆಸಿ ವರದಿ ನೀಡಲು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ತಜ್ಞರ ಸಮಿತಿ ರಚಿಸಿ ಆದೇಶ ಹೊರಡಿಸಿದೆ. ಸಮಿತಿಯು ಜು.3 ರಿಂದ 5ರವೆರೆಗೆ ಎಚ್‌ಸಿಜಿ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸುತ್ತಿದೆ.
ಬೆಂಗಳೂರಿನ ನಗರದ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಒಂದಾದ ಹೆಲ್ತ್ ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಚ್‌ಸಿಜಿ)ನಲ್ಲಿ ನಡೆಸುವ ಪ್ರಯೋಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ರೋಗಿಗಳನ್ನೇ ಗುರಿಯಾಗಿಸಿಕೊಂಡು ಕ್ಲಿನಿಕಲ್ ಪ್ರಯೋಗ ನಡೆಸಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.
ಇಂತಹ ಆರೋಪ ಮಾಡಿದವರು ಬೇರಾರು ಅಲ್ಲ, ಆಸ್ಪತ್ರೆಯ ಎಥಿಕಲ್ ಕಮಿಟಿಯ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣ ಭಟ್. ಇದರಿಂದಾಗಿ ಸಂಸ್ಥೆಯ ಆಂತರಿಕ ಕಾರ್ಯವಿಧಾನಗಳ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ರೋಗಿಗಳ ಸುರಕ್ಷತೆ, ಸಂಸ್ಥೆಯ ನೈತಿಕತೆ ಹಾಗೂ ದಾಖಲಾತಿಗಳ ಬಗ್ಗೆ ಕೆಲವು ಪ್ರಶ್ನೆಗಳು ಮೂಡಿವೆ.
ಎಚ್‌ಸಿಜಿ ಆಸ್ಪತ್ರೆಯಲ್ಲಿ ತಮ್ಮಿಂದ ಏನೂ ಬದಲಾವಣೆ ತರಲು ಆಗುತ್ತಿಲ್ಲವಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿರುವ ನಿವೃತ್ತ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಅವರು ಎಥಿಕಲ್ ಕಮಿಟಿಯ ಮುಖ್ಯಸ್ಥ ಸ್ಥಾನವನ್ನು ಈಗ ತ್ಯಜಿಸಿದ್ದಾರೆ.
ಹಾಗೆಯೇ ಎಚ್‌ಸಿಜಿ ಕ್ಲಿನಿಕಲ್ ಪ್ರಯೋಗಗಳಿಗೆ ಬಡ ರೋಗಿಗಳ ಬಳಕೆ ಕುರಿತು ಮಾಹಿತಿ ಬಹಿರಂಗವಾಗುತ್ತಿದ್ದಂತೆ ಆಸ್ಪತ್ರೆಯ ಉನ್ನತ ಆಡಳಿತ ಮಂಡಳಿಯಲ್ಲಿ ಕಂಪನವಾಗಿದೆ. ಸಿಇಒ ರಾಜ್ ಗೋರೆ ಮತ್ತು ವೈದ್ಯಕೀಯ ವ್ಯವಹಾರಗಳ ನಿರ್ದೇಶಕ ಡಾ. ಹರೀಶ್ ರೆಡ್ಡಿ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಕನಿಷ್ಠ ಆರು ವೈದ್ಯರು ಆಸ್ಪತ್ರೆ ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಕ್ಯಾನ್ಸರ್ ಆಸ್ಪತ್ರೆ ಎಚ್‌ಸಿಜಿ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಅಧೀನದ ಭಾರತೀಯ ಔಷಧ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಹೆಲ್ತ್ ಕೇರ್ ಗ್ಲೋಬಲ್ ಎಂಟಪ್ರೈಸಸ್‌ನಲ್ಲಿ ನಿಯಮಬಾಹಿರ ವೈದ್ಯಕೀಯ ಪ್ರಯೋಗದ ಆರೋಪಕ್ಕೆ ಸಂಬಂಧಿಸಿದಂತೆ, ಪರಿಶೀಲನೆ ನಡೆಸಿ ವರದಿ ನೀಡಲು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ತಜ್ಞರ ಸಮಿತಿ ರಚಿಸಿ ಆದೇಶ ಹೊರಡಿಸಿದೆ.
