ಬ್ರಾಹ್ಮಣರು ಶ್ರೇಷ್ಠರು ಎನ್ನುವಾಗ ಶೈವ ಬ್ರಾಹ್ಮಣರಿಗೆ ತಪ್ತ ಮುದ್ರಾಧಾರಣೆ ಯಾಕಿಲ್ಲ? ಈ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಜಾತ್ಯತೀತ ದೇಶದಲ್ಲಿ ಜಾತಿ ಗಣತಿ ಯಾಕೆ ಬೇಕು ಎಂದು ಅರಿವಾಗುತ್ತದೆ. ಉಡುಪಿ ಮಠದಲ್ಲೇ ಎಲ್ಲದಕ್ಕೂ ಉತ್ತರವಿದೆ.
ಜಾತ್ಯತೀತ ದೇಶದಲ್ಲಿ ಜಾತಿ ಜನಗಣತಿ ಯಾಕೆ? ಒಂದೆಡೆ ಜಾತಿ ಬೇಡ ಎನ್ನುವುದು, ಮತ್ತೊಂದೆಡೆ ಎಲ್ಲ ಸೌಲಭ್ಯಗಳನ್ನು ಜಾತಿಯ ಆಧಾರದಲ್ಲಿ ನೀಡುತ್ತಿರುವುದು ವಿಪರ್ಯಾಸ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಬಾಲಿಶ ಹೇಳಿಕೆ ನೀಡಿದ್ದಾರೆ. ಸಂವಿಧಾನ, ಮೀಸಲಾತಿ, ಸಾಮಾಜಿಕ ನ್ಯಾಯ ಎಂಬ ವಿಚಾರಗಳನ್ನು ವಿವರಿಸಿದರೆ ಪೇಜಾವರ ಮಠದವರಿಗೆ ಅರ್ಥವಾಗುವುದಿಲ್ಲ. ಹಾಗಾಗಿ ಅವರದ್ದೇ ಸಮುದಾಯ, ಮಠ ಪರಂಪರೆಯ ಉದಾಹರಣೆ ನೀಡಿ ಹೇಳಬೇಕಾಗುತ್ತದೆ.
ದೇಹದ ಮೇಲೆ ಬಿಸಿ ಮುದ್ರೆಯೊತ್ತುವ (ಸೀಲ್ ಹಾಕುವಂತೆ)ತಪ್ತ ಮುದ್ರಾಧಾರಣೆ ಮಾಡುವ ಸಂಪ್ರದಾಯ ವೈಷ್ಣವ ಮಾಧ್ವರಲ್ಲಿದೆ. ಪ್ರಥಮ ಏಕಾದಶಿಯ ದಿನ ಪ್ರತೀ ವರ್ಷ ಮಾಧ್ವ ಬ್ರಾಹ್ಮಣರು ದೇಹದ ಮೇಲೆ ಮುದ್ರೆ ಹಾಕಿಸಿಕೊಳ್ಳುತ್ತಾರೆ. ಮಧ್ವಾಚಾರ್ಯರ ಕಾಲದಿಂದ ಅಂದರೆ ಸುಮಾರು 800 ವರ್ಷಗಳಿಂದ ಈ ಆಚರಣೆ ಚಾಲ್ತಿಯಲ್ಲಿದೆ. ಮಾಧ್ವರಿಗೆ ಮಾತ್ರ ಮಾಧ್ವಸ್ವಾಮೀಜಿಗಳು ತಪ್ತ ಮುದ್ರಾಧಾರಣೆ ಯಾಕೆ ಮಾಡುತ್ತಾರೆ? ಹವ್ಯಕರು, ಸ್ಥಾನಿಕರು, ಸಂಕೇತಿಗಳು, ಕರಾಡ ಬ್ರಾಹ್ಮಣರಿಗೆ ಯಾಕೆ ಮಾಧ್ವ ಸ್ವಾಮೀಜಿಗಳು ತಪ್ತಮುದ್ರಾಧಾರಣೆ ಮಾಡುವುದಿಲ್ಲ? ಯಾಕೆಂದರೆ ಊಟ ಮತ್ತು ಪೂಜೆಗೆ ಕುಳಿತುಕೊಳ್ಳುವಾಗ ಮಾಧ್ವ ಬ್ರಾಹ್ಮಣರು ಯಾರು ಎಂಬ ಗುರುತಿಗೆ ಈ ತಪ್ತ ಮುದ್ರಾಧಾರಣೆ ಮಾಡುತ್ತಾರೆ! ಮಾಧ್ವ ಬ್ರಾಹ್ಮಣರು ಯಾರು ಎಂಬುದು ಯಾಕೆ ಗೊತ್ತಾಗಬೇಕು? ಹಿಂದೂ ನಾವೆಲ್ಲಾ ಒಂದು ಎನ್ನುವಾಗ ಬ್ರಾಹ್ಮಣರಿಗೆ ಮಾತ್ರ ತಪ್ತ ಮುದ್ರಾಧಾರಣೆ ಯಾಕೆ? ಬ್ರಾಹ್ಮಣರು ಶ್ರೇಷ್ಠರು ಎನ್ನುವಾಗ ಬ್ರಾಹ್ಮಣರಲ್ಲೇ ಸ್ಥಾನಿಕರು, ಸಂಕೇತಿಗಳು, ಕರಾಡರಿಗೆ ಯಾಕೆ ತಪ್ತ ಮುದ್ರಾಧಾರಣೆ ಇಲ್ಲ? ಈ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಜಾತ್ಯತೀತ ದೇಶದಲ್ಲಿ ಜಾತಿ ಜನಗಣತಿ ಯಾಕೆ ಬೇಕು ಎಂಬುದು ತಿಳಿಯುತ್ತದೆ.
ಅದ್ವೈತ ಮತದ ಸ್ಥಾಪಕರಾದ ಶಂಕರಾಚಾರ್ಯರು ಉಡುಪಿಯನ್ನು ಕಟ್ಟಿದರು. ಜೈನ ಬಸದಿಗಳನ್ನು ಶಿವಾಲಯವನ್ನಾಗಿ ಪರಿವರ್ತಿಸಿದರು. ಉಡುಪಿಯ ಚಂದ್ರನಾಥ ಬಸದಿಯು ಚಂದ್ರಮೌಳ್ವೀಶ್ವರ ದೇವಸ್ಥಾನವಾಯಿತು. ನಂತರ ಬಂದ ಮಧ್ವಾಚಾರ್ಯರು ಚಂದ್ರಮೌಳ್ವೀಶ್ವರ ದೇವಸ್ಥಾನವನ್ನು ವಶಪಡಿಸಿ ಶಂಕರಾಚಾರ್ಯರ ಪರಂಪರೆಯ ಸ್ಥಾನಿಕ ಬ್ರಾಹ್ಮಣರನ್ನು ಓಡಿಸಿದರು. ಆದರೆ ಮಾಧ್ವ ಅನುಯಾಯಿಗಳು ಕಡಿಮೆ ಸಂಖ್ಯೆಯಲ್ಲಿ ಇದ್ದುದರಿಂದ ಮಾಧ್ವ ಬ್ರಾಹ್ಮಣರು ಬಂಟ- ಜೈನ, ಮೊಗವೀರರ ಸಹಾಯ ಪಡೆದು ಸ್ಥಾನಿಕ ಬ್ರಾಹ್ಮಣರ ಮೇಲೆ ದಾಳಿ ನಡೆಸಿದರು. ಶಂಕರಾಚಾರ್ಯರ ಕಡೆಯ ಸ್ಥಾನಿಕರು ಮಾಧ್ವರ ಮೇಲೆ ದಾಳಿ ನಡೆಸಲು ಬಿಲ್ಲವರು ಮತ್ತು ದಲಿತರ ಸಹಾಯ ಪಡೆದುಕೊಂಡರು. (ಆಧಾರ: ಉಡುಪಿ ಕ್ಷೇತ್ರದ ಚಾರಿತ್ರಿಕ ಹಿನ್ನಲೆ, ಲೇಖಕರು: ಡಾ ಮ.ಸು ಅಚ್ಯುತ ಶರ್ಮ -1969, ಪುಟ ಸಂಖ್ಯೆ: 16) ಬ್ರಾಹ್ಮಣರ ದ್ವೈತ-ಅದ್ವೈತ ಜಗಳಗಳಿಗೆ ಜೈನ, ಬಂಟ- ಬಿಲ್ಲವ, ದಲಿತರು ಬಳಕೆಯಾದರು. ಅಂದೂ ಇಂದೂ ಕಡಿಮೆ ಸಂಖ್ಯೆಯ ಬ್ರಾಹ್ಮಣರಿಂದ ಬಳಸಲ್ಪಡುತ್ತಿರುವ ಹಿಂದುಳಿದ-ದಲಿತರ ಜನಸಂಖ್ಯೆ ಎಷ್ಟು ಎಂದು ಅರಿಯಲು ಜಾತಿಜನಗಣತಿ ಬೇಕಾಗಿದೆ.

