ಮಹಿಳಾ ಸಶಕ್ತೀಕರಣದ ವೇಗ ಹೆಚ್ಚಿಸಿದ ಶಕ್ತಿ ಯೋಜನೆ; ಉಡಾಫೆ ಹೇಳಿಕೆಗಳಿಗೆ ತಕ್ಕ ಉತ್ತರ

Date:

Advertisements

ನಗರ ಪ್ರದೇಶಗಳಲ್ಲಿ ಮನೆಗೆಲಸ, ಗಾರ್ಮೆಂಟ್ಸ್‌, ಸೇಲ್ಸ್‌ಗರ್ಲ್‌, ಸಣ್ಣಪುಟ್ಟ ಉದ್ಯಮಗಳಲ್ಲಿ, ಹೋಟೆಲುಗಳಲ್ಲಿ ಕೆಲಸ ಮಾಡುವ ಮಹಿಳೆಯರು ತಮ್ಮ ಪರ್ಸಿನಲ್ಲಿ ಉಳಿತಾಯದ ಹಣ ನೋಡುವಂತಾಗಿದ್ದು ಉಚಿತ ಪ್ರಯಾಣದ ನಂತರ ಎಂದರೆ ತಪ್ಪಾಗದು. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು, ಅನೇಕ ಸರ್ಕಾರದ ಯೋಜನೆಗಳಡಿ ಕಡಿಮೆ ಗೌರವಧನಕ್ಕೆ ದುಡಿಯುವವರ ಆರ್ಥಿಕ ಹೊರೆಯನ್ನು ಸ್ವಲ್ಪ ಮಟ್ಟಿಗಾದರೂ ಶಕ್ತಿ ಯೋಜನೆ ಇಳಿಸಿದೆ

ಸಿದ್ರಾಮಯ್ಯ ಫ್ರೀ ಕೊಟ್ಟು ಹೆಣ್ಣುಮಕ್ಕಳೆಲ್ಲ ಹಾಳಾದರು, ಹೆಂಗಸರು ಗಂಡಂದಿರ ಮಾತೇ ಕೇಳುತ್ತಿಲ್ಲ, ಸಿಕ್ಕ ಸಿಕ್ಕಲ್ಲಿ ಸುಮ್ಮನೆ ಓಡಾಡ್ತಾರೆ, ಗಂಡ ಮಕ್ಕಳನ್ನು ಬಿಟ್ಟು ಊರು ಸುತ್ತುತ್ತಿದ್ದಾರೆ, ಬಸ್‌ನಲ್ಲಿ ಗಂಡಸರಿಗೆ ಸೀಟೇ ಸಿಗುತ್ತಿಲ್ಲ, ಗಂಡಸರು ಓಟು ಹಾಕಿಲ್ವಾ? ನಮಗೂ ಫ್ರೀಕೊಡಿ, ಹಿರಿಯರಿಗೆ ಫ್ರೀ ಕೊಡಿ… ಹೀಗೆ ಕಾಂಗ್ರೆಸ್‌ನ ಚುನಾವಣಾ ಭರವಸೆಯಲ್ಲಿ ಒಂದಾಗಿದ್ದ ಸರ್ಕಾರಿ ಬಸ್‌ಗಳಲ್ಲಿ ಎಲ್ಲ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್‌ ಯೋಜನೆಯನ್ನು ಗೇಲಿ ಮಾಡಿದವರೇ ಹೆಚ್ಚು. ಆರಂಭದಲ್ಲಿ ಬಸ್‌ನಲ್ಲಿ ಹಿಂದೆ ಕೂತ ಪುರುಷರಿಂದ ಚುಚ್ಚು ಮಾತುಗಳು, ಕೆಲವು ಕಂಡಕ್ಟರ್‌ಗಳೂ ಅವರೊಂದಿಗೆ ಸೇರಿಕೊಂಡು ನಂಜು ಕಾರಿಕೊಂಡಿದ್ದರು. ಬಹುತೇಕ ಪುರುಷರು ಆರ್ಥಿಕ ತಜ್ಞರಾಗಿಬಿಟ್ಟಿದ್ದರು. ಪ್ರಯಾಣದುದ್ದಕ್ಕೂ ಈ ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನು ದಿವಾಳಿ ಮಾಡುತ್ತೆ, ಶ್ರೀಲಂಕಾ- ಪಾಕಿಸ್ತಾನದ ಪರಿಸ್ಥಿತಿ ಬರುತ್ತೆ ಎಂದು ಹೇಳುತ್ತಾ ತಮ್ಮೊಳಗಿನ ಕಾಂಗ್ರೆಸ್‌ ಬಗೆಗಿನ ದ್ವೇಷ ಅಸೂಯೆ ಹೊರ ಹಾಕುತ್ತಿದ್ದರು. ಅಷ್ಟೇ ಅಲ್ಲ ಮಹಿಳೆಯರ ಬಗೆಗಿನ ಅಸಡ್ಡೆ, ಕೀಳು ಮನಸ್ಥಿತಿ ಪುರುಷಾಹಂಕಾರ ಸರ್ಕಾರಿ ಯೋಜನೆಯನ್ನು ಟೀಕಿಸುವ ಭರದಲ್ಲಿ ಬಹಿರಂಗಗೊಂಡಿತ್ತು. ಕೆಲ ಮಹಿಳೆಯರು ಉಚಿತ ಟಿಕೆಟ್‌ ಪಡೆದು ಪ್ರಯಾಣಿಸುತ್ತ ಯೋಜನೆಯನ್ನೇ ಟೀಕಿಸುತ್ತಿದ್ದರು.

ಆದರೆ, ಎರಡೇ ವರ್ಷಗಳಲ್ಲಿ ಶಕ್ತಿ ಯೋಜನೆಯಿಂದ ಉದ್ಯೋಗಕ್ಕೆ ಹೋಗುವ ಮಹಿಳೆಯರ ಪ್ರಮಾಣ ಹೆಚ್ಚಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ. Sustainable Mobility Network ಸಮೀಕ್ಷಾ ವರದಿಯ ಪ್ರಕಾರ ಮಹಿಳೆಯರು ಹೆಚ್ಚು ಸ್ವತಂತ್ರವಾಗಿ ದುಡಿದು ಬದುಕುವುದಕ್ಕೆ ಶಕ್ತಿ ಯೋಜನೆ ಪ್ರೇರಣೆಯಾಗಿದೆ. ಶಿಕ್ಷಣ ಉದ್ಯೋಗಕ್ಕೆ ಹೋಗುವವರ ಪ್ರಮಾಣ ಹೆಚ್ಚಿದೆ.

