ಒಂದು ಘನ ಸರ್ಕಾರವಾಗಿ, ಖಾಸಗಿ ಸಂಸ್ಥೆ, ಓರ್ವ ವ್ಯಕ್ತಿಯ ಲಾಭದಾಯಕ ಯೋಜನೆಯನ್ನು ಸರ್ಕಾರದ ಯೋಜನೆಗಿಂತಲೂ ಮಿಗಿಲು ಎಂದು ಬಿಂಬಿಸುವುದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹವಾಗುತ್ತದೆ. ಆ ಪ್ರಜ್ಞೆ ಎಸ್ ಆರ್ ಬೊಮ್ಮಾಯಿ, ಅಬ್ದುಲ್ ನಜೀರ್ ಸಾಬ್ ಅವರಂಥವರಿಗೆ ಸ್ಪಷ್ಟವಾಗಿತ್ತು. ಈಗಿನ ಶಾಸಕರು, ಮಂತ್ರಿಗಳು ವಿಧಾನಸಭೆಯ ನಡಾವಳಿಗಳನ್ನು ಅಧ್ಯಯನ ಮಾಡುವ ಮತ್ತು ಅದನ್ನು ರೂಢಿಸಿಕೊಳ್ಳುವ ಕ್ರಮವನ್ನು ಬೆಳೆಸಿಕೊಳ್ಳಬೇಕಿದೆ.
ವಿಧಾನಸಭೆ ಕಲಾಪದಲ್ಲಿ ನಡೆದ ಧರ್ಮಸ್ಥಳ ಚರ್ಚೆಯ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಸ್ಥಾನದಲ್ಲಿ ಎಸ್ ಆರ್ ಬೊಮ್ಮಾಯಿ ಇರಬೇಕಿತ್ತು. ಕರಾವಳಿ ಶಾಸಕರ ಸ್ಥಾನದಲ್ಲಿ ವಸಂತ ಬಂಗೇರರೂ, ಸಚಿವ ಸ್ಥಾನದಲ್ಲಿ ನಜೀರ್ ಸಾಬ್ ಇರಬೇಕಿತ್ತು. ಶಾಸಕ ಸ್ಥಾನದಲ್ಲಿ ಶಿರಗುಪ್ಪ ಶಾಸಕ ಶಂಕರರೆಡ್ಡಿ, ಶಿವಮೂರ್ತಿ, ಜಿ ವಿ ಶ್ರೀರಾಮರೆಡ್ಡಿಯಂತವರೂ, ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿ ಬಂಗಾರಪ್ಪರಂತವರೂ ಇರಬೇಕಿತ್ತು. ಆಗಸ್ಟ್ 14, 2025ರಂದು ವಿಧಾನಸಭೆಯಲ್ಲಿ ಧರ್ಮಸ್ಥಳ ಬಗ್ಗೆ ಚರ್ಚೆಯನ್ನು ಮಾಡಿದವರು 80ರ ದಶಕದ ಸದನದ ದಾಖಲೆಗಳನ್ನು ಓದಬೇಕು.
ಸಂತ್ರಸ್ತ/ಸ್ಥೆ, ದೂರುದಾರರು/ಸಾಕ್ಷಿಯನ್ನು ರಕ್ಷಣೆ ಮಾಡುವುದು ‘ಸ್ಟೇಟ್’ ಕರ್ತವ್ಯ ಎಂದು ಈ ನೆಲದ ಸಂವಿಧಾನ, ಕಾನೂನು ಹೇಳುತ್ತದೆ. ಆದರೆ ವಿಧಾನಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ ವಿಧಾನಸಭೆಯ ಕಲಾಪದಲ್ಲಿ ಪ್ರತಿಪಕ್ಷ ಮತ್ತು ಆಡಳಿತ ಪಕ್ಷಗಳೆರಡೂ ಸೇರಿಕೊಂಡ ‘ಸ್ಟೇಟ್’ ಸಂತ್ರಸ್ತ/ಸ್ಥೆ, ದೂರುದಾರರು, ಸಾಕ್ಷಿಯನ್ನೇ ಕ್ರಿಮಿನಲ್‌ಗಳಂತೆ ಬಿಂಬಿಸಿತು. ತಾನೇ ರಚಿಸಿದ ತನಿಖಾ ತಂಡದ ಬಗ್ಗೆ ತಾನೇ ಅಪಸ್ವರದ ಮಾತಾಡಿತು. ಎಲ್ಲಕ್ಕಿಂತ ಮುಖ್ಯವಾಗಿ ದೂರು ನೀಡುವುದು, ಸಾಕ್ಷಿ ನೀಡುವುದು, ನ್ಯಾಯಕ್ಕಾಗಿ ಹೋರಾಟ ಮಾಡುವುದು ‘ಷಡ್ಯಂತ್ರ’ವಾಗಿ ಸದನಕ್ಕೆ ಕಂಡಿತು. ರಾಜ್ಯದ ಸದನವೊಂದು ‘ಬಲಿಪಶು’ (VICTIMS)ಗಳ ಪರವಾಗಿರಬೇಕು. ಎಸ್ಐಟಿ ರಚನೆಗಾಗಿ ಹೊರಡಿಸಿರುವ ಆದೇಶ ಮತ್ತು ಎಸ್ಐಟಿಯನ್ನು ಠಾಣಾ ದರ್ಜೆಗೆ ಏರಿಸಿರುವ ಆದೇಶದ ಪ್ರಕಾರ ಆರೋಪಿಗಳು ಯಾರು ಮತ್ತು ಬಲಿಪಶುಗಳು ಯಾರು ಎಂದು ಅರ್ಥವಾಗುತ್ತದೆ. ಸರ್ಕಾರ ಎಸ್ಐಟಿ ರಚಿಸಿ ಬಲಿಪಶುಗಳ ವಿರುದ್ಧವೇ ಮಾತನಾಡುತ್ತದೆ ಎನ್ನುವುದು ವಿಪರ್ಯಾಸ!