ಮಾಧ್ವರು ಹೊಡೆದಾಟಕ್ಕೆ ಬಂಟರು, ಜೈನರು, ಮೊಗವೀರರ ಸಹಾಯ ಪಡೆದುಕೊಂಡರೆ, ಶಂಕರಾಚಾರ್ಯರ ಕಡೆಯವರು ದಲಿತ ಮತ್ತು ಬಿಲ್ಲವರ ಸಹಾಯ ಪಡೆದುಕೊಂಡರು ಎಂದು ಇತಿಹಾಸ ಹೇಳುತ್ತದೆ. ಯಾಕೆ ದಲಿತರು ಮತ್ತು ಬಿಲ್ಲವರು ಮಾಧ್ವರಿಗೆ ಸಹಾಯ ಮಾಡಲಿಲ್ಲ? ಯಾಕೆಂದರೆ ಮಾಧ್ವರಿಗೆ ದಲಿತರು ಮತ್ತು ಬಿಲ್ಲವರು ಅಸ್ಪೃಶ್ಯರಾಗಿದ್ದರು. ಬಂಟರು, ಜೈನರು, ಮೊಗವೀರರನ್ನು ಮಾಧ್ವರು ಮುಟ್ಟಿಸಿಕೊಳ್ಳದಿದ್ದರೂ ನೋಡಬಹುದಿತ್ತು, ಮಾತನಾಡಬಹುದಿತ್ತು. ಆದರೆ ದಲಿತರು ಮಾಧ್ವರ ಎದುರು ನಡೆಯುವ, ಮಾತನಾಡುವ, ಹಾದು ಹೋಗುವ ಸ್ವಾತಂತ್ರ್ಯವನ್ನೂ ಹೊಂದಿರಲಿಲ್ಲ. ಆತ್ಮ ಮತ್ತು ಪರಮಾತ್ಮ ಒಂದೇ ಎಂದು ಹೇಳುವ ಶಂಕರಾಚಾರ್ಯರಿಗೆ ಬಿಲ್ಲವರು ಮತ್ತು ದಲಿತರು ಸ್ವಲ್ಪ ಹತ್ತಿರವಾಗಿದ್ದರು. ಹೀಗೆ ಹೊಡೆದಾಟದ ಬಳಕೆಗೂ ಮುಟ್ಟಿಸಿಕೊಳ್ಳದ ಸಮುದಾಯಗಳು ಎಷ್ಟಿದೆ ಎಂದು ತಿಳಿಯಲು ಜಾತಿ ಜನಗಣತಿ ಬೇಕಾಗಿದೆ.