ಶಕ್ತಿ ಯೋಜನೆ

ವರದಿ ಹೇಳುವುದೇನು?

ವಿವಿಧ ರಾಜ್ಯಗಳ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಮಾದರಿಗಳ ಕುರಿತ ಅಧ್ಯಯನ ಕೈಗೊಂಡ, ಸಸ್ಟೈನೇಬಲ್‌ ಮೊಬಿಲಿಟಿ ನೆಟ್‌ವರ್ಕ್ ಮತ್ತು ನವದೆಹಲಿಯ ಆರ್ಥಿಕ ಸಂಶೋಧನೆ ಮತ್ತು ನೀತಿ ಸಲಹಾ ಥಿಂಕ್-ಟ್ಯಾಂಕ್ ನಿಕೋರ್ ಅಸೋಸಿಯೇಟ್ಸ್ ಸಿದ್ಧಪಡಿಸಿದ ವರದಿಯು ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಕಲ್ಪಿಸಿರುವ  ಶಕ್ತಿ ಯೋಜನೆಯು ರಾಜ್ಯದಾದ್ಯಂತ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಅವರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ.

ಈ ವರದಿಯು ಶಕ್ತಿ ಯೋಜನೆಯಿಂದಾಗಿ ಮಹಿಳೆಯರ ಔದ್ಯೋಗಿಕ ದರವು ಬೆಂಗಳೂರಿನಲ್ಲಿ ಶೇಕಡಾ 23 ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ 21 ಪ್ರತಿಶತದಷ್ಟು ಏರಿಕೆಯಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ರಾಜ್ಯದ ಶಕ್ತಿ ಯೋಜನೆಯ ಮಾದರಿಯಲ್ಲಿಯೇ ಇತರ ರಾಜ್ಯಗಳು ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣ, ಪ್ರಯಾಣ ದರದಲ್ಲಿ 50 ಶೇಕಡಾ ರಿಯಾಯಿತಿ ಮಾದರಿಯ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಕರ್ನಾಟಕದ ಸಾಧನೆ ಇತರ ರಾಜ್ಯಗಳನ್ನು  ಮೀರಿಸಿದೆ ಎಂದು ಸಮೀಕ್ಷೆ ತಿಳಿಸಿದೆ.

ಉಚಿತ ಪ್ರಯಾಣ ಯೋಜನೆಗಳನ್ನು ಹೊಂದಿರುವ (ನವದೆಹಲಿ ಮತ್ತು ಕರ್ನಾಟಕ), ಹೊಂದದಿರುವ (ಪಶ್ಚಿಮ ಬಂಗಾಳ ಮತ್ತು ಕೇರಳ) ಮತ್ತು ಭಾಗಶಃ ಉಚಿತ ಪ್ರಯಾಣ ವ್ಯವಸ್ಥೆ/ಪ್ರಯಾಣ ದರದಲ್ಲಿ 50 ಶೇಕಡಾ ರಿಯಾಯಿತಿ ಕಲ್ಪಿಸಿರುವ (ಮಹಾರಾಷ್ಟ್ರ) ರಾಜ್ಯಗಳಲ್ಲಿನ ಒಟ್ಟು ಹತ್ತು ನಗರಗಳಲ್ಲಿ ಈ ಸಮೀಕ್ಷೆ ಕೈಗೊಳ್ಳಲಾಗಿತ್ತು. ಇದು ಉಚಿತ ಸಾರ್ವಜನಿಕ ಸಾರಿಗೆ ಯೋಜನೆಯನ್ನು ಕುರಿತಂತೆ ಹಲವು ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿ ಸಿದ್ಧಪಡಿಸಿದ ಮೊದಲ  ವಿಶ್ಲೇಷಣಾ ವರದಿಯಾಗಿದೆ. “ಬಿಯಾಂಡ್ ಫ್ರೀ ರೈಡ್ಸ್: ಎ ಮಲ್ಟಿ-ಸ್ಟೇಟ್ ಅಸೆಸ್‌ಮೆಂಟ್ ಆಫ್ ವಿಮೆನ್ಸ್ ಬಸ್ ಫೇರ್ ಸಬ್ಸಿಡಿ ಸ್ಕೀಮ್ಸ್ ಇನ್ ಅರ್ಬನ್ ಇಂಡಿಯಾ”(ಉಚಿತ ಪ್ರಯಾಣದಾಚೆಗೆ- ಭಾರತದ ನಗರಗಳ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ರಿಯಾಯಿತಿ ದರದ ಪ್ರಯಾಣ ಸೌಲಭ್ಯ ಕುರಿತಂತೆ ಬಹು ರಾಜ್ಯಗಳಲ್ಲಿ ನಡೆಸಿದ ಮೌಲ್ಯಮಾಪನದ ವರದಿ) ಹೆಸರಿನ ಈ ವರದಿಯನ್ನು 2024-2025ರ ಅವಧಿಯಲ್ಲಿ 2,500ಕ್ಕೂ ಹೆಚ್ಚು ಜನರೊಂದಿಗಿನ ಸಮೀಕ್ಷೆಗಳು, ಗುಂಪು ಚರ್ಚೆಗಳು ಮತ್ತು ಕ್ಷೇತ್ರದ ತಜ್ಞರ ಸಂದರ್ಶನಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ.

ಈ ವರದಿಯು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಪರಿಚಯಿಸಲಾದ ಶಕ್ತಿ ಯೋಜನೆಯನ್ನು ಒಂದು ಉತ್ತಮ ನಿದರ್ಶನ ಎಂದು ಉಲ್ಲೇಖಿಸಿದೆ. ಇಲ್ಲಿ ಉಚಿತ ಪ್ರಯಾಣವು ಜನರ ಸಂಚಾರ/ಪ್ರಯಾಣದ ಅವಕಾಶಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವರ ಪ್ರಾತಿನಿಧ್ಯತೆಯ ಸಾಧ್ಯತೆಗಳನ್ನು ವಿಸ್ತರಿಸಿದೆ. ಬೆಂಗಳೂರಿನಲ್ಲಿ ಶೇಕಡಾ 26.9 ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಶೇಕಡಾ  27.6 ಮಹಿಳೆಯರು ತಾವು ಸಂಚಾರಕ್ಕೆ ಈ ಮೊದಲು ಬೇರೆ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಿದ್ದರೂ, ಶಕ್ತಿ ಯೋಜನೆಯಿಂದಾಗಿ ಈಗ ನಾವು ಬಸ್ಸಿನಲ್ಲಿಯೇ ಪ್ರಯಾಣಿಸುತ್ತಿದ್ದೇವೆ ಎಂದಿದ್ದಾರೆ. ಉಚಿತ ಬಸ್ಸು ಸೇವೆಯಿಂದ ಮಹಿಳೆಯರಿಗೆ ಪ್ರತಿ ತಿಂಗಳು ಶೇಕಡಾ 30 ರಿಂದ 50ರವರೆಗೆ ಮಾಸಿಕ ಉಳಿತಾಯ ಸಾಧ್ಯವಾಗುತ್ತಿದೆ.

