ದಾರ್ಶನಿಕ ಎನಿಸಿದ ಶಂಕರರಿಗೆ ಸಮಾಜಶಾಸ್ತ್ರದಲ್ಲಿ ಆಳವಾದ ಶ್ರದ್ಧೆ ಇತ್ತು. ಆ ಶ್ರದ್ಧೆಯಲ್ಲಿ ಮನುವಿನ ನೆರಳು ಕಾಣಿಸಿಕೊಳ್ಳುತ್ತದೆ. ಒಂದು ವರ್ಗದವರ ಬಗ್ಗೆ ನಿಷ್ಕೃಷ್ಟವಾದ ಭಾವನೆ ಸಷ್ಟವಾಗಿ ಗೋಚರಿಸುತ್ತದೆ
‘ಸಮಾನತೆಗೂ ಶಂಕರಾಚಾರ್ಯರಿಗೂ ಯಾವುದಾದರೂ ಸಂಬಂಧವಿದೆಯೇ?’ ಈ ಪ್ರಶ್ನೆಯನ್ನು ಹುಟ್ಟು ಹಾಕಿದ್ದಾರೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್. ಜೊತೆಗೆ ಶಂಕರಾಚಾರ್ಯರೊಂದಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ತಳುಕು ಹಾಕಿ, ಅವಮಾನಕರವಾದ ಹೋಲಿಕೆಯನ್ನೂ ಅಪವ್ಯಾಖ್ಯಾನವನ್ನೂ ತುಚ್ಛೀಕರಣವನ್ನೂ ಮಾಡಿಬಿಟ್ಟಿದ್ದಾರೆ.
ಬೆಂಗಳೂರು ನಗರದಲ್ಲಿ ಬಬ್ರೂರುಕಮ್ಮೆ ಸೇವಾ ಸಮಿತಿ ಶುಕ್ರವಾರ ಹಮ್ಮಿಕೊಂಡಿದ್ದ ಶಂಕರಾಚಾರ್ಯ ಜಯಂತಿ, ವಿಶ್ವ ವಿಪ್ರತ್ರಯೀ ಪರಿಷತ್ ನೀಡುವ ‘ಶಂಕರ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾಡಿರುವ ಭಾಷಣ ಗಂಭೀರ ಸ್ವರೂಪದ್ದಾಗಿದೆ.
ಜಸ್ಟಿಸ್ ಕುಮಾರ್ ಅವರ ಮಾತುಗಳನ್ನು ಹೀಗಿವೆ: “1,300 ವರ್ಷಗಳ ಹಿಂದೆಯೇ ಶಂಕರಾಚಾರ್ಯರು ಸಮಾನತೆಯನ್ನು ಪ್ರತಿಪಾದಿಸಿದ್ದರು. ಇನ್ನು ಇಪ್ಪತ್ತು ವರ್ಷಗಳ ಬಳಿಕವಾದರೂ ಸಮಾನತೆ ತಂದವರು ಯಾರು ಎಂದು ಕೇಳಿದಾಗ ಅಂಬೇಡ್ಕರ್ ಬದಲು ಶಂಕರಾಚಾರ್ಯರ ಹೆಸರು ಹೇಳುವಂತಾಗಬೇಕು. ಅಂಬೇಡ್ಕರ್ ಸಮಾನತೆಯನ್ನು ತಂದರು ಎಂದು ಹಾದಿ ಬೀದಿಯಲ್ಲಿರುವವರೆಲ್ಲ ಮಾತನಾಡುತ್ತಿದ್ದಾರೆ. ಅಂಬೇಡ್ಕರ್ ಇಲ್ಲದೇ ಇರುತ್ತಿದ್ದರೆ ಸಮಾನತೆ ಇರುತ್ತಿರಲಿಲ್ಲ ಎಂದು ಹೇಳುವವರು ಜಾಸ್ತಿಯಾಗಿದ್ದಾರೆ. ಅಮೆರಿಕ, ಇಂಗ್ಲೆಂಡ್‌ನಿಂದ ಸಮಾನತೆಯನ್ನು ತರಲಾಯಿತು ಎಂದು ಹೇಳುವ ಬುದ್ಧಿವಂತರು ಇನ್ನೊಂದು ಕಡೆ ಇದ್ದಾರೆ. ಫ್ರೆಂಚ್ ಕ್ರಾಂತಿಯಿಂದ ಸಮಾನತೆ ಬಂತು ಎಂದೂ ಹೇಳುವವರಿದ್ದಾರೆ. ಸಾವಿರ ವರ್ಷಗಳ ಹಿಂದೆಯೇ ಸಮಾನತೆ ಸಾರಿದ್ದ ಶಂಕರಾಚಾರ್ಯರ ತತ್ವಗಳೇ ನಮಗೆ ಗೊತ್ತಿಲ್ಲ. ಶಂಕರಾಚಾರ್ಯರ ತತ್ವಗಳನ್ನು ಪಾಲನೆ ಮಾಡಿದ್ದರೆ ಇಂಥ ದುಃಸ್ಥಿತಿ ನಮಗೆ ಬರುತ್ತಿರಲಿಲ್ಲ. ದೇಶವೂ ಹಿಂದುಳಿಯುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ. ಗುರುಗಳು ಪ್ರತಿಪಾದಿಸಿದ ಸಮಾನತೆಯನ್ನು ಅನುಷ್ಠಾನಕ್ಕೆ ತರಬೇಕು. ನಾವು ಒಪ್ಪದಿದ್ದರೂ ಜಗತ್ತು ಶಂಕರಾಚಾರ್ಯರ ಅದ್ವೈತ ತತ್ವವನ್ನು ಒಪ್ಪಿಕೊಂಡಿದೆ. ಅತಿ ಬುದ್ಧಿವಂತಿಕೆ ಮತ್ತು ಬೂಟಾಟಿಕೆಯಿಂದಾಗಿ ಬ್ರಾಹ್ಮಣರು ಶ್ರದ್ಧೆಯನ್ನು ಬಿಟ್ಟಿದ್ದಾರೆ”- ಹೀಗಿತ್ತು ಅವರ ಭಾಷಣ (ವರದಿ: ಪ್ರಜಾವಾಣಿ).
ಇದನ್ನೂ ಓದಿರಿ: ಮೋದಿ ಮತ್ತು ಬಿಜೆಪಿ ನಾಯಕರು ಜಾತಿ ಗಣತಿ ವಿರುದ್ಧ ಹೇಗೆಲ್ಲ ದಾಳಿ ನಡೆಸಿದ್ದರು ಗೊತ್ತೆ?
ಯಾರೋ ಅನಾಗರಿಕರು ಈ ಮಾತುಗಳನ್ನು ಆಡಿದ್ದರೆ ಚರ್ಚೆಗೆ ಎತ್ತಿಕೊಳ್ಳುವ ಅಗತ್ಯವಿರಲಿಲ್ಲ. ಆದರೆ ಹೀಗೆ ಅಭಿಪ್ರಾಯ ಮಂಡಿಸಿರುವವರು ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದವರು. “ಶಂಕರಾಚಾರ್ಯ ಸಮಾನತೆಯ ಪ್ರತಿಪಾದಕರು, ಅವರ ವಿಚಾರಗಳನ್ನು ಪಾಲಿಸಬೇಕು, ಅದರಿಂದ ದೇಶ ಮುಂದುವರಿಯುತ್ತದೆ” ಎಂಬ ಮಾತುಗಳನ್ನು ಆಡುವುದು ಅಪಾಯಕಾರಿ. ದಾರ್ಶನಿಕ ಅಥವಾ ತತ್ವಶಾಸ್ತ್ರಕಾರರೆಂದು ಗುರುತಿಸಲ್ಪಟ್ಟ ಶಂಕರಾಚಾರ್ಯರು, ಧರ್ಮಶಾಸ್ತ್ರಕಾರ ಅಥವಾ ಸಮಾಜಶಾಸ್ತ್ರೀಯ ಕಟ್ಟಳೆಗಳನ್ನು ರೂಪಿಸಿದವನೆಂದೇ ಗುರುತಿಸಲ್ಪಟ್ಟ ಮನುವಿನ ಆರಾಧಕರಾಗಿದ್ದರು ಎಂಬುದೇ ಆಘಾತಕಾರಿ ಸಂಗತಿ.
ಹಿರಿಯ ಸಂಸ್ಕೃತ ವಿದ್ವಾಂಸರಾದ ಜಿ.ರಾಮಕೃಷ್ಣ ಅವರು ಈ ಹಿಂದೆ ‘ಈದಿನ ಡಾಟ್ ಕಾಮ್’ಗೆ ಸನಾತನ ಧರ್ಮದ ಕುರಿತು ನೀಡಿದ ವಿಶೇಷ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದರು. ಭಗವದ್ಗೀತೆ ಮತ್ತು ಅದಕ್ಕೆ ಭಾಷ್ಯ ಬರೆದ ಶಂಕರಾಚಾರ್ಯರ ಮಾತುಗಳನ್ನು ವಿಶ್ಲೇಷಿಸುತ್ತಾ, ಹಲವು ಸಂಗತಿಗಳನ್ನು ವಿವರಿಸಿದ್ದರು. “ಸಹಜಂ ಕರ್ಮ ಕೌತೇಯ ಸದಷೋಮ್ ಪಿನತ್ಯಜೇತ್- ನಿನ್ನದು ಎಂದು ಯಾವ ಕರ್ತವ್ಯವನ್ನು ನಿನಗೆ ನಿಗದಿಪಡಿಸಿದ್ದೇವೆಯೋ ಅದರಲ್ಲಿ ದೋಷವಿದ್ದರೂ ಬಿಡಬೇಡ ಕಣಯ್ಯ, ಆ ದೋಷಯುಕ್ತವಾದದ್ದನ್ನು ಮಾಡಿರುವುದರಿಂದಲೇ ನಿನಗೆ ಒಳ್ಳೆಯದಾಗುತ್ತದೆ ಎಂಬುದು ಈ ಸಾಲಿನ ಅರ್ಥ. ಇದಕ್ಕೆ ಭಾಷ್ಯ ಬರೆದಂತಹ ದೊಡ್ಡ ವೇದಾಂತಿ ಶಂಕರಾಚಾರ್ಯರು, ‘ವಿಷದಲ್ಲಿ ಹುಟ್ಟಿದ ಕ್ರಿಮಿಗೆ ವಿಷ ಸ್ವಭಾವವಾದದ್ದು. ಹಾಗೆಯೇ ಈ ಶೂದ್ರನ ಕೆಲಸವೂ ಕೂಡ’ ಎಂದಿದ್ದರು”- ಇದು ಜಿ.ರಾಮಕೃಷ್ಣ ಅವರ ವಿಶ್ಲೇಷಣೆ.
ಇದನ್ನೂ ಓದಿರಿ: ಹಿಂದೂಗಳ ಕೊಲೆಯಾದರೆ ಬಿಜೆಪಿಯೊಳಗೆ ‘ಹಬ್ಬ’ದ ಸಡಗರ! ಹೆಣ ರಾಜಕಾರಣವೇ ಇವರ ರಾಜಕೀಯ ಅಸ್ತಿತ್ವ
ಇದೇ ಜಿ.ರಾಮಕೃಷ್ಣ ಅವರು ‘ದೇವಿಪ್ರಸಾದ್ ಮತ್ತು ಲೋಕಾಯತ ದರ್ಶನ’ ಎಂಬ ಕೃತಿಯಲ್ಲಿ ‘ಧರ್ಮಶಾಸ್ತ್ರಕಾರರ ಹಲ್ಲೆ’ ಎಂಬ ಭಾಗವನ್ನು ಬರೆದಿದ್ದಾರೆ. ಆ ಬರಹದಲ್ಲಿ ಶಂಕರಾಚಾರ್ಯರ ಮತ್ತಷ್ಟು ವಿಷಕಾರಿ ಚಿಂತನೆಗಳನ್ನು ಚರ್ಚೆಗೆ ತರುತ್ತಾರೆ. ಅಲ್ಲಿಂದ ಆಯ್ದ ಮತ್ತಷ್ಟು ವಿವರಗಳನ್ನು ನಿಮ್ಮ ಮುಂದೆ ಇಡಬೇಕಾದದ್ದು ಇಂದಿನ ಅಗತ್ಯವಾಗಿದೆ.