ಶಂಕರಾಚಾರ್ಯರ ಸ್ಥಾನಿಕ ಬ್ರಾಹ್ಮಣರಿಗೆ ಬಹುಸಂಖ್ಯಾತ ಬಿಲ್ಲವರು ಮತ್ತು ದಲಿತರ ಸಹಾಯದಿಂದ ಮಾಧ್ವರು ಕಂಗೆಟ್ಟಿದ್ದರು. ಹಾಗಾಗಿ ಬಂಟರು, ಜೈನರು, ಮೊಗವೀರರನ್ನು ಮತಾಂತರಿಸುವ ಕೆಲಸವನ್ನು ಮಾಧ್ವರು ಮಾಡಲಾರಂಭಿಸಿದರು. ಮೊಗವೀರರು ಮೀನು ಹಿಡಿಯುವುದನ್ನೂ, ಬಂಟರು, ಜೈನರು ಕೃಷಿಯನ್ನೂ ಬಿಟ್ಟು ಮಾಧ್ವ ಬ್ರಾಹ್ಮಣರಾದರು. ತಪ್ತ ಮುದ್ರಾಧಾರಣೆಯನ್ನು ಮಾಡುವ ಮೂಲಕ ಮತಾಂತರಿ ಮಾಧ್ವರಿಗೂ ಸ್ಥಾನಿಕ ಸೇರಿದಂತೆ ಇನ್ನುಳಿದ ಬ್ರಾಹ್ಮಣರಿಗೂ ಅಂತರವನ್ನು ಉಂಟು ಮಾಡಿದರು. ಜನಿವಾರ ಎಲ್ಲಾ ಬ್ರಾಹ್ಮಣರೂ ಹಾಕುವುದರಿಂದ ಜನಿವಾರ ಹಾಕಿದ ಬ್ರಾಹ್ಮಣರ ಪೈಕಿ ಮಾಧ್ವರು ಯಾರು ಎಂದು ಗುರುತಿಸಲು ತಪ್ತ ಮುದ್ರಾಧಾರಣೆ ಬಳಕೆಗೆ ಬಂತು. ಈ ರೀತಿ ಮತಾಂತರದಿಂದ ಜನಸಂಖ್ಯೆ ಹೆಚ್ಚಿಸಿಕೊಂಡು ಸ್ಥಾನಿಕರ ದೇವಸ್ಥಾನಗಳನ್ನು, ಅರ್ಚಕ ಉದ್ಯೋಗಗಳನ್ನೂ ಕಸಿದುಕೊಂಡ ಬ್ರಾಹ್ಮಣರ ಸಂಖ್ಯೆ ಎಷ್ಟು ಎಂದು ತಿಳಿಯಲು ಜನಗಣತಿ ಅಗತ್ಯ.
1782ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಆಳುತ್ತಿದ್ದ ಹೈದರಾಲಿಯು ನಿಧನ ಹೊಂದಿದ. ಆ ಬಳಿಕ ಟಿಪ್ಪು ಕರಾವಳಿಯನ್ನು ಆಳುತ್ತಿದ್ದ. ಟಿಪ್ಪುವಿಗೂ ಬ್ರಿಟಿಷರಿಗೂ ಶ್ರೀರಂಗಪಟ್ಟಣದಲ್ಲಿ ಯುದ್ಧವಾದಾಗ ಕರಾವಳಿಯಲ್ಲಿ ರಾಜನಿಲ್ಲದೇ ಅರಾಜಕತೆ ಮೂಡಿತ್ತು. ಸ್ವಾತಂತ್ರ್ಯ ಹೋರಾಟದ ಸಮಯದ ಅರಾಜಕತೆಯನ್ನೇ ಬಳಸಿಕೊಂಡ ಮಾಧ್ವರು ಸ್ಥಾನಿಕರ ಆಡಳಿತದಲ್ಲಿ ಅಳಿದುಳಿದು ಇದ್ದ ಸಣ್ಣಪುಟ್ಟ ದೇವಸ್ಥಾನಗಳನ್ನೂ ವಶಪಡಿಸಿಕೊಂಡರು. (ಆಧಾರ: ಉಡುಪಿ ಕ್ಷೇತ್ರದ ಚಾರಿತ್ರಿಕ ಹಿನ್ನಲೆ, ಲೇಖಕರು: ಡಾ ಮ.ಸು ಅಚ್ಯುತ ಶರ್ಮ -1969, ಪುಟ ಸಂಖ್ಯೆ: 21) ಹಾಗಾಗಿ ಪೇಜಾವರ ಸ್ವಾಮೀಜಿ ಪ್ರತಿನಿಧಿಸುವ ಮಾಧ್ವರು ದೇವಸ್ಥಾನ ಆಡಳಿತ ಹಿಡಿಯುವ ಹಪಾಹಪಿಯಲ್ಲಿದ್ದಾಗ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಮುಸ್ಲಿಮರು ಈಗ ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಯಲು ಜನಗಣತಿ ಅಗತ್ಯವಿದೆ.

ಜಾತ್ಯತೀತ ದೇಶದಲ್ಲಿ ಜನಗಣತಿ ಯಾಕೆ ಬೇಕು ಎನ್ನುವುದು ಇನ್ನೂ ಸರಳವಾಗಿ ಅರ್ಥವಾಗಬೇಕಾದರೆ ಉಡುಪಿಯ ಶ್ರೀಕೃಷ್ಣ ಮಠದ ಊಟದ ವ್ಯವಸ್ಥೆಯನ್ನು ವಿಮರ್ಶಿಸಬೇಕು. ಉಡುಪಿ ಕೃಷ್ಣ ಮಠದಲ್ಲಿ ನಾಲ್ಕು ರೀತಿಯ ಊಟದ ವ್ಯವಸ್ಥೆ ಇದೆ.
