“ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು, ಬೆಟ್ಟದಂತೆ ಬಂದರು. ಕಪ್ಪು ಮುಖ, ಬೆಳ್ಳಿಗಡ್ಡ, ಉರಿಯುತ್ತಿರುವ ಕಣ್ಣುಗಳು, ಹಗಲು ರಾತ್ರಿಗಳನ್ನು ಸೀಳಿ, ನಿದ್ದೆಯನ್ನು ಒದ್ದರು. ಕಂಬಳಿಗಳು ಹೊರಗಿದವು, ಎದ್ದೇಳುವ ರೊಚ್ಚಿಗೆ ಭೂಕಂಪನವಾಯಿತು. ಅವರು ಕುಣಿಯುವ ಹುಚ್ಚಿಗೆ. ಬರುತಿಹೆವು ನಾವು, ಬರುತಿಹೆವು, ಬರುತಿಹೆವು, ನಾವು ಬರುತಿಹೆವು. ಯುಗ ಯುಗಗಳಿಂದ ನೀವು ತುಳಿದ ಜನಗಳ ಕೊರಳ ಧ್ವನಿಗಳು, ನಾವುಗಳು ಅಸಮಾನತೆಯನ್ನು ಸುಟ್ಟುಬಿಡಲು ಬುಗಿಲೆದ್ದ ಬೆಂಕಿಯ ಜ್ವಾಲೆಗಳು – ಸಾಕ್ಷಿಗಳು ಈ ರೀತಿಯಾಗಿ ಬರುತ್ತಾರೆ” ಎಂದು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಅವರು ಹೇಳಿದ ಬಂಡಾಯ ಕವಿವಾಣಿಯ ಸಾಲುಗಳನ್ನು ಭಾವನಾತ್ಮಕವಾಗಿ ಹೇಳುತ್ತಾರೆ.
ಧರ್ಮಸ್ಥಳದಲ್ಲಿ ನಡೆದಿರುವ ನೂರಾರು ಅತ್ಯಾಚಾರ, ಕೊಲೆ ಮತ್ತು ಅಸಹಜ ಸಾವುಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಶೇಷ ತನಿಖಾ ತಂಡದ (SIT) ತನಿಖೆಯು ಪಾರದರ್ಶಕವಾಗಿ ನಡೆಯಬೇಕು. ‘ಈದಿನ ಡಾಟ್ ಕಾಂ‘ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ, ಸೌಜನ್ಯ ಪ್ರಕರಣ ಸೇರಿದಂತೆ ಧರ್ಮಸ್ಥಳದಲ್ಲಿ ನಡೆದಿರುವ ಹಲವಾರು ಘೋರ ಅಪರಾಧಗಳ ಕುರಿತು ಸಾಕ್ಷಿಗಳಾದ ಭೀಮ ಮತ್ತು ಇತರರಿಗೆ ಘನತೆಯಿಂದ ನಡೆಸಿಕೊಳ್ಳುವಂತೆ ಹಾಗೂ ಅವರ ಕುಟುಂಬಗಳಿಗೆ ಸರಿಯಾದ ರಕ್ಷಣೆ, ಆರ್ಥಿಕ ಸಹಾಯ ನೀಡುವಂತೆ ಸರ್ಕಾರವನ್ನು ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ ಒತ್ತಾಯಿಸಿದ್ದಾರೆ.
“ಯಾಕೆ ಹೆಣಗಳು ಮರದಲ್ಲಿ ನೇತಾಡುತ್ತಿದ್ದವು? ಯಾಕೆ ಶವಗಳು ಭೂಮಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದವು? ಯಾಕೆ ಹೆಣಗಳ ರಕ್ತ ನೇತ್ರಾವತಿಯಲ್ಲಿ ಹರಿಯುತ್ತಿದ್ದವು? ಇದುವರೆಗೆ ನಡೆದ ತನಿಖೆಗಳಲ್ಲಿ ಒಬ್ಬನೇ ಒಬ್ಬ ಆರೋಪಿಯೂ ಪತ್ತೆಯಾಗಿಲ್ಲ. ಭೀಮ ತನ್ನ ಕುಟುಂಬವನ್ನು ಬಿಟ್ಟು ಸತ್ಯವನ್ನು ಹೇಳಲು ಮುಂದೆ ಬಂದಿದ್ದಾನೆ. ಆದರೆ, ಭೀಮನಂತಹ ಸಾಕ್ಷಿಗಳ ಕುಟುಂಬಕ್ಕೆ ರಕ್ಷಣೆ ಒದಗಿಸುವ ಬಗ್ಗೆ ಯಾರಾದರೂ ಯೋಚಿಸುತ್ತಿದ್ದಾರೆಯೇ? ಭೀಮ ತನ್ನ ಕುಟುಂಬದ ಆಧಾರ ಸ್ತಂಭವಾಗಿದ್ದಾನೆ. ಇವತ್ತು ಅವನು ಕೆಲಸಕ್ಕೆ ಹೋಗಿದ್ದರೆ, ಸಾವಿರದಿಂದ ನಾಲ್ಕು ಸಾವಿರ ರೂಪಾಯಿಗಳವರೆಗೆ ಗಳಿಸಬಹುದಿತ್ತು. ಆ ಆರ್ಥಿಕ ನಷ್ಟವನ್ನು ಸರ್ಕಾರ ಪರಿಹರಿಸಬೇಕಲ್ಲವೇ? ಅವನಿಗೆ ಹೊಸ ಗುರುತು, ಗೌಪ್ಯತೆ ಮತ್ತು ಘನತೆಯಿಂದ SIT ಜೊತೆ ವ್ಯವಹರಿಸುವ ಅವಕಾಶವನ್ನು ಒದಗಿಸಬೇಕು. ಇದನ್ನು ಸರ್ಕಾರ ಯಾಕೆ ಮಾಡುತ್ತಿಲ್ಲ” ಎಂದು ಸ್ಟ್ಯಾನ್ಲಿ ಪ್ರಶ್ನಿಸಿದ್ದಾರೆ.
