‘ಕಂಡವರ ಮಕ್ಕಳನ್ನು ಬಾವಿಗಿಳಿಸಿ ಆಳ ನೋಡುವ’ ರಾಜಕಾರಣಿಗಳು, ಅದರಲ್ಲೂ ಬಿಜೆಪಿ ಮತ್ತು ಆರ್ಎಸ್ಎಸ್ನವರು ತಮ್ಮ ಮಕ್ಕಳ ವಿಷಯ ಬಂದಾಗ ಹೇಗೆ ಹುಷಾರಾಗುತ್ತಾರೆ ಎನ್ನುವುದಕ್ಕೆ ಈಗ ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಉತ್ತಮ ಉದಾಹರಣೆಯಾಗಿ ನಮ್ಮ ಮುಂದಿದ್ದಾರೆ.
ಅನಂತಕುಮಾರ್ ಹೆಗಡೆ ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಅಂತ ಹೇಳಿಕೆ ಕೊಟ್ಟಿದ್ರು. ಅದಕ್ಕಿಂತನೂ ಮುಖ್ಯವಾಗಿ, ಉತ್ತರ ಕನ್ನಡದಲ್ಲಿ ಕೋಮು ದ್ವೇಷಗಳನ್ನು ಹರಡುವ ಭಾಷಣಗಳಿಗಾಗಿಯೇ ಕುಖ್ಯಾತರಾಗಿದ್ದರು ಈ ಮಾಜಿ ಸಂಸದ ಅನಂತಕುಮಾರ್ ಹೆಗಡೆ. ಇಡೀ ತಮ್ಮ ರಾಜಕೀಯ ಜೀವನ ಅವಧಿಯಲ್ಲಿ ಮಾಡಿದ ಅತಿ ದೊಡ್ಡ ಸಾಧನೆಯೆಂದರೆ, ಕೋಮುಗಲಭೆಗಳ ಕಿಡಿ ಹಚ್ಚಿ ನೂರಾರು ಅಮಾಯಕ ಹಿಂದೂ ಯುವಕರ ಬದುಕನ್ನು ಸರ್ವ ನಾಶ ಮಾಡಿರುವುದೇ ಆಗಿದೆ. ಅನೇಕ ವರ್ಷಗಳಿಂದ ಬೇಡಿಕೆ ಇರುವ ಉತ್ತರ ಕನ್ನಡಕ್ಕೆ ಒಂದು ಆಸ್ಪತ್ರೆ ಬೇಕು ಎನ್ನುವ ಬಗ್ಗೆ ಸ್ವಲ್ಪವೂ ಗಮನ ಕೊಡದೆ, ಅಭಿವೃದ್ಧಿ ಬಗ್ಗೆ ಮಾತನಾಡಿದವರಿಗೆ ಬೆದರಿಕೆ ಹಾಕಿ, ಅಮಾಯಕ ಯುವಕರಿಗೆ ತಮ್ಮ ಮಾತುಗಳಿಂದ ಪ್ರಚೋದನೆ ಮಾಡುವುದೇ ಆಗಿದೆ. ಅದರಲ್ಲೂ ಹಿಂದುತ್ವವನ್ನು ತಲೆಗೇರಿಸಿಕೊಂಡು ಬೀದಿಯಲ್ಲಿ ಗಲಾಟೆ, ದೊಂಬಿ ಎಬ್ಬಿಸಿ ಮೈತುಂಬಾ ಕೇಸ್ಗಳನ್ನು ಜಡಿದುಕೊಂಡು ತಮ್ಮ ಭವಿಷ್ಯವನ್ನು ತಾವೇ ಕೊಂದು ಕೊಂಡ ಅನೇಕ ಯುವಕರಿಗೆ ಈ ಅನಂತಕುಮಾರ್ ಹೆಗಡೆ ನೇರವಾಗಿ ಪ್ರಚೋದನೆ ಮಾಡಿದ್ದಾರೆ.