“ಸ್ತ್ರೀಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಯೋಜನೆ ಕುರಿತಾದ ಹಲವಾರು ಅಧ್ಯಯನಗಳು, ಈ ಯೋಜನೆಯು ಮಹಿಳೆಯರಿಗೆ ಉತ್ತಮ ಉದ್ಯೋಗಾವಕಾಶಗಳು, ಉತ್ತಮ ವೇತನ ಮತ್ತು ಉದ್ಯಮಿಗಳಾಗಿ ರೂಪುಗೊಳ್ಳಲು ಉತ್ತಮ ಮಾರುಕಟ್ಟೆಯ ಸೌಲಭ್ಯಗಳನ್ನು ಕಂಡುಕೊಳ್ಳುವ ಮೂಲಕ ಅವರನ್ನು ಸಶಕ್ತರನ್ನಾಗಿಸಿದೆ ಎಂಬುದನ್ನು ಸಾಬೀತುಪಡಿಸಿದೆʼʼ ಎಂದು ಲೋಕನೀತಿಯ ಹಿರಿಯ ಸಲಹೆಗಾರರಾದ ತಾರಾ ಕೃಷ್ಣಸ್ವಾಮಿ  ಹೇಳುತ್ತಾರೆ.

ಈ ಎಲ್ಲಾ ಅನುಕೂಲಗಳ ಹೊರತಾಗಿಯೂ, ಈ ಯೋಜನೆಯ ಪರಿಣಾಮವು ನಗರದ ಹೊರವಲಯದಲ್ಲಿ ವಾಸಿಸುವ ಮಹಿಳೆಯರು ತಮ್ಮ ಮೊದಲ ನಿಲ್ದಾಣಕ್ಕೆ ಮತ್ತು ಕೊನೆಯ ನಿಲ್ದಾಣದಿಂದ ತಾವು ತಲುಪಬೇಕಾಗಿರುವ ಜಾಗದ ಪ್ರಯಾಣಗಳಿಗೆ ಹೆಚ್ಚು ಹಣವನ್ನು ವ್ಯಯಿಸುತ್ತಿರುವುದರಿಂದ ಕುಂಠಿತವಾಗಿದೆ ಎಂದು ವರದಿಯು ಸೂಚಿಸುತ್ತದೆ. ಹೆಚ್ಚಾಗಿ ಸುರಕ್ಷಿತವಾಗಿ ಬಸ್ ನಿಲ್ದಾಣಗಳನ್ನು ತಲುಪಲು ಹೆಚ್ಚಿನ ಮಹಿಳೆಯರು ಇನ್ನೂ ಆಟೋಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಬಸ್ಸಿನಲ್ಲಿ ಉಚಿತ ಪ್ರಯಾಣ ಸೌಕರ್ಯಗಳಿದ್ದರೂ ಆಟೋ ಪ್ರಯಾಣ ಅವರ ಉಳಿತಾಯದ ಹೆಚ್ಚಿನ ಭಾಗವನ್ನು ಕಬಳಿಸುತ್ತಿದೆ.

“ಈ ಮೊದಲು ಸಾರಿಗೆಗೆ ತಗಲುವ ಖರ್ಚು ವೆಚ್ಚಗಳ ಲೆಕ್ಕಾಚಾರದಿಂದ  ಮಹಿಳೆಯರು ತಮ್ಮ ಪ್ರಯಾಣವನ್ನು ಸೀಮಿತಗೊಳಿಸಿದ್ದರು. ಆದರೆ ಶಕ್ತಿ ಯೋಜನೆಯು ಅವರ ಅಗತ್ಯ ಕೆಲಸಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸುವುದರೊಂದಿಗೆ, ದೂರದೂರಿನ ಪ್ರವಾಸ, ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಗಳನ್ನು ಸಾಧ್ಯವಾಗಿಸುತ್ತಿದೆ. ಪ್ರಯಾಣಕ್ಕೆ ತಗಲುವ ಶುಲ್ಕದ ಹೊರೆ ತೆಗೆದುಹಾಕಿದಾಗ, ಮಹಿಳೆಯರು ಹೊಸ ಹೊಸ ಕೆಲಸಗಳ ಅವಕಾಶಗಳನ್ನು ಅನ್ವೇಷಿಸುತ್ತಾರೆ ಮತ್ತು ಹೆಚ್ಚಿನ ಆತ್ಮವಿಶ್ವಾಸದಿಂದ ಪ್ರಯಾಣಿಸಲು ಅವರಿಗೆ ಸಾಧ್ಯವಾಗುತ್ತದೆ. ಗುರಿ ಮತ್ತು ಅದನ್ನು ತಲುಪಲು ಬೇಕಾದ ಎಲ್ಲರನ್ನು ಒಳಗೊಳ್ಳುವ ಸೌಲಭ್ಯ ಎರಡೂ ದೊರೆತಾಗ ಸಾಧನೆ ಹೇಗೆ ಸಾಧ್ಯವಾಗುತ್ತದೆ ಎಂಬುದಕ್ಕೆ ಕರ್ನಾಟಕವೇ ನಿದರ್ಶನ. ಸೇವೆಯ ಗುಣಮಟ್ಟ, ಸುರಕ್ಷತೆ ಮತ್ತುಹೆಚ್ಚಿನ ಸ್ಥಳಗಳಿಗೆ ಸೂಕ್ತ ಸಂಪರ್ಕದಂತಹ ವಿಷಯಗಳಲ್ಲಿ ನಿರಂತರ ವಾಗಿ ಗಮನಹರಿಸಿದರೆ ಈ ಯೋಜನೆಯಿಂದ ಇನ್ನಷ್ಟು ಲಾಭಗಳನ್ನು ಪಡೆಯಬಹುದು. ಆದರೆ ಇದರೊಂದಿಗೆ ರಾಜ್ಯ ಸಾರಿಗೆ ಸಂಸ್ಥೆಯ ಆರ್ಥಿಕ ಸುಸ್ಥಿರತೆ, ಬಸ್ಸುಗಳ ಸಂಖ್ಯೆಯಲ್ಲಿ ಹೆಚ್ಚಳ, ಸಾರಿಗೆ ಕಾರ್ಮಿಕರಲ್ಲಿ ಲಿಂಗ ಸಂವೇದನೆ, ಮತ್ತು ನಗರದಲ್ಲಿ ಮೂಲಸೌಕರ್ಯದ ಕೊರತೆಯಂತಹ ವಿಷಯಗಳನ್ನು ಸಮರ್ಪಕವಾಗಿ ಪರಿಹರಿಸುವುದು ಮುಖ್ಯʼʼ ಎಂದು ನಿಕೋರ್ ಅಸೋಸಿಯೇಟ್ಸ್ ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ಅರ್ಥಶಾಸ್ತ್ರಜ್ಞೆ ಮಿತಾಲಿ ನಿಕೋರ್  ಅಭಿಪ್ರಾಯಪಡುತ್ತಾರೆ.