“ಸುಮಾರು ಮೂರು ತಲೆಮಾರುಗಳಿಂದ ಜನ ಕಂಡಂತಹ, ಕೇಳಿದಂತಹ ಅದೆಷ್ಟೋ ಹೀನ ಪ್ರಕರಣಗಳು. ಅದರಲ್ಲಿ ಹೆಣ್ಣು ಮಕ್ಕಳ ಹತ್ಯೆ, ಅಪಹರಣ, ರಾಜಕೀಯವಾದಂತಹ ತಂತ್ರಗಾರಿಕೆಗಳು, ಧಾರ್ಮಿಕ ಕಾರಣಗಳು, ಹಣಕಾಸಿನ ಅಪಹರಣ, ಭೂಕಬಳಿಕೆ ಇವೆಲ್ಲದಕ್ಕೂ ಕೂಡ ಒಂದು ಪೂರ್ಣ ವಿರಾಮ ಇಡಲು ಸರ್ಕಾರ ಎಸ್ಐಟಿಯನ್ನು ರಚಿಸಿದೆ. ತಳಮಟ್ಟದ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಕೆಲಸ ಮಾಡಿಲ್ಲವೆಂದು ನಾವು ನೆನಪಿಟ್ಟುಕೊಳ್ಳಬೇಕಾಗಿದೆ. ತಳಮಟ್ಟದ ತನಿಖಾಧಿಕಾರಿಗಳಿಗೂ ಎಸ್ಐಟಿ ತನಿಖಾಧಿಕಾರಿಗಳಿಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ. ಇದು ಸಹಸ್ರಮಾನದಲ್ಲಿ ಬಂದಿರುವಂತ ಒಂದು ಮಹತ್ತರವಾದಂತಹ ತನಿಖಾ ಪ್ರಕ್ರಿಯೆ. ಇಲ್ಲಿ ಬಂದಿರುವಂತಹ ಎಸ್ಐಟಿಗೆ ಮೂಲ ಆಧಾರಗಳೇ ಅಲ್ಲಿರುವಂತಹ ಜನರ ಸಾಕ್ಷಿ. ಯಾರ್ಯಾರು ನೋಡಿದ್ದಾರೋ, ಯಾರ್ಯಾರು ಕೇಳಿದ್ದಾರೋ, ಅವೆಲ್ಲವನ್ನು ಕೂಡ ಸಂಗ್ರಹಿಸಿ, ಅದನ್ನ ಅಚ್ಚುಗಟ್ಟುಗೊಳಿಸಿ, ಪರೀಕ್ಷೆಗೊಳಪಡಿಸಿ, ಬಂದಂತಹ ಸಿಕ್ಕಂತಹ ಮಹತ್ತರವಾದ ವಿಚಾರಗಳನ್ನು ಇಟ್ಟುಕೊಂಡು ತನಿಖೆ ಮಾಡಬೇಕು” ಎಂದು ಸ್ಟ್ಯಾನ್ಲಿ ಒತ್ತಿಯಿಸಿದ್ದಾರೆ.