ಬ್ರಹ್ಮಸೂತ್ರದ ಎರಡನೇ ಅಧ್ಯಾಯದ ಮೊದಲ ಸೂತ್ರದ ಬಗ್ಗೆ ವ್ಯಾಖ್ಯಾನಿಸುತ್ತಾ ಶಂಕರಾಚಾರ್ಯರು, “ಯದ್ವೈ ಕಿಂಚಮನುರವದತ್ ತದ್ಭೇಷಜಮ್” (ಮನು ಹೇಳಿರುವುದೆಲ್ಲ ಔಷಧಿ ಸಮಾನ) ಎನ್ನುತ್ತಾ ತೈತ್ತೀರೀಯ ಸಂಹಿತೆಯನ್ನು ಉದ್ಧರಿಸುತ್ತಾರೆ. ಅಂದರೆ ಮನು ಹೇಳಿದ್ದರ ಮೇಲೆ ಟೀಕೆಗಳನ್ನು ಮಾಡುವಂತಿಲ್ಲ. ಆತ ಬರೆದಿದ್ದ ಮೇಲೆ ಅದು ಶ್ರುತಿ ವಾಕ್ಯ. ಇದು ಶಂಕರಾಚಾರ್ಯರ ಧೋರಣೆ.
ಮೌರ್ಯ ಸಾಮ್ರಾಜ್ಯದ ಬಳಿಕ ಸಾಮವೇದಿ ಬ್ರಾಹ್ಮಣ ಪುಷ್ಯಮಿತ್ರ ಶುಂಗನು ಪ್ರತಿಕ್ರಾಂತಿ ಮಾಡಿ, ಬೌದ್ಧರು ಕಟ್ಟಿದ ಭಾರತವನ್ನು ನಾಶಗೈದು ಎಲ್ಲ ರೀತಿಯ ಕಟ್ಟುಪಾಡುಗಳನ್ನು ರೂಪಿಸುತ್ತಾನೆ. “ಭಾರತದ ಚರಿತ್ರೆ ಎಂದರೆ, ಬೌದ್ಧಧರ್ಮ ಮತ್ತು ಬ್ರಾಹ್ಮಣಧರ್ಮದ ನಡುವೆ ನಡೆದ ಮಾರಕ ಕಾಳಗದ ಚರಿತ್ರೆಯೇ ಆಗಿದೆ” ಎಂದಿದ್ದರು ಅಂಬೇಡ್ಕರ್. ಬೌದ್ಧಭಾರತವನ್ನು ಹೇಗೆ ನಾಶ ಮಾಡಲಾಯಿತು ಎಂಬುದನ್ನು ‘ಕ್ರಾಂತಿ ಮತ್ತು ಪ್ರತಿಕ್ರಾಂತಿ’ ಕೃತಿಯಲ್ಲಿ ವಿವರಿಸುತ್ತಾ, ಸುಮತಿ ಭಾರ್ಗವ ಎಂಬಾತನಿಂದ ‘ಮನುಸ್ಮೃತಿ’ ರೂಪುಗೊಂಡ ಬಗೆಯನ್ನು ಅಂಬೇಡ್ಕರ್ ವಿಸ್ಮೃತವಾಗಿ ಚರ್ಚಿಸುತ್ತಾರೆ.
“ಪ್ರಾಚೀನ ಕಾಲದಲ್ಲಿ ಉಪನಯನವೆಂದರೆ, ಯಾವುದೇ ವರ್ಣವೃತ್ತಿಯಲ್ಲಿ ನೈಪುಣ್ಯದ ಪದವಿ ಪ್ರಮಾಣ ಪತ್ರವನ್ನು ಗುರುವು ಶಿಷ್ಯರಿಗೆ ನೀಡುವ ಘಟಿಕೋತ್ಸವ ಸಮಾರಂಭದಂತಿತ್ತು. ಮನುಶಾಸ್ತ್ರದಲ್ಲಿ ಈ ಬಹುಮುಖ್ಯ ವ್ಯವಸ್ಥೆಯ ಅರ್ಥ ಹಾಗೂ ಉದ್ದೇಶಗಳ ಸಂಪೂರ್ಣ ಬದಲಾವಣೆ ಜಾರಿಯಾಯಿತು. ಬ್ರಾಹ್ಮಣಧರ್ಮ ತಂದ ಪ್ರಧಾನ ಬದಲಾವಣೆ ಎಂದರೆ ಉಪನಯನ ಮಾಡುವ ಅಧಿಕಾರವನ್ನು ಗುರುವಿನಿಂದ ತಂದೆಗೆ ವರ್ಗಾಯಿಸಿದ್ದು. ಇದರ ಪರಿಣಾಮವಾಗಿ- ತನ್ನ ಮಗುವಿಗೆ ಉಪನಯನ ಮಾಡುವ ಅಧಿಕಾರ ಪಡೆದ ತಂದೆ, ಮಗುವಿಗೆ ತನ್ನ ವರ್ಣವನ್ನೇ ಕೊಡುವ ಮೂಲಕ ಅದನ್ನು ಅನುವಂಶೀಯಗೊಳಿಸಿದ. ಬ್ರಾಹ್ಮಣಧರ್ಮವು ವರ್ಣ ನಿರ್ಧಾರದ ಅಧಿಕಾರವನ್ನು ಹೀಗೆ ಗುರುವಿನಿಂದ ಕಿತ್ತು ತಂದೆಗೆ ಕೊಡುವ ಮೂಲಕ ಅಂತಿಮವಾಗಿ ವರ್ಣವನ್ನು ಜಾತಿಯಾಗಿ ಬದಲಾಯಿಸಿತು. ಪುರಾತನ ಕಾಲದಿಂದಲೂ ಅನುಭವಿಸುತ್ತ ಬಂದ ಉಚ್ಚ ಅಂತಸ್ತನ್ನು ಅರ್ಹತೆ ಯೋಗ್ಯತೆಗಳ ಚಕಾರವೆತ್ತದೆ ಎಲ್ಲ ಬ್ರಾಹ್ಮಣರು ಮತ್ತವರ ಸಂತಾನದ ಸವಲತ್ತನ್ನಾಗಿ ಮಾಡುವುದೇ ಆತನ ಉದ್ದೇಶವಾಗಿತ್ತು” ಎನ್ನುತ್ತಾರೆ ಅಂಬೇಡ್ಕರ್.
