ತುರ್ತುಪರಿಸ್ಥಿತಿಯ ಭೂಕಂಪಕ್ಕೆ ಕಾರಣವಾದ ಆ ನಿಷ್ಠುರ ತೀರ್ಪು!

Date:

Advertisements
ತೀರ್ಪು ಹೊರಬಿದ್ದ ದಿನದಿಂದ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿರುವ ಕಾರಣ ಪ್ರಧಾನಮಂತ್ರಿ ಹುದ್ದೆಯನ್ನು ತ್ಯಜಿಸುವಂತೆ ಇಂದಿರಾ ಅವರಿಗೆ ನಿರ್ದೇಶನ ನೀಡಲಾಗಿರುತ್ತದೆ. ಹೊಸ ಪ್ರಧಾನಿಯ ನೇಮಕಕ್ಕೆ 20 ದಿನಗಳ ಗಡುವು ವಿಧಿಸಿರುತ್ತದೆ.

ತಾರೀಖು 1975ರ ಜೂನ್ 12. ಸ್ಥಳ ಅಲಹಾಬಾದ್ ಹೈಕೋರ್ಟು. ನ್ಯಾಯಮೂರ್ತಿ ಜೆ.ಎಲ್.ಸಿನ್ಹಾ ದೇಶದ ರಾಜಕೀಯ ಭೂಕಂಪ ಉಂಟು ಮಾಡುವ ತೀರ್ಪು ನೀಡುತ್ತಾರೆ. ತಮ್ಮ ಈ ತೀರ್ಪು ದೇಶದ ಮೇಲೆ 21 ತಿಂಗಳ ಕರಾಳ ತುರ್ತುಪರಿಸ್ಥಿತಿಯನ್ನು ಹೇರಲು ದಾರಿಯಾಗಲಿದೆ ಎಂಬುದನ್ನು ನ್ಯಾ. ಸಿನ್ಹಾ ಊಹಿಸಿರಲಾರರು.

ತುರ್ತುಪರಿಸ್ಥಿತಿಗೆ 50 ವರ್ಷಗಳು ತುಂಬಿರುವ ಸಂದರ್ಭದಲ್ಲಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪ್ರಕಟಿಸುತ್ತಿರುವ ಸರಣಿಯಡಿ ಶ್ಯಾಮಲಾಲ್ ಯಾದವ್ ‘ಕೋರ್ಟ್ ರೂಮ್ ನಂಬರ್ 24ರ ಪ್ರತಿಧ್ವನಿಗಳು…’ ವರದಿಯಲ್ಲಿ ಈ ಸಂಗತಿಗಳನ್ನು ನೆನಪಿಸಲಾಗಿದೆ.

ದೇಶದ ಜನತೆಯ ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿ ಇರಿಸಿ, ಭಿನ್ನಮತವನ್ನು ದೇಶಾದ್ಯಂತ ದಮನ ಮಾಡಲಾಗುತ್ತದೆಂದು ಯಾರೂ ಕಲ್ಪಿಸಿಕೊಂಡಿರಲು ಸಾಧ್ಯವಿಲ್ಲ. ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ತಮ್ಮ ಗದ್ದುಗೆ ಉಳಿಸಿಕೊಳ್ಳಲು ದೇಶವನ್ನು ತಳಮಳಕ್ಕೆ ತಳ್ಳುತ್ತಾರೆ.

Advertisements

ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಚುನಾವಣಾ ಗೆಲುವನ್ನು ಅಕ್ರಮವೆಂದು ಸಾರಿ ಅಸಿಂಧುಗೊಳಿಸಲಾಗುತ್ತದೆ. ಸ್ವತಂತ್ರ ಭಾರತದಲ್ಲಿ ಪ್ರಧಾನಮಂತ್ರಿಯೊಬ್ಬರ ಚುನಾವಣಾ ಗೆಲುವನ್ನು ನ್ಯಾಯಾಲಯ ರದ್ದುಗೊಳಿಸಿದ್ದು ಅದೇ ಮೊದಲು. ಪ್ರಧಾನಮಂತ್ರಿಯೊಬ್ಬರು ಸತತ ಎರಡು ದಿನಗಳ ಕಾಲ ಕಟಕಟೆ ಹತ್ತಿ ಪಾಟೀಸವಾಲಿಗೆ ಗುರಿಯಾಗಿದ್ದೂ ಅದೇ ಪ್ರಥಮ.