ಧರ್ಮಸ್ಥಳದಲ್ಲಿ ದೂರುದಾರ/ಸಾಕ್ಷಿ ಹೆಣಗಳನ್ನು ಹೂತು ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಎಸ್ಐಟಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಇನ್ನೂ ಪೂರ್ಣಗೊಳ್ಳದೇ ಇರುವಾಗಲೇ ವಿಪಕ್ಷದ ಸದಸ್ಯರು ಧರ್ಮಸ್ಥಳ ದೇವಸ್ಥಾನ, ವೀರೇಂದ್ರ ಹೆಗ್ಗಡೆಯವರನ್ನು ಎಳೆದು ತಂದಿದ್ದು ಯಾಕೆ? ದೂರಿನಲ್ಲಾಗಲೀ, ಎಫ್ಐಆರ್‌ನಲ್ಲಾಗಲೀ ವೀರೇಂದ್ರ ಹೆಗ್ಗಡೆಯವರ ಹೆಸರು ಇಲ್ಲದೇ ಇದ್ದರೂ ಅವರ ಹೆಸರುಗಳನ್ನು ಈ ಪ್ರಕರಣದಲ್ಲಿ ಥಳಕು ಹಾಕಿದ್ದು ಯಾಕೆ? ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ವಿಪಕ್ಷಗಳಿಗೆ ಉತ್ತರ ನೀಡುವ ಸಂದರ್ಭದಲ್ಲಿ ‘ಡಾ ಡಿ ವೀರೇಂದ್ರ ಹೆಗ್ಗಡೆಯವರ ಮೇಲಿರುವ ಅಪಾದನೆಗಳಿಂದ ಅವರನ್ನು ಮುಕ್ತಗೊಳಿಸಲು ಎಸ್ಐಟಿ ರಚಿಸಲಾಯಿತು’ ಎನ್ನುತ್ತಾರೆ. ವೀರೇಂದ್ರ ಹೆಗ್ಗಡೆಯವರ ಮೇಲಿನ ಎಫ್ಐಆರ್ ತನಿಖೆ ಎಸ್ಐಟಿ ಬಳಿ ಇದೆಯೆ? ತನಿಖೆ ಪೂರ್ಣಗೊಳ್ಳದೇ ತನಿಖೆಯ ಫಲಿತಾಂಶ ಹೇಳುವುದು ಅಪರಾಧವಲ್ಲವೇ? ಸಂತ್ರಸ್ತರಿಗೆ ನ್ಯಾಯ ಕೊಡಲು ತನಿಖೆ ಮಾಡುವ ಬದಲು ಪ್ರಭಾವಿಗಳಿಗೆ ಕ್ಲೀನ್ ಚಿಟ್ ನೀಡಲೆಂದೇ ಎಸ್ಐಟಿ ತನಿಖೆ ನಡೆಯುತ್ತಿದೆಯೇ ಎಂಬ ಪ್ರಶ್ನೆಗಳನ್ನು ಗೃಹ ಸಚಿವರ ಭಾಷಣ ಮುನ್ನಲೆಗೆ ತಂದಿದೆ.

ಮುಂದುವರೆದು ಮಾತನಾಡಿದ ಗೃಹ ಸಚಿವರು ‘ಡಾ ಡಿ ವೀರೇಂದ್ರ ಹೆಗ್ಗಡೆಯವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ಜನರಿಗೆ ದಾರಿ ದೀಪವಾಗಿದ್ದಾರೆ. ಸಾವಿರಾರು ಮಹಿಳೆಯರ ಬದುಕಿಗೆ ಆಸರೆಯಾಗಿದ್ದಾರೆ’ ಎಂದಿದ್ದಾರೆ. ಧರ್ಮಸ್ಥಳದ ಟ್ರಸ್ಟ್ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದು ಮಂಜಯ್ಯ ಹೆಗ್ಗಡೆಯವರೇ ಹೊರತು ವೀರೇಂದ್ರ ಹೆಗ್ಗಡೆಯವರಲ್ಲ. ಮಂಜಯ್ಯ ಹೆಗ್ಗಡೆಯವರ ಸಮಾಜ ಸುಧಾರಣಾ ಕ್ರಮಗಳು ಈಗ ವಾಣಿಜ್ಯೀಕರಣಗೊಂಡಿದೆ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳಿಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಿಗೂ ವ್ಯತ್ಯಾಸವೇನಿದೆ? ಪರಮೇಶ್ವರ್ ಅವರು ಇಡಿ ತನಿಖೆ ಎದುರಿಸಲಿಲ್ಲವೇ? ಶಿಕ್ಷಣ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಡಾ ಜಿ ಪರಮೇಶ್ವರ್‌ಗೆ ಇಡಿ ತನಿಖೆಯಲ್ಲಿ ರಿಯಾಯಿತಿ ಇದೆಯೇ?
ಸಾರ್ವಜನಿಕರ ಹುಂಡಿ ಹಣದಲ್ಲಿ ಸಮಾಜ ಸೇವೆ ಮಾಡುವ ವೀರೇಂದ್ರ ಹೆಗ್ಗಡೆಯವರ ಸಮಾಜ ಸೇವೆಯನ್ನು ಹೇಗೆ ನೋಡಬೇಕು ಎಂಬುದನ್ನು ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿಯವರಿಂದ ಈಗಿನ ಸದನ ಸದಸ್ಯರು ಕಲಿಯಬೇಕು.
‘ಧರ್ಮಾಧಿಕಾರಿಯವರು ಹಮ್ಮಿಕೊಂಡ ಗ್ರಾಮಾಭಿವೃದ್ಧಿ ಯೋಜನೆಯು ಸರಕಾರದ ಯೋಜನೆಗಳಿಗಿಂತ ಉತ್ತಮ ರೀತಿಯಲ್ಲಿ ಫಲಪ್ರದವಾಗಿದೆ ಎಂಬ ವಿಚಾರ ಸರಕಾರದ ಗಮನಕ್ಕೆ ಬ೦ದಿದೆಯೆ?’ ಎಂದು 05.09.1988ರಲ್ಲಿ ಸದನದಲ್ಲಿ ಪ್ರಶ್ನೆ ಎದುರಾದಾಗ, ಅಂದಿನ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿಯವರು ಹೀಗೆ ಉತ್ತರ ನೀಡುತ್ತಾರೆ: ‘ಧರ್ಮಾಧಿಕಾರಿಯವರು ಗ್ರಾಮಾಭಿವೃದ್ಧಿ ಯೋಜನೆಯನ್ನು ಅವರದೇ ಆದ ರೀತಿಯಲ್ಲಿ ಅನುಷ್ಠಾನಗೊಳಿಸುತ್ತಿರುವುದರಿಂದ ಸರ್ಕಾರದ ಯೋಜನೆಗಿಂತ ಉತ್ತಮ ರೀತಿಯಲ್ಲಿ ಫಲಪ್ರದವಾಗಿದೆ ಎಂಬ ವಿಚಾರ ಸರಿಯಲ್ಲ’ ಎನ್ನುತ್ತಾರೆ.