ಉಚಿತ ಸಾರಿಗೆ ಸೌಲಭ್ಯದಿಂದ ಮಹಿಳೆಯರು ಸಾಕಷ್ಟು ಅನುಕೂಲತೆಗಳನ್ನು ಪಡೆಯುತ್ತಿದ್ದರೂ, ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆ ಇನ್ನೂ ಅಪೂರ್ಣವಾಗಿಯೇ ಉಳಿದಿದೆ.  ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸಿದ ಅರ್ಧಕ್ಕಿಂತ ಕಡಿಮೆ ಪ್ರಮಾಣದ ಮಹಿಳೆಯರು ಮಾತ್ರ ಪ್ರಯಾಣದ ಸಮಯದಲ್ಲಿ ತಮಗೆ ಸುರಕ್ಷಿತತೆ ಇದೆ ಎಂಬುದಾಗಿ ಹೇಳಿದ್ದಾರೆ. ಕಿರುಕುಳ, ಜನದಟ್ಟಣೆ, ಮತ್ತು ಬಸ್ ಸ್ಟಾಪ್‌ಗಳಲ್ಲಿ ಕಳಪೆ ಬೆಳಕು ಮತ್ತು ಸಿಬ್ಬಂದಿಯ ಕೊರತೆಯು ಯೋಜನೆಗೆ ಹಿನ್ನಡೆಯಾಗುತ್ತಿದೆ.

WhatsApp Image 2025 07 29 at 1.14.18 PM
ಸಸ್ಟೈನೇಬಲ್ ಮೊಬಿಲಿಟಿ ನೆಟ್‌ವರ್ಕ್ ಸಂಸ್ಥೆಯ ಯೋಜನಾ ಮುಖ್ಯಸ್ಥೆ ರಿಯಾ ಕರಣ್‌

“ಬಸ್ಸಿನಲ್ಲಿ ಮಹಿಳೆಯರಿಗೆ ಸುರಕ್ಷಿತತೆ ಮತ್ತು ಮೂಲಸೌಕರ್ಯದಲ್ಲಿ ಸುಧಾರಣೆ ಅಗತ್ಯ. ಇಲ್ಲವಾದಲ್ಲಿ ಉಚಿತ ಪ್ರಯಾಣ ಯೋಜನೆಗಳು ಅವರನ್ನು ಬಸ್‌ಗೆ ಕರೆತರಬಹುದು—ಆದರೆ ಸುರಕ್ಷಿತವಾಗಿ ಅವರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸಲು ವಿಫಲವಾಗುತ್ತವೆ” ಎಂದು ಸಸ್ಟೈನೇಬಲ್ ಮೊಬಿಲಿಟಿ ನೆಟ್‌ವರ್ಕ್ ಸಂಸ್ಥೆಯ ಯೋಜನಾ ಮುಖ್ಯಸ್ಥೆ ರಿಯಾ ಕರಣ್ ಅಭಿಪ್ರಾಯಪಡುತ್ತಾರೆ.

ವರದಿಯು ಬಸ್‌ಗಳ ಸಂಖ್ಯೆಯಲ್ಲಿ ಹೆಚ್ಚಳ, ಲಿಂಗ-ಸಂವೇದನಾಶೀಲ ಸಿಬ್ಬಂದಿಗಳ ನಿಯೋಜನೆ, ಮತ್ತು ಉತ್ತಮ ಬೆಳಕಿನ ವ್ಯವಸ್ಥೆ, ಸಿಸಿಟಿವಿ, ಮತ್ತು ಸಹಾಯವಾಣಿಗಳಂತಹ ಸುರಕ್ಷತಾ ಮೂಲಸೌಕರ್ಯದಲ್ಲಿ ತುರ್ತು ಹೂಡಿಕೆಗೆ ಆಗ್ರಹಿಸುತ್ತದೆ.  ವರದಿಯು ಎಲ್ಲರಿಗೂ ಸುಗಮ, ಕೈಗೆಟುಕುವ ಸಾರಿಗೆಯನ್ನು ಖಾತ್ರಿಪಡಿಸಲು  ಮೊದಲ ಮತ್ತು ಕೊನೆಯ ನಿಲ್ದಾಣಗಳ ನಡುವಿನ ಪ್ರಯಾಣವನ್ನು ಉತ್ತಮಗೊಳಿಸಲು ಶಿಫಾರಸ್ಸು ಮಾಡಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೂ ಮೊದಲೇ ಗ್ರೀನ್‌ ಪೀಟ್‌ ಇಂಡಿಯಾ ಸಾರ್ವಜನಿಕ ಸಾರಿಗೆಯಲ್ಲಿ ಉಚಿತ ಪ್ರಯಾಣ ಇರಬೇಕು ಎಂಬ ವಾದವನ್ನು ಮುಂದಿಟ್ಟು ಕಾಂಪೇನ್‌ ಕೂಡ ಮಾಡಿತ್ತು. ಜನರ ಪ್ರಣಾಳಿಕೆಯಲ್ಲಿ ಮುಖ್ಯವಾದ ಬೇಡಿಕೆ ಇದೇ ಆಗಿತ್ತು.