ಕೇಂದ್ರ ಸಹಾಯಕ ಔಷಧ ನಿಯಂತ್ರಕ ಡಾ. ಬಿಕಾಶ್ ರಾಯ್, ಸಿಡಿಎಸ್‌ಸಿಒ ಬೆಂಗಳೂರು ವಲಯ ಕಚೇರಿ ಔಷಧ ನಿರೀಕ್ಷಕಿ ಸುನಿತಾ ಜೋಶಿ, ಸಿಡಿಎಸ್‌ಸಿಒ ನವದೆಹಲಿಯ ಪ್ರಧಾನ ಕಚೇರಿ ಅಧಿಕಾರಿಗಳು ಮತ್ತು ವಿಷಯ ತಜ್ಞರನ್ನು ಸಮಿತಿ ಒಳಗೊಂಡಿದೆ. ಈ ಸಮಿತಿಯು ಜು.3 ರಿಂದ 5ರವೆರೆಗೆ ಎಚ್‌ಸಿಜಿ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸುತ್ತಿದೆ.

ಆರೋಪಗಳ ಕುರಿತು ಎಚ್‌ಸಿಜಿ ಆಸ್ಪತ್ರೆಯ ಮೆಡಿಕಲ್ ಲಾ ಮತ್ತು ಎಥಿಕ್ಸ್ ವಿಭಾಗದ ಹಿರಿಯ ವೈದ್ಯ, ಕಾರ್ಯದರ್ಶಿ ಡಾ.ರಮೇಶ್ ಎಸ್. ಬಿಳಿಮಗ್ಗ ಅವರನ್ನು ಈ ದಿನ.ಕಾಂ ಮಾತನಾಡಿಸಿದಾಗ, “ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ತಜ್ಞರ ಸಮಿತಿ ಪರಿಶೀಲನೆಗೆ ಆಗಮಿಸಿದೆ. ನಮ್ಮಿಂದ ಯಾವ ಲೋಪವೂ ಆಗಿಲ್ಲ. ಸ್ಪಷ್ಟನೆ ನೀಡುತ್ತಿದ್ದೇವೆ. ಸಮಿತಿಯಿಂದ ಮೂರು ದಿನ ಪರಿಶೀಲನೆ ನಡೆಯಲಿದೆ. ಸದ್ಯಕ್ಕೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ” ಎಂದು ಹೇಳಿದರು.
ಅಮೆರಿಕ ಸಂಸ್ಥೆಯಿಂದಲೂ ಆರೋಪ
2023ರಲ್ಲಿ ಅಮೆರಿಕ ಮೂಲದ ಔಷಧೀಯ ದಿಗ್ಗಜ ಎಲಿ ಲಿಲ್ಲಿ ಸಂಸ್ಥೆ ಕ್ಲಿನಿಕಲ್ ಟ್ರಯಲ್‌ಗೆ ಬಡ ರೋಗಿಗಳನ್ನು ಬಳಸುತ್ತಿರುವ ಕುರಿತು ಶಿಷ್ಟಾಚಾರ ಉಲ್ಲಂಘನೆಗಳನ್ನು ಉಲ್ಲೇಖಿಸಿ ಎಚ್‌ಸಿಜಿಯೊಂದಿಗಿನ ಕ್ಲಿನಿಕಲ್ ಅಧ್ಯಯನವನ್ನು ಸ್ಥಗಿತಗೊಳಿಸಿದೆ.
ಈ ಬೆಳವಣಿಗೆ ನಂತರ ಎಚ್‌ಸಿಜಿಯಲ್ಲಿ ನಡೆಸಲಾಗುತ್ತಿರುವ ಪ್ರಯೋಗಗಳ ಪಾರದರ್ಶಕತೆ, ಪ್ರಾಮಾಣಿಕತೆ ಹಾಗೂ ರೋಗಿಗಳ ಸುರಕ್ಷತೆ ಕುರಿತು ಸಾಕಷ್ಟು ಕಳವಳಗಳು ಹೆಚ್ಚಾಗಿವೆ. ಎಚ್‌ಸಿಜಿಯಲ್ಲಿ ಎಥಿಕಲ್ ಕಮಿಟಿಯ ಕೆಲವು ಸದಸ್ಯರು ಹಾಗೂ ಸಂಸ್ಥೆಯ ಆಡಳಿತ ಮಂಡಳಿಯು ಗಂಭೀರ ಅಕ್ರಮಗಳ ಬಗ್ಗೆ ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಸರಿಯಾದ ಕ್ರಮ ತೆಗೆದುಕೊಂಡಿಲ್ಲ ಎನ್ನುವ ಆರೋಪ ಸಹ ಇದೆ.

ಹಿತಾಸಕ್ತಿ ಸಂಘರ್ಷ
ಎಚ್‌ಸಿಜಿ ಕ್ಲಿನಿಕಲ್ ಟ್ರಯಲ್ಸ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಡಾ. ಸತೀಶ್ ವಿರುದ್ಧದ ಹಿತಾಸಕ್ತಿ ಸಂಘರ್ಷ ಆರೋಪ ಸಹ ಇದೆ. ಸತೀಶ್ ಅವರು ಆಸ್ಪತ್ರೆಯಲ್ಲಿ ಎರಡು ಹುದ್ದೆಗಳನ್ನು ನಿರ್ವಹಿಸುತ್ತಿದ್ದು, ಕ್ಲಿನಿಕಲ್ ಟ್ರಯಲ್‌ಗಳ ಹಣಕಾಸು ಮೇಲುಸ್ತುವಾರಿ ಜತೆಗೆ ಕ್ಲಿನಿಕಲ್ ಟ್ರಯಲ್‌ನ ಪ್ರಧಾನ ತನಿಖಾಧಿಕಾರಿಯಾಗಿ 15ರಿಂದ 20 ಪ್ರಕರಣ ನಿರ್ವಹಿಸಿದ್ದರು ಎನ್ನುವ ಮಾಹಿತಿ ಇದೆ.
ಕೆಲ ಪ್ರಯೋಗಗಳಲ್ಲಿ ಪ್ರಧಾನ ತನಿಖಾಧಿಕಾರಿಯಾಗಿ ಡಾ.ಸತೀಶ್ ಕಾರ್ಯನಿರ್ವಹಿಸುತ್ತಿದ್ದರು. ಇದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಾರ್ಗಸೂಚಿಗಳ ಪ್ರಕಾರ ವಿರುದ್ಧವಾಗಿದೆ. ಐಸಿಎಂಆರ್ ನಿಯಮಗಳ ಪ್ರಕಾರ, ಎಥಿಕಲ್ ಕಮಿಟಿಯ ಸದಸ್ಯರು ಅಥವಾ ನಿರ್ದೇಶಕರಿಗೆ ಮಾತ್ರ ಪ್ರಧಾನ ತನಿಖಾಧಿಕಾರಿಗಳಾಗುವ ಅವಕಾಶವಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಪಾಯಕಾರಿ ಸೈಬರ್ ಅಪರಾಧ ಕುರಿತು ಜನ ಜಾಗೃತರಾಗಬೇಕಿದೆ
ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶ
ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ಪಡೆಯುವಷ್ಟು ಆರ್ಥಿಕವಾಗಿ ಸಬಲರಲ್ಲದ ರೋಗಿಗಳು ನಿಮಗೆ ಕಂಡುಬಂದರೆ ಕ್ಲಿನಿಕಲ್ ಟ್ರಯಲ್‌ಗೆ ಶಿಫಾರಸು ಮಾಡಿ ಎಂದು ಎಚ್‌ಸಿಜಿ ಆಸ್ಪತ್ರೆಯ ಕ್ಲಿನಿಕಲ್ ಟ್ರಯಲ್ಸ್ ನಿರ್ದೇಶಕ ಡಾ. ಸತೀಶ್ ಅವರು 2025ರಲ್ಲಿ ‘ಬೆಂಗಳೂರು ಆಂಕಾಲಜಿ ಗ್ರೂಪ್’ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಸಂದೇಶ ಕಳುಹಿಸಿದ್ದರು ಎನ್ನುವ ಮಾಹಿತಿ ಇದೆ.
