ಕಾಶ್ಮೀರಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿಯವರು ಎದ್ದು ನಿಂತಿದ್ದಾರೆ. ಅದರ ಕ್ರೆಡಿಟ್ ತೆಗೆದುಕೊಳ್ಳಲು ಹವಣಿಸುತ್ತಿದ್ದಾರೆ. ತಮ್ಮ 75ನೇ ಜನ್ಮದಿನ ರ್‍ಯಾಲಿಯಲ್ಲಿ, ಮೋದಿ ಅವರು "ಭಯೋತ್ಪಾದಕರು ನಮ್ಮನ್ನು ಕಂಡು ಅಳುತ್ತಿದ್ದಾರೆ" ಎಂದು ಬಣ್ಣಿಸಿದ್ದಾರೆ.
ಜೈಷ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜಹರ್ ಅವರ ಕುಟುಂಬವನ್ನು ಭಾರತೀಯ ಕಾರ್ಯಾಚರಣೆಯಲ್ಲಿ ನಾಶಪಡಿಸಲಾಯಿತು ಎಂದು ಒಪ್ಪಿಕೊಂಡಿರುವ ಜೆಇಎಂ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮೇ ತಿಂಗಳಲ್ಲಿ ನಡೆದ ‘ಆಪರೇಷನ್ ಸಿಂಧೂರ್’ –ಪಾಕಿಸ್ತಾನದ ಉತ್ತರ ಭಾಗದಲ್ಲಿರುವ ಭಯೋತ್ಪಾದಕ ಶಿಬಿರದ ಮೇಲೆ ಭಾರತೀಯ ಸೇನೆ ದಾಳಿ ನಡೆಸಿ ಉಗ್ರರ ಶಿಬಿರಗಳನ್ನು ನಾಶಗೊಳಿಸಿತ್ತು. ಅದನ್ನು ಈಗ ಮಸೂದ್ ಇಲ್ಯಾಸ್ ಕಾಶ್ಮೀರಿ ಒಪ್ಪಿಕೊಂಡಿದ್ದಾನೆ.
ಕುತೂಹಲಕರ ಸಂಗತಿ ಎಂದರೆ, ಕಾಶ್ಮೀರಿಯ ವಿಡಿಯೋ ವೈರಲ್ ಆಗುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿಯವರು ಎದ್ದು ನಿಂತಿದ್ದಾರೆ. ಅದರ ಕ್ರೆಡಿಟ್ ತೆಗೆದುಕೊಳ್ಳಲು ಹವಣಿಸುತ್ತಿದ್ದಾರೆ. ತಮ್ಮ 75ನೇ ಜನ್ಮದಿನ ರ್‍ಯಾಲಿಯಲ್ಲಿ, ಮೋದಿ ಅವರು “ಭಯೋತ್ಪಾದಕರು ನಮ್ಮನ್ನು ಕಂಡು ಅಳುತ್ತಿದ್ದಾರೆ” ಎಂದು ಹೇಳಿ, ಈ ಕಾರ್ಯಾಚರಣೆಯನ್ನು ‘ನವಭಾರತದ ಶಕ್ತಿ’ಯ ಸಂಕೇತವೆಂದು ಬಣ್ಣಿಸಿದ್ದಾರೆ.
ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಭಯೋತ್ಪಾದಕರನ್ನು ಸದೆಬಡಿದಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೂ, ಪ್ರಧಾನಿ ನರೇಂದ್ರ ಮೋದಿ ಈ ಘಟನೆಯ ಬಗ್ಗೆ ತಕ್ಷಣ ಪ್ರತಿಕ್ರಿಯಿಸದೆ, ಗೊತ್ತಿರುವಂತಹ ಮಾಹಿತಿಯನ್ನು ಮರೆಮಾಚಿಕೊಂಡು ಬಂದಿದ್ದಾರೆ. ಕಾರ್ಯಾಚರಣೆಯ ನಂತರದ ದಿನಗಳಲ್ಲಿ, ಸಂಸದೀಯ ಸಭೆಗಳಲ್ಲಿ ಅಥವಾ ಸಾರ್ವಜನಿಕ ಭಾಷಣಗಳಲ್ಲಿ ಇದನ್ನು ಉಲ್ಲೇಖಿಸಿಲ್ಲ. ಅಷ್ಟೇ ಏಕೆ, ಲೋಕಸಭೆಯಲ್ಲೂ ಬಹಿರಂಗಪಡಿಸಲಿಲ್ಲ. ಈಗ ಬಿಹಾರ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವ ಕಾಲದಲ್ಲಿ ಇದ್ದಕ್ಕಿದ್ದಂತೆ ಹೇಳುತ್ತಿರುವುದು ರಾಜಕೀಯ ಹಿತಾಸಕ್ತಿ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಮೋದಿ ಅವರ ಹೇಳಿಕೆಯ ವ್ಯತ್ಯಾಸವನ್ನು ಗಮನಿಸಿದರೆ, ಇದು ಕೇವಲ ಒಂದು ಪ್ರತಿಕ್ರಿಯೆಯಲ್ಲ, ಬದಲಿಗೆ ತಾವೇ ಹುಟ್ಟುಹಾಕಿದ ಕಥೆಯಂತಿದೆ. ಈ ಮಾತುಗಳನ್ನು ಕಾರ್ಯಾಚರಣೆಯಾದ ನಂತರ ತಕ್ಷಣ ಹೇಳಬಹುದಿತ್ತು; ಆದರೆ ತಿಂಗಳುಗಳ ನಂತರ, ಚುನಾವಣಾ ರ್‍ಯಾಲಿಯಲ್ಲಿ ಇದನ್ನು ಬಿಡಿಸುವುದು, ದೇಶಪ್ರೇಮದ ಹೆಸರಿನಲ್ಲಿ ಸ್ವಹಿತಾಸಕ್ತಿಯನ್ನು ಮರೆಮಾಚುವ ಪ್ರಯತ್ನವಾಗಿ ಕಾಣುತ್ತದೆ. ಇದು ಅತಿಶಯೋಕ್ತಿಯ ಒಂದು ಉದಾಹರಣೆ. ದೇಶದ ಜನರಿಗೆ ಧೈರ್ಯ ತುಂಬುವುದು ಸರ್ಕಾರದ ಕರ್ತವ್ಯ; ಆದರೂ, ಅದನ್ನು ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಬಳಸುವುದು, ರಾಷ್ಟ್ರೀಯ ಭಾವನೆಯನ್ನು ವ್ಯಾಪರೀಕರಣಗೊಳಿಸುವುದನ್ನು ಪ್ರಧಾನಿಯವರು ಕಳೆದ ಹತ್ತು ವರ್ಷಗಳಿಂದಲೂ ಮಾಡಿಕೊಂಡು ಬಂದಿದ್ದಾರೆ. ಇದು ಜನತೆಯ ಕಾಳಜಿಯನ್ನು ಹೊರತುಪಡಿಸಿ, ಲಾಭಗಳನ್ನು ಪಡೆದುಕೊಳ್ಳುವ ಅವಕಾಶವಾದಿಗಳ ರೀತಿಯಲ್ಲಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ |ಅಂಧಭಕ್ತರ ಕಿವಿಗೆ ಹೂ ಮುಡಿಸಿದ ಮೋಶಾ ಜೋಡಿ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪಾಕ್ ಯುದ್ಧವನ್ನು ತಾನೇ ನಿಲ್ಲಿಸಿದ್ದೇನೆ ಎಂದು ಮೂವತ್ತು ಬಾರಿ ಹೇಳಿದರೂ, ನಮ್ಮ ಭಾರತದ ಪ್ರಧಾನಿಗಳು ತುಟಿ ಬಿಚ್ಚಿರಲಿಲ್ಲ. ಅದೇ ರೀತಿ, ಸುಂಕ ಏರಿಕೆಯಂತಹ ಆರ್ಥಿಕ ನಿರ್ಧಾರಗಳಲ್ಲಿ ದೇಶದ ಜನರಿಗೆ ಧೈರ್ಯ ತುಂಬಲು ಅವರು ಯಾವುದೇ ಪ್ರಯತ್ನ ಮಾಡಲಿಲ್ಲ. ಇದು ಕೇಸರಿ ಪಕ್ಷದ ರಾಜಕಾರಣದಲ್ಲಿ ಸಾಮಾನ್ಯ ಚಾಲಕಿತನವಾಗಿದೆ. ಒಂದೆರಡು ಯಶಸ್ಸುಗಳನ್ನು ವೈಭವೀಕರಿಸಿ, ನೂರಾರು ವಿಫಲತೆಗಳನ್ನು ಮರೆಮಾಚುವುದನ್ನು ಮೋದಿಯವರು ಕಳೆದ ಹತ್ತು ವರ್ಷಗಳಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಇದು ದೇಶಪ್ರೇಮದ ಸ್ವರೂಪವಲ್ಲ; ಬದಲಿಗೆ, ಚುನಾವಣಾ ಪ್ರಚಾರದಲ್ಲಿ ಮತಗಳನ್ನು ಗಳಿಸುವ ಒಂದು ಉಪಾಯ.
