ಮಾನ್ಯ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರೇ,
ಶನಿವಾರ(ಸೆ.28) ಜೆಡಿಎಸ್ ರಾಜ್ಯ ಕಚೇರಿ ಜೆ ಪಿ ಭವನದಲ್ಲಿ ನೀವು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತೆಯಾಗಿ ನಾನೂ ಹಾಜರಿದ್ದೆ. ನೀವು ಯಾವ ಯಾವುದೋ ವಿಚಾರಗಳಿಂದ ಮಾನಸಿಕವಾಗಿ ಬಹಳ ಕ್ಷೋಭೆಗೊಳಗಾದಂತೆ ಮಾತನಾಡಿದ್ದೀರಿ. ರಾಜಕೀಯ ಕೆಸರೆರಚಾಟದ ಮಧ್ಯೆ ನೀವು ಈ ಸಮಾಜದಲ್ಲಿ ಅತ್ಯಂತ ಹೀನಕೃತ್ಯ ಎನ್ನಬಹುದಾದ ಅತ್ಯಾಚಾರದ ಸಂತ್ರಸ್ತೆಯರು ಅಥವಾ ಪ್ರಜ್ವಲ್ ನಂತಹ ಹಣ ಸೊಕ್ಕಿದ ಯುವಕರ ಪೈಶಾಚಿಕ ಕೃತ್ಯದ ಬಲಿಪಶು ಮಹಿಳೆಯರನ್ನು ಹೀನಾಯವಾಗಿ ಅವಮಾನಿಸಿದ್ದೀರಿ. ಬೇಕಿದ್ದರೆ ನಿಮ್ಮ ಪ್ರೆಸ್‌ಮೀಟ್‌ನ ವಿಡಿಯೊ ಮತ್ತೆ ಹಾಕಿ ನೋಡಿ.
ಕುಮಾರಸ್ವಾಮಿ ಅವರೇ ನಿಮಗೂ ಒಬ್ಬಳು ಮಗಳಿದ್ದಾಳೆ ಅಂತ ಗೊತ್ತು. ಪತ್ನಿ, ಸೊಸೆ, ಸೋದರಿಯರೂ ಇದ್ದಾರೆ. ಅತ್ಯಾಚಾರ ಅಥವಾ ಲೈಂಗಿಕ ಶೋಷಣೆಗೆ ಒಳಗಾದವರ ಗುರುತು, ಹೆಸರು, ವಿಳಾಸ ಯಾವುದನ್ನೂ ಬಹಿರಂಗಪಡಿಸಬಾರದು ಎಂಬುದು ಈ ನೆಲದ ಕಾನೂನಿನ ಸಾರ. ನೀವು ದಶಕಗಳಿಂದ ಶಾಸನ ರೂಪಿಸುವ ಹಲವು ಸ್ಥಾನ, ಜವಾಬ್ದಾರಿಗಳನ್ನು ನಿರ್ವಹಿಸಿದವರು. ನಿಮಗೆ ಇದರ ಅರಿವಿರಬೇಕು.
ಈಗ ವಿಷಯಕ್ಕೆ ಬರುತ್ತೇನೆ. ಸಿದ್ದರಾಮಯ್ಯ ಸರ್ಕಾರ ಮತ್ತು ಒಂದು ಖಾಸಗಿ ಮಾಧ್ಯಮವನ್ನು ಗುರಿಯಾಗಿಸಿ ನೀವು ಮಾತನಾಡುವಾಗ, “ಅದೇನೋ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಂದು ಟಿವಿಯಲ್ಲಿ ಕೂರ್ಸೋದು, ಪೊಲೀಸರಿಗೆ ದೂರು ಕೊಡಿಸೋದು” ಎಂದು ಎರಡೆರಡು ಬಾರಿ ಹೇಳಿದ್ದೀರಿ. ನೀವು ಯಾವ ಪ್ರಕರಣದ ಬಗ್ಗೆ ಹೇಳಿದ್ದು ಅಂತ ಎಂತಹ ದಡ್ಡರಿಗಾದರೂ ಅರ್ಥವಾಗುತ್ತದೆ.