ಮನು ಚಲನೆ ಇಲ್ಲದ ವರ್ಣವ್ಯವಸ್ಥೆಗೆ ಬೇಕಾದ ಎಲ್ಲ ಕಾನೂನುಗಳನ್ನು ರೂಪಿಸುತ್ತಾನೆ. ಅಂತರ್ ವರ್ಣೀಯ ವಿವಾಹಗಳನ್ನು ನಿಷೇಧಿಸುತ್ತಾನೆ. ಸ್ತ್ರೀಯರ ಮೇಲೆ ನಿರ್ಬಂಧಗಳನ್ನು ಹೇರುತ್ತಾನೆ. ಶೂದ್ರರು ಗುಲಾಮಗಿರಿ ಮಾಡಲಷ್ಟೇ ಯೋಗ್ಯರು ಎಂದು ಶಾಸನ ಬರೆಯುತ್ತಾನೆ. ಮನುಸ್ಮೃತಿಯನ್ನು ಓದುತ್ತಾ ಓದರೆ ಹುಚ್ಚುಹಿಡಿಯುವಷ್ಟು ವಿಚಿತ್ರ ನೀತಿ, ನಿಯಮಗಳು ನಮಗೆ ಕಾಣಿಸುತ್ತವೆ.
ಇದನ್ನೂ ಓದಿರಿ: ವೇಡನ್ ಎಂಬ ದಲಿತಪ್ರಜ್ಞೆಯ ಪ್ರಖರ ಕಾವ್ಯ ಜ್ವಾಲೆ
ಅಕ್ಷರಗಳು ಬ್ರಾಹ್ಮಣರಿಗೆ ಮಾತ್ರ ಎಂದು ಕಟ್ಟಲೆಯನ್ನು ಮನು ರೂಪಿಸಿದನು. ಮೇಲಿದ್ದ ಬ್ರಾಹ್ಮಣರು ಇನ್ನುಳಿದ ಜನವರ್ಗದ ಮೇಲೆ ದಬ್ಬಾಳಿಕೆ ಮಾಡುತ್ತಾ ಹೋದರು. ಇಂತಹ ಮನು ಹೇಳಿದ್ದೇ ಅಂತಿಮ ಎಂದು ಹೇಳುವ ಶಂಕರಾಚಾರ್ಯರು ಸಮಾನತೆಯ ಪ್ರತಿಪಾದಕ ಆಗಲು ಸಾಧ್ಯವೇ? ಅದರಲ್ಲೂ ಅಂಬೇಡ್ಕರ್ ಅವರ ಹೆಸರನ್ನು ಶಂಕರಾಚಾರ್ಯರೊಂದಿಗೆ ಬಳಸುವುದು ಕೂಡ ಅಂಬೇಡ್ಕರ್ ಅವರಿಗೆ ಮಾಡುವ ಅಪಮಾನವಾಗುತ್ತದೆ.
ತತ್ವಶಾಸ್ತ್ರಕಾರರಾದ ಶಂಕರಾಚಾರ್ಯರು ಒಂದು ವಾದವನ್ನು ಮಂಡಿಸುವಾಗ ಧರ್ಮಶಾಸ್ತ್ರಕಾರನಾದ ಮನುವನ್ನು ಅವಲಂಬಿಸುತ್ತಾರೆ. ತತ್ವಶಾಸ್ತ್ರಕಾರರೊಬ್ಬರು ಧರ್ಮಶಾಸ್ತ್ರಕಾರನನ್ನು ಅವಲಂಬಿಸುವಲ್ಲಿಯೇ ಸಮಸ್ಯೆ ಇದೆ ಎಂಬುದು ವಿದ್ವಾಂಸರ ಅಭಿಪ್ರಾಯ. ಕಪಿಲರ ಶಾಂಖ್ಯವಾದದ ವಿಚಾರವೊಂದನ್ನು ನಿರಾಕರಿಸಲು ಮನುವಿನ ಒಂದು ಅಂಶವನ್ನು ಬಲವಾದ ವಾದವೆಂಬಂತೆ ಶಂಕರಾಚಾರ್ಯರು ಬಳಸಿಕೊಂಡಿದ್ದಾರೆ. ‘ಮನುನಾ ಚ ಸರ್ವಭೂತೇಷು ಚಾತ್ಮಾನಂ ಸರ್ವಭೂತಾನಿ ಚಾತ್ಮನಿ; ಸಂಪಶ್ಯನ್ನಾತ್ಮಯಾಜೀ ವೈಸ್ವಾರಾಜ್ಯಮಧಿಗಚ್ಛತಿ, ಇತಿ ಸರ್ವಾತ್ಮತ್ವ ದರ್ಶನ ಪ್ರಶಂಸತಾ ಕಾಪಿಲಂ ಮತಂ ನಿಂದ್ಯತ ಇತಿ ಗಮ್ಯತೇ’. – ಕಪಿಲರು ವೇದವನ್ನು ಹಾಗೂ ವೇದಾನುಸಾರಿಯಾದ ಮನುವನ್ನು ತಿರಸ್ಕರಿಸುವುದರಿಂದ ತಾತ್ವಿಕ ನಿರೂಪಣೆಯಲ್ಲಿ ಮುಗ್ಗರಿಸಿದ್ದಾರೆಂಬುದು ಶಂಕರರ ಅಭಿಪ್ರಾಯ. ತತ್ವಶಾಸ್ತ್ರಜ್ಞನಲ್ಲದ ಮನುವನ್ನು ತತ್ವಶಾಸ್ತ್ರದ ಧೋರಣೆಯೊಂದರ ಮಾಪನಕ್ಕೆ ಶಂಕರರು ಬಳಸಿಕೊಳ್ಳುತ್ತಾರೆ. ಇನ್ನೊಂದೆಡೆ ಮನುವಿನ ಮಾತೇ ಅಂತಿಮ ಎನ್ನುತ್ತಾರೆ. ಶಂಕರರ ಅದ್ವೈತ ಸಿದ್ಧಾಂತಕ್ಕೆ ಪೂರಕವಾಗಿ ಮನುವಿನ ತತ್ವಗಳೂ ಇರುವುದನ್ನು ಜಿ.ರಾಮಕೃಷ್ಣ ಅವರು ಸೂಚ್ಯವಾಗಿ ವಿವರಿಸುತ್ತಾರೆ. ಮನುವಿನ ಶ್ರೇಣಿಕೃತ ಆದರ್ಶ ಸಮಾಜ ಏನಿತ್ತೋ ಅದರಲ್ಲಿ ಶಂಕರರ ಅದ್ವೈತವೂ ಅಡಗಿದೆ ಎಂದು ಅನುಮಾನಿಸುವುದು ತಪ್ಪಾಗಲಾರದು.