- ಚೌಕಿ ಭೋಜನ: ಇದರಲ್ಲಿ ಮಾಧ್ವ ಶ್ರೀಮಂತರಿಗೆ ಮಾತ್ರ ಊಟ ಹಾಕಲಾಗುತ್ತದೆ. ಮಠಕ್ಕೆ ಸಹಾಯಧನ ನೀಡಿದವರಿಗೆ ಸ್ವಾಮೀಜಿಗಳ ಜೊತೆ ಕೂತು ಊಟ ಮಾಡುವ ಸೌಭಾಗ್ಯ ಇರುತ್ತದೆ. ಈ ಊಟ ಪಂಚ ಭಕ್ಷ್ಯ ಪರಮಾನ್ನಗಳಿಂದ ಕೂಡಿರುತ್ತದೆ.
- ಮೃಷ್ಠಾನ್ನ ಭೋಜನ: ಇದು ಮಧ್ಯಮ ತರಗತಿಯದ್ದು. ಹೊರರಾಜ್ಯ, ಜಿಲ್ಲೆಗಳಿಂದ ಬಂದು ಸ್ವಲ್ಪ ಸಹಾಯ ಮಾಡಿದವರಿಗೆ ಈ ಊಟದ ವ್ಯವಸ್ಥೆ. ಇಲ್ಲಿ ಸಾಧಾರಣ ಉತ್ತಮ ಖಾದ್ಯಗಳಿವೆ.
- ಭೂರೀ ಭೋಜನ: ಇದ್ರು ಸರ್ವತ್ರ ಮಠದ ಅನುಯಾಯಿಗಳಿಗೆ ಮಾತ್ರ.
- ಸಾರ್ವಜನಿಕ ಅನ್ನ ಸಂತರ್ಪಣೆ: ಇದು ಶೂದ್ರರ ಊಟದ ವ್ಯವಸ್ಥೆ- ಇಲ್ಲಿ ಅನ್ನ, ಸಾರು, ಮಜ್ಜಿಗೆ ಇದ್ದರೆ ಸಾಕು. ಮೇಲಿನ ಮೂರು ಭೋಜನದಲ್ಲಿ ಉಳಿದ ಖಾದ್ಯಗಳಿದ್ದರೆ ಇಲ್ಲಿ ಬಡಿಸಬಹುದು.
ಉಡುಪಿ ಕೃಷ್ಣ ಮಠದ ಪ್ರಕಾರ ಯಾವ್ಯಾವ ಜನರಿಗೆ ಯಾವ್ಯಾವ ಊಟದ ಪಂಕ್ತಿಯಲ್ಲಿ ಕುಳಿತುಕೊಳ್ಳಲು ಅರ್ಹತೆ ಇದೆ ಎಂದು ಗೊತ್ತಾಗಬೇಕಾದರೆ ಜಾತಿಜನಗಣತಿ ಅಗತ್ಯವಿದೆ. ಈ ದೇಶದ ಜನಸಂಖ್ಯೆಯಲ್ಲಿ ಸ್ವಾಮೀಜಿ ಪಕ್ಕ ಕುಳಿತು ಊಟ ಮಾಡುವ ಧನಿಕರೆಷ್ಟು? ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಕೂರಬೇಕಾಗಿದ್ದ ಬಂಟ ಸಮುದಾಯದ ಮಹಿಳೆ ಬ್ರಾಹ್ಮಣರ ಪಂಕ್ತಿಯಲ್ಲಿ ಕುಳಿತರೆಂದು ಊಟದ ಮಧ್ಯೆ ಎಬ್ಬಿಸಲಾಯಿತು. ಶ್ರೀಮಂತಳೇ ಆಗಿದ್ದರೂ ಬಂಟ ಸಮುದಾಯದ ಮಹಿಳೆ ಯಾಕೆ ಚೌಕಿ ಭೋಜನದಲ್ಲಿ ಊಟ ಮಾಡುವಂತಿಲ್ಲ? ಹಿಂದೂಗಳಾಗಿದ್ದರೂ ಉಡುಪಿ ಮಠದ ಈ ನಾಲ್ಕೂ ಭೋಜನ ವ್ಯವಸ್ಥೆಗೂ ಪ್ರವೇಶ ಇಲ್ಲದ ಜನಸಮುದಾಯಗಳು ಎಷ್ಟಿವೆ ಎಂಬ ಲೆಕ್ಕ ಬೇಕಲ್ಲವೇ ? ಅವರಿಗೆಲ್ಲಾ ಅವರವರ ಮನೆಯಲ್ಲೇ ಸ್ವಾಭಿಮಾನದ ಊಟದ ವ್ಯವಸ್ಥೆ ಆಗಬೇಕಲ್ಲವೇ? ಅದಕ್ಕಾಗಿ ಜಾತ್ಯತೀತ ದೇಶದಲ್ಲಿ ಜನಗಣತಿ ಅಗತ್ಯವಿದೆ.