ಹೀಗಿರುವಾಗ ಇದೇ ಹೊತ್ತಿಗೆ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಇತ್ತೀಚೆಗೆ ಹೈಕೋರ್ಟ್ಗೆ ಮನವಿಯೊಂದನ್ನು ಮಾಡಿದ್ದಾರೆ. ಅದು ರಾಜ್ಯದಲ್ಲಿ ವಿಶೇಷವಾಗಿ ಉತ್ತರ ಕನ್ನಡದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಅದೇನೆಂದರೆ, “ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ನನ್ನ ಪುತ್ರ ಅಶುತೋಷ್ ಹೆಗಡೆಯ ವಿರುದ್ಧ ಬೆಂಗಳೂರಿನ ದಾಬಸ್ ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕು. ಇಲ್ಲದೇ ಇದ್ದರೆ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಆತನ ಶೈಕ್ಷಣಿಕ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ” ಎಂದು ಮನವಿ ಮಾಡಿಕೊಂಡಿದ್ದಾರೆ.
ಇಲ್ಲಿ ಒಂದು ವಿಷಯವನ್ನು ಗಮನಿಸೆಬೇಕು, ಅನಂತಕುಮಾರ್ ಹೆಗಡೆಯ ಪುತ್ರನ ಮೇಲೆ ದಾಖಲಾಗಿರುವ ಕೇಸ್ ಏನೆಂದರೆ, ‘ಹಿಂದುತ್ವಕ್ಕಾಗಿ ನಡೆಸಿದ ಹೋರಾಟ’ಕ್ಕಾಗಿ ಅಲ್ಲ. ವೇಗವಾಗಿ ಕಾರು ಚಲಾಯಿಸಿ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದು, ಅದರ ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪಕ್ಕೆ ಈ ಪ್ರಕರಣ ದಾಖಲಾಗಿರೋದು. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಮಾಜಿ ಸಂಸದ ಅನಂತಕುಮಾರ್ ಹೆಗಡೆಯ ಪುತ್ರ ಅಶುತೋಶ್ ಇತ್ತೀಚೆಗೆ ಊರಿಗೆ ಬಂದಿದ್ದರು. ಯಲ್ಲಾಪುರಕ್ಕೆ ತೆರಳುತ್ತಿದ್ದಾಗ ಈತನ ಕಾರು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಮಾಜಿ ಸಂಸದನ ಪುತ್ರ ಎನ್ನುವ ದುರಹಂಕಾರದಲ್ಲಿ ಅಶುತೋಶ್ ಇನ್ನೊಂದು ಕಾರಿನ ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಅನಂತಕುಮಾರ್ ಹೆಗಡೆ ಕೂಡ ಸ್ಥಳದಲ್ಲಿ ಉಪಸ್ಥಿತರಿದ್ದರು ಎಂದು ಅನೇಕ ವರದಿಗಳು ಹೇಳುತ್ತವೆ. ಜೊತೆಗೆ ಅನಂತಕುಮಾರ್ ಹೆಗಡೆಯ ಭದ್ರತಾ ಸಿಬ್ಬಂದಿಯೂ ಕೂಡ ಈ ಹಲ್ಲೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪಗಳು ಇವೆ.