ಸಂಸ್ಕೃತಿ ವಿದ್ವಾಂಸರಾದ ಪಿ.ವಿ.ಕಾಣೆಯವರು, “ವೇದಾಂತ ಭಾಷ್ಯದಲ್ಲಿ ಶಂಕರರು ಮನುವನ್ನು ಪದೇಪದೇ ಉದ್ಧರಿಸುತ್ತಾರೆ. ಬೃಹದಾರಣ್ಯಕ ಭಾಷ್ಯದಲ್ಲಿ ಹಲವು ಬಾರಿ ಮನುವಿನ ವಾಕ್ಯಗಳನ್ನು ಉದ್ಧರಿಸಲಾಗಿದೆ. ಶಂಕರರ ಪ್ರಕಾರ ವೇದಾಂತ ಸೂತ್ರದ ರಚನೆ ಮಾಡಿದವನು ಮನುಸ್ಮೃತಿಯನ್ನು ಒಂದು ಆಧಾರವಾಗಿ ಇಟ್ಟುಕೊಂಡಿದ್ದಾನೆ” ಎನ್ನುತ್ತಾರೆ.
ತಾನು ಬಯಸಿದ ಸಮಾಜ ವ್ಯವಸ್ಥೆಗೆ ಪೂರಕವಾಗಿ ಮನುವು, ತತ್ವಶಾಸ್ತ್ರದ ಕೆಲವು ಧೋರಣೆಗಳ ಕುರಿತು ಆಸಕ್ತಿ ತೆಳೆಯುವುದು ಸಹಜವಾಗಿರಬಹುದು. ಆದರೆ ತತ್ವಶಾಸ್ತ್ರಕಾರರಾದ ಶಂಕರಾಚಾರ್ಯರು ಮೂಲತಃ ದಾರ್ಶನಿಕರು. ಸತ್ಯ ಶೋಧನೆಯ ಕಡೆಗೆ ಅವರ ಗಮನ ಇರಬೇಕಲ್ಲವೇ? ಆದರೆ ಮಹಾನ್ ವೇದಾಂತಿ ಶಂಕರಾಚಾರ್ಯ ಪದೇ ಪದೇ ಮನುವನ್ನು ಧ್ಯಾನಿಸುವುದು ಏತಕ್ಕೆ? ಅಂದರೆ ಇವರು ಬಯಸಿದ್ದು ಮನು ಪ್ರತಿಪಾದಿಸಿದ ಅಸಮಾನತೆಯ ಸಮಾಜವಲ್ಲವೇ?
ಇದನ್ನೂ ಓದಿರಿ: ಉಗ್ರರ ದಾಳಿಗೆ ಹತ್ತು ದಿನ: ‘ಹುಡುಕಿ ಹುಡುಕಿ ಬೇಟೆ’ಯಾಡುತ್ತಿರುವುದು ಯಾರನ್ನು?
ದಾರ್ಶನಿಕ ಎನಿಸಿದ ಶಂಕರರಿಗೆ ಸಮಾಜಶಾಸ್ತ್ರದಲ್ಲಿ ಆಳವಾದ ಶ್ರದ್ಧೆ ಇತ್ತು. ಆ ಶ್ರದ್ಧೆಯಲ್ಲಿ ಮನುವಿನ ನೆರಳು ಕಾಣಿಸಿಕೊಳ್ಳುತ್ತದೆ. ಒಂದು ವರ್ಗದವರ ಬಗ್ಗೆ ನಿಷ್ಕೃಷ್ಟವಾದ ಭಾವನೆ ಸಷ್ಟವಾಗಿ ಗೋಚರಿಸುತ್ತದೆ. ಬ್ರಹ್ಮಸೂತ್ರ ಭಾಷ್ಯದಲ್ಲಿ ಅವರು ದಾರ್ಶಕನಿಕತೆಯನ್ನು ಸಮಾಜಶಾಸ್ತ್ರದೊಂದಿಗೆ ಬೆರೆಸುತ್ತಾ ಹೋಗುತ್ತಾರೆ. ಈವೆರಡಕ್ಕೂ ಸಂಬಂಧ ಕಲ್ಪಿಸುತ್ತಾರೆ. ತಮ್ಮ ಸಮಾಜಶಾಸ್ತ್ರದ ಧೋರಣೆಗೆ ಮೂಲಾಧಾರವಾಗಿ ಧರ್ಮಶಾಸ್ತ್ರಗಳನ್ನು ಅವಲಂಬಿಸುತ್ತಾರೆ. ಆದರೆ ಈ ಧರ್ಮಶಾಸ್ತ್ರಗಳು ‘ಬ್ರಾಹ್ಮಣರು ಮತ್ತು ಶೂದ್ರರು’ ಎಂಬ ವಿಂಗಡಣೆಯನ್ನು ಮಾಡಿಟ್ಟಿವೆ. ಸಮಾಜವನ್ನು ಒಡೆದಿವೆ. ಶಂಕರರ ಪ್ರಕಾರ ಬ್ರಾಹ್ಮಣರು ಶೂದ್ರರಿಗಿಂತ ಶ್ರೇಷ್ಠರು. ಶೂದ್ರರೇ ಕೀಳು, ವಿಪ್ರರೇ ಮೇಲು ಎಂಬುದನ್ನು ನಿರೂಪಿಸಲು ಬ್ರಹ್ಮಸೂತ್ರ ಭಾಷ್ಯದ ಒಂದು ಇಡೀ ಭಾಗವನ್ನು ಇದರ ವಿವರಣೆಗೆ ಇಟ್ಟಿದ್ದಾರೆಂದು ವಿದ್ವಾಂಸರು ಚರ್ಚೆಗೆ ತಂದಿದ್ದಾರೆ.