ನವೀನ್ ಸೂರಿಂಜೆ
ಪತ್ರಕರ್ತ, ಲೇಖಕ
ಉಡುಪಿ ಕ್ಷೇತ್ರದ ಚಾರಿತ್ರಿಕ ಹಿನ್ನೆಲೆ ಪುಸ್ತಕದ ಲಭ್ಯತೆಯ ಬಗೆಗೆ ಸಹಾಯ ಬೇಕಾಗಿದೆ. ಗೊತ್ತಿದ್ದರೆ ದಯವಿಟ್ಟು ಸಹಾಯ ಮಾಡಿ.
ಥ್ಯಾಂಕ್ಸ.
ಸಾರ್ , ನಮ್ಮ ಸಮಾಜ ಬಹುಶಃ ಜಾತಿ ವ್ಯವಸ್ಥೆಯ ಮೇಲೆ ಕಟ್ಟಲ್ಪಟ್ಟಿದೆ(ನಿoತಿದೆ) ಮತ್ತು ಇಡೀ ವಿಶ್ವ ಕ್ಕೆ ಒಂದು ಮಾದರಿ ಮತ್ತು ಅನನ್ಯ ವ್ಯವಸ್ಥೆ. ಮತ್ತು ಸಮಾಜದ ಆರೋಗ್ಯಕರ ಮತ್ತು ಸಮತೋಲನಕ್ಕೆ ಒಳ್ಳೆಯದು. ಹೀಗಿರುವಾಗ ಜಾತಿ ಗಣತಿ ಬೇಡ ಎನ್ನಲಾಗದು. ಜಾತ್ಯಾತೀತ ಎಂದರೆ ಜಾತಿಯನ್ನು ಮೀರಿದ ದೇಶ ನಮ್ಮದು. ಸಾರ್ವಜನಿಕವಾಗಿ ಎಲ್ಲಾ ಜಾತಿಗೂ ಸಮಾನ ಗೌರವವಿದೆ. ಆದರೆ ಖಾಸಗಿಯಾಗಿ ಅವರವರ ಜಾತಿ ಮತ್ತು ಧರ್ಮ ಅವರವರಿಗೆ ಹೆಚ್ಚು.
ಮೇಲ್ಜಾತಿ ಸಂಘರ್ಷ, ಅದೂ ಬ್ರಾಹ್ಮಣರ ನಡುವೆ ! ಇತಿಹಾಸದಲ್ಲಿ ಹುದುಗಿ ಹೋಗಿದ್ದ ಸಂಗತಿಯನ್ನು ಧೈರ್ಯದಿಂದ ಹೊರತಂದ ದಿಟ್ಟ ಪತ್ರಕರ್ತ ನವೀನ್ ಸೂರಿಂಜೆಯವರಿಗೆ ಧನ್ಯವಾದಗಳು.
ಇವತ್ತು ಮೇಲ್ಜಾತಿ ಶ್ರೇಷ್ಠತೆಯ ವ್ಯಸನಿಗಳು ತಮ್ಮ ವಂಶವಾಹಿ ಅಂದರೆ ಡಿಎನ್ಎ ಪರೀಕ್ಷೆ ಮಾಡಿಸಿಕೊಂಡರೆ ತಮ್ಮ ತಳಿ ಯಾವುದೆಂದು ತಿಳಿಯಬಹುದಾಗಿದೆ.