ಚುನಾವಣೆಗಳಲ್ಲಿ ಭ್ರಷ್ಟ ವಿಧಾನಗಳನ್ನು ಅನುಸರಿಸಿದ್ದೇ ಅಲ್ಲದೆ ಆಡಳಿತ ಯಂತ್ರದ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ರಾಜನಾರಾಯಣ್ ಅವರ ಆರೋಪಗಳನ್ನು ನ್ಯಾಯಾಲಯದ ನ್ಯಾಯಮೂರ್ತಿ ಸಿನ್ಹಾ ಎತ್ತಿ ಹಿಡಿದಿರುತ್ತಾರೆ.

ಲೋಕಸಭಾ ಚುನಾವಣೆಗಳಿಗೆ ನಿಗದಿಪಡಿಸಲಾಗಿದ್ದ 35 ಸಾವಿರ ರುಪಾಯಿಗಿಂತಲೂ ಹೆಚ್ಚು ವೆಚ್ಚವನ್ನು ಇಂದಿರಾ ಮಾಡಿದ್ದಾರೆ. ಮತದಾರರಿಗೆ ಮದ್ಯ ಮತ್ತು ಕಂಬಳಿಗಳನ್ನು ಹಂಚಿದ್ದಾರೆ. ತಮ್ಮ ಚುನಾವಣಾ ಪ್ರಚಾರಕ್ಕೆ ಸರ್ಕಾರಿ ವಾಹನಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದೂ ರಾಜನಾರಾಯಣ್ ಆಪಾದಿಸಿದ್ದರು. 1971ರ ಪ್ರಜಾಪ್ರಾತಿನಿಧ್ಯ ಕಾಯಿದೆಯ 123(7) ಸೆಕ್ಷನ್ ಪ್ರಕಾರ ಇಂದಿರಾ ಆಯ್ಕೆಯನ್ನು ನ್ಯಾಯಾಲಯ ರದ್ದುಗೊಳಿಸುತ್ತದೆ.

ತೀರ್ಪು ಹೊರಬಿದ್ದ ದಿನದಿಂದ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿರುವ ಕಾರಣ ಪ್ರಧಾನಮಂತ್ರಿ ಹುದ್ದೆಯನ್ನು ತ್ಯಜಿಸುವಂತೆ ಇಂದಿರಾ ಅವರಿಗೆ ನಿರ್ದೇಶನ ನೀಡಲಾಗಿರುತ್ತದೆ. ಹೊಸ ಪ್ರಧಾನಿಯ ನೇಮಕಕ್ಕೆ 20 ದಿನಗಳ ಗಡುವು ವಿಧಿಸಿರುತ್ತದೆ.

ತೀರ್ಪಿಗೆ ಮುನ್ನ ವಿಚಾರಣೆಯ ಸಂದರ್ಭದಲ್ಲಿ ಸತತ ಎರಡು ದಿನಗಳ ಕಾಲ ಇದೇ ನ್ಯಾಯಾಲಯದಲ್ಲಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರನ್ನು ಪಾಟೀಸವಾಲಿಗೆ ಗುರಿ ಮಾಡಲಾಗಿರುತ್ತದೆ. ಹಾಲಿ ಪ್ರಧಾನಿಯೊಬ್ಬರು ಕಟಕಟೆ ಹತ್ತಿ ಪಾಟೀಸವಾಲಿಗೆ ಗುರಿಯಾಗಿದ್ದ ಮೊದಲ ಪ್ರಕರಣವಿದು.

ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಇಂದಿರಾಗಾಂಧಿ ಸುಪ್ರೀಮ್ ಕೋರ್ಟ್ ಬಾಗಿಲು ಬಡಿಯುತ್ತಾರೆ. ತಾತ್ಕಾಲಿಕ ತಡೆಯಾಜ್ಞೆ ದೊರೆಯುತ್ತದೆ. ಸಂಸತ್ತಿನ ಅಧಿವೇಶನಕ್ಕೆ ಹಾಜರಾಗಲು ಅನುಮತಿ ನೀಡಲಾಗಿರುತ್ತದೆ. ಆದರೆ, ಸದನಗಳಲ್ಲಿ ನಡೆಯುವ ಚರ್ಚೆಗಳು ಮತ್ತು ಮತದಾನದಲ್ಲಿ ಭಾಗವಹಿಸಕೂಡದು ಎಂದು ನಿರ್ಬಂಧ ವಿಧಿಸಲಾಗಿರುತ್ತದೆ. ಅದೇ ಅಧಿವೇಶನದಲ್ಲೇ ಆಂತರಿಕ ಕ್ಷೋಭೆಯ ಹೆಸರಿನಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಲಾಗುತ್ತದೆ. ಸಂವಿಧಾನಕ್ಕೆ 39ನೆಯ ತಿದ್ದುಪಡಿ ತರಲಾಗುತ್ತದೆ. ತಿದ್ದುಪಡಿಯಾದ 329ಎ ಕಲಮಿನ ಪ್ರಕಾರ ಪ್ರಧಾನಮಂತ್ರಿ ಮತ್ತು ಸ್ಪೀಕರ್ ಅವರ ಚುನಾವಣಾ ಗೆಲುವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಇಂದಿರಾ ಆಯ್ಕೆ ಕುರಿತ ಕೇಸಿನ ವಿಚಾರಣೆಯ ಅಧಿಕಾರವನ್ನು ಸುಪ್ರೀಮ್ ಕೋರ್ಟಿನಿಂದಲೂ ಈ ತಿದ್ದುಪಡಿ ಕಿತ್ತುಕೊಂಡಿರುತ್ತದೆ.

ಪ್ರಧಾನಿ ಇಂದಿರಾಗಾಂಧಿ 1975ರ ಮಾರ್ಚ್ 18 ಮತ್ತು 19ರಂದು ಪಾಟೀಸವಾಲು ಎದುರಿಸುತ್ತಾರೆ. ಹೀಗಾಗಿ, ಅವರ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು ಅಲಹಾಬಾದ್ ಹೈಕೋರ್ಟಿನ ಎರಡನೆಯ ಅಂತಸ್ತಿನ ಮೂಲೆಯಲ್ಲಿದ್ದ 24ನೆಯ ಕೋರ್ಟ್ ರೂಮನ್ನು ಆರಿಸಲಾಗಿರುತ್ತದೆ.

ಅಂದಿನ ಯೋಜನಾ ಆಯೋಗದ ಉಪಾಧ್ಯಕ್ಷ ಪಿ.ಎನ್ ಹಕ್ಸರ್ ಅವರು ಇಂದಿರಾ ಪರವಾಗಿಯೂ, ಅಂದಿನ ಭಾರತೀಯ ಜನಸಂಘದ ಅಧ್ಯಕ್ಷ ಎಲ್.ಕೆ ಅಡ್ವಾಣಿ, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಕಾಂಗ್ರೆಸ್ (ಓ) ಅಧ್ಯಕ್ಷ ಎಸ್ ನಿಜಲಿಂಗಪ್ಪ ಅವರಂತಹ ಘಟಾನುಘಟಿಗಳು ಇಂದಿರಾ ವಿರುದ್ಧ ಇದೇ ಕೋರ್ಟಿನಲ್ಲಿ ಸಾಕ್ಷ್ಯ ನುಡಿದಿರುತ್ತಾರೆ.