ಮೋದಿಯವರ ಇಂತಹ ಹೇಳಿಕೆಗಳು ಹೊಸದಲ್ಲ. 2019ರ ಬಾಲಕೋಟ್ ಘಟನೆಯ ನಂತರವೂ, ಸರ್ಕಾರವು ಯಶಸ್ಸಿನ ವರದಿಗಳನ್ನು ಚುನಾವಣಾ ಆಯುಧವಾಗಿ ಬಳಸಿತು. ಸರ್ಕಾರದ ನಿಧಾನದ ಪ್ರತಿಕ್ರಿಯೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಏಕೆ ಈ ಮಾಹಿತಿಯನ್ನು ತಕ್ಷಣ ಬಹಿರಂಗಪಡಿಸಲಿಲ್ಲ? ಈಗೇಕೆ, ಚುನಾವಣಾ ಕಾಲದಲ್ಲಿ ಮಾತ್ರ ಇದು ‘ವಿಜಯ ಕಥನ’ವಾಗಿ ರೂಪುಗೊಂಡಿದೆ? ಇದು ದೇಶದ ಜನರಿಗೆ ನೀಡುವ ಸಂದೇಶವಲ್ಲ, ಬದಲಿಗೆ ಒಂದು ಪಕ್ಷದ ರಾಜಕೀಯದ ಸಂದೇಶ. ಭಯೋತ್ಪಾದನೆಯ ವಿರುದ್ಧ ಹೋರಾಟವು ನಿರಂತರವಾಗಿರಬೇಕು; ಅದನ್ನು ಚುನಾವಣಾ ಆಸರೆಗೆ ಬಳಸುವುದು, ರಾಷ್ಟ್ರೀಯ ಐಕ್ಯತೆಗೆ ದುರ್ಬಳಕೆ ಮಾಡುವಂತಹದ್ದನ್ನು ಮಾಡಲಾಗುತ್ತಿದೆ. ಜನತೆಯು ಇಂತಹ ಮಾತುಗಳಲ್ಲಿ ಧೈರ್ಯ ಹುಡುಕುವುದಕ್ಕಿಂತ, ಸರ್ಕಾರದಿಂದ ನಿಜವಾದ ಭದ್ರತಾ ಖಾತರಿಯನ್ನು ನಿರೀಕ್ಷಿಸುತ್ತದೆ.
ರಾಜಕೀಯದಲ್ಲಿ ಅವಕಾಶವಾದಿತನ ಹೊಸದೇನೂ ಅಲ್ಲ. ಆದರೆ ರಾಷ್ಟ್ರರಕ್ಷಣೆಯ ವಿಚಾರದಲ್ಲಿ ನೈತಿಕ ಹೊಣೆಗಾರಿಕೆ ಮುಖ್ಯ. ಜನತೆಗೆ ಭಯೋತ್ಪಾದನೆಯ ವಿರುದ್ಧ ಸೈನಿಕರು ಮಾಡಿದ ಬಲಿದಾನವನ್ನು ತಲುಪಿಸುವಲ್ಲಿ ಸರಳತೆ ಮತ್ತು ಗೌರವ ಇರಬೇಕು. ಆದರೆ ಅದನ್ನು ರಾಜಕೀಯ ಭಾಷಣದಲ್ಲಿ ಅತಿಶಯೋಕ್ತಿಯಾಗಿ ಬಳಸುವುದರಿಂದ ದೇಶಪ್ರೇಮದ ಅರ್ಥವೇ ಕುಂದುತ್ತದೆ. ಒಂದು ಘಟನೆ ನಡೆದ ತಕ್ಷಣವೇ ನಾಯಕತ್ವದ ಹೊಣೆ ಹೊತ್ತು ಜನತೆಗೆ ಸ್ಪಷ್ಟ ಸಂದೇಶ ನೀಡಿದರೆ ಜನರಿಗೆ ವಿಶ್ವಾಸ ಹುಟ್ಟುತ್ತದೆ. ಆದರೆ ಬಹಳ ದಿನಗಳ ನಂತರ ಬಡಾಯಿ ಹೊಡೆದರೆ ಅದು ಸ್ವಹಿತಾಸಕ್ತಿಯಂತೆ ತೋರುತ್ತದೆ.