ಕಾಂಗ್ರೆಸ್‌ ಸರ್ಕಾರದ ಮೊದಲ ಗ್ಯಾರಂಟಿ

2023ರ ಜೂನ್‌ 11ರಂದು ಜಾರಿಯಾದ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಶಕ್ತಿ ಯೋಜನೆ ಜುಲೈ 14ರಂದು 500 ಕೋಟಿ ಉಚಿತ ಟಿಕೆಟ್‌ ವಿತರಿಸಿ ಹೊಸ ದಾಖಲೆ ಬರೆದಿತ್ತು. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯನ್ನು ಸರ್ಕಾರ ರಚನೆಯಾಗಿ ಒಂದೇ ವಾರದಲ್ಲಿ ಜಾರಿಗೆ ಬಂದಾಗಿತ್ತು. ಇದೇ ಜುಲೈ 11ರಂದು 500 ಕೋಟಿ ಟಿಕೆಟ್‌ ವಿತರಣೆಯಾಗಿದ್ದನ್ನು ಸರ್ಕಾರ ಸಂಭ್ರಮಿಸಿತ್ತು. ಉಚಿತ ಟಿಕೆಟ್‌ ಯೋಜನೆಯಿಂದಾಗಿ ಸಾರಿಗೆ ಸಂಸ್ಥೆಗಳು ದಿವಾಳಿಯಾಗುತ್ತವೆ ಎಂಬ ಅಪಪ್ರಚಾರದ ನಡುವೆ ಸರ್ಕಾರ ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಖರೀದಿಸಿದೆ. ಸಿಬ್ಬಂದಿ ನೇಮಕ ಮಾಡಿಕೊಂಡಿದೆ. ಇದುವರೆಗೆ 508 ಕೋಟಿ ಟಿಕೆಟ್‌ಗಳನ್ನು ನೀಡಲಾಗಿದೆ. ಇದರ ಮೌಲ್ಯ ಸುಮಾರು ₹12,881 ಕೋಟಿಗಳಾಗಿವೆ. ವಾರ್ಷಿಕ 4,000 ಕೋಟಿ ರೂಪಾಯಿ ಶಕ್ತಿ ಯೋಜನೆಗೆ ಸರ್ಕಾರ ವಿನಿಯೋಗಿಸಲಿದೆ ಎಂದು ಅಂದಾಜಿಸಲಾಗಿದೆ.

ಶಕ್ತಿ

ಎಲ್ಲ ಉಚಿತ ಕೊಟ್ಟು ರಾಜ್ಯ ದಿವಾಳಿ ಮಾಡುತ್ತಿದೆ ಸರ್ಕಾರ ಎಂದು ಗೋಳಾಡಿದವರು ಮುಟ್ಟಿ ನೋಡಿಕೊಳ್ಳುವ ಬೆಳವಣಿಗೆಗಳು ಆಗಿವೆ. ತಲಾ ಆದಾಯದಲ್ಲಿ ಕರ್ನಾಟಕ ದಾಖಲೆ ಬರೆದಿದೆ. ವಾರ್ಷಿಕ 2 ಲಕ್ಷ ರೂ ಕರ್ನಾಟಕದ ತಲಾ ಆದಾಯ. ಜಿಎಸ್‌ಟಿ ಸಂಗ್ರಹದಲ್ಲೂ ಕಳೆದ ಎರಡು ವರ್ಷಗಳಲ್ಲಿ ಏರಿಕೆ ಕಂಡಿದೆ. ಅಂದ್ರೆ ಕುಟುಂಬಗಳು ಉಳಿತಾಯದ ಹಣವನ್ನು ಅಗತ್ಯ ವಸ್ತುಗಳ ಖರೀದಿಗೆ ಬಳಸಿವೆ. ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಿದೆ. ಇದು ತೆರಿಗೆ ಸಂಗ್ರಹದ ಮೂಲಕ ಸರ್ಕಾರದ ಆದಾಯ ಹೆಚ್ಚಿಸುತ್ತಿದೆ. ಬೇಡಿಕೆ ಹೆಚ್ಚಿದ ಕಾರಣ ಉತ್ಪಾದನೆಗೂ ವೇಗ ಸಿಕ್ಕಿದೆ. ತಲಾದಾಯ ಹೆಚ್ಚಳಕ್ಕೆ ಗ್ಯಾರಂಟಿ ಯೋಜನೆಗಳೂ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಪಪ್ರಚಾರಕ್ಕೆ ಆಯಸ್ಸು ಕಡಿಮೆ

ಶಕ್ತಿ ಯೋಜನೆ ಜಾರಿಯಾಗುತ್ತಿದ್ದಂತೆ ಬಿಜೆಪಿ ಬೆಂಬಲಿತ ಮೀಡಿಯಾಗಳು ಬಸ್‌ಗಳಲ್ಲಿ ಸೀಟಿಗಾಗಿ ಮಹಿಳೆಯರು ಜಗಳ ಮಾಡಿಕೊಂಡರೆ ಅದು ಶಕ್ತಿ ಯೋಜನೆಯ ದುಷ್ಪರಿಣಾಮ ಅಂತ ಟೈಟಲ್‌ ಕೊಟ್ಟು ಟ್ರೋಲ್‌ ಮಾಡುತ್ತಿದ್ದವು. ಬಸ್ಸಿನ ಬಾಗಿಲು ಕಿತ್ತುಹೋದ ಫೋಟೊ ಹಾಕಿ ಪತ್ರಿಕೆಗಳು ಶಕ್ತಿ ಯೋಜನೆ ಮತ್ತು ಬಡ ಮಹಿಳೆಯರನ್ನು ಗೇಲಿ ಮಾಡಿದವು. ಮಹಿಳೆಯರ ಚಾರಿತ್ರ್ಯದ ಬಗ್ಗೆ ಹರಟೆ ಕಟ್ಟೆಗಳು ವ್ಯಂಗ್ಯ ಮಾಡಿದವು. ಮಹಿಳೆ ಮನೆಯಲ್ಲೇ ಬಿದ್ದಿರಬೇಕು, ಯಾವಾಗ ಬೇಕು ಆಗ ಬೇಕೆಂದಲ್ಲೆಲ್ಲ ಹೋಗಬಾರದು ಎಂಬ ಹೆಣ್ಣನ್ನು ಕಟ್ಟಿ ಹಾಕುವ ಮನಸ್ಥಿತಿಯ ಹೇಳಿಕೆಗಳು ಬಿಡುಬೀಸಾಗಿ ಬರುತ್ತಲೇ ಇವೆ.