ಪೆನ್‌ಡ್ರೈವ್ ಹಂಚಿದವರ ಬಗ್ಗೆ ಅಷ್ಟೊಂದು ಮಾತಾಡಿದ್ರಿ, ಯಾಕಾಗಿ? ಮಹಿಳೆಯರ ಐಡೆಂಟಿಟಿ ರಿವೀಲ್ ಆಗುತ್ತದೆ, ಅದಾಗಬಾರದು ಅಂತ ಅಲ್ವಾ? ಹಾಗಿದ್ದರೆ ಅತ್ಯಾಚಾರ ಸಂತ್ರಸ್ತರು ಮುಖ ಮುಚ್ಚದೇ ಹಾಗೇ ಬರೋದಂದ್ರೆ ಅದರ ಪರಿಣಾಮ ಪೆನ್‌ಡ್ರೈವ್ ಹಂಚಿದಂತೆಯೇ ಅಲ್ವಾ? ನೀವ್ಯಾಕೆ ಒಂದೊಂದು ಸಲ ಒಂದೊಂದು ತರ ಮಾತಾಡ್ತೀರಿ?
ಈ ನನ್ನ ಪ್ರಶ್ನೆಗೆ ಉತ್ತರಿಸುವಿರಾ? ಅತ್ಯಾಚಾರ ಎಸಗೋದು ತಪ್ಪಾ ಅಥವಾ ಸಂತ್ರಸ್ತೆಯರು ದೂರು ಕೊಡೋದು ತಪ್ಪಾ? ಮಾಧ್ಯಮಗಳು ಅಂತಹ ನೊಂದ ಮಹಿಳೆಯರಿಗೆ ತಮ್ಮ ನೋವು ಹೇಳಿಕೊಳ್ಳಲು ವೇದಿಕೆ ಒದಗಿಸೋದು ತಪ್ಪಾ? ನಿಮ್ಮ ಸೋದರನ ಮಗ, ನಿಮ್ಮ ಪಕ್ಷದ ಸಂಸದನಾಗಿದ್ದ ಪ್ರಜ್ವಲ್ ರೇವಣ್ಣ ಮಾಡಿದ ಘನಕಾರ್ಯದ ವಿಡಿಯೊಗಳನ್ನು ನೀವು ನೋಡಿಲ್ಲವಾದರೆ ತಕ್ಷಣ ತರಿಸಿ ನೋಡಿ. ನಿಮಗೆಲ್ಲ ಊಟ ಹಾಕಿದ ವೃದ್ಧ ಮನೆಗೆಲಸದಮ್ಮನ ಮೇಲೂ ಅತ್ಯಾಚಾರ ಎಸಗಿದ್ದಕ್ಕೆ ಆತನೇ ಪುರಾವೆ ಇಟ್ಟುಕೊಂಡಿದ್ದಾನೆ. ನಿಮ್ಮ ಪಕ್ಷದ ನಿಮ್ಮ ಕುಟುಂಬದವರ ಗೆಲುವಿಗಾಗಿ ದುಡಿದ ಮಹಿಳೆಯರನ್ನು ತನ್ನ ಕಾಮ ನೀಗಿಸಲೂ ದುಡಿಸಿಕೊಂಡಿದ್ದಾನೆ. ಜಿಲ್ಲೆಯ ಅಧಿಕಾರಿಗಳು, ಪಂಚಾಯ್ತಿ ಸದಸ್ಯೆಯರು, ಪೊಲೀಸ್ ಸಿಬ್ಬಂದಿ, ಶಿಫಾರಸು ಪತ್ರ ಕೇಳಿ ಬಂದ ಮಹಿಳೆಯರು ಹೀಗೆ ಯಾರನ್ನೂ ಯಾವ ವಯೋಮಾನದವರನ್ನೂ ಬಿಟ್ಟಿಲ್ಲ.