ಈ ಘಟನೆ ಸಂಬಂಧಪಟ್ಟಂತೆ ದೂರು ದಾಖಲಾಗಿದೆ. ಅನಂತಕುಮಾರ್ ಹೆಗಡೆಗೆ ಈಗ ಸಮಸ್ಯೆ ಆಗಿದೆ. ತನ್ನ ಮಗ ‘ಅಶುತೋಷ್ ಮೇಲೆ ಪ್ರಕರಣ ದಾಖಲಾಗಿರುವುದರಿಂದಾಗಿ ವಿದೇಶಕ್ಕೆ ತೆರಳಲು ತೊಂದರೆಯಾಗಿದೆ. ಇದು ಆತನ ಶೈಕ್ಷಣಿಕ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಆತನನ್ನು ಪ್ರಕರಣದಿಂದ ಕೈ ಬಿಡಬೇಕು’ ಎಂದು ಈಗ ಅನಂತಕುಮಾರ್ ಹೆಗಡೆ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
ಅನಂತಕುಮಾರ್ ಹೆಗಡೆಗೆ ಉತ್ತರ ಕನ್ನಡ ಜಿಲ್ಲೆಯ ಯುವಕರೇ ಸಾವಿರಾರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕಂಡವರ ಮಕ್ಕಳಿಗೆಲ್ಲ ಹಿಂದುತ್ವಕ್ಕಾಗಿ ಕತ್ತಿ ಹಿಡಿಯಿರಿ, ತ್ರಿಶೂಲ ಹಿಡಿಯಿರಿ ಎಂದು ಕರೆ ನೀಡಿದ್ದ ಇದೇ ಅನಂತ ಕುಮಾರ್ ಹೆಗಡೆ, ತನ್ನ ಪುತ್ರನ ಕೈಗೆ ತ್ರಿಶೂಲ, ಕತ್ತಿಯನ್ನು ಯಾಕೆ ನೀಡಿಲ್ಲ? ತನ್ನ ಪುತ್ರನಿಗೆ ಹಿಂದುತ್ವ ರಕ್ಷಣೆಯ ಯಾವುದೇ ಹೊಣೆಗಾರಿಕೆಯನ್ನೂ ನೀಡದೇ ವಿದೇಶಕ್ಕೆ ಕಳುಹಿಸಿ ಉನ್ನತ ಶಿಕ್ಷಣವನ್ನು ಯಾಕೆ ಕೊಡಿಸುತ್ತಿದ್ದಾರೆ? ತಮ್ಮ ಭಾಷಣಗಳಲ್ಲೆಲ್ಲ ‘ಹಿಂದೂಸ್ಥಾನ’ ‘ಸ್ವದೇಶ’ ‘ವಿಶ್ವಗುರು’ ಎಂದು ಅಣಿಮುತ್ತುಗಳನ್ನು ಉದುರಿಸುವ ಇದೇ ಅನಂತಕುಮಾರ್ ಹೆಗಡೆಗೆ ತನ್ನ ಮಗನಿಗೆ ಉನ್ನತ ಶಿಕ್ಷಣವನ್ನು ಕೊಡಿಸಲು ಭಾರತದೊಳಗೆ ಒಂದೇ ಒಂದು ವಿಶ್ವವಿದ್ಯಾನಿಲಯ ಅಥವಾ ಕಾಲೇಜು ಯಾಕೆ ಕಾಣಿಸಲಿಲ್ಲ? ಇಲ್ಲೆ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ವೇದ ಮಂತ್ರಗಳನ್ನು ಪಠಣ ಮಾಡಿಸುವುದನ್ನು ಬಿಟ್ಟು ಅಲ್ಲಿಗ್ಯಾಕೆ ಕಳಿಸಬೇಕು? ನೀವು ವಿರೋಧಿಸುವ ಇಂಗ್ಲಿಷ್ ಭಾಷೆಯನ್ನು ವಿದೇಶದಲ್ಲಿ ಕಲಿಸುತ್ತಾರೆ. ಅದು ನಿಮ್ಮ ಧರ್ಮಕ್ಕೆ ಅಪಮಾನವಲ್ಲವೇ? ಎಂದು ಇದೇ ಅನಂತಕುಮಾರ್ ಹೆಗಡೆಯನ್ನು ನಂಬಿಕೊಂಡು ಕೇಸ್ ಹಾಕಿಸಿಕೊಂಡಿದ್ದ, ಆರ್ಎಸ್ಎಸ್ನ ಲಾಟಿಯನ್ನು ನಂಬಿ ಮೋಸ ಹೋದ ಉತ್ತರ ಕನ್ನಡದ ನೂರಾರು ಶೂದ್ರ ಹುಡುಗರು ಕೇಳುತ್ತಿದ್ದಾರೆ.