ಆದರೆ ದಿನಗೂಲಿಯಲ್ಲಿ ಕುಟುಂಬ ನಡೆಸುವ ಬಡ ಹೆಣ್ಣುಮಕ್ಕಳು, ದಿನಕ್ಕೆ ಹತ್ತಾರು ಮೈಲಿ ಪ್ರಯಾಣಿಸಿ ನಾಲ್ಕೈದು ಮನೆಗೆಲಸ ಮಾಡುವ ತಾಯಂದಿರು, ಒಂಟಿ ಮಹಿಳೆಯರು, ಕೈ ಸಾಲ ಮಾಡಿ ಸೊಪ್ಪು ತರಕಾರಿ ಮಾರಿ ಬದುಕುವ, ಗಾರ್ಮೆಂಟ್ಸ್‌ ನಲ್ಲಿ ದುಡಿದು ಮಕ್ಕಳ ಶಿಕ್ಷಣ-ಮದುವೆ-ಸಾಲ ಎಂಬ ನೂರೆಂಟು ಕಮಿಟ್‌ಮೆಂಟ್‌ ಇರುವ ಮಹಿಳೆಯರು, ಮನೆಯವರ ಚಾಕರಿ ಮಾಡುತ್ತ ಹೊರ ಹೋಗಬೇಕಿದ್ದರೆ ಗಂಡ, ಮಗನ ಕಾಸಿಗೆ ಕೈ ಚಾಚುತ್ತಾ ಹಂಗಿನಲ್ಲಿ ಬದುಕುತ್ತಿದ್ದ ಹೆಣ್ಣು ಜೀವಗಳಿಗೆ ಶಕ್ತಿ ಯೋಜನೆ ತುಂಬಿದ ಶಕ್ತಿ ಅಷ್ಟಿಷ್ಟಲ್ಲ. ಬೆಂಗಳೂರಿನಲ್ಲಿ ಗಾರ್ಮೆಂಟ್ಸ್‌ ಅಥವಾ ಮನೆಗೆಲಸ ಮಾಡಿ ಅದರಲ್ಲೇ ಮನೆ ಬಾಡಿಗೆ, ನೀರು- ಕರೆಂಟ್‌ ಬಿಲ್‌, ಹಾಲು ತರಕಾರಿ ದಿನಸಿ ಅಂತ ತಿಂಗಳ ಕೊನೆಗೆ ಆಕಾಶ ನೋಡುವ ಸ್ಥಿತಿಯಲ್ಲಿದ್ದ ಮಹಿಳೆಗೆ ಒಂದೂವರೆ ಸಾವಿರ ತೆತ್ತು ತಿಂಗಳ ಪಾಸ್‌ ತೆಗೆದುಕೊಳ್ಳುವ ಅಗತ್ಯ ಇಲ್ಲ, ಆಧಾರ್‌ ಕಾರ್ಡ್‌ ಇದ್ದರೆ ಸಾಕು ಎಷ್ಟು ಸಲ ಬೇಕಿದ್ದರೂ ಓಡಾಡಬಹುದು. ಹಣ ಇಲ್ಲದೇ ಇಡೀ ರಾಜ್ಯ ಸುತ್ತಬಹುದು ಎಂಬ ಯೋಜನೆ ನೀಡಿದ ನೆಮ್ಮದಿ, ನಿಟ್ಟುಸಿರು ರಾಜಕೀಯ ಕಾರಣಕ್ಕೆ ಟೀಕಿಸುವವರ ಅರಿವಿಗೆ ಬರಲ್ಲ. ಆದರೆ, ಈ ಯೋಜನೆಯನ್ನು ಕಾಂಗ್ರೆಸ್‌ ಮತದಾರರು, ಬೆಂಬಲಿಗರು ಮಾತ್ರವೇ ಬಳಸುತ್ತಿದ್ದಾರಾ ಎಂದು ನೋಡಿದರೆ, ಇಲ್ಲ. ಶಕ್ತಿ ಮಾತ್ರವಲ್ಲ, ಇನ್ನೂರು ಯೂನಿಟ್‌ ಉಚಿತ ವಿದ್ಯುತ್‌, ಗೃಹಲಕ್ಷ್ಮಿ ಯೋಜನೆಗಳಿಗೆ ಅರ್ಜಿ ಹಾಕಿದವರಲ್ಲಿ ಮೊದಲ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಇತ್ತು ಎಂದು ವರದಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ದಶಕಗಳಿಂದ ಬಿಜೆಪಿಯ ಶಾಸಕರು, ಸಂಸದರೇ ಗೆದ್ದು ಬರುತ್ತಿದ್ದಾರೆ. ಬಿಜೆಪಿಯ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಬಹುತೇಕರು ಗ್ಯಾರಂಟಿ ಯೋಜನೆಯನ್ನು ಟೀಕಿಸುತ್ತಲೇ ಅರ್ಜಿ ಹಾಕಿದ್ದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುವುದು ಅವರ ಹಕ್ಕು. ಅದನ್ನು ಎಲ್ಲರೂ ಪಡೆಯಬೇಕು. ಅದರಲ್ಲಿ ಆ ಪಕ್ಷ ಈ ಪಕ್ಷ ಎಂಬುದಿಲ್ಲ. ಆದರೆ, ರಾಜಕಾರಣಿಗಳು ಬಡವರ ಕಲ್ಯಾಣ ಯೋಜನೆಗಳನ್ನು ಟೀಕಿಸಲು ಹೋಗಿ ಹೆಣ್ಣುಮಕ್ಕಳನ್ನು ಅವಮಾನಿಸಿದರು. “ನಮ್ಮ ಹಳ್ಳಿ ಹೆಣ್ಣುಮಕ್ಕಳು ಗ್ಯಾರಂಟಿ ಆಸೆಗೆ ಬಿದ್ದು ಹಾದಿ ತಪ್ಪಿದ್ರು” ಎಂದು ಎಚ್‌ ಡಿ ಕುಮಾರಸ್ವಾಮಿ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಟೀಕಿಸಿದ್ರು. ಕಾಂಗ್ರೆಸ್‌ ಪಕ್ಷಕ್ಕೆ ಗ್ಯಾರಂಟಿ ಆಸೆಯಿಂದ ಮತ ಹಾಕಿದ್ದಾರೆ ಎಂಬ ಅಸಮಾಧಾನ ಅವರ ಮಾತಿನಲ್ಲಿ ಸ್ಪಷ್ಟವಾಗಿತ್ತು. “ಫ್ರೀ ಬಸ್‌ ಇದೆ ಎಂದು ಹೆಣ್ಣುಮಕ್ಕಳು ಎಲ್ಲೆಲ್ಲೋ ಹೋಗ್ತಿದ್ದಾರೆ” ಎಂದು ನಟಿ, ಬಿಜೆಪಿ ನಾಯಕಿ ಶ್ರುತಿ ತಾನು ಹೆಣ್ಣು ಎಂಬುದನ್ನು ಮರೆತು ನಾಲಿಗೆ ಹರಿಯಬಿಟ್ಟಿದ್ರು. ಈ ಅಪಪ್ರಚಾರ, ಗೇಲಿಗಳಾಚೆಗೆ ಹೆಣ್ಣುಮಕ್ಕಳು ಸ್ವತಂತ್ರವಾಗಿ ಸಂಚರಿಸುವಂತಾಗಿದ್ದು, ಆ ಶಕ್ತಿ ತುಂಬಿದ್ದು ಸರ್ಕಾರದ ಯೋಜನೆ. ಅದು ಆಕೆಯನ್ನು ಮಾತ್ರವಲ್ಲ ಇಡೀ ಕುಟುಂಬವನ್ನು ಸಬಲೀಕರಣಗೊಳಿಸಿದೆ. ಅಪಪ್ರಚಾರಕ್ಕೆ ಆಯಸ್ಸು ಕಡಿಮೆ ಎಂಬುದನ್ನು ತೋರಿಸಿಕೊಟ್ಟಿದೆ. ಈಗ ಬಸ್‌ಗಳಲ್ಲಿ ಗೊಣಗಾಟ ಇಲ್ಲ.

