‘ಅಹಿಂದ’ಕ್ಕೆ ರಾಯಭಾರಿ ಸಿದ್ದು, ದೇಶದಲ್ಲಿ ಒಬಿಸಿ ರಾಜಕಾರಣಕ್ಕೆ ಮಾದರಿಯಾಗಿ ಕರ್ನಾಟಕ!

Date:

Advertisements
ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ನಾಯಕರಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿ ಗುರುತಿಸಿಕೊಂಡಿದ್ದರೂ ಅವರಿಗೆ ಹಾರ್ಡ್‌ಕೋರ್‌ ಹಿಂದುತ್ವವಾದಿ ಲೇಪನವಿದೆ. ಸಿದ್ದರಾಮಯ್ಯ ಜಾತ್ಯತೀತ ನಾಯಕರಾಗಿ, ಪ್ರಜಾಪ್ರಭುತ್ವವಾದಿಯಾಗಿ ಗುರುತಿಸಿಕೊಂಡವರು. ಹೀಗಾಗಿ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಮುನ್ನುಗ್ಗಲು, ಕಾಂಗ್ರೆಸ್ಸಿಗೆ ಅಹಿಂದ ಮತಗಳನ್ನು ಸೆಳೆಯಲು ಇದು ಭೂಮಿಕೆಯಾಗಲೂಬಹುದು.

ದೇಶದ ಚುನಾವಣೆಯ ಮೇಲೆ ದಶಕಗಳ ಕಾಲ ಪರಿಣಾಮ ಬೀರಿದ ಕೋಮುವಾದಿ, ರಾಷ್ಟ್ರೀಯವಾದಿ ಹಾಗೂ ಹಿಂದುತ್ವವಾದಿ ರಾಜಕಾರಣ ತನ್ನ ಕ್ರೌರ್ಯದ ಪರಿಧಿಯನ್ನು ಒಂದು ಸುತ್ತು ಪೂರ್ಣಗೊಳಿಸಿದ್ದು, ನಿಧಾನವಾಗಿ ತನ್ನ ವಿಷದ ಪೊರೆಯನ್ನು ಕಳಚಿಕೊಳ್ಳಲು ಆರಂಭಿಸಿದೆ. ಈ ಹೊತ್ತಿನಲ್ಲಿ ದಶಕಗಳ ಕಾಲ ಆರ್‌ಎಸ್‌ಎಸ್‌ ಪೋಷಿತ ಬಿಜೆಪಿಯ ಮತೀಯ ರಾಜಕಾರಣದ ಹೊಡೆತಕ್ಕೆ ಸಿಲುಕಿ ನಜ್ಜುಗುಜ್ಜಾಗಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ತನ್ನ ಅಸ್ತಿತ್ವಕ್ಕಾಗಿ ಹೊಸ ದಾರಿಯ ಸ್ಪಷ್ಟ ಹುಡುಕಾಟದಲ್ಲಿದೆ.

ರಾಷ್ಟ್ರೀಯ ಮಟ್ಟದಲ್ಲಿ 15 ವರ್ಷದಿಂದ ಅಧಿಕಾರ ಗದ್ದುಗೆಯಿಂದ ದೂರವೇ ಉಳಿದಿರುವ ಕಾಂಗ್ರೆಸ್‌ಗೆ ಈಗ ಮಾಡು ಇಲ್ಲವೇ ಮಡಿ ಪರಿಸ್ಥಿತಿ. ಇಡೀ ದೇಶದಲ್ಲಿ ಸದ್ಯ ಕರ್ನಾಟಕ, ಹಿಮಾಚಲ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳನ್ನು ಬಿಟ್ಟರೆ ಕಾಂಗ್ರೆಸ್‌ ಬಹುತೇಕ ಅಧಿಕಾರ ಸ್ಥಾನದಿಂದ ದೂರವಿದೆ.