ಆತನ ಈ ಚಾಳಿಗೆ ನಿಮ್ಮ ತಂದೆ ದೇಶದ ಮಾಜಿ ಪ್ರಧಾನಿ ದೇವೇಗೌಡರಿಗೆ ಸರ್ಕಾರ ಕೊಟ್ಟ ಬಂಗಲೆ, ನಿಮ್ಮ ಅಣ್ಣ ಬೆಂಗಳೂರು, ಹಾಸನಗಳಲ್ಲಿ ಕಟ್ಟಿಸಿದ ಭವ್ಯ ಬಂಗಲೆಗಳೆಲ್ಲವನ್ನೂ ಬಳಸಿದ್ದಾನೆ. ನಿಮಗೆ ಆತನ ನಡವಳಿಕೆಯ ಬಗ್ಗೆ, ಆತ ಸಂಸದನಾಗಿ ಏನು ಮಾಡುತ್ತಿದ್ದಾನೆ ಎಂಬ ಮಾಹಿತಿ ಇರಲಿಲ್ಲವೇ? ಒಂದು ವರ್ಷದ ಹಿಂದೆಯೇ ಈ ಬಗ್ಗೆ ಸುದ್ದಿ ಹಬ್ಬಿತ್ತು. ಆಗ ನೀವು ಯಾವ ಕ್ರಮ ಕೈಗೊಂಡ್ರಿ? 2024ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ಆತನಿಗೇ ಕೊಟ್ಟು, “ಇವ ರೇವಣ್ಣನ ಮಗ ಅಲ್ಲ ನನ್ನ ಮಗ” ಅಂತ ವೇದಿಕೆಯಲ್ಲಿ ಬೆನ್ನು ತಟ್ಟಿ ಮತ ಯಾಚನೆ ಮಾಡಿದ್ರಲ್ವಾ? ಆತ ವಿದೇಶಕ್ಕೆ ಪರಾರಿಯಾದ ಕೂಡಲೇ ರೇವಣ್ಣ ಕುಟುಂಬವೇ ಬೇರೆ ಅಂದಿದ್ರಿ ನೆನಪಿದೆಯಾ? ಎಷ್ಟು ಅಂತ ಮಾತು ಬದಲಿಸುತ್ತೀರಿ? ಸುಳ್ಳು ಹೇಳುತ್ತೀರಿ? ನಿಮ್ಮ ಕುಟುಂಬದಲ್ಲಿಯೇ ಅಂತಹ ಜಗತ್ ಕುಖ್ಯಾತ ಅತ್ಯಾಚಾರಿಯನ್ನು ಇಟ್ಟುಕೊಂಡು ಸಂತ್ರಸ್ತ ಹೆಣ್ಣುಮಕ್ಕಳನ್ನು ಸಾರ್ವಜನಿಕವಾಗಿ ಗೇಲಿ ಮಾಡಲು ಮನಸ್ಸಾದರೂ ಹೇಗೆ ಬಂತು? ನಿಮ್ಮ ಪ್ರಕಾರ ಪ್ರಜ್ವಲ್ ಮೇಲೆ ಸುಳ್ಳು ಕೇಸು ದಾಖಲಿಸಲಾಗಿದೆಯಾ? ಆ ಹೆಣ್ಣುಮಕ್ಕಳು ಮುಖ ಹೊತ್ತುಕೊಂಡೇ ಟೀವಿ ಕ್ಯಾಮೆರಾ ಮುಂದೆ ಬರಬೇಕಿತ್ತಾ?
ಬಿಜೆಪಿಯ ಶಾಸಕ ಮುನಿರತ್ನನಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯರು ಮುಖ ಮುಚ್ಚಿಕೊಂಡು ಟಿವಿ ಮುಂದೆ ಬಂದಿದ್ದು, ಪೊಲೀಸರಿಗೆ ದೂರು ಕೊಟ್ಟಿದ್ದು ತಪ್ಪೇ? ಒಬ್ಬ ಶಾಸಕನಾಗಿ ಆತ ಪಕ್ಷಕ್ಕಾಗಿ ದುಡಿದ ಮಹಿಳೆಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡಿದ ಆರೋಪವಿದೆ. ಅದರಲ್ಲೂ HIV ಸೋಂಕಿತ ಮಹಿಳೆಯರಿಂದ ಹನಿಟ್ರ್ಯಾಪ್ ಮಾಡಿಸಿ ಮಾರಕ ರೋಗ ಹರಡುತ್ತಿದ್ದ ಎಂಬ ವಿಚಾರ ಎಂತಹ ಕಠಿಣ ಹೃದಯಿಗಳನ್ನಾದರೂ ಅಲುಗಾಡಿಸಿಬಿಡುತ್ತದೆ. ನಿಮ್ಮದು ಬಹಳ ಮೃದು ಹೃದಯ ಎಂದು ಹೇಳಿಕೊಳ್ಳುತ್ತೀರಿ, ಈ ಪ್ರಕರಣವನ್ನು ಸರ್ಕಾರದ ಷಡ್ಯಂತ್ರ ಅಂತೀರಾ? ಹಾಗಿದ್ದರೆ ಅತ್ಯಾಚಾರ ಸಂತ್ರಸ್ತರು ದೂರು ಕೊಡುವುದು, ಅವರಿಗೆ ನಮ್ಮ ಕಾನೂನು ನ್ಯಾಯ ಕೊಡಿಸುವುದು, ಅಪರಾಧಿಗಳಿಗೆ ಶಿಕ್ಷೆ ಕೊಡೋದು ಯಾವುದೂ ಬೇಡವೇ?