ಪದ್ಮಲತಾ, ವೇದವಲ್ಲಿ, ಸೌಜನ್ಯ ಪ್ರಕರಣಗಳು ಇರಬಹುದು. ಅದೇ ರೀತಿಯಾದ ಎಷ್ಟೋ ಪ್ರಕರಣಗಳು ಇರಬಹುದು. ಯಾಕೆ ಹೆಣಗಳು ಮರದಲ್ಲಿ ನೇತಾಡುತ್ತಿದ್ದವು? ಯಾಕೆ ಶವಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದವು? ಯಾಕೆ ಒಬ್ಬನೇ ಆರೋಪಿಯೂ ಸಿಕ್ಕಿಲ್ಲ? ಇಲ್ಲಿ ನೂರಾರು ವಿಚಾರಗಳ ಬಗ್ಗೆ ನಾನು ಮಾತಾನಾಡುತ್ತಿಲ್ಲ, ಕೆಲವಾರು ವಿಚಾರಗಳನ್ನಷ್ಟೇ ಕೇಳಿ, ನ್ಯಾಯವನ್ನು ಪಡೆಯುವ ಬಗ್ಗೆ ನಾನು ಮಾತಾನಾಡುತ್ತಾ ಇದ್ದೇನೆ. ಸೌಜನ್ಯ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವೇ, ‘ನಿಜವಾದ ಆರೋಪಿಗಳನ್ನು ರಕ್ಷಿಸಲು ಅಮಾಯಕನನ್ನು ಸಿಕ್ಕಿಸಿದ್ದೀರಿ’ ಎಂದು ಹೇಳಿದೆ. ಇದು ನಮ್ಮ ಹೊಟ್ಟೆಯನ್ನು ಉರಿಸುತ್ತದೆ, ಸಂಕಟವನ್ನು ಹೆಚ್ಚಿಸುತ್ತದೆ. ಒಬ್ಬ ಆರೋಪಿಯನ್ನಾದರೂ ಸಿಕ್ಕಿಸಿದ್ದರೆ, ಈ ಹೋರಾಟದ ಅಗತ್ಯವೇ ಇರಲಿಲ್ಲ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭೀಮನ ಕುಟುಂಬಕ್ಕೆ ಸರ್ಕಾರ ಸಂಪೂರ್ಣ ರಕ್ಷಣೆ ನೀಡಬೇಕು
SIT ಯ SOP (Standard Operating Procedure) ಬಗ್ಗೆ ಮಾತನಾಡಿದ ಸ್ಟ್ಯಾನ್ಲಿ ಅವರು, “ಸಾಕ್ಷಿಗಳನ್ನು ಘನತೆಯಿಂದ ನಡೆಸಿಕೊಂಡು, ಬಲಿಪಶುವಿನ ಪರ ಸಾಕ್ಷಿದಾರನಿಗೆ ರಕ್ಷಣೆಯನ್ನು ಒದಗಿಸಬೇಕು. ಸಮಗ್ರ ರಕ್ಷಣೆ ಎಂದರೆ ಕೇವಲ ಜೀವಭಯದ ರಕ್ಷಣೆಯಷ್ಟೇ ಮಾತ್ರವಲ್ಲ. ಭೀಮನಂತಹ ಸಾಕ್ಷಿಗಳಿಗೆ ಆರ್ಥಿಕ, ಸಾಮಾಜಿಕ ರಕ್ಷಣೆ, ಗುರುತಿನ ಗೌಪ್ಯತೆ ಮತ್ತು ಒಬ್ಬ ಬೆಂಬಲಿಗ ವ್ಯಕ್ತಿಯ ಸಹಾಯವನ್ನು ಒದಗಿಸಬೇಕು. ಸರ್ಕಾರ ಈ ಬಗ್ಗೆ ತಕ್ಷಣ ಕ್ರಮ ವಹಿಸಬೇಕು. ಒಬ್ಬ ಸಾಕ್ಷಿಗೆ ಬೆದರಿಕೆ ಹಾಕಿದರೆ ಅವನು ತನ್ನ ಊರನ್ನು, ಕುಟುಂಬವನ್ನು ಬಿಟ್ಟು ಬರಬೇಕಾಗುತ್ತದೆ. ಇಂತಹ ಸಾಕ್ಷಿಗಳಿಂದಲೇ ಪ್ರಕರಣಗಳಿಗೆ ತಿರುವು ಸಿಗುತ್ತದೆ” ಎಂದು ಸ್ಟ್ಯಾನ್ಲಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿ ಪದಾಧಿಕಾರಿಗಳನ್ನು ಜಡ್ಜ್ ಆಗಿ ನೇಮಿಸುವ ಪ್ರವೃತ್ತಿ ನಿಲ್ಲಬೇಕು
“ಸಾಕ್ಷಿದಾರ ಭೀಮನಿಂದಲೇ ಇವತ್ತು ಒಂದು ಪ್ರಕರಣಕ್ಕೆ ಮಹತ್ತರವಾದ ತಿರುವು ಸಿಗಲಿದೆ. ಒಡನಾಡಿ ಸಂಸ್ಥೆಯ ಮೂಲಕ ಮತ್ತೊಬ್ಬ ಸಾಕ್ಷಿಯನ್ನು ತನಿಖೆಗೆ ಒಳಪಡಿಸಲಾಗಿದೆ. ಆ ಸಾಕ್ಷಿಯಿಂದ ಸಿಗುವ ಮಾಹಿತಿಯಿಂದ SIT ಗೆ ಮಹತ್ತರ ಎಳೆ ಸಿಗಬಹುದು. ಈ ಕೃತ್ಯಗಳ ಹಿಂದಿರುವವರು ಯಾರು, ಅವರ ಮೋಡಸ್ ಒಪೆರಾಂಡಿ(ಕಾರ್ಯ ವಿಧಾನ) ಏನು, ಅವರ ಗುರುಗಳು, ಯೋಜಕರು ಯಾರು, ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ತಿಳಿಯಬಹುದು” ಎಂದು ಸ್ಟ್ಯಾನ್ಲಿ ತಿಳಿಸಿದ್ದಾರೆ.