ಶಂಕರರ ಪ್ರಕಾರ ಶೂದ್ರನು ದಾರ್ಶನಿಕನಾಗಲು ಯೋಗ್ಯನಲ್ಲ. ಆದರೆ ಇದೇ ಶಂಕರರ ಪ್ರಕಾರ ದಾರ್ಶನಿಕ ದೃಷ್ಟಿಯಿಂದ ಮಾತ್ರ ಮುಕ್ತಿ ಸಾಧ್ಯ. ಶೂದ್ರನಿಗೆ ದಾರ್ಶನಿಕ ದೃಷ್ಟಿಯನ್ನು ನಿರಾಕರಿಸುವುದೆಂದರೆ ಆತನಿಗೆ ಮೋಕ್ಷ ಸಿಗದಂತೆ ನೋಡಿಕೊಳ್ಳುವುದಾಗಿದೆ. ಆತ ಬಂಧನದಲ್ಲಿ ಇರಬೇಕು, ಬ್ರಾಹ್ಮಣರ ಸೇವೆ ಮಾಡಿಕೊಂಡು ಇರಬೇಕು. ಮನು ಹೇಳಿದ್ದೇ ಸರಿ ಎಂದು ವಾದಿಸುವ ಶಂಕರರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?
“ದ್ವಿಜರ ಸೇವೆಯನ್ನು ಮಾಡುವುದು ಬಿಟ್ಟು ಬೇರೇನು ಮಾಡಿದರೂ ಅದು ನಿರರ್ಥಕವಾಗುತ್ತದೆ” ಎಂಬುದು ಮನುವಿನ ವಾದ. ಶೂದ್ರರಿಗೆ ದಾರ್ಶನಿಕ ಜ್ಞಾನದ ಹಕ್ಕು ಏಕಿಲ್ಲ ಎಂಬುದನ್ನು ಬ್ರಹ್ಮಸೂತ್ರ 1-3-34ರ ಮೇಲಿನ ಭಾಷ್ಯದಲ್ಲಿ ಶಂಕರರು ನೀಡಿರುವ ಉತ್ತರ ಹೀಗಿದೆ: “ಶೂದ್ರರಿಗೆ ಅಂತಹ ಯಾವ ಹಕ್ಕೂ ಇಲ್ಲ; ಏಕೆಂದರೆ ಅವರು ವೇದಾಧ್ಯಯನ ಮಾಡುವಂತಿಲ್ಲ. ವೇದವನ್ನು ಓದಿ ಅದನ್ನು ಅರ್ಥ ಮಾಡಿಕೊಂಡಿರುವವನಿಗೆ ವೇದಾರ್ಥದಲ್ಲಿ ಪ್ರವೇಶವಿರುತ್ತದೆ. ವೇದಾಧ್ಯಯನಕ್ಕೆ ಪೂರ್ವಭಾವಿಯಾಗಿ ಉಪನಯನಕ್ಕೂ ಶೂದ್ರನು ಅರ್ಹನಲ್ಲವಾದ್ದರಿಂದ ಅವನಿಗೆ ವೇದಾಧ್ಯಯನವೆಲ್ಲಿಯದು? ಅದು ದ್ವಿಜರಿಗೆ ಮಾತ್ರ ಸೇರಿದೆ”. (ಜಿ.ರಾಮಕೃಷ್ಣ, ದೇವಿಪ್ರಸಾದ್ ಮತ್ತು ಲೋಕಾಯತ ದರ್ಶನ, ಪು.ಸಂ. 45)

ಬ್ರಹ್ಮಸೂತ್ರ 1-3-36ರ ಭಾಷ್ಯದಲ್ಲಿ “ಶೂದ್ರರಿಗೆ ಸಂಸ್ಕಾರಗಳು ಇಲ್ಲವೆಂಬುದನ್ನು ಪದೇ ಪದೇ ಹೇಳಲಾಗಿದೆ. ಮನು ಅವರನ್ನು ಏಕಜಾತಿಯವರೆನ್ನುತ್ತಾನೆ (ಅಂದರೆ ಅವರು ದ್ವಿಜರಲ್ಲ ಎಂದರ್ಥ). ಇನ್ನೊಂದೆಡೆ ಮನು ಹೇಳಿರುವುದು ‘ನ ಶೂದ್ರೇ ಪಾತಕಂ ಕಿಂಚಿನ್ನ ಚ ಸಂಸ್ಕಾರಮರ್ಹತಿ’ ಎಂದು. (ಜಿ.ರಾಮಕೃಷ್ಣ, ಪು. 45)
ಶಂಕರರು ಮುಂದುವರಿದು ಮತ್ತಷ್ಟು ದಾಳಿಯನ್ನು ಶೂದ್ರರ ಮೇಲೆ ಮಾಡುವುದನ್ನು ನಾವು ಕಾಣಬಹುದು: “ಸ್ಮೃತಿಯಲ್ಲಿ ಶೂದ್ರನಿಗೆ ವೇದಾಧ್ಯಯನವಿರಲಿ, ವೇದ ಶ್ರವಣವೂ ಕೂಡದೆಂದು ಹೇಳಿದೆ. ಆದ್ದರಿಂದ ವೇದಾರ್ಥ ಮತ್ತು ವೈದಿಕ ಕ್ರಿಯೆಗಳು ಅವರಿಗೆ ನಿಷಿದ್ಧ. ಅವರಿಗೆ ವೇದ ಶ್ರವಣ ಸಲ್ಲದೆಂದು ಈ ಕೆಳಗಿನ ವಾಕ್ಯಗಳಲ್ಲಿ ಹೇಳಿದೆ.- ವೇದ ಶ್ರವಣ ಮಾಡುವ ಶೂದ್ರನ ಕಿವಿಗೆ ಕರಗಿಸಿದ ಸೀಸ ಮತ್ತು ಅರಗು ತುಂಬಬೇಕು (ಗೌತಮ ಧರ್ಮಸೂತ್ರ 2-3-4). ಶೂದ್ರನು ಸ್ಮಶಾನ ಸದೃಶ್ಯನಾದವನು. ಆದ್ದರಿಂದ ಶೂದ್ರನ ಸನಿಹದಲ್ಲಿ ವೇದ ಓದಬಾರದು”- ಹೀಗಿದೆ ಶಂಕರರ ವಾದ ಸರಣಿ. “ಶೂದ್ರನ ಸನಿಹದಲ್ಲೇ ವೇದವನ್ನು ಓದಬಾರದು ಎಂದ ಮೇಲೆ ಇನ್ನ ಶೂದ್ರನೇ ವೇದ ಓದಲು ಹೇಗೆ ತಾನೇ ಸಾಧ್ಯ ಬಿಡಿ” ಎಂದು ವಿದ್ವಾಂಸರಾದ ಜಿ.ಆರ್. ಪ್ರಶ್ನಿಸುತ್ತಾರೆ.