ವೇಗವಾಗಿ ಕಾರು ಚಲಾಯಿಸಿ ಇನ್ನೊಂದು ವಾಹನಕ್ಕೆ ಗುದ್ದಿ ಅಮಾಯಕರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸಿಲುಕಿಕೊಂಡ ತನ್ನ ಮಗನ ಭವಿಷ್ಯದ ಬಗ್ಗೆ ಚಿಂತಿಸುವ ಅನಂತಕುಮಾರ್ ಹೆಗಡೆಯವರು, ತಮ್ಮ ಭಾಷಣದಿಂದ ಪ್ರಚೋದಿತರಾಗಿ ಲಾಟಿ, ತ್ರಿಶೂಲ ಹಿಡಿದು ಗಲಭೆ ನಡೆಸಿ ಪ್ರಕರಣ ದಾಖಲಿಸಿಕೊಂಡ ಯುವಕರ ಪರವಾಗಿ ನ್ಯಾಯಾಲಯದಲ್ಲಿ ಯಾಕೆ ಇವತ್ತಿಗೂ ಒಂದೇ ಒಂದು ಮನವಿಯನ್ನೂ ಸಲ್ಲಿಸಲಿಲ್ಲ? ನಿಮ್ಮ ಮಗನಿಗೆ ಆದ್ರೆ ಭವಿಷ್ಯ, ಕಂಡವರ ಮಕ್ಕಳಿಗೆ ಆದರೆ ತ್ರಿಶೂಲ, ಕತ್ತಿಯಾ? ಅಂತ ಯುವಕರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡುವ ಧೈರ್ಯವಿದೆಯಾ ಅನಂತ್ಕುಮಾರ್ ಹೆಗಡೆ ಅವರಿಗೆ?
ಈ ಮೇಲಿನ ಪ್ರಶ್ನೆಗಳು ಕೇವಲ ಅನಂತಕುಮಾರ್ ಹೆಗಡೆ ಅಂತವರಿಗೆ ಮಾತ್ರವಲ್ಲ. ಇದೇ ಹಿಂದುತ್ವದ ಹೆಸರಲ್ಲಿ ಅಮಾಯಕ ಯುವಕರಿಕೆ ತಲೆ ಕೆಡಿಸಿರುವ ಸಿ ಟಿ ರವಿ, ಸುನೀಲ್ ಕುಮಾರ್, ಆರ್ಎಸ್ಎಸ್ನ ನಾಯಕರಿಗೂ ಇದೇ ಪ್ರಶ್ನೆ. 2024ರಿಂದ 2026 ಮಾರ್ಚ್ ತಿಂಗಳವರೆಗೆ ಒಟ್ಟು 70 ಕೋಮುಗಲಭೆ ಪ್ರಕರಣಗಳು ಕರ್ನಾಟಕದಲ್ಲಿ ಸಂಭವಿಸಿವೆ. ಮಂಡ್ಯ ಜಿಲ್ಲೆಯೊಂದರಲ್ಲೇ ಇದೇ ಅವಧಿಯಲ್ಲಿ 34 ಪ್ರಕರಣಗಳು ನಡೆದಿವೆ ಎಂದು ಗೃಹ ಸಚಿವರೇ ವಿಧಾನಪರಿಷತ್ಗೆ ಮಾಹಿತಿ ನೀಡಿದ್ದಾರೆ. ನೆಮ್ಮದಿಯಾಗಿ ಬದುಕಿದ್ದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ 2024ರಲ್ಲಿ ಕೋಮು ಗಲಭೆಗೆ ಸಂಬಂಧಿಸಿದಂತೆ 123 ಮಂದಿಯ ಮೇಲೆ ಪ್ರಕರಣ ದಾಖಲಾಗಿದ್ದರೆ, ಮದ್ದೂರಿನಲ್ಲಿ 2025ರಲ್ಲಿ ನಡೆದ ಕೋಮು ಘಟನೆಗಳಿಗೆ ಸಂಬಂಧಿಸಿದಂತೆ 88 ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿವೆ.
ಇಂತಹ ಕೋಮುಗಲಭೆಗಳು ಸಂಭವಿಸಿದ ಕೆಲವೇ ದಿನಗಳಲ್ಲಿ ಜನರು ಮರೆತು ಬಿಡುತ್ತಾರೆ. ಆದರೆ, ಅದರಿಂದ ನಾಶವನ್ನು, ನಷ್ಟವನ್ನು ಅನುಭವಿಸಿದವರು ಮತ್ತು ಗಲಭೆಗೆ ಸಂಬಂಧಿಸಿ ಪೊಲೀಸರಿಂದ ಬಂಧಿಸಲ್ಪಟ್ಟವರು ಬದುಕನ್ನು ಮತ್ತೆ ಚೇತರಿಸಿಕೊಳ್ಳಲು ಅನೇಕ ವರ್ಷಗಳೇ ಬೇಕಾಗುತ್ತವೆ. ಯಾವುದೋ ರಾಜಕಾರಣಿಯ ಭಾಷಣಗಳಿಗೆ ಬಲಿ ಬಿದ್ದು ಕೋಮುಗಲಭೆಗಳಲ್ಲಿ ಭಾಗಿಯಾಗಿ ಕೇಸುಗಳನ್ನು ಮೈಮೇಲೆ ಎಳೆದುಕೊಂಡ ನೂರಾರು ಯುವಕರು ಈಗಲೂ ಪೊಲೀಸ್ ಠಾಣೆ, ನ್ಯಾಯಾಲಯದ ಮೆಟ್ಟಿಲುಗಳ ಮೇಲೆ ನಿಂತಿದ್ದಾರೆ. ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾದ ಕಾರಣ ಶಿಕ್ಷಣವನ್ನು ಅರ್ಧದಲ್ಲೇ ತೊರೆದ, ಸರಕಾರಿ ನೌಕರಿಗೆ ಸೇರಲು ಸಾಧ್ಯವೇ ಇಲ್ಲ ಎನ್ನುವಂತಹ ಸನ್ನಿವೇಶನವನ್ನು ಸೃಷ್ಟಿಸಿಕೊಂಡ ಸಾವಿರಾರು ಯುವಕರಿದ್ದಾರೆ. ದುಃಖದ ವಿಚಾರ ಎಂದರೆ, ಕೆಲವರು ಶಾಶ್ವತ ‘ರೌಡಿಶೀಟರ್’ ಹಣೆಪಟ್ಟಿಯನ್ನು ಧರಿಸಿಕೊಂಡು ಕ್ರಿಮಿನಲ್ಗಳಾಗಿ ಓಡಾಡುತ್ತಿದ್ದಾರೆ. ಆದರೆ, ಇವರನ್ನು ಇಂತಹ ಸ್ಥಿತಿಗೆ ತಳ್ಳಿದ ರಾಜಕಾರಣಿಗಳ ಮಕ್ಕಳು ಮಾತ್ರ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಅವರ ಭವಿಷ್ಯ ಮಾತ್ರ ಉಜ್ವಲ ಆಗ್ಬೇಕು. ಕಂಡವರ ಮಕ್ಕಳ ಬದುಕು ಮಾತ್ರ ಜೈಲು, ಕೋರ್ಟು, ಬೀದಿಯಲ್ಲಿ ಇರಬೇಕು ಎಂಬುದೇ ಇವರ ಉದ್ದೇಶ.
ಇದನ್ನು ನಮ್ಮ ಯುವಕರು ಅರ್ಥ ಮಾಡಿಕೊಳ್ಳುವುದಿಲ್ಲ ಎಂಬುದೇ ದುರಂತದ ಸಂಗತಿ. ಉನ್ನತ ವ್ಯಾಸಂಗಕ್ಕೆ ಅಡ್ಡಿಯಾಗುವುದರಿಂದ ತನ್ನ ಮಗನ ಮೇಲಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿರುವ ಅನಂತಕುಮಾರ್ ಹೆಗ್ಡೆ ಎಂದಾದರೂ, ಹಿಂದುತ್ವದ ಅಮಲನ್ನು ಹಂಚಿ, ಅದರಿಂದ ಪ್ರೇರಣೆಗೊಂಡು ಬದುಕನ್ನೇ ಕಳೆದ ಕೊಂಡವರ ಪರವಾಗಿ ಕೋರ್ಟ್ ಮೊರೆ ಹೋಗಿದ್ದಾರಾ? ಜೊತೆಗೆ ಹಿಂದುತ್ವದ ಅಮಲಿನಲ್ಲಿ ಅಮಾಯಕ ಬಡ ಮಕ್ಕಳ ಜೀವನನ್ನು ಕಿತ್ತುಕೊಂಡ, ಅವರ ಭವಿಷ್ಯವನ್ನು ಯಾಕೆ ಸರ್ವ ನಾಶ ಮಾಡಿದ ಅನಂತಕುಮಾರ್ ಹೆಗಡೆಯಂಥವರಿಗೆ, ಯುವಕರ ಪೋಷಕರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವ ದೈರ್ಯ ಇದೆಯಾ?.