ಪ್ರಧಾನಿ ಹಾಗೂ ಬಿಜೆಪಿ ಪಕ್ಷವನ್ನು ನಿತ್ಯ ಓಲೈಸುವ ಮಾಧ್ಯಮಗಳು ಕೂಡ ಮುಖವಾಣಿಗಳಾಗುತ್ತಿವೆಯೆ ವಿನಾ ಕನಿಷ್ಠ ಮಾಧ್ಯಮಗಳು ನಿರ್ವಹಿಸುವ ಕರ್ತವ್ಯವನ್ನು ಮಾಡುತ್ತಿಲ್ಲ. ಭಾರತದ ಮುಖ್ಯವಾಹಿನಿ ಮಾಧ್ಯಮಗಳು, ವಿಶೇಷವಾಗಿ ಟಿವಿ ಚಾನಲ್‌ಗಳು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ದಿನನಿತ್ಯ ಓಲೈಸುವುದರಿಂದಾಗಿ ಸ್ವತಂತ್ರ ಸುದ್ದಿ ಸಂಸ್ಥೆಯಿಂದ ಮುಖವಾಣಿಗಳಾಗಿ ಮಾರ್ಪಡುತ್ತಿವೆ. “ಗೊಧಿ ಮಾಧ್ಯಮ” ಎಂದು ಕರೆಯಲ್ಪಡುವ ಇವುಗಳು, ತಪ್ಪು ಮಾಹಿತಿಯ ಮೂಲಕ ದೇಶೀಯ ಐಕ್ಯವನ್ನು ದುರ್ಬಳಕೆ ಮಾಡುತ್ತವೆ. ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಕೇಳುವುದನ್ನು ಬಿಟ್ಟು, ಪ್ರಚಾರದ ಉಪಕರಣವಾಗಿ ಬದಲಾವಣೆಯಾಗಿವೆ. ಇದು ಪತ್ರಕರ್ತರ ಕರ್ತವ್ಯವನ್ನು ಹಾಗೂ ಸತ್ಯ, ನಿಷ್ಪಕ್ಷಪಾತತೆಯನ್ನು ಹಾನಿಗೊಳಿಸುತ್ತದೆ. ಜನತೆಗೆ ನಿಜವಾದ ಮಾಹಿತಿ ನೀಡದೆ, ರಾಜಕೀಯ ಹಿತಾಸಕ್ತಿಗೆ ಸೇವೆ ಸಲ್ಲಿಸುವುದು ಮಾಧ್ಯಮಗಳ ಸೋಗಲಾಡಿತನವಾಗಿದೆ.
ಆಪರೇಷನ್ ಸಿಧೂರ್ ನಂತರ ಕಂಡುಬಂದ ಮಾತುಗಳು ಜನರಿಗೆ ಉತ್ಸಾಹ ಕೊಟ್ಟರೂ ಅದರೊಳಗೆ ರಾಜಕೀಯದ ನಂಟು ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ದೇಶಪ್ರೇಮವು ಸೈನಿಕರ ಶೌರ್ಯವನ್ನು ಗೌರವಿಸುವಲ್ಲಿ, ಅವರ ತ್ಯಾಗವನ್ನು ಸ್ಮರಿಸುವಲ್ಲಿ ಮತ್ತು ಜನತೆಗೆ ನಿಜವಾದ ಭದ್ರತೆಯನ್ನು ಒದಗಿಸುವಲ್ಲಿ ಅಡಕವಾಗಿದೆ. ಬಡಾಯಿ ಹೊಡೆಯುವ ಮಾತುಗಳಲ್ಲಿ ಅಲ್ಲ. ಸತ್ಯ ದೇಶಪ್ರೇಮವೆಂದರೆ ಕಷ್ಟಕಾಲದಲ್ಲಿ ಜನರೊಂದಿಗೆ ನಿಂತು, ಅಹಿತಕರ ಸನ್ನಿವೇಶಗಳಲ್ಲಿ ಧೈರ್ಯ ತುಂಬುವುದು. ದೇಶಪ್ರೇಮವು ಕೇವಲ ಮಾತುಗಳಿಗೆ ಸೀಮಿತವಾಗಿರಬಾರದು; ಅದು ಕ್ರಿಯೆಗಳಲ್ಲಿ ಪ್ರತಿಫಲಿಸಬೇಕು. ಮೋದಿ ಅವರ ಹೇಳಿಕೆಯು ಭಯೋತ್ಪಾದಕರನ್ನು ಭಯಭೀತರನ್ನಾಗಿ ಮಾಡಿದರೂ, ಅದರ ಹಿಂದಿನ ರಾಜಕೀಯ ಉದ್ದೇಶಗಳು ಜನರಲ್ಲಿ ಅನುಮಾನಗಳನ್ನು ಉಂಟುಮಾಡುತ್ತವೆ. ಟ್ರಂಪ್‌ರಂತಹ ನಾಯಕರಂತೆಯೇ, ಇದು ಸ್ವಹಿತಾಸಕ್ತಿಯ ಒಂದು ರೂಪ; ದೇಶದ ಭವಿಷ್ಯಕ್ಕಾಗಿ ಹೋರಾಡುವುದಕ್ಕಿಂತ, ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಮಾತ್ರ ಮೋದಿಯವರು ಮಾತನಾಡಿದ್ದಾರೆ. ಜನತೆಯು ಇಂತಹ ನಾಟಕಗಳಿಗೆ ಖಂಡಿತಾ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ.