ಮತ್ತೆ ಅಧ್ಯಕ್ಷರಾದ ಷಡಾಕ್ಷರಿ: ಸರ್ಕಾರಿ ನೌಕರರ ಹಿತಾಸಕ್ತಿ ಹಿನ್ನೆಲೆಗೆ; ಗುಂಪುಗಾರಿಕೆ – ಭ್ರಷ್ಟಾಚಾರ ಮುನ್ನೆಲೆಗೆ

Date:

Advertisements
ರಾಜ್ಯದಲ್ಲಿ 5.25 ಲಕ್ಷ ಸರ್ಕಾರಿ ನೌಕರರ ಸದಸ್ಯತ್ವ ಹೊಂದಿರುವ ಸರ್ಕಾರಿ ನೌಕರರ ಸಂಘ ಸರ್ವಾಧಿಕಾರದ ಆಡಳಿತಕ್ಕೆ ಸಿಕ್ಕು ನಲುಗಿದೆ ಎನ್ನುವ ಆರೋಪ ಸಂಘದೊಳಗಿವೆ. ರಾಜ್ಯಾಧ್ಯಕ್ಷರು ನೇರವಾಗಿ ಸದಸ್ಯತ್ವ ಪಡೆದ ನೌಕರರಿಂದ ಆಯ್ಕೆಯಾಗುತ್ತಿಲ್ಲ. ಕೇವಲ ನೂರಾರು ಸಂಖ್ಯೆಯ ಪ್ರತಿನಿಧಿಗಳಿಗೆ ಮತದಾನಕ್ಕೆ ಅವಕಾಶಕೊಟ್ಟು, ಲಕ್ಷಗಟ್ಟಲೇ ಹಣ ಸುರಿದರೆ ಯಾರು ಬೇಕಾದರೂ ಅಧ್ಯಕ್ಷರಾಗಬಹುದು ಎನ್ನುವ ವಾತಾವರಣ ಸಂಘದಲ್ಲಿ ನಿರ್ಮಾಣವಾಗಿದೆ.

ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿ ಎಸ್‌ ಷಡಾಕ್ಷರಿ ಮರು ಆಯ್ಕೆಯಾಗಿದ್ದಾರೆ. ರಾಜ್ಯ ಖಜಾಂಚಿಯಾಗಿ ಶಿವರುದ್ರಯ್ಯ ವಿ.ವಿ ಗೆದ್ದಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಖಜಾಂಚಿ ಹುದ್ದೆಗೆ ಎರಡು ಬಣಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟು, ಸಂಘದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ ಎಸ್ ಷಡಾಕ್ಷರಿ ಹಾಗೂ ಸಂಘದ ಮಾಜಿ ಅಧ್ಯಕ್ಷ ಬಿ ಪಿ ಮಂಜೇಗೌಡರ ಸಹೋದರ ಬಿ ಪಿ ಕೃಷ್ಣೇಗೌಡ ನಡುವೆ ತೀವ್ರ ಸ್ಪರ್ಧೆ ಉಂಟಾಗಿತ್ತು.

ಶುಕ್ರವಾರ (ಡಿ.27) ನಡೆದ ಚುನಾವಣೆಯಲ್ಲಿ ಸಿ ಎಸ್‌ ಷಡಾಕ್ಷರಿ ಅವರಿಗೆ 507 ಮತಗಳು ಹಾಗೂ ಪ್ರತಿಸ್ಪರ್ಧಿ ಬಿ ಪಿ ಕೃಷ್ಣೇಗೌಡ ಅವರಿಗೆ 442 ಮತಗಳು ದೊರೆತಿವೆ. ಆ ಮೂಲಕ ಷಡಾಕ್ಷರಿ ಪ್ರತಿಸ್ಪರ್ಧಿಗಿಂತ 65 ಹೆಚ್ಚು ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಷಡಾಕ್ಷರಿ ಬಣದ ನಾಗರಾಜ ಆರ್‌. ಜುಮ್ಮನ್ನವರ ಸೋಲು ಕಂಡಿದ್ದಾರೆ. ಬಿ ಪಿ ಕೃಷ್ಣೇಗೌಡ ಬಣದ ವಿ ವಿ ಶಿವರುದ್ರಯ್ಯ 18 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಶಿವರುದ್ರಯ್ಯ 485 ಮತಗಳನ್ನು ಪಡೆದರೆ, ನಾಗರಾಜ ಅವರು 467 ಪಡೆದಿದ್ದಾರೆ.

Advertisements

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯಿಂದ ಆರಂಭಗೊಂಡು ರಾಜ್ಯ ಸಂಘದ ಅಧ್ಯಕ್ಷರು, ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಸೆ. 17ರಿಂದ ವಿವಿಧ ಹಂತದಲ್ಲಿ ಆರಂಭವಾಗಿತ್ತು. ಮೊದಲ ಹಂತದಲ್ಲಿ ಮೂರು ಶೈಕ್ಷಣಿಕ ಜಿಲ್ಲೆ ಒಳಗೊಂಡ 33 ಜಿಲ್ಲೆಗಳು ಹಾಗೂ 191 ತಾಲ್ಲೂಕುಗಳ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ನಂತರ ಆಯಾ ತಾಲೂಕು ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರು, ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು. ತಾಲ್ಲೂಕು, ಜಿಲ್ಲಾ ಘಟಕಗಳ ತಲಾ ನಾಲ್ವರು ಪದಾಧಿಕಾರಿಗಳು ಸೇರಿದಂತೆ ಬೆಂಗಳೂರು ನಗರ ವ್ಯಾಪ್ತಿಯ 102 ರಾಜ್ಯ ಪರಿಷತ್‌ ಸದಸ್ಯರು ಹಾಗೂ ಎಂಟು ಯೋಜನಾ ಘಟಕಗಳ ಪದಾಧಿಕಾರಿಗಳ ಮತ ಚಲಾವಣೆಯಲ್ಲಿ ಸಿ ಎಸ್ ಷಡಾಕ್ಷರಿ ಮತ್ತು ‌ವಿ ವಿ ಶಿವರುದ್ರಯ್ಯ ಗೆದ್ದಿದ್ದಾರೆ.

ಶಿವಮೊಗ್ಗಕ್ಕೆ 2ನೇ ಸಲ ಒಲಿದ ರಾಜ್ಯಾಧ್ಯಕ್ಷ ಸ್ಥಾನ

ಶಿವಮೊಗ್ಗ ಜಿಲ್ಲೆಗೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸ್ಥಾನ ಎರಡನೇ ಸಲ ಒಲಿದಿದೆ. ಸಿ ಎಸ್‌ ಷಡಾಕ್ಷರಿ ಕಳೆದ ಸಲ ಅನಾಯಾಸವಾಗಿ ಗೆದ್ದು, ಶಿವಮೊಗ್ಗ ಜಿಲ್ಲೆಯ ಚೊಚ್ಚಲ ರಾಜ್ಯಾಧ್ಯಕ್ಷ ಎಂಬ ಖ್ಯಾತಿ ಪಡೆದಿದ್ದರು. ಆದರೆ, ಈ ಸಲ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಇತ್ತು. ಇದರ ನಡುವೆಯೂ ಸರ್ಕಾರಿ ನೌಕರರ ಜಿಲ್ಲಾಪ್ರತಿನಿಧಿಗಳು ಷಡಾಕ್ಷರಿ ಅವರ ಕೈಹಿಡಿದಿದ್ದಾರೆ. ಈ ಮೂಲಕ ಸತತ ಎರಡನೇ ಸಲಕ್ಕೆ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಂಘ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ‘ ಎಂಬಂತೆ ಕಬ್ಬನ್‌ ಪಾರ್ಕ್‌ನ ಮೂಲೆಯೊಂದರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇದೆ. ಆದರೆ, ಸಂಘದೊಳಗಿನ ರಾಜಕೀಯ, ತಾಲೂಕು ಮತ್ತು ಜಿಲ್ಲಾಧ್ಯಕ್ಷ ಸ್ಥಾನದ ಆಯ್ಕೆ ಹಾಗೂ ಮುಖ್ಯವಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ವ್ಯವಸ್ಥೆ ಅತ್ಯಂತ ಕಡು ಭ್ರಷ್ಟತೆಯಿಂದ ಕೂಡಿದೆ ಎನ್ನುವ ಮಾತುಗಳು ಮುನ್ನೆಲೆಗೆ ಬಂದಿವೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಳೆದುಹೋದ ವರ್ಚಸ್ಸು ಮತ್ತು ಗೇಲಿಯ ಸರಕಾದ ‘ಹೈಡ್ರಾಮಾ’

ಸಿ ಎಸ್‌ ಷಡಾಕ್ಷರಿ ಬಿಜೆಪಿ ಜೊತೆ ಗುರುತಿಸಿಕೊಂಡ ನಾಯಕ ಎಂಬುದು ಈಗ ಜಗಜ್ಜಾಹೀರಾದ ಸಂಗತಿ. ಬಿ‌ ಎಸ್ ಯಡಿಯೂರಪ್ಪ ಕುಟುಂಬಕ್ಕೆ ಅತಿ ನಿಷ್ಠಾವಂತ ವ್ಯಕ್ತಿ. ಕೆ ಎಸ್‌ ಈಶ್ವರಪ್ಪ ಪ್ರತಿನಿಧಿಸುತ್ತ ಬಂದಿದ್ದ ಶಿವಮೊಗ್ಗ ಕ್ಷೇತ್ರಕ್ಕೆ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅವರು ರಾಜಕೀಯ ನಿವೃತ್ತಿ ಘೋಷಿಸಿದಾಗ ಆ ಕ್ಷೇತ್ರಕ್ಕೆ ಸಿ ಎಸ್‌ ಷಡಾಕ್ಷರಿ ಟವಲ್‌ ಹಾಕಿದ್ದರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸರ್ಕಾರಕ್ಕೆ ಬಹಳ ಹತ್ತಿರವಾಗಿ ಗುರುತಿಸಿಕೊಂಡವರು. ಬಿಜೆಪಿ ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರು ಒಂದು ದಿನದ ವೇತನವನ್ನು ಬೊಮ್ಮಾಯಿ ಸರ್ಕಾರಕ್ಕೆ ಕೊಡಿಸಲು ಮುಂದಾಗಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ತೀವ್ರ ವಿರೋಧದ ನಡುವೆಯೂ 40 ಕೋಟಿ. ರೂ ಹಣವನ್ನು ಪುಣ್ಯಕೋಟಿ ದತ್ತು ಯೋಜನೆ ಕೊಡಿಸಿ ಬೊಮ್ಮಾಯಿಗೆ ಬಹಳ ಹತ್ತಿರವಾದರು. ಆದರೆ, 40 ಕೋಟಿ. ರೂ ಮೊತ್ತ ಏನಾಗಿದೆ ಎಂಬುದು ಯಾರಿಗೂ ಮಾಹಿತಿ ಇಲ್ಲ. ಕಳೆದ ಬಾರಿ ಬಿಜೆಪಿಯಿಂದ ಟಿಕೆಟ್‌ ಸಿಗದಿದ್ದರೂ ರಾಜಕೀಯಕ್ಕೆ ಬರುವ ಅವರ ಆಸೆ ಇನ್ನೂ ಜೀವಂತವಿದೆ.

ಶಿವಮೊಗ್ಗ ತಾಲೂಕು ಅಬ್ಬಲಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಬ್ಬಲಗೆರೆ ಗ್ರಾಮದ ಸರ್ವೆ ನಂ.119ರಲ್ಲಿ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನು ತೆಗೆದು ಖಾಸಗಿ ಲೇಔಟ್‌ಗೆ ಸಾಗಿಸಿರುವ ಪ್ರಕರಣದಲ್ಲಿ ಸಿ ಎ‌ಸ್‌ ಷಡಾಕ್ಷರಿ ನಿರ್ದೇಶನದಂತೆ ಅಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಸಚಿವ ಮಧು ಬಂಗಾರಪ್ಪ ಸಿಎಂ ಅವರಿಗೆ ಪತ್ರ ಬರೆದಿದ್ದರು. ನಂತರ ಸರ್ಕಾರ ಇವರ ಮೇಲೆ ಕ್ರಮಕೈಗೊಂಡು ಶಿವಮೊಗ್ಗದ ಲೆಕ್ಕ ಪರಿಶೋಧನ ಜಂಟೀ ನಿರ್ದೇಶಕ ಕಚೇರಿಯ ಲೆಕ್ಕಾಧೀಕ್ಷಕರಾಗಿದ್ದ ಸಿ ಎಸ್ ಷಡಾಕ್ಷರಿ ಅವರನ್ನು ಕೋಲಾರದ ಸಮಾಜಕಲ್ಯಾಣ ಇಲಾಖೆಯ ಲೆಕ್ಕಾಧೀಕ್ಷಕ ಹುದ್ದೆಗೆ ವರ್ಗಾಯಿಸಿತು.

ತಮ್ಮ ಅಧ್ಯಕ್ಷತೆಯ ಅವಧಿಯಲ್ಲಿ ಸಂಘದ ಬೈಲಾವನ್ನು ತಮಗೆ ಹೇಗೆ ಬೇಕೋ ಹಾಗೆ ತಿದ್ದುಪಡಿ ಮಾಡಿಕೊಂಡಿರುವ ಗುರುತರ ಆರೋಪವನ್ನು ಸಿ ಎಸ್‌ ಷಡಾಕ್ಷರಿ ಎದುರಿಸುತ್ತಿದ್ದಾರೆ. ಸಂಘದ ಹಳೆಯ ನಿಯಮಗಳ ಪ್ರಕಾರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇರವಾಗಿ ಸಿ ಎಸ್‌ ಷಡಾಕ್ಷರಿ ಸ್ಪರ್ಧಿಸಲು ಬರುತ್ತಿರಲಿಲ್ಲ. ಆದರೆ ತಮ್ಮ ಅನುಕೂಲಕ್ಕೆ ತಕ್ಕಂತೆ ಬೈಲಾ ತಿದ್ದುಪಡಿ ಮಾಡಿದ್ದರಿಂದಲೇ ‘ಲ್ಯಾಟರಲ್‌ ಎಂಟ್ರಿ‘ ಮೂಲಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು ಎನ್ನುವ ಮಾತುಗಳಿವೆ.

ಶಾಂತಾರಾಮ
ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್

ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ಅವರು ಈ ಬಗ್ಗೆ ಈ ದಿನ.ಕಾಮ್‌ ಜೊತೆ ಮಾತನಾಡಿದ್ದು, “ಸಿ ಎಸ್‌ ಷಡಾಕ್ಷರಿ ಎರಡನೇ ಅವಧಿಗೆ ಅಧ್ಯಕ್ಷರಾಗಲೇಬೇಕು ಎಂಬ ಹಠ ತೊಟ್ಟು ವ್ಯವಸ್ಥಿತವಾಗಿ ಬೈಲಾ ತಿದ್ದುಪಡಿ ಮಾಡಿಕೊಂಡಿದ್ದರು. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ತಮಗೆ ವಿರೋಧ ಇರುವ ಸದಸ್ಯರನ್ನು, ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸದಸ್ಯತ್ವವನ್ನು ರದ್ದು ಪಡಿಸಿದರು. ಇದನ್ನು ಪ್ರಶ್ನಿಸಿ 68 ರಿಟ್ ಪಿಟಿಶನ್‌ಗಳು ನ್ಯಾಯಾಲಯದಲ್ಲಿವೆ. ನಾನೂ ಕೂಡ ಸ್ಪರ್ಧಾ ಆಕಾಂಕ್ಷಿಯಾಗಿದ್ದೆ. ನನ್ನ ಸದಸ್ಯತ್ವವನ್ನು ಷಡಾಕ್ಷರಿ ರದ್ದು ಪಡಿಸಿದ್ದರಿಂದ ನನಗೆ ಅನ್ಯಾಯವಾಯಿತು” ಎಂದರು.

“ಸಿ ಎಸ್‌ ಷಡಾಕ್ಷರಿ ಸರ್ವಾಧಿಕಾರಿ ಧೋರಣೆಯಿಂದ ನೊಂದವರೆಲ್ಲರೂ ಸೇರಿ ಮೂರು ತಿಂಗಳ ಹಿಂದೆ ‘ಪ್ರಜಾಸತ್ತಾತ್ಮಕ ನೌಕರರ ವೇದಿಕೆ‘ ಸ್ಥಾಪಿಸಿಕೊಂಡು ಹೋರಾಟಕ್ಕೆ ಸಿದ್ಧವಾದೆವು. ಬಿ ಪಿ ಕೃಷ್ಣೇಗೌಡ ನಮ್ಮ ಸಂಘಟನೆಯಿಂದ ಸ್ಪರ್ಧಿಸುತ್ತಾರೆ ಎಂಬುದು ಗೊತ್ತಾಗುತ್ತಿದ್ದಂತೆ ಸಿ ಎಸ್‌ ಷಡಾಕ್ಷರಿ ಅವರ ಸದಸ್ಯತ್ವ ರದ್ದು ಪಡಿಸಿದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋದರು. ವಿಚಾರ ವಿಳಂಬವಾಗಿದ್ದರಿಂದ ಕೃಷ್ಣಮೂರ್ತಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಒಪ್ಪಿಕೊಂಡಿದ್ದೆವು. ಕೊನೆಗೆ ಹೈಕೋರ್ಟ್‌ ಬಿ ಪಿ ಕೃಷ್ಣೇಗೌಡ ಅವರಿಗೆ ಸ್ಪರ್ಧಿಸಲು ಅವಕಾಶ ಮಾಡಿದ್ದರಿಂದ ಕೊನೆ ಕ್ಷಣದಲ್ಲಿ ನಾವು ಅಭ್ಯರ್ಥಿಯನ್ನು ಬದಲಿಸಿದೆವು. ಬಿ ಪಿ ಕೃಷ್ಣೇಗೌಡ ಅವರು ಕಾನೂನು ಹೋರಾಟದಲ್ಲಿ ಸಮಯ ಮೀಸಲಿಟ್ಟಿದ್ದರಿಂದ ಅವರಿಗೆ ಸ್ವಲ್ಪ ಹಿನ್ನಡೆಯಾಗಿದೆ. ಆದರೂ ಬಿ ಪಿ ಕೃಷ್ಣೇಗೌಡ ಅವರು 442 ಮತ ಪಡೆದಿರುವುದು ಸಾಮಾನ್ಯ ಸಂಗತಿಯಲ್ಲ. ನಮ್ಮದೇ ಬಣದ ಖಜಾಂಚಿಯಾಗಿ ಶಿವರುದ್ರಯ್ಯ ಗೆದ್ದಿರುವುದು ಷಡಾಕ್ಷರಿದು ಗೆಲುವಲ್ಲ, ನಮ್ಮದು ಸೋಲಲ್ಲ” ಎಂದು ಹೇಳಿದರು.

“ಸಿ ಎಸ್ ಷಡಾಕ್ಷರಿ ಅವರು‌ ಸಂಘರ್ಷವನ್ನು ಮುಂದುವರಿಸುತ್ತಾರಾ ಅಥವಾ ಸರ್ಕಾರಿ ನೌಕರರ ಹಿತ ಕಾಪಾಡುತ್ತಾರಾ ಎಂಬುದು ಈಗ ಪ್ರಶ್ನೆ. ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆದರೆ ನಾವು ಅವರ ಜೊತೆ ನಡೆಯಲು ಸಿದ್ಧ. ತಮ್ಮದೇ ಸರ್ವಾಧಿಕಾರ ಆಟ ಆಡಲು ಬಂದರೆ ನಮ್ಮ ಮುಂದಿನ ಹೋರಾಟ ಇದ್ದೇ ಇರುತ್ತದೆ. ನಮ್ಮ ವೈಯಕ್ತಿಕ ಹಿತಾಸಕ್ತಿ ಇಲ್ಲಿಲ್ಲ. ಎನ್‌ಪಿಎಸ್‌ ರದ್ದಾಗಬೇಕು. ಖಾಲಿ ಹುದ್ದೆಗಳು ಭರ್ತಿಯಾಗಬೇಕು. ಸರ್ಕಾರಿ ನೌಕರರ ಹಿತಾಸಕ್ತಿಗೆ ಸಂಘ ನೆರವಾಗಬೇಕು. ಇದನ್ನು ಪ್ರಜಾಪ್ರಭುತ್ವದ ರೀತಿಯಲ್ಲಿ ಷಡಾಕ್ಷರಿ ಮಾಡಬೇಕು ಎಂಬುದು ನಮ್ಮ ನಿರೀಕ್ಷೆ” ಎಂದು ಹೇಳಿದರು.

ಒಟ್ಟಾರೆ ರಾಜ್ಯದಲ್ಲಿ 5.25 ಲಕ್ಷ ಸರ್ಕಾರಿ ನೌಕರರ ಸದಸ್ಯತ್ವ ಹೊಂದಿರುವ ಸರ್ಕಾರಿ ನೌಕರರ ಸಂಘ ಇತ್ತೀಚಿನ ವರ್ಷಗಳಲ್ಲಿ ಸರ್ವಾಧಿಕಾರದ ಆಡಳಿತಕ್ಕೆ ಸಿಕ್ಕು ನಲುಗಿದೆ ಎನ್ನುವ ಆರೋಪಗಳು ಸಂಘದೊಳಗೆ ವ್ಯಾಪಕವಾಗಿದೆ. ರಾಜ್ಯಾಧ್ಯಕ್ಷರು ನೇರವಾಗಿ ಸದಸ್ಯತ್ವ ಪಡೆದ ನೌಕರರಿಂದ ಆಯ್ಕೆಯಾಗದಿರುವುದೇ ಈ ಸರ್ವಾಧಿಕಾರಕ್ಕೆ ಕಾರಣ ಎನ್ನಲಾಗಿದೆ. ಸರ್ಕಾರಿ ನೌಕರರ ಹಿತಾಸಕ್ತಿ ಹಿನ್ನೆಲೆಗೆ ಸರಿದು, ಗುಂಪುಗಾರಿಕೆ – ಭ್ರಷ್ಟಾಚಾರವೇ ಸಂಘದೊಳಗೆ ಮನೆಮಾಡಿದೆ. ಕೇವಲ ನೂರಾರು ಸಂಖ್ಯೆಯ ಪ್ರತಿನಿಧಿಗಳನ್ನಿಟ್ಟುಕೊಂಡು ಪ್ರತಿಯೊಂದು ಮತಕ್ಕೆ ಲಕ್ಷಗಟ್ಟಲೇ ಹಣ ಸುರಿದರೆ ಯಾರು ಬೇಕಾದರೂ ಅಧ್ಯಕ್ಷರಾಗಬಹುದು ಎನ್ನುವ ವಾತಾವರಣ ಸಂಘದಲ್ಲಿ ನಿರ್ಮಾಣವಾಗಿದೆ. ಸದಸ್ಯರು ಬಾಯಿಬಿಟ್ಟು ಮಾತನಾಡದಂತಹ ಉಸಿರುಗಟ್ಟುವ ಪರಿಸ್ಥಿತಿ ಸಂಘದಲ್ಲಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X