ಈ ಹಿನ್ನೆಲೆಯಲ್ಲಿ ಭವಿಷ್ಯದ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ಮಟ್ಟದಲ್ಲಿ ಇತರ ಹಿಂದುಳಿದ ಸಮುದಾಯವನ್ನು (ಒಬಿಸಿ) ಪಕ್ಷದತ್ತ ಸೆಳೆಯಲು ಎಐಸಿಸಿ ನಾನಾ ಕಾರ್ಯತಂತ್ರಗಳನ್ನು ಹೆಣೆಯುತ್ತಿದೆ. ಇದರ ಭಾಗವಾಗಿ ಕರ್ನಾಟಕದಲ್ಲಿ ಎರಡು ದಿನಗಳ ಕಾಲ ಪಕ್ಷದ ಹಿಂದುಳಿದ ವರ್ಗಗಳ ಒಬಿಸಿ ಸಲಹಾ ಮಂಡಳಿಯ ಸಭೆ ನಡೆದಿದೆ. ಸಭೆಯ ಆತಿಥ್ಯವನ್ನು ವಹಿಸಿದ್ದು ಕರ್ನಾಟಕದ ಹಿಂದುಳಿದ ವರ್ಗಗಳ ಮುಂಚೂಣಿ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದು ಗಮನಾರ್ಹ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಮಂಗಳವಾರ (ಜು.15) ಮತ್ತು ಶಾಂಗ್ರಿ-ಲಾ ಹೋಟೆಲ್‌ನಲ್ಲಿ ಬುಧವಾರ (ಜು.16) ನಡೆದ ಸಭೆಯಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋಟ, ಕರ್ನಾಟಕದ ಮಾಜಿ ಸಿಎಂ ಎಂ. ವೀರಪ್ಪ ಮೊಯಿಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ದಶಕಗಟ್ಟಲೆ ಗುರುತರ ಜವಾಬ್ದಾರಿಗಳನ್ನು ನಿರ್ವಹಿಸಿರುವ ಬಿ.ಕೆ.ಹರಿಪ್ರಸಾದ್ ಹಾಗೂ ಎಐಸಿಸಿ ಒಬಿಸಿ ವಿಭಾಗದ ಅಧ್ಯಕ್ಷ ಅನಿಲ್‌ ಜೈಹಿಂದ್ ಸೇರಿದಂತೆ ರಾಷ್ಟ್ರಮಟ್ಟದ ಕಾಂಗ್ರೆಸ್‌ನ ಘಟಾನುಘಟಿ ಒಬಿಸಿ ನಾಯಕರು ಭಾಗವಹಿಸಿ, ಗಂಭೀರ ಚರ್ಚೆ ನಡೆಸಿದ್ದಾರೆ.

ಅಹಿಂದ

ದೇಶದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪರಿಹಾರ ಒದಗಿಸಲು ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಹಿಂದುಳಿದ ವರ್ಗಗಳ ರಾಷ್ಟ್ರೀಯ ಮಂಡಳಿಯನ್ನು ಎಐಸಿಸಿ ರಚಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರೇ ಈ ಮಂಡಳಿಯ ರಚನೆಗೆ ಅನುಮೋದನೆ ನೀಡಿದ್ದು.

ಈ ಮಂಡಳಿಯಲ್ಲಿ ಉಳಿದಂತೆ ಒಬಿಸಿ ನಾಯಕರಾದ ಮಾಜಿ ಮುಖ್ಯಮಂತ್ರಿಗಳಾದ ಭೂಪೇಶ್ ಬಘೇಲ್, ವಿ.ನಾರಾಯಣಸ್ವಾಮಿ, ಕೇಂದ್ರ ಮಂತ್ರಿಗಳಾಗಿದ್ದ ಶ್ರೀಕಾಂತ ಜೇನ, ಸಚಿನ್ ಪೈಲಟ್ ಸೇರಿ ಒಟ್ಟು 24 ಮಂದಿ ಸದಸ್ಯರಿದ್ದಾರೆ. ರಾಜ್ಯದಿಂದ ಸಚಿವರಾದ ಬೈರತಿ ಸುರೇಶ್, ಮಧು ಬಂಗಾರಪ್ಪ, ಸಂತೋಷ್ ಲಾಡ್, ಎನ್ ಎಸ್ ಬೋಸರಾಜು, ಮಂಕಾಳ ವೈದ್ಯ, ಎಐಸಿಸಿ ಕಾರ್ಯದರ್ಶಿಗಳಾದ ಸೂರಜ್ ಹೆಗ್ಡೆ, ಪಿ ವಿ ಮೋಹನ್ ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖರು ಸೇರಿ ಒಟ್ಟು 25 ಮಂದಿ ವಿಶೇಷ ಆಹ್ವಾನಿತರಾಗಿ ಸಭೆಯಲ್ಲಿ ಹಾಜರಿದ್ದರು.