ಶಾಂತಿಭೂಷಣ್ ಅವರು ರಾಜನಾರಾಯಣ್ ಪರವಾಗಿ, ಎಸ್.ಸಿ ಖರೆ ಅವರು ಇಂದಿರಾ ಪರವಾಗಿಯೂ ವಾದ ಮಂಡಿಸಿರುತ್ತಾರೆ.

ಪ್ರತಿಪಕ್ಷದ ಘಟಾನುಘಟಿಗಳಾದ ಮಧು ಲಿಮಯೆ, ಎಸ್.ಎನ್ ಮಿಶ್ರ, ರಬಿ ರೇ, ಇಂದಿರಾ ಅವರ ಮಗ ರಾಜೀವ್ ಗಾಂಧಿ, ಸೊಸೆ ಸೋನಿಯಾಗಾಂಧಿ ಕೋರ್ಟ್ ರೂಮಿನಲ್ಲಿ ಆಸೀನರಾಗಿರುತ್ತಾರೆ.

ಸಾಕ್ಷ್ಯ ನುಡಿಯುವವರು ಮತ್ತು ಪಾಟೀಸವಾಲಿಗೆ ಗುರಿಯಾಗುವವರು ಸಾಮಾನ್ಯ ಕಟಕಟೆಯಲ್ಲಿ ನಿಲ್ಲುವುದು ಪದ್ಧತಿ. ಆದರೆ ಇಂದಿರಾ ಅವರಿಗೆ ಕುರ್ಚಿಯೊಂದನ್ನು ಹಾಕಲಾಗಿರುತ್ತದೆ. ನ್ಯಾಯಮೂರ್ತಿಯವರ ಆಸನದ ವೇದಿಕೆಯಷ್ಟೇ ಎತ್ತರದ ಮತ್ತೊಂದು ವೇದಿಕೆಯ ಮೇಲೆ ಈ ಕುರ್ಚಿಯನ್ನು ಇಡಲಾಗಿರುತ್ತದೆ.

ಇಂದಿರಾ ಅವರ ಪಾಟೀಸವಾಲಿನ ನಂತರ ವಾದ ಪ್ರತಿವಾದ ಮಂಡನೆ ಮುಗಿದು ತೀರ್ಪನ್ನು ಕಾಯ್ದಿರಿಸಲಾಗಿರುತ್ತದೆ. 1975ರ ಮೇ 23ರಿಂದ ನ್ಯಾಯಾಲಯಕ್ಕೆ ಬೇಸಿಗೆ ರಜೆ. ಅಂದಿನ ದಿನಗಳಲ್ಲಿ ನ್ಯಾಯಮೂರ್ತಿ ಸಿನ್ಹಾ ಅವರ ಮೇಲೆ ಹೇರಲಾದ ಹಲವು ಬಗೆಯ ಒತ್ತಡಗಳನ್ನು ಪ್ರಶಾಂತ್ ಭೂಷಣ್ ಅವರು ‘ದಿ ಕೇಸ್ ದಟ್ ಶುಕ್ ಇಂಡಿಯಾ: ದಿ ವರ್ಡಿಕ್ಟ್ ದಟ್ ಲೆಡ್ ಟು ಎಮರ್ಜೆನ್ಸಿ’ ಪುಸ್ತಕದಲ್ಲಿ ವಿವರಿಸಿದ್ದಾರೆ.