“ವೇದೋಚ್ಚಾರಣೇ ಜಿಹ್ವಾಚ್ಛೇದೋ ಧಾರಣೇ ಶರೀರ ಭೇದ ಇತಿ”- (ಅವನು ವೇದವನ್ನು ಉಚ್ಚರಿಸಿದರೆ ಅವನ ನಾಲಿಗೆ ಕತ್ತರಿಸಬೇಕು: ವೇದವನ್ನು ಧಾರಣೆ ಮಾಡಿದರೆ, ಅರ್ಥಾತ್ ಮೈಗೂಡಿಸಿಕೊಂಡರೆ, ಅವನ ಶರೀರವನ್ನು ಕತ್ತರಿಸಬೇಕು), ‘ನ ಶೂದ್ರಾಯ ಮತಿಂ ದದ್ಯಾತ್’ (ಶೂದ್ರನಿಗೆ ಜ್ಞಾನ ಕೊಡಕೂಡದು) ಮತ್ತು ‘ದ್ವಿಜಾತೀನಾಂ ಅಧ್ಯಯನಮಿಜ್ಯಾ ದಾನಮ್’- (ಅಧ್ಯಯನ, ಯಜ್ಞಕ್ರಿಯೆ ಹಾಗೂ ದಾನ ಸ್ವೀಕಾರ ದ್ವಿಜರಿಗೆ ಸೇರಿದ್ದು: ಗೌತಮ ಸೂತ್ರ 2-1-1-).
ಇದನ್ನೂ ಓದಿರಿ: ಪಹಲ್ಗಾಮ್ ದಾಳಿಯ ನಂತರದ ಯುದ್ಧೋನ್ಮಾದ ಸರಿಯೇ?
ಈ ಮಾತುಗಳನ್ನು ಉಲ್ಲೇಖಿಸುತ್ತಾ ಬರೆಯುವ ಜಿ.ಆರ್., “ಕಟ್ಟಾ ಅನಾಗರಿಕತೆಗೆ ಅಥವಾ ಬರ್ಬರತೆಗೆ ಶಂಕರರು ಉದ್ಧರಿಸಿರುವ ವಾಕ್ಯಗಳು, ಪ್ರಾಚೀನ ಗ್ರೀಸ್ ಮತ್ತು ರೋಮ್‌ಗಳಲ್ಲಿನ ಗುಲಾಮಿ ಪದ್ಧತಿಯ ಮಾತುಗಳಿಗಿಂತ ಹೆಚ್ಚು ಘೋರವಾಗಿವೆ” ಎನ್ನುತ್ತಾರೆ.
ಇಂತಹ ಶಂಕರಾಚಾರ್ಯರನ್ನು ಸಮಾನತೆಯ ಪ್ರತಿಪಾದಕ ಎನ್ನುವುದು ಹಿಮ್ಮುಖ ಚಲನೆಯಾಗುತ್ತದೆ. ಅದರಲ್ಲೂ ಬಾಬಾಸಾಹೇಬರ ಹೆಸರಿನ ಜೊತೆ ಚರ್ಚಿಸುವುದು ಅನಾಹುತಕಾರಿಯೂ ಹೌದು. ಅಸಮಾನತೆಯ ಪ್ರತಿಪಾದಕನಾದ ವ್ಯಕ್ತಿ ಶಂಕರಾಚಾರ್ಯ. ಮಹಾನ್ ಮಾನವತಾವಾದಿ, ಸಮಾನತಾವಾದಿ ಡಾ.ಬಿ.ಆರ್.ಅಂಬೇಡ್ಕರ್. ಬಾಬಾಸಾಹೇಬರ ಚಿಲುಮೆಯಂತಹ ಮನುಷ್ಯಪ್ರೀತಿಯನ್ನು ಶಂಕರಾಚಾರ್ಯರಲ್ಲಿ ಕಾಣಲು ಸಾಧ್ಯವಿಲ್ಲ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.
It looks like the article is written with an agenda.
I wish you good luck.
Truth always shine … If Shankara is a useless guy, then his works will die sooner than later!
Great eye opening messege to society
ಈ ಲೇಖನ ಬಹಳ ಮಹತ್ವದ್ದು ಮತ್ತು ಸಾಂದರ್ಭಿಕವಾದದ್ದು. ಶಂಕರಾಚಾರ್ಯರು ಕೇವಲ ಶೂದ್ರರ ಬಗ್ಗೆಯಷ್ಟೇ ಅಲ್ಲದೇ, ಬ್ರಾಹ್ಮಣ ಹೆಂಗಸರ ಬಗೆಗೂ ಇಂಥದೇ ಅಭಿಪ್ರಾಯವನ್ನು ಹೊಂದಿದ್ದರು ಎನ್ನುವದು ಮತ್ತು ಶೂದ್ರರನ್ನು ವಾಚಿಸಬೇಕಾದಾಗೆಲ್ಲ ಶೂದ್ರ ಮತ್ತು ಸ್ತ್ರೀಯರು ಎಂದು ಒಟ್ಟಗೇ ಹೇಳುತ್ತಾರೆ ಎನ್ನುವದು ಇಲ್ಲಿ ಬಂದಿದ್ದರೆ ಹೆಚ್ಚು ಚೆನ್ನಾಗಿರುರುತ್ತಿತ್ತು.