ಮುಂದಿನ ಕಾರ್ಯಯೋಜನೆಗಳು, ಅವುಗಳ ಅನುಷ್ಠಾನ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಕುರಿತು ಎಐಸಿಸಿಯ ಹಿಂದುಳಿದ ವರ್ಗಗಳ ಘಟಕಕ್ಕೆ ಈ ಸಲಹಾ ಮಂಡಳಿ ಸಲಹೆಗಳನ್ನು ನೀಡಲಿದೆ. ಈ ಆಧಾರದಲ್ಲಿ ಈ ಸಭೆಯು ತೆಗೆದುಕೊಂಡ ನಿರ್ಧಾರಗಳು ಗಮನಾರ್ಹ.

ಜನಗಣತಿಯು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ, ಉದ್ಯೋಗ, ರಾಜಕೀಯ ಅಂಶಗಳನ್ನು ಒಳಗೊಂಡಿರಬೇಕು. ಜೊತೆಗೆ ಜಾತಿಗಳನ್ನು ಸಹ ಪ್ರಮುಖವಾಗಿ ಪರಿಗಣಿಸಬೇಕು. ಮೀಸಲಾತಿ ಮೇಲಿನ ಶೇ.50ರ ಮಿತಿಯನ್ನು ರದ್ದುಗೊಳಿಸುವುದು. ಇದರಿಂದಾಗಿ ಶಿಕ್ಷಣ, ಉದ್ಯೋಗ, ರಾಜಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಒಬಿಸಿಗೆ ಸೂಕ್ತ ಮೀಸಲಾತಿ ಪಡೆಯಲು ಅವಕಾಶ ನೀಡುತ್ತದೆ ಹಾಗೂ ಸಂವಿಧಾನದ 15 (4)ನೇ ವಿಧಿಯ ಪ್ರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಒಬಿಸಿಗಳಿಗೆ ಮೀಸಲಾತಿ ಸಿಗುವಂತಾಗಬೇಕು ಎಂದು ತೀರ್ಮಾನಗಳನ್ನು ಸಭೆ ಕೈಗೊಂಡಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ನಡೆದಿರುವ ಒಬಿಸಿಯ ಸಲಹಾ ಮಂಡಳಿಯ ಸಭೆಯ ತೀರ್ಮಾನಗಳು ಭವಿಷ್ಯದಲ್ಲಿ ಮುಖ್ಯವಾಗಲಿವೆ. ಜು.25ರಂದು ನವದೆಹಲಿಯ ತಾಲ್‌ಕಟೋರ ಕ್ರೀಡಾಂಗಣದಲ್ಲಿ ‘ಕಾಂಗ್ರೆಸ್ ಒಬಿಸಿ ನಾಯಕತ್ವ ಭಾಗೀದಾರಿ ನ್ಯಾಯ ಸಮ್ಮೇಳನ’ಕ್ಕೆ ಮತ್ತು ಭವಿಷ್ಯದ ರಾಜಕಾರಣಕ್ಕೆ ಬೆಂಗಳೂರಿನ ಸಭೆ ಬುನಾದಿ ಸಹ ಆಗಲಿದೆ.

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ಜನನಾಯಕರಾಗಿ ಗುರುತಿಸಿಕೊಂಡವರು. ಜೆಡಿಎಸ್‌ನಲ್ಲಿದ್ದಾಗ ‘ಅಹಿಂದ’ ಹುಟ್ಟುಹಾಕಿ, ಅದರ ಮೂಂಚೂಣಿ ನಾಯಕರಾಗಿ ಹೊರಹೊಮ್ಮಿದವರು. ಅಹಿಂದ ಬಲದಿಂದ ಕಾಂಗ್ರೆಸ್‌ ಸೇರಿದ ಸಿದ್ದರಾಮಯ್ಯ ಅವರಿಗೆ ಎರಡನೇ ಬಾರಿಯೂ ಮುಖ್ಯಮಂತ್ರಿ ಪದವಿ ಒಲಿದು ಬಂದಿರುವದು ಅವರ ನಾಯಕತ್ವದ ಶಕ್ತಿ. ರಾಜ್ಯದಲ್ಲಿ ದೇವರಾಜ ಅರಸು ನಂತರ ಅಹಿಂದ ವರ್ಗದ ಏಕಮೇವ ನಾಯಕರಾಗಿ ಸಿದ್ದರಾಮಯ್ಯ ಹೊರಹೊಮ್ಮಿ, ಅವರ ಪರಂಪರೆಯಲ್ಲಿ ಮುಂದುವರಿಯುತ್ತಿದ್ದಾರೆ.

ಅಹಿಂದ 1

ಒಬಿಸಿ ರಾಜಕಾರಣಕ್ಕೆ ಕರ್ನಾಟಕ ದೇಶಕ್ಕೇ ಒಂದು ಮಾದರಿಯಾಗಿ ಮುಂದಿದೆ. ಹಿಂದುಳಿದ ವರ್ಗಗಳ ಕುರಿತು ತಾತ್ವಿಕ ಚಿಂತನೆಯ ಹರಿವು ರಾಜ್ಯದಲ್ಲಿ ವ್ಯಾಪಕವಾಗಿ ನಡೆದಿದೆ. ರಾಜ್ಯದಲ್ಲಿ ಜಾರಿಯಾದ ಎಲ್.ಜಿ. ಹಾವನೂರ್ ವರದಿಯು ಹಿಂದುಳಿದ ವರ್ಗಗಳಿಗಾಗಿ ಮೀಸಲಾತಿಯನ್ನು ಶಿಫಾರಸು ಮಾಡಿದ ಕರ್ನಾಟಕದ ಮೊದಲ ಹಿಂದುಳಿದ ವರ್ಗಗಳ ಆಯೋಗದ ವರದಿಯಾಗಿದೆ. ಇದನ್ನು ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು “ಹಿಂದುಳಿದ ವರ್ಗಗಳ ಬೈಬಲ್” ಎಂದೇ ಕರೆದರು ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯವು ಅದರ ವೈಜ್ಞಾನಿಕ ವಿಧಾನಕ್ಕಾಗಿ ಪ್ರಶಂಸಿಸಿತು.

ಹಾವನೂರ್ ವರದಿಯು ಹಿಂದುಳಿದ ವರ್ಗಗಳ ಸಾಮಾಜಿಕ ನ್ಯಾಯದ ಬಗ್ಗೆ ಹೊಸ ಚರ್ಚೆಗಳನ್ನು ಹುಟ್ಟುಹಾಕಿ, ಇದರಿಂದ ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗುವಂತಾಯಿತು. ಒಬಿಸಿ ವರ್ಗಗಳ ಅಭಿವೃದ್ಧಿಗೆ ಒಂದು ಪ್ರಮುಖ ಹೆಜ್ಜೆಯಾಗಿ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಸಹಾಯ ಮಾಡಿತು. ಈಗ ಈ ವರದಿ ಜಾರಿಯಾಗಿ 50 ವರ್ಷಗಳ ಕಳೆದಿವೆ. ಒಬಿಸಿ ಜನಸಂಖ್ಯೆಯಲ್ಲೂ ಗಣನೀಯವಾಗಿ ಹೆಚ್ಚಳವಾಗಿದೆ. ಆದರೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಳವಾಗಿಲ್ಲ. ಹೀಗಾಗಿಯೇ ಮೀಸಲಾತಿ ಮೇಲಿನ ಶೇ. 50ರ ಮಿತಿಯನ್ನು ರದ್ದುಗೊಳಿಸಬೇಕು ಎಂದು ರಾಹುಲ್‌ ಗಾಂಧಿ ಪದೇ ಪದೆ ಆಗ್ರಹಿಸುತ್ತಿರುವುದು. ಇದರಿಂದಾಗಿ ಶಿಕ್ಷಣ, ಉದ್ಯೋಗ, ರಾಜಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಒಬಿಸಿಗೆ ಸೂಕ್ತ ಮೀಸಲಾತಿ ಪಡೆಯಲು ಅವಕಾಶ ಸಿಗುತ್ತದೆ.

ದೇಶದ ಭವಿಷ್ಯದ ಚುನಾವಣೆಗಳನ್ನು ನಿರ್ಧರಿಸುವುದು ಬಹುಶಃ ಒಬಿಸಿ ರಾಜಕಾರಣವೇ ಆಗಿರಲಿದೆ ಎನ್ನುವುದು ರಾಜಕೀಯ ಪರಿಣಿತರ ವಿಶ್ಲೇಷಣೆ. ಈ ಸತ್ಯಕ್ಕೆ ರಾಹುಲ್‌ ಗಾಂಧಿ ಈಗಲೇ ತೆರೆದುಕೊಂಡು ಕಾಂಗ್ರೆಸ್‌ ಕಟ್ಟುತ್ತಿದ್ದಾರೆ. ಇದರ ಮೊದಲ ಹೆಜ್ಜೆಯಂತೆ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಕಾಣುತ್ತಿದೆ. ಎಲ್ಲ ರಾಜ್ಯಗಳ ಅಹಿಂದ ವರ್ಗದ ಮುಖ್ಯ ನಾಯಕರನ್ನು ಒಂದೇ ವೇದಿಕೆಗೆ ತಂದು ಭವಿಷ್ಯವನ್ನು ರಾಹುಲ್‌ ಗಾಂಧಿ ಎದುರು ನೋಡುತ್ತಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಒಬಿಸಿ ರಾಜಕಾರಣ ಕಟ್ಟುವಲ್ಲಿ ಸಿದ್ದರಾಮಯ್ಯ ರಾಹುಲ್‌ ಗಾಂಧಿಗೆ ಭರವಸೆಯ ನಾಯಕರಾಗಿ ಕಂಡಿರಬಹುದು. 2023ರಲ್ಲಿ ಸಿದ್ದರಾಮಯ್ಯ ಬಣದ ನಾಯಕರು ದಾವಣಗೆರೆಯಲ್ಲಿ ಅವರ 75ನೇ ಜನ್ಮದಿನದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ಅಮೃತ ಮಹೋತ್ಸವ’ಕ್ಕೆ (ಸಿದ್ದರಾಮೋತ್ಸವ) ಜನಸಾಗರವೇ ಹರಿದುಬಂದಿತ್ತು. ಇಡೀ ದೇಶದಲ್ಲಿ ಅಷ್ಟು ಜನಸಂಖ್ಯೆ ಬೇರಾವ ನಾಯಕರಿಗೂ ಜಮಾಯಿಸಿರಲಿಲ್ಲ. ಸುಮಾರು 15 ಲಕ್ಷ ಅಭಿಮಾನಿಗಳು ಸಿದ್ದು ಜನ್ಮದಿನಕ್ಕೆ ಹಾಜರಿದ್ದರು. ಇದನ್ನು ಕಂಡ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯೇ ದಂಗಾಗಿದ್ದರು.