ಪದ್ಮಲತಾ, ಸೌಜನ್ಯ ಮತ್ತು ಇತರ ಪ್ರಕರಣಗಳ ಎಫ್‌ಐಆರ್‌ಗಳನ್ನು ಉಲ್ಲೇಖಿಸಿ, “ಒಂದೇ ರೀತಿಯ ಕೃತ್ಯಗಳು ನಡೆದಿವೆ. ಆದರೆ ಯಾವ ಆರೋಪಿಯೂ ಸಿಕ್ಕಿಲ್ಲ. ಇದು ಯಾರೋ ಒಬ್ಬರ ಆದೇಶದ ಮೇರೆಗೆ ಭೂಗತ ಕಂಪನಿಯಂತೆ ಕೆಲಸ ಮಾಡುತ್ತಿರುವವರ ಕೃತ್ಯವೇ? ಆ ಕಂಪನಿಯಿಂದ ಬಿಟ್ಟು ಹೋಗಿರುವವರು, ಸತ್ತಿರುವವರು ಅಥವಾ ಬೇರೆ ಕಂಪನಿಗಳನ್ನು ಆರಂಭಿಸಿರುವವರನ್ನು ಪತ್ತೆ ಮಾಡಬೇಕು. ಇದನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಸರ್ಕಾರ ಮಾಡಬೇಕು,” ಎಂದು ಸ್ಟ್ಯಾನ್ಲಿ ಆಗ್ರಹಿಸಿದ್ದಾರೆ.
“ಜನರು ಪ್ರವಾಹದಂತೆ ಸೇರುತ್ತಾರೆ. ಅವರ ಕಪ್ಪು ಮುಖ, ಬೆಳ್ಳಿಗಡ್ಡ, ಉರಿಯುವ ಕಣ್ಣುಗಳು, ರಾತ್ರಿಗಳನ್ನು ಸೀಳಿ, ನಿದ್ದೆಯನ್ನು ಒದ್ದು ಬರುತ್ತಾರೆ. ಈ ರೀತಿಯಾಗಿ ಸಾಕ್ಷಿಗಳು ಬರುತ್ತಾರೆ, ನ್ಯಾಯ ಕೇಳುತ್ತಾರೆ. ಒಡೆಯರು, ಧಣಿಗಳು, ಸಾಹುಕಾರರು ಎಲ್ಲಿಯೇ ಇರಲಿ, ಜನರು ಅವರ ಬಳಿಗೆ ಪ್ರವಾಹದಂತೆ ಸೇರುತ್ತಾರೆ. ಎಲ್ಲರಿಗೂ ನ್ಯಾಯ ಕೊಡುವ ಕೆಲಸವನ್ನು ಸರ್ಕಾರ ಮಾಡಲೇಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
ಸಿಬಿಐ ನ್ಯಾಯಾಲಯ ಸಂತೋಷ್ ರಾವ್ ಆಗಲಿ, ಬೇರೆ ಯಾರಾದರೂ ಆಗಲಿ, ಒಬ್ಬರನ್ನು ಹಿಡಿದು ಬಿಟ್ಟುಬಿಡಲು ಸಾಧ್ಯವಿಲ್ಲ. ಆ ತಂಡ ಯಾವುದು, ಯಾರಿದ್ದಾರೆ ಎಂಬುದನ್ನು SIT ಪತ್ತೆ ಮಾಡಬೇಕು. ಗ್ರಾಮಗಳಲ್ಲಿ ಒಂದು ವಾತಾವರಣವನ್ನು ಸೃಷ್ಟಿಸಬೇಕು. ಇದು ಗೌಪ್ಯತೆ ತನಿಖೆಯಾಗಿರಬಾರದು, ಕೋಂಬಿಂಗ್ ಆಗಿರಬಾರದು. ಮಂಗಳೂರಿನಲ್ಲಿ ಸಹಾಯವಾಣಿ ಆರಂಭಿಸಿರುವುದು ಸಂತೋಷದ ವಿಷಯ. ಆದರೆ ಪ್ರತಿ ಗ್ರಾಮದಲ್ಲಿ ವಿಸ್ತಾರವಾದ ಅರಿವು ಕಾರ್ಯಕ್ರಮ ಮಾಡಬೇಕು. ವೀರಪ್ಪನ್ ಕಾರ್ಯಾಚರಣೆಯಂತೆ, ದಂಡುಪಾಳ್ಯ ಕಾರ್ಯಾಚರಣೆಯಂತೆ, ಜನರಿಗೆ ಅರಿವು ಮೂಡಿಸಲು, ಜನರಲ್ಲಿ ಧೈರ್ಯ ತುಂಬಲು ಸರ್ಕಾರ ಭಿತ್ತಿಚಿತ್ರಗಳನ್ನು ಅಂಟಿಸಿದೆ, ಟಾಮ್‌ಟಾಮ್ ಡಂಗುರವನ್ನು ಸಾರಲಾಗಿದೆ. ಸಾಕ್ಷಿಗಳಿಗೆ ಸರ್ಕಾರ ಪುರಸ್ಕಾರ ನೀಡಿದೆ. ಇವೆಲ್ಲ ಒಳ್ಳೆಯ ಕಾರ್ಯಗಳೆ. ಹಾಗೆಯೇ ಜೀವದ ಹಂಗು ತೊರೆದ ಸಾಕ್ಷಿಗೆ ಘನತೆಯಿರುವ ಕಾರಣ ಅವರನ್ನು ಸರ್ಕಾರ ಗೌರವಯುತವಾಗಿ ನಡೆಸಿಕೊಳ್ಳಬೇಕಿದೆ” ಎಂದು ಸ್ಟ್ಯಾನ್ಲಿ ಮನವಿ ಮಾಡಿದರು.
ಸಾಕ್ಷಿಗಳು ಪ್ರವಾಹದ ರೀತಿಯಲ್ಲಿ ಬರಲಿದ್ದಾರೆ
“ಸಾಕ್ಷಿಗಳು ತಮ್ಮ ಒಳ್ಳೆಯ ಬದುಕನ್ನು ಬಿಟ್ಟು ಇಲ್ಲಿ ಬಂದು ಈ ಕಗ್ಗಂಟಿನಲ್ಲಿ ಸಿಕ್ಕಿಕೊಳ್ಳುತ್ತಾರೆ. ನಮ್ಮ ನ್ಯಾಯವ್ಯವಸ್ಥೆಯಲ್ಲಿ ‘ಅಯ್ಯೋ ಬೇಡ’ ಎಂಬ ಸ್ಥಿತಿಯಿದೆ. ಜನಸ್ನೇಹಿ ವ್ಯವಸ್ಥೆ ಇಲ್ಲ. ಸಾಕ್ಷಿಗಳಿಗೆ ಘನತೆ ಇದೆ, ಅವರನ್ನು ಗೌರವದಿಂದ ನಡೆಸಿಕೊಳ್ಳುವುದಾಗಿ ಸರ್ಕಾರ ತನ್ನ ಕಾರ್ಯದ ಮೂಲಕ ತೋರಿಸಬೇಕು. ಇದು ಅತ್ಯಗತ್ಯವಾಗಿದೆ. ಮುಂದೆ ಸಾಕ್ಷಿಗಳು ಪ್ರವಾಹದಂತೆ ಬರಲಿದ್ದಾರೆ. ಇನ್ನೂ ಕೆಲವರು ‘ನಾವು ಬರಲಿದ್ದೇವೆ’ ಎಂದು ಹೇಳುತ್ತಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸವನ್ನಷ್ಟೇ ನಾವು ಮಾಡುತ್ತಿದ್ದೇವೆ. ಬಂದಾಗ ಯಾರಿಗೆ ತಿಳಿಸಬೇಕೋ ಅವರಿಗೆ ಸ್ಪಷ್ಟವಾಗಿ ತಿಳಿಸುವುದರ ಜೊತೆ ಎಲ್ಲವನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಒಬ್ಬ ಅಧಿಕಾರಿಯು ಭೀಮನಿಗೆ ಬೆದರಿಕೆ ಹಾಕಿರುವುದು ಗಂಭೀರವಾದ ವಿಷಯ. ಇದು ಅಕ್ಷಮ್ಯ ಕೃತ್ಯ. ಆ ವ್ಯಕ್ತಿಯನ್ನು SIT ಯಿಂದ ಕೈಬಿಡಬೇಕು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯನ್ನು ಆ ಸ್ಥಾನಕ್ಕೆ ನೇಮಿಸಬೇಕು. ಇದು ಇತರರಿಗೂ ಪಾಠವಾಗಬೇಕು. ಜನರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ SIT ಮೇಲಿದೆ,” ಎಂದು ಸ್ಟ್ಯಾನ್ಲಿ ಒತ್ತಾಯಿಸಿದ್ದಾರೆ.