ಕಾರ್ಮಿಕ ಕುಟುಂಬಗಳ ಊರಿನ ಸಂಬಂಧ ಗಟ್ಟಿಗೊಂಡಿದೆ

ನಗರ ಪ್ರದೇಶದಲ್ಲಿ ಬದುಕು ಕಟ್ಟಿಕೊಳ್ಳಲು ದಿನವೂ ಬಸ್‌ ಅವಲಂಬಿಸಿರುವ ಕುಟುಂಬಗಳು ತಾಯಿ, ಮಗಳು, ಸೊಸೆ, ಮೊಮ್ಮಗಳು ಹೀಗೆ ಮೂರ್ನಾಲ್ಕು ಮಂದಿ ದಿನವೂ ವ್ಯಾಪಾರ, ಕೆಲಸ, ಶಿಕ್ಷಣದ ಕಾರಣದಿಂದ ಹೋಗಬೇಕಾದಾಗ ಆ ಕುಟುಂಬ ತಿಂಗಳಿಗೆ ನಾಲ್ಕೈದು ಸಾವಿರ ರೂಪಾಯಿ ಬಸ್‌ ಖರ್ಚಿಗೆ ಎತ್ತಿಡಬೇಕಿತ್ತು. ದೂರದೂರುಗಳಿಂದ ಬೆಂಗಳೂರು ಅಥವಾ ಬೇರೆ ಊರುಗಳಲ್ಲಿ ದುಡಿಮೆಗೆಂದು ಹೋದವರು ಹಣದ ಸಮಸ್ಯೆಯಿಂದಾಗಿ ತವರಿಗೋ, ಜಾತ್ರೆಗೋ, ಧಾರ್ಮಿಕ ಕ್ಷೇತ್ರಕ್ಕೋ ಹೋಗಲಾಗದ ನಿರಾಸೆಯಲ್ಲಿದ್ದ ಕುಟುಂಬಗಳಿಗೆ ಶಕ್ತಿ ಯೋಜನೆ ಖುಷಿ ತರದಿರದು. ಉದಾಹರಣೆಗೆ ಯಾದಗಿರಿಯ ಕುಟುಂಬವೊಂದು ಕೆಲಸಕ್ಕೆಂದು ಏಳುನೂರು ಕಿಲೋಮೀಟರ್‌ ದೂರದ ಊರಿಗೆ ಬಂದು ನೆಲೆಸಿದೆ. ಆ ಮನೆಯಾಕೆ, ಇಬ್ಬರು ಹೆಣ್ಣುಮಕ್ಕಳ ಜೊತೆಗೆ ಎರಡು ತಿಂಗಳಿಗೊಮ್ಮೆ ಊರಿಗೆ ಹೋಗಿ ಎರಡು ದಿನ ಇದ್ದು ಜೋಳದ ಹಿಟ್ಟು, ಬೇಳೆ-ಕಾಳು ತೊಗೊಂಡು ವಾಪಾಸಾಗುತ್ತಿದೆ. ಬಸ್‌ನಲ್ಲಿ ಹಣಕೊಟ್ಟು ಪ್ರಯಾಣ ಮಾಡುವುದಿದ್ದರೆ ಆ ಕುಟುಂಬ ಒಂದು ಸಲ ಹೋಗಿ ಬರಲು ಕನಿಷ್ಠ ಮೂರು ಸಾವಿರ ರೂಪಾಯಿ ವ್ಯಯಿಸಬೇಕಿತ್ತು. ವರ್ಷಕ್ಕೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಮಾತ್ರ ಊರಿಗೆ ಹೋಗಲು ಸಾಧ್ಯವಿತ್ತು. ಇಂತಹ ಲಕ್ಷಾಂತರ ಕುಟುಂಬಗಳು ಶಕ್ತಿ ಯೋಜನೆಯ ಕಾರಣದಿಂದ ನಿರಂತರವಾಗಿ ಸಂಚರಿಸುತ್ತಿವೆ. ಕಾರ್ಮಿಕ ಮಹಿಳೆಯರು ಕೆಲಸಕ್ಕಾಗಿ ಇಡೀ ರಾಜ್ಯದಲ್ಲಿ ಸಂಚರಿಸಲು ಇದರಿಂದ ಸಾಧ್ಯವಾಗಿದೆ. ಇದು ಊರಿನ ಸಂಬಂಧ ಕಡಿಯದಂತೆ ಸಂಬಂಧಗಳನ್ನು ಬೆಸೆಯುವುದಕ್ಕೆ ಕಾರಣವಾಗಿದೆ. ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಜನರ ಈ ಯೋಜನೆಯ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಬಡತನ, ನಿರುದ್ಯೋಗ ಹೆಚ್ಚು ಇರುವ ಕಾರಣ ಕಾರ್ಮಿಕರ ವಲಸೆ ಆ ಭಾಗದಲ್ಲಿ ಸರ್ವೇಸಾಮಾನ್ಯ.