ವೈದಿಕ ಧರ್ಮದ ತಾತ್ವಿಕತೆಯನ್ನು ಎತ್ತಿ ತೋರಿಸದೇ, ವೈದಿಕ ಆಧಾರ ಗ್ರಂಥಗಳನ್ನು ವಿಶ್ಲೇ಼ಷಿಸಿ ಪ್ರಶ್ನಿಸಿದಲ್ಲದೇ ಹಿಂದುತ್ವವನ್ನು ಎದುರಿಸುವುದಾಗಲೀ,ಹಿಂದೂ ಸಮಾಜವನ್ನು ಸುಧಾರಿಸುವದಾಗಲೀ ಸಾಧ್ಯವಿಲ್ಲ.
ಈ ಲೇಖನದ ಇನ್ನೊಂದು ಮಹತ್ವವೇನೆಂದರೆ, ಇದು ಬ್ರಾಹ್ಮಣರಿಗೇ ಅವರ ಬದುಕಿನ ಅಧಾರಭೂತ ತತ್ವಗಳನ್ನು ಅವರ ಜಾತಿಯನ್ನು ನಿಂದಿಸದೇ ಎತ್ತಿ ತೋರಿಸುವ ಹಾಗಿದೆ. ಹೆಚ್ಚಿನ ಬ್ರಾಹ್ಮಣರಿಗೆ, ಬ್ರಾಹ್ಮಣ ಪುರೋಹಿತರು ಮತ್ತು ಬ್ರಾಹ್ಮಣ ಮಠಾಧೀಶರನ್ನೂ ಸೇರಿಸಿದಂತೆ ವೈದಿಕ ಧರ್ಮದ ತಾತ್ವಿಕ ಆಧಾರ ಗೊತ್ತಿಲ್ಲ. ಮುಂದುವರಿದು ಇದು ಗೊತ್ತಿಲ್ಲ ಅನ್ನುವುದೂ ಗೊತ್ತಿಲ್ಲ. ನಮ್ಮಲ್ಲಿ ಒದಬಲ್ಲವರು ಒದುವುದು secondary ಮೂಲಗಳಿಂದ. ವಿವೇಕಾನಂದರಂಥವರೂ ಒಂದು ಕಡೆ ಶಂಕರಾಚಾರ್ಯರನ್ನು ಹೃದಯಹೀನ ಎಂದು ಕರೆಯುವುದು ಬಿಟ್ಟರೆ ಬೇರೆಲ್ಲೂ ಅವರನ್ನು ಸಕಾರಣ ವಿಸ್ಲೇಷಿಸುವುದಿಲ್ಲ. ಶಂಕರಾಚಾರ್ಯರ ತಾತ್ವಿಕ ದರ್ಶನ ಹಿಂದೂ ಪರಂಪರೆಯ ಹಲವು ಧಾರೆಗಳಲ್ಲಿ ಒಳಮೈಯಾಗಿ ಕೆಲಸ ಮಾಡುತ್ತದೆ. ಉದಾಹರಣೆಗೆ ಬಸವ,ಅಲ್ಲಮಪ್ರಭುಗಳಲ್ಲಿ, ಕುವೆಂಪು ಅವರಲ್ಲಿ. ಹಾಗಾಗಿ, ಶಂಕರಾಚಾರ್ಯರನ್ನು ಅವರ ಸಾಮಾಜಿಕ ಧೋರಣೆಯಿಂದ ಪ್ರತ್ಯೇಕಿಸಿ ದಾರ್ಶನಿಕರನ್ನಾಗಿ ನೋಡುವುದೇ ಭಾರತದ ವಿದ್ವತ್ಪರಂಪರೆಯಲ್ಲಿ ಮುಂದುವರಿದು ಬಂದಿದೆ.
ಅದ್ವೈತ ತತ್ವ, ತನ್ನಷ್ಟಕ್ಕೆ ತಾನೇ ಸಾಮಾಜಿಕ ಕ್ರಾಂತಿಕಾರಕತೆಯ ಸಾಧ್ಯತೆಯನ್ನು ಹೊಂದಿದೆ. ಬಸವಣ್ಣ ಮತ್ತು ಅವರ ಸಂಗಡಿಗರು,ವಿವೇಕಾನಂದ, ಕುವೆಂಪು ಇವರೆಲ್ಲ ಇದಕ್ಕೆ ಉದಾಹರಣೆ. ಶಂಕರಾಚಾರ್ಯರು ಅದ್ವೈತವನ್ನು ದರ್ಶಿಸಿದರೂ ಬಸವ ಮೊದಲಿಗೆ ಅದ್ವೈತದ ಸಾಮಾಜಿಕ ಸಾಧ್ಯತೆಯನ್ನು ಕಾಣುತ್ತಾರೆ.
ಶಂಕರಾಚಾರ್ಯರನ್ನು ವಿಮರ್ಶಿಸುವದೆಂದರೆ ವೈದಿಕ ಪರಂಪರೆಯ ಭದ್ರ ಕೋಟೆಗೇ ಕೈ ಹಾಕಿದಂತೆ. ಹಾಗಾಗಿಯೇ ಜನ ತೀವ್ರವಾಗಿ ಪ್ರತಿಕ್ರಿಯಿಸುತ್ತಾರೆ. ಆದರೆ ಈ ಕೋಟೆಯನ್ನು ಕೆಡವಿದಲ್ಲದೇ ಹಿಂದೂ ಸಮಾಜಕ್ಕೆ ಮುಂಚಲನೆಯಿಲ್ಲ.