ಅಹಿಂದ 2

ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಗಡಿಗಳನ್ನು ಮೀರಿದ ಅಸ್ತಿತ್ವ ಉಂಟು. ಸಿದ್ದರಾಮಯ್ಯ ಅವರ ‘ಅಹಿಂದ’ ನಾಯಕತ್ವದ ಚಹರೆಗೆ ಮತ್ತೆ ಹೊಸ ಹೊಳಪು ನೀಡಿ, ಅವರ ‘ಅಹಿಂದ’ ವರ್ಚಸ್ಸನ್ನು ದೇಶಾದ್ಯಂತ ವಿಸ್ತರಿಸುವ ಮಹತ್ವಾಕಾಂಕ್ಷೆ ಹಿಂದುಳಿದ ವರ್ಗಗಳ ಸಲಹಾ ಮಂಡಳಿಯ ರಚನೆಯ ಹಿಂದಿದೆ. ಸಮಕಾಲೀನ ಸಂದರ್ಭದಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಒಬಿಸಿ ಮಂಡಳಿಯ ಚುಕ್ಕಾಣಿಯಲ್ಲಿ ಅವಕಾಶ ನೀಡುವ ಮೂಲಕ ದೇಶಾದ್ಯಂತ ಒಬಿಸಿ ಮತಗಳನ್ನು ಗುರಿಯಾಗಿಸಿ ರಾಜಕೀಯ ಮಾಡುತ್ತಿರುವ ಬಿಜೆಪಿಗೆ ಕಾಂಗ್ರೆಸ್ ಕಟ್ಟತೊಡಗಿರುವ ದಿಟ್ಟ ಪ್ರತ್ಯುತ್ತರ ಇದಾಗಿರಲಿದೆ.

ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ನಾಯಕರಾಗಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿ ಗುರುತಿಸಿಕೊಂಡಿದ್ದರೂ ಅವರಿಗೆ ಹಾರ್ಡ್‌ಕೋರ್‌ ಹಿಂದುತ್ವವಾದಿ ಲೇಪನವಿದೆ. ಹಿಂದಿನ ಮೋದಿಯ ಚಹರೆ ಈಗಿಲ್ಲ. ಮಾಸುತ್ತಿರುವ ಮೋದಿಯ ಎದುರು ಕಾಂಗ್ರೆಸ್‌ಗೆ ಹಿಂದುಳಿದ ವರ್ಗಗಳ ರಾಷ್ಟ್ರೀಯ ನಾಯಕನ ಅಗತ್ಯವಿದೆ. ಸಿದ್ದರಾಮಯ್ಯ ಜಾತ್ಯತೀತ ನಾಯಕರಾಗಿ, ಪ್ರಜಾಪ್ರಭುತ್ವವಾದಿಯಾಗಿ ಗುರುತಿಸಿಕೊಂಡವರು. ಹೀಗಾಗಿ ಸಿದ್ದರಾಮಯ್ಯ ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಮುನ್ನುಗ್ಗಲು ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯ ಜವಾಬ್ದಾರಿ ಭೂಮಿಕೆಯಾಗಲೂಬಹುದು.

ಸಿದ್ದರಾಮಯ್ಯ ಅವರಿಗೆ ಇಂಗ್ಲಿಷ್‌ ಭಾಷೆ ಮೇಲೆ ಹಿಡಿತವಿದೆ. 16 ರಾಜ್ಯ ಬಜೆಟ್‌ ಮಂಡಿಸಿದ ದಾಖಲೆಯೂ ಅವರಿಗಿದೆ. ಆರ್ಥಿಕ ವಿಚಾರದಲ್ಲಿ ತಜ್ಞರಂತೆ ಮಾತನಾಡುತ್ತಾರೆ. ಅಂಕಿ-ಅಂಶಗಳನ್ನು ಯಾವ ದಾಖಲೆ ಇಲ್ಲದೇ ತುದಿ ನಾಲಿಗೆಯಲ್ಲಿ ಹೇಳಬಲ್ಲರು. ಹಿಂದಿ ಭಾಷೆ ಮೇಲೆ ಅಷ್ಟು ಹಿಡಿತ ಇಲ್ಲ ಎಂಬುದು ಬಿಟ್ಟರೆ ರಾಷ್ಟ್ರರಾಜಕಾರಣಕ್ಕೆ ಮುಖಮಾಡುತ್ತಾರಾ ಎಂಬುದು ಅವರ ವೈಯಕ್ತಿಕ ತೀರ್ಮಾನ. ಆದರೆ ಸಮಕಾಲೀನ ಸಂದರ್ಭದಲ್ಲಿ ರಾಷ್ಟ್ರೀಯ ರಾಜಕಾರಣಕ್ಕೆ ‘ಅಹಿಂದ ರಾಯಭಾರಿ’ ಸಿದ್ದರಾಮಯ್ಯ ಸಲ್ಲುವ ನಾಯಕ.