ಕಾರ್ಮಿಕ ಮಹಿಳೆಯರು

ನಗರ ಪ್ರದೇಶಗಳಲ್ಲಿ ಮನೆಗೆಲಸ, ಗಾರ್ಮೆಂಟ್ಸ್‌, ಸೇಲ್ಸ್‌ಗರ್ಲ್‌, ಸಣ್ಣಪುಟ್ಟ ಉದ್ಯಮಗಳಲ್ಲಿ, ಹೋಟೆಲುಗಳಲ್ಲಿ ಕೆಲಸ ಮಾಡುವ ಮಹಿಳೆಯರು ತಮ್ಮ ಪರ್ಸಿನಲ್ಲಿ ಉಳಿತಾಯದ ಹಣ ನೋಡುವಂತಾಗಿದ್ದು ಉಚಿತ ಪ್ರಯಾಣದ ನಂತರ ಎಂದರೆ ತಪ್ಪಾಗದು. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು, ಅನೇಕ ಸರ್ಕಾರದ ಯೋಜನೆಗಳಡಿ ಕೆಲಸ ಮಾಡುವ ಗುತ್ತಿಗೆ ನೌಕರರು, ಕಡಿಮೆ ಗೌರವಧನಕ್ಕೆ ದುಡಿಯುವವರು ಇವರೆಲ್ಲ ಉಚಿತ ಪ್ರಯಾಣದ ಕಾರಣದಿಂದ ಕೆಲಸದಲ್ಲೂ ದಕ್ಷತೆ ಹೆಚ್ಚಿಸಿಕೊಳ್ಳಬಹುದು.

ದಿನೇ ದಿನೇ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಯಾಗುತ್ತಿರುವಾಗ ಆ ಹೊರೆಯನ್ನು ಗ್ಯಾರಂಟಿಯಂತಹ ಕಲ್ಯಾಣ ಯೋಜನೆಗಳು ಸ್ವಲ್ಪ ಮಟ್ಟಿಗೆ ಇಳಿಸುತ್ತವೆ. ಬಡವರ ಕಲ್ಯಾಣವನ್ನು ಉತ್ಪಾದಕತೆಗೆ ಪೂರಕ ಎಂದು ಪರಿಗಣಿಸಬೇಕಿದೆ. ಬಡತನ ನಿವಾರಣೆ ಮತ್ತು ಎಲ್ಲರಿಗೂ ಮೂಲಭೂತ ಸೌಲಭ್ಯ, ಆರೋಗ್ಯ, ಶಿಕ್ಷಣ ಸರ್ಕಾರದ ಆದ್ಯತೆಯಾಗಲೇಬೇಕಿದೆ. ಬಡವರನ್ನು ಮೇಲೆತ್ತಲು ಕಲ್ಯಾಣ ಯೋಜನೆಗಳು ಅನಿವಾರ್ಯ. ಯಾವುದೇ ಪಕ್ಷ, ಸರ್ಕಾರಗಳು ಇಂತಹ ಉಚಿತ ಯೋಜನೆಗಳನ್ನು ಮತ ಗಳಿಕೆ, ರಾಜಕೀಯ ಲಾಭದ ಉದ್ದೇಶಕ್ಕಾಗಿ ಜಾರಿಗೆ ತಂದರೂ ಅದು ಜನರಿಗೆ ಒಳ್ಳೆಯದನ್ನೇ ಮಾಡುತ್ತದೆ.

ಈ ದಿನ ಸರ್ವೆಯಲ್ಲೂ ಈ ಅಭಿಪ್ರಾಯ ಬಂದಿತ್ತು

ಶಕ್ತಿ ಯೋಜನೆಯಿಂದ ಮಹಿಳೆಯರು ಹೊರಗಡೆ ಓಡಾಡಿ ಉದ್ಯೋಗ ಮಾಡಲೂ ಉತ್ತೇಜನ ಸಿಕ್ಕು ದೇಶದ ಆರ್ಥಿಕತೆಗೆ
ಒಳ್ಳೆಯದಾಗುತ್ತದೆ ಎಂದು ರಾಜ್ಯದ 52% ಜನ ಈ ದಿನ ನಡೆಸಿದ ಸಮೀಕ್ಷೆಯಲ್ಲಿ ಹೇಳಿದ್ದರು. ಅದರಲ್ಲೂ ಮುಂಬೈ, ಹೈದರಾಬಾದ್‌ ಕರ್ನಾಟಕದ ಮಂದಿ ಖುಷಿಯಿಂದ ಸ್ವಾಗತಿಸಿದ್ದರು. ಕೆಳಗಿನ ಕೋಷ್ಠಕದಲ್ಲಿ ವಲಯವಾರು ವಿವರ ಇದೆ.

shakthi sarve

ಶಕ್ತಿ ಯೋಜನೆ ಅತ್ಯುತ್ತಮ ಜನಪರ ಯೋಜನೆ. ಆದರೆ ಗ್ರಾಮೀಣ ಭಾಗದ ಬಸ್‌ ಕೊರತೆ, ರಸ್ತೆ ಅವ್ಯವಸ್ಥೆ ಸರಿಪಡಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು. ಆಗ ಇನ್ನಷ್ಟು ಮಹಿಳೆಯರು, ಆ ಮೂಲಕ ಕುಟುಂಬಗಳು ಸ್ವಯಂ ಸಬಲರಾಗಲು ಸಾಧ್ಯವಾಗುತ್ತದೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂವಿಧಾನದ ಧರ್ಮನಿರಪೇಕ್ಷ ಸಿದ್ಧಾಂತ ಅವಮಾನಿಸಿದ ಮೋದಿ: ಬಿ ಕೆ ಹರಿಪ್ರಸಾದ್‌ ಕಿಡಿ

ಸಾಂವಿಧಾನಿಕ ಹುದ್ದೆಯಲ್ಲಿದ್ದೂ, ಸಂವಿಧಾನ ವಿರೋಧಿ ಸಂಘಟನೆಯ ಪ್ರಚಾರ ನಡೆಸುವುದು ಪ್ರಧಾನಿ ಹುದ್ದೆಗೆ...

ಕಸಾಪ ಅಧ್ಯಕ್ಷರ ಎಡವಟ್ಟು; ಡಿಸೆಂಬರ್‌ನಲ್ಲಿ ಸಮ್ಮೇಳನ ನಡೆಯುವುದೇ ಅನುಮಾನ!

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ವಿರುದ್ಧ ಸಹಕಾರ ಇಲಾಖೆ...

ಮೈಸೂರು ದಸರಾ | ಜಂಬೂಸವಾರಿ ಮೆರವಣಿಗೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಗೆ ಸಿಎಂ...

ಅಧಿಕಾರ ಹಂಚಿಕೆ ಕುರಿತು ಯಾರೇ ಮಾತನಾಡಿದರೂ ಅದು ಪಕ್ಷ ವಿರೋಧಿ ಕೆಲಸ: ಡಿ ಕೆ ಶಿವಕುಮಾರ್

ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾರೇ ಮಾತನಾಡಿದರೂ ಅದು ಪಕ್ಷ ವಿರೋಧಿ ಕೆಲಸ....

Download Eedina App Android / iOS

X