ನೀವು ಪಂಚಾಯ್ತಿ ಸದಸ್ಯ ಅಲ್ಲ ಸ್ವಾಮಿ, ಕೇಂದ್ರದ ಘನತೆವೆತ್ತ ಸಚಿವ. ಒಂದು ವೇಳೆ ಪಂಚಾಯ್ತಿ ಸದಸ್ಯನೇ ಹೀಗೆ ಮಾತಾಡಿದ್ರೂ ನಾನು ಬಲವಾಗಿ ಖಂಡಿಸುತ್ತೇನೆ. ಅದರಲ್ಲೂ ಎರಡು ಬಾರಿ ಕಾಂಗ್ರೆಸ್, ಬಿಜೆಪಿಯವರ ಸಹಕಾರದಿಂದ ಮುಖ್ಯಮಂತ್ರಿ ಆಗಿದ್ದವರು, ಈಗ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕೇಂದ್ರದ ಸಚಿವರಾಗಿದ್ದೀರಿ. ಹೆಣ್ಣುಮಕ್ಕಳನ್ನು, ಅದರಲ್ಲೂ ಅತ್ಯಾಚಾರ ಸಂತ್ರಸ್ತರನ್ನು ನಿಮ್ಮ ನೀಚ ರಾಜಕೀಯ ಕೆಸರೆರಚಾಟಕ್ಕೆ ಬಳಸದಿರಿ.
ದೇವೇಗೌಡರಿಗೆ ಕಣ್ಣೀರು ಹಾಕಿಸಿದ್ದು ಸಿದ್ದರಾಮಯ್ಯ ಸರ್ಕಾರ ಅಂದಿದ್ದೀರಿ, ಯಾವ ಕಾರಣಕ್ಕೆ ಅವರು ಕಣ್ಣೀರು ಹಾಕಿದ್ರು ಅಂತ ಹೇಳಲು ಮಾತ್ರ ಮರೆತಿದ್ರಿ. ಅದು ಅವರ ಮಗ-ಮೊಮ್ಮಕ್ಕಳ ಕಾರಣಕ್ಕೆ ಅಂತಾದರೆ ಅದಕ್ಕೆ ಕಾರಣ ಸರ್ಕಾರ ಅಲ್ಲ. ನಿಮ್ಮ ಅಣ್ಣನ ಇಡೀ ಕುಟುಂಬ ಕಾರಣ. ಅವರು ಮಾಡಿರುವ ಕೃತ್ಯ ನಾಗರಿಕ ಸಮಾಜ ಒಪ್ಪುವ ಕೆಲಸವಲ್ಲ. ಈ ನೆಲದ ಕಾನೂನಿನಡಿಯೇ ಅವರಿಗೆ ಶಿಕ್ಷೆಯಾಗುತ್ತದೆ. ಆ ಕಾರಣಕ್ಕೆ ಕಣ್ಣೀರು ಹಾಕಿದ ದೇವೇಗೌಡರ ಶಾಪ ಸರ್ಕಾರಕ್ಕೆ ತಟ್ಟುತ್ತದೆ ಎಂದಾದರೆ, ನೂರಾರು ಸಂತ್ರಸ್ತ ಕುಟುಂಬದ ಕಣ್ಣೀರ ಶಾಪ ನಿಮ್ಮ ಕುಟುಂಬಕ್ಕೂ ತಟ್ಟುತ್ತದೆ ಎಂಬ ಅರಿವು ನಿಮಗಿರಲಿ. ನಮಸ್ಕಾರ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.
Nice letter
ಮತ್ತೆ ಮತ್ತೆ ವಿವಿಧ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಲು ಹೆಮ್ಮೆ ಪಡುವಂತೆ ಬರೆದಿದ್ದಾರೆ.
Convincing slap