ಹೆಣಗಳೇ ಮಾತನಾಡುತ್ತಿವೆ, ಗೋರಿಗಳಿಂದ ಅಸ್ಥಿಪಂಜರಗಳು ಹೊರಬರುತ್ತಿವೆ
“ಸೌಜನ್ಯ ಮತ್ತು ಮಾವುತರ ಜೋಡಿ ಕೊಲೆ ಪ್ರಕರಣ(ನಾರಾಯಣ ಸಾ ಹಾಗೂ ಯಮುನಾ ಸಾ ಪ್ರಕರಣ)ದಲ್ಲಿ ಒಂದೇ ತಂಡ ತನಿಖೆ ನಡೆಸಿತ್ತು. ಆದರೆ ಯಾವ ಆರೋಪಿಯೂ ಸಿಕ್ಕಿಲ್ಲ. ಇದನ್ನು ತನಿಖೆ ನಡೆಸಿದ ತಂಡ ಹಾಗೂ ಕಂಪನಿಯೊಂದಿಗೆ ಯಾವ ಸಂಬಂಧ ಎಂಬುದನ್ನು ಸರ್ಕಾರ ಪತ್ತೆ ಮಾಡಬೇಕಿದೆ. ಇಲ್ಲಿ ಯಾರ ವಿರುದ್ಧವೂ ಮಾತನಾಡುತ್ತಿಲ್ಲ. ಹೆಣಗಳೇ ಮಾತನಾಡುತ್ತಿವೆ. ಗೋರಿಗಳಿಂದ ಅಸ್ಥಿಪಂಜರಗಳು ಹೊರಬರುತ್ತಿವೆ. ಎಷ್ಟೋ ಅಸಹಜ ಸಾವುಗಳು ಇರಬಹುದು. ಅಂದಿನ ಗ್ರಾಮ ಪಂಚಾಯಿತಿ, ಪೊಲೀಸ್ ವ್ಯವಸ್ಥೆ ಯಾವ ಕಾರ್ಯವಿಧಾನವನ್ನು ಅನುಸರಿಸಿತು? ‘ಅನಾಥ’ ಎಂಬ ಪದವನ್ನು ಯಾವ ಮಾನದಂಡದಿಂದ ಬಳಸಿದರು? ವೆಂಕೋಬರಾವ್ ಅವರ ಮಗನಿಗೆ ತಿಳಿಸದೆ ಆತನ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಿದರು? ಇದೆಲ್ಲವೂ ಪ್ರಶ್ನೆಗಳೆ” ಎಂದು ಸ್ಟ್ಯಾನ್ಲಿ ಹೇಳಿದರು.
“ಒಂದೇ ಪ್ರದೇಶದಲ್ಲಿ ಇಂತಹ ಘಟನೆಗಳು ಯಾಕೆ? ಜನರು ಇಷ್ಟೊಂದು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಯಾಕೆ? ಇದರ ಹಿಂದೆ ಇನ್ನಾವುದೇ ಹಿತಾಸಕ್ತಿಗಳಿವೆಯೇ? ಇದಲ್ಲವನ್ನು ವರದಿ, ತನಿಖೆಯನ್ನು ಎಸ್‌ಐಟಿ ಮಾಡಬೇಕು. ಮುಂದೆ ಬರುವ ಸಾಕ್ಷಿಗಳಿಗೆ ಆರ್ಥಿಕ, ಸಾಮಾಜಿಕ, ಜೀವ ಭದ್ರತೆ, ಗುರುತಿನ ಗೌಪ್ಯತೆ ನೀಡಬೇಕು. ಆಕಾಶವಾಣಿ, ದೂರದರ್ಶನ, ಪತ್ರಿಕೆಗಳು, ನ್ಯೂಸ್ ಚಾನೆಲ್‌ಗಳನ್ನು ಬಳಸಿಕೊಂಡು ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸಾಕ್ಷಿಗಳ ಡೇಟಾಬೇಸ್ ರಚಿಸಬೇಕು. ಕ್ರಮಬದ್ಧವಾಗಿ, ಆ ಪ್ರದೇಶದ ರಾಜಕೀಯ, ಸಾಮಾಜಿಕ ಅಧ್ಯಯನ ಮಾಡಬೇಕು. SIT ಕೇವಲ ಬುರುಡೆಯಾಗಿರಬಾರದು” ಎಂದು ಸ್ಟ್ಯಾನ್ಲಿ ಹೇಳಿದ್ದಾರೆ.
“ನಾಪತ್ತೆ, ಹತ್ಯೆ, ಮುಂತಾದ ಪ್ರಕರಣಗಳನ್ನು ಉಲ್ಲೇಖಿಸಿ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅದರ ಆಧಾರದಲ್ಲಿ SIT ರಚನೆಯಾಗಿದೆ. SIT ತಾರ್ಕಿಕ ಅಂತ್ಯಕ್ಕೆ ತನಿಖೆಯನ್ನು ತರಬೇಕು. ಇಲ್ಲವಾದರೆ, ಈ ಚಳವಳಿ ಮುಗಿಯದು. ಬುರುಡೆಗಳನ್ನು ಹುಡುಕುವುದರ ಜೊತೆಗೆ ಸಾಕ್ಷಿಗಳಿಗೆ ಸರಿಯಾದ ರಕ್ಷಣೆ ಕೊಡಬೇಕು. ಅವುಗಳನ್ನು ಕಲೆ ಹಾಕಿ, ಅದಕ್ಕೆ ರಕ್ಷಣೆಯನ್ನು ಎಸ್‌ಐಟಿ ನೀಡಬೇಕಿದೆ. ಮುಂದಿನ ದಿನಗಳಲ್ಲಿ ಬರುವ ಸಾಕ್ಷಿಗಳಿಗೆ ಸರ್ಕಾರ ಭದ್ರತೆ, ಆರ್ಥಿಕ ಸಹಾಯ ಹಾಗೂ ಬೆಂಬಲ ವ್ಯಕ್ತಿಯನ್ನು ನೇಮಿಸಬೇಕು” ಎಂದು ಸ್ಟ್ಯಾನ್ಲಿ ಒತ್ತಾಯಿಸಿದರು.
“ಪೋಕ್ಸೋ ಕಾಯ್ದೆಯಂತೆ ಬಾಲಕಿಗೆ ಆಪ್ತ ಸಮಾಲೋಚಕರನ್ನು ಒದಗಿಸುವಂತೆ, ಸಾಕ್ಷಿಗಳಿಗೂ ಕಾನೂನು ತಿಳುವಳಿಕೆಯಿರುವ ವಕೀಲರನ್ನು ನೇಮಿಸಬೇಕು. ಎಲ್ಲ ಮುಚ್ಚಿಹೋದ, ಚಾಲ್ತಿಯಲ್ಲಿರುವ FIR ಗಳನ್ನು ಮತ್ತೆ ತೆರೆಯಬೇಕು. ಒಬ್ಬ ಹೆಣ್ಣು ಮಗುವಿಗೆ ನ್ಯಾಯ ಕೊಡಿಸಿದರೆ, ಇದು ನೂರಾರು ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಿದಂತೆ. ಅನನ್ಯ ಭಟ್‌ನ ತಾಯಿಯಂತವರಿಗೆ ನ್ಯಾಯ ದೊರಕಿದರೆ ಅವರು ನೆಮ್ಮದಿಯಿಂದ ಅಂತಿಮ ದಿನಗಳನ್ನು ಕಳೆಯುತ್ತಾರೆ” ಎಂದು ಸ್ಟ್ಯಾನ್ಲಿ ಹೇಳಿದ್ದಾರೆ.
“ಇಲ್ಲಿ ತಿಳುವಳಿಕೆಯಿರುವ ಪ್ರಜ್ಞಾವಂತರು ಬಂದು ಸಾಕ್ಷಿ ಹೇಳುತ್ತಿಲ್ಲ. ಬಡವರು, ತಿಳುವಳಿಕೆಯಿಲ್ಲದವರು, ಅಮಾಯಕರು ಸಾಕ್ಷಿ ಹೇಳಲು ಬರುತ್ತಾರೆ. ತುಳಿತಕ್ಕೊಳಗಾದ ಭೀಮ ಇಂದು ಸಾಕ್ಷಿ ಹೇಳಲು ಬಂದಿದ್ದಾನೆ. ನಾಳೆ ಸೋಮ ಬರಬಹುದು. ಇವರೆಲ್ಲರು ತಳಹಂತದವರು. ತಳಹಂತದವರಾಗಲಿ, ಮೇಲ್ವರ್ಗದವರಾಗಲಿ ಎಲ್ಲರಿಗೂ ಆರ್ಥಿಕ ಪರಿಹಾರ ಕೊಡಬೇಕು. ಶ್ರೀಮಂತನಾದವ ಸಾಕ್ಷಿ ಹೇಳಲು ಬಂದರೆ, ಅವನ ಅಷ್ಟು ವೆಚ್ಚವನ್ನು ಸರ್ಕಾರ ಭರಿಸಬೇಕು. ಜೀವ ಭಯದಿಂದ ಸಾಕ್ಷಿ ಹೇಳಲು ಹಿಂದೆ ಸರಿಯುವವರಿಗೂ ಸರ್ಕಾರ ಧೈರ್ಯ ತುಂಬಿ ಅವರಿಗೆ ಹಣಕಾಸು ವೆಚ್ಚ ಸೇರಿ ಎಲ್ಲ ರೀತಿಯ ರಕ್ಷಣೆಯನ್ನು ಸರ್ಕಾರ ನೀಡಬೇಕು. ಇದು ಸತ್ಯದ ಅನ್ವೇಷಣೆಯ ಕಾರ್ಯ. ಸರ್ಕಾರ ಈ ಜವಾಬ್ದಾರಿಯನ್ನು ನ್ಯಾಯಬದ್ಧವಾಗಿ, ಹಣಕಾಸಿನ ಬೆಂಬಲದೊಂದಿಗೆ ತೆಗೆದುಕೊಳ್ಳಬೇಕು” ಎಂದು ಸ್ಟ್ಯಾನ್ಲಿ ಒತ್ತಾಯಿಸಿದ್ದಾರೆ.