ಹಿಂದುತ್ವ ಮತ್ತು ಕೋಮುವಾದಿ ರಾಜಕಾರಣವನ್ನು ಗ್ಯಾರಂಟಿ ಯೋಜನೆಗಳು ಸೋಲಿಸಿವೆ. ರಾಜ್ಯದಲ್ಲಿ ಕಾಂಗ್ರೆಸ್‌ ಜಾರಿಗೆ ತಂದ ಐದು ಗ್ಯಾರಂಟಿಗಳು ರಾಜಕಾರಣ ಹೊಸ ದಾರಿಯನ್ನೇ ತೆರೆದಿದೆ. ಗ್ಯಾರಂಟಿಗಳನ್ನು ವಿರೋಧಿಸಿದ್ದ ಬಿಜೆಪಿಯೇ ಈಗ ಪ್ರತಿ ರಾಜ್ಯಗಳ ಚುನಾವಣೆಯಲ್ಲಿ ಕರ್ನಾಟಕದ ಮಾದರಿಗೆ ಜೋತು ಬಿದ್ದಿದೆ. ಇದನ್ನೆಲ್ಲ ನೋಡಿದರೆ ಗ್ಯಾರಂಟಿಗಳು ನೇರವಾಗಿ ಫಲಾನುಭವಿಗಳ ಕೈಗೆ ಸೇರುವುದರಿಂದ ರಾಜಕಾರಣದಲ್ಲೂ ಗ್ಯಾರಂಟಿಗಳನ್ನು ಅಷ್ಟು ಬೇಗ ದೂರ ತಳ್ಳಲು ಸಾಧ್ಯವಿಲ್ಲ.

ಈ ಎಲ್ಲ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ರಾಜಕಾರಣ ಮತ್ತು ಗ್ಯಾರಂಟಿ ಯೋಜನೆಗಳ ರಾಜಕಾರಣದಲ್ಲಿ ಕರ್ನಾಟಕ ದೇಶಕ್ಕೆ ಮಾದರಿಯಾಗಿದೆ. ಇದನ್ನು ಯಶಸ್ವಿಯಾಗಿ ಮುನ್ನಡೆಸಿರುವ ಸಿದ್ದರಾಮಯ್ಯ ಎಐಸಿಸಿಗೆ ಹೊಸ ಆಶಯವಾಗಿ ಕಂಡಿರುವ ಸಾಧ್ಯತೆಯೇ ಹೆಚ್ಚು!

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!

ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ...

ಬಾಪೂ ಎಂಬ ಪವಾಡದ ಅನ್ವೇಷಣೆ…

ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್.‌...

ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ, ದೇವತೆ ಸ್ಥಾನ ನೀಡುವ ದೇಶ ಭಾರತ ಎನ್ನುವುದು ಬರೀ ಭ್ರಮೆ!

ದಸರಾ ಹಬ್ಬದ ಹೊತ್ತಲ್ಲೇ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ...

ದಾವಣಗೆರೆ | ಪರೀಕ್ಷೆ ಸಮಯ,ನಡೆಯದ ಪಾಠ; ಪರೀಕ್ಷೆ ಮುಂದೂಡಿಕೆಗೆ ಕುಲಸಚಿವರಿಗೆ ವಿದ್ಯಾರ್ಥಿಗಳ ಆಗ್ರಹ

ರಾಜ್ಯದ ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗಿದ್ದು...

Download Eedina App Android / iOS

X