ಹಾಗೆಯೇ, R1a ಎಂಬ ಜೀನ್ , gene, ಅವರು ಡಿಎನ್ಎ ಯಲ್ಲಿ. ಕಂಡುಬಂದಲ್ಲಿ ಅದು ಪಶ್ಚಿಮ ಯುರೇಷಿಯದ ಭಾಗದಿಂದ ಇವರೆಲ್ಲ ವಲಸೆ ಬಂದವರೆಂದು ದೃಢಪಡಿಸುತ್ತದೆ. ಅಲ್ಲದೇ ತಮ್ಮ ತಮ್ಮ ಮೂಲ ಸ್ಥಾನಕ್ಕೆ ಅಂದರೆ ಪಿತೃ ಭೂಮಿಗೆ ಹಿಂದಿರುಗುವ ಆಯ್ಕೆಯನ್ನು ಮುಕ್ತವಾಗಿ ಇರಿಸಿಕೊಳ್ಳಲು ಅಡ್ಡಿಯಿಲ್ಲ. ಅಥವಾ ಮಾತೃಭೂಮಿಯಲ್ಲಿ, ಭಾರತೀಯ ಮುಖ್ಯವಾಹಿನಿಯಲ್ಲಿ ಬೆರೆಯಲು ಏನು ಅಡ್ಡಿಯಾಗಿದೆ? ಸ್ವತಃ ಅಲ್ಪಸಂಖ್ಯಾತರಾಗಿದ್ದೂ ಬಹುಸಂಖ್ಯಾತ ಮೂಲನಿವಾಸಿಗಳನ್ನು ಅಪಮಾನಿಸುವ ಹಿಂದಿರುವ ಜನಾಂಗೀಯ ಶ್ರೇಷ್ಠತೆಯ ಹಿನ್ನೆಲೆಯೇನು?
ಸರ್ ಈ ಲೇಖನವನ್ನು ದಯವಿಟ್ಟು ನನಗೆ ಪಿಡಿಎಫ್ ಮಾಡಿ ಕಳಿಸಿ
Naveen S understanding is incorrect about mudradharane. This can be given to anyone who wishes to have it. This is not for identifying madhwas but to join ourselves in as vaishnavaites. Do not interprete in your own understanding & misguide people.
ಸರಿ, ಜಾತಿ ಗಣತೆಮಾಡಿ ಈ ಎಲ್ಲ ಪದ್ದತಿ ದೂರು ಮಾಡ್ತೀರಾ, ಅಥವಾ ಎಲೆಕ್ಷನ್ ವೋಟ ಬ್ಯಾಂಕಿಗಾಗಿ ಈ ಜಾತಿ ಪದ್ಧತಿ ಒಳ ಜಗಳ ಮುಂದುವರಿಸ್ತೀರಾ. ಇದರಬದಲು ಆಚರಣೆಗೆ ಸಂವಿಧಾನಹೇಳುವಂತೆ ಅವರ ಸ್ವ ಇಚ್ಛೆಗೆ ಬಿಟ್ಟು, ದೇಶಕ್ಕಾಗಿ ಬೇಕಿರುವ ಆರ್ಥಿಕ ಅಭಿವೃದ್ಧಿಗೆ ಶ್ರಮ ವಹಿಸ್ತೀರಾ. ಇಲ್ಲ S ರ್ ಬೊಮ್ಮಾಯಿ, ನಂತರ ಅವನ ಮಗ, ನಂತರ ಮೊಮ್ಮಗ, ಅಥವಾ ದೇವೇಗೌಡ, ಕುಮಾರಸ್ವಾಮಿ ನಿಖಿಲ್ ಹೀಗೆ ಆರಿಸಿ, ನಾವು ಗುಲಾಮರಾಗಿ ನೆಹರು ಮಕ್ಕಳು.. ಹೀಗೇನೆ ಸಂಬಂದವಿಲ್ಲಾ, ಅಂತ ಇದೆ ತರ ಬರ್ಕೋoಡು ಜಾತಿ ಭೇದ ಭಾವ ಉಳಿಸಿಕೊಂಡು ಹೊಟ್ಟೆ ತುಂಬಿಕೊಂಡಿರೋದ!
Article writer is an insane person mis leading people, mudra dharane is open to all, whoever wants they can have. Writer is a prejudiced person quoting some references which is purely written for academic and university purposes like getting Ph.D… However people are fully aware about the hidden agenda of Congress which is to divide Hindu society on caste basis…