“ಮೈಸೂರು, ಮಂಗಳೂರು, ಬೆಂಗಳೂರು ದೆಹಲಿಯಿಂತಹ ದೂರದ ಊರಿನಿಂದ ಬರುವವನ್ನು ತಿಳುವಳಿಕೆ ಇಟ್ಟುಕೊಂಡು, ನಾವು ಕರೆದಿದ್ದೇವೆ ಬರಬೇಕು ಎನ್ನುವ ದರ್ಪದ ಮಾತುಗಳು ಸಾಕ್ಷಿಗಳ ವಿಚಾರದಲ್ಲಿ ನಡೆಯಬಾರದು. ಸಾಕ್ಷಿಗಳು ಅತ್ಯಂತ ಮುಖ್ಯ ವ್ಯಕ್ತಿಗಳು. ಅವರನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರಕ್ಕಿದೆ. ಜನರಲ್ಲಿ ಭಯದ ವಾತಾವರಣವಿದೆ. ನಮ್ಮನ್ನು ಯಾರು ಕಟ್ಟಿಹಾಕಿದ್ದಾರೆ, ನಾವು ಪ್ರಜಾಪ್ರಭುತ್ವದಲ್ಲಿದ್ದೇವೆಯೇ?’ ಎಂಬ ಭಾವನೆಯನ್ನು ಸರ್ಕಾರ ತೊಡೆದುಹಾಕಬೇಕು. ಧರ್ಮದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಧಾರ್ಮಿಕ ಮುಖವಾಡಗಳನ್ನು ತೆಗೆಯಬೇಕು. ಇದು ಕ್ರೈಸ್ತ, ಮುಸ್ಲಿಂ, ಹಿಂದೂ, ಜೈನ ಯಾವುದೇ ಧರ್ಮದವರಾಗಿರಬಹುದು. ಜನರ ದೇವರ ನಂಬಿಕೆಗೆ ಕಳಂಕ ತರಬಾರದು. ಆದರೆ ಧಾರ್ಮಿಕ ಮುಖವಾಡದಿಂದ ಜನರನ್ನು ಸುಲಿಗೆ ಮಾಡುವವರನ್ನು ಬಯಲಿಗೆ ಎಳೆಯಬೇಕು” ಎಂದು ಸ್ಟ್ಯಾನ್ಲಿ ಒತ್ತಾಯಿಸಿದ್ದಾರೆ.
“ಪ್ರಕರಣದಲ್ಲಿ ನಮ್ಮದೇನಾದರೂ ಚಿತಾವಣೆಯಿದ್ದರೆ ಸರ್ಕಾರ ತನಿಖೆಗೊಳಪಡಿಸಲಿ. ನಾರ್ಕೊ ಟೆಸ್ಟ್, ಬ್ರೈನ್ ಮ್ಯಾಪಿಂಗ್—ಎಲ್ಲವನ್ನೂ ಮಾಡಲಿ, ಸತ್ಯ ಬಯಲಾಗಲಿ. ಆದರೆ ಸೌಜನ್ಯ, ಅನನ್ಯ ಭಟ್, ಯಮುನಾ ನಾರಾಯಣ, ಪದ್ಮಲತಾ, ವೇದವಲ್ಲಿ ಇಂತಹ ಹೆಣ್ಣು ಮಕ್ಕಳ ಹಾಗೂ ಘನಘೋರವಾಗಿ ಕೊಲೆಯಾದ ಪರ ನಾನು ನ್ಯಾಯಕ್ಕಾಗಿ ಆಗ್ರಹಿಸದಿದ್ದರೆ ನಾನೊಬ್ಬ ವ್ಯರ್ಥ ವ್ಯಕ್ತಿಯಾಗುತ್ತೇನೆ. ನಮ್ಮ ಒಳ ಮನಸ್ಸು ನೀನೊಬ್ಬ ಅಸಮರ್ಥ ಎಂದು ಹೇಳುತ್ತಿರುತ್ತದೆ” ಎಂದು ಸ್ಟ್ಯಾನ್ಲಿ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.