ಇದಕ್ಕೆ ಅದೇ ಗ್ರೂಪ್‌ನಲ್ಲಿದ್ದ ಕ್ಯಾನ್ಸರ್ ವೈದ್ಯರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಸಾಮಾಜಿಕ ಆರ್ಥಿಕ ಸ್ಥಿತಿಯನ್ನು ಆಧರಿಸಿ ಕ್ಲಿನಿಕಲ್ ಟ್ರಯಲ್‌ಗೆ ರೋಗಿಗಳನ್ನು ಆಯ್ಕೆ ಮಾಡುವುದು ನೈತಿಕತೆಯ ವಿರೋಧ ಎಂದು ಪದ್ಮಶ್ರೀ ಪುರಸ್ಕೃತ ಡಾ. ಕೆ.ಎಸ್ ಗೋಪಿನಾಥ್ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಡಾ. ಸತೀಶ್ ಅವರು ಕ್ಷಮೆ ಕೇಳಿದ್ದರು ಎನ್ನಲಾಗಿದೆ.

ಎಚ್‌ಸಿಜಿ ಅಧ್ಯಕ್ಷ ಡಾ. ಬಿ.ಎಸ್. ಅಜಯ್‌ಕುಮಾರ್ ಸ್ಪಷ್ಟನೆ
ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್ ಪರವಾಗಿ ಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ಬಿ.ಎಸ್. ಅಜಯ್‌ಕುಮಾರ್ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, “ಭಾರತ ಮತ್ತು ಆಫ್ರಿಕಾದಲ್ಲಿ ಕ್ಯಾನ್ಸರ್ ಆರೈಕೆಯಲ್ಲಿ ಮುಂಚೂಣಿಯಲ್ಲಿರುವ ಹೆಲ್ತ್‌ಕೇರ್ ಗ್ಲೋಬಲ್ ಬಗ್ಗೆ ಇತ್ತೀಚೆಗೆ ಕೆಲವು ಅಸತ್ಯ ಮತ್ತು ದೃಢಪಡಿಸದ ಮಾಹಿತಿಗಳು ಹರಡುತ್ತಿವೆ ಎಂಬುದನ್ನು ನಾವು ಗಮನಿಸಿದ್ದೇವೆ. ನಾವು ಡಿಸಿಜಿಐ ಮತ್ತು ಐಸಿಎಂಆರ್ ಸೇರಿದಂತೆ ಎಲ್ಲ ನಿಯಂತ್ರಕ ಸಂಸ್ಥೆಗಳ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ. ಈ ಬಗ್ಗೆ ಯಾವುದೇ ಸಂದೇಹವಿಲ್ಲ” ಎಂದು ತಿಳಿಸಿದ್ದಾರೆ.
“ನಾವು ಪ್ರಸ್ತುತ ಅನೇಕ ಕ್ಲಿನಿಕಲ್ ಟ್ರಯಲ್‌ಗಳನ್ನು ಯಶಸ್ವಿಯಾಗಿ ಮತ್ತು ಸಂಪೂರ್ಣ ಪಾರದರ್ಶಕತೆಯೊಂದಿಗೆ ನಡೆಸುತ್ತಿದ್ದೇವೆ. ಇವು ಎಥಿಕ್ಸ್ ಕಮಿಟಿಯ ಅನುಮೋದನೆಯೊಂದಿಗೆ ನಡೆಯುತ್ತಿದ್ದು, ರೋಗಿಗಳ ಸುರಕ್ಷತೆಗೆ ನಾವು ಗರಿಷ್ಠ ಆದ್ಯತೆ ನೀಡುತ್ತೇವೆ. ಅತ್ಯುತ್ತಮ ಗುಣಮಟ್ಟದ ಆರೈಕೆಯನ್ನು ನೀಡುವ ನಮ್ಮ ಬದ್ಧತೆ ಅಚಲವಾಗಿದೆ” ಎಂದು ಹೇಳಿದ್ದಾರೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.