ಈ ವರದಿ ಓದಿದ್ದೀರಾ?; ಬಿಹಾರ, ಬಂಗಾಳ ಚುನಾವಣೆಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದ ರಾಹುಲ್ ‘ಮ್ಯಾಚ್ ಫಿಕ್ಸಿಂಗ್’ ದಾಳಿ

ನ್ಯಾಯಮೂರ್ತಿ ಸಿನ್ಹಾ ಅವರು ಬರೆಯಲಿದ್ದ ತೀರ್ಪಿನ ಅಂಶಗಳನ್ನು ಮುಂದಾಗಿಯೇ ತಿಳಿದುಕೊಳ್ಳಲು ಸಿಐಡಿ ತಂಡವೊಂದನ್ನು ರಚಿಸಲಾಗಿರುತ್ತದೆ. ಸಿನ್ಙಾ ಅವರ ಶೀಘ್ರಲಿಪಿಕಾರ ಮನ್ನಾ ಲಾಲ್ ಮನೆಗೆ ಎರಡು ಸಲ ಹೋಗಿರುತ್ತಾರೆ ಸಿಐಡಿ ಪೊಲೀಸರು.

ಮುಂದಿನ ಮೂರು ವಾರಗಳ ಕಾಲ ನ್ಯಾಯಮೂರ್ತಿ ಸಿನ್ಹಾ ತಮ್ಮ ಮನೆಯಲ್ಲೇ ಇದ್ದುಕೊಂಡು, ತಮ್ಮ ಸೋದರನನ್ನು ನೋಡಲು ಉಜ್ಜಯಿನಿಗೆ ಹೋಗಿರುವುದಾಗಿ ಫೋನ್ ಮಾಡಿದವರಿಗೆ ಮತ್ತು ಭೇಟಿಯಾಗಲು ಬಂದವರಿಗೆ ಹೇಳಿಸಿರುತ್ತಾರೆ. ಅಂದಿನ ದಿನಗಳಲ್ಲಿ ಬೈಗುಳಗಳ ದೂರವಾಣಿ ಕರೆಗಳು ಬರುತ್ತಿದ್ದು, ಅವುಗಳನ್ನು ಸ್ವೀಕರಿಸಲು ತಂದೆಯವರಿಗೆ ಬಿಡಲಿಲ್ಲ ಎಂದು ನ್ಯಾಯಮೂರ್ತಿಯವರ ಮಗ ವಿಪಿನ್ ಸಿನ್ಹಾ ನೆನೆದಿದ್ದಾರೆ.

ನ್ಯಾಯಮೂರ್ತಿ ಸಿನ್ಹಾ ಈ ಕೇಸಿನ ಕುರಿತು ಎರಡು ತೀರ್ಪುಗಳನ್ನು ಸಿದ್ಧಪಡಿಸಿರುತ್ತಾರೆ. ಒಂದನೆಯದು ರಾಜನಾರಾಯಣ್ ಅವರ ಅರ್ಜಿಯನ್ನು ಎತ್ತಿಹಿಡಿಯುವುದು ಮತ್ತು ಎರಡನೆಯದು ರಾಜನಾರಾಯಣ್ ಅರ್ಜಿಯನ್ನು ವಜಾ ಮಾಡುವುದು. ಅವರ ತೀರ್ಪಿನಲ್ಲಿ ಏನಿದೆಯೆಂದು ಮುಂದಾಗಿಯೇ ತಿಳಿಯಲು ಬಯಸಿದ್ದವರನ್ನು ದಾರಿ ತಪ್ಪಿಸಲು ಹೀಗೆ ಮಾಡಿರುತ್ತಾರೆ. ತೀರ್ಪು ನೀಡುವ ದಿನದಂದು ನ್ಯಾಯಾಲಯದಲ್ಲಿ ರಾಜನಾರಾಯಣ್ ಅರ್ಜಿಯನ್ನ ಎತ್ತಿ ಹಿಡಿಯುವ ತೀರ್ಪನ್ನೇ ಓದುತ್ತಾರೆ ಎಂದು ಅವರ ಕುಟುಂಬದ ಸ್ನೇಹಿತ ಸ್ವರೂಪ್ ಚತುರ್ವೇದಿ ಹೇಳಿದ್ದುಂಟು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X