‘ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕಿನ 81 ಅನುಷ್ಠಾನಕ್ಕೆ ತಂದಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿದೆಯೇ? ಈ ಯೋಜನೆಯ ರೀತಿಯನ್ನು ಅನುಸರಿಸಿ ಅಭಿವೃದ್ಧಿ ಕಾರ್ಯಗಳನ್ನು ಸ್ವಚ್ಛ ರೀತಿಯಲ್ಲಿ ನಡೆಸಲು ಸರ್ಕಾರಕ್ಕೆ ಸಾಧ್ಯವಿಲ್ಲವೆ?’ ಎಂದು 01.04.1987ರಲ್ಲಿ ಸದನ ಸದಸ್ಯರು ಪ್ರಶ್ನಿಸಿದಾಗ ಅಂದಿನ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಅಬ್ದುಲ್ ನಜೀರ್ ಸಾಬ್(ನೀರ್ ಸಾಬ್)ರವರು,‘ ಹೆಗ್ಗಡೆಯವರು ಅನುಷ್ಠಾನದಲ್ಲಿ ತಂದಂಥ ಕಾರ್ಯಕ್ರಮಗಳೇನು ವಿಶೇಷವಾದವುಗಳೇನಲ್ಲ. ಅವುಗಳು ಸರ್ಕಾರದ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ, ಅಂತ್ಯೋದಯ ಯೋಜನೆ, ಬುಡಕಟ್ಟು ಜನಾಂಗ ಅಭಿವೃದ್ಧಿ ಯೋಜನೆಗಳಂತೆಯೇ ಒಟ್ಟಾಗಿ ಜಾರಿಯಲ್ಲಿವೆ’ ಎಂದು ಉತ್ತರ ನೀಡುತ್ತಾರೆ.

ಒಂದು ಘನ ಸರ್ಕಾರವಾಗಿ, ಖಾಸಗಿ ಸಂಸ್ಥೆ, ಓರ್ವ ವ್ಯಕ್ತಿಯ ಲಾಭದಾಯಕ ಯೋಜನೆಯನ್ನು ಸರ್ಕಾರದ ಯೋಜನೆಗಿಂತಲೂ ಮಿಗಿಲು ಎಂದು ಬಿಂಬಿಸುವುದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹವಾಗುತ್ತದೆ. ಆ ಪ್ರಜ್ಞೆ ಎಸ್ ಆರ್ ಬೊಮ್ಮಾಯಿ, ಅಬ್ದುಲ್ ನಜೀರ್ ಸಾಬ್ ಅವರಂಥವರಿಗೆ ಸ್ಪಷ್ಟವಾಗಿತ್ತು. ಈಗಿನ ಶಾಸಕರು, ಮಂತ್ರಿಗಳು ವಿಧಾನಸಭೆಯ ನಡಾವಳಿಗಳನ್ನು ಅಧ್ಯಯನ ಮಾಡುವ ಮತ್ತು ಅದನ್ನು ರೂಢಿಸಿಕೊಳ್ಳುವ ಕ್ರಮವನ್ನು ಬೆಳೆಸಿಕೊಳ್ಳಬೇಕಿದೆ.
ಧರ್ಮಸ್ಥಳದಲ್ಲಿ ನಡೆದ ಸಾವು ನೋವುಗಳಿಗೆ ದೇವರು ಕಾರಣ ಅಲ್ಲ. ಹಾಗಾಗಿ ದೇವರನ್ನು ಹೀಯಾಳಿಸುವ, ನಿಂದಿಸುವ ಪ್ರಶ್ನೆಯೇ ಇಲ್ಲ. ಎಲ್ಲಾ ಸಾವು ನೋವುಗಳಿಗೆ ಮನುಷ್ಯರೇ ಕಾರಣ. ಹಾಗಾಗಿ ಸಾವು ನೋವುಗಳಿಗೆ ಸರ್ಕಾರದ ಬಳಿ ನ್ಯಾಯ ಕೇಳಲಾಗುತ್ತದೆ. ಧರ್ಮಸ್ಥಳದ ಸಾವು ನೋವು, ಹೆಣ ಹೂತಿಡುವಿಕೆ, ನಾಪತ್ತೆ ಪ್ರಕರಣಗಳು ಮತ್ತು ಪೊಲೀಸರ ನಿಷ್ಕ್ರೀಯತೆ, ದೌರ್ಜನ್ಯಗಳ ಬಗ್ಗೆ ವಿಧಾನಸಭೆಯಲ್ಲೂ ಚರ್ಚೆಯಾಗಿತ್ತು. ಆಗಲೂ ಬಿಜೆಪಿ ಕಾಂಗ್ರೆಸ್ ಸದನದಲ್ಲಿತ್ತು. 31 ಆಗಸ್ಟ್ 1983ರಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ವಿಸ್ತೃತ ಚರ್ಚೆಯ ಯಥಾವತ್ತು ಹೀಗಿದೆ :
ವಿಷಯ: ಧರ್ಮಸ್ಥಳದಲ್ಲಿ ನದಿಯಲ್ಲಿ ಬಿದ್ದು ಸತ್ತುಹೋದ ಎರಡು ಶವಗಳನ್ನು ಪೊಲೀಸರು ದಫನ್ ಮಾಡಿರುವ ಬಗ್ಗೆ.
ಶಂಕರರೆಡ್ಡಿ (ಶಿರಗುಪ್ಪ ಶಾಸಕರು): ಮಾನ್ಯ ಅಧ್ಯಕ್ಷರೇ, ನಮ್ಮ ಶಿರಗುಪ್ಪ ತಾಲ್ಲೂಕಿಗೆ ಸೇರಿದ ವೆಂಕೋಬರಾವ್ ಎನ್ನುವವರ ಪುತ್ರ ಮತ್ತು ಆತನ ಸ್ನೇಹಿತರು ತೀರ್ಥಯಾತ್ರೆಗೆಂದು ಹೋದಾಗ ಧರ್ಮಸ್ಥಳದ ನದಿಯಲ್ಲಿ ಇಬ್ಬರೂ ಬಿದ್ದು ಸತ್ತು ಹೋದಂಥ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ಹೆಣಗಳನ್ನು ಮೇಲೆ ತೆಗೆದು ಯಾರಿಗೂ ತಿಳಿಸದೆ ದಫನ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದಾದ ಒಂದು ತಿಂಗಳ ನಂತರ ವಿಷಯವನ್ನು ತಿಳಿದ ಶ್ರೀ ವೆಂಕೋಬರಾವ್ ಅವರು ಧರ್ಮಸ್ಥಳಕ್ಕೆ ಹೋಗಿ ಅಲ್ಲಿನ ಪೊಲೀಸರಲ್ಲಿ ವಿಚಾರ ಮಾಡಿ, ‘ಈ ಸುದ್ದಿಯನ್ನು ಪತ್ರಿಕೆಗಳ ಮತ್ತು ರೇಡಿಯೋ ಮೂಲಕ ಪ್ರಸಾರ ಮಾಡಿದ್ದರೆ ನನಗೆ ಕೂಡಲೇ ತಿಳಿಯುತ್ತಿತ್ತು’ ಎಂದು ಹೇಳಿದಾಗ ಅಲ್ಲಿದ್ದ ಹೆಡ್-ಕಾನ್‌ಸ್ಟೆಬಲ್, ‘ನೀನು ಯಾರೋ ಮಗನೇ, ಇದನ್ನೆಲ್ಲಾ ಹೇಳಲು’ ಎಂದು ಆಡಬಾರದ ಮಾತುಗಳನ್ನು ಆಡಿ ಅವರ ಕಪಾಳಕ್ಕೆ ಹೊಡೆದು ಬಡಿದು ಮಾಡಿದ್ದೇ ಅಲ್ಲದೆ, ಅವರ ಜನಿವಾರವನ್ನೂ ಸಹ ಹರಿದು ಹಾಕಿದ ನಂತರ ಆ ವೃದ್ಧರನ್ನು ರಾತ್ರಿಯೆಲ್ಲಾ ಲಾಕಪ್‌ನಲ್ಲಿಟ್ಟಿದ್ದಾರೆ. ಅವರ ಬಳಿಯಲ್ಲಿದ್ದ 250 ರೂಪಾಯಿಗಳನ್ನೂ ಮತ್ತು ರಿಸ್ಟ್-ವಾಚನ್ನು ಸಹ ಕಿತ್ತುಕೊಂಡು ಈ ಪ್ರಕರಣವನ್ನು ಯಾರ ಬಳಿಯಾದರೂ ಹೇಳಿದರೆ ಮತ್ತೆ ಪೊಲೀಸರು ಕಾಟ ಕೊಡುವುದಾಗಿ ಹೇಳಿ ಅವರನ್ನು ಹೆದರಿಸಿ ಮುಚ್ಚಳಿಕೆಯನ್ನು ಸಹ ಅವರಿಂದ ಬರೆಸಿಕೊಂಡು ಹೊರಗೆ ಬಿಟ್ಟಿದ್ದಾರೆ. ಇಷ್ಟೆಲ್ಲಾ ನಡೆದ ನಂತರ ನಾನು ಈ ವಿಷಯದ ಬಗ್ಗೆ ಒಂದು ಪತ್ರವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ 2 ತಿಂಗಳ ಹಿಂದೆ ಬರೆದೆ. ಆದರೆ ಅವರಿಂದ ಸೌಜನ್ಯಕ್ಕಾದರೂ ಈ ವಿಷಯವನ್ನು ಪರಿಶೀಲನೆ ಮಾಡುತ್ತೇವೆಂದು ಹೇಳುವ ಒಂದು ಉತ್ತರ ನನಗೆ ಬರಲಿಲ್ಲ. ಆದ್ದರಿಂದ ಈ ಬಗ್ಗೆ ಇಲ್ಲಿ ಚರ್ಚೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ.
ಶಿವಮೂರ್ತಿ(ಶಾಸಕರು): ಮಾನ್ಯ ಅಧ್ಯಕ್ಷರೇ, ವೆಂಕೋಬರಾವ್ ಅವರು ತನ್ನ ಮಗ ಕಳೆದ ಒಂದು ತಿಂಗಳಿನಿಂದ ಎಲ್ಲಿಗೆ ಹೋದ ಎಂಬ ವಿಚಾರ ಆತನ ಸ್ನೇಹಿತರಿಂದಲೂ ತಿಳಿಯದಿದ್ದಾಗ ಒಂದು ದಿನ ಸತ್ತು ಹೋಗಿರುವ ವಾರ್ತೆ ಬರುತ್ತದೆ. ಆನಂತರ ಇವರು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಹೋಗಿ ವಿಚಾರ ಮಾಡಿದಾಗ, ಜನರಿಗೆ ರಕ್ಷಣೆ ಕೊಡುವಂತಹ ಅಧಿಕಾರಿಗಳೇ ಮಗನನ್ನು ಕಳೆದುಕೊಂಡ ತಂದೆಗೆ ಸೂಕ್ತ ಉತ್ತರವನ್ನೂ ಸಹ ಹೇಳುವ ಒಂದು ಸೌಜನ್ಯವನ್ನು ತೋರಿಸದೆ ಅವರ ಅಂಗಿಯನ್ನು ಬಿಚ್ಚಿಸಿ ಅಲ್ಲಿದ್ದ ಹೆಡ್- ಕಾನ್‌ಸ್ಟೆಬಲ್ ಅವರ ಕಪಾಳಕ್ಕೆ ಹೊಡೆದಿದ್ದಾರೆ. ಅಷ್ಟೇ ಅಲ್ಲ ರಾತ್ರಿಯೆಲ್ಲಾ ಪೊಲೀಸ್ ಕಸ್ಟಡಿಯಲ್ಲಿಯೇ ಇಟ್ಟುಕೊಂಡು ಮಲಮೂತ್ರ ಮಾಡುವುದಕ್ಕೂ ಸಹ ಬಿಟ್ಟಿಲ್ಲ ಮತ್ತು ಕುಡಿಯಲು ನೀರನ್ನೂ ಸಹ ಕೊಟ್ಟಿಲ್ಲ. ಇಂತಹ ಅನೇಕ ಪ್ರಕರಣಗಳಲ್ಲಿ ಪೊಲೀಸರು ಹದ್ದುಮೀರಿ ನಡೆದುಕೊಳ್ಳುವಂತಹ ಪ್ರವೃತ್ತಿಯನ್ನು ಕರ್ನಾಟಕದ ಜನತೆ ಬಹಳ ಗಂಭೀರವಾಗಿ ವಿಚಾರ ಮಾಡುತ್ತಿದ್ದಾರೆ. ಸತ್ತ ಮಗನ ಬಗ್ಗೆ ಕೇಳಲು ಹೋದಾಗ ಈ ರೀತಿ ವರ್ತನೆ ಮಾಡಿದ್ದು ಸರಿಯೇ ಎಂಬ ಬಗ್ಗೆ ಸರ್ಕಾರದವರು ಉತ್ತರ ಕೊಡಬೇಕು.
ವಸಂತ ಬಂಗೇರ(ಬೆಳ್ತಂಗಡಿ ಶಾಸಕರು): ಮಾನ್ಯ ಅಧ್ಯಕ್ಷರೇ, ಈ ಪ್ರಕರಣ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ವೆಂಕೋಬರಾವ್ ಅವರು ತನ್ನ ಮಗನು ಸತ್ತ ಬಗ್ಗೆ ವಿಚಾರಣೆ ಮಾಡಲು ಧರ್ಮಸ್ಥಳದ ಔಟ್ ಪೋಸ್ಟ್ ಪೊಲೀಸ್ ಸ್ಟೇಷನ್‌ಗೆ ಹೋದಾಗ ಅಲ್ಲಿದ್ದ ಹೆಡ್ ಕಾನ್‌ಸ್ಟೆಬಲ್ ಸರಿಯಾದ ಉತ್ತರ ಕೊಡದೆ ಕೇಳಲು ಹೋದವರನ್ನು ಹೊಡೆದು ಅವರ ಜನಿವಾರವನ್ನು ಕಿತ್ತುಹಾಕಿ ಲಾಕಪ್‌ನಲ್ಲಿ ಹಾಕಿ ಮಾರನೇ ದಿವಸ ಹೊರಗೆ ಬಿಟ್ಟಿದ್ದಾರೆ. ಇವರ ಮಗನ ಹತ್ತಿರವಿದ್ದ ಟ್ರಾನ್ಸಿಸ್ಟರ್ ರೇಡಿಯೋ, ಟೇಪ್-ರೆಕಾರ್ಡರ್, ವಾಚ್ ಮುಂತಾದ ಯಾವ ವಸ್ತುಗಳನ್ನೂ ಸಹ ವಾಪಸ್ ಕೊಟ್ಟಿಲ್ಲ. ಧರ್ಮಸ್ಥಳಕ್ಕೆ ಇವರ ಮಗ ಹೋದಾಗ 4 ಜನರು ಸೇರಿಕೊಂಡು ಒಂದು ರೂಮನ್ನು ಪಡೆದಿದ್ದರು. ಈ 4 ಜನರಲ್ಲಿ ಇಬ್ಬರು ನದಿಗೆ ಬಿದ್ದು ಸತ್ತ ಮೇಲೆ ಉಳಿದ ಇಬ್ಬರು ಯಾರು, ಎಲ್ಲಿಗೆ ಹೋದರು ಎಂಬುದನ್ನು ವಿಚಾರಣೆ ಮಾಡಲು ಹೋದಾಗ ಪೊಲೀಸರು ಪೆಟ್ಟು ಕೊಟ್ಟಿದ್ದಾರೆ. ಸರ್ಕಾರದವರು ಮೊದಲು ಈ ಪೊಲೀಸರ ದೌರ್ಜನ್ಯವನ್ನು ನಿಲ್ಲಿಸಬೇಕು. ಈ ಹೆಡ್ ಕಾನ್‌ಸ್ಟೆಬಲ್ ಅನ್ನು ಮೊದಲು ಅಮಾನತ್ತಿನಲ್ಲಿಟ್ಟು ಈ ಪ್ರಕರಣವನ್ನು ತನಿಖೆ ಮಾಡಬೇಕೆಂದು ತಮ್ಮ ಮೂಲಕ ಮುಖ್ಯಮಂತ್ರಿಗಳಲ್ಲಿ ಕೇಳಿಕೊಳ್ಳುತ್ತೇನೆ.

ಎಸ್. ಬಂಗಾರಪ್ಪ(ವಿರೋಧ ಪಕ್ಷದ ನಾಯಕರು): ಮಾನ್ಯ ಅಧ್ಯಕ್ಷರೆ, ಮಾನ್ಯ ಸದಸ್ಯರುಗಳು ವಿವರಣೆ ಕೊಟ್ಟಿದ್ದಾರೆ. ನಾನು ಪುನಃ ವಿವರಣೆ ಕೊಡಲಿಕ್ಕೆ ಹೋಗುವುದಿಲ್ಲ. ಉದ್ದೇಶವೇನೆಂದರೆ ತಂದೆ ಮಗನನ್ನು ಕಳೆದುಕೊಂಡು ಪೊಲೀಸ್ ಸ್ಟೇಷನ್‌ಗೆ ಹೋದಾಗ ಅವರು ಅನುಕಂಪ ವ್ಯಕ್ತಪಡಿಸಬೇಕಾಗಿತ್ತು. ಮಗ ಸಾವಿಗೀಡಾದ ದುರಂತ ನಡೆದದ್ದು ತಂದೆ ತಾಯಿಗಳಿಗೆ ಗೊತ್ತಿಲ್ಲ. ಆತ ಸತ್ತ ವಿಷಯವನ್ನು ರೇಡಿಯೋ ಮೂಲಕ ಬಿತ್ತರಿಸಬೇಕಾಗಿತ್ತು. ಪತ್ರಿಕೆಗಳ ಮೂಲಕ ಬರೆಸಬೇಕಾಗಿತ್ತು. ಈ ರೀತಿ ಮಾಡಲಿಕ್ಕೆ ಪೊಲೀಸ್ ಇಲಾಖೆಯಲ್ಲಿ ಕಾನೂನು ಇದೆ. ಅವರು ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿಲ್ಲ. ಮುಖ್ಯಮಂತ್ರಿಗಳು ಬಳ್ಳಾರಿಗೆ ಹೋಗಿದ್ದಾಗ ಅವರನ್ನು ಕಂಡು ಅರ್ಜಿ ಕೊಡಲು ಸತ್ತವನ ತಂದೆ ಕಾಯ್ದರು, ಆದರೆ, ಪೊಲೀಸ್ ಅಧಿಕಾರಿಗಳು ಮುಖ್ಯಮಂತ್ರಿಗಳನ್ನು ಯಾರೂ ಭೇಟಿ ಮಾಡುವ ಹಾಗೆ ಇಲ್ಲವೆಂದು ಹೇಳಿದಾಗ, ಆತ ಅರ್ಜಿಯನ್ನು ಬೆಂಗಳೂರಿಗೆ ಪೋಸ್ಟ್ ಮೂಲಕ ಮುಖ್ಯಮಂತ್ರಿಗಳ ವಿಳಾಸಕ್ಕೆ ಕಳುಹಿಸಿದ್ದಾನೆ. ಆ ಅರ್ಜಿ ನಿಮ್ಮ ಕಚೇರಿಗೆ ದಿನಾಂಕ 27-7-1983 ರಂದು ಬಂದು ತಲುಪಿದೆ. ಅದರ ರಶೀದಿ ಆತನಿಗೆ ಹೋಗಿದೆ. ಮಗನನ್ನು ಕಳೆದುಕೊಂಡಂತಹ ವಿಚಾರ ತಂದೆಗೆ ಗೊತ್ತಾಗಿಲ್ಲ. ಇದು ಏತಕ್ಕೆ ಆಯಿತು? ಮಗನನ್ನು ಕಳೆದುಕೊಂಡ ತಂದೆತಾಯಿಗಳ ಗೋಳನ್ನು ನೋಡಿದರೆ ಎಲ್ಲರಿಗೂ ಅರ್ಥವಾಗುತ್ತದೆ. ಆತ ತಮ್ಮ ಕಚೇರಿಗೆ ಅರ್ಜಿ ಕಳುಹಿಸಿ ಒಂದು ತಿಂಗಳ ಮೇಲಾಗಿದೆ, ವಿಚಾರ ಏನೆಂದು ಗೊತ್ತಿಲ್ಲ. ಆತ ಕಳುಹಿಸಿದ ಅರ್ಜಿಗೆ ಉತ್ತರ ಕಳುಹಿಸುವ ಸೌಜನ್ಯ ನೀವು ಏತಕ್ಕೆ ತೋರಿಸಿಲ್ಲ? ಸದನಕ್ಕೆ ಉತ್ತರ ಕೊಡಬೇಕಾಗುತ್ತದೆ. ಪೊಲೀಸ್ ಅಧಿಕಾರಿಗಳ ಮೇಲೆ ಏನು ಕ್ರಮ ತೆಗೆದುಕೊಂಡಿದ್ದೀರಿ? ಇಲಾಖೆ ರಕ್ಷಣೆ ಕೊಡುವ ಕಾರ್ಯದಲ್ಲಿ ಏನು ಕ್ರಮ ತೆಗೆದುಕೊಂಡಿದೆ? ತಂದೆತಾಯಿಗಳಿಗೆ ವಿಷಯವನ್ನು ತಿಳಿಸಿದ್ದಾರೆಯೇ? ಮಗ ಏನಾದ ಎಂದು ಕೇಳಲಿಕ್ಕೆ ಹೋದಾಗ ಹೊಡೆದಿದ್ದಾರೆ, ಇದನ್ನು ನಾವು ತಡೆದು ಕೊಳ್ಳುವುದಕ್ಕೆ ಆಗುವುದಿಲ್ಲ. ನಾನು ಸರ್ಕಾರವನ್ನು ಒತ್ತಾಯ ಮಾಡುವುದೇನೆಂದರೆ ಮುಖ್ಯಮಂತ್ರಿಗಳು ಈ ಸದನಕ್ಕೆ ಇದರ ಬಗ್ಗೆ ಯಾವಾಗ ಹೇಳಿಕೆ ಕೊಡುತ್ತಾರೆ?
ಕೆ. ಶಿವಮೂರ್ತಿ(ಶಾಸಕರು): ನಮ್ಮ ಪ್ರಶ್ನೆಗೆ ಯಾವಾಗ ಮುಖ್ಯಮಂತ್ರಿಗಳು ಉತ್ತರ ಕೊಡುತ್ತಾರೆ ? ಅರ್ಜಿ ಕೊಟ್ಟ ತಕ್ಷಣ ಅಧಿಕಾರಿಗಳು ಹೇಳುವ ಮಾತು ಹೇಳುವುದು ಬೇಡ.
ರಾಮಕೃಷ್ಣ ಹೆಗಡೆ(ಮುಖ್ಯಮಂತ್ರಿಗಳು): ಇವತ್ತು ಈ ವಿಚಾರವನ್ನು ಎತ್ತಿದ್ದೀರಿ, ಇಂತಿಷ್ಟೇ ಸಮಯದಲ್ಲಿ ಹೇಳಿಕೆ ಕೊಡುತ್ತೇನೆಂದು ಹೇಳುವುದು ಕಷ್ಟ.
ಎಸ್. ಬಂಗಾರಪ್ಪ (ವಿರೋಧ ಪಕ್ಷದ ನಾಯಕರು): ಯಾಕೆ ? This, I don’t agree, You have gotwireless.
(ವಿಧಾನಸಭೆಯಲ್ಲಿ ಗದ್ದಲ)
ರಾಮಕೃಷ್ಣ ಹೆಗಡೆ (ಮುಖ್ಯಮಂತ್ರಿಗಳು): You may not agree. But, I cannot dance to your tune.
ಎಸ್ ಬಂಗಾರಪ್ಪ(ವಿರೋಧ ಪಕ್ಷದ ನಾಯಕರು): We have every right to demand.
ರಾಮಕೃಷ್ಣ ಹೆಗಡೆ (ಮುಖ್ಯಮಂತ್ರಿಗಳು): You cannot force me like that. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಉತ್ತರ ಹೇಳುತ್ತೇನೆ.
(ವಿಧಾನಸಭೆಯಲ್ಲಿ ಮತ್ತೆ ಗದ್ದಲ)
ದಿನಾಂಕ 21.01.1988ರ ವಿಧಾನಸಭೆ ಅಧಿವೇಶನ ಕಲಾಪದಲ್ಲಿ ಪದ್ಮಲತಾ ಕೊಲೆ, ಆರೋಪಿಗಳನ್ನು ಬಂಧಿಸಲು ಹೊರಟ ಇನ್‌ಸ್ಪೆಕ್ಟರ್ ವರ್ಗಾವಣೆ ವಿಷಯ ಚರ್ಚೆಯಾಗುತ್ತದೆ, ಕಾನೂನು ಮತ್ತು ಸಂಸದೀಯ ಸಚಿವರಾಗಿರುವ ಲಕ್ಷ್ಮಿಸಾಗರ್ ಅವರು ಗೃಹ ಸಚಿವರ ಪರವಾಗಿ ಘನತೆಯ ಉತ್ತರ ನೀಡುತ್ತಾರೆ. ಅದರ ಯಥಾವತ್ತು ಹೀಗಿದೆ :

ವಿಷಯ: ಉಜಿರೆ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿನಿ ಪದ್ಮಲತಾಳ ಸಾವಿನ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದು.
ಕೆ. ವಸಂತ ಬಂಗೇರ(ಬೆಳ್ತಂಗಡಿ ಶಾಸಕರು): ಮಾನ್ಯ ಅಧ್ಯಕ್ಷರೇ, ಕೆಲವು ಸಮಯದ ಹಿಂದೆ ನನ್ನ ಕ್ಷೇತ್ರವಾದ ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಇಲ್ಲಿಯ ವಿದ್ಯಾರ್ಥಿನಿಯಾದ ಕುಮಾರಿ ಪದ್ಮಲತಾ ಇವಳ ಸಾವಿನ ಬಗ್ಗೆ ಸಿಓಡಿ ತನಿಖೆ ನಡೆಸಬೇಕೆಂದು ವಿಧಾನಸಭೆಯಲ್ಲಿ ಒತ್ತಾಯಪಡಿಸಿದಂತೆ, ಸರ್ಕಾರ ಸಿಓಡಿ ತನಿಖೆಗೆ ಆಜ್ಞಾಪಿಸಿತ್ತು. ಸಿಒಡಿ ಸರ್ಕಲ್ ಇನ್‌ಸ್ಪೆಕ್ಟರ್ ಜಗನ್ನಾಥ ರೈ ಇವರ ನೇತೃತ್ವದಲ್ಲಿ ತನಿಖೆ ಪ್ರಾರಂಭವಾಯಿತು. ಅವರು ತನಿಖೆ ನಡೆಸಿ ಒಂದು ಹಂತದಲ್ಲಿ ತಪ್ಪಿತಸ್ಥ ರನ್ನು ಗೊತ್ತು ಮಾಡಿ ಬಂಧಿಸುವ ಹಂತದಲ್ಲಿರುವಾಗ, ಸಿಓಡಿ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಜಗನ್ನಾಥ ರೈಗಳು ತನಿಖೆಯನ್ನು ತಕ್ಷಣ ನಿಲ್ಲಿಸಿ ಫೈಲು ಸಮೇತ ಬೆಂಗಳೂರಿಗೆ ವಾಪಸು ಬರಬೇಕೆಂದು ಆಜ್ಞಾಪಿಸಲಾಯಿತು. ಹಿರಿಯ ಅಧಿಕಾರಿಗಳ ಆದೇಶದಂತೆ ಇನ್ಸ್‌ಸ್ಪೆಕ್ಟರ್ ಜಗನ್ನಾಥ ರೈಗಳು ತನಿಖೆಯನ್ನು ತಕ್ಷಣ ನಿಲ್ಲಿಸಿ ತನಿಖೆಯ ಫೈಲು ಸಮೇತ ವಾಪಸು ಬೆಂಗಳೂರಿಗೆ ಬಂದು ಫೈಲನ್ನು ಹಿರಿಯ ಅಧಿಕಾರಿಗಳಿಗೆ ಒಪ್ಪಿಸಿದರು. ಆ ಬಳಿಕ ಇನ್ಸ್‌ಸ್ಪೆಕ್ಟರ್ ಜಗನ್ನಾಥ ರೈಗಳನ್ನು ರಜೆಯ ಮೇಲೆ ಮನೆಗೆ ಹೋಗುವಂತೆ ಆಜ್ಞೆಯಾಯಿತು. ಜಗನ್ನಾಥ ರೈಗಳು ರಜೆ ಹಾಕಿ ಮನೆಗೆ ಹೋದರು. ಅದರ ನಂತರ ಸದರಿ ಕೇಸಿನ ತನಿಖೆಗಾಗಿ ಡಿವೈಎಸ್ಪಿ ಯವರನ್ನು ಕಳುಹಿಸಲಾಯಿತು, ಡಿವೈಎಸ್‌ಪಿಯವರು ಸಿಓಡಿ ಹಿರಿಯ ಆಧಿಕಾರಿಗಳ ಆದೇಶದಂತೆ ಬೆಳ್ತಂಗಡಿ ತಾಲ್ಲೂಕಿಗೆ ಬಂದು ಒಂದು ತಿಂಗಳು ಕಾಲಹರಣ ಮಾಡಿ, ಯಾವುದೇ ರೀತಿಯ ತನಿಖೆ ನಡೆಸದೆ ‘ತಪ್ಪಿತಸ್ಥರ ಪತ್ತೆಯಾಗುವುದಿಲ್ಲ’ ಎಂದು ಕೇಸ್ ಫೈಲನ್ನು ಪೂರ್ಣಗೊಳಿಸಿ ತನಿಖೆಗೆ ಇತಿಶ್ರೀ ಹಾಡಿ ಫೈಲನ್ನು ಕ್ಲೋಸ್ ಮಾಡಿದ್ದಾರೆ. ಪದ್ಮಲತಾ ಮರ್ಡರ್ ಕೇಸ್ ನಲ್ಲಿ ಶಾಮೀಲಾಗಿರುವ ಕೊಲೆಗಡುಕನ್ನು ಸಿಓಡಿ ಅಧಿಕಾರಿಗಳು ಬಂಧಿಸಿ, ಕೇಸು ದಾಖಲು ಮಾಡುವ ಬದಲು ಅವರಿಗೆ ರಕ್ಷಣೆ ಕೊಟ್ಟು ಇನ್ನೂ ಹೆಚ್ಚು ಕೊಲೆ ಮಾಡುವಂತೆ ಪ್ರೋತ್ಸಾಹವನ್ನು ಕೊಟ್ಟರು. ಅಲ್ಲದೇ, ಕಳೆದ ವಿಧಾನ ಸಭೆಯಲ್ಲಿ ಈ ವಿಚಾರದಲ್ಲಿ ಗೃಹ ಸಚಿವರಿಗೆ ಪ್ರಶ್ನೆ ಹಾಕಿದಾಗ ಅಧಿಕಾರಿಗಳಿಂದ ಬಂದ ಸತ್ಯಕ್ಕೆ ದೂರವಾದ ಉತ್ತರವನ್ನು ಗೃಹ ಸಚಿವರು ಸದನದಲ್ಲಿ ಓದಿದರು. ಪದ್ಮಲತಾ ಮರ್ಡರ್ ಕೇಸಿನಲ್ಲಿ ಶಾಮೀಲಾದ ಕೊಲೆಗಡುಕರನ್ನು ಪತ್ತೆಹಚ್ಚಲು ಜಗನ್ನಾಥ ರೈ, ಸರ್ಕಲ್ ಇನ್ಸ್‌ಪೆಕ್ಟರ್ ಆಫ್ ಪೋಲಿಸ್ (ಸಿಓಡಿ) ಇವರನ್ನೆ ತನಿಖೆ ಮಾಡಲು ಕಳುಹಿಸಿಕೊಡಬೇಕೆಂದು ಈ ಮೂಲಕ ವಿನಂತಿಸುತ್ತೇನೆ. ಅಲ್ಲದೇ ಕೊಲೆಗಡುಕರಿಗೆ ರಕ್ಷಣೆ ಒದಗಿಸಿ ಕೊಲೆಯನ್ನು ಮರೆ ಮಾಡಲು ಪ್ರಯತ್ನಿಸಿದ ಸಿಓಡಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇನೆ.
ಲಕ್ಷ್ಮೀಸಾಗರ್, ಕಾನೂನು ಸಚಿವರು (ಗೃಹ ಸಚಿವರ ಪರವಾಗಿ): ಮಾನ್ಯ ಅಧ್ಯಕ್ಷರೇ, ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪದ್ಮಲತಾರವರ ಕೊಲೆ ಸಂಬಂಧವಾದ ಬೆಳ್ತಂಗಡಿ ಠಾಣೆಯ ಅಪರಾಧ ಸಂಖ್ಯೆ 17/87 ಐಪಿಸಿ ಕಲಂ 302, 201 ಅಡಿಯಲ್ಲಿ ಮೊಕದ್ದಮೆ ದಾಖಲು ಮಾಡಿಕೊಂಡಿದ್ದು, ಅದನ್ನು ಸಿಓಡಿ ತನಿಖೆಗೆ ವಹಿಸಲಾಯಿತು. ಸಿಓಡಿ ಇನ್ಸ್‌ಸ್ಪೆಕ್ಟರ್ ಆದ ಜಗನ್ನಾಥ ರೈ ಅವರಿಗೆ ಈ ಕೇಸಿನ ತನಿಖೆಯನ್ನು ಒಪ್ಪಿಸಲಾಗಿತ್ತು. ಈ ಬಗ್ಗೆ ಶಾಸಕರಾದ ವಿನಯಕುಮಾರ್ ಸೊರಕೆಯವರು ದಿನಾಂಕ 25 ನೇ ಮಾರ್ಚ್ 1987ರಂದು ಗೃಹ ಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಿ, ಇನ್ಸ್‌ಪೆಕ್ಟರ್ ಜಗನ್ನಾಥ್ ರೈ ಅವರು ಅದೇ ಸ್ಥಳದವರಾಗಿದ್ದು, ಅವರಿಂದಲೇ ತನಿಖೆಯನ್ನು ಮುಂದುವರೆಸುವುದು ಸೂಕ್ಷ್ಮವಲ್ಲವೆಂದು ಮನವಿ ಸಲ್ಲಿಸಿದ್ದರು. ಹಾಗಾಗಿ, ಗೃಹ ಮಂತ್ರಿಯವರು ಪ್ರಕರಣದ ತನಿಖೆಯನ್ನು ಮತ್ತೊಬ್ಬ ಅಧಿಕಾರಿಗೆ ವಹಿಸಲು ಆದೇಶಿಸಿದರು. ಸದರಿ ಆದೇಶದಂತೆ ಸಿಓಡಿ ಡೆಪ್ಯುಟಿ ಪೊಲೀಸ್ ಸೂಪರಿಂಟೆಂಡೆಂಟ್ ಹೆಚ್ ಎಂ ಮರಿಸ್ವಾಮಿ ಅವರಿಗೆ ತನಿಖೆಯನ್ನು ವಹಿಸಲಾಯಿತು. ತನಿಖೆಯಲ್ಲಿ ಅಂತಹ ವ್ಯತ್ಯಾಸವೇನೂ ಕಾಣಲ್ಲ.
ವಿನಯಕುಮಾರ್ ಸೊರಕೆ : ಮಾನ್ಯ ಅಧ್ಯಕ್ಷರೇ,….
(ಹಲವು ಸದಸ್ಯರು ಎದ್ದು ಮಾತನಾಡುತ್ತಿದ್ದರು)
(ಗದ್ದಲ)
ಅಧ್ಯಕ್ಷರು : ಈಗ ದಯವಿಟ್ಟು ತಾವು ಕುಳಿತುಕೊಳ್ಳಬೇಕು. ತಾವು ಹೊಸಬರು, ಮೂರು ವರ್ಷಗಳಾದರೂ ಬೇಕಾಗುತ್ತದೆ. ತಾವು ಇನ್ನೂ ನಿಯಮಗಳನ್ನು ಓದಿಲ್ಲ. ಕುಳಿತುಕೊಳ್ಳಿ. (ಗೊಂದಲ)
ಅಧ್ಯಕ್ಷರು : ನೀವು ಹೀಗೆ ಗಲಾಟೆ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ.
ವಿಧಾನಸಭೆ ಎನ್ನುವುದು ಪ್ರಜಾಪ್ರಭುತ್ವದ ದೇಗುಲ ಅನ್ನಿಸಿಕೊಳ್ಳುವುದು ಇಂತಹ ಚರ್ಚೆಗಳಿಂದಲೇ! ಇಂದು ಆರ್ ಅಶೋಕ್ ಕುಳಿತ ಜಾಗದಲ್ಲಿ ಅಂದು ಬಂಗಾರಪ್ಪನವರು ಕುಳಿತು ಜನರ ಪರವಾಗಿ ಮುಖ್ಯಮಂತ್ರಿಯವರ ಜೊತೆ ಸಂಘರ್ಷ ನಡೆಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಆಸನದಲ್ಲಿ ಅಂದು ಎಸ್ ಆರ್ ಬೊಮ್ಮಾಯಿ ಇದ್ದರು. ಸಚಿವರ ಕುರ್ಚಿಯಲ್ಲಿ ನಜೀರ್ ಸಾಬ್ ಅವರಂತಹ ಮುತ್ಸದ್ದಿ ಇದ್ದರು. ಅಂದಿನ ಸದನದ ಪೈಕಿ ಯಾರೊಬ್ಬರೂ ಈ ಚರ್ಚೆಯನ್ನು ದೇವಸ್ಥಾನ, ದೇವಮಾನವನಿಗೆ ಜೋಡಿಸಿ ಸಮಾಜದಲ್ಲಿ ಗೊಂದಲ ಮೂಡಿಸಲಿಲ್ಲ. ಸರ್ಕಾರವೊಂದು ಧರ್ಮ, ಜಾತಿ, ವರ್ಣಗಳ ಯಾವ ಪ್ರಭಾವಕ್ಕೂ ಒಳಗಾಗದೇ ಸದನ ನಡೆಸಬೇಕಿರುವುದು ಹೀಗೆ ಎಂದು ಇಂದಿನ ಸದನಕ್ಕೆ ‘ಅಸೆಂಬ್ಲಿ ರೆಕಾರ್ಡ್ಸ್’ ಪ್ರತಿಯನ್ನು ಓದಲು ನೀಡಬೇಕಿದೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಮೊಟ್ಟೆಗೆ ವಿರೋಧ; ಬಡ ಮಕ್ಕಳ ಆಹಾರದ ಸ್ವಾತಂತ್ರ್ಯಕ್ಕೆ ಕೊಕ್ಕೆ

ನವೀನ್ ಸೂರಿಂಜೆ
ಪತ್ರಕರ್ತ, ಲೇಖಕ